ನಾಟಕದ ಮಧ್ಯೆ ಎದ್ದು ಹೋದೆ ಯಾಕೆ…?

ಸಂಧ್ಯಾ ಹೊನಗುಂಟಿಕರ್

ಯಾವತ್ತು ನೀನು ಅರ್ಧಕ್ಕೆ ಎದ್ದು ಹೋದವಳಲ್ಲ. ನಾಟಕ ಶುರುವಾಗುವ ಮೊದಲೇ ಬಂದು ಜೊತೆಗಿದ್ದವರನ್ನು ಮಾತಾಡಿಸಿ ಚಿಕ್ಕವರ ಮೈದಡವಿ ಒಂದಷ್ಟು ನಕ್ಕು ನಗಿಸಿ ಗ್ರೀನ್ ರೂಮ್ ಗೆ ಹಣಿಕಿಹಾಕಿ ಯಾರಿಗೋ ಪಂಚೆ ಉಡಿಸಿ, ಯಾರದೋ ಹುಬ್ಬು ತೀಡಿ, ಯಾರಿಗೊ ಬುಚಡಾ ಕಟ್ಟಿ, ಯಾರಿಗೋ ರುಮಾಲು ಸುತ್ತಿ ‘ಏ….ಹಂಗ ಮೀಸಿ ಬರಿಬ್ಯಾಡಾ…ಚಂದನಿಸದಿಲ್ಲ .ಇರು ಬರ್ತೀನಿ..’ ಅಂತ ನೀನೇ ನಾಮಕರಣ ಮಾಡಿದ ಹಾವಿನ ಬುಟ್ಟಿ (ವ್ಯಾನಿಟಿ ಬ್ಯಾಗ್) ಒಳಗ ಕೈ ಹಾಕಿ ಒಂದಷ್ಟು ಕೂದಲು ಮತ್ತು ಗಮ್ಮನ್ನು ತೆಗೆದು ಆ ಪಾತ್ರಕ್ಕೆ ತಕ್ಕುದಾದ ಮೀಸಿ ಹಚ್ಚಿ ‘ಹಾ…ಈಗ..ಽ.. ಬರಾಬರೀ ಆಯ್ತು ನೋಡು’ ಅಂತ ಖುಷಿಪಟ್ಟು ಎಲ್ಲರಿಗೂ ಶುಭ ಹಾರೈಸಿ ಹೊಸಬರಿಗೆ ‘ಅಂಜಬ್ಯಾಡ್ರಿ …’ ಅಂತ ಬೆನ್ನು ಚಪ್ಪರಿಸಿ ಅವರ ಆತ್ಮವಿಶ್ವಾಸ ಎತ್ತರಿಸಿ ಮೊದಲನೆ ದೃಶ್ಯ ರಂಗಕ್ಕೆ ಹೋದ ಮೇಲೆಯೇ ಕೆಳಗೆ ಬಂದು ಸೀಟಿಗೆ ಕೂತು ನಾಟಕ ಆಸ್ವಾದಿಸಿ ಮುಗಿದ ಮೇಲೂ ಕಲಾವಿದರಿಗೆ ಅಭಿನಂದಿಸಿ ಹೋಗುವಾಕಿ…

ಆದರೆ ಯಾಕ ಒಮ್ಮಿಂದೊಮ್ಮೆ ಯಾರಿಗೂ ಹೇಳದೆ ಮಾತಾಡಿಸದೆ ನಾಟಕದ  ಮಧ್ಯೆ ಎದ್ದು ಹೋದೆ…?

-ಶೋಭಕ್ಕಗೆ ಹೀಗೇ ಫೋನು ಮಾಡಿ ಕೇಳಬೇಕೆನಿಸುತ್ತದೆ. ಕೇಳಿದರೂ ರಿಸೀವ್ ಮಾಡಬೇಕಲ್ಲ… ನನಗೆ ಯಾವಾಗಲೂ ಬೈಯುತ್ತಿದ್ದಿ ‘ಜಲ್ದಿ ಫೋನ್ ತೊಗೋದೇ ಇಲ್ಲ ನೀನು’ ಅಂತ. ಆದರೆ ಈಗ ನೀನು…?

ಹೌದು… ಹೀಗೆ ಎಂದು ನಿರುತ್ತರಳಾದವಳಲ್ಲ ಆಕೆ. ಆ ದಿನ ಬೆಳಿಗ್ಗೆ ಹನ್ನೊಂದು ಗಂಟೆ ಸುಮಾರಿಗೆ ಎರಡು ಸಲ ನನ್ನ ಮೊಬೈಲ್ ರಿಂಗಾದರೂ ನನಗೆ ತೆಗೆದುಕೊಳ್ಳಲಾಗಲಿಲ್ಲ. ಮೂರನೇ ರಿಂಗಿಗೆ ನನ್ನ ಮಗ ‘ಶಾಂತ ಆಂಟಿದು’ ಎಂದ. ಅರ್ಜೆಂಟಿದ್ದರೆ ಮಾತ್ರ ಎರಡು ಮೂರುಸಲ ಮಾಡ್ತಾರೆ ಎಂದು  ಪೋನ್ ತೆಗೆದುಕೊಂಡಾಗ ‘ಶೋಭಕ್ಕ ಹೋದ್ಲು’ ಎಂದಾಗ ‘ಹಂಗೆಂಗ ಹೋದ್ಲು?’ ಎಂದು ಗಟ್ಟಿಸಿ ಕೇಳಿದೆ, ಸುಲಭಕ್ಕೆ ಹೋಗುವ ಕುಲವೇ ಅಲ್ಲ ಅವಳು ಎನ್ನುವಂತೆ. ಆ ಕಡೆ ಉತ್ತರವಿಲ್ಲ .

ಎಷ್ಟೋ ಹೊತ್ತಿನವರೆಗೂ ಮನದಲ್ಲಿ ನೀರವತೆ ತುಂಬಿದ್ದರೂ ಕಣ್ಣ ಕುಳಿಯಲ್ಲಿ ಸಣ್ಣ ಹನಿಯು ಮೂಡಲಿಲ್ಲ. ಗೊತ್ತು ಅದಕ್ಕೂ, ಅದನ್ನು ಒರೆಸಿ ಧೈರ್ಯ ಹೇಳುವ ಕೈ ಇಲ್ಲವೆಂದು. ನಾನಿದ್ದೀನಿ ಅಂಜಬೇಡ ಎಂದು ಸಂತೈಸುವ ಎಲ್ಲರಿಗೂ ಅಕ್ಕಾ, ಅಮ್ಮಾ ಆಗಿದ್ದ ಶೋಭಾ ರಂಜೋಳಕರ್ ಬದುಕಿನ ರಂಗಭೂಮಿಗೆ ವಿದಾಯ ಹೇಳಿಯಾಗಿತ್ತು.

ರಂಜೋಳಕರ್ ಮೇಡಂ ಎಂದೇ ಗುರುತಿಸಿದ್ದ ಶೋಭಾ ಅದಮ್ಯ ಚೇತನದ ಸಾಕಾರಮೂರ್ತಿ, ಬಹುಮುಖ ಪ್ರತಿಭೆ, ಮಾತೃತ್ವದ ಸೆಲೆ ಹನಿಸಿ ಪೋಷಿಸುವ ಜೀವದಾಯಿನಿ. ಸದಾ ಹಸನ್ಮುಖಿ ಶ್ರಮಜೀವಿ, ರಂಗಚಟುವಟಿಕೆಗೆ ಸದಾ ತುಡಿಯುವ ಹೃದಯ, ಸಮಾಜ ಸೇವೆಗೆ ಧಾವಿಸುವ ಕಳಕಳಿ.

ಅಂದಿನ ಆಂಧ್ರಪ್ರದೇಶದ ಕೋಡಂಗಲ್ ನಲ್ಲಿ ಹುಟ್ಟಿ ತೆಲುಗಿನಲ್ಲಿಯೇ ಶಿಕ್ಷಣ ಪಡೆದು ಕರ್ನಾಟಕದ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ರಂಜೋಳಕರ್ ಎಂಬ ತುಂಬಿದ ಮನೆತನಕ್ಕೆ ಸೊಸೆಯಾಗಿ ಬಂದ ಶೋಭಾ ಕನ್ನಡತನವನ್ನು ಮೈದುಂಬಿಸಿಕೊಂಡು ಕನ್ನಡದವಳೇ ಆಗಿಬಿಟ್ಟರು.

ಸೃಜನಶೀಲ ಮತ್ತು ಮಾನವೀಯ ಕಳಕಳಿ ಬಾಲ್ಯದಿಂದಲೇ ರಕ್ತಗತವಾಗಿತ್ತು. ಹಾಗಾಗಿ ಸಂಸಾರದಲ್ಲಿ ಮತ್ತು ಸಮಾಜದಲ್ಲಿಯ   ಯಾವುದನ್ನೂ ಯಾರನ್ನೂ ನಿರಾಕರಿಸದೆ ಬದುಕಿದ ಸಹನಾಮೂರ್ತಿ. ಯಾರಾದರೂ ಅವಳ ಮುಂದೆ ಇನ್ನೊಬ್ಬರ ಕುರಿತು ಕಂಪ್ಲೇಂಟ್ ಹೇಳಿದರೆ ‘ಜಗತ್ತಿನಾಗ ನಾನಾ ಸ್ವಭಾವದವರು ಇರ್ತಾರ ಹಂಗೆ… ಎಲ್ಲರೂ ನಮ್ಮವರೇ… ಎಲ್ಲರೂ ಬೇಕಾಗ್ತದ. ಸಂಬಾಳಿಸಿಕೊಂಡು ಹೋಗಬೇಕು’ ಎಂದು ಹೇಳುವ ದನಿಯಲ್ಲಿ ಅನುಭವ ಛಾಪು ಇರುತ್ತಿತ್ತು.

ಮೊದಲ ಬಾರಿಗೆ ಕಲ್ಬುರ್ಗಿಯ ಆಕಾಶವಾಣಿಯಲ್ಲಿ ಶ್ರೀ ಚಂದ್ರಲಾ ಪರಮೇಶ್ವರಿ ಎಂಬ ನಾಟಕದಲ್ಲಿ ಭಾಗವಹಿಸಿದ ಶೋಭಾ ಅವರ ಸೂಕ್ತ ಏರಿಳಿತಗಳಿಂದ ಕೂಡಿದ ಸಂಭಾಷಣೆ ಮತ್ತು ಭಾವಪೂರ್ಣ ಪ್ರಸ್ತುತಿಯಿಂದ ಅನೇಕ ಜನರ, ಕಲಾವಿದರ ಹಾಗೂ ನಿರ್ದೇಶಕರ ಗಮನ ಸೆಳೆದರು. ಹಾಗಾಗಿ ಚಂದ್ರಕಾಂತ ಕುಸುನೂರ ಅವರ ರಚನೆಯ ಅಸಂಗತ ನಾಟಕಗಳಾದ ‘ಆನಿ ಬಂತೊಂದಾನಿ ‘ಮತ್ತು ‘ಕುಂಟಾ ಕುಂಟಾ ಕುರುವತ್ತಿ’ ಎಂಬ ನಾಟಕಗಳಲ್ಲಿ ಅಭಿನಯಿಸುವ ಮೂಲಕ ರಂಗಭೂಮಿಯನ್ನು ಪ್ರವೇಶಿಸಿದ ಶೋಭಾ ರಂಜೋಳಕರ್ ಕೊನೆಯವರೆಗೂ ಹಿಂದಿರುಗಿ ನೋಡಲೇ ಇಲ್ಲ.

ಖರೋ ಖರ, ಶಾಂತತಾ ಕೋರ್ಟ್ ಚಾಲೂ ಇದೆ, ಆಧುನಿಕ ದ್ರೋಣ, ಕಾಡು ಕುದುರೆ, ಮಾತನಾಡುವ ಟೊಂಗೆ, ಕೇಳು ಜನಮೇಜಯ, ಹರಕೆಯ ಕುರಿ, ಗ್ರಹಣ, ಪೇಯಿಂಗ್ ಗೆಸ್ಟ್, ಓಕಳಿ, ಅಮೀನಪುರದ ಸಂತೆ, ಮಾನಿಷಾದ, ಮೀಡಿಯಾ, ನೆಳಲಿಯ ಪ್ರಸಂಗ, ಜೈಸಿದ ನಾಯಕ, ಶರಣು ಶರಣಾರ್ಥಿ, ಮಂಥರಾ, ಹುಲಿಯ ಹೆಜ್ಜೆ, ಋಣಭಾರ ಮುಂತಾದ ನಾಟಕಗಳನ್ನು ಅಭಿನಯಿಸಿದ್ದಲ್ಲದೆ ಅವರ ಕೆಲವು ನಾಟಕಗಳು ಹೊರ ರಾಜ್ಯಗಳಾದ ಹೈದ್ರಾಬಾದ (ಕಾಡು ಕುದುರೆ) ಮುಂಬೈ (ಮಾತನಾಡುವ ಟೊಂಗೆಗಳು) ಮತ್ತು ಇತರ ಜಿಲ್ಲೆಗಳಲ್ಲೂ ಬೆಳಗಾವಿ (ಪೇಯಿಂಗ್ ಗೆಸ್ಟ್) ಬೀದರ (ಖರೊ ಖರ) ಮುಂತಾದೆಡೆ ಪ್ರದರ್ಶನಗೊಂಡಿವೆ.

ರಂಜೋಳಕರ್ ಅವರು ದೂರದರ್ಶನ ಚಲನಚಿತ್ರ ಹಾಗೂ ಅನೇಕ ಸಾಕ್ಷ್ಯ ಚಿತ್ರಗಳಲ್ಲಿಯೂ ನಟಿಸಿ ತಮ್ಮ ಅಭಿನಯ ಕಲೆಯಿಂದ ಜನಮೆಚ್ಚುಗೆ ಪಡೆದಿದ್ದಾರೆ. ಟಿವಿ ನಾಟಕಗಳು ಗ್ರಹಣ, ಸೀತು ಮದುವೆ, ಬಿಸಿಲ ಹನಿಗಳು, ಲಕ್ಕವ್ವನ ಮಂದಿ, ಅಮೀನಪುರ ಸಂತೆ ಮುಂತಾದವುಗಳಲ್ಲಿ ಅಭಿನಯಿಸಿದ್ದು ಹೈದ್ರಾಬಾದ್ ಕರ್ನಾಟಕದ ಹೋರಾಟಗಾರರಾದ ಶ್ರೀಯುತ ಚಂದ್ರಕಾಂತ ಪಾಟೀಲ್ ಅವರ ಜೀವನಚಿತ್ರ ಒಳಗೊಂಡಂತೆ ಅನೇಕ  ಸಾಕ್ಷ್ಯಚಿತ್ರಗಳಲ್ಲಿ ನಟಿಸಿದ್ದಾರೆ.

ಖ್ಯಾತ ಕತೆಗಾರರಾದ ಶಾಂತರಸ ಅವರ ಕಥೆ ಆಧರಿಸಿದ ಮಲಕಮ್ಮ ಚಿತ್ರದಲ್ಲೂ ಪಾತ್ರ ವಹಿಸಿದ್ದಾರೆ. ಅವರ ಇನ್ನೊಂದು ನಾಟಕ ಸೊಲ್ಲಾಪುರ ಸಿದ್ದಲಿಂಗೇಶ್ವರ ಮಹಾತ್ಮೆ ತೆರೆ ಕಾಣದ ಚಲನಚಿತ್ರಗಳು ಕಡಕೋಳ ಮಡಿವಾಳೇಶ್ವರ, ದಂಡೋತಿ, ನಿರ್ಗಮನದ ಹಾದಿಯಲ್ಲಿ. ಅನೇಕ ಸನ್ಮಾನ ಪ್ರಶಸ್ತಿಗಳಿಗಳು ದೊರೆತಿದ್ದು ಮುಖ್ಯವಾಗಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಆಂಧ್ರಪ್ರದೇಶದ ಕಲಾಕೌಮುದಿ ಪ್ರಶಸ್ತಿಗೆ ಭಾಜನರಾಗಿದ್ದರು.

ಬೆಳದಿಂಗಳಾಗಿ ಬಾ, ಗೌತಮ, ಮಹಾದಾಸೋಹಿ ಶರಣ ಬಸವ, ಗತಿ ಮುಂತಾದ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬೆಳದಿಂಗಳಾಗಿ ಬಾ ಚಿತ್ರದಲ್ಲಿ ಚಂದ್ರಶೇಖರ್ ಕಂಬಾರ ಅವರೊಂದಿಗೆ ಅಭಿನಯಿಸಿದ ಹೆಮ್ಮೆ ಇವರದು. ಇನ್ನೂ ತೆರೆಕಾಣದ ಖ್ಯಾತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ಬಿ ಟಿ ಲಲಿತಾ ನಾಯಕ್ ಅವರು ರಚಿಸಿದ ‘ಗತಿ’ಎಂಬ ಕಥೆಯ ಆಧಾರಿತ ಕಿರು ಚಿತ್ರದಲ್ಲಿಯೂ ಅಭಿನಯಿಸಿದ್ದು ಅವರ ಅದ್ಭುತ ಅಭಿನಯಕ್ಕೆ ಸಾಕ್ಷಿ ಎನ್ನಬಹುದು.

ಅಭಿನಯವಲ್ಲದೆ ಪ್ರಸಾಧನ, ನಿರ್ದೇಶನ, ಸಂಘಟನೆಯಲ್ಲಿಯೂ ಒಳ್ಳೆಯ ಪರಿಣತಿಯನ್ನು ಹೊಂದಿದ್ದರು ರಂಜೋಳಕರ್. ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದಲ್ಲಿ ಸಂಗಮೇಶ್ವರ  ಮಹಿಳಾ ಮಂಡಳದ ವತಿಯಿಂದ ಮಹಿಳೆಯರಿಗೆ ಮಾತ್ರ ರಂಗ ತರಬೇತಿ ಶಿಬಿರವನ್ನು ನಡೆಸಿದ್ದು ಇದೇ ಕಲಾವಿದರಿಂದ ದಿವಾಕರ ಹೆಗಡೆಯವರ ರಚನೆಯ ‘ಯುದ್ಧ ಭಾರತ’ ನಾಟಕವನ್ನು ನಿರ್ದೇಶಿಸಿ ಯಶಸ್ವಿಯಾಗಿ ಪ್ರದರ್ಶಿಸಿದ್ದರು. ಮಹಿಳೆಯರೇ ಎಲ್ಲ ಪುರುಷ ಪಾತ್ರಗಳನ್ನು ಧರಿಸಿದ್ದು (ಕೇವಲ ಎರಡು ಸ್ತ್ರೀ ಪಾತ್ರಗಳಿದ್ದು) ಅದು ಕಲಬುರಗಿಯಲ್ಲಿಯೇ ದಾಖಲೆ ನಿರ್ಮಿಸಿತ್ತು. ಸಂಗೀತ, ವಸ್ತ್ರವಿನ್ಯಾಸವನ್ನೂ ಮಹಿಳೆಯರೇ ವಹಿಸಿದ್ದು ಇಂತಹ ಅಪರೂಪದ ಸಾಹಸಕ್ಕೆ ಕೈ ಹಾಕುವುದೆಂದರೆ ಶೋಭಾ ಅವರಿಗೆ ಬಲು ಹುರುಪು.

ಬಾಲ್ಯವಿವಾಹ ವಿರೋಧಿ ಕುರಿತ ಮಕ್ಕಳ ನಾಟಕವನ್ನು ನಿರ್ದೇಶಿಸಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿದ್ದಲ್ಲದೆ ಕಲಬುರಗಿ ಜಿಲ್ಲೆಯ ಸುತ್ತಲೂ ಒಟ್ಟು  ಒಂಬತ್ತು ಪ್ರದರ್ಶನಗಳನ್ನು ನೀಡಿದ್ದು ಅವರ ಸಾಮರ್ಥ್ಯ, ಸಂಘಟನಾ ಚಾತುರ್ಯ ಮತ್ತು ರಂಗಭೂಮಿಗಯ ಬಗ್ಗೆ ಅವರಿಗಿದ್ದ  ಬದ್ಧತೆ ಎದ್ದು ಕಾಣುತ್ತದೆ.

ವಿಜ್ಞಾನ ಕೇಂದ್ರದ ವತಿಯಿಂದ south zone (ದಕ್ಷಿಣ ಭಾರತದ ರಾಜ್ಯಗಳ) ಮಟ್ಟದಲ್ಲಿ ಪಾಂಡಿಚೆರಿಯಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ವೈಜ್ಞಾನಿಕ ನಾಟಕಗಳ ಸ್ಪರ್ಧೆಗೆ ನಿರ್ಣಾಯಕತ್ವವನ್ನು ವಹಿಸಿದ ಹೆಮ್ಮೆ ಅವರದು. ಕಲಬುರ್ಗಿ ಆಕಾಶವಾಣಿಯ ಬಿ ಗ್ರೇಡ್ ಕಲಾವಿದೆಯಾಗಿದ್ದು ಅನೇಕ ರೂಪಕಗಳನ್ನು, ಚರ್ಚೆಯನ್ನು ಬರೆದು ಪಾತ್ರ ನಿರ್ವಹಿಸಿದ್ದಾರೆ. ಒಟ್ಟಾರೆ  ರಂಗ ಕಲೆಯ ಹಲವಾರು ಚಟುವಟಿಕೆಗಳಲ್ಲಿ ತಮ್ಮನ್ನು ಅರ್ಪಿಸಿಕೊಂಡ ಅಂದಿನ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟ ಹೊತ್ತ ಹೈದ್ರಾಬಾದ ಕರ್ನಾಟಕದ ದಿಟ್ಟ ಮಹಿಳೆ ಶೋಭಾ ರಂಜೋಳಕರ್.

ಇವರ ಇನ್ನೊಂದು ಬಹು ಮುಖ್ಯ ಪ್ರೀತಿಯ ಕ್ಷೇತ್ರವೆಂದರೆ ಸಮಾಜಸೇವೆ. ಚಿಕ್ಕಂದಿನಿಂದಲೂ ಅಂತಃಕರಣದ ಸ್ವಭಾವದವರಾದ ಇವರಿಗೆ ಸಂಗಮೇಶ್ವರ ಮಹಿಳಾ ಮಂಡಳವೆಂಬ (ನಲವತ್ಮೂರು ವರ್ಷದಿಂದ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ) ದೊಡ್ಡ ವೇದಿಕೆ ಸಿಕ್ಕಿದ್ದು ಆ ಮೂಲಕ ತಮ್ಮ ಬದುಕನ್ನೆ ಸಾರ್ಥಕಗೊಳಿಸಿಕೊಂಡರು. ತಮ್ಮ ಕ್ರಿಯಾಶೀಲ ಮನೋಭಾವದಿಂದ ಸಂಗಮೇಶ್ವರ ಮಹಿಳಾ ಮಂಡಳದ ಕಾರ್ಯದರ್ಶಿಯಾಗಿದ್ದು ಅವಿರತವಾಗಿ ಮಹಿಳೆಯರ ಸಬಲೀಕರಣಕ್ಕಾಗಿ ಆರ್ಥಿಕ, ಆರೋಗ್ಯ, ಕಾನೂನು, ಶೈಕ್ಷಣಿಕ ಕ್ಷೇತ್ರಗಳಲ್ಲಿ ಹಲವಾರು ಯೋಜನೆಗಳನ್ನು ನಿರ್ಮಿಸಿ ಅದರ ಯಶಸ್ವಿಯಾಗಿ ನಿಸ್ಪೃಹವಾಗಿ ದುಡಿದ ಮಹಿಳೆ ಇವರು.

ಕುಟುಂಬ ನಿಯಂತ್ರಣಾ ಯೋಜನಾ ಕಾರ್ಯಕ್ರಮ, ಸೋಸ್ವ, ಆಯುರ್ವೇದ ಚಿಕಿತ್ಸಾ ಪದ್ಧತಿಯ ಪ್ರಚಾರ ಮುಂತಾದ ಯೋಜನೆಗಳಲ್ಲಿ ಹಳ್ಳಿಹಳ್ಳಿಗೂ ಹೋಗಿ ಜನರಲ್ಲಿ ಜಾಗೃತಿಯನ್ನು ಮೂಡಿಸಿದ್ದರು. ಅಷ್ಟೇ ಅಲ್ಲದೆ ಜಿಲ್ಲಾಡಳಿತ ಮತ್ತು ಯುನಿಸೆಫ್ ನಬಾರ್ಡ್ ಸಹಯೋಗದಲ್ಲಿ ಸಂಗಮೇಶ್ವರ ಮಹಿಳಾ ಮಂಡಳದ ಕೋಆರ್ಡಿನೇಟರ್ ರಾಗಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನಾ ಯೋಜನೆಯಲ್ಲಿ ಸುಮಾರು ಏಳು ವರ್ಷಗಳ ಕಾಲ ಸತತವಾಗಿ ತೊಡಗಿಕೊಂಡಿದ್ದರು. ರಾಮನಗರ, ಇಂದಿರಾನಗರ, ಒಡ್ಡರಗಲ್ಲಿ, ಜಿಲಾನಾಬಾದ್ನಲ್ಲಿ ತಾತ್ಕಾಲಿಕ ಶಿಕ್ಷಣ ಕೇಂದ್ರಗಳನ್ನು ಪ್ರಾರಂಭಿಸಿ ಮಕ್ಕಳ ಮನಸ್ಸನ್ನು ಶಿಕ್ಷಣದತ್ತ ಪುನಶ್ಚೇತನಗೊಳಿಸಿ ಒಂದು ವರ್ಷದ ನಂತರ ಮುನ್ನೂರು ಮಕ್ಕಳನ್ನು ಮುಖ್ಯವಾಹಿನಿಗೆ ಸೇರಿಸಿದ್ದು ಅವರ ಸಮಾಜಮುಖಿ ಕಳಕಳಿಯನ್ನು ತೋರಿಸುತ್ತದೆ.

ಸಂಗಮೇಶ್ವರ ಮಹಿಳಾ ಮಂಡಳದ ಮೂಲಕ ಕೌಟುಂಬಿಕ ಸಲಹಾ ಕೇಂದ್ರದ ವತಿಯಿಂದ ಕುಟುಂಬಗಳಲ್ಲಿ ಮಹಿಳೆಯರಿಗೆ ಆಗುತ್ತಿರುವ ಅನ್ಯಾಯವನ್ನು ನಿವಾರಿಸಲು ಅಹರ್ನಿಶಿ ದುಡಿಯುತ್ತಿದ್ದರು ಎಂದರೆ ತಪ್ಪಾಗದು. ಮಧ್ಯರಾತ್ರಿ ಕೂಡ ಕಲಬುರಗಿಯಂಥ ಊರಿನಲ್ಲಿ ಆಟೋದಲ್ಲಿ ಒಬ್ಬರೇ ಸಂಚರಿಸುವ ಛಾತಿಯುಳ್ಳ ಶೋಭಾ ಅನೇಕ ಆಟೋ ಡ್ರೈವರ್ ಗಳಿಗೆ ನೆಚ್ಚಿನ ಅಮ್ಮನೇ ಆಗಿದ್ದಳು. ಜಾತಿ, ವಯಸ್ಸು, ವರ್ಗ ಎಲ್ಲವನ್ನೂ ಮೀರಿದ ಬಹು ದೊಡ್ಡ ಸ್ನೇಹ ವಲಯ ಆಕೆಗಿತ್ತು. ಆಕೆ ಇದ್ದಲ್ಲೆಲ್ಲಾ ನಗು, ಸಂತಸವೇ ತುಂಬಿರುತ್ತಿತ್ತು .

ಪ್ರಾರಂಭದಲ್ಲಿ ತೆಲುಗಿನಲ್ಲಿಯೇ ಕನ್ನಡ ನಾಟಕದ ಸಂಭಾಷಣೆಗಳನ್ನು ಬರೆದುಕೊಂಡು ಬಾಯಿಪಾಠ ಮಾಡುವ ಅವರು ಮುಂದೆ ತಾವೇ ಕನ್ನಡವನ್ನು ಕಲಿತು ಕನ್ನಡದಲ್ಲಿಯೇ ಸಣ್ಣ ಸಣ್ಣ ನಾಟಕಗಳನ್ನು ರೂಪಕಗಳನ್ನು ಬರೆಯತೊಡಗಿದರು. ಕಲಬುರ್ಗಿ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದು ಕನ್ನಡದ ಸೇವೆಯನ್ನು ಮನಸಾರೆ ಮಾಡಿದ ಕೀರ್ತಿ ಇವರದು. ತಮ್ಮ ಅವಧಿಯಲ್ಲಿ ಕಲಬುರಗಿ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದ್ದು ಡಾ ಸರಸ್ವತಿ ಚಿಮ್ಮಲಗಿಯವರು ಸಮ್ಮೇಳನದ ಅಧ್ಯಕ್ಷರಾಗಿದ್ದರು. ತಮ್ಮ ಅಧ್ಯಕ್ಷತೆಯ ಅದೇ ಅವಧಿಯಲ್ಲಿ ಫರತಾಬಾದ್ ನಲ್ಲಿ ಮತ್ತೊಂದು ಸಮ್ಮೇಳನವನ್ನು ಆಯೋಜಿಸಿ ದಾಸ ಸಾಹಿತ್ಯದ ವಿದ್ವಾಂಸರಾದ ಕನಕಶ್ರಿ ಪ್ರಶಸ್ತಿ ಪುರಸ್ಕೃತರಾದ ಡಾ. ಸ್ವಾಮಿರಾವ್ ಕುಲಕರ್ಣಿ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿಸಿದ್ದರು.ಈ ರೀತಿ ಶೋಭಾ ಹುಟ್ಟಿನಿಂದ ತೆಲುಗಿನವರಾಗಿದ್ದರೂ ಕನ್ನಡದ ಕೈಂಕರ್ಯವನ್ನು ಬಹು ಪ್ರೀತಿಯಿಂದ ಮಾಡಿದ್ದು ವಿಶಿಷ್ಟವೆ ಎನಬಹುದು.    

ಸದಾ ಕ್ರಿಯಾಶೀಲರಾಗಿದ್ದು ಹಗಲು ರಾತ್ರಿ ಹಬ್ಬ ಹರಿದಿನ, ಹಳ್ಳಿ, ಕೊಳಚೆ ಪ್ರದೇಶವೆನ್ನದೆ ಸಮಾಜ ಸೇವೆಯಲ್ಲಿ ನಿರತರಾಗಿದ್ದ ಶೋಭಾ ರಂಜೋಳಕರ್ ಅವರ ಶಕ್ತಿ ಅಪಾರ. ಹಾಗಾಗಿಯೇ ಅವರನ್ನು ಅನೇಕ ಯುವತಿಯರು ‘ಮೇಡಂ ನಿಮಗೆ ಬಹಳ ವಯಸ್ಸೇನಾಗಿಲ್ಲ. ಏನಿದ್ರೂ ನೀವು ಸ್ವೀಟ್ ಸಿಕ್ಸ್ಟೀನ್’ ಎಂದು ಅಚ್ಚರಿಯಿಂದ ಮೆಚ್ಚುಗೆ ಸೂಸುತ್ತಿದ್ದರು. ಯಾವತ್ತೂ ದಣಿವರಿಯದ ಜೀವ ಅವರದು. ಇಷ್ಟೆಲ್ಲವುಗಳೊಂದಿಗೆ ರುಚಿಕಟ್ಟಾದ ಅಡುಗೆ, ಕಷಾಯಗಳು, ಹೊಸ ಬಗೆಯ ಖಾದ್ಯಗಳನ್ನು ಮಾಡುವುದು ಮತ್ತು ಗಿಡಗಳನ್ನು ಬೆಳೆಸುವುದು ಅವರ ಪ್ರೀತಿಯ ಹವ್ಯಾಸವಾಗಿದ್ದವು.

ಯಾರಿಗಾದರೂ ಸೌಖ್ಯ ತಪ್ಪಿದರೆ, ದಾರಿಯಲ್ಲಿ ಬಿದ್ದು ಗಾಯವಾದರೆ, ಯಾರ ಮನೆಯಲ್ಲೊ ಜಗಳ ಜೂಟಿಗಳಾದರೆ, ಯಾರ ಮನೆಯಲ್ಲಾದರೂ ಸಾವು ನೋವುಗಳು ಆದರೆ ಮನೆಯವರನ್ನು ಸಂತೈಸಲು ತಕ್ಷಣ ಧಾವಿಸುವ ಶೋಭಕ್ಕ ಹೀಗೆ ಕೊರೋನಾ ಮಹಾಮಾರಿಗೆ ಬಲಿಯಾಗಿ ಏಕಾಏಕಿ ಹೊರಟುಹೋದಳೆಂದರೆ… ಯಾರಿಗೂ ನಂಬಲಾಗುತ್ತಿಲ್ಲ. ಅನೇಕ ಮುರಿದ ಮನೆ ಮನಸ್ಸುಗಳನ್ನು ಕಟ್ಟಿ ಮತ್ತೆ ಬದುಕಲು ಅನುವು ಮಾಡಿಕೊಟ್ಟು ಆಗಾಗ ಅವರು ಛಂದಾಗಿರುವರೊ ಇಲ್ಲವೋ ಎಂದು ಅವರ ಮನೆಗೆ ಹೋಗಿ ಬರುವ ಅಕ್ಕ ಹೀಗೆ ಎಲ್ಲ ಜವಾಬ್ದಾರಿಗಳನ್ನು ತೊರೆದು ಹೋಗಲು ಹೇಗೆ ಸಾಧ್ಯ?

ಅವರಿಲ್ಲದ ಸಂಗಮೇಶ್ವರ ಮಹಿಳಾ ಮಂಡಳ, ರಂಗ ಮಾಧ್ಯಮ, ಕಲಬುರಗಿಯ ರಂಗಾಸಕ್ತರ ಮನಸ್ಸುಗಳೆಲ್ಲ ಈಗ ಖಾಲಿ ಖಾಲಿ. ತನ್ನ ಇಷ್ಟದ ಗೀತೆ ‘ಜೀನಾ ಯಹ್ಞಾಂ… ಮರನಾ ಯಹ್ಞಾಂ… ಇಸಕೆ ಸಿವಾ ಜಾನಾ ಕಹ್ಞಾಂ…’ ಎಂದು ಹಾಡುತ್ತಿದ್ದ ಯಾವತ್ತೂ ಈ ರಂಗಭೂಮಿ ಬಿಟ್ಟು ಹೋಗುವುದೆ ಇಲ್ಲವೆಂದುಕೊಂಡಿದ್ದ ಶೋಭಕ್ಕಗೆ ವಿದಾಯ ಹೇಳುವುದು ನಮಗೂ ಬಹಳ ಕಷ್ಟ..

‍ಲೇಖಕರು Avadhi

May 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಲಿಂಗಾರೆಡ್ಡಿ ಶೇರಿ.

    ದಿ.ಶೋಭಾ ರಂಜೋಳಕರ್ ಅವರ ಪರಿಚಯವನ್ನು ಯಥಾರ್ಥವಾಗಿ ಮಾಡಿಕೊಟ್ಟಿದ್ದಕ್ಕೆ ತಮಗೆ ಧನ್ಯವಾದಗಳು.

    ಪ್ರತಿಕ್ರಿಯೆ
    • km vasundhara

      ಭಾವಪೂರ್ಣ ಪರಿಚಯ ಮಾಡಿರುವಿರಿ.. ಆ ಹಿರಿಯ ಚೇತನಕೆ ನಮನಗಳು

      ಪ್ರತಿಕ್ರಿಯೆ
  2. Kiran Bhat

    ಒಳ್ಳೆಯ ನುಡಿನಮನ ಮೇಡಮ್. ಶೋಭಾ ರವರ ರಂಗಪ್ರೀತಿಯ ಅಗಾಧತೆಯನ್ನ ಗ್ರೀನ್ ರೂಂ ಘಟನೆಯಿಂದಲೇ ಊಹಿಸಬಹುದು.
    ಅಗಲಿದ ರಂಗಚೇತನಕ್ಕೆ ನಮನಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: