ಶರತ್ ಕಲ್ಕೋಡ್ ಕಾದಂಬರಿ- ಐರಾವತವನ್ನೇರಿ 4

‘ನಾನು ನಿಮ್ಮ ಕಾಲ್ ರಿಸೀವ್ ಮಾಡದಿದ್ರೆ ತೋಟದಲ್ಲಿ ಕೃಷಿ ಮಾಡ್ತಾ ಇದ್ದೇನೆ ಅಂದುಕೊಳ್ಳಿ’ ಎನ್ನುವ ಶರತ್ ಕಲ್ಕೋಡ್ ಸಾಹಿತ್ಯ ಕೃಷಿಯಷ್ಟೇ ಮಣ್ಣಿನೊಡನಾಡುವುದನ್ನೂ ಪ್ರೀತಿಸಿದ್ದಾರೆ. ಸಾಹಿತ್ಯ ಕೃಷಿಯ ಬಗ್ಗೆ ಮಾತ್ರ ಓದುಗರಿಗೆ ಗೊತ್ತಿರುವ ಇವರು ಮಲೆನಾಡಿನ ಮಡಿಲಿನವರು.

ಕನ್ನಡ ಸ್ನಾತಕೋತ್ತರ ಪದವಿ ನಂತರ ತಮ್ಮ ಬರವಣಿಗೆಯ ಶಕ್ತಿಯನ್ನೇ ನಂಬಿ ಪತ್ರಿಕೋದ್ಯಮಕ್ಕೆ ಎಂಟ್ರಿ ಕೊಟ್ಟವರು. ಸಂತೋಷ, ತರಂಗ, ಸುಧಾ ಪತ್ರಿಕೆಗಳಲ್ಲಿ ಕೆಲಸ ಮಾಡಿದರು.

ಮಾಸ್ತಿ ಪ್ರಶಸ್ತಿ ವಿಜೇತ ಶರತ್ ಕಲ್ಕೋಡ್ ಅವರ ಹೊಸ ಕಾದಂಬರಿ ಇಂದಿನಿಂದ ಪ್ರತಿ ದಿನವೂ ಪ್ರಕಟವಾಗುತ್ತದೆ.

ಮೊದಲ ಕಂತು ಇಲ್ಲಿದೆ- ಕ್ಲಿಕ್ಕಿಸಿ

ಎರಡನೆಯ ಕಂತು ಇಲ್ಲಿದೆ- ಕ್ಲಿಕ್ಕಿಸಿ

ಮೂರನೆಯ ಕಂತು ಇಲ್ಲಿದೆ- ಕ್ಲಿಕ್ಕಿಸಿ

4

ಯಾರ ಮಾತು ಸತ್ಯ? ಯಾರ ಮಾತು ಸುಳ್ಳು? ದೇವರೇ ಬಲ್ಲ!

ಋತು ಚಕ್ರದುರುಳಿನಲ್ಲಿ ಮುಂಗಾರು ಹನಿದರೆ ಸಾಕು, ಕಾದು ಕನಲಿದ ನವಿಲೇಬ್ಯಾಣ ಮೈಕೊಡವಿ ಚೆಲ್ಲಿ ಮೊಳಕೆಯೊಡೆದು ತಬ್ಬುವುದು ಅಚ್ಚಹಸುರ! ಮಕಮಲ್ಲು!!

ನಾನು ಪ್ರೈಮರಿಸ್ಕೂಲ್ ಓದಿ ಮುಗಿಯುತ್ತಿದ್ದಂತೆ ಆಗುಂಬೆಗೆಳೆಯುತ್ತಿದ್ದ ಕರೆಂಟ್‌ಲೈನ್ ಮೂಲಕ ನಮ್ಮೂರಿಗೆ ಎಲೆಕ್ಟ್ರಿಕ್ ಭಾಗ್ಯ ಒದಗಿದಾಗ ಊರಿನ ಹೆಚ್ಚಿನವರಿಗೆ ಖುಷಿಯೋಖುಷಿ! ಅದರೆ ಲೈನ್ ಎಳೆಯುವ ಸಲುವಾಗಿ ಸಮೃದ್ಧವಾಗಿ ಬೆಳೆದಿದ್ದ ಕಾಡು, ನವಿಲೇಬ್ಯಾಣದಲ್ಲೂ ಬೆಳೆದಿದ್ದ ಮರಗಿಡ-ಬಳ್ಳಿ-ಪೊದೆ ಸವರಿ, ಕಂಬ ನೆಟ್ಟಿದ್ದ ಕಂಡು ಕೆಲವರು ‘ಮಲೆನಾಡಪಾಲಿಗೆ ಕರೆಂಟ್ ವರವಲ್ಲ; ಶಾಪ!’ ನಿಟ್ಟುಸಿರುಗರೆದರು. ಆದರೆ ಆಧುನಿಕತೆ ಬಯಸುವವರು, ಅವರನ್ನು ‘ಕೂಪಮಂಡೂಕಮುಂಡೇವು’ ಎಂದು ಹೀಗೆಳೆದರು.

ಮುಂದೆ ಹೆಚ್ಚಿನ ವಿದ್ಯಾಭ್ಯಾಸ, ಹೊಟ್ಟೆಪಾಡಿಗಾಗಿ ಮೈಸೂರು, ಮಂಗಳೂರು, ಬೆಂಗಳೂರೂಂತ ಗುಳೇ ಹೋದರೂ, ಹುಟ್ಟೂರಿನ ಕರಳುಬಳ್ಳಿಯ ನಂಟು ಕಡಿದುಕೊಳ್ಳಲಿಲ್ಲ. ನಿತ್ಯ ಪರಿವರ್ತನೆಯೇ ಪ್ರಕೃತಿ ಸಹಜ ಲಕ್ಷಣ ಅಲ್ಲವೇ!? ಜೊತೆಗೆ ಸಮಾಜದಲ್ಲೂ ಪಲ್ಲಟಗಳಾಗುವುದೂ ಸಹಜತಾನೇ? ಈ ಮಾತಿಗೆ ನವಿಲೇಬ್ಯಾಣವೂ ಅಪವಾದವೇನಲ್ಲವಲ್ಲ! ಪ್ರತಿಸಾರಿ ಊರಿಗೆ ಬಂದಾಗಲೂ ನವಿಲೇಬ್ಯಾಣದ ಚಹರೆ ಬದಲಾಗುತ್ತಿದ್ದದ್ದು ವಿಚಿತ್ರವಾದರೂ ಸತ್ಯ!!

ಅವಿಭಕ್ತ ಕುಟುಂಬ ಪಾಲಾದ್ದು, ವಾರಾಹಿ ಮುಳಗಡೆ ಪ್ರದೇಶ ಹಾಗೂ ಬೇರೆ ಕಡೆಯ ವಲಸಿಗರು ಬಂದು ನೆಲೆಯೂರಿ ಬೆಳೆದ ಗದ್ದೆ, ತೋಟ. ಹೆಚ್ಚಿನ ಕಡೆ ಪರಿವರ್ತಿತವಾಗಿ ಹಬ್ಬುತ್ತಿರುವ ಊರುಕೇರಿ. ಸಾಲದೆಂಬಂತೆ, ಮಲೆನಾಡಿನೆಲ್ಲೆಡೆ ಮಾಡಿದಂತೆ ಅರಣ್ಯಇಲಾಖೆ ಪ್ರಕೃತಿ ದತ್ತವಾದ ಕಾಡನ್ನೇ ಕಡಿದು, ನಮ್ಮೂರಿನಲ್ಲೂ ನೀಲಗಿರಿ, ಆಕೇಶಿಯಾ, ಬೆತ್ತದ ನೆಡುತೋಪು ನಿರ್ಮಿಸಿ, ಬ್ಯಾಣದ ಹೆಚ್ಚಿನ ಭಾಗ ಕಬಳಿಸಿದರು.

ಹೆದ್ದಾರಿ ಪಕ್ಕದ ಜಾಗ ತಮ್ಮ ಹಕ್ಕಿನದೆಂದು ಅರಣ್ಯ, ರೆವಿನ್ಯೂಇಲಾಖೆ ನಡುವಿನ ಜಟಾಪಟಿ ಬೇರೆ! ಸಾಲದೆಂಬಂತೆ, ಗ್ರಾಮಠಾಣ ಅದು, ನಮಗೆ ಸೇರಿದ್ದೆಂದು ಪಂಚಾಯ್ತಿಯವರೂ ತರ‍್ಲೆ ತೆಗೆದರು. ದಶಕಗಳೇ ಕಳೆದರೂ ಹಕ್ಕಿನ ಸಮಸ್ಯೆ, ಇನ್ನೂ ಬಗೆ ಹರಿದಿಲ್ಲವೆಂಬುದು ವಿಶೇಷ! ಅರಣ್ಯಇಲಾಖೆ ನೆಟ್ಟ ನೀಲಗಿರಿ, ಅಕೇಶಿಯಾ ಶೀಘ್ರಗತಿ ಬೆಳೆದು ಮರಗಳಾಗಿ, ಬುಡದಲ್ಲಿ ಬಿದ್ದ ಎಲೆಗಳಿಂದಾಗಿ ಹುಲ್ಲೆಸಳೂ ಹುಟ್ಟದೆ ಜಾನುವಾರು ಮೇವಿಗೆ ತತ್ವಾರವೊದಗಿತು.

ನವಿಲೇಬ್ಯಾಣದ ದುರ್ಗತಿಯಿಷ್ಟಕ್ಕೇ ಮುಗಿಯಲಿಲ್ಲ, ಗ್ರಾಮ ಪಂಚಾಯ್ತಿಯವರು ಜನತಾಮನೆ ನಿರ್ಮಾಣ ಸಲುವಾಗಿ ಆಯ್ಕೆ ಮಾಡಿಕೊಂಡದ್ದು ಅದನ್ನೇ. ಅದರ ಫಲವಾಗಿ ಹದಿನೈದು ಇಪ್ಪತ್ತು ಮನೆ ತಲೆಯೆತ್ತಿದ್ದು ಮಾತ್ರವಲ್ಲ: ಬಾವಿ, ಬೋರ್ವೆಲ್ ಕಟ್ಟೆಗಳೂ ಇನ್ನಷ್ಟು ಜಾಗ ಆಕ್ರಮಿಸುವುದು. ಇಷ್ಟು ಸಾಲದೆಂಬಂತೆ ಕೆಲವರು ಅಕ್ರಮ ಮನೆ ಕಟ್ಟಿ ಮುಂದೊಂದು ದಿನ ಸಕ್ರಮವಾಗುವುದೆಂಬ ಭರವಸೆಯಿಂದ ಬದುಕುತ್ತಿದ್ದಾರೆ.

ಅವರ ಆಸೆ-ಆಕಾಂಕ್ಷೆಗೆ ರಾಜಕಾರಣಿಗಳ ಕುಮ್ಮಕ್ಕಿನ ತಿದಿ ಬೇರೆ! ಬ್ಯಾಣ ಕ್ರಮೇಣ ಕಾಲೊನಿಯಾಗಿ ಪರಿವರ್ತನೆಗೊಂಡಿತು. ಜನಸಂಖ್ಯೆ ಹೆಚ್ಚಿದ್ದರಿಂದ ಆಟದಬಯಲಾಗಿ ಮಕ್ಕಳು ವಾಲಿಬಾಲ್,ಬ್ಯಾಡ್ಮಿಂಟನ್, ಫುಟ್ಬಾಲ್. ಕ್ರಿಕೆಟ್ ಫೀಲ್ಡಾದುದರ ಪರಿಣಾಮವಾಗಿ ಈಗ ನವಿಲೇಬ್ಯಾಣ ಉಳಿದಿರುವುದು ರಾಷ್ಟ್ರೀಯ ಹೆದ್ದಾರಿ ಪಕ್ಕದ ಒಂದು ಪಟ್ಟೆ ಮಾತ್ರ!

ಭಾರೀ ಗಾತ್ರದ ನಂದಿ, ತೇಗ, ಹೊನ್ನೆ, ಮತ್ತಿ, ಬಿದರುಡಿ, ಸೀಗೆಬಲ್ಲೆ ಅಲ್ಲಿ ಬೆಳೆದಿರುವುದೇ ಆ ಹಸುರುಪಟ್ಟೆ ಸುರಕ್ಷಿತವಾಗಿರಲು ಪ್ರಮುಖ ಕಾರಣ. ಜೊತೆಗೆ ಬಿದಿರು, ಕೆಂಜಿಗೆವುಡಿ ಬಲ್ಲೆಯಲ್ಲಿ ಹುಲಿ ಕಡ್ಜಲ ಕಟ್ಟಿರುವ ಭಾರಿ ಗಾತ್ರದ ಕೊಟ್ಟೆ! ಸ್ವಲ್ಪ ಕೆಣಕಿದರೂ ಸಾಕು ಹೆಜ್ಜೇನಂತೆ ತಿಕಮುಖ ನೋಡದೇ ಬಾರಿಸಿ ಯಾವೆಂಬ ಭಯ!

ಕೊಟ್ಟೆ ಸುಟ್ಟು, ಬಿದಿರು, ಮರಗಳನ್ನು ಬೋಳಿಸಿ ಮಟ್ಟಮಾಡುವುದು ನೆಲಬಾಕರಿಗೆ ದೊಡ್ಡ ಕೆಲಸವೇನಲ್ಲ. ಆದರೆ ಪರ್ಮಿಶನ್ ಇಲ್ಲದೇ ನಾಟ ಕಡಿದಿದ್ದೀರೆಂದು ಫಾರೆಸ್ಟ್ ನವರು ಕೇಸುಜಡಿದು ಬೆನ್ಹತ್ತಿದರೆ? ಕತ್ತಿ ಹಿಡ್ಕೊಂಡು ಕಾಡಿಗ್ಹೋಕೆ ಬಿಡದ ತರ‍್ಲೆಬಡ್ಡೀಮಕ್ಕಳು! ಅಲ್ಲದೇ ಹೆದ್ದಾರಿ ಪಕ್ಕ ಬೇರೆ!!

ಬೆಳೆದ ಅಕೇಶಿಯಾ, ನೀಲಗಿರಿಮರ ಹರಾಜು ಹಾಕಿ ಕಡಿದು ಸಾಗಿಸಿದಾಗ ಬೋಳುಬೋಳಾಗಿ ಕಾಣೂವ ಹೆದ್ದಾರಿ ಮಗ್ಗುಲ ಆ ಖಾಲಿ ಜಾಗ ಕಂಡು ಊರಿನ ಕೆಲವರಿಗೆ ಪಿತ್ತ ನೆತ್ತಿಗೇರುವುದುಂಟು. ಹಾಗೆ ಕೆರಳುವವರಿಗೆ ಫಾರೆಸ್ಟ್, ರೆವಿನ್ಯೂ, ಪಂಚಾಯ್ತಿಯವರೂ ತಿದಿವೊತ್ತುವುದು ಸಾಮಾನ್ಯ. ದಶಕದಶಕಗಳ ಅಂತರಗಳಲ್ಲಿ ನಡೆಯುವ ಮಾಮೂಲು. ಇತ್ತೀಚೆಗೆ ನಡೆದದ್ದೂ ಆ ಪ್ರಹಸನದ ಮುಂದುವರಿದ ಅಂಕವೇ…

ನವಿಲೇಬ್ಯಾಣ ಸೀರಿಯಲ್ಲಿನ ಅತ್ಯಂತ ಕುತೂಹಲಕರ, ಅಂತಿಮವಾದ ಈ ಎಪಿಸೋಡಿನ ಪ್ರಮುಖ ಪಾತ್ರಧಾರಿ ಕೊಟ್ಟೆ ತೇಲಪ್ಪ. ಹಿನ್ನೆಲೆ ವಿವರಿಸದೇ ಏಕಾಏಕಿ ಹೊಸಪಾತ್ರ ರಂಗಕ್ಕೆ ಇಳಿಸಿಬಿಟ್ಟರೆ ಹೇಗೆಂದು ನೀವು ಪ್ರಶ್ನಿಸುವುದು ಸಹಜ. ಅದಕ್ಕಿದೋ ಉತ್ತರ:

ಕಳ್ಳಭಟ್ಟಿ ವ್ಯಾಪಾರದಿಂದ, ಸುತ್ತಮುತ್ತ ಪ್ರಸಿದ್ಧಿ ಪಡೆದು, ಸ್ವಯಾರ್ಜಿತಗಳಿಸಿದ ಹೆಸರು ‘ಕೊಟ್ಟೆ ತೇಲಪ್ಪ’ ಪಿತ್ರಾರ್ಜಿತ ನಿಜ ನಾಮಧೇಯ ತೇಜಪ್ಪ, ಅಬ್ಕಾರಿ ಮನೆತನದ ಕುಳವಾರಿಯೇನಲ್ಲ. ಆದರೂ ಲಿಕ್ಕರ್ ಲಾಬಿ ಬೆನ್ನ ಬಿದ್ದು, ಸಮಾಜದಲ್ಲೊಂದು ಹೈಪವರಿನ ಜನಾಂತಾದದ್ದಂತೂ ನಿಜ.

‘ನಾನೂ ಶ್ರೀಮಂತ. ಒಳ್ಳೇ ಕುಲದಲ್ಲೇ ಹುಟ್ಟಿದವ. ಆದ್ರೆ ಗ್ರಾಚಾರ ಕೆಟ್ಟರೇನು ಮಾಡೋದು ಹೇಳಿ. ಮೂರುವರ್ಷದವನಿದ್ದಾಗಲೇ ತಂದೆ ತೀರಿಹೋದರು. ನಮ್ಮದು ಆಗ ಅವಿಭಕ್ತ ಕುಟುಂಬ, ಜಮೀನು ಪಾಲು ಮಾಡುವಾಗ ಹಿರಿಯರು, ಕೊಚ್ಚುಪಾಲು (ನೂರ ಮರ ಅಡಿಕೆ ತೋಟ) ಕೊಟ್ಟು ನನಗೆ, ಅವೌಗೆ ಮೋಸ ಮಾಡಿದರು. ಪಡಬಾರಕಷ್ಟ ಪಟ್ಟು ನಮ್ಮ ಅವ್ವ ನಿಮ್ಮಂತವರ ಮನೇಲ್ಲಿ ಕೂಲಿನಾಲಿ ಮಾಡಿ ಗೇದು ನನ್ನನ್ನ ಮನುಷ್ಯಾಂತ ಮಾಡಿ ಈ ಸ್ಥಿತಿಗೆ ತಂದಳು ನೋಡಿ…’ ಕೇಳುಗರ ಮನ ಕರುಗುವಂತೆ ಬಾಲ್ಯಾವಸ್ಥೆಯಲ್ಲಿ ಪಟ್ಟ ಬವಣೆ ಕುರಿತು ತೇಲಪ್ಪ, ಬಣ್ಣಿಸುವ ವ್ಯಥೆ-ಕಥೆ!

‘ಅವೆಲ್ಲಾ ಬರೀಬಂಡಲ್ಲು! ಅವನ್ಮಾತ ಪೈಸಾನೂ ನಂಬೇಡಿ. ಹಿರಿಯರಿಂದ ಮೋಸಾದ್ದು ಹೌದು, ಅವನೌವ ಕಷ್ಟಪಟ್ಟು ಸಾಕಿದ್ದೂ ಹೌದು. ಬೆಳೆದ ಮೇಲೆ ಅಲೀಸ್‌ಪ್ರಭು ಜೊತೆ ಕಳ್ಳಭಟ್ಟಿ ವ್ಯಾಪಾರ ಮಾಡಿದ್ದರಿಂದ ಅಲ್ವೇನ್ರೀ ಸಾವುಕಾರಿಕೆ ಬಂದದ್ದು? ಕೊಟ್ಟೆ ತೇಲಪ್ಪ ಅಂತಾ ಹೆಸರು ಪಡೆದದ್ದು. ಊರ‍್ನನಲ್ಲಿ ಯಾರನ್ನ ಬೇಕಾದ್ರೂ ಕೇಳಿ…’ ದ್ಯಾವಪ್ಪ ಗೌಡರು ತಮ್ಮ ಮಾತು ನೂರಕ್ಕೆ ನೂರು ಸತ್ಯವೆಂದು ಪಟ್ಟುಹಿಡಿದು ಪುರಾವೆ ಸಮೇತ ವಾದಿಸುತ್ತಾರೆ. ಯಾರ ಮಾತು ಸತ್ಯ? ಯಾರ ಮಾತು ಸುಳ್ಳು? ದೇವರೇ ಬಲ್ಲ!

ಆದರೂ ಒಂದು ಸತ್ಯ. ಮಲೆನಾಡಿನಲ್ಲಿ ಜನಸಂಖ್ಯೆ ಹೆಚ್ಚಾಗಿ, ಸಿಕ್ಕಸಿಕ್ಕಲ್ಲಿ ಊರುಕೇರಿ ಬೆಳೆದ ಪರಿಣಾಮವಾಗಿ ಕೆಲವರು ಮನೆಯಲ್ಲೇ ದಿನಿಸಿ ಸಾಮಾನಿಟ್ಟುಕೊಂಡು ವ್ಯಾಪಾರ ಶುರು ಹಚ್ಚಿದರು. ಮೊದಲಾದರೆ ಮೈಲುಗಟ್ಟಲ ದೂರದ ಪೇಟೆಗೆ ಹೋಗಿ ಮನೆಗವಶ್ಯ ಸಾಮಾನು ತರಬೇಕಾಗಿತ್ತು. ಆದರೀಗ ನಾಲ್ಕು ಮಾರಿನಂತರದಲ್ಲೇ ಒಂದಲ್ಲೊಂದು ಅಂಗಡಿಮನೆ! ಕಳೆದೊಂದೆರಡು ದಶಕದಲ್ಲಿ ಮಲೆನಾಡಿನಲ್ಲಿ ಸದ್ದಿಲ್ಲದೇ ನಡೆದ ಸಾಮಾಜಿಕ ಕ್ರಾಂತಿ!

ಅಂಗಡಿಮನೆಗಳಲ್ಲಿ ದಿನಿಸಿ ಮಾತ್ರವಲ್ಲ; ಪಾನ್‌ಪರಾಗ್, ಪೆಟ್ರೋಲ್, ಡಿಸೇಲ್, ಸೀಮೆಯೆಣ್ಣೆ ದೊರೆಯುತ್ತವೆ. ಸೊಸೈಟಿಯ ಪುಕ್ಸಟ್ಟೆ ಪಡಿತರ ಅಕ್ಕಿ, ಗೋಧಿ, ಬೇಳೆ ಇತ್ಯಾದಿ ತಂದು ಕಾರ್ಡ್ದಾರರು ಅಂಗಡಿಮನೆಗೆ ಕಮ್ಮಿ ರೇಟಿಗೆ ಸಿಕ್ಕಷ್ಟೇ ಫಾಯ್ದಿಯೆಂದು ಮಾರುತ್ತಾರೆ. ಹಾಗೆ ಕೊಂಡದ್ದನ್ನು ಅಂಗಡಿಮನೆಯವರೂ ಸ್ವಲ್ಪ ಹೆಚ್ಚಿನ ರೇಟಿನಲ್ಲಿ ಅಂದರೆ ಪೇಟೆ, ಮಾರುಕಟ್ಟೆ ದರಕ್ಕಿಂತ ಕಮ್ಮಿಗೆ ಮಾರುತ್ತಾರೆ.

ತೇಲಪ್ಪನದೂ ಇಂಥದ್ದೇ ಒಂದುಸೂಪರ್ ಮಾರ್ಕೆಟ್! ಈ ವ್ಯಾಪಾರವೇ ಕೈಹಿಡಿದದ್ದೆಂದು ಅವನೇ ಊದಿಕೊಳ್ಳವ ತುತ್ತೂರಿ! ಆದರೆ ಒಳಗುಟ್ಟು ಬೇರೆ!!

ಎದುರುಗಡೆಯಿಂದ ಜೀರ್ಣಾವಸ್ಥೆ ಹೊಂದಿದಂತೆ ಕಾಣುವ ತೇಲಪ್ಪನ ಅಂಗಡಿಮನೆ, ಹಿತ್ತಲಕಡೆ ಹೋದರೆ ಕಾಣುವುದೇ ಪಾತಾಳಂಕಣವನ್ನೇ ರೂಪಾಂತರಿಸಿ ಕದ್ದು ಮುಚ್ಚಿ ವ್ಯವಹಾರದ ಕುಡುಕರ ಪಾಲಿನ ಸ್ವರ್ಗ- ಊರಲ್ಲಿ ಪ್ರಸಿದ್ಧಿ ಪಡೆದಿರುವ ‘ತೇಲಪ್ಪ ಕೊಟ್ಟೆ ಬಾರ್!’

ಪರ್ಮಿಟ್ಟಿಲ್ಲದ ತೇಲಪ್ಪನ ಕೊಟ್ಟೆಬಾರಿಗೆ ದಶದಶಕಗಳ ಇತಿಹಾಸವುಂಟು. ಬ್ಯಾಣದ ಹುಳಚಪ್ಪುಗಿಡದ ಗುತ್ತಿಮರೆಯಲ್ಲಿ ತೇಲಪ್ಪ ಕಳ್ಳಭಟ್ಟಿ ಕೊಟ್ಟೆ ವ್ಯಾಪಾರ ಆರಂಭಗೊಂಡದ್ದು ಇತಿಹಾಸ. ಕಳ್ಳಭಟ್ಟಿಗಿಂತ ಬ್ರಾಂಡಿ, ವಿಸ್ಕಿ, ಬೀರ್, ರಮ್ ಹೆಚ್ಚು ಆರೋಗ್ಯ, ಗೌರವ, ಘನತೆ, ಪ್ರತಿಷ್ಠೆ ಬೀಜ ಬಿತ್ತಿ, ನಿಧಾನವಾಗಿ ನಮ್ಮೂರಿನ ಕುಡುಕರಲ್ಲೂ ನಂಬಿಕೆ-ವಿಶ್ವಾಸ ಮೂಡಿಸಿ ಯಶಸ್ವೀಯಾದದ್ದೇ ತೇಲಪ್ಪನ ವ್ಯವಹಾರ ಕುಶಲತೆ, ಚಾಕಚಕ್ಯತೆ ಸಂಕೇತ! ಪಂಚಾಂಗ ನೋಡಿ ನಾಣೀಭಟ್ಟರು ಹೇಳಿದ ಒಂದು ಶುಭವಾರ, ಶುಭನಕ್ಷತ್ರ, ಶುಭಗಳಗೆ, ಶುಭಯೋಗದಲ್ಲಿ ಶುಭಾರಂಭಗೊಂಡು, ಸುತ್ತಮುತ್ತ ನಾಲ್ಕಾರು ಊರುಗಳಲ್ಲೀಗ ಬೋರ್ಡಿಲ್ಲದೆಯೂ ಪ್ರಸಿದ್ಧಿ ಪಡೆದಿರುವ ‘ತೇಲಪ್ಪನ ಕೊಟ್ಟೆ ಬಾರ್!’

| ಇನ್ನು ನಾಳೆಗೆ ।

‍ಲೇಖಕರು Avadhi

May 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: