ಪ್ರತಿಭಾ ನಂದಕುಮಾರ್ ಹೊಸ ಅಂಕಣ ಆರಂಭ

ಕನ್ನಡದ ಬಹು ಮುಖ್ಯ ಸಾಹಿತಿ . ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ.

ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ ದಶಕಗಳ ಕಾಲದ ಉಸಿರಾಟದ ಗುರುತು. ‘ಇನ್ನು ಹತ್ತು ವರ್ಷದ ನಂತರ ಮತ್ತಿನ್ನೊಂದು ಸಮಗ್ರ ಸಂಗ್ರಹದೊಂದಿಗೆ ಬರುತ್ತೇನೆ’ ಎಂದು ಖಚಿತವಾಗಿ ಹೇಳುವ ಉತ್ಸಾಹಿ. ‘ನಾವು ಹುಡುಗಿಯರೇ ಹೀಗೆ’ಯಿಂದ ಆರಂಭಿಸಿ ‘ಕೌಬಾಯ್ಸ್ ಮತ್ತು ಕಾಮಪುರಾಣ’ವರೆಗೆ ಕನ್ನಡ ಸಾಹಿತ್ಯವನ್ನು ಆವರಿಸಿ ನಿಂತಿರುವ ಪ್ರತಿಭಾ ಪರಿ ಮಾದರಿ.

ಸಂಶೋಧನೆ ಇವರ ಇನ್ನೊಂದು ಮೋಹ. ಸಂಶೋಧನೆಯನ್ನು ಕೈಗೆತ್ತಿಕೊಂಡರೆ ಅದರ ಆಳಕ್ಕೆ ಡೈವ್ ಹೊಡೆಯುವ ಉತ್ಸಾಹ.

ಅಂತಹ ಒಂದು ಅಧ್ಯಯನವನ್ನು ‘ಅವಧಿ’ ನಿಮ್ಮ ಮುಂದಿಡುತ್ತಿದೆ. ಈ ಅಧ್ಯಯನ ಬರಹಗಳ ಈ ಅಂಕಣದಲ್ಲಿ ಬರುವ ಎಲ್ಲಾ ಅಭಿಪ್ರಾಯಕ್ಕೂ ಲೇಖಕರೇ ಜವಾಬುದಾರರು ಎಂದು ಕಾಣಿಸುತ್ತಾ ಈ ಅಂಕಣದ ಎಲ್ಲಾ ಬರಹಕ್ಕೂ ನಿಮ್ಮ ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇವೆ

ನನಗೆ‌ ಹೈದರ್ ಅಲಿಯ (ಹೈದರಾಲಿ) ಬಗ್ಗೆ ಆಸಕ್ತಿ ಮೂಡಿದ್ದು ಅನಿರೀಕ್ಷಿತವಾಗಿ.

ನನಗೆ‌ ಹೈದರ್ ಅಲಿಯ (ಹೈದರಾಲಿ) ಬಗ್ಗೆ ಆಸಕ್ತಿ ಮೂಡಿದ್ದು ಅನಿರೀಕ್ಷಿತವಾಗಿ.

ನಾನು ಚಾಮುಂಡಿ ಅಧ್ಯಯನ ಮಾಡುತ್ತಿದ್ದಾಗ ಎಂಟು ವರ್ಷಗಳ ಕೆಳಗೆ ಅಕಸ್ಮಾತ್ತಾಗಿ ಸಿಕ್ಕ ಒಂದು ಹಳೆ ದಾಖಲೆಯಿಂದ ತಿಳಿದ ಸಂಗತಿ – ಮೈಸೂರಿನ ಜನರು ಹೈದರಾಲಿಗೆ ಒಂದು ಅಹವಾಲು ನೀಡುತ್ತಾರೆ. ಅದೇನೆಂದರೆ ಯಾತ್ರಿಕರ ಗುಂಪುಗಳು ಮೈಸೂರಿನ ಚಾಮುಂಡಿ ಬೆಟ್ಟ ಹತ್ತುವಾಗ, ಬೆಟ್ಟದ ಗುಹೆಗಳಲ್ಲಿ ವಾಸವಾಗಿದ್ದ ತಾಂತ್ರಿಕ ಸಾಧುಗಳು ಅವರ ಮೇಲೆ ಧಾಳಿ ಮಾಡಿ ಅವರ ಮೂಗು ಕತ್ತರಿಸಿ ಹಾರ ಮಾಡಿ ಚಾಮುಂಡಿಗೆ ಅರ್ಪಿಸುತ್ತಿದ್ದರು. ಆಗೆಲ್ಲ ಚಾಮುಂಡಿ ಬೆಟ್ಟ ದಟ್ಟ ಕಾಡಾಗಿತ್ತು ಮತ್ತು ಅಷ್ಟು ಜನ ಸಂಚಾರ ಇರಲಿಲ್ಲ. ಹಾಗಾಗಿ ಯಾತ್ರಿಕರು ಗುಂಪುಗುಂಪಾಗಿ ಹೋಗುತ್ತಿದ್ದರು.

ತಾಂತ್ರಿಕರಿಂದ ತಮಗೆ ರಕ್ಷಣೆ ಕೊಡಿ ಎಂದು ಜನರು ಸರ್ವಾಧಿಕಾರಿ ಹೈದರಾಲಿಗೆ ಅಹವಾಲು ಕೊಟ್ಟಿದ್ದರು. ಆಗ ಹೈದರ್, ಚಾಮುಂಡಿ ಬೆಟ್ಟದಲ್ಲಿನ ತಾಂತ್ರಿಕ ಸಾಧುಗಳನ್ನು ಹಿಡಿದು ‘ಬೇಕಾದರೆ ನಿಮ್ಮ ನಿಮ್ಮ ಮೂಗುಗಳನ್ನು ಕತ್ತರಿಸಿ ದೇವಿಗೆ ಅರ್ಪಿಸಿರಿ, ಬೇರೆಯವರ ಮೂಗು ಏಕೆ ಕತ್ತರಿಸುತ್ತಿದ್ದೀರಿ?’ ಎಂದು ಗದರಿಸಿ ಅವರ ತಲೆ ಕತ್ತರಿಸಿ ಅವರನ್ನೆಲ್ಲ ನಿರ್ನಾಮ ಮಾಡಿದ. ಇದು ಅತ್ಯಂತ ಕುತೂಹಲ ಹುಟ್ಟಿಸುವ ಸಂಗತಿ. ನನಗೆ ಹೈದರನ ಕ್ರೌರ್ಯದ ಬಗ್ಗೆ ಸಾಕಷ್ಟು ತಿಳಿದಿತ್ತು. ಹೈದರ್ ತಪ್ಪಿತಸ್ಥರಿಗೆ ನೀಡುತ್ತಿದ್ದ ಶಿಕ್ಷೆ- ಕೊರಡೆ ಏಟು ಮತ್ತು ಮೂಗು ಕಿವಿ ಕತ್ತರಿಸುವುದು ಇತ್ಯಾದಿ.

ಹೈದರ್ ಸತ್ತು ಸುಮಾರು ಐವತ್ತು ಅರವತ್ತು ವರ್ಷಗಳ ನಂತರ ಬಂದ ಬ್ರಿಟಿಷ್ ಅಧಿಕಾರಿಯೊಬ್ಬ ಹಾಗೆ ಕಿವಿ ಮೂಗು ಕತ್ತರಿಸಿ ಕತ್ತರಿಸಿಕೊಂಡವರನ್ನು ಶ್ರೀರಂಗಪಟ್ಟಣದಲ್ಲಿ ತಾನು ನೋಡಿದ್ದೇನೆ ಎಂದು ದಾಖಲಿಸಿದ್ದಾನೆ. ಅಂತಹ ಹೈದರ್ ಗೆ ನಡೆದುಕೊಂಡನೇ?!

ಹೈದರ್ ಸೈನ್ಯದಲ್ಲಿದ್ದ ಫ್ರೆಂಚ್ ಮಿಲಿಟರಿ ಅಧಿಕಾರಿ ಮೈಸ್ತ್ರೀ ದೇ ಲಾ ತೂರ್- Maistre de la Tour – ಎಂಎಂಡಿಎಲ್ಟಿ, ಬರೆದ ಹೈದರ ಆತ್ಮಚರಿತ್ರೆಯಲ್ಲಿ ದಾಖಲಿಸಿದ ಇನ್ನೊಂದು ಮಾತೂ ಕುತೂಹಲಕಾರಿಯಾಗಿದೆ. ‘ಭಾರತದಲ್ಲಿ ರಾಜರುಗಳು ಸಾಮಾನ್ಯವಾಗಿ ಸಾಧು ಸಂತರು ಫಕೀರರ ಬಗ್ಗೆ ಅತಿ ಗೌರವ ಇಟ್ಟುಕೊಂಡಿರುತ್ತಾರೆ. ಅವರಿಗೆ ಅರಮನೆಯೊಳಗೆ ನೇರ ಪ್ರವೇಶವಿರುತ್ತದೆ. ಅವರು ರಾಜರ ಊಟದ ಮೇಜಿನ ಬಳಿ ಕೂಡಾ ಕೂರಬಹುದು ಅಷ್ಟು ಮರ್ಯಾದೆ ಇರುತ್ತದೆ. (ಅವರು ಎಷ್ಟೇ ಕೊಳಕಾಗಿದ್ದರು ಸಹ ಎಂದು ಸೇರಿಸುತ್ತಾನೆ!) ಹೈದರ್ ನನ್ನು ಭೇಟಿಮಾಡುವುದು ಬಹಳ ಸುಲಭ.

ಅಗತ್ಯ ವಿಷಯ ಇರುವ ಯಾರಾದರೂ ಅರಮನೆಯ ಬಳಿಗೆ ಬಂದು ದ್ವಾರದ ಬಳಿ ಇರುವ ಅಧಿಕಾರಿಯನ್ನು ಭೇಟಿ ಮಾಡಿ ವಿಷಯ ತಿಳಿಸಿದರೆ ಅವರಿಗೆ ಸಾರ್ವಜನಿಕ ಭೇಟಿ ಸಮಯದಲ್ಲಿ ಸ್ವತಃ ಹಾಜರಿದ್ದು ಅಹವಾಲು ಹೇಳಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಇದು ಪ್ರತಿದಿನ ಬೆಳಿಗ್ಗೆ ನಡೆಯುತ್ತದೆ. ಅಲ್ಲಿ ಮೇಲು ಕೀಳು ಶ್ರೀಮಂತ ಬಡವ ಎನ್ನುವ ವ್ಯತ್ಯಾಸವಿಲ್ಲ.

ಸಕಾರಣವಾಗಿ ತನ್ನನ್ನು ಭೇಟಿಯಾಗಲು ಬಯಸಿದ ಯಾರನ್ನೇ ಆದರೂ, ಯಾರಾದರೂ ಅಧಿಕಾರಿ ಮೋಸ ಮಾಡಿದರೆ, ತಡೆದರೆ, ಲಂಚ ಕೇಳಿದರೆ ಆ ಅಧಿಕಾರಿಗೆ ಸಾರ್ವಜನಿಕವಾಗಿ ಕೊರಡೆ ಏಟು ನೀಡಲಾಗುತ್ತಿತ್ತು. ಅಂತಹ ಹೈದರ್ ಈ ಫಕೀರರು ಸಾಧು ಸಂತರನ್ನು ಭೇಟಿಯಾಗುತ್ತಿರಲಿಲ್ಲ! ಅವರು ಬಂದರೆ ಅಧಿಕಾರಿಗಳು ಅವರನ್ನು ನೇರವಾಗಿ ಪೀರಜಾದಾ ಅಥವಾ ದಾನ ವಿಭಾಗದ ಅಧಿಕಾರಿಯ ಹತ್ತಿರಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಅವರಿಗೆ ನಿಗದಿತ ಹಣ ಸಿಕ್ಕುತ್ತಿತ್ತು. ಅವರು ಅಲ್ಲಿಂದಲೇ ಹೋಗಿ ಬಿಡಬೇಕಾಗಿತ್ತು. ‘ಅವರನ್ನು ಭೇಟಿಮಾಡುವುದು ಸಮಯ ವ್ಯರ್ಥ ಎಂದು ತಿಳಿದಿದ್ದ ಹೈದರ್!’

ನನಗೆ ಹೈದರನ ಈ ಇನ್ನೊಂದು ಮುಖ ಗೊತ್ತಿರಲಿಲ್ಲ.

ನಮ್ಮ ಮನೆಯಲ್ಲಿ ರಾಗಿ ಮಸಿಯಲ್ಲಿ 1795ರಲ್ಲಿ ಬರೆದ ಮೈಸೂರು ಸಂಸ್ಥಾನದ ಚರಿತ್ರೆಯ ಒಂದು ಕೈಫಿಯತ್ತು ಇದೆ. ಅದರಲ್ಲಿ ಹೈದರ್ ಚರಿತ್ರೆ ಇದೆ. (ಇದರ ಹಿನ್ನೆಲೆ ಮಾರ್ಕ್ ವಿಲ್ಕ್ಸ್ ಮೈಸೂರಿನ ಚರಿತ್ರೆಯನ್ನು ಬರೆಯಲು ನಿರ್ಧರಿಸಿದಾಗ, ಅಂದಿನ ದಿವಾನನಾದ ಪೂರ್ಣಯ್ಯ ಮತ್ತೊಬ್ಬ ಮಂತ್ರಿ ಬಚ್ಚೆರಾವ್ ಗೆ ಇದರ ಹೊಣೆ ವಹಿಸಿದ. ಆತ ಹನ್ನೊಂದು ಜನ ಹಿರಿಯರನ್ನು ಕರೆಸಿ ಪ್ರತಿಯೊಬ್ಬರು ಒಂದೊಂದು ಕೈಫಿಯತ್ತು ಬರೆದು ಕೊಡಬೇಕು ಎಂದು ನೇಮಿಸಿದ. ಮಾರ್ಕ್ ವಿಲ್ಕ್ಸ್ ಈ ಹನ್ನೊಂದು ಕೈಫಿಯತ್ತುಗಳು ಮತ್ತು ಇನ್ನು ಕೆಲವು ಆಧಾರಗಳನ್ನು ಇಟ್ಟುಕೊಂಡು ಮೈಸೂರಿನ ಚರಿತ್ರೆ ಬರೆದ. ನನ್ನ ಬಳಿ ಇರುವುದು ಆ ಮೂಲ ಕೈಫಿಯತ್ತಿನಲ್ಲಿ ಒಂದು)

ಅದುವರೆಗೆ ನನಗೆ ಒಡೆಯರ ಚರಿತ್ರೆ ಬಗ್ಗೆ ಹೆಚ್ಚು ಆಸಕ್ತಿ ಇತ್ತು. ಹೈದರನ ಬಗ್ಗೆ ಅಷ್ಟಿರಲಿಲ್ಲ. ಪ್ರಾಸಂಗಿಕವಾಗಿ ಸ್ವಲ್ಪ ಓದಿಕೊಂಡಿದ್ದೆ ಅಷ್ಟೇ. ಈ ಎರಡು ಪ್ರಸಂಗಗಳ ಬಗ್ಗೆ ಓದಿದ ಮೇಲೆ ನನಗೆ ಕುತೂಹಲ ಕೆರಳಿ ಇನ್ನಷ್ಟು ಮಾಹಿತಿ ಸಿಗುತ್ತಾ ಅಂತ ಆ ಕೈಫಿಯತ್ತು ಮತ್ತು ಹೈದರ್ ಬಗ್ಗೆ ಇರುವ ಎಲ್ಲ ಮೂಲ ಆಕರಗಳನ್ನು ಓದತೊಡಗಿದೆ. ಆಗ ಇತರ ಆಕರ್ಷಕ ಸಂಗತಿಗಳು ಸಿಗತೊಡಗಿದವು. ನನ್ನ ಆದ್ಯತೆ ಇದ್ದಿದ್ದು ಹೈದರನ ಜೊತೆ ನೇರ ವ್ಯವಹರಿಸಿದ ವ್ಯಕ್ತಿಗಳ ನಿರೂಪಣೆಗಳು ಇವೆಯೇ ಎಂದು ತಿಳಿಯುವುದು. ಏಕೆಂದರೆ ನಮ್ಮಲ್ಲಿ ಚರಿತ್ರೆಯಲ್ಲಿ ಆಗುವಷ್ಟು ಪ್ರಕ್ಷುಪ್ತತೆ ಸಾಹಿತ್ಯದಲ್ಲಿ ಕೂಡಾ ಆಗುವುದಿಲ್ಲ. ಹೇಳಿಕೆ ಕೇಳಿಕೆ ನಿರೂಪಣೆಗಳಿಗಿಂತ ತಾನು ಹೈದರನನ್ನು ಇಷ್ಟು ಹೊತ್ತಿನಲ್ಲಿ ಹೀಗೆ ಭೇಟಿಯಾಗಿದ್ದೆ ಆಗ ಹೀಗೆ ನಡೆಯಿತು, ನಾವು ಹೀಗೆ ಯುದ್ಧ ಮಾಡಿದೆವು ಎಂದು ಹೇಳಿದ ನಿರೂಪಣೆಗಳು ಬೇಕಿದ್ದವು.

ಆ ವಿವರಗಳು ಸಿಕ್ಕುತ್ತಾ ಹೋದ ಹಾಗೆ ಅದುವರೆಗೆ ಚರಿತ್ರೆಯ ಪುಟಗಳಲ್ಲಿ ಬಂದಿಯಾಗಿದ್ದ ಹೈದರ್ ರಕ್ತ ಮಾಂಸದ ವ್ಯಕ್ತಿಯಾಗಿ ನನ್ನ ಜೊತೆ ಸಂವಾದಿಸತೊಡಗಿದ. ಟೀಪು ಸುಲ್ತಾನನಿಗಿಂತ ಹೈದರ್ ವ್ಯಕ್ತಿತ್ವ ಹೆಚ್ಚು ಸಂಕೀರ್ಣ ಮತ್ತು ಆಕರ್ಷಕ ಎನ್ನಿಸತೊಡಗಿತು. ಅದೊಂದು ವಿರುದ್ಧ ಗುಣಗಳ ಸಂಗಮದ ವಿಲಕ್ಷಣ ವ್ಯಕ್ತಿತ್ವದ ಲವಬಲ್  ವಿಲನ್ ಅನ್ನಿಸತೊಡಗಿತು. ಲವ್ಟು ಹೆಟ್ ಅಂತಾರಲ್ಲಾ ಆಥರ. ಅವನನ್ನು ಹೆಚ್ಚು ಅರಿಯಬೇಕು ಎನ್ನಿಸತೊಡಗಿತು.

ಹೈದರ್ ಬದುಕಿದ್ದುದ್ದು ಕೇವಲ ಅರವತ್ತೊಂದು ವರ್ಷಗಳು. ಅಷ್ಟರಲ್ಲಿ ಆತನ ಬದುಕು ಏನೇನೆಲ್ಲಾ ತಿರುವುಗಳನ್ನು ಪಡೆದುಕೊಂಡಿತು.  ತನ್ನ ಬದುಕಿನ ಅರ್ಧದಷ್ಟು ಕಾಲವನ್ನು ರಣರಂಗದಲ್ಲೇ ಕಳೆದ. ತನ್ನ ಬದುಕಿನಲ್ಲಿ ವಿಚಿತ್ರ ಫಿಲಾಸಫಿಯನ್ನು ಅಳವಡಿಸಿಕೊಂಡಿದ್ದ. ಒಂದು ಕಡೆ ಅತಿಕ್ರೂರಿ ಆದರೆ ಅನ್ಯಾಯ ಅಕ್ರಮದ ಬಗ್ಗೆ ಆತನಿಗೆ ತಿರಸ್ಕಾರವಿತ್ತು. ತಪ್ಪು ಮಾಡಿದವರು ತನ್ನ ಮಕ್ಕಳೇ ಇರಲಿ, ಮುದ್ದಿನ ಮಗ ಟಿಪ್ಪುವೇ ಇರಲಿ, ಅಳಿಯ ತಮ್ಮಂದಿರು ಅಣ್ಣ ಯಾರೇ ಆಗಿರಲಿ ಅವರಿಗೆ ನಿರ್ದಾಕ್ಷಿಣ್ಯವಾಗಿ ಶಿಕ್ಷೆ ವಿಧಿಸುತ್ತಿದ್ದ.

ಬಡವರನ್ನು ದುರ್ಬಲರನ್ನು ಕಾಡಿಸಿದ ಉನ್ನತ ಅಧಿಕಾರಿಗಳಿಗೆ ಸಾರ್ವಜನಿಕವಾಗಿ ಛಡಿ ಏಟು ಹೊಡೆಸುತ್ತಿದ್ದ. ಆದರೆ ಒಳ್ಳೆಯ ಕೆಲಸ ಮಾಡಿದವರಿಗೆ, ನಿಷ್ಠೆಯಿಂದ ಇರುವವರಿಗೆ ನ್ಯಾಯಯುತವಾಗಿರುವವರಿಗೆ ಕೈತುಂಬ ಬಹುಮಾನ ಕೊಡುತ್ತಿದ್ದ. ಆದರೆ ಸ್ವತಃ ಅವನಲ್ಲಿ ಮಹಾ ವಂಚಕತನ ಇತ್ತು. ಅದನ್ನು ಇಂದಿನ ಭಾಷೆಯಲ್ಲಿ ರಾಜಕೀಯ ಮುತ್ಸದ್ದಿತನ ಎನ್ನಬಹುದು. ಶಿಕ್ಷೆ ಮತ್ತು ಬಹುಮಾನ ಉತ್ತಮ ಆಡಳಿತಕ್ಕೆ ಅತ್ಯಗತ್ಯ ಎಂದು ನಂಬಿದ್ದ. ಭಯವನ್ನು ಹೈದರ್ ಪರಿಣಾಮಕಾರಿಯಾಗಿ, ಅಸ್ತ್ರವಾಗಿ ಬಳಸುತ್ತಿದ್ದ. ಅವನ ಸಿಟ್ಟು ಬಹಳ ಪ್ರಸಿದ್ಧಿ.

ಒಂದು ಸಲ ಎಲ್ಲರ ಎದುರಿನಲ್ಲಿ ಟಿಪ್ಪುವಿನ ಕಪಾಳಕ್ಕೆ ಬೀಸಿ ಹೊಡೆದಿದ್ದ. ಹರೆಯದ ಮಗನ ಬಳಿ, ತಾನಿನ್ನು ತಪ್ಪು ಮಾಡುವುದಿಲ್ಲ, ಮಾಡಿದರೆ ತನಗೆ ಶಿಕ್ಷೆಯಾಗಲಿ ಎನ್ನುವ ಕರಾರು ಪತ್ರ ಬರೆಸಿಟ್ಟುಕೊಂಡಿದ್ದ. ಮತ್ತೊಂದು ಸಲ ಟಿಪ್ಪು ತನ್ನನ್ನು ವಿಪರೀತ ಬೈದು ಹೊಡೆದ ತಂದೆಯ ಮೇಲೆ ಕೋಪಗೊಂಡು ಸೂರ್ಯ ಮುಳುಗುವವರೆಗೆ ಖಡ್ಗ ಮುಟ್ಟುವುದಿಲ್ಲ ಅಂತ ಪ್ರತಿಜ್ಞೆ ಮಾಡಿದ್ದ.

ಹೈದರನಿಗಿದ್ದ ನ್ಯಾಯದ ಪರಿಕಲ್ಪನೆ ತುಂಬಾ ಕುತೂಹಲಕಾರಿ. ಅನಾಥ ಮಕ್ಕಳನ್ನು ಬೆಳೆಸಿ ಅವರದೇ ಒಂದು ಬೆಟಾಲಿಯನ್ ಮಾಡಿದ್ದ. ಅವರಿಗೆ ಊಟ ಬಟ್ಟೆ ವಸತಿಕೊಟ್ಟು ಮರದ ಕತ್ತಿಯನ್ನು ಕೊಟ್ಟು ತರಬೇತಿ ನೀಡುತ್ತಿದ್ದ.  ರಾಜ್ಯದಲ್ಲಿ ಅನಾಥ ಮಕ್ಕಳಿಗಾಗಿಯೇ ಅನಾಥಾಲಯವಿದ್ದು ಅಲ್ಲಿ ಸೈನ್ಯ ತರಬೇತಿ ನೀಡಲಾಗುತ್ತಿತ್ತು. ಅವರೆಲ್ಲ ಹೈದರನಿಗೆ ಅತ್ಯಂತ ನಿಷ್ಠೆಯಿಂದಿದ್ದರು. ಬ್ರಿಟಿಷ್ ಅಧಿಕಾರಿ Schwartz ಹೈದರನ ಅನಾಥ ಮಕ್ಕಳ ರಕ್ಷಣೆಯ ಯೋಜನೆ ಎಷ್ಟು ಹಿಡಿಸಿತ್ತೆಂದರೆ ಬ್ರಿಟಿಷರು ಇದನ್ನು ಅನುಸರಿಸಬೇಕೆಂದು ರಾಣಿಗೆ ಸಲಹೆ ನೀಡಿದ್ದ!  ಕೊನೆಗೆ Schwartz ಅನಾಥಾಲಯ ಕಟ್ಟಲು ನಿರ್ಧರಿಸಿದಾಗ ಹೈದರ್ ಅವನಿಗೆ 300ರು ದಾನ ಮಾಡಿದ!

ಶ್ರೀರಂಗಪಟ್ಟಣದಲ್ಲಿ ಹೈದರ್ ನ ಮದುವೆಯಾಯಿತು. ಅವನ ಹೆಂಡತಿ ಮೊದಲನೆಯ ಮಗಳಿಗೆ ಜನ್ಮನೀಡಿ ಸೊಂಟದ ಕೆಳಗೆ ನಿಶ್ಚೇಶ್ಚಿತಳಾದಳು. ಅವಳ ಬಗ್ಗೆ ಹೈದರ್ ಎಲ್ಲಿಲ್ಲದ ಪ್ರೀತಿ ತೋರಿಸಿದ. ಯುದ್ಧದಲ್ಲಿ ಆತನ ಶೌರ್ಯ ಪ್ರದರ್ಶನ ನೋಡಿ ಮೆಚ್ಚಿಕೊಂಡ ನಂಜರಾಜ ಅನೇಕ ಉಡುಗೊರೆಗಳನ್ನು ಪದವಿಯನ್ನು ಕೊಟ್ಟಾಗ – ದಳ ಕಟ್ಟಲು ಅನುಮತಿ, ಸಾವಿರದ ಐನೂರು ಅಶ್ವದಳ, ಆನೆ, ನಗಾರಿ, ದಳವಾಯಿ ಪಟ್ಟ ಇತ್ಯಾದಿ – ಹೈದರನ ಹೆಂಡತಿ ಸಂತೋಷ ಪಟ್ಟು ಅವನಿಗೆ ಮತ್ತೊಂದು ಮದುವೆಯಾಗಲು ಒತ್ತಾಯಿಸಿದಳು. ಬಾರಾ ಮಹಲಿನ ಮೀರ್ ಅಲಿ ರೋಜಾ ಖಾನ್ ನ ನಾದಿನಿಯನ್ನು ಮದುವೆಯಾಗಿ ಮಕ್ಕಳು ಹುಟ್ಟಿದರೂ ಕೂಡಾ ಕೊನೆಯವರೆಗೂ ಮೊದಲನೆಯ ಹೆಂಡತಿಯೇ ಕುಟುಂಬದಲ್ಲಿ ಪ್ರಧಾನ ಪಾತ್ರವಹಿಸಿದಳು. ಅವಳನ್ನು ಕಡೆಗಣಿಸಲಿಲ್ಲ.

ತಾನು ಎಷ್ಟೇ ಕ್ರೂರನಾಗಿದ್ದರೂ, 1762ರಲ್ಲಿ ಇಕ್ಕೇರಿಯ ಬೂದಿ ಬಸಪ್ಪ ನಾಯಕನ ಮಡದಿ ಈರಮ್ಮ ತನ್ನ ಸೇವಕನಾದ ನಂಬಿಯಣ್ಣನಿಗೆ ಒಲಿದು ತನ್ನ ಮಗನನ್ನೇ ಕೊಂದು ನಂಬಿಯಣ್ಣನಿಗೆ ಪ್ರಧಾನ ಮಂತ್ರಿಯ ಪಟ್ಟ ಸಿಗುವಂತೆ ಮಾಡಿದ ಸುದ್ದಿ ತಿಳಿದು ಹೈದರ್ ಕೋಪಗೊಂಡು ದೊಡ್ಡ ಸೈನ್ಯದೊಂದಿಗೆ ಬಂದು – ಚಿತ್ರದುರ್ಗದ ಭರಮ ನಾಯಕನ ನೆರವಿನಿಂದ – ಇಕ್ಕೇರಿಯ ಕೋಟೆಯನ್ನು ವಶಪಡಿಸಿಕೊಂಡ.   ನಂಬಿಯಣ್ಣನನ್ನು ಕೊಂದು ಈರಮ್ಮಾಜಿಯನ್ನು ಬಂಧಿಸಿ ಕವಲೇದುರ್ಗಕ್ಕೆ ಕಳಿಸಿದ. ಇಕ್ಕೇರಿಗೆ ಹೈದರ್ ನಗರ ಎಂದು ಹೆಸರಿಟ್ಟು ನವಾಬ್ ಹೈದರ್ಲಿಾಖಾನ್ ಬಹಾದುರ್ ಎಂದು ಕರೆಸಿಕೊಂಡ.

ಚಿಕ್ಕ ಕೃಷ್ಣರಾಜವಾಡಿಯರ್‌ ಮರಣಹೊಂದಿದಾಗ ತಾನು ಸಿಂಹಾಸನ ಏರದೇ ರಾಜವಂಶಸ್ಥ ಕೃಷ್ಣರಾಜನನ್ನು ರಾಜಮಾತೆ ದತ್ತಕ್ಕೆ ತೆಗೆದುಕೊಳ್ಳುವಂತೆ ಮಾಡಿ ಅವನಿಗೇ ಪಟ್ಟ ಕಟ್ಟಿದ. ಆದರೆ ತನ್ನ ಏಳಿಗೆಗೆ ಕಾರಣನಾದ ಕರಚೂರಿನ ನಂದರಾಜನನ್ನು ಬಂಧನದಲ್ಲಿಟ್ಟು ಇಡೀ ಮೈಸೂರು ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡ.

ಆದರೆ ಸೋಮಶೇಖರ ನಾಯಕ ಕೊಡಗಿನ ರಾಜನಿಗೆ ಕೊಡುಗೆಯಾಗಿ ಕೊಟ್ಟ ಅಮರಸುಳ್ಯವನ್ನು ಹೊರತುಪಡಿಸಿ ಆತನಿಗೇ ಉಳಿಸಿದ.

ತನ್ನ ಅತ್ಯಂತ ಆತ್ಮೀಯ ಮಿತ್ರ, ಮಂತ್ರಿ ಖಂಡೇರಾವ್ ತನಗೆ ಮೋಸಮಾಡಿದಾಗ ಹೈದರ್ ಅವನಿಗೆ ಬರೆದ ಪತ್ರವಂತೂ ಅತ್ಯಂತ ವಿಚಿತ್ರವಾಗಿದೆ. ಹೈದರ್ ಖಂಡೆರಾವ್ ಗೆ ಬರೆದ ಪತ್ರದಲ್ಲಿ, ತನ್ನ ಬದುಕಿನ ಯಶಸ್ಸಿನಲ್ಲಿ ಖಂಡೆರಾವ್ ನೀಡಿದ ಸೇವೆಯನ್ನು ಸ್ಮರಿಸುತ್ತಾನೆ ಮತ್ತು ಆತನ ಸಲಹೆ /ನೆರವು ಇಲ್ಲದಿದ್ದಲ್ಲಿ ತಾನು ಅಸಹಾಯಕನಾಗಿರುತ್ತಿದ್ದೆ, ಈಗ ಆತನ ಆಜ್ಞೆಯ ಮಾರ್ಗದರ್ಶನ ಪಡೆಯಲು ಮತ್ತು ತಾನು ತನ್ನ ಗುರಿಯತ್ತ ಮುಂದುವರಿಯುವುದಾಗಿ (ಅಂದರೆ ಆತನ ವಿರುದ್ಧ ಯುದ್ಧ ಮಾಡುವುದಾಗಿ) ಅತ್ಯಂತ ವಿನೀತನಾಗಿ ತಿಳಿಸುತ್ತಾನೆ!  (ಅದಕ್ಕೆ ಖಂಡೆರಾವ್ ಕೊಟ್ಟ ಉತ್ತರವೂ ಅಷ್ಟೇ ವಿಸ್ಮಯಕಾರಿ)

ಫ್ರಾಂಸಿಸ್ ಬುಕಾನನ ಹೇಳುತ್ತಾನೆ ಜನರೆಲ್ಲಾ ಹೈದರನ್ನು ಇಷ್ಟಪಡುತ್ತಿದ್ದುದ್ದು ಅವನ ನ್ಯಾಯನಿಷ್ಠೆ ಬುದ್ಧಿಶಕ್ತಿ, ನೆನಪು ಶಕ್ತಿ ಮತ್ತು ಉಪಕಾರ ಬುದ್ಧಿಗೆ ಮನಸೋತು ಎಂದು.

ಹೀಗೆ ಹೈದರ್ ಅಲಿ ವೈರುಧ್ಯಗಳ ಮೂಟೆ ಅನ್ನಿಸುತ್ತಾನೆ. ಅವನನ್ನು ಮೆಚ್ಚಿಕೊಳ್ಳಬೇಕೋ ತೆಗಳಬೇಕೋ ಗೊತ್ತಾಗುವುದಿಲ್ಲ.

ಟೀಪುಸುಲ್ತಾನನಿಗೆ ಮುತ್ತಿನ ಸರದ ಬಗ್ಗೆ ಅತೀವ ಮೋಹ ಇತ್ತು. ಒಂದೊಂದೇ ಮುತ್ತುಗಳನ್ನು ಆರಿಸಿ ಹಾರ ಮಾಡಿಸುತ್ತಿದ್ದ. ಅಕಸ್ಮಾತ್ ಒಂದು ಮುತ್ತು ಸ್ವಲ್ಪ ಕಡಿಮೆ ದರ್ಜೆಯದ್ದಾಗಿದ್ದರೆ ಮತ್ತೊಮ್ಮೆ ಅದೇ ಗಾತ್ರದ ಒಳ್ಳೆಯ ಮುತ್ತು ಸಿಕ್ಕಾಗ ಕಳಪೆಯದನ್ನು ತೆಗೆಸಿ ಹೊಸದನ್ನು ಹಾಕಿಸಿ ಮತ್ತೆ ಹಾರ ಕಟ್ಟಿಸುತ್ತಿದ್ದ. ಟೀಪುವಿನ ಎಲ್ಲಾ ಚಿತ್ರಗಳಲ್ಲೂ ಮುತ್ತಿನ ಸರ ಇದ್ದೇ ಇರುತ್ತದೆ.

ಆದರೆ ಹೈದರ್ ಅಲಿಗೆ ಆಭರಣಗಳ ಹುಚ್ಚಿರಲಿಲ್ಲ. ತನ್ನ ರುಮಾಲಿನ ಮೇಲಾಗಲಿ ಅಥವಾ ಉಡುಪಿನ ಮೇಲಾಗಲಿ ಆತ ಒಡವೆ ಧರಿಸುತ್ತಿರಲಿಲ್ಲ. ಆತನ ರುಮಾಲು ಎತ್ತರಕ್ಕಿದ್ದು ಮೇಲೆ ಚಪ್ಪಟೆಯಾಗಿರುತ್ತಿತ್ತು. ಆತನ ಚಪ್ಪಲಿ ಕೂಡಾ ಚಡಾವಿನಂತೆ ಉದ್ದಕ್ಕಿದ್ದು ಮುಂದೆ ಬಾಗಿರುತ್ತಿತ್ತು.  ಹೈದರ ಗಡ್ಡ ಮೀಸೆ ಇಲ್ಲದ ಸ್ಟೈಲ್ ಆತನ ಆಸ್ಥಾನದವರಿಗೆ ಎಷ್ಟು ಇಷ್ಟವಾಗಿತ್ತು ಅಂದರೆ ಅವರೂ ಆದಷ್ಟೂ ಕಡಿಮೆ ಗಡ್ಡಮೀಸೆ ಇಟ್ಟುಕೊಳ್ಳುತ್ತಿದ್ದರು. ಆತನಿಗೆ ಮಾತುಗಾರಿಕೆ ಸಿದ್ಧಿಸಿತ್ತು.

ಯಾವುದೇ ವಿಷಯದ ಬಗ್ಗೆಯಾದರೂ ಆತ ಸರಾಗವಾಗಿ ಮಾತನಾಡಬಲ್ಲವನಾಗಿದ್ದ. ಉಳಿದೆಲ್ಲ ರಾಜರುಗಳು ತಮ್ಮ ಸ್ಥಾನ ಕುರಿತ ಸಂಕೋಚಗಳಿಂದ ಒಂದು ರೀತಿಯ ಬಿಗುವಿನಲ್ಲಿ ಮಾತನಾಡುತ್ತಿದ್ದರೆ ಹೈದರ್ ಎಂದಿಗೂ ಕೃತಕ ಸಂಭಾಷಣೆ ಮಾಡುತ್ತಿರಲಿಲ್ಲ. ಮನಸ್ಸಿಗೆ ಬಂದದ್ದನ್ನು ನೇರವಾಗಿ ಹೇಳುತ್ತಿದ್ದ ಎನ್ನುತ್ತಾನೆ.

ಒಂದು ಸಲ ಹೈದರ್ ಕುದುರೆ ಏರಿ ತನ್ನ ಅಧಿಕಾರಿ ಪರಿವಾರದೊಂದಿಗೆ ರಸ್ತೆಯಲ್ಲಿ ಹೋಗುತ್ತಿದ್ದ. ದಾರಿಯಲ್ಲಿ ಒಬ್ಬ ಆರ್ತನಾದದಲ್ಲಿ ‘ಕಾಪಾಡಿ, ಕಾಪಾಡಿ’ ಎಂದ. ಹೈದರ್ ಕುದುರೆ ನಿಲ್ಲಿಸಿ ಅದೇನದು ಕೇಳಿ ಎಂದ. ಅವನೊಬ್ಬ ಕುರುಡ. ‘ಬದುಕಲು ತನಗೆ ದಾರಿಯಿಲ್ಲ ಸಹಾಯ ಮಾಡಿ’ ಎಂದುಕೇಳಿದ.

ಹೈದರ್ ಕೆಲಸ ಮಾಡುತ್ತೀಯಾ ಎಂದು ಕೇಳಿದ. ಅವನು ಒಪ್ಪಿದ. ಅವನಿಗೆ ತಕ್ಷಣ ಕಮ್ಮಾರಿಕೆಯ ಕಾರ್ಖಾನೆಯಲ್ಲಿ ಕುಲುಮೆಗೆ ತಿದಿ ಒತ್ತುವ ಕೆಲಸಕ್ಕೆ ನೇಮಿಸಿ ಒಳ್ಳೆಯ ಸಂಬಳ ಗೊತ್ತು ಮಾಡಿದ. ನಂತರ ತನ್ನ ಮಂತ್ರಿಗಳಿಗೆ ಹೇಳಿ ರಾಜ್ಯದ ಕುರುಡರಿಗೆಲ್ಲ ಅಂತಹ -ಕುರುಡರು ಮಾಡಬಹುದಾದ-ಕೆಲಸಗಳಿಗೆ ನೇಮಿಸಿದ.

‍ಲೇಖಕರು Avadhi

May 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Vasundhara k m

    ಕುತೂಹಲಕಾರಿಯಾದ ವಿವರಗಳೊಂದಿಗೆ, ಬಹಳ ಆಸಕ್ತಿಕರ ವಿಷಯ ನಿರೂಪಣೆಯ ಮುಂದಿನ ಅಂಕಣಕ್ಕಾಗಿ ಕಾಯುವಂತೆ ಮಾಡಿದೆ.

    ಪ್ರತಿಕ್ರಿಯೆ
  2. ವಾಸುದೇವ ಶರ್ಮಾ

    ಎಂದೂ ಕೇಳದಿದ್ದ ಚರಿತ್ರೆ… ಮುಂದೆ…

    ಪ್ರತಿಕ್ರಿಯೆ
  3. ಲಲಿತಾ ಸಿದ್ಧಬಸವಯ್ಯ

    ಇಷ್ಟು ದಿನ ಓದದೆ ಇದ್ದೆನಲ್ಲ ಅನಿಸಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: