
ಡಾ. ಜಿ. ಎಸ್. ಶಿವಪ್ರಸಾದ್
ಹೊರಗೆ ಚುಮು ಚುಮು ಚಳಿ
ಭೋರ್ ಎಂದು ಬೀಸುವ ಗಾಳಿ
ಮೋಡ ಸರಿದು ಇಣುಕುವ ರವಿ
ಹಿತವಾದ ಹೊಂಬಿಸಿಲು
ನಾ ಬೆಳೆಸಿದ ಹೂಗಳು
ಬೇಸಿಗೆಯಲ್ಲರಳಿದವು ಹಾಯಾಗಿ
ಈಗ ಕಳಚಿ ಬೀಳುತ್ತಿವೆ
ಪಕಳೆಗಳು, ಒಂದೊಂದೆ ಹಗುರಾಗಿ
ಬೇಸಿಗೆಯ ಹಾಸಿಗೆಯಲ್ಲಿ ಸೆಖೆ
ಎಂದು ದೂಡುತ್ತಿದ್ದ ನನ್ನಾಕೆ
ಚಳಿಯಿಂದ ಬೆಚ್ಚನೆಯ ಅಪ್ಪುಗೆಗೆ
ನೀಡಿದ್ದಾಳೆ ಒಪ್ಪುಗೆ

ಬೀದಿ ಬದಿಯ ಮರಗಳ
ಹಸುರು ಎಲೆಗಳು ಹಣ್ಣಾಗಿವೆ
ಹಳದಿ, ಕೆಂಪು ,ಕಂದು ಬಣ್ಣ
ನಿಸರ್ಗದ ಓಕುಳಿಯಾಟ ರಂಗಾಗಿದೆ
ಬಣ್ಣ ಬಣ್ಣಗಳ ಟೀ ಶರ್ಟುಗಳು
ಸೇರಿವೆ ಬೆಡ್ರೂಮಿನ ಕಪಾಟು
ಇಲ್ಲಿಯವರೆಗೆ ತೆಪ್ಪಗೆ ಕುಳಿತಿದ್ದು ಈಗ
ಎತ್ತಿಕೊ ಎನ್ನುತ್ತಿದೆ ಕರಿ ಉಣ್ಣೆಯೆಕೋಟು
ಬೀಸುವ ಚಳಿಗಾಳಿಗೆ ಹಣ್ಣಾದ
ಎಲೆಗಳನು ಉದುರಿಸುವ ಛಲ
ಎಲೆಗಳಿಗೊ ಬಲವಿಲ್ಲದಿದ್ದರೂ
ರೆಂಬೆಗೆ ಅಂಟಿ ಕೊಂಡಿರುವ ಹಂಬಲ

ಎಲೆಗಳ ಹಂಗು ಇನ್ನೇಕೆಂದು
ತಟಸ್ಥವಾಗಿ ನಿಂತ ಮರ
ಇದು ನಿಸರ್ಗದ ನಿಯಮದನುಸಾರ
ಬದುಕೆಂಬುದು ಎಷ್ಟು ನಶ್ವರ
ಕನ್ನಡಿಯಲ್ಲಿ ನನ್ನನ್ನು ನಾನೇ
ನೋಡಿಕೊಳ್ಳುತ್ತೇನೆ, ಆತಂಕದಿಂದ
ಸುಕ್ಕು ಗಟ್ಟುತ್ತಿರುವ ಮುಖ
ನೆರತು ಬೋಳಾಗುತ್ತಿರುವ ತಲೆ
ಮರಕ್ಕೇನು ಚಿಂತೆ? ಚೈತ್ರದಲಿ
ಮತ್ತೆ ಮೂಡುವುದು ಹಸುರಿನೆಲೆಗಳು.
ನನಗೆ ಗೊತ್ತು ಮೂಡುವುದಿಲ್ಲ
ನನ್ನ ತಲೆಯಲಿ ಮತ್ತೆ ಕಪ್ಪು ಕೂದಲುಗಳು






0 Comments