ಪ್ರಖರ ಬೆಳಕಿನ ಹಿಂದಿರುವ ಕತ್ತಲು

ಡಾ. ಶರಣು ಹುಲ್ಲೂರು

ಮರೆಯುವ ಮುನ್ನ..

ಹುಲ್ಲೂರು ಎಂಬ ಪುಟ್ಟ ಹಳ್ಳಿಯಿಂದ ಬೆಂಗಳೂರಿಗೆ ನನ್ನನ್ನು ಕರೆತಂದಿದ್ದು ಟಿವಿ ಮಾಧ್ಯಮದ ಮೇಲಿನ ಸೆಳೆತ. ಇದೊಂದು ಶಕ್ತಿಯುತ ಮಾಧ್ಯಮ ಆಗಿರುವುದರಿಂದ, ಇಲ್ಲೇನೋ ಮಾಡಬೇಕು ಎನ್ನುವ ತುಡಿತವೇ ಎಂಟು ವರ್ಷಗಳ ಕಾಲ ಇದೇ ಕ್ಷೇತ್ರದ ಕುರಿತಾಗಿಯೇ ಶೈಕ್ಷಣಿಕವಾಗಿ ಓದಬೇಕಾಯಿತು.

ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮುಗಿಸುವ ಹೊತ್ತಿನಲ್ಲೇ ಧಾರಾವಾಹಿಗಾಗಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯಲು ಅವಕಾಶ ಸಿಕ್ಕಿತ್ತು. ಹಾಗಾಗಿ ಈ ಮಾಧ್ಯಮ ನನಗೆ ಮತ್ತಷ್ಟು ಹತ್ತಿರವಾಯಿತು. ಏಳನೇ ಕ್ಲಾಸ್ ಪಾಸ್ ಆಗಲು ಒದ್ದಾಡಿದವನು ಪದವಿಯಲ್ಲಿ ಹೆಚ್ಚು ಅಂಕ ಪಡೆದು ಅಚ್ಚರಿ ಮೂಡಿಸಿದೆ. ಎಂ ಎನಲ್ಲಿ ನಾಲ್ಕನೇ ರ್ಯಾಂಕ್ ಬಂದೆ. ಇಷ್ಟಾದರೂ ಮೀಡಿಯಾ ಮೇಲಿನ ಮಮಕಾರ ಹೋಗಲಿಲ್ಲ.

ಕಿರುತೆರೆ ಕ್ಷೇತ್ರದಲ್ಲಿ ದಿನಕ್ಕೆ ಹದಿನೆಂಟು ಗಂಟೆ ಕೆಲಸ ಮಾಡಿದ ಪರಿಣಾಮ ಅಲ್ಲಿನ ನಾಡಿಮಿಡಿತ ಅರಿತುಕೊಂಡೆ. ಕಷ್ಟ ನಷ್ಟಗಳ ಮುಖಕಂಡೆ. ಅತೀ ಹೆಚ್ಚು ಮಹಿಳೆಯರೇ ಕೆಲಸ ಮಾಡುವ ಈ ಮೀಡಿಯಾದಲ್ಲಿ ಅವರಿಗೆ ಸಿಕ್ಕ ಸ್ಥಾನಮಾನ ಕಂಡು ಗಲಿಬಿಲಿಗೊಂಡೆ. ಅದರ ಪರಿಣಾಮವೇ ಪಿಎಚ್‍ಡಿ ಮಾಡಲು ಮುಂದಾಗಿದ್ದು.

ವಿದ್ಯುನ್ಮಾನ ಮಾಧ್ಯಮದಲ್ಲಿ ದುಡಿಯುವ ಮಹಿಳೆಯರ ಕುರಿತು ಸಂಶೋಧನೆ ಕೈಗೊಳ್ಳಬೇಕು ಎಂದಾಗ ಥಟ್ಟನೆ ನೆನಪಾಗಿದ್ದು ಅಮ್ಮ ಡಾ.ವಿಜಯಮ್ಮ. ಅವರೊಂದಿಗೆ ಚರ್ಚಿಸಿದಾಗ ಈಗಾಗಲೇ ಪತ್ರಿಕೋದ್ಯಮ ಮತ್ತು ಕಿರುತೆರೆಯ ಕಲಾವಿದೆಯರ ಮೇಲೆ ಸಂಶೋಧನೆ ಆಗಿರುವ ಸಂಗತಿ ಗೊತ್ತಾಯಿತು. ಹಾಗಾಗಿಯೇ ಟಿವಿ ಮಾಧ್ಯಮದಲ್ಲಿ ದುಡಿವ ಮಹಿಳೆಯರನ್ನು ಆಯ್ಕೆ ಮಾಡಿಕೊಂಡೆ. ಇದನ್ನು ಸ್ತ್ರೀವಾದ ನೆಲೆಯಲ್ಲಿ ಕಟ್ಟುವ ಕೆಲಸಕ್ಕೆ ನಿಂತೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲೇ ಪಿಎಚ್‍ಡಿ ಮಾಡಬೇಕು ಎನ್ನುವ ನನ್ನ ಆಸೆ ಕೂಡ ಈಡೇರಿತು.

ಈ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿದ್ದ ಮತ್ತು ಮಹಿಳಾಪರ ಸಾಕಷ್ಟು ಕೆಲಸಗಳನ್ನು ಮಾಡಿರುವ ಡಾ.ಶೈಲಜ ಹಿರೇಮಠ ಮಾರ್ಗದರ್ಶಕರಾದರು. ಅವರ ಅಧ್ಯಯನದ ಶಿಸ್ತು, ಕೇಳುತ್ತಿದ್ದ ಪ್ರಶ್ನೆ ಮತ್ತು ಅವರು ತೋರುತ್ತಿದ್ದ ದಾರಿ ಪ್ರತಿ ಕ್ಷಣವೂ ಹೊಸದನ್ನು ಹುಡುಕಲು ನನಗೆ ನೆರವಾಯಿತು.

“ಯಾರೂ ಮಾಡದೇ ಇರುವುದನ್ನು ನೀನು ಮಾಡು. ಇಲ್ಲದಿದ್ದರೆ ನಿನ್ನದೂ ಒಂದು ಪಿಎಚ್‍ಡಿ ಪದವಿ ಆದೀತು” ಎಂಬ ಶೈಲಜ ಮೇಡಂ ಅವರ ಎಚ್ಚರಿಕೆ ಸದಾ ನನ್ನಲ್ಲಿತ್ತು. ಹಾಗಾಗಿ ಈವರೆಗಿನ ಸಂಶೋಧನೆಯ ಮಾರ್ಗವನ್ನೇ ಬದಲಿಸಿ, ಹೊಸದನ್ನು ಮಾಡಲು ಹೊರಟೆ. ಅದು ಅಂತಿಮವಾಗಿ ನನ್ನನ್ನು ಗೆಲ್ಲಿಸಿದೆ ಎನ್ನುವುದಕ್ಕೆ ನನ್ನ ಸಂಶೋಧನೆಯನ್ನು ಪರೀಕ್ಷಿಸಿ, ಬರೆದ ಮೌಲ್ಯಮಾಪಕರ ಮಾತುಗಳೇ ಸಾಕ್ಷಿ.

ಮುಂದೆ ಈ ಕ್ಷೇತ್ರದಲ್ಲಿ ಯಾರೇ ಸಂಶೋಧನೆ ಮಾಡಿದರೂ, ಅವರಿಗೆ ಇದೊಂದು ಬೆಸ್ಟ್ ಆಕರ ಎಂದು ಬರೆದು ಬೆನ್ನು ತಟ್ಟಿರುವ ಮೈಸೂರು ವಿಶ್ವವಿದ್ಯಾಲಯದ ಡಾ.ಸ್ವಪ್ನಾ ಅವರಿಗೆ, ಇನ್ನೂ ಹಲವು ಸಾಧ್ಯತೆಗಳನ್ನು ತಿಳಿಸಿದ ಡಾ. ಸಂಜಯ್ ಮಾಲಗತ್ತಿ ಅವರಿಗೆ ಕೃತಜ್ಞತೆಗಳು.
ಡಾ.ಶೈಲಜಾ ಹಿರೇಮಠ ಅವರ ಮಾರ್ಗದರ್ಶನದಲ್ಲಿ ಪಿಎಚ್‍ಡಿ ಮಾಡುತ್ತಿದ್ದೇನೆ ಎಂದಾಗ ಸಂಭ್ರಮ ಪಟ್ಟು, ಅದಕ್ಕೆ ಬೇಕಿರುವ ಪೂರಕ ಆಕರಗಳನ್ನು ಮತ್ತು ಸಲಹೆ ಸೂಚನೆ ನೀಡಿದವರು ಡಾ. ರೆಹಮತ್ ತೆರಿಕೆರೆ, ಡಾ. ಅಮರೇಶ್ ನುಗುಡೋಣೆ, ಡಾ.ಗಣೇಶ್ ಮೊಗಳ್ಳಿ ಮತ್ತಿತರರ ಸಹಕಾರವನ್ನು ಮರೆಯಲಾರೆ.

ನನ್ನ ವೃತ್ತಿಯ ಒದ್ದಾಟದ ಕಾರಣದಿಂದಾಗಿ ಶೈಲಜಾ ಮೇಡಂ ಅವರಿಗೆ ತುಂಬಾ ತೊಂದರೆ ಕೊಟ್ಟಿರುವೆ. ಹೊತ್ತಲ್ಲದ ಹೊತ್ತಿಗೆ ಕರೆ ಮಾಡಿರುವೆ. ರಜಾ ದಿನಗಳಲ್ಲೂ ಅವರನ್ನು ಕಾಡಿದ್ದಿದೆ. ಎಳ್ಳಷ್ಟೂ ಬೇಸರಿಸಿಕೊಳ್ಳದೇ ಥೇಟ್ ಅಮ್ಮನಂತೆ ನನ್ನನ್ನು ತಿದ್ದುತ್ತಾ, ಡಾಕ್ಟರ್ ಎಂಬ ಗರಿಗೆ ಕಾರಣರಾಗಿದ್ದಾರೆ. ಇವರಂಥ ಮಾರ್ಗದರ್ಶಕರ ಸಂಖ್ಯೆ ಹೆಚ್ಚಾಗಲಿ ಎಂಬ ಸ್ವಾರ್ಥದೊಂದಿಗೆ ಅವರನ್ನು ನೆನೆಯುತ್ತೇನೆ.

ಇಂಥದ್ದೊಂದು ಹೊಸ ಸಾಧ್ಯತೆ ನನ್ನಿಂದ ಆಗಿದ್ದು ಟಿವಿ ಮಾಧ್ಯಮದಲ್ಲಿ ದುಡಿವ ನೂರಾರು ಮಹಿಳಾ ಉದ್ಯೋಗಿಗಳಿಂದ. ನಾನು ಕೇಳುತ್ತಿದ್ದ ಪ್ರತಿ ಪ್ರಶ್ನೆಗೂ ಅವರು ಉತ್ತರಿಸಿದರು. ಪದೇ ಪದೇ ಭೇಟಿ ಮಾಡಲು ಅವಕಾಶ ಕೊಟ್ಟರು. ತಾವಾಡಿದ ಮಾತು ತಮ್ಮ ವೃತ್ತಿ ಬದುಕಿಗೆ ತೊಂದರೆ ಮಾಡೀತು ಎಂಬ ಭಯವನ್ನೂ ಮರೆತು ಈ ಕ್ಷೇತ್ರದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇವರಿಲ್ಲದೇ ಈ ಸಂಶೋಧನೆ ಇಲ್ಲ. ಅವರೆಲ್ಲರಿಗೂ ನನ್ನ ಸಂಭ್ರಮದಲ್ಲಿ ಸಮಪಾಲಿದೆ.

ನನ್ನೊಂದಿಗೆ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಡಾ.ಪಂಪಾಪತಿ, ಡಾ.ಭೀಮೇಶ್, ಡಾ.ಶಿವಮ್ಮ ಅವರ ಸಹಕಾರಕ್ಕೆ ಶರಣು. ಟಿವಿ ಲೋಕಕ್ಕೆ ಪರಿಚಯಿಸಿದ ನಿರ್ದೇಶಕ ಬಿ.ಸುರೇಶ, ವೃತ್ತಿ ನಡುವೆಯೂ ಸಂಶೋಧನೆ ಮಾಡಲು ಅವಕಾಶ ಕೊಟ್ಟ ವಿಜಯ ಕರ್ನಾಟಕ ಪತ್ರಿಕಾ ಸಂಸ್ಥೆಗೆ, ನನ್ನ ಪ್ರತಿ ಹುಂಬುತನಕ್ಕೂ ಬೆನ್ನೆಲುಬಾಗುವ ಪತ್ನಿ, ನಟಿ ಶರಣ್ಯರ ನಿರ್ಮಲ ಪ್ರೀತಿಗೆ ಕೃತಜ್ಞತೆ ಸಣ್ಣದಾದೀತು.

ನನ್ನ ಬೆಳವಣಿಗೆಯ ಹಿಂದೆ ಅಣ್ಣ ಡಾ.ನಿಂಗು ಸೊಲಗಿ ಮತ್ತು ಅವರ ಕುಟುಂಬ, ಗೆಳೆಯ ಶಿವು ಮೆಣಸಗಿ, ನನ್ನ ತಾಯಿ ಶಾಂತಮ್ಮ, ಸಹೋದರ ಚೆನ್ನವೀರ, ಇಡೀ ನನ್ನ ಬಳಗವಿದೆ. ಅವರ ಪ್ರೋತ್ಸಾಹ ಸದಾ ಹೀಗೆ ಇರಲಿ ಎಂದು ಬೇಡುವೆ.

ಇಂಥದ್ದೊಂದು ಸಂಶೋಧನೆ ಆಗಿದೆ ಎಂದು ಗೊತ್ತಾದಾಗ ಪುಸ್ತಕವಾಗಿ ಅದನ್ನು ಹೊರತರಲು ಹೇಮಾ ಪಟ್ಟಣಶೆಟ್ಟಿ ಮತ್ತು ಡಾ. ಆರ್. ಪೂರ್ಣಿಮಾ ಮುಂದೆ ಬಂದರು. ಅವರೇ ಈ ಕೃತಿಯ ಕುರಿತು ವಿಸ್ತಾರವಾಗಿ ಬರೆದಿದ್ದಾರೆ.

ಡಾ.ವಿಜಯಮ್ಮ ಬೆನ್ನುಡಿ ಬರೆದು ಬೆನ್ನುತಟ್ಟಿದ್ದರೆ, ಇಡೀ ಪುಸ್ತಕವನ್ನು ಅಂದವಾಗಿ ಡಿಸೈನ್ ಮಾಡಿದ್ದು ನನ್ನಿಷ್ಟದ ಲೇಖಕ ಮಂಜುನಾಥ್ ವಿ.ಎಂ. ಇವರೆಲ್ಲರಿಗೂ ಶರಣು ಶರಣಾರ್ಥಿ. ಪ್ರತಿ ಸಾರಿಯೂ ನನ್ನ ಪುಸ್ತಕ ಬಂದಾಗ ಅದನ್ನು ಒಪ್ಪಿಕೊಳ್ಳುತ್ತೀರಿ. ಮತ್ತೆ ಬರೆಯುವಷ್ಟು ಪ್ರೋತ್ಸಾಹ ನೀಡುತ್ತೀರಿ. ನಿಮ್ಮ ಅಕ್ಕರೆಗೆ ಈ ಪುಸ್ತಕ ಅರ್ಪಿಸುತ್ತೇನೆ.

ಡಾ. ಆರ್ ಪೂರ್ಣಿಮಾ

ಆಧುನಿಕ ಶಿಕ್ಷಣ ಪಡೆಯುವ ಅವಕಾಶ ಸಿಕ್ಕಿದ ಕೂಡಲೇ ಮಹಿಳೆಯರು ಸಾಹಿತ್ಯ ಮತ್ತು ಪತ್ರಿಕಾರಂಗವನ್ನು ಪ್ರವೇಶಿಸಲು ತೋರಿದ ಉತ್ಸಾಹವೇ, ಅದು ಅವರ ಅಭಿವ್ಯಕ್ತಿಗೆ ಸಿಕ್ಕ ಅದ್ಭುತ ಅವಕಾಶವೂ ಆಯಿತೆನ್ನುವುದನ್ನು ಹೇಳುತ್ತದೆ. ಹೊಸತನ್ನು ಅರಸುವ ಅವರ ತುಡಿತಕ್ಕೆ ಹೊಸ ದಾರಿ ಸಿಕ್ಕಿದಂತಾಯಿತು. ಸ್ವಾತಂತ್ರ್ಯೋತ್ತರ ಭಾರತದ ಬಹುಪಾಲು ಭಾಷೆಗಳಲ್ಲಿ ಈ ಬೆಳವಣಿಗೆ ಕಾಣುತ್ತದೆ.

ಬಂಗಾಳಿ ಭಾಷೆಯಿಂದ ಆರಂಭಿಸಿ ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಮಹಿಳೆಯರು ಪತ್ರಿಕೆಗಳನ್ನು ಸ್ವತಃ ರೂಪಿಸಿ, ಪ್ರಕಟಿಸುವ ಸಾಹಸವನ್ನು ಕೈಗೊಂಡರು. ಹೆಚ್ಚಾಗಿ ತಮ್ಮದೇ ಮಾಸ ಪತ್ರಿಕೆ, ಪಾಕ್ಷಿಕ ಪತ್ರಿಕೆ, ವಾರಪತ್ರಿಕೆಗಳನ್ನು ಆರಂಭಿಸಿ ಹೊಸ ವಿಚಾರಗಳನ್ನು ಪ್ರಸಾರ ಮಾಡಿದರು. ಇಪ್ಪತ್ತನೇ ಶತಮಾನದ ಆರಂಭದ ದಶಕಗಳಂತೂ ಭಾರತೀಯ ಭಾಷೆಗಳಲ್ಲಿ ಇಂಥ ಪ್ರಯೋಗಗಳ ಸರಮಾಲೆಯನ್ನೇ ನಮ್ಮ ಮುಂದೆ ಹರಡುತ್ತವೆ.

ಬರಹಗಾರ್ತಿ, ಸಂಪಾದಕಿ, ಪ್ರಕಾಶಕಿ ಮತ್ತು ವಿತರಕಿ ಹೀಗೆ ಹಲವು ಪಾತ್ರಗಳನ್ನು ಅವರು ದಕ್ಷತೆಯಿಂದ ನಿಭಾಯಿಸಿದ ದಿಟ್ಟತನವನ್ನು ಯಾರಾದರೂ ಮೆಚ್ಚಲೇಬೇಕು. ಭಾರತೀಯ ಮಹಿಳೆ ಮತ್ತು ಪತ್ರಿಕೋದ್ಯಮ ಕುರಿತು ವಿವರವಾದ ಅಧ್ಯಯನಗಳಲ್ಲಿ, ಅನೇಕ ಭಾಷೆಗಳಲ್ಲಿ ʼನಂಜನಗೂಡು ತಿರುಮಲಾಂಬ ಮಾದರಿ’ ನಮ್ಮ ಕಣ್ಣಿಗೆ ಬೀಳುತ್ತದೆ.

ರಾಷ್ಟ್ರೀಯ ಆಂದೋಲನದ ಉತ್ಸಾಹವನ್ನು ಹೆಚ್ಚಿಸಲು, ಸ್ವತಂತ್ರ ದೇಶದ ಕನಸನ್ನು ಜನರಲ್ಲಿ ಬಿತ್ತಲು ಪತ್ರಿಕಾರಂಗವನ್ನೂ ಒಂದು ಪ್ರಬಲ ವೇದಿಕೆಯನ್ನಾಗಿ ಪರಿಗಣಿಸಿದ್ದರಿಂದ ಮಹಾತ್ಮ ಗಾಂಧೀಜಿಯವರು ಸೇರಿದಂತೆ ರಾಷ್ಟ್ರೀಯ ಚಳವಳಿಯ ನಾಯಕರಲ್ಲಿ ಅನೇಕರು ಸ್ವತಃ ಪತ್ರಕರ್ತರೂ ಸಂಪಾದಕರೂ ಆಗಿದ್ದರು.

ಸಾಕ್ಷರತೆ, ಪ್ರಸಾರ, ಓದುವ ಹವ್ಯಾಸ ಮುಂತಾದುವೆಲ್ಲ ಅತ್ಯಂತ ಪರಿಮಿತ ಪ್ರಮಾಣದಲ್ಲಿ ಇದ್ದ ಕಾಲದಲ್ಲೂ ಪತ್ರಿಕೆಗಳ ಸಾಮರ್ಥ್ಯ ಮತ್ತು ಪ್ರಾಮುಖ್ಯವನ್ನು ಅವರೆಲ್ಲ ಗುರುತಿಸಿದ್ದರು. ರಾಷ್ಟ್ರೀಯ ಚಳವಳಿ ಸಫಲಗೊಂಡು, ಸ್ವಾತಂತ್ರ್ಯ ಬಂದ ನಂತರ ಹೊಸ ರಾಷ್ಟ್ರವನ್ನು ಕಟ್ಟುವ ಕಾರ್ಯ ಮುನ್ನೆಲೆಗೆ ಬಂದಿತು. ಪತ್ರಿಕೆ ರೂಪಿಸುವುದು, ಪ್ರಕಟಿಸುವುದು, ಪ್ರಸಾರ ಮಾಡುವುದು, ಮನೆಮನೆಗೆ ವಿತರಿಸುವುದು ಇವೆಲ್ಲ ಕೆಲಸಗಳೂ ಆರಂಭದಿಂದ ಇದ್ದರೂ ಪತ್ರಿಕೆ ಪ್ರಕಟಣೆ ಸ್ಪಷ್ಟವಾಗಿ ʼಒಂದು ಉದ್ಯಮದ ಸ್ವರೂಪ ಪಡೆದ ನಂತರವೇ ಪತ್ರಿಕೋದ್ಯಮ’ ಬಲಿಷ್ಠವಾಗಿ, ಬೃಹತ್ತಾಗಿ ಬೆಳೆಯುವುದು.

ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳ ಜೊತೆ ಪತ್ರಿಕಾರಂಗಕ್ಕೂ ಪ್ರಮುಖ ಜವಾಬ್ದಾರಿಯ ಸ್ಥಾನ ದೊರೆಯಿತು. ಆದರೆ ಈ ಹೊಸ ಬೆಳವಣಿಗೆಯು ರೂಪಿಸಿದ ಉದ್ಯಮ ಮಹಿಳೆಯರಿಗೆ ಎಷ್ಟು ಅವಕಾಶ ಕೊಟ್ಟಿತು? ಸುದ್ದಿಮನೆ ವ್ಯವಸ್ಥೆಯಲ್ಲಿ ಅವರಿಗೆ ಎಷ್ಟು ಉದ್ಯೋಗ, ಯಾವ ಜವಾಬ್ದಾರಿ ಸಿಕ್ಕಿತು? ಸಾಮಾಜಿಕ ಸಮಾನತೆಯ ಕುರಿತು ಸಮಾಜದಲ್ಲಿ ಸಂವೇದನೆ ಬೆಳೆಸುವುದೂ ಪತ್ರಿಕಾರಂಗದ ಒಂದು ಮುಖ್ಯ ಕರ್ತವ್ಯ ಆಗಿರುವಾಗ, ಅದು ತನ್ನ ಆಂತರಿಕ ವ್ಯವಸ್ಥೆಯಲ್ಲಿ ಅದನ್ನು ಎಷ್ಟರ ಮಟ್ಟಿಗೆ ಸಾಧಿಸಲು ಪ್ರಯತ್ನಿಸಿತು?

ತಂತ್ರಜ್ಞಾನದ ಮುನ್ನಡೆಯೊಂದಿಗೆ ಈಗ ಮುದ್ರಣ, ಶ್ರವ್ಯ, ದೃಶ್ಯ ಮತ್ತು ಡಿಜಿಟಲ್ ಪ್ರಕಾರಗಳೆಲ್ಲವೂ ಸೇರಿ “ಮಾಧ್ಯಮ” ಎಂಬ ವಿಸ್ತಾರವಾದ ವಲಯ ರೂಪುಗೊಂಡಿದೆ. ನವ ಮಾಧ್ಯಮವೂ ಸಾಮಾಜಿಕ ಮಾಧ್ಯಮವೂ ಸೇರಿಕೊಂಡು ಶಾಲಾ ಮಕ್ಕಳ ಕೈಗೂ ಎಟುಕುವಷ್ಟು ಅದರ ಹರಹು ಇನ್ನಷ್ಟು ವಿಸ್ತಾರವಾಗಿದೆ. ಅಷ್ಟೊಂದು ಬೆಳವಣಿಗೆ, ಇಷ್ಟೊಂದು ಪ್ರಗತಿ ಮಹಿಳೆಯರನ್ನು ಎಷ್ಟು ಒಳಗೊಂಡಿದೆ ಎನ್ನುವುದೇ ಮುಖ್ಯ ಪ್ರಶ್ನೆ.

ಮಾಧ್ಯಮ ಕಾರ್ಯಾಲಯ ಬೇರೆಲ್ಲ ಕಚೇರಿಗಳಿಗಿಂತ ಭಿನ್ನವಾಗಿ, ಗಡಿಯಾರದ ಮುಳ್ಳುಗಳ ಜೊತೆ ನಡೆಯುತ್ತದೆ. ಕೆಲಸ ಆಗುವುದು, ಕೆಲಸ ಮುಗಿಯುವುದು ಮುಖ್ಯವೇ ಹೊರತು ಗಂಡುಹೆಣ್ಣು ಯಾರು ಕೆಲಸ ಮಾಡುತ್ತಾರೆ ಎನ್ನುವುದು ಮುಖ್ಯವಲ್ಲ ಎಂದು ಇಲ್ಲಿ ಎದೆತಟ್ಟಿ ಯಾರೂ ಹೇಳಲಾಗದು. ಏಕೆಂದರೆ ಸಮಾಜದಲ್ಲಿ ಕಾಣುವ ವಿಭಾಗೀಕರಣ, ಪೌರುಷಮಯ ವಾತಾವರಣ, ಲಿಂಗ ಅಸಮಾನತೆ ಇಲ್ಲೂ ರಾರಾಜಿಸುತ್ತದೆ. ಮಾಧ್ಯಮ ಮತ್ತು ಮಹಿಳೆ' ಎಂಬ ವಿಷಯ ಕುರಿತು ಎಲ್ಲಿ ಅಧ್ಯಯನ ನಡೆದರೂ ಇವುಗಳನ್ನು ಉಪೇಕ್ಷಿಸಿ ಒಂದು ಹೆಜ್ಜೆಯನ್ನೂ ಇಡುವಂತಿಲ್ಲ.

ಈ ಸತ್ಯವನ್ನು ಚೆನ್ನಾಗಿ ಅರಿತುಕೊಂಡೇ ಪತ್ರಕರ್ತ ಶರಣು ಹುಲ್ಲೂರು "ದೃಶ್ಯ ಮಾಧ್ಯಮದಲ್ಲಿ ದುಡಿವ ಮಹಿಳೆ" ಎಂಬ ವಿಷಯವನ್ನು ಆರಿಸಿಕೊಂಡು ಕ್ಷೇತ್ರಕಾರ್ಯ ಆಧರಿಸಿದ ಅಧ್ಯಯನ ಮಾಡಿದ್ದಾರೆ. ಪತ್ರಕರ್ತರಿಗೆ ಇರಲೇ ಬೇಕಾದ ಸಾಮಾಜಿಕ ಸಂವೇದನೆಯೇ ಈ ವಿಷಯದ ಆಯ್ಕೆಗೆ ಪ್ರೇರಣೆ ನೀಡಿರಬಹುದು. ಈ ಆಸಕ್ತಿಗಾಗಿ ಅವರನ್ನು ಅಭಿನಂದಿಸುತ್ತೇನೆ.

ಅಪಾರ ಸಂಖ್ಯೆಯ ವಾಹಿನಿಗಳು ಕಿಕ್ಕಿರಿದ ಇಂದಿನ ದೃಶ್ಯ ಮಾಧ್ಯಮದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಸಹಜವಾಗಿ ಹೆಚ್ಚು ಹೆಚ್ಚಾಗಿರಬಹುದು. ಆದರೆ ಇದನ್ನು ಮಾಧ್ಯಮ ವ್ಯವಸ್ಥೆ ಮಹಿಳೆಯರಿಗೆ ನೀಡಿದ ದೊಡ್ಡ ಅನುಗ್ರಹ ಎಂದು ಭಾವಿಸಬೇಕಾಗಿಲ್ಲ. ಉನ್ನತ ಶಿಕ್ಷಣ ಮತ್ತು ವಿಶೇಷ ತರಬೇತಿಯ ಅವಕಾಶಗಳು ಇಂದು ಹೆಣ್ಣುಮಕ್ಕಳ ಪಾಲಿಗೆ ಹೆಚ್ಚಾಗಿ ಸಿಗುತ್ತಿರುವುದರಿಂದ ಉದ್ಯೋಗದ ಅವಕಾಶವೂ ಸಿಕ್ಕಿರುತ್ತದೆ. ಆದರೆ ವಾಹಿನಿಯ ಒಟ್ಟಾರೆ ವೈಚಾರಿಕ ಅಂತರಂಗ ಮತ್ತು ವೈಧಾನಿಕ ಬಹಿರಂಗಗಳಲ್ಲಿ ಮಹಿಳೆಗೆ ಸೂಕ್ತ ಅವಕಾಶ ಸಿಕ್ಕಿದೆಯೇ ಎನ್ನುವುದು ಬಹಳ ಮುಖ್ಯ.

ಶರಣು ಹುಲ್ಲೂರು ಇದನ್ನು ಮಾಹಿತಿ ಸಂಗ್ರಹ ಮತ್ತು ಅದರ ವ್ಯಾಖ್ಯಾನದ ಉದ್ದಕ್ಕೂ ಗಮನದಲ್ಲಿ ಇಟ್ಟುಕೊಂಡಿದ್ದಾರೆ. ವಾಹಿನಿಗಳ ಬಹುಪಾಲು ಕಾರ್ಯಕ್ರಮಗಳಲ್ಲಿ ಹೆಣ್ಣು ಪರದೆಯ ಮೇಲೆ ಬಣ್ಣಬಣ್ಣವಾಗಿ ಕಾಣಿಸಿಕೊಳ್ಳಬಹುದು. ಆದರೆ ಅಲ್ಲಿ ಕಾಣುವುದು ಆ ವ್ಯಕ್ತಿಗಿಂತ ಅವಳ ದೇಹ ಎಂಬ ಸತ್ಯವನ್ನು ಯಾರೂ ಯಾರಿಗೂ ಬಾಯಿಬಿಟ್ಟು ಹೇಳಬೇಕಾಗಿಲ್ಲ. ಆದರೆ ಈ ಅಧ್ಯಯನ ಅದನ್ನು ಸೋದಾಹರಣವಾಗಿ ವಿಶ್ಲೇಷಿಸುವುದು ಇಲ್ಲಿ ಗಮನಾರ್ಹ.

ಪರದೆಯ ಮೇಲೆ ಮತ್ತು ಅದರ ಹಿಂದೆ ಕೆಲಸ ಮಾಡುವ ಮಹಿಳೆಯರು ತಂಡದ ಒಗ್ಗಟ್ಟು ಮತ್ತು ಸಮಯಪಾಲನೆಯ ಕಾರಣಗಳಿಂದ ಪುರುಷ ಸಹೋದ್ಯೋಗಿಗಳೊಂದಿಗೆ ಬೆರೆತು ಕೆಲಸ ಮಾಡುವಾಗ ಆಗುವ ಅನುಭವ ಇಲ್ಲಿ ವಿವರವಾಗಿ ದಾಖಲಾಗಿದೆ. ಸಮಾಜ ಮತ್ತು ಪುರುಷ ಮನೋಭಾವ ತನ್ನನ್ನು ಹೇಗೆ ಕಾಣುತ್ತದೆ ಎಂಬುದನ್ನು ಕುಟುಂಬದಷ್ಟೇ ಕಚೇರಿಯೂ ಹೆಣ್ಣಿಗೆ ಪದೇ ಪದೇ ಮನದಟ್ಟು ಮಾಡುತ್ತದೆ. ಹಾಗೆ ನೋಡಿದರೆ ಕಚೇರಿಯಲ್ಲಿ ಆ ಅನುಭವದ ಪ್ರಮಾಣ ಹೆಚ್ಚು.

ಮನೆಯಲ್ಲಿ ಅಜ್ಜಿ, ತಾತ, ಅಮ್ಮ, ಅಪ್ಪ, ಅತ್ತೆ, ಮಾವ, ಗಂಡ, ನಂಟರುಗಳೆಲ್ಲ ತಾವೇ ಪಂಟರುಗಳಂತೆ ಇವಳನ್ನು ನಾನಾ ರೀತಿ ಪರೀಕ್ಷೆ ಮಾಡುತ್ತಾರೆ. ಆ ಭಯದ ಹೊರೆಯನ್ನು ಹೊತ್ತೇ ಅವಳು ಕಚೇರಿಗೆ ಕಾಲಿಡುತ್ತಾಳೆ. ಮೊದಲಿಗೆ ಹೆಣ್ಣು ತನ್ನ ಭೌತಿಕ ಮಿತಿಯನ್ನು ಮೀರಿ ಕೆಲಸ ಮಾಡುವ ಸವಾಲು ಇದ್ದೇ ಇದೆ. ಕಚೇರಿಯಲ್ಲಿ ಹುಡುಗ ತನ್ನ ಸಾಮರ್ಥ್ಯವನ್ನು ತೋರಿಸಲು ಹಾಕುವ ಶ್ರಮದ ಎರಡು ಪಟ್ಟು ಇವಳು ಹಾಕಬೇಕು. ಎಲ್ಲವೂ ಗೊತ್ತಿದೆ ಎಂದು ಭಾವಿಸುವವರು ಇವಳಿಗೆ ಏನೂ ಗೊತ್ತಿಲ್ಲ ಎಂದೇ ಭಾವಿಸುತ್ತಾರೆ. ಅವಳಿಗೆ ಅವಕಾಶಗಳನ್ನು ನಿರಾಕರಿಸುವುದಕ್ಕೆ ಇದೇ ಅಡಿಪಾಯ.

ಇನ್ನು ಹಗಲಿರುಳು ವ್ಯತ್ಯಾಸವಿಲ್ಲದ ದುಡಿಮೆ ಮಾಧ್ಯಮದಲ್ಲಿ ಅದರಲ್ಲೂ ಟಿವಿ ವಾಹಿನಿಗಳಲ್ಲಿ ಅನಿವಾರ್ಯ. ಪತ್ರಿಕೆ ಅಥವಾ ವಾಹಿನಿಯಲ್ಲಿ ರಾತ್ರಿ ಪಾಳಿಯ ಕೆಲಸದ ಬಗ್ಗೆ ಹೇಳುವುದೇ ಬೇಡ.(ಅನೇಕ ವರ್ಷಗಳ ಕಾಲ ಪತ್ರಿಕಾಲಯದಲ್ಲಿ ಕೆಲಸ ಮುಗಿಸಿ, ರಾತ್ರಿ ಹತ್ತೂವರೆ ಹನ್ನೊಂದಕ್ಕೆ, ಒಮ್ಮೊಮ್ಮೆ ನಡುರಾತ್ರಿ ಒಂದು ಗಂಟೆಗೆ, ಕಾರ್ ಚಲಾಯಿಸಿಕೊಂಡು ಮನೆಗೆ ಬರುತ್ತಿದ್ದ ನನಗಂತೂ ಇದು ಚೆನ್ನಾಗಿ ಅರ್ಥವಾಗುತ್ತದೆ!) ಮದುವೆ ಆಗದ ಹುಡುಗಿ ಒಳಗೆ ಹೊರಗೆ ಎದುರಿಸುವ ಕಷ್ಟಗಳು ಒಂದು ಥರ; ಮದುವೆ ಆದ ಹುಡುಗಿ ನಿಭಾಯಿಸಬೇಕಾದ ಕಷ್ಟಗಳು ಇನ್ನೊಂದು ಥರ. ಮುಟ್ಟು, ಬಸುರಿ, ಬಾಣಂತಿ, ಸಣ್ಣಮಗುವಿನ ಅಮ್ಮ- ಇವರ ಬವಣೆಗಳು ಬೇರೊಂದು ಥರ.

ವಿಚಿತ್ರ ಸತ್ಯವೆಂದರೆ ಹುಡುಗಿಯರಿಗೆ ಅವಕಾಶಗಳನ್ನು ನಿರಾಕರಿಸಲು ಈ ಕಾರಣಗಳನ್ನೂ ಅಪಾರವಾಗಿ ಬಳಸಲಾಗುತ್ತದೆ. ಇವೆಲ್ಲವೂ ಎಳೆಎಳೆಯಾಗಿ ಈ ಪುಸ್ತಕದಲ್ಲಿ ದಾಖಲಾಗಿವೆ. ಮನೆ ಮತ್ತು ಕಾರ್ಯಾಲಯದ ಈ ಮುಳ್ಳಿನ ಬೇಲಿಗಳನ್ನು ದಾಟಿ ಕೆಲಸ ಮಾಡುವಾಗ ಮಹಿಳೆಯರು ಸಮಾಜ, ಸರ್ಕಾರ, ಒಟ್ಟಾರೆ ರಾಜಕೀಯ, ಸಾಮಾಜಿಕ ವ್ಯವಸ್ಥೆಯೊಂದಿಗೆ ವ್ಯವಹರಿಸಲೇ ಬೇಕಲ್ಲ- ಅದರಿಂದ ಇನ್ನಷ್ಟು ಕಷ್ಟಗಳನ್ನು ಎದುರಿಸಲೇ ಬೇಕಲ್ಲ. ಸರ್ಕಾರಿ ಅಧಿಕಾರಿ, ರಾಜಕಾರಣಿ, ಮಂತ್ರಿ, ಶಾಸಕ, ಪೊಲೀಸ್ ಅಧಿಕಾರಿ, ಸಿನಿಮಾ ಸುಂದರ ಯಾರಾದರೂ ಆಗಿರಲಿ ಅವರೆಲ್ಲರಿಂದ ದೂರ ಕಾಯ್ದುಕೊಳ್ಳಬೇಕಾದ ಎಚ್ಚರ ಉಸಿರಾಟದಷ್ಟು ಸಹಜವಾಗಿರಬೇಕು. ಇಲ್ಲದಿದ್ದರೆ ಹುಡುಗಿ ಎಡವಿದ ಒಂದು ಉದಾಹರಣೆ ಕೊಟ್ಟು "ಮೀಡಿಯಾ ಹುಡುಗಿಯರೆಲ್ಲ ಹೀಗೇ, ಲಂಗುಲಗಾಮಿಲ್ಲ" ಎಂದು ಎಲ್ಲರಿಗೂ ಸಮಾನವಾಗಿ ಆಪಾದನೆಯ ಟಾರ್ಪಾಲಿನ್ ಹೊದಿಸುವ ನೀಚತನಕ್ಕೆ ಪಕ್ಕಾಗಬೇಕು.

ಜೊತೆಗೆ ಕಡಿಮೆ ವೇತನ, ಸರಿಯಾದ ದಿನಾಂಕಕ್ಕೆ ಬಾರದ ಸಂಬಳ, ಮನೆಯಲ್ಲಿ ಬೇರೆಯವರನ್ನು ಸಾಕಬೇಕಾದ ಹೊಣೆಗಾರಿಕೆ ಎಲ್ಲವೂ ಅವರ ಕಷ್ಟವನ್ನು ಹೆಚ್ಚಿಸುತ್ತದೆ. ಇವೆಲ್ಲ ಸಾಲದು ಎಂಬಂತೆ, ಎಂದಿನಂತೆ, ಜಾತಿ, ಧರ್ಮ, ವರ್ಗ ಮೊದಲಾದ ಸಂಗತಿಗಳು ಇವರ ಕೆಲಸದ ಗತಿಯನ್ನು ಮುಖ್ಯವಾಗಿ ನಿರ್ಧರಿಸುತ್ತವೆ. ಶರಣು ಹುಲ್ಲೂರು ಮಾಡಿರುವ ಮಾಹಿತಿ ಸಂಗ್ರಹದಲ್ಲಿ ಅನೇಕ ಮಹಿಳಾ ಉದ್ಯೋಗಿಗಳು ತಾವು ನುಂಗಲೇಬೇಕಾದ ಇಂಥ ಕಹಿ ಅನುಭವಗಳನ್ನು ಬಹಳ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಬಹುಶಃ ಇಷ್ಟೊಂದು ಪ್ರಮಾಣದ ಮುಕ್ತ ಮತ್ತು ನಿರ್ಭೀತ ದಾಖಲೀಕರಣ ಈ ವಿಚಾರದಲ್ಲಿ ಹಿಂದೆಂದೂ ಆಗಿರಲಿಕ್ಕಿಲ್ಲ. ಇಲ್ಲಿ ಕಥೆ ಹೇಳಿಕೊಂಡವರ ಹೆಸರು ಬದಲಾಯಿಸಲಾಗಿದೆ- ಅದು ಬಿಡಿ, ಹೆಸರು ಏನಿದ್ದರೂ ಕಥೆ ಮಾತ್ರ ಅದೇ ತಾನೆ!ಈ ಆಧುನಿಕ ಕಾಲದ ಯುವತಿಯರು ಬೇರೆಲ್ಲ ಕಡೆ ಧೈರ್ಯ ತೋರುವ ಹಾಗೆ ಮಾಧ್ಯಮ ಕಚೇರಿಗಳಲ್ಲೂ ಧೈರ್ಯ ಪ್ರದರ್ಶನ ಮಾಡಬೇಕು ಎಂದೆಲ್ಲ ಮಾಮೂಲು ಪುಂಗಿ ಊದುವುದು ಸುಲಭ. ಆದರೆ ಕೆಲಸದ ಅಭದ್ರತೆ ಎಂಬ ಕತ್ತಿ ಮತ್ತು ವಜಾ ಎಂಬ ಕೋವಿ ಎದುರಿಗೇ ಝಳಪಿಸುತ್ತಿರುವಾಗ ಹುಡುಗಿಯರು, ಹುಡುಗರು ಯಾರಿಗೂ ಜಗಳ ಕಾಯುವ ಧೈರ್ಯ ಬರುವುದಿಲ್ಲ.

ಅದೆಷ್ಟೋ ಶೋಷಣೆ, ದೌರ್ಜನ್ಯಗಳನ್ನು ಸಹಿಸಿಕೊಳ್ಳಲು ಈ ಭಯವೇ ಕಾರಣವಾಗಿರುತ್ತದೆ. ಒಟ್ಟಾರೆ ಶರಣು ಹುಲ್ಲೂರು ಎಲ್ಲ ವಿವರಗಳು ಮತ್ತು ಅವುಗಳ ವಿಶ್ಲೇಷಣೆಯನ್ನು ದೃಶ್ಯ ಮಾಧ್ಯಮದ ಒಂದು ʼರಿಯಾಲಿಟಿ ಶೋ’ ನಂತೆ ನಮ್ಮೆದುರು ಬಿಚ್ಚಿಟ್ಟು ಬೆಚ್ಚಿ ಬೀಳಿಸುತ್ತಾರೆ. ಆದರೆ ಇದರಲ್ಲಿ ಅವರಿಗೆ ಬಿಟ್ಟರೆ ಬೇರೆ ಯಾರಿಗೂ ಬಹುಮಾನ ಇಲ್ಲ.

ಕನ್ನಡ ಪತ್ರಿಕೋದ್ಯಮದಲ್ಲಿ ನಲವತ್ತನೇ ವರ್ಷಕ್ಕೆ ಕಾಲಿಟ್ಟಿರುವ ನನಗೆ, ಮಹಿಳೆಯರ ಮಾಧ್ಯಮ ವ್ಯಾಯೋಗ ಬಹಳವೇ ಪರಿಚಿತ. ಆದರೆ ಶರಣು ಹುಲ್ಲೂರು ಪಿಎಚ್.ಡಿ ಅಧ್ಯಯನಕ್ಕೆ ಆರಿಸಿಕೊಂಡ ಈ ವಿಷಯ, ಮಾಹಿತಿ ಸಂಗ್ರಹದಲ್ಲಿ ವಹಿಸಿದ ಆಸಕ್ತಿ ಮತ್ತು ಅದರ ವಿಶ್ಲೇಷಣೆಯಲ್ಲಿ ತೋರಿದ ಸಾಮಾಜಿಕ ಕಾಳಜಿ ಇವೆಲ್ಲವೂ ನನಗೆ ಪ್ರಶಂಸಾರ್ಹ ಅನ್ನಿಸಿದವು.

ಗಂಡು ಹೆಣ್ಣು ಸಮಾನತೆಯ ಸಂವೇದನೆಯನ್ನು ಮಾಧ್ಯಮ ಬೆಳೆಸಿಕೊಳ್ಳಬೇಕಾದ ಅಗತ್ಯವನ್ನು ಈ ಅಧ್ಯಯನ ಇನ್ನಿಲ್ಲದಂತೆ ಶ್ರವ್ಯವಾಗಿ, ದೃಶ್ಯವಾಗಿ ಹೇಳುತ್ತಿದೆ. ಹಿರಿಯ ಪತ್ರಕರ್ತೆ ಡಾ. ವಿಜಯಾ ಅವರು ಹೇಳುವಂತೆ ಮಾಧ್ಯಮದ ಪ್ರಖರ ಬೆಳಕಿನ ಹಿಂದಿರುವ ಗಾಢ ಕತ್ತಲೆಯನ್ನು ಸರಿಸಬೇಕಾದ ಜರೂರು ನಮ್ಮ ಮುಂದಿದೆ. ಈ ಪುಸ್ತಕವನ್ನು ನನ್ನ ‘ಕಾಯಕ ಪ್ರಕಾಶನ’ ದಿಂದ ಪ್ರಕಟಿಸಲು ಇದುವೇ ಮುಖ್ಯ ಕಾರಣ.

‍ಲೇಖಕರು Avadhi

November 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ವಾಸುದೇವ ಶರ್ಮಾ

    ವಾಸ್ತವ ನಿರೂಪಣೆ ಮತ್ತು ವಿಶ್ಲೇಷಣೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: