ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶರಣು ಶರಣು..

ಸುಜಾತ ಲಕ್ಷ್ಮೀಪುರ

ಈ ಮಣ್ಣ ಪದರಗಳ ಮೇಲೆ
ಎಷ್ಟೊಂದು ಹೆಜ್ಜೆಗಳು
ಬಿರಿದ ತೊಗಲಿನಿಂದ ಸುರಿದ
ಬಿಸಿ ನೆತ್ತರ ಹನಿಗಳು

ಕೆರೆಕಟ್ಟೆ ಊರು ಕೇರಿ
ನಗರ ರಾಜ್ಯ ರಾಜಧಾನಿ
ಸುಪ್ಪತ್ತಿಗೆಯ ಸಿರಿಭೋಗಕೆ
ಬೆವರು ರಕ್ತ ಹನಿಸಿ ಬೆಳೆಸಿದ ಕೈಗಳು

ಹಸಿವು ನೋವು ಉಂಡು
ನಗುನಗುತ್ತಲೇ ಗುಲಾಬಿ ತೋಟ ಬೆಳೆಸಿ
ಅಸ್ಪೃಶ್ಯತೆ ಅಸಮಾನತೆ
ಮುಳ್ಳುಗಳ ಮೇಲೆ ನಡೆದ ಕಾಲುಗಳು

ಮೈಯ ನರನರಗಳನು ಹುರಿಗೊಳಿಸಿ
ಹಗಲು ರಾತ್ರಿ ಎಡಬಿಡದೆ ಶ್ರಮಿಸಿ
ಆಧುನಿಕತೆ ಜಾಗತೀಕರಣದ ವ್ಯಸನಕೆ
ತೊಗಲು ಹಾಸಿ ಮಲಗಿದ ಕಷ್ಟಜೀವಿಗಳು

ನೆತ್ತರು ಹೀರಿ ಕೊಬ್ಬಿದ
ಗದ್ದುಗೆಯ ಅಟ್ಟಹಾಸ ಆರ್ಭಟಕೆ
ಮೆದುಳನ್ನೇ ಅಡವಿಟ್ಟು
ತಾವ್ಯಾರೆಂದೆ ಮೈಮರೆತ ಶ್ರಮಜೀವಿಗಳು.

ಉಳ್ಳವರ ಲೆಕ್ಕಾಚಾರದ ಕುಲುಮೆಯಲಿ
ಮಾನವೀಯತೆ ಸುಟ್ಟುಹೋಗಿ
ಹಸಿದವರ ಕರುಳಿನ ಸಂಕಟಕೆ
ನಲುಗಿಹೋಗುತ್ತಿವೆ
ಬಳಪಹಿಡಿದ ಕೈಗಳಲ್ಲಿನ ಹೂಬಿಟ್ಟ ಅಕ್ಷರಗಳು

ಕಾಣದಣುವಿನ ಆಕ್ರಮಣಕೆ
ಬೀದಿಬದಿಯ ಅಂಗಡಿಗಳು ಸತ್ತು
ಗುಡಿಸಲಿನಲಿ ಬರಿದಾದ ಮಡಿಕೆ ಕುಡಿಕೆ
ಜಂತಿಯಲ್ಲಿ ನೇಣು ಹಗ್ಗವೊಂದೆ
ಗಾಳಿಗೆ ತೂಗಿ ಕೂಗಿ ಕರೆಯುತಿದೆ ಸಾವಿಗೆ

ಶತಶತಮಾನದ ಹಸಿವು ನೋವಿಗೆ
ಅಂತ್ಯಕಾಣಿಸಲೆಂದೆ
ಸಾವಿನ ಬೆಳಕು ಇಣುಕುತ್ತಿದೆಯೇನೋ!?
ಬದುಕು ಕುಸಿದು ಅನಾಥ ಹೆಣಗಳ ಸವಾರಿ
ಮಸಣದಲ್ಲೂ ದಳ್ಳಾಳಿಗಳ
ರೇಟು ದುಬಾರಿ.

ಸಾವು ಕರುಣಿಸಿದ ಪುಣ್ಯಾತ್ಮರಿಗೆಲ್ಲಾ
ಕೋಟಿ ನಮನ.
ಶ್ರಮಜೀವಿಗಳ ರಟ್ಟೆ ಕಸುವು ಕಿತ್ತುಕೊಂಡು
ಒಸಕಿ ಹಾಕುವ ತಂತ್ರ ಕುತಂತ್ರಕೆ
ಶರಣು ಶರಣು.

‍ಲೇಖಕರು Admin

4 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading