ಜಿ ಎನ್ ನಾಗರಾಜ್ ಅಂಕಣ- ತುರ್ತು ಪರಿಸ್ಥಿತಿ ಕರಾಳ ದಿನಗಳು

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.


ತುರ್ತು ಪರಿಸ್ಥಿತಿ ಕರಾಳ ರಾಣಿಯ
ಕತೆಯನು ಹೇಳ್ತೀವಿ
ಬಡ ಸಾವಿರ ಸಂಕಟವನ್ನು
ಜೊತೆಯಲಿ ಹೇಳ್ತೀವಿ
ಭಾರತ ದೇಶವ ಜೈಲನು ಮಾಡಿ
ಜನಗಳ ಬಾಯಿಗೆ ಬೀಗವ ಹಾಕಿ
ಮನೆ ಮನೆಯಲ್ಲೂ ಕೊಲೆಗಳ ಮಾಡಿ
ಸಾವಿನ ಬೆಳೆಯನು ಬೆಳೆದೋಳಾ
ಸಿದ್ಧಲಿಂಗಯ್ಯ

ಅರಸುತನದ ನೂರಾರು ಕೈಗಳೋಡಿದವು ಮಿಂಚಿನಂತೆ
ಘೋರ ಶಾಸನದ ಜಾಲ ಮಸಗಿತೋ ಇಂದ್ರಜಾಲದಂತೆ
ನೆಲವೆ ಬಾಯಿ ಬಿಟ್ಟಂತೆ ರೆರೆದ ಸೆರೆಮನೆಯ ನರಕ ಲೋಕ
ನುಂಗಿತೊಂದೆ ತುತ್ತಾಗಿ ನಮ್ಮ ಕಣ್ಣಾಗಿ ನಿಂತ ಜನವ
ಗೋಪಾಲ ಕೃಷ್ಣ ಅಡಿಗ

1975ರ ಜೂನ್ 26, ಬೆಳ್ಳಗೆ ಬೆಳಗಾಗುತ್ತಿದ್ದಂತೆ ನಗರಗಳ ಜನ ದಿನನಿತ್ಯದ ಅಭ್ಯಾಸದಂತೆ ಪತ್ರಿಕೆಗಳತ್ತ ಕೈ ಚಾಚಿದರು.‌ ಎಲ್ಲರಿಗೂ ಗಾಬರಿಯಾಯಿತು. ಏನಿದು ನಮ್ಮ ನೆಚ್ಚಿನ ಪತ್ರಿಕೆಯ ಮೊದಲ ಪುಟವೆಲ್ಲ ಖಾಲಿ ಖಾಲಿ. ಬಿಳಿ‌ ಪತ್ರಿಕೆಯಲ್ಲಿ ಕಪ್ಪು‌ಚಿಕ್ಕಿಯಿಟ್ಟಂತೆ ಎಲ್ಲೋ ಅಲ್ಲೊಂದು ಕಡೆ ಇಲ್ಲೊಂದು ಕಡೆ ಒಂದಷ್ಟು ಅಕ್ಷರಗಳು.

ಅಂತರಿಕ ತುರ್ತು ಪರಿಸ್ಥಿತಿ ಜಾರಿ ಎಂಬುದೊಂದೇ‌ ಸುದ್ದಿ ಅಲ್ಪ ಸ್ವಲ್ಪ ಅರ್ಥವಾಗಿದ್ದು. ಅಕ್ಕ ಪಕ್ಕದ‌ ಮನೆಗಳಿಗೆ ಓಡಿದೆವು. ಅವರ ಪೇಪರಿನಲ್ಲೇನಾದರೂ ಏನಿದು ಅಂತ‌ ಸುದ್ದಿ ಇದೆಯೇ? ಅವುಗಳಲ್ಲಿಯೂ ಇದೇ‌ ಕತೆ.‌ ಮತ್ತೆ ಏನಿದು ಎಂದು ತಿಳಿದುಕೊಳ್ಳಲು ‌ಮುಖ್ಯ ರಸ್ತೆಗೆ ಬಂದರೆ ಅಲ್ಲಲ್ಲಿ ಸಣ್ಣ ಗುಂಪುಗಳಲ್ಲಿ ಜನರು ಪಿಸ ಪಿಸ‌ ಮಾತಾಡುತ್ತಿದ್ದರು.‌ ಸುದ್ದಿಯೇ ಇಲ್ಲದಾಗ ಯಾರು ಏನು ಹೇಳಿದರೂ ಸುದ್ದಿಯೇ. ಅಂತೆ ಕಂತೆಗಳ ಸುರಿಮಳೆ. ಗಾಳಿ‌ಸುದ್ದಿಗೆ ನಾಗಾಲೋಟ.

ಇದು ದೇಶದ ಜನರಿಗೆ ತುರ್ತುಪರಿಸ್ಥಿತಿ ಎದುರಾದ ರೀತಿ. ಅಲ್ಲೊಂಚೂರು ಇಲ್ಲೊಂಚೂರು ಗೊತ್ತಾಗಿದ್ದು ಜೆಪಿ, ಮೊರಾರ್ಜಿ ದೇಸಾಯಿ ಇಂತಹ ಮುಖಂಡರನ್ನೆಲ್ಲ ಸಾವಿರ ಸಾವಿರ ಸಂಖ್ಯೆಯಲ್ಲಿ ರಾತ್ರೋ ರಾತ್ರಿ ಬಂಧಿಸಿದ್ದಾರಂತೆ. ಮೇಲೆ ನೀಡಿದ ಎರಡು ಕವನಗಳು ಆ ದಿನಗಳ ಸ್ಥಿತಿಯನ್ನು ಚೆನ್ನಾಗಿ ಬಿಂಬಿಸುತ್ತವೆ. ಅಡಿಗರ ಕವನದ ಸಾಲುಗಳು ಬ್ರಿಟಿಷರ ದಬ್ಬಾಳಿಕೆಯ ಬಗ್ಗೆ ಆದರೂ ಇಂದಿರಾ ಗಾಂಧಿಯ ಆಳ್ವಿಕೆಯನ್ನೂ ಬಹಳ ಚೆನ್ನಾಗಿ ವಿವರಿಸುತ್ತವೆ.

ಜೂನ್ 26 ರ ಬೆಳಗ್ಗೆ ರಾಷ್ಟ್ರಪತಿಗಳ ಸಹಿ ಹೊತ್ತ ನಾಲ್ಕೇ ಸಾಲಿನ ಆಜ್ಞೆ ಹೊರಟರೂ ಹಿಂದಿನ ರಾತ್ರಿ ಹತ್ತು ಗಂಟೆಯಿಂದಲೇ ಬಂಧನದ ಆಜ್ಞೆಗಳು ದೇಶಾದ್ಯಂತದ ಪೋಲೀಸ್ ಅಧಿಕಾರಿಗಳಿಗೆ ಮುಟ್ಟಿದವು.  ದೇಶದೆಲ್ಲ ವಿರೋಧ ಪಕ್ಷಗಳ ನಾಯಕರನ್ನು ಮಾತ್ರವಲ್ಲದೆ ಕಾಂಗ್ರೆಸ್‌ನ ಕೆಲ ಬಂಡಾಯಗಾರ ನಾಯಕರನ್ನೂ ಎಲ್ಲಿದ್ದರೆ ಅಲ್ಲಿಂದಲೇ ಬಂಧಿಸಲಾಯ್ತು. ಅದರಲ್ಲಿ 39 ಲೋಕಸಭಾ ಸದಸ್ಯರಲ್ಲದೆ ನೂರಾರು ಜನ ವಿವಿಧ ರಾಜ್ಯಗಳ ಶಾಸಕರೂ ಸೇರಿದ್ದರು. ಅಂದು ಬೆಂಗಳೂರಿನಲ್ಲಿದ್ದ ಅದ್ವಾನಿಯವರು, ಅವರ ಜೊತೆಗೆ ರಾಮಕೃಷ್ಣ ಹೆಗ್ಗಡೆ, ದೇವೇಗೌಡರು ಮೊದಲಾದ ಜನತಾ ಪಕ್ಷದ ನಾಯಕರು, ಸಿಪಿಎಂನ ವಿಜೆಕೆ ನಾಯರ್ ಮೊದಲಾದವರು ಇಲ್ಲಿನ‌ ಕೇಂದ್ರ ಕಾರಾಗೃಹದಲ್ಲಿ ಜೈಲು ವಾಸ ಅನುಭವಿಸಿದರು.

ಈ ಅಂತರಿಕ ತುರ್ತುಪರಿಸ್ಥಿತಿ ಆಜ್ಞೆಗೆ ಮೊದಲೇ, 1971 ರಿಂದ ಮತ್ತೊಂದು ತುರ್ತುಪರಿಸ್ಥಿತಿ ಜಾರಿಯಲ್ಲಿತ್ತು. ಬಾಂಗ್ಲಾದೇಶ ವಿಮೋಚನೆಗೆ ಸಂಬಂಧಿಸಿದ ಯುದ್ಧದ ಸಮಯದಲ್ಲಿ  ಅಮಲುಗೊಳಿಸಿದ ಬಾಹ್ಯ ತುರ್ತು ಪರಿಸ್ಥಿತಿ ಆಜ್ಞೆ. ಅದರಡಿಯಲ್ಲಿ DIR ಭಾರತ ಸಂರಕ್ಷಣಾ ನಿಯಮಗಳನ್ನು ಉಪಯೋಗಿಸಲಾಗುತ್ತಿತ್ತು. ಹೊಸದಾಗಿ  MISA ( ಅಂತರಿಕ ಭದ್ರತಾ ಕಾಯ್ದೆ) ಎಂಬ ಕುಖ್ಯಾತ  ಕಾನೂನನ್ನು ಹೊಸದಾಗಿ 1971 ರಲ್ಲಿ ತರಲಾಗಿತ್ತು. ಯುದ್ಧ ಮುಗಿದು ಮೂರು ವರ್ಷಗಳೇ ಆಗಿದ್ದರೂ ಈ ತುರ್ತು ಪರಿಸ್ಥಿತಿ ತೆಗೆದು ಹಾಕಿರಲಿಲ್ಲ. ಆದ್ದರಿಂದ ಅಂತರಿಕ ತುರ್ತು ಪರಿಸ್ಥಿತಿ ಹೇರಿದ ಆಜ್ಞೆಗಳು ಹೊರಡುವ ಮೊದಲೇ, ಹಿಂದಿನ ರಾತ್ರಿಯಿಂದಲೇ ಹಿಂದಿನ‌ ತುರ್ತುಪರಿಸ್ಥಿತಿಯ ಈ ಕಾನೂನುಗಳನ್ನು ದುರ್ಬಳಕೆ ಮಾಡಿಕೊಂಡು ಬಂಧನ ಸತ್ರ ಮತ್ತು‌ ಪತ್ರಿಕಾ ಸೆನ್ಸಾರ್ ಮಾಡಲಾಯ್ತು.

ಅಂದಿನಿಂದ ಆರಂಭವಾಯ್ತು ಕರಾಳ ಕಾನೂನುಗಳ ಸುಗ್ಗಿ. ದಿನಕ್ಕೊಂದು ಸುತ್ತೋಲೆ, ಆಜ್ಞೆ, ಕಾನೂನುಗಳನ್ನು ತಿದ್ದುಪಡಿ ಮಾಡಿದ ಸುಗ್ರೀವಾಜ್ಞೆಗಳು ಎಲ್ಲದರ ತಲೆಯ ಮೇಲೆ ನಾಲ್ಕು ಬಾರಿ ಸಂವಿಧಾನ ತಿದ್ದುಪಡಿಗಳು ಕೂಡಾ. ಕಾಸಿಗೊಂದು ಕೊಸರಿಗೆರಡು ಎಂಬಂತೆ. ಪತ್ರಿಕೆಗಳ ಸೆನ್ಸಾರ್ ಬಗ್ಗೆ 25 ರಿಂದಲೇ ಆರಂಭವಾಗಿ ಆಗಿಂದಾಗ್ಗೆ ಮಾರ್ಗದರ್ಶಿ ಸೂತ್ರಗಳು. 

ಜೂನ್ 27 ರಂದುಮೊತ್ತ ಮೊದಲ ಕರಾಳ ಆಜ್ಞೆ,  ಪ್ರಜಾಪ್ರಭುತ್ವದ ನಾಶದ ಮೊದಲ ಮತ್ತು ಘೋರ ಹೆಜ್ಜೆ ಸಂವಿಧಾನದಲ್ಲಿ ಮೂಲ ಭೂತ ಹಕ್ಕುಗಳನ್ನು ಖಾತರಿಪಡಿಸುವ 14 ( ಕಾನೂನಿನ‌ ಮುಂದೆ ಎಲ್ಲರೂ ಸಮಾನರು ),21 ಜೀವದ ಸಂರಕ್ಷಣೆ ಮತ್ತು ಸ್ವಾತಂತ್ರ್ಯದ ಹಕ್ಕು), 22 ( ಬೇಕಾಬಿಟ್ಟಿ ಬಂಧನ, ಸ್ಥಾನ ಬದ್ಧತೆಯ ವಿರುದ್ಧ ರಕ್ಷಣೆ ) ನೇ ಪರಿಚ್ಛೇದಗಳನನ್ನು ಅಮಾನತ್ತಿನಲ್ಲಿಟ್ಟದ್ದು.‌ ಇದನ್ನು ಉಪಯೋಗಿಸಿ ಮೀಸಾ ಕಾಯಿದೆಯನ್ನು ಮತ್ತಷ್ಟು ಕ್ರೂರವಾಗಿಸುವ, ಬಂಧಿಸಲಾಗುತ್ತಿರುವ ವ್ಯಕ್ತಿಗೆ ಬಂಧನದ ಕಾರಣ ತಿಳಿಸಬೇಕಾಗಿಲ್ಲ ಎಂಬಂತಹ ತಿದ್ದುಪಡಿಗಳನ್ನು ತರಲಾಯಿತು.

ತುರ್ತುಪರಿಸ್ಥಿತಿ ಘೋಷಣೆಯ ಮೂರು ವಾರಗಳ ನಂತರ ಜುಲೈ 21 ರಂದು ಸಂಸತ್ತನ್ನು ಸೇರಿಸಲಾಯಿತು.‌ ಆಗಲೂ ಕನಿಷ್ಟ ಬಂಧಿತ ಲೋಕಸಭಾ ಸದಸ್ಯರನ್ನು ಬಿಡುಗಡೆಗೊಳಿಸಿ ಸಂಸತ್ತಿನಲ್ಲಿ ಭಾಗವಹಿಸಲು ಅವಕಾಶ ಕೊಡಲಿಲ್ಲ.‌ ಇದರ ಮುಂದೆ ಮಂಡಿಸಲಾದ ಮೊದಲ ಪ್ರಸ್ತಾವವೆಂದರೆ ಪ್ರಶ್ನೋತ್ತರ ಚರ್ಚೆಯನ್ನು ಕಿತ್ತು ಹಾಕುವ ತಿದ್ದುಪಡಿ. ಸಂಸತ್ತು ನಡವಳಿಕೆಗಳನ್ನು ಪತ್ರಿಕೆಗಳಲ್ಲಿ ಸುದ್ದಿ ಮಾಡಬಾರದೆಂಬ ಆಜ್ಞೆ, ‌ಅಂತರಿಕ ತುರ್ತುಪರಿಸ್ಥಿತಿ ಜಾರಿಯ ಆಜ್ಞೆಗೆ ಅನುಮೋದನೆ. ‌ಸಂಸತ್ತಿನಲ್ಲಿ ಸಿಪಿಐ  ಬಿಟ್ಟು ಆದರೆ ಸಿಪಿಎಂ ಸೇರಿದಂತೆ  ಉಳಿದ ವಿರೋಧ ಪಕ್ಷಗಳೆಲ್ಲ ಈ ನಿರ್ಣಯವನ್ನು ಮತ್ತು ಪ್ರಸ್ತಾಪಗಳನ್ನು ಖಂಡತುಂಡವಾಗಿ ವಿರೋಧಿಸಿದವು.

ಎರಡು ದಿನಗಳ ಕಾಲ ನಡೆದ ಚರ್ಚೆ ಅರಣ್ಯ ರೋದನವಾಯ್ತು. ಪತ್ರಿಕೆಗಳಲ್ಲಿ ವರದಿಯಾಗುವುದನ್ನು ನಿಷೇಧಿಸಲಾಯ್ತು. ಸಂಸತ್ತಿನಲ್ಲಿ ಇಂದಿರಾ ಕಾಂಗ್ರೆಸ್‌ಗಿದ್ದ ಮೂರನೇ ಎರಡು ಬಹುಮತವನ್ನು ಬಳಸಿ ಈ ಕರಾಳ ನಿರ್ಣಯ ಅಂಗಿಕಾರವಾದ ನಂತರ ಸಿಪಿಐ ಹೊರತುಪಡಿಸಿದ ಎಲ್ಲ ವಿರೋಧಪಕ್ಷಗಳೂ ಒಕ್ಕೊರಲ ತೀರ್ಮಾನ ತೆಗೆದುಕೊಂಡು ಜುಲೈ 23 ರಿಂದ  ಸಂಸತ್ತನ್ನು ಬಹಿಷ್ಕರಿಸಿದವು. ಪ್ರಜಾಪ್ರಭುತ್ವದ ಮೂರು ಅಂಗಗಳಲ್ಲಿ ಮುಖ್ಯ ಅಂಗ ಹೆಸರಿಗೆ ಮಾತ್ರ ಎಂಬಂತಾಯ್ತು. ಮಂತ್ರಿಮಂಡಲ‌ ಕೂಡಾ ಹೇಳಿದ ಕಡೆ ಮುದ್ರೆಯೊತ್ತುವ ಸ್ಥಿತಿ ತಲುಪಿತು.

ನಂತರ ಆರಂಭವಾಯಿತು ಮೇಲೆ ಹೇಳಿದ ಕರಾಳ ಕಾನೂನುಗಳ, ಸಂವಿಧಾನ ತಿದ್ದುಪಡಿಗಳ ಸುಗ್ಗಿ. ಏಕಪಕ್ಷೀಯ ಸಂಸತ್ತಿನಲ್ಲಿ ಏಕಪಕ್ಷ ಸರ್ವಾಧಿಕಾರ ಸ್ಥಾಪನೆಯ, ಪ್ರಜಾಪ್ರಭುತ್ವ ನಾಶದ ಕಾನೂನುಗಳು. ಚುನಾವಣಾ ಆಯೋಗದ ಕಾನೂನು ತಿದ್ದುಪಡಿ, ಚುನಾವಣೆಗಳ ಬಗ್ಗೆ ಕೋರ್ಟ್ ವ್ಯಾಪ್ತಿಯ ತಿದ್ದುಪಡಿ, ಕಾನೂನುಗಳಿಂದ ಪ್ರಧಾನ ಮಂತ್ರಿಗೆ ತನ್ನ ವಿರುದ್ಧ ಕಾನೂನು ಪ್ರಕ್ರಿಯೆಗಳಿಂದ ರಕ್ಷಣೆಯ ತಿದ್ದುಪಡಿ ಹೀಗೇ ಇಂದಿರಾರವರ ಸಂಸತ್ ಸದಸ್ಯತ್ವ ರದ್ದತಿಯ ವಿರುದ್ಧ ರಕ್ಷಣೆಗೆ ಪೂರ್ವಾನ್ವಯವಾಗುವಂತೆ ತಿದ್ದುಪಡಿ.

ಪತ್ರಿಕೆಗಳ ಸ್ವಾತಂತ್ರ್ಯ ಹರಣಕ್ಕೆ ಹಿಂದಿನ ತುರ್ತುಪರಿಸ್ಥಿತಿಯ ಕಾನೂನುಗಳ ಅಡಿಯಲ್ಲಿ ತಂದ ಸೆನ್ಸಾರ್‌ಶಿಪ್ ಸಾಲದೆಂದು ಪತ್ರಿಕಾ ಆಯೋಗವನ್ನು ರದ್ದು ಪಡಿಸಲಾಯ್ತು. ಅದೂ ಸಾಲದೆಂಬಂತೆ ಅಭಿವ್ಯಕ್ತಿ ಸ್ವಾತಂತ್ರ್ಯ, ಸಭೆ ನಡೆಸುವ, ಸಂಘಗಳನ್ನು ರಚಿಸಿಕೊಳ್ಳುವ ಸ್ವಾತಂತ್ರ್ಯವನ್ನು ಖಾತರಿಗೊಳಿಸುವ ಸಂವಿಧಾನದ 19 ನೇ ಪರಿಚ್ಛೇದವನ್ನು ಕೂಡಾ ಅಮಾನತ್ತಿನಲ್ಲಿಡಲಾಯ್ತು. ಹಲವು ಪತ್ರಕರ್ತರು, ಸಂಪಾದಕರು, ಮಾಲೀಕರುಗಳನ್ನು ಬಂಧನದಲ್ಲಿಡಲಾಯ್ತು.

ಸುಪ್ರೀಂ ಕೋರ್ಟ್ ಇಂದಿರಾರವರ ಆಯ್ಕೆ ರದ್ದತಿಯ ನ್ಯಾಯಾಲಯ ತೀರ್ಪೂ ಕೂಡಾ ಸೇರಿದಂತೆ ಹಲವು ತೀರ್ಪುಗಳನ್ನು ಇಂದಿರಾ ಗಾಂಧಿಯವರ ಮರ್ಜಿಯಂತೆ ನೀಡಿ ಈ ಮೇಲಿನ ಎಲ್ಲ ಕಾನೂನುಗಳ ಅಕ್ರಮವನ್ನು ಎತ್ತಿ ಹಿಡಿದರು. ಹೈಕೋರ್ಟ್‌ಗಳ ಕೆಲವು ನ್ಯಾಯಾಧೀಶರು ಅಡಿಯಾಳ್ತನವನ್ನು ಒಪ್ಪದೆ ಕಾನೂನುಗಳ್ನಯ ತೀರ್ಪು ಕೊಡುವ ದಿಟ್ಟತನ ತೋರಿಸಿದ ಕಾರಣಕ್ಕೆ ಮಹಾ ನಗರಗಳಿಂದ ದೂರ ದೂರದ ಪ್ರದೇಶಗಳ ಕೋರ್ಟ್‌ಗಳಿಗೆ ಒಗೆಯಲಾಯ್ತು. ಮನಬಂದಂತೆ ನ್ಯಾಯಾಧೀಶರ ನೇಮಕ ಮಾಡಿಕೊಳ್ಳಲಾಯ್ತು.

ಪ್ರಗತಿಗೆ ಕೋರ್ಟ್‌ಗಳು ದೊಡ್ಡ ಅಡ್ಡಿಯೆಂಬ ಆರೋಪಗಳನ್ನು ಹಲವು ಬಾರಿ ಮಾಡಲಾಯ್ತು. ನ್ಯಾಯಾಂಗದ ಅಧೀನತೆಯನ್ನು ಹೇರಲಾಯ್ತು. 1971 ರ ಬಾಹ್ಯ ತುರ್ತುಪರಿಸ್ಥಿತಿಯ ಹೇರಿಕೆಯ ಸಮಯದಿಂದಲೇ ಕೈಗಾರಿಕೆಗಳ ಕಾರ್ಮಿಕರು ಕಮಕ್ ಕಿಮಕ್ಜೆನ್ನದೆ ದುಡಿಯುವಂತಹ ವಾತಾವರಣ ಸೃಷ್ಟಿಸಲಾಯ್ತು. ಸಭೆ ಸೇರುವ ಹಕ್ಕು, ಸಂಘ ರಚನೆಯ ಹಕ್ಕಿನ ಅಮಾನತ್ತಿನಿಂದ ಕಾರ್ಮಿಕರ ಪ್ರಜಾಪ್ರಭುತ್ವ ಹಕ್ಕುಗಳು ನಾಶವಾದವು. ‌

ಮುಷ್ಕರಗಳನ್ನು ನಿಷೇಧಗೊಳಿಸಿರುವಾಗಲೇ ಮಾಲೀಕರು ಸ್ವೇಚ್ಛೆಯಾಗಿ ಕಾರ್ಮಿಕರನ್ನು‌ ಕಿತ್ತೆಸೆಯುವ ಲೇ ಆಫ್, ರಿಟ್ರೆಂಚ‌ರ್ ಮೆಂಟ್‌ಗಳಿಗೆ, ಕಾರ್ಖಾನೆಗಳನ್ನು ಮುಚ್ಚುವುದಕ್ಕೆ ಅವಕಾಶ ಮಾಡಿಕೊಡಲಾಯ್ತು. ಬೋನಸ್ ಕಾಯಿದೆ ತಿದ್ದುಪಡಿಯ ಮೂಲಕ ಬೋನಸ್ ವಂಚನೆ, ವೇತನ ಕುಗ್ಗಿಸುವುದು, ಕೆಲಸದ ಅವಧಿ ಹೆಚ್ಚಿಸುವುದು, ವಿಪರೀತ ದುಡಿಮೆಯ ಒತ್ತಡ ಹೇರುವುದು ಇತ್ಯಾದಿಗಳನ್ನು ಮಾಡಲಾಯ್ತು. ಕಾಂಗ್ರೆಸ್‌ನ ಇಂಟಕ್, ಸಿಪಿಐನ ಐಟಕ್ ಹೊರತು ಪಡಿಸಿ ಸಿಪಿಎಂನ ಸಿಐಟಿಯು ಮೊದಲಾದ ಕಾರ್ಮಿಕ ಸಂಘಗಳ ಸಾವಿರಾರು ನಾಯಕರನ್ನು‌ ಬಂಧಿಸಲಾಯ್ತು.

ಕಾರ್ಮಿಕ ಸಂಘಗಳ ಕಛೇರಿಗಳ ಮೇಲೆ ಸಂಜಯ್ ಗಾಂಧಿ ಬ್ರಿಗೇಡ್‌ಗಳು ಧಾಳಿ ಮಾಡಿ ನೂರಾರು ಕಾರ್ಮಿಕ ಸಂಘದ ಕಛೇರಿಗಳ‌ ಬಾಗಿಲು ಹಾಕಿಸಿದವು. ಕಾರ್ಮಿಕರಿಗೆ ರಕ್ಷಣೆಯಿಲ್ಲದಂತಾಯ್ತು. ತುರ್ತುಪರಿಸ್ಥಿತಿ ಹೇರುವ ಮೊದಲಿನಿಂದಲೇ 1968 ರಲ್ಲಿ ತಂದ ಎಸ್ಮಾ (ಅವಶ್ಯಕ ಸೇವೆಗಳ ನಿರ್ವಹಣೆ ಕಾಯಿದೆ) ‌ಯನ್ನು ಯಥೇಚ್ಛವಾಗಿ ಬಳಕೆ ಮಾಡಿ ಮುಷ್ಕರಗಳ ನಿಷೇಧ, ನೂರಾರು ಕಾರ್ಮಿಕರ ಅಮಾನತುಗಳನ್ನು‌ ಮಾಡಲಾಗುತ್ತಿತ್ತು. ರೈಲ್ವೆ ಕಾರ್ಮಿಕರ ಮೂರು ವಾರಗಳ ಇತಿಹಾಸ ಪ್ರಸಿದ್ಧ ಮುಷ್ಕರವನ್ನು ದಮನ ಮಾಡಲು ಕಾರ್ಮಿಕರ ಒಗ್ಗಟ್ಟನ್ನು ಒಡೆಯುವ ಕುತಂತ್ರಗಳು, ಬಂಧನಗಳು, ಸಾವಿರಾರು ಕಾರ್ಮಿಕರನ್ನು ಕಿತ್ತೊಗೆಯುವ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಇನ್ನು ತುರ್ತುಪರಿಸ್ಥಿತಿ ಹೇರಿದ ಮೇಲೆ ಕೇಳಬೇಕೆ ? ಮುಷ್ಕರಗಳು ದೇಶದ ಅಭಿವೃದ್ಧಿಗೆ ಮಾರಕ, ಮುಷ್ಕರದಲ್ಲಿ‌ ಭಾಗವಹಿಸುವವರು ದೇಶ ದ್ರೋಹಿಗಳು ಎಂಬಂತಹ ಮಾತುಗಳು ಇಂದಿರಾ ಸೇರಿದಂತೆ ಹಲವು ಮಂತ್ರಿಗಳು, ಕಾಂಗ್ರೆಸ್ ನಾಯಕರುಗಳ ಮಾತುಗಳು. ಕೊನೆಗೆ ಸಂಜಯ್‌ಗಾಂಧಿಯ ಒಂದು ಮುಖ್ಯ ಮಂತ್ರವಾಯಿತು. 

ಈ ನೀತಿಗಳು ಮತ್ತು ಮಾತುಗಳು ದೇಶದ ಕಾರ್ಪೊರೇಟ್ ವಲಯ ಸಂತೋಷದಿಂದ ತೇಲಾಡುವಂತೆ ಮಾಡಿತು. ದೇಶದ ಉದ್ಯಮಿಗಳ ಸಂಘಗಳಾದ ಫಿಕ್ಕಿ ಮೊದಲಾದವು ತುಂಬು ಹೃದಯದ ಬೆಂಬಲ ನೀಡಿದವು. ಅಷ್ಟೇ ಅಲ್ಲ ಬಿರ್ಲಾನಂತಹ ಬೃಹತ್ ಉದ್ಯಮಿ ಬೆಂಬಲಿಸಿ ಬೀದಿ ಮೆರವಣಿಗೆ ಕೂಡಾ ಮಾಡಿಬಿಟ್ಟ. ಅಹಾ! ಎಂತಹ ದೃಶ್ಯ !!.

ಭಿಕ್ಷುಕರನ್ನು ಸಾವಿರಗಟ್ಟಲೆ ಬಂಧಿಸುವುದು, ದೂರ ಬಿಟ್ಟು ಬರುವುದು, ಹೊಡೆತ ಬಡಿತ ಇತ್ಯಾದಿಗಳು, ನೂರಾರು ಕಡೆಗಳಲ್ಲಿ  ಸ್ಲಂ ನಿರ್ಮೂಲನ, ಗುಡಿಸಲುಗಳನ್ನು ಕೆಲವೇ ಗಂಟೆಗಳ ಅವಕಾಶ ನೀಡಿ ನಾಶ ಮುಂತಾದವು ಕೂಡಾ ಸಂಜಯ್ ಗಾಂಧಿ ಬ್ರಿಗೇಡ್‌ಗಳೆಂಬ ಗೂಂಡಾ ಪಡೆಗಳು ನಡೆಸಿದವು. ಸ್ವತಃ ಸಂಜಯ್ ಗಾಂಧಿಯೇ ನಿಂತು ದೆಹಲಿಯ ತುರ್ಕಮನ್‌ ಗೇಟ್ ಬಳಿಯ 10,000 ಜನರಿಗೆ ಕೇವಲ ಒಂದು‌ ಗಂಟೆ ನೀಡಿ ಓಡಿಸಲಾಯ್ತು. ಜೆಸಿಬಿಗಳು ಅವರ ಗುಡಿಸಲು, ಬೀದಿ ಬದಿ ಅಂಗಡಿಗಳನ್ನು ಕೆಲವೇ ಕ್ಷಣಗಳಲ್ಲಿ ನಾಶ ಪಡಿಸಿದವು. ಸಂತಾನ‌ ಶಕ್ತಿ ಹರಣ ಈ ಬ್ರಿಗೇಡಿನ ಮತ್ತೊಂದು ಮಹತ್ವದ ಕಾರ್ಯಕ್ರಮ. ಕೋಟ್ಯಾಂತರ ಬಡಜನಗಳನ್ನು ಹಿಡಿದು ತಂದು ಬಲವಂತದ ಸಂತಾನ‌ ಶಸ್ತ್ರಚಿಕಿತ್ಸೆ ಮಾಡಿ ಕೈ ಬಿಡಲಾಯಿತು. ಈಗಾಗಲೇ ಶಸ್ತ್ರಚಿಕಿತ್ಸೆ ಆಗಿದ್ದವರು ಲಬೋ ಲಬೋ ಹೊಯ್ಕೊಂಡರೂ ಬಿಡಲಿಲ್ಲ.

ಸಂಜಯ್ ಗಾಂಧಿಯವರ ಅನುಯಾಯಿಗಳ ಪಡೆ, ಅವರ ಹೊಗಳು ಭಟ್ಟರಾಗಿ ಬಿಟ್ಟ ಹಿರಿಯ ಕಾಂಗ್ರೆಸ್ ನಾಯಕರು ಅಂದು ಮೆರೆದಾಡಿದರು. ಒಂದು ಕಡೆ ಗರೀಬಿ ಹಠಾವೋ ಹೆಸರಿನ ಇಪ್ಪತ್ತು ಅಂಶಗಳು ಮತ್ತೊಂದು ಕಡೆ ಈ ಧ್ವಂಸಗಳು, ಕಾರ್ಮಿಕರನ್ನು ಕಿತ್ತೊಗೆಯುವುದು, ಹತ್ತಿಕ್ಕುವುದು ಒಟ್ಟೊಟ್ಟಿಗೆ ನಡೆಯಿತು.

ವಿಶ್ವ ವಿದ್ಯಾಲಯಗಳು, ವಿದ್ಯಾರ್ಥಿಗಳ ಮೇಲೆ ಧಾಳಿ
ಅಕಾಡೆಮಿಕ್ ಸ್ವಾತಂತ್ರ್ಯವೆಂದರೆ ಸರ್ವಾಧಿಕಾರಿಗಳಿಗೆ ಪರಮ‌ಭಯ. ವಿವಿಗಳ ಪ್ತಾಧ್ಯಾಪಕರು ಏನು‌ ಪಾಠ ಹೇಳುವರು, ಏನು ಬರೆಯುವರು ಎಂಬುದರ ಮೇಲೆ ಕಣ್ಣಿಡಲಾಯಿತು. ಅವರನ್ನು ಮತ್ತು ವಿದ್ಯಾರ್ಥಿಗಳನ್ನು ಪಾಠ ಮಾಡುತ್ತಿದ್ದ ಕೊಠಡಿಗಳಿಂದಲೇ ದರದರನೆ ಎಳೆದೊಯ್ಯಲಾಯಿತು.‌ ನಾಳೆ ಭಾರತ ಇತಿಹಾಸದ ಕಾಂಗ್ರೆಸ್ ಎಂಬ ವಾರ್ಷಿಕ ಅಧಿವೇಶನದಲ್ಲಿ ಪ್ರಬಂಧ‌ ಮಂಡಿಸಬೇಕಾಗಿದ್ದ ಪ್ರಾಧ್ಯಾಪಕರನ್ನು ಹಿಂದಿನ ದಿನ ಸೆರೆ‌ ಹಿಡಿಯಲಾಯಿತು.

ದೆಹಲಿ ವಿವಿಯ ಉಪನ್ಯಾಸಕ ಸಂಘದ ನೂರಕ್ಕೂ ಹೆಚ್ಚಿನ ಉಪನ್ಯಾಸಕ, ಪ್ರಾಧ್ಯಾಪಕರನ್ನು ಜೈಲಿಗೆ ಹಾಕಲಾಯಿತು. ಉಪನ್ಯಾಸಕರ ಸಂಘಗಳು, ವಿದ್ಯಾರ್ಥಿ ಸಂಘಗಳನ್ನು ನಿಷೇಧಿಸಲಾಯಿತು. ಪ್ರಧಾನಿಯೇ ಇಲ್ಲಿ ಪ್ರಾಧ್ಯಾಪಕರೇ ತೊಂದರೆ ಉಂಟು ಮಾಡುವವರು ಎಂದರೆ, ಕಾಂಗ್ರೆಸ್ ಅಧ್ಯಕ್ಷ  ವಿವಿಗಳಲ್ಲಿ ಅಡ್ಡಿ ಉಂಟುಮಾಡುವವರನ್ನು ನಿಯಂತ್ರಿಸುತ್ತೇವೆ, ಇಲ್ಲವಾಗಿಸುತ್ತೇವೆ ಎಂಬ ಎಚ್ಚರಿಕೆ ನೀಡಲಾಯಿತು.

ಬ್ರಿಟಿಷರ ಕಾಲದಿಂದ ವಿವಿಗಳ ಮುಖ್ಯಸ್ಥರ ನಿರ್ದಿಷ್ಟ ಅನುಮತಿಯಿಲ್ಲದೆ ಒಳಗೆ ಪ್ರವೇಶ ಮಾಡುವಂತಿಲ್ಲ ಎಂಬ ತತ್ವವನ್ನು ಗಾಳಿಗೆ ತೂರಿ ವಿವಿಗಳಲ್ಲಿ ಕಾನೂನು ಪಾಲನೆ ಮಾಡಲು ಪೋಲೀಸರಿಗೆ ಪ್ರವೇಶ ಮಾಡುವುದಕ್ಕೆ ಆಡಳಿತ ಅಡ್ಡಿ‌ ಮಾಡಬಾರದು. ಡಾಕ್ಟರ್‌‌ಗಳು ಹೇಗೆ ವಿವಿಗಳಲ್ಲಿ ಪ್ರವೇಶ ಮಾಡುವುದು ಅವಶ್ಯಕವೋ ಹಾಗೆಯೇ ಪೋಲೀಸರ ಪ್ರವೇಶಕ್ಕೂ ಅವಕಾಶ ಇರಬೇಕು ಎಂದು ಪ್ರತಿಪಾದಿಸಲಾಯಿತು. ಜೆಎನ್‌ಯು ವಿವಿ ಇಂದು ಸರ್ವಾಧಿಕಾರಿಗಳ ಕೆಂಗಣ್ಣಿಗೆ ಬಿದ್ದಂತೆ ಅಂದು ಕೂಡಾ ಗುರಿಯಾಯಿತು.

ಜೆಎನ್‌ಯು ವಿದ್ಯಾರ್ಥಿಗಳ ಸಂಘ ತುರ್ತುಪರಿಸ್ಥಿತಿ ಖಂಡಿಸಿ ನಿರ್ಣಯ ಕೈಗೊಂಡ ಕೂಡಲೇ ಟ್ರಕ್, ವ್ಯಾನುಗಳಲ್ಲಿ ಸಾವಿರಕ್ಕೂ ಹೆಚ್ಚು ಪೋಲಿಸರು ವಿವಿಯನ್ನು, ವಿದ್ಯಾರ್ಥಿ ನಿಲಯಗಳನ್ನು ಸುತ್ತುವರೆದರು. ಅಂದು ಅಲ್ಲಿ ವಿದ್ಯಾರ್ಥಿಯಾಗಿದ್ದ ವಿಜ್ಞಾನ ಬರಹಗಾರ ನಾಗೇಶ ಹೆಗ್ಗಡೆಯವರು ಕೂಡಾ ಗಣಿಗಾರಿಕೆಗೆ ಸಂಬಂಧಿಸಿದ ತಮ್ಮ ಒಂದು ಪ್ರಬಂಧಕ್ಕಾಗಿ ಬಂಧನ ತಪ್ಪಿಸಿಕೊಳ್ಳಲು ಕ್ಯಾಂಪಸ್ ಬಿಟ್ಟು ಬರಬೇಕಾಯಿತು. ಉನ್ನತ ವ್ಯಾಸಂಗ ತ್ಯಜಿಸಿ ತಲೆ ಮರೆಸಿಕೊಂಡಿರಬೇಕಾಯಿತು.

ಹೀಗೆ ನೂರಕ್ಕೂ ಹೆಚ್ಚು ವಿವಿಗಳ ಮೇಲೆ‌ ಧಾಳಿ ನಡೆಯಿತು. ಸರ್ಕಾರಿ ಸಿಬ್ಬಂದಿಯನ್ನೂ ಅಧಿಕಾರಿಗಳನ್ನೂ ತಮ್ಮ ವಿಧೇಯರಾಗಿರುವಂತೆ ಭಯದ ವಾತಾವರಣ ನಿರ್ಮಿಸಿದ್ದಲ್ಲದೆ ದಕ್ಷತೆಯನ್ನು ಹೆಚ್ಚಿಸುವ ನೆಪದಲ್ಲಿ ಸಾವಿರಾರು ನೌಕರರು, ಅಧಿಕಾರಿಗಳನ್ನು ಕಡ್ಡಾಯ ನಿವೃತ್ತಿ ಮಾಡಿ ಮನೆಗೆ ಕಳಿಸಲಾಯಿತು. ಈ ಎಲ್ಲವುಗಳ ನಡುವೆ ಜೆಪಿ ಮೊದಲಾದ ಚಳುವಳಿಗಳ ನಾಯಕರ‌ ಮೇಲೆ ದೇಶದ್ರೋಹಿಗಳು, ರಾಷ್ಟ್ರದ ಅಭಿವೃದ್ಧಿಗೆ ಮಾರಕ, ಫ್ಯಾಸಿಸ್ಟರು ಎಂಬೆಲ್ಲ ಬಹು ದೊಡ್ಡ ನಿಂದನೆಗಳ ಸುರಿಮಳೆ. ಅಪಪ್ರಚಾರದ ಪ್ರವಾಹ. ಇವುಗಳ ಮತ್ತೊಂದು ಮುಖವಾಗಿ ಇಂದಿರಾ ಎಂದರೆ ದೇಶ, ದೇಶ ಎಂದರೆ ಇಂದಿರಾ. ಇಂದಿರಾ ಶಕ್ತಿಗುಂದಿದರೆ ದೇಶವೇ ಶಕ್ತಿಗುಂದಿದಂತೆ ಎಂಬ ಹೆಬ್ಬುಬ್ಬೆಯ ಭಟ್ಟಂಗಿತನ. ಒಬ್ಬಳೇ ನಾಯಕಿ, ಒಂದೇ ಪಕ್ಷ, ಒಂದು ದೇಶ ಎಂಬ ಘೋಷಣೆಗಳು ಎಲ್ಲೆಡೆ ಮೊಳಗಿದವು.‌

ಸಾಮಾನ್ಯವಾಗಿ ಗಮನಕ್ಕೆ ಬಾರದ ಒಂದು ಮುಖ್ಯ ಅಂಶವೆಂದರೆ ಅಮೆರಿಕ, ರಷ್ಯಾ ಮೊದಲಾದ ಹಲವು ದೇಶಗಳ ರಾಜಕೀಯ ಬೆಂಬಲ ಹಾಗೂ ವಿದೇಶಿ ವಿನಮಯದ ಅಭಾವದಿಂದ ಒದ್ದಾಡುತ್ತಿದ್ದ ಸರ್ಕಾರಕ್ಕೆ ವಿಶ್ವ ಬ್ಯಾಂಕ್ ಮತ್ತು ಅಮೆರಿಕಗಳಿಂದ ಹಿಂದಿನ ವರ್ಷಗಳಿಗಿಂತ ಹಲವು ಪಟ್ಟು ಹೆಚ್ಚು  ಹಣದ ಸಹಾಯ, ವಿಶ್ವ ಕಾರ್ಪೊರೇಟ್‌ಗಳ ಶ್ಲಾಘನೆ ಈ ಸರ್ವಾಧಿಕಾರಕ್ಕೆ ಇಂಬಾದವು.

ಸರ್ವಾಧಿಕಾರವೆಂದರೆ ಸಂಸತ್ತಿನ, ಶಾಸಕಾಂಗದ ಹಕ್ಕುಗಳ ಕಡಿತ, ಪತ್ರಿಕೆಗಳ ಮೇಲೆ ನಿಯಂತ್ರಣ, ಕೋರ್ಟ್‌ಗಳನ್ನು ಅಧೀನಗೊಳಿಸಿಕೊಳ್ಳುವುದು, ಕಾರ್ಮಿಕರ  ಹಕ್ಕುಗಳ ನಾಶ, ಅವರನ್ನು ಜೀತಗಾರಿಕೆಯ ಸ್ಥಿತಿಗೆ ತಳ್ಳಿ ಶೋಷಣೆ ಮಾಡುವುದು,ಬಡವರ ಬದುಕಿನ ನಾಶ, ಅಕಾಡೆಮಿಕ್ ಸ್ವಾತಂತ್ರ್ಯದ ಮೇಲೆ, ವಿವಿಗಳು, ಕಾಲೇಜುಗಳು, ವಿದ್ಯಾರ್ಥಿಗಳು, ಪ್ರಾಧ್ಯಾಪಕರ ಮೇಲೆ ಧಾಳಿ, ಆಡಳಿತ ವ್ಯವಸ್ಥೆಯನ್ನು ಭಯದಲ್ಲಿಡುವುದು, ಒಬ್ಬ ವ್ಯಕ್ತಿಯಲ್ಲಿ ಎಲ್ಲ ಅಧಿಕಾರದ ಕೇಂದ್ರೀಕರಣ, ವಿರೋಧಿಗಳ ಮೇಲೆ ಅಪಪ್ರಚಾರದ ಕಪ್ಪು ಮಸಿ ಬಳಿಯುವುದು, ದೇಶದ್ರೋಹದ ಅಪಾದನೆ.

ವ್ಯಕ್ತಿ ವೈಭವೀಕರಣ, ಭಟ್ಟಂಗಿಗಳ ಬೆಳೆ, ದೇಶೀ ವಿದೇಶಿ ಕಾರ್ಪೊರೇಟ್ ವಲಯದ ಬೆಂಬಲ ಎಂಬ ಮುಖ್ಯ ಅಂಗಗಳು ಎಂಬುದು ಇಪ್ಪತ್ತು ತಿಂಗಳ ತುರ್ತುಪರಿಸ್ಥಿತಿಯ ಸಾಂದ್ರ ಮತ್ತು ಕಟು ಅನುಭವ. ಕೋಟ್ಯಾಂತರ ಜನರ ದಿನನಿತ್ಯದ ಭಯ, ಆತಂಕಗಳು, ಸಂಕಟ, ಲಕ್ಷಾಂತರ ಜನರ ಬಂಧನ, ದೌರ್ಜನ್ಯಗಳು, ಸಾವಿರಾರು ಜನರ ಕೊಲೆಗಳ ದುಬಾರಿ ಬೆಲೆ ತೆತ್ತು ಪಡೆದುಕೊಂಡ ಅನುಭವ. ದೇಶದ ಇಂದಿನ ಬೆಳವಣಿಗೆಗಳಿಗೆ ಓದುಗರೇ ತುಲನೆ ಮಾಡಿಕೊಳ್ಳಿ.

ಅಂದು ದೀಢೀರನೆ ಈ ಎಲ್ಲ ಅಂಶಗಳು ಎರಗಿ ಎರಡು ವರ್ಷಗಳ ಒಳಗೆ ದಿಢೀರನೆ ಪಕ್ಕಕ್ಕೆ ಸರಿಸಲ್ಪಟ್ಟರೆ ಇಂದು ಅವು ಏಳು ವರ್ಷಗಳ ಅವಧಿಯನ್ನು ವ್ಯಾಪಿಸಿಕೊಂಡು ಬೆಳೆಯುತ್ತಿದೆ. ಕೋಮು ದಂಗೆ, ದೌರ್ಜನ್ಯಗಳು, ಧರ್ಮದ ಮುಸುಕಿನಲ್ಲಿ ಈ‌ ಸರ್ವಾಧಿಕಾರದ ವಿಜೃಂಭಣೆ ನಡೆಯುತ್ತಿದೆ.

‍ಲೇಖಕರು Admin

June 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Sumathi

    ನಮಸ್ಕಾರ.
    ಇಷ್ಟೆಲ್ಲಾ ವಿವರಿಸುವ ಬದಲು ಕೊನೆಯ ಸಾಲುಗಳನ್ನು ವಿಸ್ತಾರ ಮಾಡಿದ್ದರೆ ಸೊಗಸಾಗಿರುತ್ತಿತ್ತು.
    ಕೊನೆಯ ಪ್ಯಾರ ದಲ್ಲಿನ ವಿಷಯ ಹೇಳಲೆಂದೇ ಮೊದಲ ಅಷ್ಟೂ ಲೇಖನ ರೂಪು ಗೊಂಡಿದೆ. ಎಂತಹ ಪ್ರಬುದ್ಧ ಲೇಖಕನೂ, ಏನೆಲ್ಲ ನೋಡಿ ಅನುಭವಿಸಿದವನೂ, ಎಷ್ಟೆಲ್ಲ ಹೋರಾಟ ಮಾಡಿದವನೂ ಹೇಗೆ bias ಆಗುತ್ತಾನೆ ಎಂಬುದನ್ನು ಮತ್ತು ಹೇಗೆ ಕೊಂಡಿ ಬೆಸೆಯುತ್ತಾನೆ ಎಂಬುದಕ್ಕೆ ಇದು ಉದಾಹರಣೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: