ಮಹಾಮನೆ ಅಂಕಣ: ಮಾಲುಗಣ್ಣಿನ ಹುಡುಗಿ ನಡೆದು ಬಂದಳು…

ಮಲ್ಲಿಕಾರ್ಜುನಸ್ವಾಮಿ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಸ್ವಾಮಿ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ.

ಮಲ್ಲಿಕಾರ್ಜುನಸ್ವಾಮಿ ತಮ್ಮ ಬದುಕಿನ ಘಟನೆಗಳನ್ನು ನಮ್ಮ ಮುಂದಿಡುತ್ತಿದ್ದಾರೆ.

4

ಆರ್.ಜಿ.ಹಳ್ಳಿ ನಾಗ್ರಾಜ ಬತ್ತನೆ ಬತ್ತನೇ ಅಂತ ಸ್ವಲ್ಪ ಹೊತ್ತು ಲೈಬ್ರರಿ ಮುಂದೇನೇ ನಿಂತೆ… ಅವ ಬರುವ ಸೂಚನೆ ಕಾಣಲಿಲ್ಲ. ಬರ‍್ತಾನೋ ಇಲ್ವೋ… ಇಲ್ಲೇ ಕಾಯ್ಬೇಕಾ… ಅಥ್ವಾ ಇಲ್ಲಿಂದ ಹೊರಡ್ಲಾ… ಎಂಬ ಡೋಲಾಯಮಾನ ಪರಿಸ್ಥಿತಿ… ಇಲ್ಲೆ ನಿಂತ್ರೆ ಎಷ್ಟೊತ್ತು ನಿಲ್ಲುವುದು… ನಾನು ಹೊರಟ ಮೇಲೆ ಅವ ಬಂದುಬಿಟ್ಟರೆ ಎಂಬ ಇನ್ನೊಂದು ಆಲೋಚನೆ… ಐವತ್ತು ರೂಪಾಯನ್ನು ಮತ್ಯಾರ ಬಳಿ ಕೇಳುವುದು… ಛೇ ಎಂಥಾ ಪರಿಸ್ಥಿತಿ ಬಂತಲ್ಲಾ… ಎಷ್ಟೊತ್ತು ನಿಲ್ಲಲಿ… ಕಾಲು ಬೇರೆ ನೋಯೋಕ್ಕೆ ಶುರುವಾದೋ… ಏನ್ ಮಾಡೋದು… ನೋ… ಹೋಗಬಾರದು… ಇನ್ನೂ ಸ್ವಲ್ಪ ಹೊತ್ತು ಕಾಯೋಣ ಅಂತ ನಿರ್ಧರಿಸಿದೆ…

‘ವೈಟಿಂಗ್ ಫಾರ್ ಗಾಡೋ’ ನಾಟಕದ ನೆನಪಾಯಿತು… ಬರುವ…ಬರಬಹುದಾದ… ಬರದೇಯೂ ಇರುವ ಬಂದೇಬಿಡುವನೆನ್ನುವ…ಬರದಿದ್ದರೇ ಎನ್ನುವ ನಿರೀಕ್ಷೆ… ಅನಿಶ್ಚಿತತೆ… ಭರವಸೆಗಳ… ನಂಬಿಕೆ-ಅಪನಂಬಿಕೆಗಳ ಸಂಚಾರಿ ಭಾವಗಳು ಮನದೊಳಗೆ ಹರಿದಾಡಲು ಪ್ರಾರಂಭಿಸಿದವು. ದೂರದಲ್ಲಿ ಆರ್.ಜಿ.ಹಳ್ಳಿ ಬರ‍್ತಾ ಇದಾನೆ ಅನ್ನಿಸಿತು… ‘ಗಾಡೋ’ ಬಂದೇ ಬಿಟ್ಟ… ಎಂದು ಖುಷಿಗೊಂಡೆ…!!! ಅವನ ಬಳಿ ಐವತ್ತು ರೂಪಾಯಿ ಕೇಳೋದಕ್ಕೆ ಹೇಗೆ ಪೀಠಿಕೆ ಹಾಕುವುದು ಎಂದು ಸಿದ್ದಗೊಳ್ಳತೊಡಗಿದೆ.

ದೂರದ ವ್ಯಕ್ತಿ ಹತ್ತಿರ ಬಂದ… ಆದ್ರೆ ಅವನು ಆರ್.ಜಿ. ಆಗಿರಲಿಲ್ಲ… ಛೇ… ನನಗೇನಾಗಿದೆ… ಆಮೇಲಾಮೇಲೆ ದೂರದಲ್ಲಿ ಆ ಕಡೆ ಈ ಕಡೆ ಅಡ್ಡಾಡೋರೆಲ್ಲ ಆರ್.ಜಿ. ತರನೇ ಕಾಣಕ್ಕೆ ಶುರುವಾಗಿಬಿಟ್ಟರು.

‘ಗಾಡೋ’ ನಾಟಕದ ಒಳಸುಳಿಗಳೆಲ್ಲ ಬಿಚ್ಚಿಕೊಳ್ಳತೊಡಗಿದವು. ಅಬ್ಬಾ… ಈ ಕಾಯುವಿಕೆ ಎಂಥಾ ಯಮಯಾತನೆ… ಅದೂ… ಸಹಾಯ ಕೇಳಿ ನಿಲ್ಲುವುದಿದೆಯಲ್ಲಾ… ಕಾಯುವುದಿದೆಯಲ್ಲಾ ಅದೂ ತುರ್ತು ಸಂದರ್ಭಗಳಲ್ಲಿ ಅದೊಂದು ಕೆಟ್ಟ ಅನುಭವ…

ಆ ಸಮಯವನ್ನು ಹೇಗೆ ಕಿಲ್ ಮಾಡುವುದೆಂದು ನನಗೂ ಗೊತ್ತಾಗಲಿಲ್ಲ… ನಾನೂ ಸಹ ಅತ್ತ ಇತ್ತ ಅಡ್ಡಾಡಿದೆ… ಪಕ್ಕದಲ್ಲೇ ಇದ್ದ ಪಾರ್ಕಿನಲ್ಲೋಗಿ ಕುಳಿತೆ… ಮತ್ತೆ ಲೈಬ್ರರಿ ಕಡೆ ಹೋದೆ… ಇಲ್ಲ… ಅದು ತೆರೆದಿರಲಿಲ್ಲ… ಆರ್.ಜಿ. ಇಲ್ಲ…

ಕೊನೆಗೂ ‘ಗಾಡೋ’ ಬರಲೇ ಇಲ್ಲ…

ನನ್ನ ಬದುಕಿನಲ್ಲೂ ಅಷ್ಟೇ ಗಾಡೋ ಬರಲೇ ಇಲ್ಲ… ಕೂಡುವವನು-ಕಾಯುವವನು ಬರಲೇಯಿಲ್ಲ… ಏನು ಮಾಡಬೇಕೆಂದು ತೋಚದೆ… ಮತ್ತೆ ಸ್ವಲ್ಪ ಹೊತ್ತು ಲೈಬ್ರರಿಯ ಮುಂದೆಯೇ ನಿಂತೆ… ಹಾಗೇ ನಿಂತವನಿಗೆ ವೇಳೆ ಎಷ್ಟಾಗಿದೆಯೆಂಬುದನ್ನು ತಿಳಿಯಬೇಕಿಸಿ ವಾಚು ನೋಡಿಕೊಂಡೆ… ಆಗಲೆ ಮಧ್ಯಾಹ್ನ ದಾಟಿ ಗಡಿಯಾರದ ಮುಳ್ಳು ೨ರ ಹತ್ತಿರ ಹತ್ತಿರ ಇದೆ… ಅದೇಕೋ ಗಡಿಯಾರವನ್ನು ಮತ್ತೆ ಮತ್ತೆ ನೋಡಿದೆ… ಮತ್ತೇ ನೋಡಿದೆ… ಮಿಂಚು ಹೊಳೆದಂತೆ… ಐಡಿಯ ಹೊಳೆಯಿತು…

ಗಡಿಯಾರ ದಾರಿ ತೋರಿತು… ಗಡಿಯಾರವನ್ನು ‘ಅಡ’ ಇಡುವುದು!

ಯಾವುದಾದರೂ ಸೇಟು ಅಂಗಡಿಯಲ್ಲಿ ಇಟ್ಟರಾಯಿತು ಎಂದುಕೊಂಡೆ. ಎಲ್ಲಿ, ಯಾರಲ್ಲಿ ಇಡುವುದು ಪ್ರಶ್ನೆ ಕಾಡಿತು… ಅಡ ಇಡುವುದೇಗೆ! ಈ ಮೊದಲು ನಾನು ಹೀಗೆಲ್ಲ ಮಾಡಿಲ್ಲ… ಅದರ ಗಂಧಗಾಳಿಯೂ ಗೊತ್ತಿಲ್ಲ…!!! ನಾನು ಅಡ ಇಡುವುದನ್ನು ಯಾರಾದರೂ ನೋಡಿಬಿಟ್ಟರೇ… ನೋಡಿ ‘ಇವನಿಗೇನ್ಬಂತಪ್ಪಾ ದಾಡಿ… ವಾಚ್ ಅಡ ಇಡೋಂತದೇನಾಗಿದೆ ಇವನಿಗೆ…’ ಅಂತ ಅಂದ್ಕೊಂಡುಬಿಟ್ರೇ… ಅದೆಲ್ಲಾ ಅವಮಾನ… ಪರಿಚಿತರು ಅಡ್ಡಾಡದ ಜಾಗಕ್ಕೆ ಹೋಗೋದು… ಅಲ್ಲಿ ‘ಅಡ’ ಇಟ್ಟು ದುಡ್ಡು ತಗೊಂಡು… ಭಾವಾಜಿಯವರು ಹೇಳಿದ ಜಾಗಕ್ಕೆ ಹೋಗುವುದು ಎಂದು ನಿರ್ದರಿಸಿದೆ…

ವಿಜಯನಗರದಿಂದ ನಾನು ಈ ಮೊದಲು ವಾಸವಿದ್ದ ಚಾಮರಾಜಪೇಟೆಯ ಕಡೆಯ ಬಸ್ ಹತ್ತಿದೆ… ನಾನು ಸೇಟು ಅಂಗಡಿಗೆ ಹೋಗುವುದನ್ನು ಯಾರಾದರೂ ನೋಡಾರೆಂದು ಅಳುಕಿನಿಂದಲೇ… ಸುತ್ತಾ ಮುತ್ತಾ ನೋಡಿ… ಬರಬರನೇ ಸೇಟು ಅಂಗಡಿ ಒಳ ನುಗ್ಗಿ ಬೆವರೊಸಿಕೊಳ್ಳುತ್ತಾ ಗಡಿಯಾರ ಬಿಚ್ಚಿ ಸೇಟು ಮುಂದೆ ಇಟ್ಟೆ… ಆತ ನನ್ನನ್ನು ಮೇಲಿಂದ ಕೆಳಗೆ ನೋಡಿ… ‘ಕ್ಯಾ ಸಾಬ್’… ಅಂದ… ಅರೆರೇ ದುಡ್ಡು ಕೇಳೋಕ್ಕೆ ಬಂದವನನ್ನು ಇವನು ‘ಸಾಬ್’ ಅಂತಾವನೆಲ್ಲ ಅಂತ ಇನ್ನು ಬೆವತೋದೆ… ‘ಅಡ’ ಇಡುವ ಮೊದಲ ಅನುಭವ ಅಲ್ಲವೇ… ಹಾಗಾಗಿ ಬೆವತೆ ಕಣ್ರಪ್ಪಾ…

‘ಎಷ್ಟು ಬೇಕು’ … ಕೇಳಿದ

‘ಅದು…ಅದು…ಅದು…ನನಗೆ…ನನಗೆ’ ನಾನು ತಡಬಡಾಯಿಸಿದೆ.

ವಾಚನ್ನು ತಿರುಗಿಸಿ ಪರಗಿಸಿ ನೋಡುತ್ತಾ… ‘ಹೆಚ್.ಎಂ.ಟಿ. ವಾಚಿದೆ ಇದು’ ಸೌ ರೂಪಿಯಾ ಕೊಡ್ತಾವ್… ಸೇಟು ನನ್ನ ಮುಖವನ್ನೇ ನೋಡುತ್ತಾ ಹೇಳಿದೆ… ನನಗೆ ಈಗ ಬೆವರು ಬರುವುದರ ಜೊತೆಗೆ ಆಶ್ಚರ್ಯವೂ ಆಯಿತು… ಕಾರಣ ಆ ವಾಚಿಗೆ ನೂರು ರೂಪಾಯಿ ಸಿಗುತ್ತಲ್ಲಾ ಅಂಥ… ಐವತ್ತು ಮಾತ್ರ ತಗೊಳ್ಳೋ ಅಥ್ವಾ ನೂರ್ ರೂಪಾಯನ್ನು ತಗೊಳ್ಳೋ ಅಂತ ಕನ್ಫೂಷನ್ ಆಯ್ತು… ‘ಅರೇ ಹೇಳಿ ಸಾಮಿ… ನಿಮಗೆ ಎಷ್ಟು ರೂಪೈ ಬೇಕು… ನಮಗೆ ಬೇರೆ ಕೆಲಸ ಅದೆ…’ ಆ ಕಡೆಯಿಂದ ಧ್ವನಿ ಬರುತ್ತಿದ್ದಂತೆಯೇ ‘ಐವತ್ತು ಸಾಕು’ ಎಂದೆ ನಾನು…

‘ಸಾಕು…ನಿಮ್ದು ಅಡ್ರಸ್ ಹೇಳಿ… ಇಲ್ಲಿ ಸೈನ್ಗೆ ಹಾಕಿ’ ಎಂದೇಳುತ್ತಾ ರಸೀದಿಗೆ ಸೈನ್ ಹಾಕಿಸಿಕೊಂಡು ಐವತ್ತು ರೂಪಾಯಿಗಳನ್ನು ನನ್ನ ಕೈಗಿತ್ತ…

ಅಲ್ಲಿಂದ ಬಿಡುಗಡೆಗೊಂಡರೆ ಸಾಕೆಂದು ನಾನು ಬರ‍್ರನೇ ಹೊರಬಂದು… ಚಾಮರಾಜಪೇಟೆಯ ಅಂಗಡಿ ಸಾಲಿನಲ್ಲಿ ಹೂ… ಹಣ್ಣು ಎಲ್ಲಾ ತಗೆದುಕೊಂಡು ರಾಜಾಜಿನಗರ ಕಡೆ ಬಸ್ ಹತ್ತಿದೆ. ರಾಜಾಜಿನಗರದ ಇ.ಎಸ್.ಐ. ಬಳಿ ಬಸ್ಸಿಳಿದು ನವರಂಗ್ ಬಳಿ ಬಂದೆ ಅಷ್ಟೊತ್ತಿಗಾಗಲೆ ನಮ್ಮ ಭಾವಾಜಿ ಬಂದಿದ್ದು… ನನ್ನನ್ನು ಕಾಯುತ್ತಿದ್ದರು…

‘ಬಂದ್ರಾ…ಬನ್ನಿ ಬನ್ನಿ… ಆಟೋ ಹತ್ಬುಡನಾ… ಆಗ್ಲೆ ಲೇಟಾಗ್ಬುಟ್ಟಿದೆ… ಅವರೆಲ್ಲಾ ಕಾಯ್ತ ಅವರೆ ಅಂದ್ರು…

ನಾನು… ‘ಆಟೋ ಯಾಕೆ ಬಸ್ ಹತ್ತೋಣ’ ಅಂದೆ…

‘ಏಯ್ ನಿಮ್ಗೆ ಗೊತ್ತಾಗಲ್ಲ… ಹತ್ತಿ ಹತ್ತಿ ಆಟೋ’ ಅಂದ್ರು ಅವರು. ಆಟೋದಲ್ಲಿ ಕೂತ ನಮ್ಮ ಭಾವಾಜಿ ನನ್ನ ಮುಖವನ್ನೇ ದಿಟ್ಟಿಸಿ ನೋಡಿ… ನಗುತ್ತಲೇ ‘ಹೆಣ್ಣು ನೋಡಕ್ಕೆ ಹೋಯ್ತಾ ಇದೀವಿ… ಸೇವ್ ಮಾಡಿಸ್ಕೊಂಡು ಕ್ಲೀನಾಗಿ ಬರೋದಿಲ್ವೆ…’ ಅಂದ್ರು… ‘ಇರ‍್ಲಿ ಬಿಡಿ’ ಅಂದೆ ನಾನು.

‘ಇದೆಲ್ಲ ನಿಮ್ ನಾಟ್ಕಾದೋರಿಗೆ ಚಂದ… ಹೂಂ ಇರ‍್ಲಿ ಬನ್ನಿ… ಮದುವೆ ಸೆಟ್ ಆಗ್ಲಿ ಅಂತಾ ಅವ್ರ ಮನೆ ದೇವ್ರು ಮಾದಪ್ನಗೆ ಮುಡಿಬುಟ್ಟವರೇ ಅಂತ ಹೇಳ್ತೀನಿ ಕಣ್ಬನ್ನಿ… ಓಹೋ ನಾವೇನೋ ನಿಮ್ನ ಸುಮ್ನೆ ಬಿಟ್ಕೊಟ್ಟಿವೆ’ ಅಂದ್ರು ನಾನು ಮರುಮಾತಾಡದೇ ಸುಮ್ಮನೆ ಕುಳಿತಿದ್ದೆ…

ಕುರುಬರ ಹಳ್ಳಿಯಲ್ಲಿದ್ದ ಹೆಣ್ಣಿನ ಆ ಮನೆ ಬಂತು…
ನನ್ನ ಶ್ರೀನಿವಾಸನಗರದಲ್ಲಿದ್ದ ಬಾಡಿಗೆ ಮನೆಯದೇ ರೂಪ… ಅದೇ ತರದ ಶೀಟಿನ ಮನೆ… ಸ್ವಲ್ಪ ಹಳೆಯದು… ಆದರೆ ಸ್ವಂತದ್ದು…

ಆಟೋ ಇಳಿದು ಗೇಟ್ ತೆಗೆದು ಒಳ ಅಡಿ ಇಡುತ್ತಿದ್ದಂತೆಯೇ ಹೆಣ್ಣಿನ ಅಪ್ಪ-ಅಣ್ಣ ನಮ್ಮನ್ನು ಎದುರುಗೊಂಡು… ‘ಬನ್ನಿ ಬನ್ನಿ’ ಎನ್ನುತ್ತಾ ಮನೆ ಒಳಗೆ ಕರೆದುಕೊಂಡು ಹೋದರು…

ಮನೆಯ ಹಾಲಿನ ಗೋಡೆಯ ಮೇಲೆ ಹೆಣ್ಣಿನ ತಾತ-ಅಜ್ಜಿಯ ಫೋಟೋ ಜೊತೆಗೆ ಮೂವತ್ಮೂರು ಕೋಟಿ ದೇವತೆಗಳ ಫೋಟೋಗಳು… ಅದಕ್ಕೆ ಬಳಿದಿದ್ದ ವಿಭೂತಿ-ಅರಿಸಿನ-ಕುಂಕುಮಗಳಿಂದ ಆ ದೇವತೆಗಳಲ್ಲೆ ವಿರಾಜಮಾನವಾಗಿದ್ದವು… ಹಾಲಿನಲ್ಲಿದ್ದ ಕುರ್ಚಿಗಳ ಮೇಲೆ ಕೈ ತೋರಿ ‘ಕೂತ್ಕೊಳ್ಳಿ’ ಎಂದರು… ನಾನು ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಾ ಮುಂದೆ ಇದ್ದ ಟೀಪಾಯ್ ಮೇಲೆ ಹೂ-ಹಣ್ಣಿನ ಕವರ್ ಇಟ್ಟೆ… ಅಯ್ಯೋ… ಇದ್ಯಾಕೆ ತರೋಕೋದ್ರಿ… ಎನ್ನುತ್ತಾ ಸಂತೋಷದ ನಗೆ ಚೆಲ್ಲುತ್ತಾ ಅಡಿಗೆ ಮನೆಯಿಂದ ಹೊರಬಂದ ಹೆಣ್ಣಿನ ತಾಯಿಯವರು ಕುಡಿಯಲು ನೀರಿಟ್ಟು… ಕವರ್ ತೆಗೆದುಕೊಳ್ಳುತ್ತಾ… ಚೆನ್ನಾಗಿದ್ದೀರಾ… ಅಪ್ಪಾವರನ್ನು… ಅಮ್ಮಾವರನ್ನು ಕರ‍್ಕೊಂಡು ಬರ‍್ಬೇಕಾಗಿತ್ರಾ… ಮತ್ತೆ ನಗೆಚೆಲ್ಲಿ… ಏನೋ ಬಡವರ ಮನೆ… ಎಂದು ಆದರ ತೋರಿದರು…

ಅದೂ ಇದೂ ಉಭಯಕುಶಲೋಪರಿ ಎಲ್ಲಾ ಮುಗಿತು… ಸಂಬಂಧಗಳ… ನೆಂಟರಿಷ್ಟರ… ಊರುಕೇರಿ ವಿಳಾಸ ಅಡ್ರಸ್ಸು… ಕೆಲಸ ಕಾರ್ಯಗಳು ಇವೆಲ್ಲವೂ ಮಾತಿನ ನಡುವೆ ಬಂದುಹೋದವು… ಅಡಿಗೆ ಮನೆಯಿಂದ ಗುಸುವಿಸು ಶಬ್ದ ಆಗಾಗ ಕೇಳಿ ಬರುತ್ತಲೆ ಇತ್ತು… ಯಾವುದೋ ಪಾತ್ರೆ ಬಿದ್ದ ಸದ್ದು ಜೊತೆಗೆ… ಯಾವುದೊ ಶೀಷೆಯೊಂದು ಬಿದ್ದು ಪಳಾರ್ ಎಂದು ಹೊಡೆದ ಸದ್ದು… ಏನೋ ತಿಂಡಿಯನ್ನು ಬಾಂಡ್ಲಿಯಲ್ಲಿ ಕರಿಯುತ್ತಿರುವಾ ಸುವಾಸನೆ… ಜೊತೆಗೆ ಮಲ್ಲಿಗೆಯ ಗಮಲು… ಸೀರೆಯ ಸರಬರ ಸದ್ದು… ಪಿಸುಮಾತುಗಳ ವಿನಿಮಯ… ನಡುನಡುವೆ ಮೆಲ್ಲ ನಗುವಿನ ಸಣ್ಣ ಸಪ್ಪಳ… ಇದೆಲ್ಲವೂ ಒಳ ಮನೆಯಲ್ಲಿ ನಡೆದೇ ಇದ್ದವು…

ಚಕ್ಕುಲಿ ತುಂಬಿದ ಮೂರ‍್ನಾಕು ಪ್ಲೇಟುಗಳನ್ನು ಟ್ರೇಯೊಂದರಲ್ಲಿ ಜೋಡಿಸಿಕೊಂಡು ಒಳಮನೆಯಿಂದ ಬಂದ ಬಾಲೆಯನ್ನು ಹುಡುಗಿಯ ಅಪ್ಪ ‘ಯಾಕಮ್ಮ ನಿಮ್ಮಕ್ಕ ತರೋದಲ್ವಾ’ ಎಂದು ನಮ್ಮತ್ರ ತಿರುಗಿ ಇವಳು ನನ್ನ ಕೊನೆ ಮಗಳು ರೇಣು… ರೇಣುಕಾ ಎಂದು ಪರಿಚಯಿಸಿದರು….

ಆ ರೇಣುಕಾ ಟ್ರೇಯನ್ನು ನಮ್ಮ ಮುಂದಿಟ್ಟು ಓಡಿಹೋಗಿ ಅಡುಗೆ ಮನೆ ಸೇರಿದಳು… ಅವಳ ನಂತರ ಬಂದವರು ಹುಡುಗಿಯ ತಾಯಿ… ‘ತಕ್ಕಳ್ಳಿ… ನಮ್ಮ ಗಂಗನೇ ಮಾಡಿದ್ದು…’ ಎಂದು ತನ್ನ ಮಗಳಿಗೆ ಅಡುಗೆಯೂ ಬರುತ್ತದೆಂಬ ಸರ್ಟಿಫಿಕೇಟನ್ನು ಕೊಟ್ಟು ನೀವು ಆರಾಮವಾಗಿ ಆಕೆಯನ್ನು ಮದುವೆ ಆಗಬಹುದು ಎಂಬ ಶಿಫಾರಸ್ಸಿನ ದನಿಯಲ್ಲಿ ನಕ್ಕು ‘ತಕ್ಕಳಿ… ಚಕ್ಲಿ ತಿನ್ನಿ’ ಎಂದು ಮತ್ತೊಮ್ಮೆ ಹೇಳಿದರು.

ನಾನು ಚಕ್ಕುಲಿ ತಟ್ಟಗೆ ಕೈ ಹಾಕಿದೆ… ಹುಡುಗಿಯ ತಂದೆಯೂ ಚಕ್ಕುಲಿಯ ಚೂರೊಂದನ್ನು ಬಾಯಿಗೆ ಹಾಕಿಕೊಂಡರು… ನಮ್ಮ ಭಾವಾಜಿಯು ಚಕ್ಕುಲಿ ತಿನ್ನುತ್ತಾ… ‘ಒಂದ್ಮಾತೇಳ್ತೀನಿ… ಯಜ್ಮಾನ್ರು… ತಾವು ತಪ್ಪ ತಿಳಿಬರ‍್ದು’ ಎಂದರು. ಯಜಮಾನರು ‘ಅದೇನೇಳಿ… ಅದಕ್ಕೆ ತಪ್ಯಾಕೆ ತಿಳ್ದರೂ… ಹೇಳಿ ಹೇಳಿ’ ಅಂದರು…

‘ಏನಿಲ್ಲಾ… ನಮ್ಮ ಸ್ವಾಮ್ಯೋರು ಒಳ್ಳೆ ವಿದ್ಯಾವಂತನೇ… ಅದರಲ್ಲೆರಡು ಮಾತಿಲ್ಲಾ… ಬಾಳ ಸಂಭಾವಿತರೂ ಸಹ…’ ಎಂದು ನಮ್ಮ ಭಾವನವರು ಮಾತಿಗೆ ಬ್ರೇಕ್ ಹಾಕಿದರು… ‘ನಾವು ಅದ್ನೆಲ್ಲಾ ಕೇಳಿದ್ವೇ… ನೋಡಿದ್ರೆ ಗೊತ್ತಾಗಕಿಲ್ವೆ ನಮ್ಗೆ…’ ಎಂದರು ಯಜಮಾನರು… ಹುಡುಗಿಯ ಅಣ್ಣ ರೇಣುಕಪ್ಪನವರು ಸಹ ‘ಅವೆಲ್ಲಾ ಇರ‍್ಲಿ ಬಿಡಿ ಸಾ… ನನಗೆಲ್ಲಾ ಗೊತ್ತಾಗಲ್ವಾ ಸಾ’ ಎಂದರು.

‘ಅಂಗಲ್ಲಾ… ಒಂದ್ವಿಚಾರ ಹೇಳ್ಬಿಡಬೇಕು… ಆಮೇಲೆ ಹುಡ್ಗಿ ನಮ್ಮ ಹುಡ್ಗನ ಜೊತೆ ಸಂಸಾರ ಮಾಡೋಳು… ಆಕೆಗೆ ಎಲ್ಲಾ ಗೊತ್ತಿರಬೇಕು’ ಎಂದು ಪೀಠಿಕೆ ಹಾಕಿ… ‘ಏನಿಲ್ಲಾ ನಮ್ಮ ಸ್ವಾಮ್ಯೋರು ಕಲಾವಿದ್ರು… ನಾಟ್ಕ ಗೀಟ್ಕ ಅಂಥ ಆಡ್ತಾರೆ…’ ಎನ್ನುತ್ತಿದ್ದಂತೆಯೇ… ಹುಡುಗಿಯ ತಾಯಿಯವರಾದ ಲಿಂಗಮ್ಮನವರು… ‘ಅದೇನು ತ್ಯಪ್ಪಲ್ಲ ಬುಡಿ… ಮನ್ಸುಂಗೆ ಕಲೆ ಇರಬೇಕು ಕಣ… ನನ್ನ ತಮ್ಮ ಊರಲ್ಲಿ ನಾಟ್ಕಗಳಲ್ಲಿ ಪಾಟ್ಲ ಮಾಡ್ತಾನೆ… ನಕ್ಲ… ಸೂತ್ರದಾರ… ಖುಷಿಮುನಿ ಇಂತವೆಲ್ಲಾ ವ್ಯಾಸ ಹಾಕ್ತಾನೆ… ತೆಪ್ಪಿಲ್ಲ ಬುಡಿ…’ ಎಂದಾಗ ರೇಣುಕಪ್ಪನವರು ‘ಅಮೌ ನೀನು ಸುಮ್ನಿರು’ ಎಂದರು. ತಾಯಿಯ ಮಾತು ಕೇಳಿ ಒಳಮನೆಯೂ ನಕ್ಕಿತು. ಯಜಮಾನರು ‘ಆಯ್ತು ಆಯ್ತು… ಮಗಿನಾ ಕಳಿಸೋಗು’ ಎಂದರು…

ಕಾಫಿ ಲೋಟ ಹಿಡಿದು ಮಾಲುಗಣ್ಣಿನ ಹುಡುಗಿ ಒಳಮನೆಯಿಂದ ಮೆಲ್ಲನೆ ನಡೆದು ಬಂದಳು.

ಇನ್ನು ಮುಂದಿನ ವಾರಕ್ಕೆ

‍ಲೇಖಕರು Admin

June 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: