ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶತ ಶತಮಾನದ ನೋವು…

ಸವಿತಾ ನಾಗಭೂಷಣ

ಎತ್ತಿಕೊಂಡೆ ಎದೆಗೊತ್ತಿಕೊಂಡೆ
ಉಹುಂ ನಿಲ್ಲಿಸುತ್ತಿಲ್ಲ ಅಳು.
ಮುತ್ತನಿಕ್ಕಿದರೂ ತುತ್ತನಿಕ್ಕಿದರೂ
ನಿಲ್ಲಿಸುತ್ತಿಲ್ಲ ಅಳು…
ದೇಹ ಬಾಧೆ ಎಂದರಿತು
ಮದ್ದು ಅರೆದರೂ.. ತಾಕಿರಬಹುದು ಕೆಟ್ಟ ಕಣ್ಣು
ಎಂದು ದಿಟ್ಟಿ ತೆಗೆದರೂ ನಿಲ್ಲಿಸುತ್ತಿಲ್ಲ ಅಳು !
ಚಂದ್ರನತ್ತ ಬೆರಳು ತೋರಿದರೂ
ಗುಮ್ಮನನ್ನು ಕರೆದು ಗದರಿಸಿದರೂ
ನಿಲ್ಲಿಸುತ್ತಿಲ್ಲ ಅಳು..
ಗೊಂಬೆ ಕೈಗಿತ್ತರೂ ಬಣ್ಣದ ಬುಗುರಿ
ಗಿರಿಗಿರಿ ತಿರುಗಿದರೂ
ಪೀಂ ಪೀಂ ಎಂದು ತುತ್ತೂರಿ ಊದಿದರೂ
ನಿಲ್ಲಿಸುತ್ತಿಲ್ಲ ಅಳು…

ತಟ್ಟಿ ಮಲಗಿಸಿದರೂ ತೊಟ್ಟಿಲಲಿಟ್ಟು
ತೂಗಿದರೂ ನಿಲ್ಲಿಸುತ್ತಿಲ್ಲ ಅಳು
ಅರಚುತ್ತಿದೆ ಪರಚುತ್ತಿದೆ
ರೊಚ್ಚಿಗೆದ್ದು ರಚ್ಚೆ ಹಿಡಿದಿದೆ
ಬೆಲ್ಲಮಾತಿಗೆ ಬಗ್ಗದೆ ಜಗ್ಗದೆ
ಅಚ್ಚೆ ಮಾಡಿದರೆ ಪೆಟ್ಟು ತಿಂದಂತೆ
ಮೂಜಗ ಬೆಚ್ಚುವಂತೆ ಕಿರಿಚುತ್ತಿದೆ
ಮೈ ಕಾದು ಬೆಂಕಿಯಾಗಿದೆ ಸುಟ್ಟು
ನೆತ್ತಿ ಹುಚ್ಚುಚ್ಚಾಗಿ ಬಡಬಡಿಸುತ್ತಿದೆ
ತಣ್ಣನೆಯು ಬಟ್ಟೆಯಲಿ ಸುತ್ತಿರುವೆ
ಹಗಲು ಇರುಳನ್ನದೆ ಹತ್ತಿರದಲೇ
ಕೂತಿರುವೆ ನೇವರಿಸುವೆ ನೆತ್ತಿ
ಹತ್ತದಂತೆ ಕುಡಿಸುವೆ ಸಿಹಿನೀರು…
ಯಾಕ್ಹೀಗೇ? ಏನಾಗಿದೆ ?
ತೋರಿಸುವೆ ವೈದ್ಯರಿಗೆ
ಹರಸಿಕೊಳ್ಳುವೆ ದೇವರಿಗೆ….
ಅತ್ತತ್ತು ಸೋತಿದೆ ಕಣ್ಣು….
ಅನಿಸುತ್ತಿದೆ… ಇವತ್ತಿನದಲ್ಲ…
ಹಳೆಯ ಹುಣ್ಣು ಹಣ್ಣಾಗಿ ಬಾತಿದೆ ಕೀತಿದೆ
ಇನಿತಿನಿತಾಗಿ ಹೂರ ಬರುತಿದೆ
ಸಿಡಿದಲ್ಲದೆ ಒಡೆಯದು, ಮಾಯದು….
ಶತ ಶತಮಾನದ ನೋವು….

‍ಲೇಖಕರು Avadhi

19 April, 2021

1 Comment

  1. T S SHRAVANA KUMARI

    ಮಾರ್ಮಿಕವಾದ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading