‘ಸಮಾಜದ ಋಣವನ್ನು ತೀರಿಸಲು’ ಬರೆದ ‘ಜೀವಿ’

ಆಹ್ವಾನಿತ ಲೇಖನ

ಜೀವಿ ಎಂದೆಂದಿಗೂ ನಮ್ಮ ಜೊತೆ ಇರುತ್ತಾರೆ…

ಎನ್ ಎಸ್ ಶ್ರೀಧರಮೂರ್ತಿ

ಇಂದು (19 ಏಪ್ರಿಲ್)ಬೆಳಗಿನ ಜಾವ ಮೂರು ಗಂಟೆಗೇ ಎಚ್ಚರವಾಯಿತು. ಏನೋ ಸಂಕಟ.. ಮತ್ತೆ ನಿದ್ದೆ ಹತ್ತಲಿಲ್ಲ. ಅಷ್ಟು ಹೊತ್ತಿನಲ್ಲಿ ನಾನು ಸಾಮಾನ್ಯವಾಗಿ ಮೊಬೈಲ್ ನೋಡುವುದಿಲ್ಲ ಸೈಲೆಂಟ್‍ನಲ್ಲಿ ಇಟ್ಟಿರುತ್ತೇನೆ. ಏಕೋ ನಾಲ್ಕುಗಂಟೆಯ ಸುಮಾರಿಗೆ ತೆಗೆದು ನೋಡಿದೆ. ಆಗ ಇದ್ದಿದ್ದು ಬೆಚ್ಚಿಬೀಳುವ ಸುದ್ದಿ. ಮಿತ್ರ ಜಿ.ವಿ.ಅರುಣ್ ‘ನಮ್ಮತಂದೆ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಇಂದು ರಾತ್ರಿ 1.15ಕ್ಕೆ ವಯೋ ಸಹಜ ಕಾರಣಗಳಿಂದ ನಿಧನ ಹೊಂದಿದ್ದಾರೆ’ ಎಂಬ ಸುದ್ದಿಯನ್ನು ಬೆಳಗಿನ ಜಾವ 3.54ಕ್ಕೆಇಟ್ಟಿದ್ದರು. ಒಂದು ಕ್ಷಣ ಬೆಚ್ಚಿಬಿದ್ದೆ. ಏನೋ ತೋಚದಂತಹ ಸ್ಥಿತಿ. ಇಡೀ ಜಗತ್ತೇ ಸುತ್ತಲೂ ತಿರುಗುತ್ತಿದೆ ಎನ್ನಿಸಿತು.

ನಿಧಾನವಾಗಿ ನೆನಪುಗಳ ಸುರುಳಿ ಬಿಚ್ಚಿಕೊಂಡಿತು. ನನಗೆ ಜಿ.ವಿ ಎಂದಿನಿಂದ ಪರಿಚಯ.. ಬಹುಷಃ ಮೂಲ ಬಿಂದು ಹುಡುಕುವುದೇ ಕಷ್ಟ. ಜಯನಗರದ ಕಡೆ ಹೋದರೆ ಅವರ ಮನೆಗೆ ತಪ್ಪದೆ ಹೋಗುವ ಪದ್ದತಿ ಈಗ ಮೂರು ದಶಕಕ್ಕೂ ಮಿಕ್ಕುಇದ್ದೇ ಇತ್ತು. ಈಗ ಒಂದು ವರ್ಷದಿಂದ ಕರೋನಾದ ಹಾವಳಿಯಿಂದ ನಾನೇ ಹೋಗಲು ಹಿಂಜರಿದಿದ್ದೆ. ‘ಅವರಿಗೆ ಇಂದಿನ ಸ್ಥಿತಿ ವಿವರಿಸುವುದು ಕಷ್ಟ. ಯಾರೋ ಬರ್ತಾ ಇಲ್ಲ ಅಂತ ಪೇಚಾಡ್ತಾರೆ’ ಎಂದು ಅರುಣ ಪದೇ ಪದೇ ಹೇಳ್ತಾ ಇದ್ದರು.

ಹೀಗೆ ಒಂದು ಮಾತು ಹೇಳದೆ ಹೊರಟು ಬಿಡ್ತಾರೆ ಅಂತ ಗೊತ್ತಿದ್ದರೆ ಒಂದು ಸಲ ಆದರೂ ಹೋಗಿ ಬರ್ತಾ ಇದ್ದೆ ಅಂತ ಪೇಚಾಡುವ ಹಾಗಾಗಿದೆ. ಆದರೆ ಜಿ.ವಿ ಎಲ್ಲಿ ಹೋಗಲು ಸಾಧ್ಯ? ನಮ್ಮ ನೆನಪುಗಳಲ್ಲಿ, ನಿಘಂಟುಗಳಲ್ಲಿ, ಒಡನಾಟ ನೀಡಿದ ಸಜ್ಜನಿಕೆಯಲ್ಲಿ ಸದಾ ನಮ್ಮ ಜೊತೆಗೆ ಇದ್ದೇ ಇರ್ತಾರೆ. ‘ದೊಡ್ಡವರು ಯಾರು?’ ಚಿಕ್ಕವರ ಬೆಳವಣಿಗೆಯಲ್ಲಿ ಆಸಕ್ತಿ ಉಳ್ಳವರೇ ದೊಡ್ಡವರು’ ಹೀಗೆ ಅತಿ ಚಿಕ್ಕ ವಾಕ್ಯದಲ್ಲಿ ಜೀವನ ದರ್ಶನವನ್ನು ನನಗೆ ನೀಡಿದ್ದ ಜೀವಿ.. ಬರೀ ನಡೆದಾಡುವ ವಿಶ್ವಕೋಶ ಮಾತ್ರವಲ್ಲ ಸದಾ ಮಿಡಿಯುವ ಮಾರ್ಗದರ್ಶಿ ಕೂಡ ಆಗಿದ್ದರು.. ಅವರ ಜೊತೆ ಕಾಲ ಕಳೆಯುವುದು ಎಂದರೆ ಅನುಭವದ ಪಾಠಶಾಲೆಯಲ್ಲಿ ಕುಳಿತಂತೆ. ನನ್ನ ಎರಡಷ್ಟು ವಯೋಮಾನದ ಅವರು ನನಗೆ ಹಿರಿಯರು ಅನ್ನಿಸುತ್ತಲೇ ಇರಲಿಲ್ಲ. ಸಮಕಾಲೀನರಿಗಿಂತಲೂ ಹೆಚ್ಚು ನಿಕಟ ಅನ್ನಿಸುತ್ತಿದ್ದರು.

1913ರ ಆಗಸ್ಟ್ 23ರಂದು ಜನಿಸಿದ ವೆಂಕಟಸುಬ್ಬಯ್ಯನವರ ತಂದೆ ಜಿ.ತಿಮ್ಮಣ್ಣಯ್ಯ ಅರಮನೆ ವಿದ್ವಾಂಸರು. ಸಂಸ್ಕೃತ ಕನ್ನಡ ಎರಡರಲ್ಲಿಯೂ ಆಳವಾದ ಪಾಂಡಿತ್ಯವನ್ನು ಪಡೆದವರು. ಅವರ ತಾಯಿ ಸುಬ್ಬಮ್ಮ ‘ನೂರು ವರ್ಷ ಸಾರ್ಥಕವಾಗಿ ಬಾಳು’ ಎಂಬ ಉಪನಿಷತ್ವಾಕ್ಯದ ರೂಪಕದಂತೆ ಇದ್ದರು. (ಈ ಮಾತನ್ನು ತಮ್ಮ ತಾಯಿಯ ಬಗ್ಗೆ ವೆಂಕಟಸುಬ್ಬಯ್ಯನವರು ಬಹು ಹೆಮ್ಮೆಯಿಂದ ಹೇಳುತ್ತಿದ್ದರು. ಈ ಮಾತು ಅವರಿಗೂ ಅನ್ವಯಿಸುವುದು ವಿಶೇಷ)

ತಮ್ಮ ನೂರನೇ ಹುಟ್ಟುಹಬ್ಬದ ದಿವಸ ಮಕ್ಕಳೆಲ್ಲರನ್ನೂ ಕೂಡಿಸಿ ತಾನೇ ಪಾಯಸ ಮಾಡಿ ಸೌಟು ಹಿಡಿದು ಬಡಿಸಿದ ಮಹಾತಾಯಿ!. ಜಿ.ವಿ 1937ರಲ್ಲಿ ಕನ್ನಡ ಸ್ನಾತಕೊತ್ತರ ಪದವಿಯನ್ನು ಕೇಣಿ ಸುವರ್ಣ ಪದಕದೊಂದಿಗೆ ಪಡೆದರು. ಮೌಖಿಕ ಪರೀಕ್ಷೆಯಲ್ಲಿ ಬಿ.ಎಂ.ಶ್ರೀ, ಟಿ.ಎಸ್.ವೆಂಕಟಣ್ಣಯ್ಯ ಮತ್ತು ಬೆನಗಲ್ ರಾಮರಾವ್ ಇದ್ದರು. ಬಿ.ಎಂ.ಶ್ರೀ ‘ಕನ್ನಡವನ್ನು ನಿಮ್ಮ ಕೈಯಲ್ಲಿ ಇಟ್ಟಿದ್ದೇವೆ, ಅದನ್ನು ಕಾಪಾಡಿ’ ಎಂದರು. ಈ ಮಾತನ್ನು ಜಿ.ವಿ ತಮ್ಮ ಜೀವನದುದ್ದಕ್ಕೂ ಪಾಲಿಸಿದರು. ಜಿ.ವಿ ಅವರ ಅಧ್ಯಾಪಕ ವೃತ್ತಿ ಮಂಡ್ಯ ಪ್ರೌಡಶಾಲೆಯಿಂದ ಆರಂಭವಾಯಿತು.

ಕೆಲ ಕಾಲ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕರಾದ ಅವರು 1943ರಲ್ಲಿ ಬೆಂಗಳೂರಿಗೆ ಬಂದರು. ಬೆಂಗಳೂರು ಹೈಸ್ಕೂಲಿನಲ್ಲಿ ಕೆಲ ಕಾಲ ಅಧ್ಯಾಪಕರಾದರು. ಮುಂದೆ ವಿಜಯಾ ಕಾಲೇಜ್ ಸೇರಿದರು. ಅದೇ ಅವರ ಆಡಂಬೋಲವಾಯಿತು ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಹಂತ ಹಂತವಾಗಿ ಮೇಲೇರಿದ ಅವರು ಉದ್ದಕ್ಕೂ ಕನ್ನಡವನ್ನು ಕಟ್ಟಿದರು. ‘ಉತ್ಸಾಹ’ ಎಂಬ ಪತ್ರಿಕೆ ರೂಪಿಸಿದರು. ‘ಕನ್ನಡಕೂಟ’ ಹುಟ್ಟುಹಾಕಿದರು. ಅನೇಕ ಬರಹಗಾರರನ್ನು ಬೆಳಕಿಗೆ ತಂದರು.

ಜಿ.ವಿ ಯವರು 1964ರಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದರು. ಆಗ ನಲವತ್ತು ಸಾವಿರ ರೂಪಾಯಿಗಳ ಸಾಲವಿತ್ತು. ಸರ್ಕಾರದಿಂದ ಅನುದಾನ ಕೇಳಿದಾಗ ‘ಮೊದಲು ನಿಮಗಿರುವ ಸಾಲ ಚುಕ್ತ ಮಾಡಿ’ ಎನ್ನುವ ಉತ್ತರ ಬಂದಿತು. ಸದಸ್ಯರ ಸಂಖ್ಯೆ ಕೂಡ ಸಾಕಷ್ಟು ಕಡಿಮೆ ಇತ್ತು. ಬೇರೆ ಯಾರಾದರೂ ಆಗಿದ್ದರೆ ಅಧ್ಯಕ್ಷ ಪಟ್ಟವೇ ಬೇಡ ಎನ್ನುತ್ತಿದ್ದರು. ಆದರೆ ಜಿ.ವಿ ಹಾಗೆ ಮಾಡಲಿಲ್ಲ. ಜಿದ್ದಿನಿಂದ ಓಡಾಡಿ ದಾನಿಗಳಿಂದ ಹಣ ಸಂಗ್ರಹ ಮಾಡಿದರು.

ಹಣಕಾಸು ಸಚಿವ ರಾಮಕೃಷ್ಣ ಹೆಗಡೆಯವರ ಮನ ಒಲಿಸಿ ಅನುದಾನವನ್ನೂ ಪಡೆದರು. ಎರಡು ಸಮ್ಮೇಳನ, ಪುಸ್ತಕ ಪ್ರಕಟಣೆ, ದಾಖಲೆ ಸಂಖ್ಯೆಯ ವಿಚಾರ ಸಂಕಿರಣಗಳನ್ನು ನಡೆಸಿಯೂ ಅವರು ಅಧ್ಯಕ್ಷ ಪಟ್ಟ ಬಿಡುವಾಗ ಪರಿಷತ್ತಿನಲ್ಲಿ ಅರವತ್ತೈದು ಸಾವಿರ ರೂಪಾಯಿಗಳ ಬ್ಯಾಲೆನ್ಸ್ಇತ್ತು. ಕನ್ನಡಿಗರ ಪಾಲಿಗೆ ಪರಿಷತ್ ಅನ್ನು ಉಳಿಸಿಕೊಟ್ಟ ಹೆಗ್ಗಳಿಕೆ ಅವರಿಗೇ ಸಲ್ಲಬೇಕು. ಪರಿಷತ್ತಿನ ಪುಸ್ತಕ ಭಂಡಾರಕ್ಕೆ ವ್ಯವಸ್ಥಿತ ರೂಪವನ್ನು ನೀಡಿ ಪರಿಷನ್ಮಂದಿರವನ್ನು ರೂಪಿಸಿದ್ದು ಅವರ ಸಾಧನೆಯೇ. ಕ.ಸಾ.ಪ. ನಿಘಂಟು ಸಮಿತಿಗೆ ಅವರು ಇಪ್ಪತ್ತು ವರ್ಷಗಳ ಕಾಲ ಪ್ರಧಾನ ಸಂಪಾದಕರಾಗಿದ್ದರು.

9,000 ಪುಟಗಳ ಶಬ್ದ ಭಂಡಾರವನ್ನು ಕಟ್ಟಿದ ಕೀರ್ತಿ ಅವರದು. ನಿಘಂಟು ಮತ್ತು ಜಿ.ವಿ ಎರಡೂ ಒಂದು ರೀತಿಯಲ್ಲಿ ಪರ್ಯಾಯ ಪದಗಳಾಗಿವೆ. ಅವರು ಕೆಲಸ ಮಾಡುವುದಕ್ಕೆ ಮೊದಲೇ ಕನ್ನಡದಲ್ಲಿ ನಿಘಂಟುಗಳು ಇದ್ದವಾದರೂ ಅದಕ್ಕೆ ವ್ಯವಸ್ಥಿತ ರೂಪ ಕೊಟ್ಟ ಹೆಗ್ಗಳಿಕೆ ಜಿ.ವಿ ಅವರದು. ಜಿ.ವಿ ನಿರ್ಮಾಣದಲ್ಲಿ ನಿಘಂಟುಗಳ ಪರಿವಾರವೇ ಇದೆ. ಎರವಲು ಪದಕೋಶ, ಪತ್ರಿಕಾ ಪದಕೋಶ, ನಿತ್ಯ ಉಪಯೋಗಕ್ಕೆ ‘ಕನ್ನಡ ಕನ್ನಡ ಸಂಕ್ಷಿಪ್ತ ನಿಘಂಟು’ ಸಾಧ್ಯತೆ ಅರಿಯಲು ‘ಇಗೋ ಕನ್ನಡ’ ಹೀಗೆ ವೈವಿಧ್ಯಮಯ ಕೊಡುಗೆ ಅವರದು. ಅದಲ್ಲದೆ ಅವರು ಸಾಹಿತ್ಯ ಚರಿತ್ರೆ ಬರೆದಿದ್ದಾರೆ, ಭಾಷಾಂತರ ಮಾಡಿದ್ದಾರೆ, ವ್ಯಕ್ತಿ ಚಿತ್ರಗಳನ್ನುಬರೆದಿದ್ದಾರೆ.

ತಮಿಳು, ತೆಲುಗು ಕಥೆಗಳನ್ನು ಸಂಪಾದಿಸಿಕೊಟ್ಟಿದ್ದಾರೆ. ನಳಚಂಪು, ಅಕ್ರೂರ ಚರಿತೆ, ಕರ್ಣಾಮೃತದಂತಹ ಅಪರೂಪದ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಜೆ.ಕೆ. ವಿಚಾರಗಳ ಕುರಿತು ‘ತಿಳಿದುದೆಲ್ಲವ ಬಿಟ್ಟು’ ಎಂಬ ವಿಶಿಷ್ಟ ಗ್ರಂಥ ರಚಿಸಿದ್ದಾರೆ. ಹೀಗೆ ಬರೆಯುತ್ತಾ ಹೋದರೆ ಅವರ ಕೃತಿಗಳ ಸಂಖ್ಯೆ ಮತ್ತು ವೈವಿಧ್ಯ ಬೆರಗು ಮೂಡಿಸುತ್ತದೆ. ಇದೆಲ್ಲದರ ಮೇಲೆ ಜಿ.ವಿ ಅತ್ಯುತ್ತಮ ಕ್ರೀಡಾಪಟು. ಮೊಮ್ಮಗಳು ಮಾನಸಾಳಿಗೆ ಅವರೇ ಬ್ಯಾಡ್ಮಿಂಟನ್ ಕೋಚ್. ಉತ್ತಮ ಈಜುಗಾರರಾಗಿದ್ದ ಅವರು ಕೇರಂನಲ್ಲಿಯೂ ಪರಿಣಿತರು. ಅಷ್ಟೇ ಅಲ್ಲ ಗುದ್ದಲಿ ಹಿಡಿದು ತೆಂಗು, ದಾಳಿಂಬೆ, ಸೀತಾಫಲ, ಗುಲಾಬಿ, ಮಲ್ಲಿಗೆ ಮೊದಲಾದವುಗಳನ್ನು ಬೆಳೆಸಿದ ತೋಟಗಾರರೂ ಕೂಡ ಹೌದು.

ಸ್ವತಃ ಶಬ್ದ ಭಂಡಾರವೇ ಆಗಿರುವ ಜೀವಿ ಕಿರಿಯರ ಭಾಷೆಯನ್ನೂ ತಿದ್ದುತ್ತಾ ಬಂದವರು. ಆದರೆ ಎಂದಿಗೂ ಕಟು ಮಾತುಗಳಲ್ಲಿ ಅಲ್ಲ. ಒಂದು ದಿವಸ ನನಗೆ ಜೀವಿ ಫೋನ್ ಮಾಡಿದರು. ನನ್ನ ಒಂದು ಲೇಖನದ ಕುರಿತು ಮಾತನಾಡುತ್ತಾ ‘ಲೇಖನ ಚೆನ್ನಾಗಿದೆ. ಆದರೆ ಅದರಲ್ಲಿ ಒಂದು ತಪ್ಪು ಇದೆ’ ಎಂದರು. ನಾನು ಅವರ ಮಾತಿಗೆ ಕಿವಿಯಾದಾಗ ‘ನೀವು ಮಹಿಳಾ ಲೇಖಕಿ ಎಂದು ಬರೆದಿದ್ದೀರಿ.. ಅದು ತಪ್ಪಾದ ಪ್ರಯೋಗ. ಲೇಖಕಿ ಎಂದರೆ ಸಾಕು, ಸಂಸ್ಕೃತದಲ್ಲಿ ಲೇಖಿಕಾ ಎನ್ನುವ ಪದವಿದೆ. ಅದು ಕನ್ನಡಕ್ಕೆ ಬಂದಾಗ ‘ಲೇಖಕಿ’ ಆಗುತ್ತದೆ’ ಇಷ್ಟು ಹೇಳಿ ಒಂದು ನಿಮಿಷ ತಡೆದು ‘ಎಲ್ಲಾದರೂ ಪುರುಷ ಲೇಖಕಿ ಇರುತ್ತಾರೇನಪ್ಪ’ ಎಂದು ನಕ್ಕರು. ಅದು ಅವರ ಸಹಜ ಹಾಸ್ಯ ಶೈಲಿ.

ಇಂತಹ ಎಷ್ಟೋ ತಪ್ಪುಗಳನ್ನು ಗುರುತಿಸಿ ನಮಗೆ ಕಲಿಸಿದವರು ಅವರು. ಕನ್ನಡ ಭಾಷೆಯ, ವ್ಯಾಕರಣದ ಸ್ವರೂಪದ ಕುರಿತು ಅವರು ಸದಾ ಚಿಂತಿಸುತ್ತಲೇ ಇದ್ದರು. ‘ಬೆಕ್ಕಿಗೆ ಜ್ವರ ಬಂದ ಹಾಗೆ’ ಎನ್ನುವ ಪ್ರಯೋಗದ ಕುರಿತು ಮಾತನಾಡುತ್ತಾ ‘ಅದು ತಪ್ಪಾದ ಪ್ರಯೋಗ ‘ಬೆಂಕಿಗೆ ಜ್ವರ ಬಂದ ಹಾಗೆ’ ಎನ್ನುವುದು ಸರಿಯಾದ ಪ್ರಯೋಗ. ಬೆಂಕಿ ಸ್ವತಃ ಧಗಧಗಿಸುತ್ತಿರುವಾಗ ಅದಕ್ಕೆ ಎಲ್ಲಿಂದ ಜ್ವರ ಬರಬೇಕು ಎನ್ನುವುದು ಅವರ ವಿವರಣೆ. ‘ಶಿವಪೂಜೆಯಲ್ಲಿ ಕರಡಿ ಬಿಟ್ಟ ಹಾಗೆ’ ಎಂದು ನಾವು ಹೇಳಿಬಿಡುತ್ತೇವೆ. ಅವರ ಪ್ರಕಾರ ಅದು ‘ಶಿವಪೂಜೆಯಲ್ಲಿ ಕರಡಿಗೆ ಬಿಟ್ಟ ಹಾಗೆ’ ಏಕೆಂದರೆ ಶಿವಪೂಜೆಯಲ್ಲಿ ಕರಡಿಗೆ ಬಹಳ ಮುಖ್ಯವಾದ ಅಂಗ. ಹೀಗೆ ಅವರ ಪ್ರತಿ ಭೇಟಿಯಲ್ಲಿಯೂ ನಾನು ಕಲಿಯುತ್ತಲೇ ಬಂದಿದ್ದೇನೆ.

ಭಾರತೀಯ ವಿದ್ಯಾಭವನ ನಾಡಿನ ಸಾಧಕರ ಕುರಿತು ಒಂದು ಪುಸ್ತಕಮಾಲೆ ರೂಪಿಸಿತು. ಅದಕ್ಕೆ ಪ್ರಧಾನ ಸಂಪಾದಕನಾಗುವ ಅದೃಷ್ಟ ನನ್ನದಾಗಿತ್ತು. ಈ ಮಾಲಿಕೆಯಲ್ಲಿ ಪ್ರೊ.ಜಿ.ವೆಂಕಟಸುಬ್ಬಯ್ಯನವರ ಕುರಿತು ಭಾರತಿ ಕಾಸರಗೋಡು ಪುಸ್ತಕ ಬರೆದರು. ಅದನ್ನು ಅವರು ಪರಿಷ್ಕರಿಸಿದ ರೀತಿ ನಮಗೆಲ್ಲರಿಗೂ ಮಾದರಿ ಆಗುವಂತಿತ್ತು. ತಮ್ಮ ಕುರಿತು ಇದ್ದ ಅತಿಶಯದ ಎನ್ನಿಸಬಲ್ಲ ಆದರೆ ವಾಸ್ತವವಾಗಿದ್ದ ಮಾತುಗಳನ್ನು ತೆಗೆದರು. ತಮಗೆ ಪ್ರೇರಣೆ ನೀಡಿದವರ ಕುರಿತು ವಿವರಣೆ ಸೇರಿಸಿದರು.

ಇನ್ನೇನು ಪುಸ್ತಕ ಮುದ್ರಣಕ್ಕೆ ಹೋಗಬೇಕು ಆಗ ಬಹು ಸಂಕೋಚದಿಂದಲೇ ಜೀ.ವಿ ಮೂರು ಪತ್ರಗಳನ್ನು ಅನುಬಂಧದ ರೂಪದಲ್ಲಿ ಸೇರಿಸಲು ಸಾಧ್ಯವೆ? ಎಂದು ಕೇಳಿದರು. ಯಾವುದು ಅಪ್ಪಣೆಯಾಗಬೇಕಿತ್ತೋ ಅಲ್ಲಿ ಕೇಳಿ ಅವರು ನಮಗೆ ಮಾದರಿ ಎನ್ನಿಸಿಕೊಂಡಿದ್ದರು. ಹೀಗೆ ಅವರು ನೀಡಿದ ಪತ್ರಗಳು ಅವರ ಗುರುಗಳಾದ ಬಿ.ಎಂ.ಶ್ರೀಕಂಠಯ್ಯ, ಎಂ.ವಿ.ಗೋಪಾಲಸ್ವಾಮಿ ಮತ್ತು ಜೆ.ಸಿ.ರೋಬೋ ಅವರು ಬರೆದ ಮೆಚ್ಚಿಗೆ ಪತ್ರಗಳಾಗಿದ್ದವು ‘ಯಾವ ಗೌರವಕ್ಕಿಂತಲೂ ಇದು ಹೆಚ್ಚಿನದು, ಅದು ತಮ್ಮ ಪಾಲಿನ ಚಿಂತಾಮಣಿ’ ಎಂದು ಅವರು ಹೇಳಿಕೊಂಡಿದ್ದರು. ಅವರು ಅಖಿಲ ಭಾರತ ಕನ್ನಡ ಸಾಹಿತ್ಯಸ ಮ್ಮೇಳನದ ಅಧ್ಯಕ್ಷರಾದಾಗ ನಾನು ‘ಮಂಗಳಾ’ ಪತ್ರಿಕೆಯ ಸಂಪಾದಕನಾಗಿದ್ದೆ.

ಸಂದರ್ಶನ ಎಲ್ಲರೂ ಮಾಡುತ್ತಾರೆ ನಮ್ಮಲ್ಲಿ ಅದರ ಜೊತೆಗೆ ನಿಮ್ಮ ಲೇಖನವೂ ಬೇಕು ಎಂದು ಕೇಳಿದೆ. ‘ನಿನಗೆ ಇಲ್ಲ ಎನ್ನಲು ಸಾಧ್ಯವೆ? ಮನೆಗೆ ಬಂದು ಬರೆದುಕೋ’ ಎಂದರು. ಆಗಲೇ ತೊಂಬತ್ತರ ಗಡಿ ದಾಟಿದ್ದ ಅವರು ಆರಿಸಿಕೊಂಡ ವಿಷಯ ‘ನಾನೇಕೆ ಬರೆಯುತ್ತೇನೆ’ ಅದಕ್ಕೆ ಅವರ ಉತ್ತರ ಕೂಡ ಸರಳವಾಗಿತ್ತು. ‘ಸಮಾಜದ ಋಣವನ್ನು ತೀರಿಸಲು’. ಭಾಷೆ ಎಂದರೆ ಅದು ಶಬ್ದಗಳಿಂದ ಕಟ್ಟಿದ ಕಟ್ಟಡ. ಶಬ್ದ ತಪ್ಪಾಗಿದ್ದರೆ ಭಾಷೆಯ ಕಟ್ಟಡ ಕುಸಿಯುತ್ತದೆ ಎಂದು ಆ ಲೇಖನದಲ್ಲಿ ಜಿ.ವಿ ಬರೆಸಿದ್ದರು. ಈ ಮಾತನ್ನು ಹೇಳುವಾಗ ‘ನನಗೆ ನಿಜಕ್ಕೂ ಕನ್ನಡದ ಭವಿಷ್ಯದ ಕುರಿತು ಆತಂಕವಿದೆ’ ಎಂದಿದ್ದರು. ಅಷ್ಟೇ ಅಲ್ಲ ಹೀಗೆ ಹೇಳುವಾಗ ಸ್ಪಷ್ಟವಾಗಿ ಅವರ ಕಣ್ಣಿನಲ್ಲಿ ನೀರು ಕಾಣಿಸಿಕೊಂಡಿತ್ತು. ಅದು ಅವರಿಗೆಭಾಷೆಯ ಕುರಿತು ಇದ್ದ ಕಾಳಜಿಗೆ ನಿದರ್ಶನ.

ಈ ಲೇಖನಕ್ಕೆ ಗೌರವ ಸಂಭಾವನೆ ಕೊಡಬೇಕು. ಜಿ.ವಿಯಂತಹ ಹಿರಿಯರಿಗೆ ನಮ್ಮ ಪತ್ರಿಕೆಯ ಚೌಕಟ್ಟಿನಲ್ಲಿ ದೊಡ್ಡ ಮೊತ್ತ ಕೊಡಲು ಅವಕಾಶ ಇರಲಿಲ್ಲ. ಪೇಚಾಡುತ್ತಲೇ ಕೇಳಿದಾಗ ಬೇಡ ಎನ್ನಲಿಲ್ಲ. ‘ಬೇರೆ ಲೇಖಕರಿಗೆ ಅನ್ವಯವಾಗುವುದೇ ನನಗೂ ಅನ್ವಯವಾಗಲಿ’ ಎಂದು ನಕ್ಕರು. ಆದರೆ ಗೌರವಧನ ಚೆಕ್ ಪಡೆದವರೇ ‘ಇದನ್ನು ನಿಮ್ಮ ಪತ್ರಿಕೆಗೆ ನನ್ನ ಚಂದಾ’ ಎಂದು ಇಟ್ಟುಕೋ’ ಎಂದು ನನಗೇ ಹಿಂದಿರುಗಿ ಕೊಟ್ಟು ಬಿಟ್ಟರು. ಜೀವನದಲ್ಲಿ ಯಾವುದು ಮುಖ್ಯ ಎನ್ನುವುದನ್ನು ಅವರು ನಿದರ್ಶನದ ಮೂಲಕ ತೋರಿಸಿಕೊಟ್ಟಿದ್ದರು.

ಅವರ ತೊಂಬತ್ತನೇ ವರ್ಷದ ಆಸುಪಾಸಿನಲ್ಲಿ ಎರಡೂ ಕಣ್ಣಿಗೂ ಕ್ಯಾಟರಾಕ್ಟ್ ಚಿಕಿತ್ಸೆಆಯಿತು. ನಂತರ ಕೂಡ ಅವರು ಓದುವುದನ್ನು ಬಿಡಲಿಲ್ಲ. ಕೊನೆಯವರೆಗೂ ಅವರು ವೃತ್ತಪತ್ರಿಕೆಗಳನ್ನು ಓದುತ್ತಿದ್ದರು. ಭಾನುವಾರದ ಪುರವಣಿಗೆ ಕಾಯುತ್ತಿದ್ದರು. ಭೇಟಿಯಾದಾಗಲೆಲ್ಲಾ ‘ಇತ್ತೀಚೆಗೆ ಚೆನ್ನಾಗಿ ಬರೆಯೋರು ಯಾರು?ʼ ಎಂದು ಕೇಳುತ್ತಿದ್ದರು. ಹೊಸ ಕವಿತೆ, ಕಥೆ ಓದಲು ಆಸಕ್ತರಾಗಿದ್ದರು. ಮತ್ತೆ ಮತ್ತೆ ಅವರು ಓದುತ್ತಿದ್ದದ್ದು ‘ಕುಮಾರವ್ಯಾಸ ಭಾರತ’ವನ್ನು. ಅದರ ಹಲವು ಪದ್ಯಗಳು ಅವರಿಗೆ ಕೊನೆಯವರೆಗೂ ನೆನಪಿನಲ್ಲಿಯೇ ಇದ್ದವು. ಓದುತ್ತಾ ಓದುತ್ತಾ ಭಾವ ಪರವಶರಾಗುತ್ತಿದ್ದರು. ಕಣ್ಣಿನಲ್ಲಿ ನೀರು ಜಿನುಗುತ್ತಿತ್ತು.

ಹೀಗೆ ನೆನಪುಗಳ ಸಾಲು ಸಾಲಾಗಿ ಕಾಡುತ್ತಿವೆ. ಮೂಕಿ ಚಿತ್ರಗಳು ಹೇಗಿದ್ದವು ಎಂದು ನನಗೆ ತಿಳಿಸಿದವರು ಜಿ.ವಿಯವರೇ. ಮೈಸೂರಿನಲ್ಲಿ ಈಗ ‘ಹೋಟೆಲ್ ದಾಸ್ ಪ್ರಕಾಶ್’ ಇರುವಲ್ಲಿ ಹಿಂದೆ ಒಲಂಪಿಯಾ ಎನ್ನುವ ಚಿತ್ರ ಮಂದಿರ ಇತ್ತಂತೆ. ಅಲ್ಲಿ ಅವರು ಭಕ್ತ ಪ್ರಹ್ಲಾದ, ರಾಜಸೂಯ ಯಾಗ, ಸುಭದ್ರಾ ಹರಣ ಮೂರು ಚಿತ್ರಗಳನ್ನು ನೋಡಿದ್ದರು. ಈ ಮೂರನ್ನೂ ಅವರು ಕಣ್ಣಿಗೆ ಕಟ್ಟಿದಂತೆ ವಿವರಿಸುತ್ತಲೂ ಇದ್ದರು. ನಾನು ಸದ್ಗುರು ಶಂಕರಲಿಂಗ ಭಗವಾನರ ಕುರಿತು ಸಂಶೋಧನೆ ಮಾಡುತ್ತಿದ್ದಾಗ ಜಿ.ವಿಯವರ ಬಳಿ ಈ ಮಾತ್ರ ಪ್ರಾಸಂಗಿಕವಾಗಿ ಬಂದಿತು. ಆಗ ಅಚ್ಚರಿಯ ಸಂಗತಿಯೊಂದು ಹೊರ ಬಂದಿತು.

ಜಿ.ವಿಯವರು ಶಂಕರಲಿಂಗ ಭಗವಾನರನ್ನು ಭೇಟಿ ಮಾಡಿದ್ದರು. ಅವರ ಉಪನ್ಯಾಸವನ್ನು ಕೇಳಿದ್ದರು. ಅಷ್ಟೇ ಅಲ್ಲ ಈ ಉಪನ್ಯಾಸ ಅವರ ನೆನಪಿನಲ್ಲಿ ಸ್ಪುಟವಾಗಿ ಉಳಿದಿತ್ತು. ಅದರ ಕುರಿತು ಮಾತಾಡುತ್ತಾ ಅವರು ‘ವ್ಯಕ್ತಿಗಳ ನೆನಪು ನಿಮ್ಮ ಮನದಲ್ಲಿ ಬೀಜವಾಗಿ ಇಳಿಯುತ್ತದೆ ಅದನ್ನು ಮರವಾಗಿ ಬೆಳೆಸುವುದು ನಮ್ಮ ಸಾಮಾಜಿಕ ಹೊಣೆ’ ಎಂದಿದ್ದರು. ಈಗ ಬೀಜವಾಗಿ ಜಿ.ವಿ ನನ್ನೊಳಗೆ ಇಳಿದಿದ್ದಾರೆ. ಅವರನ್ನು ಮರವಾಗಿ ಬೆಳಸುವ ಅರ್ಹತೆ ನನಗೆ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ನನ್ನೊಳಗಂತೂ ಸದಾ ಇರುತ್ತಾರೆ.

‍ಲೇಖಕರು Avadhi

April 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ನುಡಿಗಾರುಢಿಗನಿಗೆ ಎಷ್ಟೊಂದು ಒಳ್ಳೆಯ, ಸೂಕ್ತವಾದ ನೆನಪುಗಳ ಕಾಣಿಕೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: