ಸಂಗಮೇಶ ಮೆಣಸಿನಕಾಯಿ ನೆನಪು- ಹಾಗಾದರೆ ಒಂದು ಹಳಗನ್ನಡದ ಪದ್ಯ ಹೇಳ್ತೀರಾ?’

ಸಂಗಮೇಶ ಮೆಣಸಿನಕಾಯಿ

ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ ಅವರನ್ನು ೨೦೦೫ರಲ್ಲಿ ಬೆಂಗಳೂರಿನ ವಿಜಯ ಕರ್ನಾಟಕ ಕಚೇರಿಗೆ ಆಹ್ವಾನಿಸಲಾಗಿತ್ತು. ಭಾಷೆಯ ಬಳಕೆ, ಶಬ್ದಗಳ ಪ್ರಯೋಗ ಕುರಿತಂತೆ ಅವರೊಂದಿಗೆ ಸಂವಾದ. ನಾನೂ ಆಗ ಅಲ್ಲಿ ಉದ್ಯೋಗಿ. ನನಗೂ ಒಂದೆರಡು ಸಂದೇಹಗಳಿದ್ದವು. ‘ಶಿಕ್ಷಣ ತಜ್ಞ’ ಇಂಗ್ಲೀಷ್‌ನಲ್ಲಿ ಎಜುಕೇಶನಿಸ್ಟ್ ಒಂದೇ ಶಬ್ದ ಇರುವಂತೆ ಕನ್ನಡದಲ್ಲೂ ಸಾಧ್ಯವೇ ಎಂಬುದಕ್ಕೆ ‘ಶಿಕ್ಷಣಜ್ಞ’ ಎಂದು ಬಳಸಬಹುದು ಎಂಬುದಾಗಿ ಅಭಯವಿತ್ತಿದ್ದರು.

ಮುಂದೆ ೨೦೧೦ರಲ್ಲಿ ನಾನು ಆಕಾಶವಾಣಿ ಬೆಂಗಳೂರಿನ ಕಾರ್ಯಾವಕಾಶ ಸುದ್ದಿವಾಚಕ ಹುದ್ದೆಗೆ ಅರ್ಜಿ ಹಾಕಿ, ಸಂದರ್ಶನಕ್ಕೆ ಹಾಜರಾಗಿದ್ದೆ. ಅಲ್ಲಿ ಜಿ.ವಿ. ಅಯ್ಕೆ ಸಮಿತಿಯಲ್ಲಿದ್ದರು. ಅವರೇ ನಮಗೆ ಪ್ರಶ್ನೆ ಕೇಳುವವರು. ತುಂಬಾ ಖುಷಿಯಾಗಿತ್ತು.
‘ಮೆಣಸಿನಕಾಯಿ ಅವರೇ ಏನು ಓದಿದ್ದೀರಿ?’
‘ಸರ್ ಎಂ.ಎ., ಬಿ.ಎಡ್. ಹಿಂದಿ’
‘ಹಿಂದಿಯ ಯಾವುದಾದರೂ ಒಂದು ದೋಹಾ ಹೇಳಿ…’
(ನಾನು ಯಾವಗಾಲೂ ಗುಣಗುಣಿಸುವ) ‘ಜಾತಿ ನ ಪೂಛೊ ಸಾಧು ಕೀ ಪೂಛ್ ಲೀಜಿಯೆ ಗ್ಯಾನ್…’
‘ಕಬಿರ್ ಅವರ ‘ಸಬ್ ಧರತಿ ಕಾಗಜ್ ಕರೂಂ…’ ದೋಹೆಯ ಅರ್ಥ ಗೊತ್ತಾ?’
‘ಹೋ ಗೊತ್ತು ಸರ್, ಇಡೀ ಭೂಮಿಯನ್ನೇ ಕಾಗದವನ್ನಾಗಿ ಮಾಡಿ, ಅರಣ್ಯವನ್ನೆಲ್ಲ ಲೇಖನಿಯನ್ನಾಗಿ ಮಾಡಿ, ಸಮುದ್ರ ಸಂಪತ್ತನ್ನೆಲ್ಲ ಮಸಿಯನ್ನಾಗಿ ಮಾಡಿ ಬರೆದರೂ ಗುರುವಿನ ಗುಣಗಾನ ಮುಗಿಯದು…’

‘ಹಿಂದಿಯಲ್ಲೇನೋ ಸರಿ. ಕನ್ನಡ ಸಾಹಿತ್ಯ, ಭಾಷೆಯ ಬಗ್ಗೆ ನಿಮಗೆಷ್ಟು ಗೊತ್ತು?’
‘ಸದ್ಯ ಕನ್ನಡ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವೆ ಸರ್. ಅಲ್ಲಿ ಬೇಕಾಗುವಷ್ಟು ಭಾಷೆ ತಿಳಿದಿದೆ. ಸಾಹಿತ್ಯವನ್ನೂ ಅಷ್ಟಿಷ್ಟು ಓದಿರುವೆ, ಓದುತ್ತಿರುವೆ…’
‘ಹಾಗಾದರೆ ಒಂದು ಹಳಗನ್ನಡದ ಪದ್ಯ ಹೇಳ್ತೀರಾ?’
‘ಹೇಳ್ತೀನಿ ಸರ್…ಏನು ಹೇಳೈ ಕರ್ಣ ಚಿತ್ತ ಗ್ಲಾನಿ ಯಾವುದು ಮನಕೆ ಕುಂತಿ ಸೂನುಗಳ ಬೆಸಗೈಸಿಕೊಂಬುದು ಸೇರದೇ ನಿನಗೆ….’
(ಕುಮಾರವ್ಯಾಸನ ‘ಕರ್ಣಾಟಕ ಭಾರತ ಕಥಾಮಂಜರಿ’ಯ ಮೇಲಿನ ಪದ್ಯವನ್ನು ಥೇಟ್ ದೊಡ್ಡಾಟದ ಶೈಲಿಯಲ್ಲಿ ಜೋರು ದನಿಯಲ್ಲಿ ಹೇಳಿದ್ದೆ! ಆಕಾಶವಾಣಿಗೆ ಬೇಕಾದದ್ದು ನಮ್ಮ ಉಚ್ಛಾರಶುದ್ಧಿ ಎಂಬುದು ಧಾರವಾಡ, ಮಂಗಳೂರು, ಬೆಂಗಳೂರು ಆಕಾಶವಾಣಿ ಕೇಂದ್ರಗಳ ಅದುವರೆಗಿನ ಒಡನಾಟದಿಂದ ತಿಳಿದಿತ್ತು.)

‘ಮುಂದೆ ಏನು ಮಾಡಬೇಕು ಅಂತಿದಿರಿ?’
‘ಇಂಗ್ಲೀಷ್ ಪತ್ರಕರ್ತ ಅಗಬೇಕು ಅಂತ ಪ್ರಯತ್ನ ಮಾಡ್ತಿದೀನಿ ಸರ್…’
‘ಅರೆ…ಇದೊಳ್ಳೆ ಕತೆ ಅಯಿತಲ್ಲ…ಹಿಂದಿಯಲ್ಲಿ ಸ್ನಾತಕೊತ್ತರ ಪದವಿ ಪಡೆದಿದ್ದೀರಿ, ಕನ್ನಡ ಮನೆ ಭಾಷೆ-ಹೃದಯದ ಭಾಷೆ ಅಂತೀರಿ, ಮುಂದೆ ಇಂಗ್ಲೀಷ್ ಪತ್ರಿಕೋದ್ಯಮಕ್ಕೆ ಹೋಗ್ತೀನಿ ಅಂತೀರಿ…’
‘ಹೌದು ಸರ್…ತಮ್ಮಂಥವರ ಆಶೀರ್ವಾದ, ಮಾರ್ಗದರ್ಶನ ಇದ್ದರೆ ಯಾವುದೂ ಕಷ್ಟ ಅಲ್ಲ…’
‘ಖಂಡಿತ ನನ್ನ ಆಶೀರ್ವಾದ ಇದ್ದೇ ಇರತ್ತೆ…ಭಾಷೆಯನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುವ ಯುವಕರು ಇವತ್ತು ಕಡಿಮೆ ಇದ್ದಾರೆ. ಆ ಕಡಿಮೆ ಸಂಖ್ಯೆಯ ಯುವಕರಲ್ಲಿ ನೀವೂ ಒಬ್ಬರು…ಹೋಗಿ ಬನ್ನಿ…’

ಅವರ ಪ್ರಶ್ನೆಗಳನ್ನು ಎದುರಿಸಿದ ಅನೇಕರು ಸಪ್ಪೆ ಮೋರೆ ಹಾಕಿಕೊಂಡು ಹೊರಬರುವುದನ್ನು ಗಮನಿಸಿದ್ದೆ. ನಾನು ಮಾತ್ರ ಅವರ ಆಶೀರ್ವಾದ ಸಿಕ್ಕಿತಲ್ಲ ಅಂತ ಆನಂದದಿಂದ ಹೊರ ಬಂದಿದ್ದೆ!

ಮುಂದೆ ಆಕಾಶವಾಣಿಯ ಪ್ರಕ್ರಿಯೆ ಎಲ್ಲ ಮುಗಿದು ಫಲಿತಾಂಶ ಬರುವ ಹೊತ್ತಿಗೆ ನಾನು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ನ ವರದಿಗಾರನಾಗಿ ಬೆಳಗಾವಿಗೆ ಬಂದಿದ್ದೆ. ಟಿ.ಸಿ. ಪೂರ್ಣಿಮಾ ಅವರು ‘ಅಭಿನಂದನೆ ಸಂಗಮೇಶ್, ನೀವು ಇನ್ನು ವಾರಕ್ಕೊಮ್ಮೆ ಬಂದು ಪ್ರದೇಶ ಸಮಾಚಾರ ಓದಬಹುದು’ ಎಂದು ಕರೆ ಮಾಡಿ ಹೇಳಿದಾಗ, ‘ಆ ಅದೃಷ್ಟ ನನಗಿಲ್ಲ ಮೇಡಂ… ನಾನು ಬೆಳಗಾವಿಗೆ ಶಿಫ್ಟ್ ಆಗಿರುವೆ… ಸಾರಿ…’ ಎಂದಿದ್ದೆ.
ಜಿ.ವಿ.ಅವರಿಂದ ಸಂದರ್ಶನ ಎದುರಿಸಿದ ಕ್ಷಣಗಳು ಮಾತ್ರ ಇನ್ನೂ ಅಚ್ಚಹಸಿರು.

ಅವರು ಕನ್ನಡ ಭಾಷೆಗೆ, ಶಬ್ದಭಂಡಾರಕ್ಕೆ ನೀಡಿದ ಕೊಡುಗೆ ಅಜರಾಮರ!

‍ಲೇಖಕರು Avadhi

April 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: