’ಶಂಖದೊಳಗಿನ ಮೌನ’ – ಎಚ್ ಎಸ್ ವಿ ಹೊಸ ಕವಿತೆಗಳು

ಶೂನ್ಯ ಸಿಂಹಾಸನ

ಎಚ್.ಎಸ್.ವೆಂಕಟೇಶ ಮೂರ್ತಿ

ಈ ಭಾನುವಾರ ಅಂದರೆ ೨೩ ಜೂನ್ ರಂದು ಬಿಡುಗಡೆಯಾಗುತ್ತಿದ್ದೆ. ಅದರ ಆಹ್ವಾನ ಪತ್ರಿಕೆ ಇಲ್ಲಿದೆ :

ತಮ್ಮ ಹೊಸ ಕವಿತೆಗಳ ಸಂಗ್ರಹಕ್ಕೆ ಎಚ್ ಎಸ್ ವಿ ಬರೆದಿರುವ ಮುನ್ನುಡಿ ಅವಧಿ ಓದುಗರಿಗಾಗಿ

ಅಧಿಕಾರ ಎನ್ನುವುದು ಅಹಂಕಾರದ ಪ್ರತಿಮಾಸ್ವರೂಪ. ಅಲ್ಲಿ ಸ್ಥಿತರಾದವರು ಸ್ವಸ್ಥರಾಗಿ ಉಳಿಯುವುದು ಬಹು ಕಷ್ಟ. ನಮ್ಮ ಪುರಾಣ, ಇತಿಹಾಸ, ಕಾವ್ಯ ಹೇಗೋ ಹಾಗೇ ಸದ್ಯದ ವರ್ತಮಾನದಲ್ಲೂ ಅಧಿಕಾರಸ್ಥಲದ ದುರಂತಕಥನಗಳು ಮತ್ತೆ ಮತ್ತೆ ನಮ್ಮಲ್ಲಿ ಕಥಿತವಾಗಿವೆ. ಅಧಿಕಾರದಲ್ಲಿಟ್ಟು ಹೇಗೆ ಕಥೆ ಮುಗಿಸುವಿರಿ? ಆಗಲೇ ಆರಂಭ ಬದುಕಿನಣಕ-ಈ ಸಾಲುಗಳನ್ನು ನಾನು ಬರೆದದ್ದು 1981ರಲ್ಲಿ. ಶಿಶಿರದ ಪಾಡು ಎಂಬ ಕವಿತೆಯಲ್ಲಿ ಆದಿಕವಿ ವಾಲ್ಮೀಕಿಯ ಎದುರಲ್ಲಿ ಸೀತೆ ಈ ಪ್ರಶ್ನೆಯನ್ನು ಇಡುತ್ತಾಳೆ. ನಮ್ಮಲ್ಲಿ ಬಹಳ ಜನಕ್ಕೆ ಕುರ್ಚಿಯಲ್ಲಿ ಕುಳಿತುಕೊಳ್ಳುವುದು ಬರುವುದಿಲ್ಲ! ಎಂದು ಜಿ.ಎಸ್.ಎಸ್. ತಮಾಷೆಯಾಗಿ ಆಗಾಗ ಹೇಳುತ್ತಾ ಇದ್ದರು. ಬಹಳಷ್ಟು ವೇಳೆ ಕುರ್ಚಿಯಲ್ಲಿ ಕೂತು ಮೆರೆಯುವುದಕ್ಕೆ ಹಂಬಲಿಸುವುದು ಆತ್ಮಹೀನರೇ. ಕುರ್ಚಿಯಲ್ಲೂ ಕಾಲು ಮುದುರಿ ಕುಳಿತುಕೊಳ್ಳುವುದು ಕಷ್ಟಸಾಧ್ಯವಾದ ಕೆಲಸ. ಕೃಷ್ಣ ತನ್ನ ಜೀವಮಾನದ ಉದ್ದಕ್ಕೂ ಅಧಿಕಾರಸ್ಥಾನವನ್ನು ಅಲಂಕರಿಸಲೇ ಇಲ್ಲ.

ಆಧುನಿಕ ಕಾಲದ ಗಾಂಧಿ ಅಂತಹ ಇನ್ನೊಬ್ಬ ಮಹಾನ್ ವ್ಯಕ್ತಿ. ಭರತ ಸಿಂಹಾಸನದಲ್ಲಿ ಹದಿನಾಲಕ್ಕು ವರುಷ ಕುಳಿತು ಮೆರೆಯುವ ಅವಕಾಶ ಸಿಕ್ಕಾಗಲೂ ಸಿಂಹಾಸನವನ್ನು ಏರದೆ ತನ್ನ ಅಣ್ಣನ ಪಾದುಕೆಗಳನ್ನು ಅಲ್ಲಿ ಇರಿಸಿ ತನ್ನ ಆತ್ಮದ ಸಂಪನ್ನತೆಯನ್ನು ಉಳಿಸಿಕೊಂಡ. ಆತ್ಮದ ವಿಸ್ಮರಣೆಗೆ ಯಾರನ್ನಾದರೂ ಗುರಿಪಡಿಸಬೇಕೆಂದಿದ್ದರೆ ಅವರನ್ನು ಅಧಿಕಾರದ ಗದ್ದುಗೆಯಲ್ಲಿ ಕೂರಿಸಬೇಕು. ಅಧಿಕಾರಸ್ಥಲದಲ್ಲಿ ಇರುವಾಗ ನಾವು ನಾವಾಗಿ ಉಳಿಯುವುದಿಲ್ಲ. ಸರ್ವಶಕ್ತಿ, ಸರ್ವಾಧಿಕಾರ, ಸರ್ವಪ್ರಾತಿನಿಧ್ಯ ವ್ಯಕ್ತಿತ್ವವನ್ನು ಆವರಿಸುತ್ತದೆ. ಆಗ ಒಬ್ಬ ಮನುಷ್ಯ ಮತ್ಯಾರದ್ದೋ ಮಾತಾಡಲಿಕ್ಕೆ ಶುರುಮಾಡುತ್ತಾನೆ. ಶಂಖದೊಳಗಿನ ನಿಶ್ಶಬ್ದವನ್ನು ಶಬ್ದ ಹೊಡೆದೋಡಿಸುತ್ತದೆ.

ಆತ್ಮಹನನದ ಆರಂಭ ಶುರುವಾಗುವುದೇ ವ್ಯಕ್ತಿಯೊಬ್ಬ ಅಧಿಕಾರ- ಸ್ಥಲವನ್ನೇರಿದಾಗ. ಇಂಥ ಅಹಂಕಾರಸ್ಥಲದ ಮಹಾನ್ ಪ್ರತಿಮೆ-ದೆಹಲಿ. ಅದು ಹೊಸ್ತಿಲೂ ಹೌದು; ಹೃದಯವೂ ಹೌದು; ಆತ್ಮಕ್ಕೊಡ್ಡಿದ ಅಗ್ನಿದಿವ್ಯವೂ ಹೌದು. ಮಹಾಭಾರತ ಈ ಹೃದಯಸ್ಥಲದ ಕೋಲಾಹಲವನ್ನು ಕಥಿಸಿದೆ. ಎಷ್ಟು ಅಮಾನುಷ, ಎಷ್ಟು ಬರ್ಬರ ಈ ಅಹಂಕಾರ ಕೇಂದ್ರವೆಂಬುದು. ಸಿಂಹಾಸನವನ್ನೇರಿದ್ದೇ ತಡ ಎಂತೆಂಥವರು ಏನೇನೋ ಆಗಿಹೋಗುತ್ತಾರೆ. ದೊರೆಗಳು, ಚಕ್ರವರ್ತಿಗಳು, ಬಾದಶಾಗಳು, ರಾಷ್ಟ್ರಪ್ರಭುಗಳು… ಯಾರನ್ನೂ ಈ ಅಧಿಕಾರಸ್ಥಾನದ ಅಟ್ಟಣಿಗೆ ಸುಮ್ಮನೆ ಕೂಡುವುದಕ್ಕೆ ಬಿಟ್ಟಿಲ್ಲ. ಭಳಿರೇ ನನ್ನ ಸಮಾನರಾರು? ಎನ್ನುವುದೇ ಒಡ್ಡೋಲಗ ಕೊಡುವವರ ಮೊಟ್ಟಮೊದಲ ಆತ್ಮಾಭಿವ್ಯಕ್ತಿ! ಈ ಸ್ವರ್ಣಸಿಂಹಾಸನವನ್ನು ಹತ್ತುವುದು ಇಳಿಯುವುದು ಸೂರ್ಯಾಸ್ತ ಸೂರ್ಯೋದಯಗಳ ಒಂದು ಪ್ರಾಕೃತಿಕ ಪ್ರತಿಮೆ. (ದ್ಯುಮಣಿ ಕರ್ಣದ್ಯುಮಣಿ ಸಹಿತಸ್ತಮಿಸಿದನು!).

ಸರ್ವಾಧಿಕಾರಿ ದುರ್ಯೋಧನನ ಸಿಂಹಾಸನದ ಗೊಣಸು ಯೋಗಪುರುಷ ಕೃಷ್ಣನೆದುರು ಭಗ್ನಗೊಂಡಿದ್ದು ಎಷ್ಟು ಸಾಂಕೇತಿಕವಾಗಿದೆ! ದೇವರೇ ಸಮಯ ಕೇಳಿದರೂ ದುರ್ಯೋಧನ ನಾಳೆ ಕಾಣಿಸಿಕೊಂಬೆವು ಎಂದು ಉದ್ಧಟತನ ತೋರಿಸುತ್ತಾನೆ. ಸಮಯಾಸಮಯವಿರದ ಕಾಲಪುರುಷನಿಗೂ ಕಾಲದ ತೊಡಕು! ತಮ್ಮ ಅಧಿಕಾರಸ್ಥಾನವನ್ನು ಆತ್ಮದ ಧ್ಯಾನಪೀಠ ಮಾಡಿಕೊಂಡವರು ನಮ್ಮಲ್ಲಿ ಬಹಳ ಕಮ್ಮಿ. ಆದರೆ ಕೃಷ್ಣನಂಥವರು ಇದ್ದೇ ಇದ್ದಾರೆ. ಭರತನಂಥವರೂ ಇದ್ದಾರೆ. ದೆಹಲಿಯ ಒಬ್ಬ ದೊರೆ ಸುಲ್ತಾನನಾದ ಮೇಲೂ ಸಿಂಹಾಸನವನ್ನು ಹತ್ತಿ ಯಾವತ್ತೂ ಕುಳಿತುಕೊಳ್ಳಲಿಲ್ಲ. ದೇಹದ ದುರಭಿಮಾನವನ್ನು ಕಳಚದೆ ಇದು ಅಸಾಧ್ಯ. ಬಳೆಗಾರ ತನ್ನ ಆಸನವನ್ನು ತಾನೇ ಎತ್ತಿಕೊಂಡು ಓಡಾಡುತ್ತಾನೆ. ಅದು ತಾನು ಕುಳಿತುಕೊಳ್ಳುವುದಕ್ಕಲ್ಲ. ತನ್ನ ಮಲ್ಲಾರವನ್ನು ಇಡಲಿಕ್ಕಾಗಿ. ಮಲ್ಲಾರ ಆತನಿಗೆ ಅನ್ನಕೊಡುತ್ತಿರುವ ತಾಯಿ. ಪೀಠದ ಗೌರವ ಆಕೆಗೆ ಮಾತ್ರ; ತನಗಲ್ಲ. ನಮ್ಮಲ್ಲಿ ಮಹಾಕಾವ್ಯಗಳನ್ನು ಇಡುವ ಆಸನಕ್ಕೆ ವ್ಯಾಸಪೀಠ ಎಂದು ಕರೆಯುತ್ತಾರೆ.

ಅದೊಂದು ಪೀಠವಲ್ಲದ ಪೀಠ. ಅಲ್ಲಿ ಕೃತಿ ಕೂಡಬಹುದಲ್ಲದೆ ಕೃತಿಕಾರನಲ್ಲ. ಯೋಗದಲ್ಲಿ ನಾವು ಆಸನ ಎಂಬ ಮಾತು ಬಳಸುತ್ತೇವೆ. ಆಸನ ಎನ್ನುವುದು ಕೂಡುವುದಕ್ಕಿರುವ ವ್ಯವಸ್ಥೆ. ಆತ್ಮದ ಕೂಡುವ ವ್ಯವಸ್ಥೆ ದೇಹವೇ ಆಗಿದೆ. ಸಿಂಹಾಸನವೋ ದೇಹದ ಕೂಡುಸ್ಥಳ; ಆತ್ಮದ್ದಲ್ಲ. ತನ್ನ ದೇಹವನ್ನೇ ತನ್ನ ಆಸನ ಮಾಡಿಕೊಳ್ಳುವುದು ನಿರಹಂಕರಣದ ಮಹಾನ್ ಪ್ರತಿಮೆಯಾಗಿದೆ. ಕಲ್ಲು ಲೋಹ ಮರಗಳಿಂದ, ದೇಹಗಳು ಅಸ್ವಸ್ಥಗೊಳ್ಳುವ ಆಸನಗಳನ್ನು ನಾವು ನಿರ್ಮಿಸುತ್ತಿರುವುದು. ಸಿಂಹಾಸನದ ಶೂನ್ಯಸ್ಥಿತಿಯನ್ನು ನಮ್ಮ ವಚನಕಾರರು ಕಲ್ಪಿಸಿದ್ದಾರೆ. ಇದು ಒಂದು ಆತ್ಮಿಕ ನೆಲೆ. ಬಿಜ್ಜಳನೆಂಬ ರಾಜನ ಅಧಿಕಾರಸ್ಥಲದ ಎದುರು ನಿಲ್ಲಿಸಿದ ನಿರಧಿಕರಣ ಸ್ಥಲ. ರಾವಣನೆದುರು ಕುಳಿತ ಮಾರುತಿ, ದುರ್ಯೋಧನನ ಎದುರು ಕುಳಿತ ಶ್ರೀಕೃಷ್ಣ, ಸಿಂಹಾಸನಕ್ಕೆ ಎದುರಾಗಿ ಇರಿಸಿದ ಶೂನ್ಯ ಸಿಂಹಾಸನ ಹೊಸದೊಂದು ಪ್ರತಿಮಾಲೋಕಕ್ಕೇ ನಮ್ಮನ್ನು ಕೊಂಡೊಯ್ಯುವಂತಿವೆ. `ಶಂಖದೊಳಗಿನ ಮೌನ’ದ ಕವಿತೆಗಳು-ಆಕ್ರಾಂತ ದೆಹಲಿಯನ್ನೂ ಒಳಗೊಂಡು-ಇಂಥ ಪ್ರತಿಮಾಲೋಕದ ನಿರ್ಮಾಣದ ಯತ್ನಗಳಾಗಿವೆ.

ಸಂಗ್ರಹದ ಬಹುಪಾಲು ಕವಿತೆಗಳನ್ನು ನಾನು ಬರೆಬರೆದಂತೆ ಓದಿ, ವಿಮರ್ಶಿಸಿ, ಸಹಕರಿಸಿದ ಹಿರಿಯರಾದ ಡಾ| ಯು.ಆರ್.ಅನಂತಮೂರ್ತಿ, ಗೆಳೆಯರಾದ ಬಿ.ಆರ್.ಲಕ್ಷ್ಮಣರಾವ್, ನರಹಳ್ಳಿ, ಎಚ್.ಎಸ್.ಆರ್, ಎಸ್.ಆರ್.ವಿಜಯಶಂಕರ, ಕೆ. ಸತ್ಯನಾರಾಯಣ, ಎಂ.ಆರ್.ದತ್ತಾತ್ರಿ ಮೊದಲಾದ ಆತ್ಮೀಯರಿಗೆ ಕೃತಜ್ಞನಾಗಿದ್ದೇನೆ.

ಈ ಸಂಗ್ರಹದ ಪ್ರಕಟಣೆಯ ಹಿಂದೆ ಇರುವ ಪ್ರಿಯ ಮಿತ್ರರಾದ ಶ್ರೀಧರ, ಸದಭಿರುಚಿಯ ಪ್ರಕಾಶಕ ಮಿತ್ರರಾದ ಶ್ರೀ ಪ್ರಾಣೇಶ, ಕಲಾವಿದ-ಕವಿ ರಘು ಅಪಾರ, ಈಚಿನ ದಿನಗಳಲ್ಲಿ ನನ್ನ ಭಾವಲೋಕವನ್ನು ಶ್ರೀಮಂತಗೊಳಿಸುತ್ತಿರುವ ಅಭ್ಯಾಸದ ಆತ್ಮೀಯ ಗೆಳೆಯರು-ಇವರನ್ನು ಇಲ್ಲಿ ನೆನೆಯುವುದು ನನ್ನ ಕರ್ತವ್ಯವಾಗಿದೆ.

‍ಲೇಖಕರು avadhi

June 18, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. G Venkatesha

    Munnudiye ishtu svarasyadindiruvaaga, kavithegalu inneshtu svaarasyavo????. Tappade kondu Oduve.

    ಪ್ರತಿಕ್ರಿಯೆ
  2. na.. damora shetty

    krithi bidugadeya dina mangaluralli kulitu samagra karyakramavannu uuhisi meluku haakuve. shubhahaaraikegalu.

    ಪ್ರತಿಕ್ರಿಯೆ
  3. narayan raichur

    “shankhadoligina mauna” hesare chennagide- munnudu koodaa!! ; khandita baruve
    yechesvee savi maatu saviyalu –
    narayana raichur.

    ಪ್ರತಿಕ್ರಿಯೆ
  4. ಸುಬ್ಬಣ್ಣ ಮತ್ತೀಹಳ್ಳಿ.

    ಹಾರ್ದಿಕ ಶುಭಾಶಯಗಳು ಸರ್ ತಮಗೆ. ಮತ್ತು ತಮ್ಮ ತಾಯಿಯವರಿಗೆ.

    ಪ್ರತಿಕ್ರಿಯೆ
  5. J.S.Ganjekar

    ಹಾರ್ದಿಕ ಶುಭಾಶಯಗಳು ಸರ್ ತಮಗೆ. ಮತ್ತು ತಮ್ಮ ತಾಯಿಯವರಿಗೆ.”ಶಂಖದೊಳಗಿನ ಮೌನ”-ಹೆಸರು ತುಂಬಾ ಚನ್ನಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: