’ಬಿಗ್ ‍ಬಾಸ್ ನಂಗಿಷ್ಟ’ – ಶಾಂತಾ ನಾಗರಾಜ್ ಬರೀತಾರೆ

ಶಾಂತಾ ನಾಗರಾಜ್

ಕನ್ನಡದ ಟಿ.ವಿ.ವಾಹಿನಿಯಲ್ಲಿ ಬಿಗ್‍ಬಾಸ್ ಕಾರ್ಯಕ್ರಮ ಪ್ರಸಾರವಾಗುತ್ತಿದ್ದಂತೇ ‘ಸುಧಾ’ಪತ್ರಿಕೆಯ ‘ಜಾಣರಪುಟ’ದಲ್ಲಿ ಅದರ ವಿರುದ್ಧ ದ್ವನಿಗಳು ಕೇಳಿಬರತೊಡಗಿದವು. ಕನ್ನಡಿಗರಿಗೆ ಇದು ಬೇಕಾ? ಕನ್ನಡ ಸಂಸ್ಕೃತಿಗೆ ಇದು ಸಲ್ಲದು, ಇವರೆಲ್ಲ ಮಲಗುವುದು, ತಿನ್ನುವುದು, ಜಗಳವಾಡುವುದನ್ನು ನಾವ್ಯಾಕೆ ನೋಡಬೇಕು? ಇತ್ಯಾದಿ ಇತ್ಯಾದಿ. ಆದರೆ ದಿನದಿನಕ್ಕೂ ಬಿಗ್‍ಬಾಸ್‍ನ ಟಿ.ಆರ್.ಪಿ ಹೆಚ್ಚುತ್ತಲೇ ಹೋಯಿತು. ಈ ‘ಜಗಳವಾಡುವುದು’ ಎನ್ನುವುದಿದೆಯಲ್ಲ ಅದೇ ಬಿಗ್‍ಬಾಸ್‍ನ ಮೂಲ ಮಂತ್ರ. ಉದಾಹರಣೆಗೆ – ನೀವು ನಿಮ್ಮ ಮನೆಯಲ್ಲೇ ಕುಳಿತು ನಿಮ್ಮಷ್ಟಕ್ಕೆ ಓದುವುದೋ, ಟಿವಿ ನೋಡುವುದೋ ಮಾಡುತ್ತಿರುತ್ತೀರಿ. ನಿಮ್ಮ ಮನೆಯ ರಸ್ತೆಯಲ್ಲಿ ವಾಹನಗಳ ಹಾರನ್, ಜನರ ಮಾತುಗಳು ಮುಂತಾಗಿ ಕೇಳುತ್ತಿದ್ದರೂ ನೀವು ಆ ಶಬ್ದದ ಬಗ್ಗೆ ವಿಚಲಿತರಾಗದೇ ನಿಮ್ಮ ಕೆಲಸವನ್ನು ಮುಂದುವರೆಸುತ್ತೀರಿ. ಅದೇ ರಸ್ತೆಯಲ್ಲಿ ಯಾರೋ ಇಬ್ಬರು ಜೋರು ಧ್ವನಿಯಲ್ಲಿ ಕಿರುಚಾಡಲು ಶುರು ಮಾಡಿದರೆ, ಅ ಜಗಳದ ಮಾತಿನ ಹಿಂದೆಯೇ ಧಪ್ ಧಪ್ ಎಂದು ಹೊಡೆತದ ಶಬ್ದವೂ ಕೇಳಿಸಿದರೆ ನೀವು ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಅದೇನೆಂದು ನೋಡಲು ಓಡುತ್ತೀರಿ ತಾನೆ? ಇದು ಮನುಷ್ಯನ ಮೂಲ ಗುಣಗಳಲ್ಲಿ ಒಂದು. ನಮ್ಮಲ್ಲಿ ಎರಡು ಬಗೆಯ ಕುತೂಹಲವಿರುತ್ತದೆ.

ಒಂದು ಊರ್ಧ್ವಗಾಮಿ ಕುತೂಹಲ. ಈ ಕುತೂಹಲವನ್ನು ತಣಿಸಲು ಮನುಷ್ಯ ಒಳ್ಳೆಯ ಅಡುಗೆಯ ಪ್ರಯೋಗದಿಂದ ಹಿಡಿದು ಚಂದ್ರನ ಮೇಲೆ ಕಾಲಿಡುವವರೆಗೆ ಹೊಸ ಆವಿಷ್ಕಾರಗಳನ್ನು ಮಾಡುತ್ತಲೇ ಹೋಗುತ್ತಾನೆ. ಎರಡನೆಯದೇ ಅಧೋಗಾಮಿ ಕುತೂಹಲ. ಇದನ್ನು ಆಡುಮಾತಿನಲ್ಲಿ ‘ಕೆಟ್ಟಕುತೂಹಲ’ ಎಂದೂ ಹೇಳುತ್ತೇವೆ.ಇದು ಮೆದುಳಿಗೆ ಬೇಕಾದ ಮನರಂಜನೆಯನ್ನು ಬಯಸುತ್ತದೆ. ಎರಡೂ ಕುತೂಹಲವೂ ನಮಗೆ ಅಗತ್ಯವೇ. ಆದರೆ ಯಾರಲ್ಲಿ ಅದು ಯಾವ ಮಟ್ಟದಲ್ಲಿರುತ್ತದೆ ಎನ್ನುವುದರ ಮೇಲೆ ವ್ಯಕ್ತಿಯ ವ್ಯಕ್ತಿತ್ವ ನಿಲ್ಲುತ್ತದೆ.ಐನ್‍ಸ್ಟೀನ್, ಸರ್.ಎಂ. ವಿಶ್ವೇಶ್ವರಯ್ಯ, ಸರ್. ಸಿ.ವಿ.ರಾಮನ್ ಇಂಥವರಲ್ಲಿ ಒಳ್ಳೆಯ ಕುತೂಹಲ ಅಧಿಕವಾಗಿದ್ದ ಕಾರಣಕ್ಕೇ ಅವರೆಲ್ಲಾ ಜಗತ್ಪ್ರಸಿದ್ಧರಾದರು. ನಾವೆಲ್ಲಾ ಸಾಧಾರಣರು, ನಮ್ಮಲ್ಲಿ ಸಾಧಾರಣ ಮಟ್ಟದ ಕೆಟ್ಟಕುತೂಹಲವಿರುವುದರಿಂದಲೇ ಟಿ.ವಿಗೆ ಅಂಟಿಕೊಳ್ಳುತ್ತೇವೆ. ನಮ್ಮನ್ನು ತಣಿಸಲು ಮತ್ತು ತಮ್ಮ ಬೊಕ್ಕಸವನ್ನು ಹೇರಳವಾಗಿ ತುಂಬಿಕೊಳ್ಳಲು ವಾಹಿನಿಯವರು ಹೊಸಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಅದರಲ್ಲಿ ಬಿಗ್‍ಬಾಸ್ ಸಹ ಒಂದು.

ನನ್ನ ದೃಷ್ಟಿಯಲ್ಲಿ ಬಿಗ್‍ಬಾಸ್ ನೋಡಲು ಯೋಗ್ಯವಾದ ಕಾರ್ಯಕ್ರಮ. ಯಾರೋ ಒಬ್ಬರ ತಲೆಯಲ್ಲಿ ಹುಟ್ಟಿದ ಕಥೆ ಮತ್ತು ಪಾತ್ರಗಳು ಅಸಹಜತೆಯ ಸ್ವರೂಪವನ್ನು ಪಡೆದುಕೊಳ್ಳುತ್ತಾ, ತರ್ಕಕ್ಕೆ ನಿಲುಕದಂತಹ ವಿಕೃತ ಭಾವ ಮತ್ತು ಕುರೂಪ ಧೋರಣೆಗಳನ್ನು ಅತಿರಂಜಿತವಾಗಿ, ಓವರ್ ಆಕ್ಟಿಂಗ್ ರೂಪದಲ್ಲಿ ಧಾರಾವಾಹಿಯಾಗಿ ವರ್ಷಗಟ್ಟಲೇ ಎಳೆಯುವುದೂ, ಹಾಸ್ಯದ ಹೆಸರಿನಲ್ಲಿ ಅಪಹಾಸ್ಯ, ಹಳಸಲು ಹಾಸ್ಯ ಮತ್ತು ಕುಚೇಷ್ಟೆಗಳನ್ನು ಒಳಗೊಂಡ ಕಾರ್ಯಕ್ರಮಗಳಿಗಿಂತ ಬಿಗ್‍ಬಾಸ್ ಹೆಚ್ಚು ಸಹಜವಾಗಿದೆ. ಏಕೆಂದರೆ ಅವರ ಕೋಪವಾಗಲೀ, ಅಳುವಾಗಲೀ, ನಗುವಾಗಲೀ, ಜಗಳವಾಗಲೀ ಯಾರೂ ಮೊದಲೇ ನಿರ್ಧರಿಸಿದ್ದೂ ಅಲ್ಲ, ಬರೆದುಕೊಟ್ಟ ಸಂಭಾಷಣೆಗಳೂ ಅಲ್ಲ. ಅಲ್ಲಿ ಬಾಟಲ್ ಗಟ್ಟಲೇ ಗ್ಲಿಸರಿನ್ ಸುರಿದರೂ ಬರದ ಕಣ್ಣೀರು ಇಲ್ಲಿ ಕೋಡಿಯಾಗಿ ಹರಿಯುತ್ತದೆ. ಅಲ್ಲಿ ಅತಿರಂಜಿತ ಮೇಕಪ್ ಮತ್ತು ವೇಷಭೂಷಣಗಳಿಗೂ, ಅತಿ ಕಳಪೆಮಟ್ಟದ ಸಂಭಾಷಣೆಯನ್ನು ವಿಕಾರವಾಗಿ ಉದುರಿಸುತ್ತಾ ಆಡುವ ಜಗಳಕ್ಕೂ ಒಂದಕ್ಕೊಂದು ಹೊಂದಾಣಿಕೆಯಾಗದೇ ವಿಚಿತ್ರವೆನಿಸುತ್ತದೆ. ಆದರೆ ಇಲ್ಲಿ ಮನದಾಳದಿಂದ ಹೊರಹೊಮ್ಮುವ ಸಿಟ್ಟು, ಅಸಹಾಯಕತೆ ಜಗಳದ ರೂಪ ಪಡೆದಾಗ ಅರ್ಥಪೂರ್ಣವೆನಿಸುತ್ತದೆ. ಬಿಗ್‍ಬಾಸ್ ಕೊಡುವ ಟಾಸ್ಕ್‌‍ಗಳನ್ನು ಅವರು ಕೈಗೊಳ್ಳುವಾಗ ನಡೆಯುವ ಅವಾಂತರಗಳು ಸಹಜ ನಗುವನ್ನು ಉಕ್ಕಿಸುತ್ತದೆ. ಅದಕ್ಕೇ ಅದು ಹೃದಯಕ್ಕೆ ಹತ್ತಿರವೂ ಆಗುತ್ತದೆ. ದಿನಗಳೆದಂತೆ ಬಿಗ್‍ಬಾಸ್ ಮನೆಯ ಜನ ನಮ್ಮದೇ ಮನೆಯ ಜನರಾಗಿ ಹೋಗುತ್ತಾರೆ.

ಬಿಗ್‍ಬಾಸ್ ಕಾರ್ಯಕ್ರಮ ನಮ್ಮಂತಹ ಆಪ್ತಸಲಹಾಗಾರರಿಗೆ ಅತಿ ಕುತೂಹಲದ ವಿಷಯವೂ ಆಗುತ್ತದೆ. ಏಕೆಂದರೆ ನಾವು ಕೆಲಸ ಮಾಡುವುದೇ ಮನುಷ್ಯರ ಭಾವನೆಗಳ ಏರಿಳಿತದ ಜೊತೆ. ಬಿಗ್‍ಬಾಸ್ ಮನೆಯಲ್ಲಿ ಭಾವನೆಗಳ ಏರಿಳಿತದ ಮಹಾಪೂರವೇ ಹರಿಯುತ್ತಿರುತ್ತದೆ. ಈ ಕಾಲದ ಎಲ್ಲ ಮಾನವಜೀವಿಗಳಿಗೂ ಕೈತುಂಬಾ ಕೆಲಸ ಮತ್ತು ಮನದ ತುಂಬಾ ವಿಚಾರಧಾರೆಗಳು ಅನಿವಾರ್ಯವೇ ಆಗಿಹೋಗಿದೆ. ಹೆಚ್ಚೇನಿಲ್ಲ ಒಂದು ಐವತ್ತು ವರ್ಷಗಳ ಹಿಂದೆ ಇದ್ದ ಸಾಮಾಧಾನದ, ವಿಶ್ರಾಂತದ, ನಿಧಾನಿಸಿ ನೋಡುವ ಮನಃಸ್ಥಿತಿ ಈಗ ಯಾರಲ್ಲೂ ಇಲ್ಲವೆನ್ನುವ ಸತ್ಯ ನಮಗೆಲ್ಲರಿಗೂ ತಿಳಿದೇ ಇದೆ. ಓಟದ ಶೈಲಿ ನಮ್ಮ ಬದುಕಿನ ಭಾಗವೇ ಆಗಿಹೋಗಿದೆ. ಆದರೆ ನೋಡಿ ಬಿಗ್‍ಬಾಸ್ ಮನೆಯಲ್ಲಿ ಯಾರಿಗೂ ಇಂಥಾ ವೇಗ ಆವೇಗಗಳ ಅಗತ್ಯವಿಲ್ಲ. ಆಹಾರದಿಂದ ಹಿಡಿದು ಎಲ್ಲ ಮೂಲ ಸೌಕರ್ಯಗಳ ಏರ್ಪಾಟು ಸಮೃದ್ಧವಾಗಿಯೇ ಇವೆ. ಕೈಯ್ಯಲ್ಲಿ ಮಾಡಲು ಕೆಲಸವೇನೂ ಇಲ್ಲ. ಆದರೂ ಅವರು ಯಾರೂ ಸಮಾಧಾನ ಚಿತ್ತರಾಗಿಲ್ಲ. ಹೊರಗಿರುವ ನಮಗಿಂತಾ ಹೆಚ್ಚು ವಿಚಲಿತರಾಗಿ ಕಾಣುತ್ತಾರೆ. ಯಾಕೆಂದರೆ ನಮಗೆಲ್ಲ ದಿನನಿತ್ಯದ ಬದುಕಿಗೂ ಸಣ್ಣಸಣ್ಣ ಗುರಿಗಳಿವೆ. ಅವರಿಗೋ ನೂರುದಿನಗಳ ಕಾಲ ಗುರಿಯಿಲ್ಲದ ಬದುಕು! ಯಾರೋ ಎಬ್ಬಿಸಿದಾಗ ಏಳಬೇಕು, ಯಾರೋ ಹೇಳಿದ ಹಾಗೆ ಕುಣಿಯಬೇಕು. ಅಲ್ಲದೇ ಎಲ್ಲರಿಗೂ ಕೊನೆಯವರೆಗಿನ ಉಳಿವಿಗಾಗಿ ಹೋರಾಟ ಅನಿವಾರ್ಯವಾದ ಕಾರಣ ಒಬ್ಬರು ಮತ್ತೊಬ್ಬರ ಕಾಲೆಳೆಯಲು ಸದಾ ಹೊಂಚು ಹಾಕುತ್ತಲೇ ಇರುತ್ತಾರೆ. ಮತ್ತು ಒಬ್ಬರು ಮತ್ತೊಬ್ಬರನ್ನು ಗುಮಾನಿಯಿಂದಲೇ ಗಮನಿಸುತ್ತಾರೆ!

ಅಧ್ಯಾತ್ಮದ ದೃಷ್ಟಿಯಲ್ಲೂ ಬಿಗ್‍ಬಾಸ್ ಕಾರ್ಯಕ್ರಮವನ್ನು ವೀಕ್ಷಿಸಬಹುದು ಎಂದರೆ ನಿಮಗೆಲ್ಲಾ ಆಶ್ಚರ್ಯವಾಗುತ್ತದೇನೋ. ಎಲ್ಲ ಧರ್ಮಗ್ರಂಥಗಳೂ ಹೇಳುವುದೇನು? ‘ನಿನ್ನ ಕರ್ಮವನ್ನು ನೀನು ಮಾಡು. ಕೆಲಸದಲ್ಲಿ ಪರಿಶ್ರಮ ಮತ್ತು ಬದ್ಧತೆ ಇರಿಸು. ಫಲಾಫಲಗಳನ್ನು ಭಗವಂತ ಕರುಣಿಸುತ್ತಾನೆ’ ಎಂದಲ್ಲವೇ? ಇದನ್ನೇ ಬಸವಣ್ಣನವರು ಸರಳ ಸುಂದರವಾಗಿ ‘ಕಾಯಕವೇ ಕೈಲಾಸ’ ಎಂದರು. ಈ ಸಂದರ್ಭದಲ್ಲಿ ಪ್ರಸಿದ್ಧ ಪಾಶ್ಚಾತ್ಯ ಕಥೆಯೊಂದನ್ನು ಉಲ್ಲೇಖಿಸಬಹುದು. ಒಬ್ಬ ಪ್ರಸಿದ್ಧ ಹಣವಂತ ಹಿರಿಯ ಲಾಯರ್ ಏರ್ಪಡಿಸಿದ ಪಾರ್ಟಿಯಲ್ಲಿ ಒಬ್ಬ ತರುಣ ಬುದ್ಧಿವಂತ ಮತ್ತು ಆಗತಾನೆ ಲಾಯರ್ ಗಿರಿಗೆ ಪ್ರವೇಶ ಪಡೆದ ವ್ಯಕ್ತಿ ಆಗಮಿಸುತ್ತಾನೆ. ಪಾರ್ಟಿಯ ಕಳೆ ಏರಿದಂತೆ ಅಭ್ಯಾಗತ ಹಿರಿಯನಿಗೂ ಈ ತರುಣನಿಗೂ ಅಂದೇ ಹೊರಬಂದ ಒಂದು ಕೋರ್ಟ್ ತೀರ್ಪಿನ ಬಗ್ಗೆ ವಾಗ್ವಾದ ಶುರುವಾಗಿ ಬಾಜಿಕಟ್ಟುವವರೆಗೂ ಹೋಗಿ ತಲುಪುತ್ತದೆ.

ಹಿರಿಯ ಹೇಳುತ್ತಾನೆ ” ನನ್ನ ಮನೆಯ ಕೋಣೆಯಲ್ಲಿ ನೀನು ಬಂಧಿತನಾಗಬೇಕು. ನೀನು ಕೇಳಿದ್ದನ್ನೆಲ್ಲಾ ಒದಗಿಸುತ್ತೇನೆ ಆದರೆ ಯಾರನ್ನೂ ನೋಡುವಂತೆ ಇಲ್ಲ. ಹಾಗೆ ಒಂದು ವರ್ಷ ಇದ್ದೆಯಾದರೆ ನನ್ನ ಸಮಸ್ತ ಆಸ್ತಿಯೂ ನಿನ್ನದಾಗುತ್ತದೆ. ನೀನು ಸೋತೆ ಎನಿಸಿದ ದಿನ ಆ ಕೋಣೆಯ ಹಿಂಬಾಗಿಲಿನಿಂದ ಹೊರಟುಬಿಡು ನನ್ನ ನೌಕರರು ಅದನ್ನು ಗಮನಿಸಿ ನನಗೆ ತಿಳಿಸುತ್ತಾರೆ” ಹಿಂದೆಮುಂದೆ ಯೋಚಿಸದ ತರುಣ ಒಪ್ಪಿ ಮರುದಿನದಿಂದಲೇ ಕೋಣೆಯ ಬಂದಿಯಾಗುತ್ತಾನೆ. ಮೊದಲ ಹಲವು ದಿನಗಳನ್ನು ನಿರಾತಂಕವಾಗಿ ಬೇಕೆನಿಸಿದಾಗ ಏಳುವ ಮಲಗುವ ಸ್ವಾತಂತ್ರ್ಯವನ್ನು ಸುಖಿಸುತ್ತಾನೆ. ನಂತರ ಓದಲು ಕಥೆ ಪುಸ್ತಕಗಳನ್ನು ಬೇಡಿ ಪಡೆಯುತ್ತಾನೆ. ಮುಂದಿನ ಹಂತದಲ್ಲಿ ರೇಡಿಯೋ ಪಡೆದು ಸಂಗೀತವನ್ನು ಆಲಿಸುತ್ತಾನೆ. ಅದರ ಮುಂದಿನ ಹಂತದಲ್ಲಿ ಕಾಗದವನ್ನು ಪಡೆದು ಬರೆಯಲು ತೊಡಗುತ್ತಾನೆ.

ಅದಕ್ಕೂ ಮುಂದಿನ ಹಂತದಲ್ಲಿ ಅಧ್ಯಾತ್ಮದ ಪುಸ್ತಕಗಳನ್ನು ರಾಶಿರಾಶಿ ತರಿಸಿಕೊಂಡು ಓದಲು ತೊಡಗುತ್ತಾನೆ. ಇನ್ನೇನು ವರ್ಷ ಮುಗಿಯುವ ಹಂತಕ್ಕೆ ಬಂದಾಗ ಹಿರಿಯನಿಗೆ ಸಂಕಟ ಶುರುವಾಗುತ್ತದೆ. ಹೀಗೆ ಈ ಹುಡುಗ ಹಠಹಿಡಿದು ಏಕಾಂತದಲ್ಲಿ ವರ್ಷ ಕಳೆಯುತ್ತಾನೆಂದು ಅವನು ಊಹಿಸಿಯೇ ಇರುವುದಿಲ್ಲ. ಏನಾದರೂ ಮಾಡಿ ಅವನನ್ನು ಅಲ್ಲಿಂದ ಓಡಿಸಲು ಕುಟಿಲೋಪಾಯಗಳನ್ನು ಮಾಡುತ್ತಾನೆ. ಯಾವ ಉಪಾಯಕ್ಕೂ ಹುಡುಗ ಬಗ್ಗುವುದಿಲ್ಲ. ಕೊನೆಯ ರಾತ್ರಿ ಬರುತ್ತದೆ. ಹಿರಿಯನಿಗೆ ರಾತ್ರಿಯಿಡೀ ನಿದ್ರೆಯಿಲ್ಲ. ತರುಣ ಪ್ರಶಾಂತವಾಗಿ ಮಲಗಿ ನಿದ್ರಿಸುತ್ತಾನೆ. ಬೆಳಿಗ್ಗೆ ಆರುಗಂಟೆಗೇ ಅವನನ್ನು ಹೊರಗೆ ಇದಿರುಗೊಳ್ಳಲು ಜನ ಜಮಾಯಿಸುತ್ತಾರೆಂದು ತರುಣನಿಗೆ ತಿಳಿದಿದೆ. ಅವನು ಐದುಗಂಟೆಗೇ ಎದ್ದು ಮೇಜಿನ ಮೇಲೆ ಚಿಕ್ಕ ಚೀಟಿಯೊಂದನ್ನು ಬರೆದಿಟ್ಟು ಕೋಣೆಯ ಹಿಂಬಾಗಿಲಿನಿಂದ ಕತ್ತಲಲ್ಲಿ ಕಣ್ಮರೆಯಾಗುತ್ತಾನೆ. ನೌಕರರಿಂದ ವಿಷಯ ತಿಳಿದ ಸಿರಿವಂತ ಆತುರಾತುರವಾಗಿ ಕೋಣೆಗೆ ಧಾವಿಸುತ್ತಾನೆ. ಮೇಜಿನ ಮೇಲಿನ ಚಿಕ್ಕ ಚೀಟಿ ಹೇಳುತ್ತದೆ ” ನಿನ್ನನ್ನು ಗೆಲ್ಲಿಸಲು ಒಂದು ಗಂಟೆ ಮುಂಚಿತವಾಗಿ ಹೊರಹೋಗುತ್ತಿದ್ದೇನೆ. ಸುಮ್ಮನೇ ಕುಳಿತುಂಡು ಗಳಿಸುವ ನಿನ್ನ ಆಸ್ತಿಯ ಮೇಲೆ ನನಗೆ ಒಲವಿಲ್ಲ. ನಾನೇ ದುಡಿದು ಗಳಿಸುತ್ತೇನೆ.” ಇಲ್ಲಿ ತರುಣ ಗೆದ್ದನೋ ಹಿರಿಯ ಗೆದ್ದನೋ ಓದುಗರ ವಿವೇಚನೆಗೆ ಬಿಟ್ಟ ವಿಚಾರ.

 

ಬಿಗ್‍ಬಾಸ್‍ನಂಥಾ ಯೋಜನೆಯಲ್ಲಿ ತೊಡಗಿಕೊಂಡವರಿಗೆ ಬದುಕನ್ನು ಭಿನ್ನವಾಗಿ ನೋಡುವ ಹೊಸ ನೋಟವಾದರೂ ಲಭಿಸಬಹುದು ಎನ್ನುವುದು ಒಂದು ಊಹೆಯಷ್ಟೇ. ಇಂಥಾ ಹೊಸನೋಟಗಳನ್ನು ತಮ್ಮದಾಗಿಸಿಕೊಳ್ಳಲು ಉನ್ನತ ವಿಚಾರವುಳ್ಳ ಮನಃಸ್ಥಿತಿಯೂ ಮುಖ್ಯ. ತ್ಯಾಗದ ಸಂಕೇತವಾದ ಕಾವಿ ತೊಟ್ಟು ಬಂದವರಿಗೆ ಅದು ಜನರನ್ನು ಸನ್ಮೋಹಗೊಳಿಸಲು ಸಾಧನ ಅಷ್ಟೇ. ಆಂತರ್ಯದಲ್ಲಿ ಅವರು ಸಾಮಾನ್ಯರಿಗಿಂತಾ ಅತಿ ಸಾಮಾನ್ಯರು ಎನ್ನುವುದನ್ನು ಬಿಗ್‍ಬಾಸ್ ರುಜುವಾತು ಪಡಿಸಿದೆ. ಈ ಕಾರ್ಯಕ್ರಮದಿಂದ ಹೊರಬಂದ ಮೇಲೂ ಅವರ ಭಕ್ತಗಣ ಅವರನ್ನು ಮತ್ತೆ ಮುತ್ತಿಕೊಂಡರೆ, ಇತ್ತೀಚೆಗೆ ಬಂದ ಹಿಂದಿ ಚಲನಚಿತ್ರ ‘ಓ ಮೈ  ಗಾಡ್’ನ ಕೊನೆಯ ಮಾತು ನಿಜ ಎಂದು ಸಾಬೀತಾಗುತ್ತದೆ ಅಷ್ಟೆ.

ಈ ಚಿತ್ರದ ನಾಯಕ ( ಪರೇಶ್ ರಾವಲ್ ) ಚಿತ್ರದ ಉದ್ದಕ್ಕೂ ಮೂರುಜನ ಢೋಂಗಿ ಸ್ವಾಮಿಗಳ ಬಣ್ಣ ಬಯಲು ಮಾಡಲು ಹೋರಾಡುತ್ತಾನೆ ಕೊನೆಗೆ ಜನರಿಗೆ ಅವರು ಮಹಾ ಕುತಂತ್ರಿಗಳೆಂದು ತಿಳಿಯುತ್ತದೆ ಎಲ್ಲರೂ ವೇದಿಕೆಯ ಮೇಲಿರುವ ಮೂರೂಜನ ಸ್ವಾಮಿಗಳಿಗೆ ಕಲ್ಲು ಹೊಡೆಯಲು ಪ್ರಯತ್ನಿಸುತ್ತಾರೆ. ನಾಯಕ ಹೇಳುತ್ತಾನೆ ” ಅವರನ್ನು ಹೀಗೆ ಶಿಕ್ಷಿಸ ಬೇಡಿ. ಅವರ ಆಶ್ರಮಗಳಿಗೆ ನೀವ್ಯಾರೂ ಹೋಗದಿದ್ದರೆ ಅದೇ ಅವರಿಗೆ ಸರಿಯಾದ ಶಿಕ್ಷೆ” ಜನ ಕಲ್ಲು ಹೊಡೆಯದೆ ಆ ಮೂವರಿಗೂ ಹೊರಹೋಗಲು ತಾವೆಲ್ಲಾ ಪಕ್ಕಕ್ಕೆ ಸರಿದು ದಾರಿ ಮಾಡಿಕೊಡುತ್ತಾರೆ. ಕೊನೆಯಲ್ಲಿ ಹೋಗುವ ಬಿಳೀವಸ್ತ್ರಧಾರಿ ಸ್ವಾಮಿ ( ಮಿಥುನ್ ಚಕ್ರವರ್ತಿ ) ಹೇಳುತ್ತಾನೆ ” ಗೆದ್ದೆಯೆಂದು ಭ್ರಮಿಸಬೇಡ ನೋಡುತ್ತಿರು ಇನ್ನೊಂದೆರಡು ವಾರಗಳಲ್ಲಿ ಇವರೆಲ್ಲಾ ನಮ್ಮ ಆಶ್ರಮಗಳಲ್ಲಿ ಇರುತ್ತಾರೆ. ಏಕೆಂದರೆ ಮೌಢ್ಯವೆನ್ನುವುದು ನಮ್ಮ ಜನಗಳಲ್ಲಿ ಆಳವಾಗಿ ಊರಿರುವ ಬೇರುಗಳು”.

ಏನಾದರಾಗಲಿ ನನ್ನ ಮಟ್ಟಿಗಂತೂ ಬಿಗ್‍ಬಾಸ್ ಹಲವು ಚಿಂತನೆಗಳಿಗೆ ದಾರಿ ಮಾಡಿಕೊಡುವ ಕಾರ್ಯಕ್ರಮ. ಅದರ ಆಗುಹೋಗುಗಳಿಗೆ ನೋಡಗರನ್ನು ಪ್ರತಿಸ್ಪಂದಿಸುವಂತೆ ಮಾಡುವ ಕಾರ್ಯಕ್ರಮ. ಒಂದು ಗಂಟೆಯನ್ನು ಹಲವು ಕ್ಷಣಗಳನ್ನಾಗಿಸುವ ಕಾರ್ಯಕ್ರಮ. ಬಿಗ್‍ಬಾಸ್‍ನ ಬಹಳ ದೊಡ್ಡ ಆಕರ್ಷಣೆ ಎಂದರೆ, ಕೆಲವರನ್ನು ಮಾತ್ರ ಹೊರತು ಪಡಿಸಿದರೆ, ಉಳಿದವರೆಲ್ಲರೂ ಆಡುವ ಸುಂದರ ಕನ್ನಡ! ಮತ್ತು ತುಂಬಾ ಜೀವಂತಿಕೆಯನ್ನು ಕಟ್ಟಿಕೊಡುವ ಸುದೀಪ್ ಅವರ ಮೂರುದಿನದ ಸಾಂಗತ್ಯ. ವರ್ಷಗಟ್ಟಲೇ ಪ್ರಸಾರಗೊಂಡರೂ ಅದರ ಶೀರ್ಷಿಕೆ ಸಹ ನೆನಪಿರದಂತೆ ಕಣ್ಣತುದಿಯಲ್ಲೇ ಜಾರಿಹೋಗುವ ಧಾರಾವಾಹಿಗಳಿಗಿಂತಾ, ಮಕ್ಕಳ ಹಾಡು ಮತ್ತು ನೃತ್ಯ, ಹಾಗೂ ಬಿಗ್‍ಬಾಸ್‍ನಂಥಾ ವಾಸ್ತವವನ್ನು ಬಿಂಬಿಸುವ ‘ಜೀವಂತ’ ಕಾರ್ಯಕ್ರಮಗಳು ಸ್ವಾಗತಾರ್ಹವೇ.

‍ಲೇಖಕರು avadhi

June 18, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. mallikarjuna kalamarahalli

    BIGG BOSS….HUCCHARA AATA. HUCCHARASANTE VSTARISIDAGA TRP,HECCHAGALEBEEKU….! NIMMA MANO SIDDANTAVANNU OPPUTTENE.ADARE,KRUTAKA NADAVALIYA BIGGB…GE ANVAYISUUDILLA.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: