ವೈಶಾಲಿ ಹೆಗಡೆ ಕಂಡಂತೆ- ಹಳಿತಪ್ಪಿದ ‘ಚೆನ್ನಭೈರಾದೇವಿ’

ವೈಶಾಲಿ ಹೆಗಡೆ

ಅಂಕೋಲದಲ್ಲಿ ಕೋಟೆಬೇಣ ಎಂಬಂತ ಒಂದು ಜಾಗವಿದೆ. ಇಲ್ಲೊಂದು ಹಳೆಯ ಕೋಟೆಯಿದ್ದ ಎಲ್ಲ ಕುರುಹುಗಳೂ ಅವಶೇಷಗಳೂ ಇವೆ. ಅಲ್ಲಿಯ ಪುಟ್ಟ ಗುಡ್ಡವೊಂದರ ಮೇಲೆ ಎದುರುಬದುರಾಗಿ ಹಳೆಯ ಕಲ್ಲಿನ ಮಂಟಪದಂತಹ ಗುಡಿಗಳಲ್ಲಿ ಹನುಮಂತ ಮತ್ತು ಕೋಟೇಶ್ವರ ಮೂರ್ತಿಗಳಿವೆ. ಇದಕ್ಕೆ ಹೊಂದಿಕೊಂಡಂತೆ ಇದ್ದ ನಮ್ಮ ಪ್ರಾಥಮಿಕ ಶಾಲೆ, ಅದರ ಮೈದಾನ ನನ್ನ ಆಪ್ತ ನೆನಪುಗಳಲ್ಲೊಂದು. ಯಾಕೆಂದರೆ ಇಲ್ಲಿ ಸ್ವಲ್ಪ ಹುಡುಕಿದರೆ ತಿರುವಿನಲ್ಲಿ ಗಿಡಗಂಟೆ ಬೆಳೆದು ಅಡ್ಡಲಾದ ಹಳೆಯ ಕಬ್ಬಿಣದ ಸರಳುಗಳಿಂದ ಬಾಗಿಲಿದ್ದಂತೆ ತೋರುವ ಕಮಾನು ಕಲ್ಲಿನ ಸುರಂಗದ ಬಾಗಿಲೊಂದಿದೆ.

ನಮಗೆಲ್ಲ ಇದರ ಇನ್ನೊಂದು ಬಾಗಿಲು ಗೇರುಸೊಪ್ಪೆ ರಾಣಿಯ ಮಿರ್ಜಾನ್ ಕೋಟೆಯ ನೆಲಮಾಳಿಗೆಯಲ್ಲಿದೆ ಎಂಬುದಾಗಿ ಬಲವಾದ ನಂಬಿಕೆಯಿತ್ತು. ಹಾಗೆಂದು ಅಲ್ಲಿ ಜನಜನಿತ ಪ್ರತೀತಿ ಕೂಡ. ಆ ಸುರಂಗದಲ್ಲಿ ಒಮ್ಮೆ ಹೇಗಾದರೂ ಮಾಡಿ ಸಾಗಿಬಿಡಬೇಕು ಎಂದು ನಾವೊಂದಿಷ್ಟು ಮಕ್ಕಳು ಬಹಳಷ್ಟು ದಿನಗಳವರೆಗೆ ಉಪಾಯ ತಂತ್ರಗಳನೆಲ್ಲ ಹುಡುಕುತ್ತಿದ್ದೆವು. ನಮಗೆಲ್ಲ ಹಾವಿನ ಭಯವೊಂದಿಲ್ಲದಿದ್ದರೆ, ಬಹುಶ ಆ ಸಾಹಸದ ಒಂದಷ್ಟು ಕತೆಗಳಾದರೂ ನನ್ನಲ್ಲಿರುತ್ತಿದ್ದವು.

ಈಗ ಬರೀ ಆ ಸುರಂಗದ ಬಾಗಿಲೆದುರು ನಾವು ರಾಣಿಯಂತೆ, ಬ್ರಿಟಿಶರಂತೆ, (ಹೌದು ನಮಗೆಲ್ಲ ಆಗ ಪೋರ್ಚುಗೀಸರು, ಬ್ರಿಟಿಷರು ಎಂಬೆಲ್ಲ ತಾರತಮ್ಯವಿಲ್ಲ, ಒಟ್ಟಿನಲ್ಲಿ ಎಲ್ಲ ಒಂದೇ!), ಸೈನ್ಯವಂತೆ, ಯುದ್ಧವಂತೆ ಎಂದು ದಿನಕ್ಕೊಂದು ಆಟ ಆಡುತ್ತಿದ್ದ ನೆನಪಷ್ಟೇ. ಮುಂದೊಂದು ದಿನ ಬಹಳ ವರ್ಷಾನಂತರ ಮಿರ್ಜಾನ್ ಕೋಟೆಯೆಲ್ಲಾ ಸುತ್ತಿ ಬಂದಾಗ, ನೆಲಮಾಳಿಗೆಗೆ ಹೋಗಿ ಅಲ್ಲೊಂದು ಸುರಂಗವಿರುವುದನ್ನು ಖಾತರಿಪಡಿಸಿಕೊಂಡಾಗಂತೂ ಆ ಪುಳಕದ ಅನುಭವ ಹೇಗೆ ಹೇಳಲಿ! ಆ ಸುರಂಗ ಎಲ್ಲಿ ಹೋಗುತ್ತ್ತೋ ಕಂಡವರ್ಯಾರು? ಆದರೆ ನಮ್ಮ ನಂಬಿಕೆಗಳೇ ಅಲ್ಲವೇ ನಮಗೆ ಕತೆಯೊಂದು ಹುಟ್ಟಲು ಕಾರಣವಾಗುವುದು?

ಇಡೀ ಭಾರತದಲ್ಲಿಯೇ ಅತಿ ಹೆಚ್ಚು ವರ್ಷ ಆಡಳಿತ ನಡೆಸಿದ ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರವಾದ, ೫೪ ವರ್ಷ ಸಾಮ್ರಾಜ್ಯ ನಡೆಸಿದ ‘ಕಾಳು ಮೆಣಸಿನ ರಾಣಿ’ ಬಗೆಗೆ ಇಂಥ ಹೆಮ್ಮೆ, ಅಭಿಮಾನ, ಪ್ರೀತಿಯಲ್ಲಿ ಗೇರುಸೊಪ್ಪೆ ರಾಣಿಯ ಸಾಮ್ರಾಜ್ಯದ ಅವಶೇಷಗಳ ನಡುವಲ್ಲಿ ಬೆಳೆದವಳು ನಾನು.

ಈ ಪುಸ್ತಕ ಕೈಗೆತ್ತಿಕೊಂಡಾಗ ಆ ಚಿರಪರಿಚಿತ ಜಾಗ, ಇತಿಹಾಸದ ಅದ್ಭುತ ಕಥನಗಳಲ್ಲೆಲ್ಲ ರಾಣಿಯ ಸಾಮ್ರಾಜ್ಯದ ಸಾಧನೆಗಳನೆಲ್ಲ ಸುಂದರವಾಗಿ ಹೆಣೆಯುತ್ತಾ ಸಾಗಿದಾಗ, ಇದು ಅದ್ಭುತವಾಗಿ ಓದಿಸಿಕೊಂಡು ಹೋಗುತ್ತಿದೆ ಅಲ್ಲೆಲ್ಲ ನಾನೇ ಓಡಾಡಿದ ಹಾಗಾಗುತ್ತಿದೆ ಎನಿಸುತ್ತಿತ್ತು. ಐತಿಹಾಸಿಕ ವಿವರಗಳ ಹಿನ್ನೆಲೆಯನ್ನು, ಮಾಹಿತಿ, ನಕ್ಷೆಗಳನ್ನು ಲೇಖಕರು ಬಹು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಆ ಪ್ರದೇಶದಲ್ಲಿ ಬೆಳೆದ ನಮಗಂತೂ ಇವೆಲ್ಲ ಉಲ್ಲೇಖ ರೋಮಾಂಚನಗೊಳಿಸುತ್ತವೆ.

ಪೋರ್ಚುಗೀಸರನ್ನು ಕೊನೆವರೆಗೂ ಬಗ್ಗುಬಡಿದ ಏಕೈಕ ರಾಣಿ ಅವಳು! ಆ ವೀರಾವೇಶ, ಕಾಳುಮೆಣಸಿನ ಚಾಣಾಕ್ಷ ವ್ಯವಹಾರ, ಯುದ್ಧ ಚತುರತೆ ಇವೆಲ್ಲವನ್ನೂ ಲೇಖಕರು ಕಣ್ಣಿಗೆ ಕಟ್ಟುವಂತೆ ಮುಂದಿಡುತ್ತಾರೆ. ನಿರಂತರ ಪೋರ್ಚುಗೀಸ್ ದಾಳಿಯ ನಡುವೆ, ಗೋವಾದಿಂದ ದಂಡು ದಂಡಾಗಿ ವಲಸೆ ಬರುತ್ತಿದ್ದ ಜನರಿಗೆ ಆಶ್ರಯ ನೀಡುತ್ತಾ, ಸುತ್ತಲಿನ ಗಂಡುರಾಜರಿಗೆಲ್ಲ ಸೆಡ್ಡು ಹೊಡೆದು ನಿಂತು ೫೪ ವರ್ಷ ಆಡಳಿತ ನಡೆಸಿದ್ದು ಸಾಮಾನ್ಯ ಸಂಗತಿಯಲ್ಲ! ಇಪ್ಪತ್ತಕ್ಕೆ ಪಟ್ಟವೇರಿದ ಯುವತಿ ಸಮರ್ಥ ರಾಜ್ಯ ಆಡಳಿತ ನಡೆಸುತ್ತ ಸಾಗುವ ಪುಟಗಳು ಮೈ ನವಿರೇಳಿಸುತ್ತ ಸರಸರನೆ ಸಾಗುತ್ತವೆ.

ಕೃತಿ ಸುಮಾರು ಅರ್ಧಕ್ಕಿಂತ ಸ್ವಲ್ಪ ಮುಂದೆ ಸಾಗಿದಾಗ ಯಾಕೋ ಇದು ಪಾತ್ರ ಪೋಷಣೆಯಲ್ಲಿ ಹಿಡಿತ ತಪ್ಪುತ್ತಿದೆ. ಬರೀ ವಿವರಗಳಲ್ಲೇ, ವೈಭವವನ್ನು ವರ್ಣಿಸುವುದರಲ್ಲೇ, ಚೆನ್ನ ಭೈರಾದೇವಿಯನ್ನು ಕಳೆದುಕೊಳ್ಳುತ್ತಿದ್ದಾರೆ ಲೇಖಕರು ಎನಿಸತೊಡಗಿತು. ಆಕೆಯ ಮತ್ತು ಜಿನದತ್ತನ ಸ್ನೇಹ ಪ್ರೇಮಗಳ ಕಥೆ ಸುಂದರವಾಗಿ ಆರಂಭಗೊಂಡಿದ್ದು ತೀರಾ ಹೇರಿಕೆಯ ಅಲೌಕಿಕ ಪ್ರೇಮದ ಕತೆಯಾಗುತ್ತ ಅಸಹಜವಾದ ಹೆಣಿಗೆ ಎನಿಸಿತು.

ಚೆನ್ನಭೈರಾದೇವಿಯ ಭಾವನೆಗಳನ್ನೇ ಅಲ್ಲಗಳೆವಂತೆ ಆಕೆಯ ಪಾತ್ರ ಮೂಡಿ ಬರುತ್ತಿದೆ ಎನಿಸುತ್ತಿತ್ತು. ಕರಾವಳಿಯ ಎಲ್ಲ ಸಮುದಾಯವನ್ನು ಕೂಲಂಕುಷವಾಗಿ ಅವರ ಕೊಡುಗೆಯೊಂದಿಗೆ ರಾಜ್ಯದಲ್ಲಿ, ಸೈನ್ಯದಲ್ಲಿ ಅವರ ಪ್ರಮುಖ ಸ್ಥಾನಗಳ ಬಗ್ಗೆ ಉಲ್ಲೇಖಿಸಿರುವ ಲೇಖಕರು, ಎಲ್ಲೂ ಕೋಟೆಗಾರರ ಬಗ್ಗೆ ಬರೆಯದಿದ್ದದ್ದು ಆಶ್ಚರ್ಯವೆನಿಸಿತು. ರಾಮಕ್ಷತ್ರಿಯ/ಕೋಟೆಗಾರ/ಶೇರೆಗಾರ ಎಂಬುದು ಕರಾವಳಿಯಲ್ಲಿ ಕೋಟೆಗಳಿದ್ದಲ್ಲೆಲ್ಲ ಕಾವಲಿಗೆ ಇದ್ದು ಅದರಿಂದಾಗಿಯೇ ಆ ಹೆಸರು ಬಂದ ಸಮುದಾಯ. ಇಂಥ ಮುಖ್ಯ ಪಾತ್ರಧಾರೀ ಸಮುದಾಯದ ಉಲ್ಲೇಖ ಎಲ್ಲೂ ಬಂದಿಲ್ಲ.

ಕೊನೆಯಲ್ಲಿ ಚೆನ್ನಗೊಂಡನ ಪಾತ್ರ ಕೆಳದಿಯ ಅರಸರೊಂದಿಗೆ ಇದ್ದಕ್ಕಿದ್ದಂತೆ ಸೇರಿ ವಂಚಿಸುವ ಭಾಗವಂತೂ ಸಂಪೂರ್ಣ ಅಸಹಜ ನಿರೂಪಣೆ. ಯಾಕೆಂದರೆ ಇತಿಹಾಸದಲ್ಲಿ ಜಗತ್ತಿನಾದ್ಯಂತ ದಂಗೆ, ವಂಚನೆ ನಡೆದುದೆಲ್ಲ ತನ್ನವರಿಂದ ಹೊರತು, ಹೊರಗಿನವರಿಂದಲ್ಲ, ಅದು ಸಾಧ್ಯವೂ ಇಲ್ಲ. ಯಾಕೆಂದರೆ ಇಲ್ಲಿ ‘ಮೋಟಿವ್’ ಏನು? ಒಬ್ಬ ವ್ಯಕ್ತಿ ವ್ಯವಸ್ಥಿತ ಸಾಮ್ರಾಜ್ಯದ ವಿರುದ್ಧ ದಂಗೆ ಏಳಬೇಕು, ದ್ರೋಹ ಬಗೆಯಬೇಕು ಎಂದರೆ ಆತನಲ್ಲೊಂದು ರೋಷ, ಮತ್ಸರ, ಸೇಡು, ಅನ್ಯಾಯ ಏನೋ ಒಂದು ಆಗಿರಬೇಕು. ಹಾಗಾಗಿ ಇಲ್ಲಿ ಚೆನ್ನಗೊಂಡ ಎಂಬ ಪಾತ್ರವೇ ಒಂದು ಲೇಖಕರ ಅಸಹಜ ಸೃಷ್ಟಿ, ಇಲ್ಲವೋ ಚೆನ್ನಗೊಂಡ ರಾಣಿಗೆ ಆಪ್ತನಾಗಿದ್ದಿರಬೇಕು. ಇಲ್ಲವಾದಲ್ಲಿ ಚೆನ್ನಗೊಂಡ ಕೆಳದಿಯವರು ಬಳಸಿಕೊಳ್ಳುವಂತ ಪ್ರಮುಖನೇ ಅಲ್ಲ.

ಅಂತೂ ಓದಿ ಮುಗಿಸಿ ಕೆಳಗಿಟ್ಟಾಗ, ದಕ್ಷ ಚಾಣಾಕ್ಷ ಚೆನ್ನಭೈರಾದೇವಿ ಕೆಳದಿ ಅರಸರ ಕಾರಾಗೃಹದಲ್ಲಿ ವಂಚನೆಗೊಳಗಾಗಿ ಪ್ರಾಣಬಿಟ್ಟ ಕಥೆಯನ್ನು ಆಕೆಯ ಬಾಯಲ್ಲಿ ಹೇಳಿಸಲೇ ಇಲ್ಲವಲ್ಲ ಎನಿಸಿತು.

ಆನಂತರ ‘ಲೇಖಕರ ಮಾತು’ಗಳನ್ನು ಓದಿದಾಗಲಂತೂ ನಂಗೆ ಕೊಂಡಿ ತಪ್ಪಿದಂತೆ ಅನಿಸಿದ್ದು ಯಾಕೆ ಎಂದು ಮನವರಿಕೆಯಾಯಿತು. ನಾನು ಯಾವುದೇ ಪುಸ್ತಕವನ್ನು ಉತ್ಕಟವಾಗಿ ಓದಬೇಕೆಂದು ಬಯಸಿ ಓದುವಾಗ ಅದರ ಮುನ್ನುಡಿ, ಬೆನ್ನುಡಿ, ಮೊದಲ ಮಾತು ಯಾವುದನ್ನೂ ಓದುವುದಿಲ್ಲ. ಇತರರ ನುಡಿಗಳು ನನ್ನ ಓದಿನ ಮೇಲೆ ಪ್ರಭಾವ ಬೀರದಿರಲಿ ಎಂಬ ಕಾರಣಕ್ಕೆ ಅವನ್ನೆಲ್ಲ ಕೊನೆಯಲ್ಲಿ ಓದುತ್ತೇನೆ.

ಲೇಖಕರ ಮಾತುಗಳನ್ನು ಓದಿದಾಗ ತೀವ್ರ ವಿಷಾದದ ಭಾವವೊಂದು ಮೂಡಿದ್ದು ಸುಳ್ಳಲ್ಲ. ಐನೂರು ವರ್ಷಗಳಾದರೂ ನಮ್ಮ ಪುರುಷ ಪ್ರಧಾನ ಸನಾತನ ಮನಸ್ಥಿತಿಗೆ ಒಬ್ಬ ದಕ್ಷ ಹೆಣ್ಣು ಜನಾನುರಾಗಿ ರಾಣಿ ತನ್ನೆಲ್ಲ ಮನುಷ್ಯ ಸಹಜ ಪ್ರೇಮ ಕಾಮಗಳ ನಡುವೆಯೂ ದೇವರಾಗಬಲ್ಲಳು ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವಲ್ಲ!!

ದೆಲ್ಲವಲ್ಲೇ ಪೂರ್ವಗ್ರಹ ಪೀಡಿತನಾಗಿ ಬರೆದ ಎಂದು ಆರೋಪಿಸುವ ಲೇಖಕರು, ಇಡೀ ಕಾದಂಬರಿಯನ್ನು ಕೂಡ ತಮ್ಮ ಪೂರ್ವಗ್ರಹದಲ್ಲೇ ಬರೆದಿರುವರಲ್ಲ! ಅವ್ವರಸಿ, ಪ್ರೇಯಸಿ ಕೂಡ ಆಗಿದ್ದಳು ಎಂಬ ದೆಲ್ಲವಲ್ಲೆಯ ಒಂದು ಉಲ್ಲೇಖವನ್ನು ಅಲ್ಲಗಳೆಯುವ ಸಲುವಾಗಿ ಆಕೆಯನ್ನು ಸಂಪೂರ್ಣ ಭಾವವಿಹೀನಳನ್ನಾಗಿಸಿ, ಜಿನದತ್ತನ ಪ್ರೇಮವನ್ನೂ ಪ್ಲಾಟೊನಿಕ್ ಲವ್ ಆಗಿಸಿ, ಚೆನ್ನಗೊಂಡನನ್ನು ಕೊನೆಯಲ್ಲಿ ಬಲವಂತವಾಗಿ ತುರುಕಿ ಲೇಖಕರು ನನ್ನ ಚೆನ್ನಭೈರಾದೇವಿಗೆ ಸಂಪೂರ್ಣ ಅನ್ಯಾಯವೆಸಗಿದ್ದಾರೆ.

ದೆಲ್ಲವಲ್ಲೆಯ (ಭಾರತಕ್ಕೆ ಬಂದ ಪ್ರವಾಸಿ) ಉಲ್ಲೇಖ ಲೇಖಕರಿಗೆ ಅಷ್ಟು ನೋವುಂಟು ಮಾಡಿದೆ ಎಂಬ ಸತ್ಯವೇ ನನಗೆ ಅರಗಿಸಿಕೊಳ್ಳಲಾಗದ್ದು. ‘ಅಕಳಂಕ ಚರಿತೆ’ ಬರೆಯುವಾಗ ಆಕೆಯ ಪ್ರೇಮವನ್ನು ಕಳಂಕ ಎಂದವರ್ಯಾರು? ಹಾಗೊಮ್ಮೆ ಇದ್ದರೂ ಅದನ್ನು ಈಗಲೂ ಕಳಂಕ ಎಂದುಕೊಳ್ಳುವ ನಮ್ಮದು ಅದ್ಯಾವ ಮನಸ್ಥಿತಿ? ಅಂದಿನ ಸಮಾಜ ಆಗಂತೂ ಆಕೆಯ ಪ್ರೇಮವನ್ನು ಒಪ್ಪಿಕೊಳ್ಳಲಿಲ್ಲ ಎಂದುಕೊಂಡರೆ, ಈಗಲೂ ಇವರಿಗೆ ಆ ಒಂದು ಸಾಧ್ಯತೆ ಅಷ್ಟೇಕೆ ಕುಟುಕಬೇಕು?

ನಾನು ದೆಲ್ಲವಲ್ಲೆಯ ಉಲ್ಲೇಖವನ್ನು ಓದಿದ್ದೇನೆ. ತನ್ನ ಪ್ರವಾಸೀ ಕಥನದಲ್ಲಿ ಒಂದಿಡೀ ಅಧ್ಯಾಯವನ್ನು ಆಕೆಗೆ ಮೀಸಲಿಟ್ಟಿದ್ದಾನೆ. ಎಲ್ಲೂ ಆಕೆಯ ಬಗ್ಗೆ ಕೀಳು ಭಾವನೆಯಾಗಲೀ ಆ ಬಗೆಯ ರೆಫೆರೆನ್ಸ್ ಆಗಲೀ ಇಲ್ಲ. ಆಕೆಯ ಸಾಮ್ರಾಜ್ಯವೂ, ಚಾಣಾಕ್ಷತೆಯೂ ಜೊತೆಗೆ ಕಾಳುಮೆಣಸಿನ ರಾಣಿಯ ವೈಭವದ ವರ್ಣನೆಯಿದೆ. ಜೊತೆಗೆ ಆತ ಹೇಳುವುದೇನೆಂದರೆ ‘ಒಬ್ಬ ಹೀನ ರಕ್ತ ಎಂದು ಭಾರತದ ಜನತೆ ಏನು ಅಂದುಕೊಡಿರುವರೋ ಅಂಥವನೊಬ್ಬನ ಪ್ರೇಮದಲ್ಲಿ ಬಿದ್ದ ರಾಣಿಯ ಪ್ರೇಮವನ್ನು ಅರಮನೆ ಒಪ್ಪಿಕೊಳ್ಳಲಿಲ್ಲ. ಇಲ್ಲಿ ರಾಜ ರಾಣಿಯರಿಗೆ, ಯಾರನ್ನಾದರೂ, ಎಷ್ಟು ಜನರನ್ನಾದರೂ ಪ್ರೇಮಿಸುವ ಅಧಿಕಾರವಿದೆ, ಆದರೆ ಎಲ್ಲ ರಕ್ತದವರನ್ನು ಮದುವೆಯಾಗುವಂತಿಲ್ಲ, ಸಮಾಜ ಒಪ್ಪುವುದಿಲ್ಲ. ಕೊನೆಯಲ್ಲಿ ಆಕೆಯ ಸಾಮ್ರಾಜ್ಯ ಪತನಕ್ಕೆ, ಆಕೆಯ ಬಂಧನಕ್ಕೆ ಕೆಳದಿ ಅರಸರ ಸಂಚಿಗೆ ಆಕೆಯ ಈ ಪ್ರೇಮವೇ ಕಾರಣವಾಗಿದ್ದು ದುರಂತ!’ ಎನ್ನುತ್ತಾನೆ.

ಛೆ ಎಂಥ ಅವಕಾಶವಿತ್ತು! ಜೀವಿತಾದ್ಯಂತ ಅವಿವಾಹಿತಳಾಗೇ ಉಳಿದ ಆಕೆಯ ಅಸಫಲ ಪ್ರೇಮದ ಮಗ್ಗುಲು ಯಾಕೆ ಕಾಣಿಸಲಿಲ್ಲ? ಆಕೆಯ ಪ್ರೇಮಕ್ಕೊಂದು ಉತ್ಕಟ ದುರಂತವಿತ್ತು! ತನ್ನವರಿಂದಲೇ ವಂಚಿಸಲ್ಪಟ್ಟ ನೋವಿತ್ತು. ಆಕೆಯ ಪ್ರೇಮದ ಸಾಧ್ಯತೆಯನ್ನಾದರೂ ಒಂದು ಕ್ಷಣದ ಮಟ್ಟಿಗೆ ಯೋಚಿಸಲಿಲ್ಲವಲ್ಲ! ಹೆಣ್ಣನ್ನು ಸದಾ ದೇವರನ್ನಾಗಿ ಮಾತ್ರ ನೋಡಬಲ್ಲ ಕುರುಡು ಸನಾತನ ಭಕ್ತಿಯಲ್ಲಿ ಕಳೆದುಹೋದರು.
ನಮ್ಮ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸಾವಿರ ಪ್ರೇಯಸಿಯರ ಕೃಷ್ಣ ದೇವರಾಗಬಲ್ಲ, ಆದರೆ ಗೊಂಡನ ಪ್ರೇಯಸಿ ಅವ್ವರಸಿಯಾಗಲಾರಳು ಎಂದು ಹೇಳಿಬಿಟ್ಟರು.

ನನ್ನ ಕಾಳುಮೆಣಸಿನ ರಾಣಿಯನ್ನು ದೇವರಾಗಿಸುವ ಭರದಲ್ಲಿ ಆಕೆಯ ಮನುಷ್ಯತ್ವವನ್ನೇ ಇಲ್ಲವಾಗಿಸಿಬಿಟ್ಟರು. ಹಾಗಾಗಿಯೇ ಇದು ನನ್ನ ಮಟ್ಟಿಗೆ ಒಂದು ಅತ್ಯದ್ಭುತ ಕಾದಂಬರಿ ಆಗಹೊರಟು, ಆಗುವ ಎಲ್ಲ ಲಕ್ಷಣಗಳಿದ್ದೂ, ಪೂರ್ವಗ್ರಹ ಪೀಡಿತ ದೃಷ್ಟಿಕೋನದಿಂದಾಗೇ ಪಾತ್ರ ಪೋಷಣೆಯಲ್ಲಿ ಹಾದಿ ತಪ್ಪಿದ ಕೃತಿ.

ಇಷ್ಟೆಲ್ಲಾ ಅಲವತ್ತುಕೊಂಡಮೇಲೂ ಹೇಳುವುದೇನೆಂದರೆ, ಇದನ್ನು ಖಂಡಿತ ಓದಿ. ಐತಿಹಾಸಿಕವಾಗಿ ಆಕೆ ಆಳಿದ ಆ ವೈಭವನಗಿರಿಯಲ್ಲಿ ಒಮ್ಮೆ ಓಡಾಡಿ ಬನ್ನಿ. ಭಾರತದಲ್ಲಿ ಯಾವ ರಾಣಿಯೂ ಈಕೆಯ ಸರಿಗಟ್ಟದಂತೆ ತನ್ನ ರಾಜ್ಯದ ಕಣಜ ತುಂಬಿದ ಚಾಣಾಕ್ಷ ರಾಜಕಾರಣಿ. ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿಯರಿಗೆಲ್ಲ ದಕ್ಕಿದ ಪ್ರಚಾರ, ಒಮ್ಮೆಯೂ ಪೋರ್ಚುಗೀಸರಿಗೆ ಸೋಲದ ಚೆನ್ನಭೈರಾದೇವಿಗೆ ದಕ್ಕಿಲ್ಲ ಎಂಬುದೇ ನಮ್ಮ ಇತಿಹಾಸದ ಬಹುದೊಡ್ಡ ದುರಂತ.

‍ಲೇಖಕರು Avadhi

May 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: