ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 2

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ.

‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು.

ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ ನಂತರ ಎನ್ ಜಿ ಇ ಎಫ್ ಸಂಸ್ಥೆಯಲ್ಲಿ ಧೀರ್ಘ ಕಾಲ ಅನುವಾದಕರಾಗಿದ್ದರು. ತಾಯಿ ಅನಸೂಯ ರಾಮರೆಡ್ಡಿ ಸಹಾ ಲೇಖಕಿ. ಬರವಣಿಗೆ ಹಾಗೂ ಸಂಗೀತ ಇವರಿಗೆ ಚಿಕ್ಕಂದಿನಿಂದಲೇ ಬಂದ ಒಲವು.

ತಮ್ಮೊಳಗೆ ಕೊರೋನಾ ನೆಲೆಸಿದ್ದನ್ನೂ ಅದನ್ನು ಅವರು ಮುಲಾಜಿಲ್ಲದೆ ಹೊರಗೆ ಹಾಕಿದ್ದರ ಕಥನ ಇಂದಿನಿಂದ ಪ್ರತೀ ದಿನ ನಿಮ್ಮ ಮುಂದೆ

‘ಬರ್ಕ್ ವೈಟ್ ಕಂಡ ಭಾರತ’ದ ಅನುವಾದ, ‘ಲೇಖ ಲೋಕ’ ಸಂಪಾದನೆ ಇವರ ಹೆಮ್ಮೆಯ ಗರಿಗಳು.

ಮೊದಲ ಕಂತು ಇಲ್ಲಿದೆ- ಕ್ಲಿಕ್ಕಿಸಿ

2

ಆಕ್ಸಿಜನ್ ಎಂಬ ಪ್ರಾಣವಾಯು

ಆಕ್ಸಿಜನ್‌ಗೆ ಕನ್ನಡದಲ್ಲಿ ಆಮ್ಲಜನಕ, ಪ್ರಾಣವಾಯು ಎಂಬ ಎರಡೂ ಪದಗಳನ್ನು ಬಳಸುವ ರೂಢಿ ಇದೆ. ಆದರೆ ಕರೋನಾ ಸಂದರ್ಭದಲ್ಲಿ ಮಾತ್ರ ನನಗೆ ಅದು ಆಮ್ಲಜನಕ ಎಂಬುದಕ್ಕಿಂತ ಪ್ರಾಣವಾಯುವಾಗಿ ಕಂಡಿತ್ತು. ಪ್ರಾಣವಾಯು ಎಷ್ಟು ಅರ್ಥಪೂರ್ಣವಾದ ಪದ. ಇಂಥ ಪದಗಳನ್ನು ಸೃಷ್ಟಿಸಿದ ನಮ್ಮ ವಿಬುಧರಿಗೆ ನಮೋ ನಮಃ. ಇದೂ ಕೂಡ ಸಂಸ್ಕೃತ ಪದವೇ ಆದರೂ ಕನ್ನಡದಷ್ಟೇ ಸರಳವಾಗಿದೆ.

ಕರೋನಾ ವೈರಸ್‌ನಿಂದ ಆಗುವ ಮುಖ್ಯ ಅಪಾಯವೇ ಈ ಪ್ರಾಣವಾಯುವಿನ ಕೊರತೆ. ಈ ವೈರಸ್ ಮೂಗು ಗಂಟಲುಗಳ ಮೂಲಕ ಶ್ವಾಸಕೋಶಗಳಿಗೆ ಲಗ್ಗೆ ಇಟ್ಟು ವಿಪರೀತವಾಗಿ ಹಬ್ಬಿ ಹರಡಿ ಬೆಳೆದು ಶ್ವಾಸಕೋಶಗಳ ಕೆಲಸವನ್ನು ಹದಗೆಡಿಸುವುದರಿಂದ ನಾವು ಪೂರ್ಣ ಪ್ರಮಾಣದಲ್ಲಿ ಪ್ರಾಣವಾಯುವನ್ನು ಒಳಗೆ ತೆಗೆದುಕೊಳ್ಳುವುದಕ್ಕೂ ಆಗುವುದಿಲ್ಲ.

ಪ್ರಾಣವಾಯುವಿನ ಕೊರತೆ ದೇಹದ ಎಲ್ಲ ಅಂಗಗಳ ಮೇಲೂ ವಿಪರೀತ ಪರಿಣಾಮ ಉಂಟುಮಾಡಿ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಹದಗೆಡಿಸುತ್ತದೆ. ಅದರಲ್ಲಿಯೂ ಹೃದಯ, ಮಿದುಳು ಮತ್ತು ಮೂತ್ರಪಿಂಡಗಳಂಥ ಬಹು ಮುಖ್ಯ ಅಂಗಗಳು ಹಾನಿಗೊಳಗಾಗುತ್ತವೆ. ಈ ವೈರಸ್ ಎಷ್ಟರ ಮಟ್ಟಿಗೆ ಶ್ವಾಸಕೋಶಗಳಲ್ಲಿ ಹಬ್ಬಿದೆ ಎಂಬುದನ್ನು ಅವಲಂಬಿಸಿ ಆಯಾ ರೋಗಿಯ ಸ್ಥಿತಿಗತಿಗಳು ಬೇರೆ ಬೇರೆ ಯಾಗಿರುತ್ತವೆ. ಮೊದಲೇ ಹೃದ್ರೋಗ, ಮೂತ್ರಪಿಂಡಗಳ ಸಮಸ್ಯೆ ಮಧುಮೇಹದಿಂದ ಬಳಲುತ್ತಿರುವವರಿಗಂತೂ ಪ್ರಾಣವಾಯುವಿನ ಕೊರತೆಯಿಂದ ಇನ್ನಷ್ಟು ಗಂಭೀರ ಪರಿಣಾಮಗಳಾಗುತ್ತವೆ. ಅವರಿಗೆ ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದಿದ್ದರೆ ಸಾವು ನಿಶ್ಚಿತ ಮಾತ್ರವಲ್ಲ ಒಂದು ವೇಳೆ ಅವರು ಬದುಕುಳಿದರೂ ಕೋವಿಡ್ ನಂತರದ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ನಾನು ನನಗೆ ಸೋಂಕು ತಗುಲಿ ಕ್ರಮೇಣ ಅದು ತನ್ನ ಪ್ರತಾಪವನ್ನು ವಿವಿಧ ರೀತಿಯಲ್ಲಿ ತೋರತೊಡಗಿದ ಏಳು ದಿನಗಳ ವರೆಗೂ ಮನೆಯಲ್ಲೆ ಹಾಗೇ ದಿನನೂಕಿಕೊಂಡು ಬಂದಿದ್ದೆ. ಒಳಗೊಳಗೇ ಜ್ವರ, ಆಯಾಸ, ಸುಸ್ತು, ಮೇಲುಸಿರು, ತಲೆಭಾರ, ಅತಿಸಾರ, ಮೈಕೈನೋವು, ಅಂಗಾಲು ಉರಿತ, ಬಾಯಿರುಚಿ ಇಲ್ಲದಿರುವಿಕೆ ಮೊದಲಾದ ತೊಂದರೆಗಳು ಒಂದೊಂದಾಗಿ ಕಾಣಿಸುತ್ತಾ ಬಂದರೂ ನನ್ನ ಮನಸ್ಸಿಗೆ ಸಮಾಧಾನ ವಾಗುವಂತೆ ಅದನ್ನು ಫ್ಲೂನೊಂದಿಗೆ ಸಮೀಕರಿಸಿ ಪೋನ್‌ನಲ್ಲಿ ನನ್ನ ಡಾಕ್ಟರ್ ಬಂಧುಗಳೊಂದಿಗೆ ನನ್ನ ಸಮಸ್ಯೆಗೆ ಪರಿಹಾರ ಪಡೆಯುತ್ತಾ ಅವರು ಹೇಳಿದ ಮಾತ್ರೆಗಳನ್ನು ನುಂಗುತ್ತಾ… ಇರುತ್ತಿರುವಾಗ ಕರೋನಾ ನನ್ನ ಶ್ವಾಸಕೋಶಕ್ಕೂ ಇಳಿದಿತ್ತು. ನನ್ನ ಸಮೀಪ ಬಂಧು ರಾಘವ, ಈಗ ಸುಮಾರು ೧೫ ದಿನಗಳ ಹಿಂದೆ ಕರೋನಾ ಮುಕ್ತನಾಗಿ ಬಂದಿದ್ದ. ಅವನೂ ಆಸ್ಪತ್ರೆಯಲ್ಲಿದ್ದು ಆಕ್ಸಿಜನ್, ಡ್ರಿಪ್ಸ್, ಮಾತ್ರೆ, ಇನ್‌ಸುಲಿನ್ ಇತ್ಯಾದಿ ಚಿಕಿತ್ಸೆ ಪಡೆದು ಅಂತೂ ಗುಣಮುಖನಾಗಿ ಹಿಂದಿರುಗಿದ್ದು ತಿಳಿದಿತ್ತು.

ಈ ರೋಗದ ಮುಖ್ಯ ಲಕ್ಷಣವೆಂದರೆ ಪ್ರಾಣವಾಯುವಿನ ಕೊರತೆಯಿಂದಾಗಿ ಉಸಿರಾಟವೇ ಕಷ್ಟವಾಗುವುದು ಎಂದು ನಾನು ಕೇಳಿ ತಿಳಿದಿದ್ದೆ. ಹೀಗಾಗಿ ಆರನೇ ದಿನ ನನ್ನ ಸ್ಥಿತಿ ನನಗೇ ಅರಿವಾಯಿತು. ಇದು ಕರೋನಾ ಆಗದಿರಲಿ ಎಂದು ಕೊಳ್ಳುತ್ತಲೇ ಅದು ಕರೋನಾನೇ ಎಂದು ಮನಸ್ಸು ಹೇಳುತ್ತಿತ್ತು. ಮನೆ ಹತ್ತಿರ ಯಾವುದಾದರೂ ನರ್ಸಿಂಗ್ ಹೋಂಗೆ ಹೋಗಿ ಒಂದು ಸಲ ಆಕ್ಸಿಜನ್ ಲೆವೆಲ್ ಟೆಸ್ಟ್ ಮಾಡಿಸು.

ಒಂದು ವೇಳೆ ಅದು ಕಡಿಮೆ ಇದ್ದರೆ ಅಲ್ಲಿಯೇ ಆಕ್ಸಿಜನ್ ಕೊಡುತ್ತಾರೆ. ಅದು ಸರಿಯಾದ ಲೆವೆಲ್‌ಗೆ ಬರುವವರೆಗೆ ಒಂದೆರಡು ದಿನ ಅಲ್ಲಿಯೇ ಅಡ್ಮಿಟ್ ಆಗಿ ಚಿಕಿತ್ಸೆ ಪಡೆಯಬಹುದು ಎಂದು ಡಾ. ನರೇಂದ್ರ ಸೂಚಿಸಿದಾಗ ಅದಕ್ಕಾಗಿ ನರ್ಸಿಂಗ್ ಹೋಂಗೆ ಹೋಗುವುದೂ ನನಗೆ ಭಾರವೆನಿಸತೊಡಗಿತು. ಶಂಕರ್ ಬಲವಂತ ಮಾಡದಿದ್ದರೆ ಹಾಗೇ ಇದ್ದು ಬಿಡುತ್ತಿದ್ದೆನೇನೋ. ಅಂತೂ ಹೋದಾಗ ಪಲ್ಸ್ ಆಕ್ಸಿ ಮೀಟರ್ ನಿಂದ ಆಕ್ಸಿಜನ್ ಲೆವೆಲ್ ತಪಾಸಣೆ ಮಾಡಿದರು. ಅದರ ರೀಡಿಂಗ್ ಅನ್ನು ಅವರು ನನಗೆ ತಿಳಿಸಲಿಲ್ಲ. ಜ್ವರ ಇದೆ. ಈ ಮಾತ್ರೆ ಒಂದು ವಾರ ತೆಗೆದುಕೊಳ್ಳಿ, ಆದರೂ ಕೋವಿಡ್ ಪರೀಕ್ಷೆ ಮಾಡಿಸಿ ಎಂದು ಡ್ಯೂಟಿ ಡಾಕ್ಟರ್ ಬರೆದುಕೊಟ್ಟಾಗ ಕೋವಿಡ್ ಪರೀಕ್ಷೆ ಅನಿವಾರ್ಯವಾದಂತಾಯಿತು.

ಈ ಪರೀಕ್ಷೆಯನ್ನು ಎಲ್ಲಿ ಮಾಡಿಸುವುದು ಎಂಬ ಪ್ರಶ್ನೆ ಬೃಹದಾಕಾರವಾಗಿ ನಿಂತಿತ್ತು. ಇದುವರೆಗೆ ಕರೋನಾ ಪರೀಕ್ಷೆಯಲ್ಲಾಗುತ್ತಿರುವ ಎಡವಟ್ಟುಗಳು, ಪರೀಕ್ಷೆಗಾಗಿ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ, ಪರೀಕ್ಷೆಯ ನಂತರವೂ ಅದರ ಫಲಿತಾಂಶ ನೀಡಲು ಐದು ದಿನಗಳಾದರೂ ಆಗಬಹುದು ಎಂಬ ಚಿಂತೆಯಲ್ಲಿ ಮುಳುಗಿದ್ದಾಗ ಮೇಘ ಎಲ್ಲಾ ಕಡೆ ವಿಚಾರಿಸಿ ಶಾಂತಿ ನರ್ಸಿಂಗ್ ಹೊಂ ಹಾಗೂ ರಿಸರ್ಚ್ ಹಾಸ್ಪಿಟಲ್‌ನಲ್ಲಿ ಟೆಸ್ಟ್ ಮಾಡುತ್ತಾರೆ ಮತ್ತು ಅಲ್ಲಿ ಯಾವ ರೀತಿಯ ಕಾಯುವಿಕೆಯೂ ಇರುವುದಿಲ್ಲ ಎಂದು ತಿಳಿಸಿ ಸಮಯವನ್ನು ಗೊತ್ತು ಪಡಿಸಿದಳು. ಮಾರನೇ ದಿನವೂ ನಿಜಕ್ಕೂ ಈ ಪರೀಕ್ಷೆ ಅಗತ್ಯವಿದೆಯೇ ಈಗ ತೆಗೆದುಕೊಳ್ಳುತ್ತಿರುವ ಮಾತ್ರೆಯಿಂದ ಸರಿಹೋಗಬಹುದಲ್ಲವೇ ಎಂಬ ದ್ವಂದ್ವದಲ್ಲಿದ್ದೆ.

ನಾನು ಹೀಗೆ ಯೋಚಿಸುವುದಕ್ಕೆ ಕಾರಣ ಒಮ್ಮೊಮ್ಮೆ ತುಂಬ ಸರಿಹೋಗಿಬಿಡುತ್ತಿದ್ದೆ. ಯಾವ ಆಯಾಸ, ಉಸಿರಾಟದ ತೊಂದರೆ ಇಲ್ಲದೆ ಆರಾಮಾಗಿ ಬಿಡುತ್ತಿದ್ದೆ. ಆದರೆ ಒಂದೊಂದು ಸಲ ಸುಸ್ತು ಆಯಾಸ ಯಾವ ರೀತಿ ಇತ್ತೆಂದರೆ ಮಾತ್ರೆಯನ್ನು ಸ್ಟ್ರೀಪ್‌ನಿಂದ ಹರಿದು ಅದನ್ನು ಬಿಡಿಸಿಕೊಳ್ಳುವುದಕ್ಕೂ ತ್ರಾಣವಿರಲಿಲ್ಲ. ಯಾವ ಯಾವ ಮಾತ್ರೆ ಬರೆದುಕೊಟ್ಟಿದ್ದಾರೆ ಎಷ್ಟೆಷ್ಟು ತೆಗೆದುಕೊಳ್ಳಬೇಕು ಯಾವಾಗ ತೆಗೆದುಕೊಳ್ಳಬೇಕು ಎಂದು ಡಾಕ್ಟರ್ ಕೊಟ್ಟ ಚೀಟಿಯನ್ನು ಓದಿಕೊಳ್ಳುವಷ್ಟೂ ಶಕ್ತಿ ಇರಲಿಲ್ಲ. ಯಾವ ಮಾತ್ರೆ ತಗೋಬೇಕೋ ಅದನ್ನು ಬಿಡಿಸಿ ತಂದುಕೊಡಿ ಎಂದು ಶಂಕರ್‌ಗೇ ಹೇಳಿ ಅವುಗಳನ್ನು ಕಷ್ಟ ಪಟ್ಟು ನುಂಗುತ್ತಿದ್ದೆ.

ಮಾರನೇ ದಿನ ಬೆಳಿಗ್ಗೆ ಎದ್ದಾಗ ಅದೇ ಸುಸ್ತು, ಮೇಲುಸಿರು. ೮.೩೦ಕ್ಕೆ ಹೋಗೋಣ ಕೋವಿಡ್ ಟೆಸ್ಟ್ ಗೆ ಎಂದಾಗ ನನಗೆ ಮೇಲೆದ್ದು ಸಿದ್ಧವಾಗುವಷ್ಟೂ ಶಕ್ತಿಯಿರಲಿಲ್ಲ. ಹೋಗಲೇ ಬೇಕಾ ಹೇಗೆ ಹೋಗುವುದು ಈ ಸುಸ್ತಿನಲ್ಲಿ ಎಂಬ ಅಸಹಾಯಕತೆ. ಆದರೂ ತಿಂಡಿ ತಿಂದ ನಂತರ ಸ್ವಲ್ಪ ಶಕ್ತಿಕೂಡಬಹುದು ಆನಂತರ ಹೋಗೋಣ ಎಂದು ಶಂಕರ್‌ಗೆ ಒಪ್ಪಿಸಿದೆ. ಮೇಘ ಓಲಾ ಬುಕ್ ಮಾಡಿದ್ದಳು. ನರ್ಸಿಂಗ್ ಹೋಂನಲ್ಲಿ ಪಕ್ಕದ ಗೇಟಿನಿಂದ ಕೋವಿಡ್ ಪರೀಕ್ಷೆಗೆ ಬರುವವರಿಗೆ ವ್ಯವಸ್ಥೆ ಮಾಡಿದ್ದರು. ಕೇವಲ ಒಬ್ಬರೇ ಒಬ್ಬರು ಕಾಯುತ್ತಾ ಕುಳಿತಿದ್ದರು. ವಿವರಗಳನ್ನು ಕೇಳಿ ಪಡೆಯಲು ಬಂದವರು ಆಧಾರ್ ನಂಬರ್ ಕೇಳಿದಾಗ ನನ್ನ ಬಳಿ ಇರಲಿಲ್ಲ. ಆ ರೀತಿಯ ಎಲ್ಲ ಆಧಾರ ಪತ್ರಗಳೂ ಇರುವ ವ್ಯಾನಿಟಿಬ್ಯಾಗ್ ಬದಲಿಗೆ ಈ ದಿನ ಬೇರೊಂದು ಬ್ಯಾಗ್ ತಂದಿದ್ದೆ. ಶಂಕರ್ ಗೇಟಿಂದ ಹೊರಗೇ ಇದ್ದರು.

ನನಗಿಂತ ಅನಂತರ ಬಂದ ಇಬ್ಬರ ಪರೀಕ್ಷೆ ಮುಗಿಸಿದರೂ ನನ್ನನ್ನು ಕರೆದಿರಲಿಲ್ಲ. ಇದೇಕೆ ಹೀಗೆ ಎಂದೇ ತಿಳಿಯಲಿಲ್ಲ. ಕೇವಲ ಮೂವರಿದ್ದರೂ ನನ್ನ ಪರೀಕ್ಷೆ ಮುಕ್ಕಾಲು ಗಂಟೆಗಿಂತ ತಡವಾಗಿತ್ತು. ಮೊದಲು ನನ್ನ ವಿವರಗಳನ್ನು ಪಡೆದವರು ಅತ್ತ ಸುಳಿದಾಗ ಇದೇಕೆ ನನಗೆ ಟೆಸ್ಟ್ ಮಾಡಿಲ್ಲ ಅಂದಾಗ ಹೌದಾ ಎನ್ನುತ್ತಾ ನೆಕ್ಸ್ಟ್ ನಿಮ್ಮನ್ನೇ ಕರೆಯುತ್ತೇವೆ ಎಂದರು. ಅದೇನು ಗೊಂದಲವೋ.

ಅಂತೂ ಅರ್ಧನಿಮಿಷದಲ್ಲಿ ಪರೀಕ್ಷೆ ಮುಗಿಯಿತು. ಇಯರ್‌ಬಡ್ ನಂಥದ್ದನ್ನು ಮೂಗಿಗೆ ತೂರಿಸಿದಾಗ ಸ್ವಲ್ಪ ಚುಳ್ ಅಂದಿದ್ದಷ್ಟೇ. ಪರೀಕ್ಷೆ ಮುಗಿದೇ ಹೋಗಿತ್ತು. ಗಂಟಲಿನ ಸ್ವಾಬ್ ತೆಗೆಯುತ್ತಾರೆ. ‘ಆ’ ಎಂದು ಬಾಯಿ ತೆಗೆದು ಅದನ್ನು ಗಂಟಲಿಗೆ ತೂರಿಸಿದಾಗ ಕೆಲವರಿಗೆ ವಾಂತಿ ಬಂದಂತಾಗುತ್ತದೆ ಎಂದು ತಿಳಿದಿದ್ದ ನನಗೆ ಇಷ್ಟು ಸುಲಭವಾಗಿ ಪರೀಕ್ಷೆ ಮುಗಿದದ್ದು ನಂಬುವುದಕ್ಕೇ ಆಗಲಿಲ್ಲ.

ಇನ್ನೇನು ಎಲ್ಲಾ ಮುಗಿಯಿತು ಸಧ್ಯ ಬೇಗ ಮುಗಿಯಿತು ಎಂದುಕೊಂಡರೆ ಆಧಾರ್ ನಂಬರ್ ಇಲ್ಲದೆ ಲ್ಯಾಬ್‌ಗೆ ಕಳಿಸುವಂತಿಲ್ಲ ಎಂದಾಗ ದಿಕ್ಕೇ ತೋಚದಂತಾಯಿತು. ಶಂಕರ್ ಮೊಬೈಲ್‌ನಲ್ಲಿ ನಂಬರ್ ಫೀಡ್ ಮಾಡಿಕೊಂಡಿರಬಹುದು ಎಂದರೆ ಅವರಲ್ಲಿಯೂ ಇಲ್ಲ. ಇಂಥ ವಿಷಯಗಳಲ್ಲಿ ಅವರದು ಬಹಳ ಶಿಸ್ತು ಎಂದು ಕೊಂಡಿರುತ್ತೇನೆ. ಆದರೆ ಯಾವುದು ಅತ್ಯಗತ್ಯವೋ ಅದೇ ತಪ್ಪಿ ಹೋಗಿರುತ್ತದೆ. ನಾವು ಮನೆಗೆ ಹೋಗಿ ಕಳುಹಿಸುತ್ತೇವೆ ಎಂದರೆ ಅದಕ್ಕೂ ಅವರು ಒಪ್ಪಲಿಲ್ಲ. ಇನ್ನು ಶಂಕರ್ ಮನೆಗೇ ಹೋಗಿ ತರಬೇಕಾಗುತ್ತೇನೋ ಅನ್ನುವಷ್ಟರಲ್ಲಿ ನಮ್ಮ ಸಹಕಾರ ಬ್ಯಾಂಕ್‌ನಲ್ಲಿ ಈ ವಿವರ ಸಿಗುತ್ತಲ್ಲ ಅಂತ ನನಗೆ ತಕ್ಷಣ ಹೊಳೆಯಿತು.

ಬ್ಯಾಂಕಿನ ವಿಷಯಗಳಲ್ಲಿ ನಾನು ತೀರಾ ಅಜ್ಞಾನಿಯಾಗಿದ್ದರೂ ಕೆಲವೊಮ್ಮೆ ಸರಿಯಾಗಿ ಅರ್ಥ ಮಾಡಿಕೊಂಡಿರುತ್ತೇನೆ. ಆದರೆ ಶಂಕರ್ ಏನು ಮಾಡುವುದು ಎಂದು ದಿಕ್ಕು ತೋಚದೆ ಗಾಬರಿಯಿಂದ ಕುಳಿತು ತಮ್ಮ ಮೊಬೈಲ್‌ನಲ್ಲಿಯೇ ಹುಡುಕಾಡುತ್ತಿದ್ದರು. ಆಗ ನಾನೇ ಎದ್ದು ಗೇಟ್ ಹತ್ತಿರ ಹೋಗಿ ಬ್ಯಾಂಕ್‌ಗೆ ಫೋನ್ ಮಾಡಿ ತರಿಸುವಂತೆ ಹೇಳಿದಾಗಲೇ ಅವರಿಗೆ ಈ ಕೆಲಸ ಮೊದಲೇ ಮಾಡಬಹುದಿತ್ತು ಅಂತ ಹೊಳೆದಿದ್ದು. ಕೂಡಲೇ ನಂಬರ್ ಸಿಕ್ಕಿತು. ಅದನ್ನು ಕೊಟ್ಟು ಇಬ್ಬರೂ ಆರಾಮಾಗಿ ವಾಯುವಿಹಾರಕ್ಕೆ ಹೊರಟವರಂತೆ ನಿಧಾನವಾಗಿ ಸ್ವಲ್ಪ ದೂರ ನಡೆದು ಆಟೋ ಸಿಕ್ಕ ನಂತರ ಮನೆ ಸೇರಿದೆವು. ನನ್ನ ಆಯಾಸ, ದಣಿವು, ಸುಸ್ತು ಯಾವುದೊಂದು ಕಾಡಿರಲಿಲ್ಲ.

ಆ ದಿನವೆಲ್ಲಾ ಅಂಥ ಯಾವ ಆತಂಕವೂ ಇಲ್ಲದೆ ಕಳೆದಿದ್ದೆ. ಏನೋ ಒಂದು ಪರೀಕ್ಷೆಯನ್ನು ಮುಗಿಸಿ ಬಂದಂತಹ ನಿರಾತಂಕ. ಆದರೆ ಬೆಳಿಗ್ಗೆಯಿಂದ ಮತ್ತೆ ಆತಂಕ ಶುರುವಾಯಿತು. ದೇವರೆ ಪಾಸಿಟಿವ್ ಆಗದಿರಲಿ, ನಾನು ಆಸ್ಪತ್ರೆ ಸೇರುವಂತೆ ಮಾತ್ರ ಆಗದಿರಲಿ ಎಂದು. ನೀವೇ ಬಂದು ಹನ್ನೊಂದುವರೆಗೆ ರಿಪೋರ್ಟ್ ಕಲೆಕ್ಟ್ ಮಾಡಿಕೊಳ್ಳಬೇಕು ಎಂದಿದ್ದರು. ಹನ್ನೊಂದುಗಂಟೆ ಆಗುವವರೆಗೂ ನಿಮಿಷ ನಿಮಿಷವೂ ಹೆದರಿಕೆಯಿಂದ ನಿರೀಕ್ಷಿಸುತ್ತಿದ್ದೆ.

ಹನ್ನೊಂದರ ಹತ್ತಿರ ಬರುತ್ತಿದ್ದ ಹಾಗೆ ಶಂಕರ್ ಮೇಘಾಗೆ ಫೋನ್ ಮಾಡಿ ರಿಪೋರ್ಟ್ ಬಂದಿದೆಯಾ ಎಂದು ನರ್ಸಿಂಗ್ ಹೋಂನಲ್ಲಿ ವಿಚಾರಿಸುವಂತೆ ಹೇಳಿದಾಗ ನನಗೇ ಮೇಲ್ ಮಾಡಿದ್ದಾರೆ, ಪಾಸಿಟಿವ್ ಎಂದು ತಿಳಿಸಿದಳು. ಪೂರ್ತಿ ಮುಳುಗಿದ್ದರಿಂದ ಈಗ ಅದೋ ಇದೋ ಎಂಬ ದ್ವಂದ್ವದಿಂದ ಮುಕ್ತಳಾಗಿದ್ದೆ. ಯಾವುದು ಸುಳ್ಳಾಗಲಿ ಎಂದು ಹಾರೈಸುತ್ತಿದ್ದೆನೋ ಅದು ನಿಜವೇ ಆಗಿತ್ತು. ಅಲ್ಲಿಂದ ಮುಂದೆ ಮತ್ತೊಂದು ಹಂತ ಶುರುವಾಯಿತು.

। ಇನ್ನು ನಾಳೆಗೆ ।

‍ಲೇಖಕರು Avadhi

May 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: