ವೈದೇಹಿ ಅವರು ಹಾಕಿದ ಕಂಡೀಷನ್ಸ್…

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ.

ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು.

ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ ಚಿತ್ರ ನಿರ್ದೇಶಕಿಯೂ ಆದರು.

ಒಂದು ಸುಂದರ ಕಾವ್ಯದಂತಿರುವ ‘ಅಮ್ಮಚ್ಚಿ ಎಂಬ ನೆನಪು’ ತೆರೆಯ ಮೇಲೆ ಅರಳಿದ ಕಥೆ ನಿಮ್ಮ ಮುಂದೆ..

ಅದೊಂದು ಭಾನುವಾರದ ಬೆಳಗು, ಅಮ್ಮನ ಮನೆಯಲ್ಲಿ ಆರಾಮವಾಗಿ ಕಾಫಿ ಹೀರುತ್ತಾ ದಿನಪತ್ರಿಕೆ ತಿರುವುತ್ತಿದ್ದಾಗ ಕಣ್ಣಿಗೆ ಬಿದ್ದವಳೇ ‘ಅಕ್ಕು’. ನಾನು ಬರೆಯುತ್ತಿರುವ ಈ ‘ಇವಳು ಅಮ್ಮಚ್ಚಿ’ ಅಂಕಣದಲ್ಲಿ ‘ಅಕ್ಕು’ ಪ್ರಸ್ತಾಪ ಏಕೆ? ಅಂದರೆ, ‘ಅಕ್ಕು’ನಿಂದ ‘ಅಮ್ಮಚ್ಚಿ’ ‘ಅಮ್ಮಚ್ಚಿ’ಯಿಂದ, ‘ಪುಟ್ಟಮ್ಮತ್ತೆ’ ಹುಟ್ಟಿ ‘ಅಕ್ಕು’ ನಾಟಕವಾದಳು, ‘ಅಮ್ಮಚ್ಚಿ’ ಸಿನೆಮಾ ಆದಳು.

ಸಿನೆಮಾದ ಪಯಣದಲ್ಲಿ ಮೊದಲ ಅಧ್ಯಾಯ ‘ಅಕ್ಕು’ ನಾಟಕ… ನಾಟಕವಿಲ್ಲದೆ, ಸಿನೆಮಾ ಪಯಣ ಹೇಗೆ ಮುಂದುವರಿಸಲಿ?

‘ಅಕ್ಕು ಮನೆಗೆ ಬಂದಳು’ ಅಂದು..

ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ. ‘ಎಮ್ ಎಸ್ ಆಶಾದೇವಿ’ಯವರು ಬರೆಯುತ್ತಿದ್ದ ಸ್ತ್ರೀ ಪಾತ್ರಗಳ ವಿಶ್ಲೇಷಣೆ ಮಾಲಿಕೆಯಲ್ಲಿ ಅಂದು ವಿರಾಜಿಸುತ್ತಿದ್ದವಳು ‘ಅಕ್ಕು’. ವಿಶ್ಲೇಷಣೆಯಲ್ಲೇ ಅಷ್ಟು ಸೆಳೆದ ಅಕ್ಕು ಕತೆಯಲ್ಲಿ ಹೇಗಿರಬಹುದೆಂಬ ಕುತೂಹಲದಲ್ಲಿ ಮರುದಿನವೇ ‘ಅಂಕಿತ ಪುಸ್ತಕಕ್ಕೆ’ಗೆ ಹೋಗಿ ‘ವೈದೇಹಿ ಕತೆಗಳು’ ಪುಸ್ತಕವನ್ನು ತಂದು ಓದಿದ ಮೇಲೆ ನಿರ್ಧರಿಸಿದ್ದು ‘ಅಕ್ಕು’ ಕತೆ ನಾಟಕವಾಗಲೇಬೇಕೆಂದು.

ಬಹುಶಃ ನಾನಾಗ ಮೂರನೇ ತರಗತಿಯಿರಬಹುದು. ನಮ್ಮ ರಸ್ತೆಯಲ್ಲೇ ಇದ್ದ ಒಂದು ಮನೆಯಲ್ಲಿ ‘ಅಕ್ಕು’ವಿನಂತೆಯೇ ಒಬ್ಬಳಿದ್ದಳು. ಹೆಸರೇನೋ ಗೊತ್ತಿಲ್ಲ ಎಲ್ಲರೂ ಕರೆಯುತ್ತಿದ್ದುದು ‘ಭೀಮಿ’ ಎಂದು.‌ ಮನೆಯವರಿಂದ ಹೊರದೂಡಲ್ಪಟ್ಟು, ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುತ್ತಾ, ರಸ್ತೆ ರಸ್ತೆ ಅಲೆಯುತ್ತಿದ್ದ ‘ಭೀಮಿ’ಗೆ ಏನಾಗುತ್ತಿತ್ತೋ ಗೊತ್ತಿಲ್ಲ ಅವರ ಮನೆಯವರು ಸಾರ್ವಜನಿಕವಾಗಿ ಆಚರಿಸುವ ನರಸಿಂಹ ಜಯಂತಿ ಹಬ್ಬದ ದಿನ ನೂರಾರು ಜನರೆದುರು ಮನೆಯವರನ್ನು, ಬೈಯುತ್ತಾ ಎಲ್ಲರ ಪಿತ್ತ ಕೆರಳಿಸುತ್ತಿದ್ದಳು.

ಅಂತದ್ದೇ ಒಂದು ದಿನ ಸಿಟ್ಟಗೆದ್ದ ‘ಭೀಮಿ’ಯ ತಮ್ಮ, ಕಬ್ಬಿಣದ ಛೇರಿನಿಂದ ಅವಳ ತಲೆಗೆ ಹೊಡೆದದ್ದು, ತಲೆಯಲ್ಲಿ ಒಂದೇ ಸಮನೆ ರಕ್ತ ಸೋರುತ್ತಿದ್ದರೂ ಭೀಮಿ ಅವನಿಗೆ ಹಿಡಿ ಶಾಪ ಹಾಕುತ್ತಿದ್ದುದನ್ನು ನೋಡುತ್ತಿದ್ದ ನನಗೆ ಆ ನರಸಿಂಹನೇ ಬಂದು ‘ಭೀಮಿ’ಯನ್ನು ಕಾಪಾಡಬಾರದೇ ಅನಿಸಿತ್ತು.

ಆ ಘಟನೆ ನನ್ನ ಮುಗ್ಧ ಮನಸ್ಸಿನ ಮೇಲೆ ಅಳಿಸಲಾಗದ ಗಾಯವನ್ನುಂಟುಮಾಡಿತ್ತು. ‘ಅಕ್ಕು’ವನ್ನು ಓದುವಾಗ ಆ ಗಾಯದ ನೋವು ಮರುಕಳಿಸಿತು ‘ಅಕ್ಕು’ ತಮ್ಮ ವಾಸುವಿನಲ್ಲಿ ‘ಭೀಮಿ’ಯ ತಮ್ಮ ಕಾಣಿಸಿದ್ದ.

ಇವೆಲ್ಲವನ್ನೂ ರಂಗದ ಮೇಲೆ ತರಬೇಕು, ‘ಅಕ್ಕು’ವಿನಂತ ಹೆಣ್ಣುಮಕ್ಕಳ ಕರಾಳ ಕತೆಯನ್ನು ಪ್ರೇಕ್ಷಕರಿಗೆ ಮುಟ್ಟಿಸಬೇಕೆಂದು ನಿರ್ಧರಿಸಿದ್ದಾಯಿತು. ಆದರೆ, ಕೆಲ ಘಟನೆಗಳನ್ನಷ್ಟೇ ಒಳಗೊಂಡ ‘ಅಕ್ಕು’ ಕತೆಯನ್ನು ನಾಟಕ ಮಾಡುವುದಾದರೂ ಹೇಗೆ? ಅವಳಿಗೆ ಹಿನ್ನೆಲೆ, ಮುನ್ನೆಲೆ ಏನಾದರೂ ಸೃಷ್ಟಿಸಲಾ? ಎಂಬ ಆಲೋಚನೆ ಬಂತು , ಮರುಕ್ಷಣವೇ ಹಾಗೇನಾದರೂ ಆದರೆ ‘ಅಕ್ಕು’ವನ್ನು ಕೊಲ್ಲುತ್ತೇನೆ ಅನಿಸಿತು, ಆಗ ನನ್ನ ಸಹಾಯಕ್ಕೆ ಬಂದವರೇ ‘ಅಮ್ಮಚ್ಚಿ’ ಮತ್ತು ‘ಪುಟ್ಟಮ್ಮತ್ತೆ…’

‘ಅಕ್ಕು’ ಒಬ್ಬ ಕೂಡು ಕುಟುಂಬದ ಸ್ವಲ್ಪ ಶ್ರೀಮಂತರೆನಿಸುವ ಕುಟುಂಬದ ಮಗಳು, ‘ಪುಟ್ಟಮ್ಮತ್ತೆ’ ಕತೆಯಲ್ಲಿ ಅವಳಿಗೆ ಆಸರೆ ನೀಡಿದ್ದು ಅಂತದ್ದೇ ಒಂದು ಶ್ರೀಮಂತ ಕುಟುಂಬ ಹಾಗಾಗಿ ‘ಪುಟ್ಟಮ್ಮತ್ತೆ’ ‘ಅಕ್ಕು’ ಮನೆಯ ಔಟ್ ಹೌಸ್‌ ನಲ್ಲಿ ಬಂದು ಕೂತಳು. ‘ಪುಟ್ಟಮ್ಮತ್ತೆ’ಯ ಮೊಮ್ಮಗಳು ಕಮಲಾಕ್ಷಿಯ ಜಾಗವನ್ನು ‘ಅಮ್ಮಚ್ಚಿ’ ಆಕ್ರಮಿಸಿದಳು. ಹೀಗೆ ಮೂರು ಕತೆಗಳು ಸೇರಿ ‘ಅಕ್ಕು’ ನಾಟಕದ ಸ್ಕ್ರೀನ್ ಪ್ಲೇ ಸಿದ್ಧಗೊಂಡಿತು.

ಮೂರು ಪಾತ್ರಗಳಾದ ‘ಅಕ್ಕು’ ‘ಅಮ್ಮಚ್ಚಿ’ ‘ಪುಟ್ಟಮ್ಮತ್ತೆ’ ನನ್ನೊಳಗನ್ನು ಆಕ್ರಮಿಸಿ ಬಿಟ್ಟರು. ಆದರೆ ಅವರು ನಾಟಕವಾಗಲು ಸೃಷ್ಟಿಕರ್ತೆಯ ಒಪ್ಪಿಗೆ ಬೇಕಲ್ಲ… ಕೆಲವು ವೇದಿಕೆಗಳಲ್ಲಿ ಮಾತ್ರ ನೋಡಿದ್ದ ವೈದೇಹಿ ಮೇಡಂ ನನಗೆ ಕಂಡಿದ್ದು, ಸ್ಟ್ರಿಕ್ಟ್ ಹೆಡ್ ಮೇಡಂ ರೀತಿ, ಅವರನ್ನು ಹೇಗೆ ಒಪ್ಪಿಗೆ ಕೇಳುವುದು? ಎನ್ನುವ ಆತಂಕದಲ್ಲಿದ್ದಾಗ, ನಮ್ಮ ತಂಡದ ಕಲಾವಿದರಾದ ಗೀತಾ ಸುರತ್ಕಲ್ “ಅಷ್ಟೇ ತಾನೆ, ವೈದೇಹಿಯವರನ್ನು ನಾನು ಪರಿಚಯಿಸುತ್ತೇನೆ” ಅಂದದ್ದೇ ಸೀದಾ ಕರೆದುಕೊಂಡು ಹೋದದ್ದು ವೈದೇಹಿಯವರ ಮುದ್ದಾದ ಕುಟೀರ ‘ಇರುವಂತಿಗೆ’ಗೆ.

ಅಲ್ಲಿ ನಾನು ಭೇಟಿಯಾದ ವೈದೇಹಿ ಮೇಡಂಗೂ, ನನ್ನ ಕಲ್ಪನೆಯಲ್ಲಿದ್ದ ಆ ಸ್ಟ್ರಿಕ್ಟ್ ವೈದೇಹಿ ಮೇಡಂಗೂ ಅಜಗಜಾಂತರ ವ್ಯತ್ಯಾಸ. ಅಲ್ಲಿ ನಾನು ಕಂಡದ್ದು ಒಬ್ಬ ಮಮತಾಮಯಿ ವೈದೇಹಿಯವರನ್ನ. ಎಷ್ಟೋ ವರ್ಷಗಳ ಪರಿಚಯದಂತೆ ಮಾತನಾಡಿಸುತ್ತಾ ಉಪಚರಿಸಿದ್ದೂ ಅಲ್ಲದೆ, “ಒಬ್ಬ ಹೆಣ್ಣುಮಗಳು ಕೇಳಿದರೆ ನಾನು ಖಂಡಿತ ಇಲ್ಲ ಅನ್ನುವುದಿಲ್ಲ, ನಾಟಕ ‌ಮಾಡು” ಅಂದಾಗ, ಸ್ವರ್ಗ ಇಲ್ಲೇ ಅನಿಸುವಷ್ಟರಲ್ಲಿ…

“ಆದರೆ, ಎರಡು ಕಂಡೀಷನ್” ಅನ್ನುವುದೇ? ಎದೆ ಧಸಕ್ ಎಂದಿತು. ಕಂಡಿಷನ್ಸ್ ಹೀಗಿದ್ದವು…
೧. ನಾಟಕ ನೋಡಲು ನನ್ನನ್ನು ಕರೆಯಬಾರದು.
೨. ನಾಟಕದ ಭಾಷೆ ಕುಂದಕನ್ನಡವೇ ಆಗಬೇಕು.

ಅಬ್ಬಾ! ಇಷ್ಟೇ ತಾನೆ ಅನ್ನುವ ಸಮಾಧಾನದಿಂದ ಮೊದಲ ಕಂಡೀಷನ್ ಗೆ ಆಗಲಿ ಮೇಡಂ ಅಂದೆ, ಎರಡನೆಯದೂ ಓಕೆ. ಆದರೆ, ಸಂಭಾಷಣೆ ನೀವೇ ಬರೆಯಬಹುದೇ ಅಂತಾ ತುಸು ಆತಂಕದಲ್ಲಿಯೇ ಕೇಳಿದ್ದೆ. ನನಗೆ ಆಶ್ಚರ್ಯವಾದದ್ದು ಅವರು ಒಮ್ಮೆಲೇ ಪ್ರೀತಿಯಿಂದ ಒಪ್ಪಿಕೊಂಡಿದ್ದೂ ಅಲ್ಲದೆ, ಹೇಳಿದ ಸಮಯದೊಳಗೆ ಸ್ಕ್ರಿಪ್ಟ್ ಬರೆದು ಕೊಟ್ಟಾಗ… ಅಂತೂ ‘ಅಕ್ಕು’ ಕತೆಯಿಂದ ನಾಟಕಕ್ಕೆ ಪದಗಳಲ್ಲಿ ಸಿದ್ಧವಾಗಿ ಬಂದಳು.

ವೈದೇಹಿ ಮೇಡಂ ಏನೋ ಬಹಳ ಅಚ್ಚುಕಟ್ಟಾಗಿ, ಮುದ್ದಾದ ಕುಂದ ಕನ್ನಡದಲ್ಲಿ ಸಂಭಾಷಣೆ ಬರೆದು ಕೊಟ್ಟರು ನಾನೀಗ ಅದನ್ನು ಅಷ್ಟೇ ಅಚ್ಚುಕಟ್ಟಾಗಿ ರಂಗಕ್ಕೆ ತರಬೇಕಲ್ಲ… ನಾಟಕವಾಗಲಿ, ಸಿನೆಮಾವಾಗಲಿ, ಪಾತ್ರಗಳಿಗೆ ತಕ್ಕ ಕಲಾವಿದರು ಸಿಕ್ಕಿದರೆ ಅರ್ಧ ಯಶಸ್ಸು ಸಿಕ್ಕಿದಂತೆ. ಸೋ ತಂಡದ ಕಲಾವಿದರಲ್ಲಿ ಅವರವರಿಗೆ ಹೊಂದುವ ಪಾತ್ರಗಳನ್ನು ನೀಡಲಾಯಿತು. ಎಲ್ಲ ಪಾತ್ರಗಳಿಗಿಂತ ಬಹಳ ಬೇಗ ತನ್ನ ಪಾತ್ರಧಾರಿಯನ್ನು ತಾನೇ ಆರಿಸಿಕೊಂಡವಳು ‘ಪುಟ್ಟಮ್ಮತ್ತೆ…’

“ಪುಟ್ಟಮ್ಮತ್ತೆ ಏಕೆ ಗಂಡಸು?”

ನಾಟಕ ನೋಡಿದ ಬಹುತೇಕ ಪ್ರೇಕ್ಷಕರ ಈ ಪ್ರಶ್ನೆಗೆ “ಇದೇ ನನ್ನ ಉತ್ತರ…”

ಯಾವುದೇ ಹೆಣ್ಣುಮಗಳು ಸಿಗಲಿಲ್ಲವೆಂದಾಗಲಿ ಅಥವಾ ಯಾರೂ ಮಾಡಲಾಗದ ವಿಶೇಷವನ್ನು ನಾನು ಮಾಡುತ್ತೇನೆ ಎಂದಾಗಲಿ, ‘ಪುಟ್ಟಮ್ಮತ್ತೆ’ ಪಾತ್ರವನ್ನು ‘ರಾಧಾಕೃಷ್ಣ ಉರಾಳ’ರಿಂದ ಮಾಡಿಸಿದ್ದಲ್ಲ. ಇನ್ನು ಉರಾಳರು ಯಕ್ಷಗಾನದಲ್ಲಿ ಸ್ತ್ರೀ ಪಾತ್ರ ಮಾಡುತ್ತಿದ್ದರು ಅನ್ನುವ ಕಾರಣವಂತೂ ಅಲ್ಲವೇ ಅಲ್ಲ.

ಹಾಗಾದರೆ ಏಕೆ ಆ ಪಾತ್ರಕ್ಕೆ ಅವರು? ಹಿಂದಿನ ಸರಣಿಯಲ್ಲಿ ಹೇಳಿದ ಹಾಗೆ ಮ್ಯಾಜಿಕ್ ನಂತೆ ತಾನೇ ಆಗಿ ಬಿಡುವ ಘಟನೆಗಳಲ್ಲಿ ಇದೂ ಒಂದು. ಪುಟ್ಟಮ್ಮತ್ತೆ ಕತೆ ಓದುವಾಗಲೇ ನನ್ನ ಮನಸ್ಸಿನಲ್ಲಿ ಆ ಪಾತ್ರವಾಗಿ ಕಾಣಿಸಿದವರು ಉರಾಳರು. ಒಂದಿಷ್ಟೂ ಅನುಮಾನವಿಲ್ಲದೆ ಆ ಪಾತ್ರವನ್ನು ಅವರೇ ನಿರ್ವಹಿಸಬೇಕೆಂದು ನಿರ್ಧರಿಸಿ ಬಿಟ್ಟಿದ್ದೆ. ನನ್ನ ನಿರೀಕ್ಷೆಗೂ ಮೀರಿ ಪಾತ್ರವನ್ನು ಅನುಭವಿಸಿದ್ದೂ ಅಲ್ಲದೆ, ಪ್ರತೀ ಪ್ರದರ್ಶನದಲ್ಲೂ ‘ಅಕ್ಕು’ ‘ಅಮ್ಮಚ್ಚಿ’ಯರನ್ನೂ ಮೀರಿಸಿ ಚಪ್ಪಾಳೆ ಗಿಟ್ಟಿಸುತ್ತಿದ್ದವಳು ಉರಾಳರಲ್ಲ ಅವರೊಳಗಿದ್ದ ‘ಪುಟ್ಟಮ್ಮತ್ತೆ’.

‘ಅಕ್ಕು’ ‘ಅಮ್ಮಚ್ಚಿ’ ‘ಪುಟ್ಟಮ್ಮತ್ತೆ’ಯರೊಂದಿಗೆ, ವಾಸು, ಶೇಷಮ್ಮ , ಅಪ್ಪ, ಅಣ್ಣ, ಪುಟ್ಟ, ಮಾಣಿ ಮತ್ತು ಉಳಿದೆಲ್ಲ ಪಾತ್ರಗಳು, ರಂಗವನ್ನೇರಲು ಸನ್ನದ್ಧರಾದರು. ವೈದೇಹಿ ಮೇಡಂ ಆಣತಿಯಂತೆ, ಕಲಾವಿದರು ಕುಂದ ಕನ್ನಡವನ್ನು ತಮ್ಮದಾಗಿಸಿಕೊಳ್ಳಲು ಕಸರತ್ತು ನಡೆಸಿದ್ದರು. ಇವರ ಸಹಾಯಕ್ಕೆ ನಿಂತವರು ತಂಡದಲ್ಲಿದ್ದ ಕೆಲ, ಕುಂದಾಪುರದ ಕಲಾವಿದರು ಮತ್ತು ವೈದೇಹಿಯವರು ಅವರದ್ದೇ ಧ್ವನಿಯಲ್ಲಿ ರೆಕಾರ್ಡ್ ಮಾಡಿ ಕಳುಹಿಸಿದ್ದ ಸಂಭಾಷಣೆಯ ಆಡಿಯೋ!!

ಯಾವುದೇ ಕೃತಿಯನ್ನು ಒಂದು ಮಾಧ್ಯಮದಿಂದ ಮತ್ತೊಂದು ಮಾಧ್ಯಮಕ್ಕೆ ತರುವುದು ದೊಡ್ಡ ಸಾಹಸ. ಓದುಗರ ಮನಸ್ಸಿನಲ್ಲಿ ಅರಳಿದ ಕಲ್ಪನೆಗಳಿಗೆ ಮತ್ತು ಮುಖ್ಯವಾಗಿ ಬರಹಗಾರರ ಕಾಣ್ಕೆಗಳಿಗೆ ಸರಿಯಾಗಿ ಸಾಹಿತ್ಯ ಕೃತಿಯನ್ನು ರಂಗದ ಮೇಲೆ ತರುವ ಜವಾಬ್ದಾರಿ ನಿರ್ದೇಶಕರದ್ದು.‌ ಹಾಗಾಗಿ ಬಹಳಷ್ಟು ಆಸ್ತೆ ವಹಿಸಿ ಕಲಾವಿದರೊಡಗೂಡಿ ನಾಟಕವನ್ನು ಕಟ್ಟುವ ಕಾಯಕ ಆರಂಭವಾಯಿತು.

ಎಲ್ಲಾ ಪಾತ್ರಗಳೂ ನಮ್ಮೊಡನೆ ಒಡನಾಡಿ ಒಂದು ರೂಪ ಪಡೆದುಕೊಂಡವು ‘ಪುಟ್ಟಮ್ಮತ್ತೆ’ ಉರಾಳರನ್ನು ಆವರಿಸಿಕೊಂಡರೆ, ದಿವ್ಯಾ ಕಾರಂತ್ ‘ಅಮ್ಮಚ್ಚಿ’ಯೇ ಆಗಿ ಬಿಟ್ಟಿದ್ದಳು. ಆದರೆ, ನನ್ನನ್ನು ಮತ್ತು ಪಾತ್ರಧಾರಿ ಯಶಸ್ವಿನಿಯನ್ನೂ ಸಾಕಷ್ಟು ಸತಾಯಿಸಿದವಳು ‘ಅಕ್ಕು…’ ನಾಟಕಕ್ಕೆ ನಾಲ್ಕು ದಿನ ಉಳಿದಿದ್ದರೂ ಅವಳು ನಮಗೆ ದಕ್ಕಿರಲಿಲ್ಲ.

ಆ ಪಾತ್ರ ತಂತಿಯ ಮೇಲಿನ ನಡಿಗೆಯಂತೆ, ಸ್ವಲ್ಪ ಕಡಿಮೆಯಾದರೆ, ತೀರಾ ನಾರ್ಮಲ್, ಸ್ವಲ್ಪ ಜಾಸ್ತಿಯಾದರೆ ತೀರಾ ಹುಚ್ಚಿಯ ಹಾಗಾಗುತ್ತಿತ್ತು. ‘ಅಕ್ಕು’ವಿಗಿದ್ದದ್ದು ಹುಚ್ಚಲ್ಲ. ಅದು ಒಂದು ಮನಸ್ಥಿತಿ. ಅದನ್ನು ಅಭಿನಯಿಸಲು ಸಾಧ್ಯವಿಲ್ಲ ಅನುಭವಿಸಬೇಕು.

ಹೀಗೆ ಕೈಗೆ ಸಿಗದೆ ನಮ್ಮನ್ನು ಸತಾಯಿಸುತ್ತಿದ್ದ ಅಕ್ಕುವನ್ನು ಅಂದು ಹಿಡಿದೇ ಬಿಟ್ಟಿದ್ದೆ. ಯಶಸ್ವಿನಿ ಅಂದು ಕಾರಣಾಂತರದಿಂದ ರಿಹರ್ಸಲ್ ಗೆ ರಜಾ ಹಾಕಿದಾಗ ಅನಿವಾರ್ಯವಾಗಿ ನಾನೇ ‘ಅಕ್ಕು’ ಆಗುವ ಸಂದರ್ಭ ಬಂತು, ಕಡೆಗೂ ‘ಅಕ್ಕು’ ಸಿಕ್ಕಳು. ಅವಳನ್ನು ಹಿಡಿದು ಯಶಸ್ವಿನಿಯ ಕೈಗೆ ಒಪ್ಪಿಸಿದ್ದೆ. ‘ಅಕ್ಕು’ ಅವಳಲ್ಲಿ ಆವಾಹನೆಯಾದಳು… ಇಡೀ ತಂಡ ಕಡೆ ಗಳಿಗೆಯ ರಿಹರ್ಸಲ್ ಅನ್ನು ಶ್ರದ್ಧೆಯಿಂದ ಮಾಡುವುದರೊಂದಿಗೆ ‘ಅಕ್ಕು’ ರಂಗದ ಮೇಲೇರಲು ಸಿದ್ಧಗೊಂಡಳು!!

‍ಲೇಖಕರು ಚಂಪಾ ಶೆಟ್ಟಿ

August 30, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: