ಅಮ್ಮಾ ಅವರಿಗೆಲ್ಲ ಹೇಗೆ ಅಷ್ಟೊಂದು ಗಾಯಗಳಾಗಿದ್ದು?

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟ ಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ʻವಾವ್!‌ ಆ ವಾತಾವರಣಕ್ಕೆ ಮಗನನ್ನು ಕರಕೊಂಡು ಹೇಗೆ ಹೋದ್ರಿ? ಮಗ ಏನೂ ಕೇಳಲಿಲ್ವಾ? ಹೆದರಲಿಲ್ವಾ? ಹೆಂಗೆ ಅವನನ್ನು ಮಾನಸಿಕವಾಗಿ ಸಿದ್ಧಗೊಳಿಸಿದ್ರಿ?‌ʼ
-ಇಂಥದ್ದೊಂದು ಮೆಸೇಜು ಆ ದಿನ ನನ್ನ ವಾಟ್ಸ್ಯಾಪ್‌ ಸ್ಟೇಟಸ್ಸಿಗೆ ಉತ್ತರವಾಗಿ ಬಂದು ಬಿದ್ದಿತ್ತು.

ಹೌದಲ್ಲಾ! ಇಂಥದ್ದೊಂದು ಯೋಚನೆ ಅಲ್ಲಿಗೆ ಹೋಗೋ ಮೊದಲು ನನ್ನ ಮನಸ್ಸಿನಲ್ಲಿ ಬರಲಿಲ್ಲವಲ್ಲ ಎಂದು ನೆಮ್ಮದಿಯೆನಿಸಿತು. ಹೌದು, ಅವರನ್ನೆಲ್ಲಾ ನೋಡಿ ಈ ಪುಟಾಣಿ ಮಗ ಹೇಗೆ ಪ್ರತಿಕ್ರಿಯಿಸಬಹುದು? ಅಂತ ಸಣ್ಣ ಚಿಂತನೆಯನ್ನೂ ನಾವು ನಡೆಸಿರಲಿಲ್ಲ. ಹೋಗಿ ಒಂದು ತಾಸು ಅಲ್ಲಿ ಕಳೆದು, ಮಾತಾಡಿ, ಅವರೆಲ್ಲರ ಜೊತೆಗೊಂದು ಮಗನೂ ಸೇರಿದಂತೆ ಸೆಲ್ಫೀ ಕ್ಲಿಕ್ಕಿಸಿ ಹೊರಗೆ ಬಂದು ಕಾರು ಹತ್ತುವಾಗ ಆಕಾಶವೇ ಕಪ್ಪಿಟ್ಟು ಧೋ ಎಂದು ಮಳೆ ಸುರಿಯತೊಡಗಿತು.

ಸಂಜೆ ನಾಲ್ಕರ ಹೊತ್ತು, ಏಳರ ಮುಸ್ಸಂಜೆಯಂತೆ ದಿಢೀರ್‌ ಬದಲಾಗಿ, ಫಳ್‌ ಫಳಾರ್‌ ಎಂದು ಕೋಲ್ಮಿಂಚು ಹರಿದು, ನಡುಗಿಸುವ ಗುಡುಗಿನ ಜೊತೆಗಿನ ಮಳೆಯ ಸದ್ದಿನೊಂದಿಗೆ ಮಗ ಮೆಲ್ಲಗೆ ಕೇಳಿದ್ದ, ಅಮ್ಮಾ ಅವರಿಗೆಲ್ಲ ಮುಖವೆಲ್ಲ ಹೇಗೆ ಅಷ್ಟೊಂದು ಗಾಯಗಳಾಗಿದ್ದು?

ಹೇಗೆ ವಿವರಿಸಲಿ ಇಷ್ಟು ಪುಟಾಣಿ ಮಗುವಿಗೆ! ಎಂಬ ಒಂದೆರಡು ನಿಮಿಷದ ಗಾಢ ಮೌನ.

ಆಗ್ರಾದಲ್ಲಿ ಸ್ನೇಹಿತರೊಬ್ಬರ ಮದುವೆಗೆ ಹೋಗಿದ್ದ ನಾವು ಮಾಡಿದ್ದ ಪ್ಲ್ಯಾನೇ ಒಂದು, ಆಗಿದ್ದೇ ಇನ್ನೊಂದು. ಮದುವೆಗೊಂದು ಹಾಜರಿ ಹಾಕಿ, ಭರ್ಜರಿ ತಿಂದು ತೇಗಿ ಸ್ವಲ್ಪ ಕೈಕಾಲು ಬಿಟ್ಟು ನಿದ್ದೆ ಮಾಡಿ, ಆಮೇಲೆ ಬೆಳಗ್ಗೆ ಬೇಗ ಎದ್ದು ಪ್ರತಿ ಬಾರಿ ಹೋದಾಗಲೂ ಪದೇ ಪದೇ ಮಿಸ್‌ ಆಗಿದ್ದ ಆಗ್ರಾದ ಫೇಮಸ್‌ ಬೇಡೈ (ಪೂರಿಯಂತಹ ತಿನಿಸು), ಇನ್ಯಾವುದೋ ಪುಟಾಣಿ ಅಂಗಡಿಯಲ್ಲಿ ಜನ ಮುಗಿಬೀಳುವ ಬಿಸಿಬಿಸಿ ಜಿಲೇಬಿ, ಸಿಹಿಸಿಹಿ ಬಾಸುಂದಿ ಬಾರಿಸುವ ನಮ್ಮ ಲೆಕ್ಕಾಚಾರ ಬೇರೆಯೇ ಇತ್ತು.

ಇಷ್ಟೆಲ್ಲ ಮಾಡಿ ಮಧ್ಯಾಹ್ನ ಮೇಲೆ ವಾಪಾಸ್‌ ದೆಹಲಿಗೆ ಅಂತ ಅಂದುಕೊಂಡಿದ್ದ ನಮ್ಮನ್ನು ವಧುವಿನ ಕಡೆಯವರು ಕಟ್ಟಿ ಹಾಕಿ ಬಿಟ್ಟಿದ್ದರು. ʻಅದ್ಹೇಗೆ ಅಷ್ಟು ಬೇಗ ಓಡ್ತೀರಿ, ನಮ್ಮ ಬೇಡೈ ತಿಂದು ಹೋಗದಿದ್ದರೆ ಹೇಗೆ? ನಿಮಗೆ ಎಲ್ಲಾ ವ್ಯವಸ್ಥೆ ಮಾಡಿಯಾಗಿದೆ, ಬೆಳಗ್ಗೆ ಬೇಗ ತಿಂಡಿ ತಿಂದು ಆಮೇಲೆ ಹೊರಡಿʼ ಅಂತ ಕೈಜೋಡಿಸಿ ಹೇಳಿದ್ದರು.

ʻಅರೆ, ನಾವಿನ್ನೆಲ್ಲೋ ಬೇಡೈ ತಿನ್ನಬೇಕೆಂದುಕೊಂಡ್ರೆ, ಇವರೂ ಅದನ್ನೇ ನಮ್ಮ ಮನೇಲೇ ತಿನ್ನಿ ಅಂತಾರಲ್ಲ!ʼ ಅಂತ ಅವರ ಪ್ರೀತಿಗೆ ಇಲ್ಲವೆನ್ನಲಾಗದೆ, ಉತ್ತರ ಭಾರತೀಯರ ʻಬೆಳಗ್ಗೆ ಬೇಗʼ ತಿಂಡಿಯ ಅರ್ಥ ನಮಗೆ ಗೊತ್ತಿದ್ದರೂ, ಯಾವುದಕ್ಕೂ ನಾವ್‌ ರೆಡಿ ಇರೋಣ ಎಂದುಕೊಂಡು ಅಪ್ಪಟ ದಕ್ಷಿಣ ಭಾರತೀಯರ ಮನಸ್ಥಿತಿಯಲ್ಲಿ ಎಂಟು ಗಂಟೆಗೆಲ್ಲ ರೆಡಿಯಾಗಿ ಬಿಟ್ಟಿದ್ದೆವು.

ಅತ್ತ ಹೊರಡಲೂ ಆಗದೆ, ಇತ್ತ ಬೇರೆ ತಿನ್ನಲೂ ಆಗದೆ, ರಾತ್ರಿ ಭರ್ಜರಿ ಬಾರಿಸಿದ್ದೂ ಹೊಟ್ಟೆಯಲ್ಲಿ ಕರಗಿ ಟುರ್‌ ಎಂದು ಸದ್ದಾಗಿ, ಕೊನೆಗೂ ೧೧ ಗಂಟೆಯ ಸುಮಾರಿಗೆ ಅವರಿಗೆ ʻಬೆಳಗ್ಗೆʼಯಾಗಿ ನಮ್ಮನ್ನು ಆದರಾತಿಥ್ಯದಿಂದ ಬರಮಾಡಿ ನಮಗೆಲ್ಲಾ ಮಧ್ಯಾಹ್ನ ಊಟಕ್ಕೂ ಜಾಗವಿಲ್ಲದಂತೆ ಬೇಡೈಯೂ ಸೇರಿದಂತೆ ಮೂರ್ನಾಲ್ಕು ಬಗೆಯ ತಿಂಡಿಗಳಿಂದ ಹಿಡಿದು ಬಿಸಿಬಿಸಿ ಜಿಲೇಬಿವರೆಗೂ ಬಡಿಸಿ, ಕೊನೆಗೂ ಬೀಳ್ಕೊಟ್ಟರು.

ಹೊಟ್ಟೆ ಫುಲ್ಲಾಗಿ ನಮ್ಮ ಹೊಟ್ಟೆಯ ಇತರ ಪ್ಲ್ಯಾನುಗಳೆಲ್ಲ ತಲೆಕೆಳಗಾಗಿ ಹೊಸ ಪ್ಲ್ಯಾನು ಮಾಡಿ, ಸುಮ್ನೆ ಅಲ್ಲಿಲ್ಲಿ ಸುತ್ತಿ ರೆಗ್ಯುಲರ್ ಪಂಛೀ ಪೇಠಾದಿಂದ ನಮಗೆ, ಮತ್ತೆ ಅವರಿವರಿಗೆ ಪೇಠಾ ಕಟ್ಟಿಸಿಕೊಂಡು ಅಂತೂ ಹೊಟ್ಟೆಯಲ್ಲಿರೋದನ್ನು ರಾತ್ರಿಯೊಳಗೆ ಕರಗಿಸಿಕೊಳ್ಳುವ ಅಂತ ಯೋಚನೆ ಮಾಡ್ತಾ ಇದ್ದಾಗ ಥಟ್ಟನೆ ನೆನಪಾಗಿದ್ದು ಈ ‘ಶಿರೋಸ್’.‌

ಎಷ್ಟೋ ಸಾರಿ ಆಗ್ರಾ ದಾರಿಯಾಗಿಯೇ ಎಲ್ಲೆಲ್ಲೋ ಹೋದಾಗಲೆಲ್ಲ, ಅವರಿವರನ್ನು ಕರಕೊಂಡು ಆಗ್ರಾ ತೋರಿಸಲು ಗೈಡ್‌ ಸರ್ವೀಸ್‌ ಕೊಟ್ಟಾಗಲೆಲ್ಲ ಈ ‘ಶಿರೋಸ್’‌ ಕಡೆ ಮುಖ ಹಾಕಲಾಗಿರಲಿಲ್ಲ. ಆಗಿದ್ದಾಗಲಿ ಈಗಲಾದರೂ ಕಾಲ ಕೂಡಿ ಬಂತಲ್ಲ ಎಂದು ‘ಶಿರೋಸ್’‌ ಕಡೆಗೆ ಕಾರು ತಿರುಗಿಸಿದೆವು.

ʻಶಿರೋಸ್‌ ಹ್ಯಾಂಗ್‌ ಔಟ್‌ʼ- ಆಸಿಡ್‌ ದಾಳಿಗೆ ಒಳಗಾಗಿ ಬೆಂದ ಜೀವಗಳಿಗಾಗಿಗೇ ಇರುವ ಕೆಫೆ.

ಆಸಿಡ್‌ ದಾಳಿಗೆ ತುತ್ತಾದ ಹೆಣ್ಣು ಮಕ್ಕಳು ತಮ್ಮ ಸ್ವಂತ ಕಾಲ ಮೇಲೆ ನಿಲ್ಲಲು ಮಾಡಿದ ಒಂದು ಅದ್ಭುತ ವೇದಿಕೆ. ಆಸಿಡ್‌ ದಾಳಿಯ ವಿರುದ್ಧ ಜಾಗೃತಿ ಮೂಡಿಸುವ ಜೊತೆಗೆ ಈಗಾಗಲೇ ಇದರಿಂದ ಆಘಾತಕ್ಕೊಳಗಾದವರರನ್ನು ಮಾನಸಿಕ, ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಸ್ವಯಂಸೇವಾ ಸಂಸ್ಥೆ.

ಇಲ್ಲಿ ಉತ್ತರ ಭಾರತೀಯ ಶೈಲಿಯ ಸಸ್ಯಾಹಾರಿ ಆಹಾರದ ಜೊತೆಗೆ ಕೆಲವು ಕಾಂಟಿನೆಂಟಲ್‌ ಡಿಶ್‌ಗಳು ಸಿಗುತ್ತವೆ. ಇವೆಲ್ಲಕ್ಕಿಂತ ಮಿಗಿಲಾಗಿ ಇಲ್ಲಿ ನೀವು ತಿಂದು ಕುಡಿದ ನಂತರ ಬಿಲ್‌ ನೀಡುವುದಿಲ್ಲ. ಬದಲಾಗಿ ನೀವೇ ನಿಮ್ಮ ಮನಸ್ಸಿಗನಿಸಿದ ದುಡ್ಡನ್ನು ಇಲ್ಲಿನ ಗೋಲಕದೊಳಕ್ಕೆ ಹಾಕಬಹುದು.

ಹಾಗೆ ಒಳಹೊಕ್ಕು ಕೂತಾಗ ಮೆನುಕಾರ್ಡಿನೊಂದಿಗೆ ಎದುರುಗೊಂಡಿದ್ದು ಅಲಿಘಡ್ ದ ಈ ಶಬ್ನಮ್.‌ ನಮಗೆ ಲೈಮ್‌ ಸೋಡಾ, ಮಗನಿಗೊಂದು ಲೈಮ್‌ ಜ್ಯೂಸು ಆರ್ಡರು ಮಾಡಿ ಕೂತು ಈಕೆಯನ್ನು ಮಾತಿಗೆಳೆದಾಗ ಕಥೆ ಕೇಳಿ ಬೆಚ್ಚಿದೆ. ಆಗ ಕೇವಲ ೧೫ರ ಹುಡುಗಿ ಈ ಶಬ್ನಮ್‌. ಅಪ್ಪನ ಸಾವು ಮನೆಯಲ್ಲಿ ಆರ್ಥಿಕ ಪರಿಸ್ಥಿತಿಯನ್ನು ಅಡಿ ಮೇಲಾಗಿಸಿದಾಗ ಸ್ಕೂಲು ಬಿಟ್ಟು ಬ್ಯೂಟಿ ಪಾರ್ಲರಿನಲ್ಲಿ ಕೆಲಸಕ್ಕೆ ಸೇರಿದ್ದಳು.

ಎಲ್ಲ ಒಂದು ಸುಸ್ಥಿತಿಗೆ ಬಂತು, ಜಗತ್ತು ಚಂದವಿದೆ ಎಂದು ಅನಿಸತೊಡಗಿದಾಗ ಎಲ್ಲವೂ ಮತ್ತೆ ಅಡಿ ಮೇಲಾಗಿತ್ತು. ಬ್ಯೂಟಿ ಪಾರ್ಲರಿನ ಒಡೆಯನ ಕಣ್ಣು ಈಕೆಯ ಮೇಲೆ ಬಿತ್ತು. ಮದುವೆಯಾಗು ಎಂದು ಹಿಂದೆ ಬಿದ್ದ. ʻಇಷ್ಟವಿಲ್ಲ ಎಂದು ಹೇಳಿದ್ದೇ ತಪ್ಪಾಯಿತು ನೋಡಿ ನನಗೆ, ನಾನು ಕನಸಿನಲ್ಲೂ ಯೋಚಿಸದ ದುರಂತವೊಂದು ನಡೆದು ಹೋಯಿತು. ಒಂದು ದಿನ ಆತ ನನ್ನ ಮೇಲೆ ಆಸಿಡ್‌ ಎರಚಿದ.

ಮುಖ, ಎದೆ, ಕೈ ಭಾಗವೆಲ್ಲ ಸುಟ್ಟು ಹೋಯಿತು. ಒಂದಾದ ಮೇಲೊಂದರಂತೆ ೧೧ ಶಸ್ತ್ರಚಿಕಿತ್ಸೆಗಳಾಯಿತು. ನಾನು ತಿಂದ ಹಾಗೂ ತಿನ್ನುತ್ತಿರುವ ನೋವಿನ ಮುಂದೆ ಆತನದೇನೂ ಇಲ್ಲ. ಹೇಗೋ ಹೋರಾಟ ನಡೆಸಿ ೧೮ ತಿಂಗಳು ಜೈಲುವಾಸ ಅನುಭವಿಸುವಂತೆ ಮಾಡಿದ್ದು ಬಿಟ್ಟರೆ ಆತ ನೆಮ್ಮದಿಯಾಗಿದ್ದಾನೆ.

ಆದರೆ, ನನ್ನ ಜೀವನ ನಡೆಯಬೇಕಲ್ಲ. ಬದುಕಬೇಕಾದರೆ ಹೊಟ್ಟೆಗೆ ಹಾಕಬೇಕಲ್ಲ? ಅದಕ್ಕೆ ದುಡಿಯಲೇ ಬೇಕಲ್ಲ! ಈ ಎಲ್ಲವುಗಳಿಂದ ಹೊರಬಂದು ಈಗ ೨೦೧೬ರಿಂದ ಈ ಸಂಸ್ಥೆಯೊಂದಿಗೆ ಸೇರಿಕೊಂಡೆ. ಬದುಕುವ ಉತ್ಸಾಹ, ಖುಷಿ ಎಲ್ಲವೂ ಮತ್ತೆ ಕಾಣುತ್ತಿದೆ. ಮತ್ತೆ ನನ್ನಂತವರೂ ಚಂದದ ಬದುಕಿನ ಕನಸು ಕಾಣಬಹುದು ಅಂತ ಅನಿಸತೊಡಗಿದೆ. ಇದಕ್ಕೆಲ್ಲ ಕಾರಣವಾಗಿದ್ದು ‘ಶಿರೋಸ್’ ಎಂದು ಹೇಳಿ ಮುಗಿಸುವಾಗ ಆ ಬೆಂದ ಮುಖದಲ್ಲೊಂದು ಚೆಂದದ ನಗುವಿನ ಸಂತೃಪ್ತಿಯಿತ್ತು.

ಈಕೆಯೊಂದಿಗೆ ಮಾತಾಡುತ್ತಿದ್ದಾಗಲೇ, ಇನ್ನೇನು ಸತ್ತು ಹೋಗುತ್ತದೆ ಎಂಬ ಸ್ಥಿತಿಗೆ ಬಂದಿದ್ದ, ನನ್ನ ಫೋನನ್ನು ಚಾರ್ಜಿಗೆ ಸ್ವಲ್ಪ ಹಾಕುವಿರಾ ಎಂದು ಕೇಳಿದಾಗ ಬಂದಿದ್ದು ಈ ಡಾಲಿ. ಅಷ್ಟರಲ್ಲಿ ಆರ್ಡರು ಮಾಡಿದ್ದ ಜ್ಯೂಸುಗಳೂ ಬಂದವು. ಈಗಷ್ಟೇ ಈಕೆಯನ್ನು ನೋಡಿದ್ದು ಎಂಬ ಅರಿವೇ ಆಗದಂತೆ ಆತ್ಮೀಯ ಭಾವ ಹರಡುವ ಈ ಡಾಲಿ, ಪಕ್ಕದ್ಮನೆ ಹುಡುಗಿಯ ಹಾಗೆ ಲಕಲಕನೆ ಅಲ್ಲಿಂದಿಲ್ಲಿ ಇಲ್ಲಿಂದಲ್ಲಿ ಇಡೀ ಕೆಫೆಯಲ್ಲಿ ಲವಲವಿಕೆಯಿಂದ ಓಡಾಡಿಕೊಂಡಿದ್ದಳು.

ಇನ್ನೂ ಪ್ರಪಂಚವೇನೆಂದು ಅರಿಯದ ೧೨ರ ಮುಗ್ಧ ವಯಸ್ಸಿನಲ್ಲಿಯೇ ೨೫ರ ಯುವಕನಿಂದ ಆಸಿಡ್‌ ದಾಳಿಗೆ ಒಳಗಾದ ಡಾಲಿ ಅನುಭವಿಸಿದ ನೋವುಗಳೆಷ್ಟೋ. ಸುಟ್ಟ ಮುಖದ ಹಿಂದಿನ ಹೋರಾಟಗಳೆಲ್ಲವೂ ಮುಖಕ್ಕೆ ಹೊದ್ದುಕೊಂಡಿದ್ದ ಶಾಲಿನೊಳಗೇ ಮುಗಿದು ಹೋಯಿತೆಂದು ಅಂದುಕೊಂಡು, ಬದುಕು ಮತ್ತೆ ಶುರು ಮಾಡುವುದು ಎಷ್ಟು ಕಷ್ಟವಿದೆ ಗೊತ್ತಾ? ಮನೆಯಿಂದ ಹೊರ ಜಗತ್ತಿಗೆ ಮುಖ ತೋರಿಸಲು ಹೆದರುತ್ತಿದ್ದ, ತನ್ನ ಮುಖ ಕಂಡು ಹೆದರಿ ಓಡುತ್ತಿದ್ದ ಮಕ್ಕಳನ್ನು ಕಂಡಾಗ ಕೆಟ್ಟು ಹೋಗುತ್ತಿದ್ದ ಮೂಡನ್ನೂ ನನ್ನ ಜೀವನದ ಎಂದೂ ಮುಗಿಯದ ಅಧ್ಯಾಯವೆಂಬಂತೆ ನನ್ನನ್ನು ನಾನು ಪೂರ್ಣ ಪ್ರಮಾಣದಲ್ಲಿ ಸ್ವೀಕರಿಸಿ ಬದುಕಿನ ಖುಷಿಗಳನ್ನು ಮತ್ತೆ ಅನುಭವಿಸಲು ಗುಂಡಿಗೆ ಬೇಕು ಗೊತ್ತಾ?

ಅದು ಈ ‘ಶಿರೋಸ್’‌ ನನಗೆ ಕೊಟ್ಟಿದೆ ಎನ್ನುವ ಡಾಲಿಯ ಮುಖದಲ್ಲಿ ಆನಂದದ ಮಿಂಚು. ʻನೀನು ನನ್ನ ಮುಖಕ್ಕೆ ಆಸಿಡ್‌ ಹಾಕಿರಬಹುದು, ಆದರೆ ಬದುಕುವ ಉತ್ಸಾಹಕ್ಕಲ್ಲ. ನಿನ್ನ ವಿರುದ್ಧ ಹೋರಾಡಿಯೇ ತೀರುತ್ತೇನೆ, ಕೇವಲ ನನಗಲ್ಲ. ನನ್ನಂಥ ಹುಡುಗಿಯರಿಗಾಗಿʼ ಎಂದು ಆಸಿಡ್‌ ಎರಚಿದ ಹುಡುಗನಿಗೆ ಪತ್ರ ಬರೆದ ದಿಟ್ಟೆ.

ಈಗ ಮುಖಕ್ಕೆ ಹೊದ್ದ ಶಾಲು ಮರೆಯಾಗಿದೆ. ಅರ್ಧಕ್ಕೇ ನಿಂತ ಓದು ಮತ್ತೆ ಆರಂಭವಾಗಿದೆ. ನನ್ನ ಅನ್ನ ನಾನು ದುಡಿಯುತ್ತೇನೆ ಎಂಬ ಖುಷಿಯಿದೆ. ಡಾಕ್ಟರ್‌ ಆಗಬೇಕೆಂಬ ಕನಸಿದೆ. ಇಲ್ಲಿ ಬಂದು ಇಂಗ್ಲಿಷಿನಲ್ಲಿ ವ್ಯವಹರಿಸಲು ಕಲಿತಿದ್ದೇನೆ. ಕೆಫೆಗೆ ಬರುವವರ ಜೊತೆಗೆ ಸೆಲ್ಫೀ ಕ್ಲಿಕ್ಕಿಸುವಾಗ ನನ್ನ ಸೌಂದರ್ಯದಲ್ಲೇನು ಕಮ್ಮಿಯಿದೆ ಅನಿಸುತ್ತದೆ. ಮತ್ತೆ ತುಟಿಗೆ ರಂಗು ಬಂದಿದೆ ನೋಡಿ ಎಂದು ಗಾಢ ಕೆಂಪು ತುಟಿಯರಳಿಸಿ ನಗುತ್ತಾಳೆ ಸುಂದರಿ.

೨೦೧೩ರಲ್ಲಿ ʻಸ್ಟಾಪ್‌ ಆಸಿಡ್‌ ಅಟಾಕ್‌ʼ ಕ್ಯಾಂಪೇನಿನ ಒಂದು ಭಾಗವಾಗಿ ಹುಟ್ಟಿಕೊಂಡದ್ದು ಈ ‘ಶಿರೋಸ್’. ೨೦೦೬ರಲ್ಲಿ ಮೊದಮೊದಲು ಆಸಿಡ್‌ ದಾಳಿಗೆ ಒಳಗಾದ ಮಹಿಳೆಯರಿಗೆ ನ್ಯಾಯ ಕೊಡಿಸಲು ಶುರುವಾದ ಹೋರಾಟ ಮುಂದೇನು ಎಂಬ ಪ್ರಶ್ನೆಯನ್ನು ಹೊದ್ದು ಕುಂತಾಗ ಹೊಳೆದದ್ದು ಈ ವಿಚಾರ ಎನ್ನುತ್ತಾರೆ ಇದರ ಸಂಸ್ಥಾಪಕರಲ್ಲಿ ಒಬ್ಬರಾದ ಆಶಿಷ್‌ ಶುಕ್ಲಾ. ಇದರ ಮುಖ್ಯ ರೂವಾರಿ ಸಾಮಾಜಿಕ ಕಾರ್ಯಕರ್ತರಾಗಿ ಹೆಸರು ಮಾಡಿದ ʻಸ್ಟಾಪ್‌ ಆಸಿಡ್‌ ಸೇಲ್‌ʼ ಕ್ಯಾಂಪೇನೂ ಸೇರಿದಂತೆ ಹಲವು ಸಮಾಜಮುಖಿ ಹೋರಾಟಗಳಲ್ಲಿ ಭಾಗಿಯಾಗಿದ್ದ ಅಲೋಕ್‌ ದೀಕ್ಷಿತ್.

ಐದಾರು ವರ್ಷ, ಹೋರಾಟವೇನೋ ನಡೆದೇ ಇತ್ತು. ಆದರೆ ಈ ಹೋರಾಟಕ್ಕೆಂದು ಜೊತೆಯಾದ ಸಂತ್ರಸ್ತ ಮಹಿಳೆಯರು, ಅರ್ಧದಲ್ಲಿ ನಿಂತ ವಿದ್ಯಾಭ್ಯಾಸ, ಬಡತನ, ಆಸ್ಪತ್ರೆ ವೆಚ್ಚದಿಂದ ಮೈತುಂಬ ಸಾಲ, ನೋವು, ಬದುಕಿನಲ್ಲಿ ಮುಗಿದ ಉತ್ಸಾಹ, ಜೀವನಕ್ಕೇನು ದಾರಿ ಎಂಬ ಕೈಚೆಲ್ಲಿ ಕುಳಿತ ಎಲ್ಲರ ಮುಖದಲ್ಲಿದ್ದು ಅಂತಿಮವಾಗಿ ಒಂದೇ ಪ್ರಶ್ನೆ. ಅದು ಉದ್ಯೋಗ.

ಇಂಥ ಮುಖ ಹೊತ್ತ ನಮಗೆ ಉದ್ಯೋಗ ಎಲ್ಲಿ ಸಿಕ್ಕೀತು ಎಂಬ ಭಾವ. ಇಂಥ ಸಂದರ್ಭ ಹುಟ್ಟಿಕೊಂಡದ್ದು ಈ ‘ಶಿರೋಸ್’. ಮೊದಲು ಈ ಹಾದಿ ಕಷ್ಟವಾದರೂ ಈಗ ಇದೊಂದು ನಾವು ಅಂದುಕೊಂಡದ್ದಕ್ಕಿಂತಲೂ ಭಿನ್ನವಾಗಿ ತನ್ನದೇ ಕಾಲ ಮೇಲೆ ನಿಂತು ಹೊಸ ಮಹಿಳಾವಾದವಾಗಿ ಬೆಳೆಯುತ್ತಿದೆ ಎಂಬುದು ಸಂತಸದ ವಿಷಯ ಎನ್ನುತ್ತಾರೆ ಶುಕ್ಲಾ.

ಸದ್ಯ ಲಖನೌ ಹಾಗೂ ಆಗ್ರಾದಲ್ಲಿ ‘ಶಿರೋಸ್’ ಕೆಫೆಯಿದೆ. ನೋಯ್ಡಾದಲ್ಲೊಂದು ಹಾಸ್ಟೆಲ್‌ ಇದೆ. ಆಸಿಡ್‌ ಪ್ರಕರಣಗಳಲ್ಲಿ ನೊಂದು ಹೋರಾಡಲು ಅಥವಾ ಹೆಚ್ಚಿನ ಚಿಕಿತ್ಸೆಗೆ ದೆಹಲಿಗೆ ಬರುವ ಜೀವಗಳಿಗೆ ಹಾಗೂ ಅವರ ಜೊತೆಗಾರರಿಗೆ ದೆಹಲಿಯಲ್ಲಿ ಉಚಿತವಾಗಿ ಉಳಿದುಕೊಳ್ಳುವ ಹಾಸ್ಟೆಲ್‌ ವ್ಯವಸ್ಥೆಯಿದು. ಇದಲ್ಲದೆ ಎರಡೂ ಊರುಗಳ ಈ ಕೆಫೆಯಲ್ಲಿ ಕೆಲಸ ಮಾಡುವ ಸ್ಥಳೀಯರಲ್ಲದ ಎಲ್ಲ ನೌಕರರಿಗೂ ಉಳಿದು ಕೊಳ್ಳುವ ಉಚಿತ ವ್ಯವಸ್ಥೆಯೂ ಇದೆ.

ತಕ್ಕಮಟ್ಟಿನ ಸಂಬಳ ಜೊತೆಗೆ, ನಿಂತು ಹೋದ ಶಿಕ್ಷಣವನ್ನು ಮುಂದುವರಿಸುವ ಅವಕಾಶ. ಬೇರೆ ಪ್ರತಿಭೆ ಪ್ರದರ್ಶನಕ್ಕೂ ಅವಕಾಶ. ರೂಪಾ ತಾನೇ ಡಿಸೈನ್‌ ಮಾಡಿದ ಬಟ್ಟೆಗಳಿಗೆ ‘ಶಿರೋಸ್’‌ ವೇದಿಕೆ ಕಲ್ಪಿಸಿದೆ. ಅಲ್ಲದೆ ಇತರ ನೌಕರರ ಕರಕುಶಲ ಕಲೆಗೂ ಇದು ವೇದಿಕೆಯಾಗಿದೆ. ಸದ್ಯ ಮೂರೂ ‘ಶಿರೋಸ್’‌ಗಳಲ್ಲಿ ಸುಮಾರು ೩೫ ಮಂದಿ ಆಸಿಡ್‌ ದಾಳಿಗೊಳಗಾದವರೇ ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ೩೫೦-೪೦೦ ಸಂತ್ರಸ್ತರಿಗೆ ಇದರಿಂದಾಗಿ ನೆರವು ಸಿಕ್ಕಿದೆ.

ಎಲ್ಲದಕ್ಕಿಂತಲೂ ಮುಖ್ಯವಾಗಿ ಆತ್ಮಾಭಿಮಾನ ಇರುವ ಯಾರಿಗೇ ಆದರೂ ತನ್ನ ಅನ್ನ ತಾನು ದುಡಿದು ತಿನ್ನುವುದರಲ್ಲಿ ಸಿಕ್ಕುವ ಧನ್ಯತೆ ಅನಂತ. ಇದು ಇಲ್ಲಿನ ಮುಖಗಳಲ್ಲಿ ನಿಚ್ಚಳ. ಶಾಲು ಹೊದೆಯದ, ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮಾತನಾಡುವ, ಮಾಸದ ನಗು ನಕ್ಕು ಸೆಲ್ಫೀಗೆ ಪೋಸು ಕೊಡುವ ಇಲ್ಲಿನ ಸುಂದರಿಯರಿಂದ ಎಲ್ಲ ಇರುವ ನಾವು ಕಲಿಯುವುದು ಬಹಳಷ್ಟಿದೆ ಅನಿಸಿದ್ದು ಸುಳ್ಳಲ್ಲ.

ಡಾಲಿ, ರೂಪಾ, ಬಾಲಾ, ಶಬ್‌ನಮ್‌, ಗೀತಾ, ಬಿಲ್ಮಾ, ಖುಷ್ಬೂ, ರೇಷ್ಮಾ, ಕುಂತಿ, ರಜನಿ… ಹೀಗೆ ಎಲ್ಲರದ್ದೂ ಹತ್ತಿರ ಹತ್ತಿರ ಒಂದೇ ಕಥೆಗಳು. ಬಹುತೇಕ ಎಲ್ಲವೂ ಇಷ್ಟವಾಗದ ಪ್ರೀತಿಗಳೇ ಕೊನೆಗೆ ಇಂಥ ದುರಂತದಲ್ಲಿ ಅಂತ್ಯವಾದಂಥವುಗಳು. ಅವರ ಕಥೆ ಕೇಳಲು ಆ ಕುರ್ಚಿಯಲ್ಲಿ ಕೂತೆವೆಂದರೆ, ಹೊರಬರುವಾಗ ಕಣ್ಣಂಚು ಒದ್ದೆಯಾಗದಿರದು. 

ಹೊಟ್ಟೆ ಬಿರಿಯ ಊಟ ಹಾಕಿದ ಆ ಸ್ನೇಹಿತರ ಮನೆಯವರಿಗೆ ಮನದಲ್ಲೇ ವಂದಿಸುತ್ತಾ, ಆ ನೆಪದಲ್ಲಿ ಈ ‘ಶಿರೋಸ್’‌ ಒಂದು ಗಂಟೆಯಲ್ಲಿ ಕೊಟ್ಟ ಬೊಗಸೆ ತುಂಬ ಪಾಸಿಟಿವಿಟಿ, ಕಣ್ತುಂಬ ನಗುವ ಸುಂದರಿಯರ ಮಾಸದ ನಗುವಿನ ಜೀವನೋತ್ಸಾಹವನ್ನೆಲ್ಲ ಕಾರು ತುಂಬ ಹೇರಿಕೊಂಡು ವಾಪಸ್ಸು ಬರುವಾಗ ನಿಂತ ಮಳೆಯ ಫ್ರೆಷ್‌ ಭಾವ.

‍ಲೇಖಕರು ರಾಧಿಕ ವಿಟ್ಲ

August 30, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: