ಹುಡುಗು ಬುದ್ದಿ ಬಿಡದ ನನ್ನ ಕೈಗೆ ‘ಅವಧಿ’ ಸಂಪಾದಕನೆಂಬ ಅಚ್ಚರಿ..

ಬರೆದ ಪದ್ಯಕ್ಕೆ ಯಾರಾದರು ಲೈಕ್‌ ಒತ್ತಿದರೆ ಹಿಗ್ಗಿ ಈರೇಕಾಯಿ ಆಗುವ ನಾನು, ‘ಅವಧಿ’ಯಲ್ಲಿ ಪದ್ಯ ಪ್ರಕಟಗೊಂಡರೆ ಇನ್ಯಾವ ಮಟ್ಟಿಗೆ ಉಬ್ಬಿ ಹೋಗಿರಬಹುದು.

ಹತ್ತು ವರ್ಷದ ಹಿಂದಿನ ಮಾತು,

ಬರೆದದ್ದು ಪದ್ಯ ಹೌದೋ ಅಲ್ಲವೋ ಒಂದು ಸಣ್ಣ ಕ್ಲಾರಿಟಿ ಇಲ್ಲದ ನಾನು ಅದೇನೇನೊ ಬರೆದಿಟ್ಟುಕೊಳ್ಳುತ್ತಿದ್ದೆ. ಅಪ್ಪ ಕಾಲ್‌ ಮಾಡಿ “ಮಗಾ ನಿನ್‌ ಪದ್ಯ ಅವಧಿಯಲ್ಲಿ ಬಂದಿದೆ, ಓದಿ ಖುಷಿ ಆಯ್ತು. ಇನ್ನು ಹೆಚ್ಚು ಓದು, ಬರೆ” ಅಂತ ಹೇಳಿದಾಗ, ‘ಆಹಾ ಪ್ರವರ ನೀನು ಕವಿ ಕಣೋ..’ ಎನ್ನುವ ಸೊಕ್ಕು ಚೂರು ಚೂರೇ ಮೂಡುತ್ತಿತ್ತು.

‘ಅಸಲಿಗೆ ಕವಿ, ಕತೆಗಾರನಿಗೆ ಅಷ್ಟೂ ಸೊಕ್ಕು ಇರದೇ ಹೋದರೆ ಅವನ್ಯಾವ ಸೀಮೆ ಕವಿ ಸ್ವಾಮಿ’ ಅಂತ ಮನಸ್ಸಿನಲ್ಲೇ ಸಮಜಾಯಿಷಿ ಕೊಟ್ಟುಕೊಳ್ಳುತ್ತಿದ್ದೆ ಕೂಡ.

ಕಾಡು, ತಿರುಗಾಟ, ಫೋಟೊಗ್ರಫಿ ಅಂದರೆ ತೀರಾ ಇಷ್ಟಪಡುವ ನಾನು ಸಮಯ ಹೊಂದಿಸಿಕೊಳ್ಳಲಾಗದೆ ಕೈ ಕೈ ಹಿಸುಕಿಕೊಂಡದ್ದಿದೆ. ಸದಾ ಕಾಡಿನಲ್ಲಿದ್ದುಕೊಂಡು ಮ್ಯಾಕ್ರೊ, ಹಕ್ಕಿಗಳ, ಪ್ರಾಣಿಗಳ ಚಿತ್ರಗಳನ್ನು ಸೆರೆಹಿಡಿದು ನಮ್ಮಂಥಾ ಬಯಲುಸೀಮೆಯ ಜನಕ್ಕೆ ತೋರಿಸುವ ಅರಣ್ಯ ವಲಯದಲ್ಲಿ ಕೆಲಸ ಮಾಡುವ ವಿನೋದಣ್ಣರ ಫೋಟೊಗ್ರಫಿ ತುಸು ಹೆಚ್ಚೇ ಇಷ್ಟ. ಕಾಡು ಮತ್ತು ಮನುಷ್ಯನ ನಡುವಿನ ಸಂಬಂಧದ ಕುರಿತಾಗಿ ನೀವ್ಯಾಕೆ ಬರಿಬಾರ್ದು ಅಂದಾಗ ಸಂಕೋಚದಿಂದಲೇ ಬರೆದುಕೊಟ್ಟರು.

ಕೊರೋನ ತಂದಿಟ್ಟ ಸಂಕಷ್ಟ ಒಂದೊಂದಲ್ಲ. ವೈರಸ್‌ ನ ಹರಡುವಿಕೆ, ರೋಗದ ಗುಣ ಲಕ್ಷಣ, ರೋಗದ ತೀವ್ರತೆ ಇವ್ಯಾವು ಗೊತ್ತಿಲ್ಲದ ಹೊತ್ತು. ನಾವೇನೋ ಲಾಕ್‌ ಡೌನ್‌ ಅಂತ ಆರಾಮಾಗಿ ಮನೆಯಲ್ಲಿದ್ದೆವು . ಸಂತೆ, ಒಂದಿಲ್ಲೊಂದು ಹಬ್ಬ ಮಾಡಿಕೊಂಡಿರುವ ಜನಗಳನ್ನು ಸಾಮಾಜಿಕ ಅಂತರ ಕಾಯ್ದುಕೊ‍ಳ್ಳುವಂತೆ, ಮಾಸ್ಕ್‌ ಧರಿಸುವಂತೆ ಹೇಗೆ ಮಾಡೋದು? ಈ ವಿಷಯ ಯೋಚಿಸಿದಾಗ ಮೊದಲು ನೆನಪಾಗಿದ್ದೇ ಪಿಡಿಓ ಶೋಭಾರಾಣಿಯವರು.

ಬೆಂಗಳೂರಿನ ಬಗ್ಗೆ ನನಗೆ ಯಾವಾಗಲೂ ಕುತೂಹಲ, ಯಾವಾಗಲೋ ನೋಡಿದ ಕೆರೆಗಳು ಇದ್ದಕ್ಕಿದ್ದಂತೆ ಮಾಯಾವಾಗೋದು, ಇಂದೆರಡು ತಿಂಗಳಲ್ಲಿ ದೊಡ್ಡ ಅಪಾರ್ಟ್ಮೆಂಟುಗಳು ಎದ್ದು ನಿಲ್ಲೋದು ಇದೊಂಥರ ಸೋಜಿಗ ನನಗೆ. ಥಟ್ಟನೆ ನೆನಪಾಗಿದ್ದು ಒಂದಾನೊಂದು ಕಾಲದಲ್ಲಿ ಕತೆಗಳನ್ನು ಬರೆದು ‘ಪ್ರಜಾವಾಣಿ’ಯಲ್ಲಿ ಬಹುಮಾನ ಪಡೆದಿದ್ದ ಪುರೂರವ. ಅದ್ಯಾಕೊ ಮದುವೆ ನಂತರ ಮಾಜಿಯಾಗಿಬಿಟ್ಟ. ತನ್ನ ಬಹುಪಾಲು ಸಮಯವನ್ನು ಬೆಂಗಳೂರಲ್ಲೇ ಕಳೆದ ಪುರುನ ಬರಹದಲ್ಲಿ ಮಹಾನಗರಿಯ ಗುಟ್ಟು ಕೇಳಬೇಕನ್ನಿಸಿತು.

ಇನ್ನ ಕತೆ ಯಾರಲ್ಲಿ ಕೇಳೋದು ಅಂತ ಗೊಂದಲದಲ್ಲಿದ್ದ ನಾನು, ಗೆಳೆಯನೊಟ್ಟಿಗೆ ದೋಸೆ ಹೋಟೆಲ್ಲಿಗೆ ಹೋದಾಗ, ಹಿಂದಿನ ಟೇಬಲ್ಲಿನಿಂದ “ದೋಸೆ ಅಂದ್ರೆ ದಾವಣಗೆರೆ ಬೆಣ್ಣೆ ದೋಸೆ ಕಣ್ರಿ” ಮಾತು ಕಿವಿಗೆ ತಾಕಿಬಿಟ್ಟಿತು. ಥಟ್ಟನೇ ನೆನಪಾಗಿದ್ದು ದಾವಣಗೆರೆಯ ಆನಂದ್‌ ಋಗ್ವೇದಿಯವರು.

ಹಂಪಿಯನ್ನು ಸಾವಿರಾರು ಕೋನಗಳಿಂದ ಫೋಟೊಗ್ರಪಿ ಮಾಡಿರಬಹುದಾದ ಜಗತ್ತಿನ ಏಕೈಕ ಹವ್ಯಾಸಿ ಛಾಯಾಗ್ರಾಹಕ ಇದ್ದರೆ ಅದು ಶಿವಶಂಕರ ಬಣಗಾರ ಸರ್.‌ ಹಂಪಿಯನ್ನು ಹೀಗೂ ನೋಡಬಹುದೆಂದು ತೋರಿಸಿಕೊಟ್ಟದ್ದೇ ಅವರು. ಸಾಕಷ್ಟು ಬಾರಿ ಅವರನ್ನು ನಕಲು ಮಾಡಲು ಪ್ರಯತ್ನಿಸಿದ್ದಿದೆ. ಒಂದೊಮ್ಮೆ ಹಂಪಿ ಉತ್ಸವಕ್ಕೆ ಪದ್ಯ ಓದುವ ಸಲುವಾಗಿ ಹೋಗಿದ್ದೆ. ಜೊತೆಯಲ್ಲಿ ಬಣಗಾರ ಸರ್‌ ಕೂಡ ಇದ್ದರು. “ಅರೆ ಸರ್‌ ಪದ್ಯಾನೂ ಬರಿತೀರಾ?” “ಹೇ ಮುಂಚೆ ಬರ್ದವಿ ಕಣ್ರಿ ಆಮೇಲೆ ಆಗ್ಲೆ ಇಲ್ಲ” ಅಂತ ನಗುತ್ತಾ ಹೇಳಿದ್ದರು. ಪದ್ಯ ಕಳಿಸಬೇಕು ಅಂದಿದ್ದಕ್ಕೆ “ಅಯ್ಯೋ, ಆ ಕವಿ ಸತ್ತೋಗಿದ್ದಾನೆ ಕಣ್ರಿ ಪ್ರವರ ಇವಾಗ ಇರೋನು ಬರಿ ಫೋಟೊಗ್ರಫರ್‌ ಬಣಕಾರ, ನೋಡ್ತೀನಿ ಇರಿ ಪದ್ಯ ಕಳಿಸ್ತೇನೆ” ಅಂತ ಪದ್ಯ ಕಳಿಸಿಯೇಬಿಟ್ಟರು.

ಇಷ್ಟದ ಕವಿ ಸ್ಮಿತಾ ಮತ್ತು ನಟರಾಜ ಸರ್‌ ರ ಕವಿತೆ ಇಲ್ಲದೇ ಹೋದ್ರೆ ಹ್ಯಾಂಗೆ ಅಂದುಕೊಂಡು, ಒಂದು ಫೋನ್‌ ಹಾಯಿಸಿದೆ. ಇಂಗ್ಲೀಷಿನಿಂದ ನೂರಕ್ಕೂ ಹೆಚ್ಚು ಪದ್ಯಗಳನ್ನು ಕನ್ನಡಕ್ಕೆ ನಟರಾಜು ಅನುವಾದಿಸಿದ್ದಾರೆ, ಪ್ರಕಟಿಸೋಣ ಮಾರಾಯ ಅಂದ್ರೆ ಅನುವಾದ ಸಮಾಧಾನ ಕೊಡ್ತಿಲ್ಲ ನೋಡನ ಇರು ಅಂತ ನಾಲ್ಕು ವರ್ಷಗಳಿಂದ ಸತಾಯಿಸಿದ್ದರು ಕೂಡ. ವೃತ್ತಿಯಿಂದ ಕಾಲೇಜೊಂದರಲ್ಲಿ ಇಂಗ್ಲಿಷ್ ಉಪನ್ಯಾಸಕ ಮತ್ತು ಕಾವ್ಯದ ಕಡುಮೋಹಿ ಕೂಡ.

ನನ್ನಂಥಾ ಹುಡುಗರಲ್ಲಿ ಬರೆಯುವ ಹುರುಪು ತುಂಬಿದ್ದೇ ತಾಯಿ ಹೃದಯದ ‘ಅವಧಿ’ ಬಳಗ. ಸಾಹಿತ್ಯದ ಬೇರು ಮತ್ತು ಚಿಗುರುಗಳ ಸಂಧಾನ ಮಾಡಿಸುವ ‘ಅವಧಿ’ಯಂಥಾ ಇನ್ನೊಂದು ವೆಬ್‌ ಮ್ಯಾಗಝಿನ್ ಇಲ್ಲವೆನ್ನಿಸುತ್ತದೆ. ಇಂಥಹಾ ದುರಿತ ಕಾಲದಲ್ಲೂ ಯಾವುದೇ ಫಲಾಪೇಕ್ಷೆ ಇಲ್ಲದೇ ಹದಿನಾಲ್ಕು ವರ್ಷಗಳ ಕಾಲ ಸತತವಾಗಿ‌ ವೆಬ್‌ ಮ್ಯಾಗಝಿನ್‌ ನಡೆಸುವುದೆಂದರೆ ಅಚ್ಚರಿಯೇ ಸರಿ.

ಸದಾ ಹೊಸತಿನ ಜೊತೆಗೆ ನಡೆಯುವುದೆಂದರೆ ಅಪ್ಡೇಟ್‌ ಕೂಡ ಅಗುವುದು, ಹೊಸ ರೂಪದಲ್ಲಿ ‘ಅವಧಿ’ಯನ್ನು ನೋಡುವುದೇ ಖುಷಿ. ಮಾಸ್ತರಿಕೆ ಮಾಡುತ್ತಿದ್ದರೂ ಹುಡುಗು ಬುದ್ದಿ ಬಿಡದ ನನ್ನ ಕೈಗೆ ‘ಅವಧಿ’ ಅತಿಥಿ ಸಂಪಾದಕೀಯದ ಮೊದಲ ಭಾನುವಾರವನ್ನು ಒಪ್ಪಿಸಿದ ಮೋಹನ್‌ ಸರ್‌ ರ ಧೈರ್ಯ ಮೆಚ್ಚಲೇಬೇಕಾದ್ದು.

‍ಲೇಖಕರು Avadhi

August 30, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ಪದ್ಮನಾಭ ಆಗುಂಬೆ

    ಈರೇಕಾಯಿ ಎಂಬ ಶಬ್ದದಲ್ಲಿ ‘ಈ’ ಅಕ್ಷರದ ಬಳಕೆ ಸರಿಯೇ?
    ಈರೇಕಾಯಿ ಎಂದು ಕರ್ನಾಟಕದ ದಕ್ಷಿಣ ಭಾಗದಲ್ಲಿ ಹಲವೆಡೆ ಆಡು ಭಾಷೆಯಲ್ಲಿ ಹೇಳಿದರೂ, ಓದು ಬರಹದ ಭಾಷೆಯಲ್ಲಿ ಹೀರೇಕಾಯಿ ಅಗಬೇಕಲ್ಲವೇ?
    ಹ ಮತ್ತು ಅ ಕಾರಗಳ ಶಬ್ದ (phonetic) ಬೇರೆಯೇ ಅಲ್ಲವೇ?

    ಪ್ರತಿಕ್ರಿಯೆ
  2. ಬನವಾಸಿ ಸೋಮಶೇಖರ್.

    ಮೊದಲಿನಿಂದಲೂ ಪ್ರವರ ಅವರ ಕವಿತೆ, ಬರಹಗಳು ಎಂದರೆ ನನಗೆ ಬಲು ಇಷ್ಟ.ಸಮಯ ಮಾಡಿಕೊಂಡು ಓದಿದ್ದಿದೆ.ಸಂಪಾದಕೀಯ ಬರಹ ಹಾಗೂ ಪುಟ ವಿನ್ಯಾಸ ಅತ್ಯಂತ ಶಿಸ್ತುಬದ್ಧವಾಗಿ ಮೂಡಿಬಂದಿದೆ.ನೆನಪು ಮತ್ತು ಅನುಭವಗಳ ಮೂಸೆಯಲ್ಲಿ ಸಂಪಾದಕೀಯ ವನ್ನು ಹಿತವಾಗಿ ಉಣಬಡಿಸಲಾಗಿದೆ.ಅಂದ ಹಾಗೆ ಈ ಈರೇಕಾಯಿಗೂ ಹೀರೇಕಾಯಿಗೂ ವ್ಯತ್ಯಾಸ ಗೊತ್ತಾಗಲಿಲ್ಲ.ಶುಭವಾಗಲಿ.

    ಪ್ರತಿಕ್ರಿಯೆ
  3. ಬಿ.ಸುರೇಶ

    ಹೀರೇಕಾಯಿ ಬಳಕೆ ಇರುವಂತೆ ಈರೇಕಾಯಿ ಬಳಕೆ ಸಹ ಇದೆ… ಅಡ್ಡಿ ಇಲ್ಲ…
    ದ್ರಾವಿಡ ಭಾಷೆಗಳಲ್ಲಿ ಮಹಾಪ್ರಾಣಗಳು ಮತ್ತು ‌ಗಾಳಿಯೂದಿ ಹೊರಡಿಸುವ ಹಲವು ಪದಗಳು (ಹ, ಋ, ಇತ್ಯಾದಿ) ಇರಲಿಲ್ಲ. ಕನ್ನಡದಲ್ಲಿ ಸಹ. ಸಂಸ್ಕೃತ ಸಖ್ಯದಿಂದ ಅಂತಹ ಕೆಲವು ಪದಗಳು ಸೇರಿವೆ.
    ಆದ್ದರಿಂದ ಪ್ರವರ ಬಳಸಿದ ಕ್ರಮವನ್ನು ಅದೇ ಕ್ರಮದಲ್ಲಿ ಓದಬಹುದು.
    – ಬಿ.ಸುರೇಶ

    ಪ್ರತಿಕ್ರಿಯೆ
  4. ಪದ್ಮನಾಭ ಆಗುಂಬೆ

    ನನ್ನ ಪ್ರತಿಕ್ರಿಯೆಯಲ್ಲಿ ಈರೇಕಾಯಿ ಎನ್ನುವುದು ಆಡು ಭಾಷೆಯಲ್ಲಿದ್ದರೂ ಓದು ಬರಹದ ಭಾಷೆಯಲ್ಲಿ ಬಳಸುವುದು ಸರಿಯೇ ಎಂದು ಕೇಳಿದ್ದೇನೆ. ದ್ರಾವಿಡ ಭಾಷೆಗಳಲ್ಲೊಂದಾದ ತಮಿಳಿನಲ್ಲಿ ಹ ಅಕ್ಷರವನ್ನು ಸಂಸ್ಕೃತ ಮೂಲದ್ದಾಗಿ ಪರಿಗಣಿಸಿ ಅಕ್ಷರ ಮಾಲೆಯಿಂದ ತೆಗೆದು ಹಾಕಬೇಕೆಂಬ ಬೇಡಿಕೆಗಳು ಇವೆ. ಅದಲ್ಲದೇ ತಮಿಳಿನಲ್ಲಿ ಹ ಕಾರಕ್ಕೆ ಬದಲಾಗಿ ಗ ಕಾರವನ್ನು ಬಳಸುವುದುಂಟು. ಉದಾಹರಣೆಗೆ ಮಗೇಶ್, ಮಗಾಬಯಂಕರಮ್, ಮೋಗನ್ ಇತ್ಯಾದಿ. ಆದರೆ ಕನ್ನಡ ವರ್ಣಮಾಲೆಯು ಅಲ್ಪಪ್ರಾಣ ಮಹಾಪ್ರಾಣ, ಹ್ರಸ್ವ ದೀರ್ಘ ಹ , ಆ, ಇತ್ಯಾದಿ ವೈವಿದ್ಯತೆಯಿಂದ ಕೂಡಿ ಸಮೃದ್ಧವಾಗಿರುವಾಗ ಬಳಸಲು ಏನು ಅಡ್ಡಿ?
    ಹಾಗೆ ಹ ಅಕ್ಷರವನ್ನು ಬಳಸಿದ್ದಾಗ ಗೊಂದಲವುಂಟಾಗುವುದಿಲ್ಲವೇ, ಉದಾಹರಣೆಗೆ ‘ಅತ್ತು ಬಿಟ್ಟಾ ಕಣ್ರೀ’ ಎಂದಾಗ ಅತ್ತು ಬಿಟ್ಟನೋ ಅಥವಾ ಹತ್ತು ಬಿಟ್ಟನೋ ಎಂಬುದು ಸಂದರ್ಭೋಚಿತವಾಗಿ ಮಾತ್ರವೇ ಅರ್ಥೈಸಿಕೊಳ್ಳಬೇಕಾಗುತ್ತದೆ!!
    ಹಾಗೆಯೇ ಆಸನ ಮತ್ತು ಹಾಸನಗಳನ್ನು ಹೇಗೆ ಗುರುತಿಸುತ್ತೀರ?

    ಪ್ರತಿಕ್ರಿಯೆ
  5. ಲಲಿತಾ ಸಿದ್ಧಬಸವಯ್ಯ

    ಪ್ರವರರ ಸೊಗಸಾದ ಸಂಪಾದಕೀಯ ಈ
    ” ಈರೇಕಾಯಿ” ದೆಸೆಯಿಂದ ಹಿಂದಕ್ಕಾಯಿತು. ಬಹಳ ಅಚ್ಚುಕಟ್ಟಾದ ಸಂಪಾದಕೀಯ ಇದು.

    ಬಿ. ಸುರೇಶ್ ಅವರು ಹೇಳಿದಂತೆ ದ್ರಾವಿಡ ಭಾಷೆಗಳಿಗೆ “ಹ” ಹೊರಗಿನ ಹುಡುಗಿ. ತಮಿಳರು ತಮ್ಮ ಎಂದಿನ ಉಗ್ರಾಭಿಮಾನದನುಸಾರ “ಹ” ಬಿಟ್ಟೇ ಬಿಟ್ಟರು. ಕನ್ನಡಿಗರು ಕೊಂಬುದರಲ್ಲಿ ಅಗ್ರೇಸರರು. ತೊರೆಯುವುದರಲ್ಲಿ ಮಂದರು. ಎಂದೋ ಮಹಾಪ್ರಾಣ ಗಳೆಲ್ಲವನ್ನೂ ತೊರೆದು ಅಧಿಕೃತ ಹೊಸ ವರ್ಣಮಾಲೆ ಪ್ರಕಟಿಸಬಹುದಾಗಿತ್ತು. (ಶಂಕರಬಟ್ ಅವರು ನೆನಪಾಗುತ್ತಾರೆ).
    ಹಾಗೆ ಅಧಿಕೃತತೆ ಕೊಡಬಲ್ಲವರು ಭಾಷಾತಜ್ಞರು, ಮತ್ತು ಕೊನೆಗೆ ಸರ್ಕಾರ, ಸಾಹಿತಿಗಳಲ್ಲ. ಸಾಹಿತಿಗಳು ಪ್ರವರ ಬರೆದಂತೆ ” ಈರೇಕಾಯಿ” ಬರೆಯುವ ಉಪಕ್ರಮದಿಂದ ಬದಲಾವಣೆಯ ಜರೂರತ್ತನ್ನು ಜಾರಿಗೆ ತರಬಹುದಷ್ಟೇ.

    ಹಾಗೆ ಅಧಿಕೃತವಾಗಿ ತೊರೆಯುವ ತನಕ ಹ ಮತ್ತು ಅ ಮುಂತಾಗಿ ಎಲ್ಲಾ ವರ್ಣೋಚ್ಛಾರಣೆ ಸರಿಯಾಗಿಯೇ ಪ್ರಯೋಗದಲ್ಲಿರಬೇಕು. ಹೀರೇಕಾಯಿ ಸರಿಯಾದ ಪ್ರಯೋಗ.

    ಈ ಪ್ರಯೋಗದ ಶುದ್ಧತೆ ಸೃಜನ ಸಾಹಿತ್ಯಕ್ಕೆ ಅನ್ವಯಿಸಲಾಗದು. ಅಲ್ಲಿ ಸೃಷ್ಟಿಯಾಗುವ ಪಾತ್ರದ , ಸಂದರ್ಭದ ಜಾಯಮಾನದಂತೆ ಭಾಷಾ ಪ್ರಯೋಗ ಇರುತ್ತದೆಯೆ ವಿನಾ ಲಕ್ಷಣಗ್ರಂಥಗಳ ತೃಪ್ತಿಗೆ ತಕ್ಕಂತೆ ಅಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: