ಆಹಾ.. ಮಾದ್ಲಿಯೂಟ!!

ಅನಾಮಿಕಾ

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ .

ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ.

ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು ಕೈ ತೊಳೆದುಕೊಳ್ಳುತ್ತಿದ್ದೇವೇನೋ..!

ಆಕೆಗೆ ಒಳಗಣ್ಣಿದೆ. ಒಂದು ಆಹಾರ ಹೇಗೆ ಒಂದು ಸಂಸ್ಕೃತಿಯ ಭಾಗವಾಗಿ ಬರುತ್ತದೆ ಎನ್ನುವುದರ ಬಗ್ಗೆ ಹಾಗೂ ಹೇಗೆ ಆಹಾರ ಒಂದು ಸಂಸ್ಕೃತಿಯನ್ನು ರೂಪಿಸುತ್ತದೆ ಎನ್ನುವುದರ ಬಗ್ಗೆಯೂ…

ಹಾಗಾಗಿಯೇ ಇದು ರಸದೂಟವೂ ಹೌದು ಸಮಾಜ ಶಾಸ್ತ್ರದ ಪಾಠವೂ ಹೌದು.

ಪುಟ್ಟ ಪಾತ್ರೆಯೊಳಗ ಕಂದು ಬಣ್ಣದ ಗುಡ್ಡದ ಗಾತ್ರದ ಗುಡ್ಡೆ, ಪಕ್ಕದಲ್ಲೊಂದು ಬೆಳ್ಳಿಮಿಳ್ಳಿ(ಗಿಂಡಿ)ಯೊಳಗೆ ತಿಳಿಹಳದಿ ಬಣ್ಣದ ತುಪ್ಪ, ಗಂಜ್‌ ನಾಗ (ಕೊಳಗದಾಕಾರದಲ್ಲಿರುವ ಸಣ್ಣ ಪಾತ್ರೆ) ಹಿತೋಷ್ಣ ಅನಿಸುವ ಹಾಲು, ಇವಿಷ್ಟು ಪಡಸಾಲಿಗೆ ಬಂದ್ವು ಅಂದ್ರ, ಮಾದ್ಲಿ ಉಣ್ಣಾಕ ಬರ್ತಾರ ಅಂತನೆ ಅರ್ಥ.

ಗದಗ, ಹಾವೇರಿ ಕಡೆ ಮಾದ್ಲಿ ಉಣ್ಣಾಕ ಬರ್ತಾರಂದ್ರ ಹೆಣ್ಣು ಒಪ್ಕೊಂಡಾರ ಅಂತರ್ಥ. ಕಲ್ಯಾಣ ಕರ್ನಾಟಕದೊಳಗ ಹೋಳಗಿಯುಣ್ಣಾಕ ಬಂದ್ಹಂಗ ಈ ಕಡೆ ಮಾದ್ಲಿ ಉಣ್ಣಾಕ ಬರ್ತಾರ. ಮಾದ್ಲಿ ಪರಿಪೂರ್ಣ ಮಾಲ್ಟ್‌ ಇರುವಂಥ ಖಾದ್ಯ.

ಜವೆಗೋಧಿ ಬೀಸಿ, ದಪ್ಪ ದಪ್ಪ ಚಪಾತಿ ಮಾಡೂದು, ಎಣ್ಣಿಹಚ್ಚಿ, ಹಂಚಿನಾಗ ಬೇಯೂಮುಂದ ತನಗ ಸುಟ್ರು ಸುಟ್ರು ಇವರು ಅಂತ ಮನಿತುಂಬಾ ವಾಸನಿಯೆಬ್ಬಿಸಿ ಗದ್ದಲಾ ಹಾಕ್ತದ ಜವಿಗೋಧಿ.

ಈ ಚಪಾತಿ ಬಿಸಿ ಇದ್ದಾಗಲೇ ಒಬ್ಬರು ಮೊರ ಇಟ್ಕೊಂಡು ಹೊಸಿಯಾಕ ಕುಂದರ್ತಾರ… ಎಷ್ಟರೆ ಗದ್ದಲಾ ನಿಂದು, ಅಂತ ಬೈಕೊಂತ ಮಕ್ಕಳ ತಲಿಗೆ ಮೊಟಕುವ ಹಂಗ, ಇದಕ್ಕೂ ಅಂಗೈನಾಗ ಹೊಸಕ್ತಾರ. ಜವೆ ಗೋಧಿ ಜಿಗಿ ಬಿಡಬೇಕಲ್ಲ.

ಅದೂ ಹಟಮಾರಿ ಮಕ್ಕಳಹಂಗೆ, ದುಂಡದುಂಡಗೆ ರವೆ ಹಂಗ ಉದರಾಕ ಶುರು ಮಾಡ್ತದ. ಹಂಗ ಉದುರಿದ ಚಪಾತಿಯನ್ನ ಸಮಾಧಾನ ಮಾಡೂಹಂಗ ಬೆಲ್ಲದ ಜೊತಿಗೆ ಬೆರಸ್ತಾರ. ಕಂದು ಬಣ್ಣದ ಗುಡ್ಡ ರೆಡಿ ಆಯ್ತು. ಆದ್ರ ಅಷ್ಟೇ ಆದ್ರ ನಮಗ ಸಮಾಧಾನ ಆಗಬೇಕಲ್ಲ. ಸಂಭ್ರಮ ಎದ್ದು ಕಾಣ್ಬೇಕಲ್ಲ.

ಸ್ವರ್ಗದಿಂದ ಹೂವಿನೆಸಳು ಎಸದಿರುವ ಹಂಗ ಒಣಕೊಬ್ಬರಿಯನ್ನು ತುರದು ಉದರಸ್ತಾರ. ಚಪಾತಿ ಅಂಟ್ಕೊಬಾರದಲ್ಲ ಬಾಯಿಗೆ, ತುತ್ತು ಬಾಯಿಗಿಟ್ಕೊಂಡಾಗ ಎಣ್ಣಿ ಒಸರಬೇಕಂತ. ಅದಕ್ಕ ಒಣ ಕೊಬ್ಬರಿ ಜೊತಿಗೆ ಬಿಳಿ ಎಳ್ಳುನು ಹಾಕ್ತಾರ. ಕಂದು ಬಣ್ಣದ ಮೇಲೆ ಶ್ವೇತಶುಭ್ರ ಕೊಬ್ಬರಿ, ಹಾಲ್ಕೆನೆ ಬಣ್ಣದ ಎಳ್ಳು, ಚಂದ ಕಾಣೂಮುಂದ ಮತ್ತದಕ್ಕ ದೃಷ್ಟಿ ಬೊಟ್ಟು ಬೇಕಲ್ಲ. ಒಂದಷ್ಟು ಏಲಕ್ಕಿ ಕುಟ್ಟಿ ಹಾಕ್ತಾರ.

 ಇಷ್ಟೇ ಅದ್ರ ಸಂಭ್ರಮ ಹೆಂಗಾದೀತು? ವಿಜಯಪುರ ಅಲ್ಲಲ್ಲ, ಬಿಜಾಪುರ, ಅಥಣಿಯ ಒಣದ್ರಾಕ್ಷಿ ಒಂದಿಷ್ಟು ಒಗೀತಾರ. ಅದರೊಳಗ ಬದಾಮಿ ಕುಟ್ಟಿ ಹಾಕ್ತಾರ, ಗೋಡಂಬಿ ಅರ್ಧಚಂದ್ರನಾಕಾರದಾಗ ಇರೂದನ್ನ ಕೊರದು ಹಾಕ್ತಾರ. ಏಯ್‌ ತಿಂದ ಮ್ಯಾಲೆ, ಗೋಧಿ ನೀರು ಭಾಳ ಕುಡಸ್ತದಂತ. ತಿಂದು ಕುಂದ್ರೂದ ಬ್ಯಾಡ, ಮಲಗಿದ್ರ ಆಯ್ತು ಅಂತ ಒಂದಷ್ಟು ಗಸಗಸೆ ತವಿಯೊಳಗ ತುಪ್ಪ ಹಾಕಿ, ಕೈ ಆಡಿಸಿ ಸುರೀತಾರ. ತಿಂದು ಮಲಗಿದ್ರ, ಏಳುಮುಂದ ವಾಸ್ನಿ ಬರಬಾರದಲ್ಲ. ಒಂದು ನಾಲ್ಕು ಕಾಳು ಸೋಂಪುನು ಸುರೀತಾರ.

ಒಟ್ಟು ಉಂಡು ಮಲಗಿದ್ರೂ, ಮತ್ತ ಕೆಲಸ ಮಾಡೂ ಹಂಗಿದ್ರೂ ಎಲ್ಲಾದಕ್ಕೂ ಪರಿಹಾರ ಹುಡುಕಿಕೊಂಡು ಸಂಪೂರ್ಣ ಪೌಷ್ಟಿಕಾಂಶ ಇರುವ ಮಾದ್ಲಿ ಹಿಂಗ ಸಿದ್ಧ ಆಗ್ತದ. ಮೊದಲೆಲ್ಲ ಗಂಗಾಳದೊಳಗ ಒಂದು ಗುಡ್ಡೆ ಮಾದ್ಲಿ ಹಾಕ್ಕೊಂಡು, ಕಟ್ಟಿ ಕಟ್ಕೊಂಡು ತುಪ್ಪ ನೀಡಸ್ಕೊತ್ತಿದ್ದರು.

ಒಪ್ಪಿದ ಹುಡುಗಿ ತುಪ್ಪ ನೀಡಾಕ ಬರಬೇಕು. ಬಗ್ಗಿಸಿದ್ರ ಕೈ ದೊಡ್ಡದು, ದುಡಿಯಾಂವ ಗಟ್ಟಿ ಇರಬೇಕು ಅನ್ನೋರು. ಚೂರೆ ಚೂರು ಹನಿಸಿದ್ರ, ಕೈ ಬಿಗುವೈತಿ, ಮನಿಗೆ ಉಳಿತಾಯ ಆಗ್ತದ. ಆದ್ರ ಬಂದೋರಿಗೆ ಹಚ್ಕೊತದೊ ಇಲ್ಲೊ ಹುಡುಗಿ ಅನ್ನೋರು. ಇನ್ನ ಬಗ್ಗಿಸಿದಂಗ ಮಾಡಿ ಭಾಳ ಸುರದಂಗ ಅನಿಸಿದ್ರೂ, ಚಮಚೆಯಷ್ಟೆ ಬಿದ್ರ. ಇನ್ನೊಂಚೂರು ಹಾಕ್ಲಿರಿ ಅಂತ ಕೇಳ್ಕೊಂತ ಮುಂದ ಹೋದ್ರ ಭಾಳ ಶಾಣೆ ಹುಡುಗಿ ಅನ್ನುವ ತೀರ್ಮಾನಕ್ಕ ಬರ್ತಾರ.

ಹಂಗ ಕಟ್ಟೆಕಟ್ಟಿಕೊಂಡು, ಅದರೊಳಗ ತುಪ್ಪ, ಹಾಲು ಹಾಕಿಕೊಂಡು ಸುರದು ಉಂಡ್ರ… ಉಂಡೋರಿಗೆ ಸ್ವರ್ಗ ಸುಖ. ಬಾಯಿಗಂಟಿರುವ ತುಪ್ಪ ಮತ್ತು ಬೆಲ್ಲದ ರುಚಿ ತೊಳ್ಯಾಕಂತ ಇಲ್ಲಿಯ ಡೊಣ್ಣಮೆಣಸಿನಕಾಯಿ ರೆಡಿ ಇರ್ತಾವ.

ಕ್ಯಾಪ್ಸಿಕಮ್‌ ಅಲ್ಲೇ ಅಲ್ಲ, ಅದರ ಮಿನಿಯೇಚರ್‌ನ್ಹಂಗ ಇರುವ ನಮ್ಮ ಡೊಣ್ಣಮೆಣಸಿನಕಾಯಿ ಖಾರನೇ ಖಾರ. ಅದರ ಖಾರ ಬಡಿಯಾಕ ಒಣಕೊಬ್ಬರಿ, ಉಳ್ಳಾಗಡ್ಡಿ, ಬಳ್ಳೊಳ್ಳಿ ಎಲ್ಲಾನೂ ಸುಟ್ಗೊತಾವ.

ಒಲಿ ಕೆಂಡದಾಗ ಸುಡ್ತಿದ್ರು. ಈಗ ಗ್ಯಾಸ್‌ ಒಲಿಯ ಬೆಂಕಿಯೊಳಗ ಇವು ಹೊಗಿ ಎಬ್ಬಸ್ಕೊಂತ ತಮ್ಮನ್ನೇ ಬೆಂಕಿಗೆ ಒಪ್ಪಿಸ್ಕೊತಾವ. ನಂಗ ಉಳ್ಳಾಗಡ್ಡಿ ಸುಡೂದನ್ನ ನೋಡೂದೆ ಒಂಥರಾ ಸಮಾಧಾನ ಕೊಡ್ತದ. ತನ್ನೆಲ್ಲ ಸಿಪ್ಪಿ ಮರುಟಿಮರುಟಿ ಸುಡ್ತದ. ಸುಟ್ಟ ಉಳ್ಳಾಗಡ್ಡಿ ಸುಲಿಯೂ ಮುಂದನೂ ಕಣ್ಣೀರು ಬರ್ತಾವ. ಸುಲಿದಷ್ಟೂ ಸುಲಿದಷ್ಟೂ ಕಣ್ಣೀರು. ಕಣ್ಣೀರಾದಷ್ಟೂ ಬಯಲು. ಬಯಲಾದಷ್ಟೂ ನಿರಾಳ. ಬೆತ್ತಲಾದಷ್ಟೂ ಬಯಲ. ಬಯಲಾದಷ್ಟೂ ನಿರಾಳ…

ಹಿಂಗ ಹೊಸ ರೂಪದೊಳಗ ಕಪ್ಪು ಬಣ್ಣ ಮಾಡ್ಕೊಂಡಿರುವುದನ್ನೆಲ್ಲ ಮಿಕ್ಸಿಯೊಳಗ ಗಿರ್‌ ಅನಿಸಿದ್ರ ಕರಿಮುದ್ದಿ ಮಸಾಲಿ ರೆಡಿಯಾಗಿರ್ತದ. ಎಣ್ಣೆಣ್ಣಿ, ಒಗರೊಗರು, ಇದಕ್ಕ ಒಂಚೂರು ಹುಣಶಿಹಣ್ಣಿನ ರಸ ಕಲಿಸಿ, ಜೀರಗಿ ಪುಡಿ, ಧನಿಯಾ ಪುಡಿ ಇಲ್ಲಾಂದ್ರ ಒಂಚೂರು ಗರಮ್‌ ಮಸಾಲಾ ಹಾಕಿ, ಕಲಿಸಿ, ಡೊಣ್ಣಮೆಣಸಿನಕಾಯಿ ಹೊಟ್ಯಾಗ ತುಂಬ್ತಾರ. 

ಅದೆಷ್ಟು ಚಂದ ಕಾಣ್ತದಂದ್ರ ಕಪ್ಪೊಡಲಿನ ರೇಷ್ಮಿ ಇಳಕಲ್‌ ಸೀರಿಗೆ ಹಸಿರು ಅಂಚಿದ್ದಂಗ. ಅದನ್ನ ನೋಡಿ, ಇದನ್ನ ಮಾಡಿದ್ರೋ, ಇದನ್ನ ನೋಡಿ, ಅದನ್ನ ನೇಯ್ತಾರೊ. ಒಟ್ನಾಗ ಸಂಭ್ರಮ. ಹಿಂಗ ಇದನ್ನ ಒಗ್ಗರಣಿ ಹಾಕಿ, ಉಪ್ಪು, ಬೆಲ್ಲ ಒಗದ್ರ ಡೊಣ್ಣಮೆಣಸಿನಕಾಯಿ ಉಣ್ಣಾಕ ರೆಡಿ.

ಒಂದು ವೇಳೆ ಕಟ್ಗೊಂಡು ಹೋಗಬೇಕಂದ್ರ ಕಾರೆಳ್ಳು (ಹುಚ್ಚೆಳ್ಳು) ಕರ್ರಗೆ ಹುರದು, ಪುಡಿ ಮಾಡಿ, ಅದಕ್ಕ ಹುಂಚಿಹುಳಿ, ಮಸಾಲಿ ಖಾರ ಕಲಿಸಿ, ಅದನ್ನ ಉಳ್ಳಾಗಡ್ಡಿ ಒಗ್ಗರಣಿಯೊಳಗ ತಾಳಸ್ತಾರ. ಇದನ್ನ ಮೆಣಸಿನಕಾಯಿ ಹೊಟ್ಟಿ ಒಡದು, ಮಸಾಲಿ ತುಂಬಿಸಿ, ಎಣ್ಣಿಯೊಳಗ ಕರದು ತಗೀತಾರ. ಬಜ್ಜಿ ಬೋಂಡಾ ತಿಂದಂಗೂ ತಿನ್ನಬಹುದು, ಅಷ್ಟು ರುಚಿ. ಹುಣಸಿಹುಳಿ, ಬೆಲ್ಲ ಎರಡೂ ಒಗ್ಗರಣಿಯೊಳಗ ಒಂದಾಗಿ ಬೆರೀತಾವ.

ಈ ಹುಳಿ ಮತ್ತ ಬೆಲ್ಲ ಒಂಥರಾ ಜಗಳ ಮತ್ತು ಪ್ರೀತಿ ಇದ್ಹಂಗ. ಎರಡೂ ತದ್ವಿರುದ್ಧ ರುಚಿ ಕೊಡ್ತಾವ. ಆದ್ರ ಸಾಂಗತ್ಯದೊಳಗ ಭಾರಿ ಖುಷಿ ಕೊಡ್ತಾವ. ಯಾವುದೇ ಒಂದು ಹೆಚ್ಚಾದ್ರೂ ಹದಗೆಡ್ತದ. ಥೇಟ್‌ ಜೀವನದ್ಹಂಗ.

ಬಹುಶಃ ಈ ಎಲ್ಲ ಒಳಾರ್ಥ, ಗೂಡಾರ್ಥ ಇಟ್ಕೊಂಡೇ ಉಣ್ಣಾಕ ಬಂದೋರಿಗೆ ಈ ಪಲ್ಯ ನೀಡ್ತಿರಬೇಕು ಅನ್ನುವ ದಟ್ಟವಾದ ಗುಮಾನಿ ನಂದು. 

ಇಷ್ಟೇ ಅಲ್ಲ, ಇದರ ಜೊತಿಗೆ ಇನ್ನೊಂದು ಬಣ್ಣ ತಾಟಿನಾಗ ಗಮನ ಸೆಳೀತದ. ಅದು ಹಳದಿಬಣ್ಣದ ಸಪ್ಪನ ಬ್ಯಾಳಿ. ಮೆಣಸಿನ ಖಾರ ತೊಳಿಯಾಕ ಏನು ಬೇಕೊ ಎಲ್ಲಾ ಇರ್ತದ. ಸಪ್ಪನ ಬ್ಯಾಳಿ ಅಂದ್ರ ಪಕ್ಕಾ ಸಪ್ಪನ ಬ್ಯಾಳಿನೆ. ಅದಕ್ಕ ಕೆಲವರು ಸಾಸಿವಿ, ಜೀರಗಿ, ಬಳ್ಳೊಳ್ಳಿ ಒಗ್ಗರಣಿ ಹಾಕ್ತಾರ. ಕರಿಬೇವಿನ ಕೂಡ. ಇಲ್ಲಾಂದ್ರ ಅದು ಹಂಗ ಹಳದಿ ಬಣ್ಣದೊಳಗ ಖುಷಿ ಪಡ್ತದ. ಮನ್ಯಾಗಿನ ಹಿರಿಯಾರು ಇದ್ಹಂಗ. 

ನಮ್ಮ ಸೊಕ್ಕು, ಸೆಡವಿನ ಖಾರ, ಈ ಬ್ಯಾಳಿ ಜೊತಿಗೆ ಹದವಾಗಿ ಬೆರೀತದ. ಆದ್ರ ತನ್ನ ಖಾರ ಬಿಟ್ಕೊಡೂದಿಲ್ಲ. ಹಿಂಗ ಎಲ್ಲಾರ ಕೂಡ ಇದ್ರೂ ತನ್ನತನ ಬಿಡೂದು ಬ್ಯಾಡಂತದೋ ಏನೋ.. ಒಟ್ನಾಗ ಬೆರಳು ಚೀಪಿ ಊಟ ಮಾಡೂಹಂಗಂತೂ ಮಾಡ್ತದ ಈ ಕಾಂಬಿನೇಷನ್ನು.

ಇವೆಲ್ಲ ತಾಟಿನಾಗಿದ್ದಾಗ ನಮ್ಮ ಮೆಂತ್ಯ ಸೊಪ್ಪು, ಸೌತಿಕಾಯಿ, ಮೂಲಂಗಿ, ಮೂಲಂಗಿ ಸೊಪ್ಪು ಎಲ್ಲಾನೂ ಬಂದು ಕೂಡ್ತಾವ. ಅದೆಂಥ ಚಂದ ಕಾಣ್ತದ ತಾಟು, ಬಿಳಿಹಸಿರು ವರ್ಣ ಸಂಯೋಜನೆ. ಇದರ ಮಗ್ಗಲಕ್ಕ ನಮ್ಮ ಕೆಂಪು ಚಟ್ನಿ. ಇದರ ಕತಿನೆ ಬ್ಯಾರೆ.

ಆಮೇಲೆ ಇದರ ಸಂಗ್ತಿಗೆ ಬರೂನಂತ. ಸದ್ಯಕ್ಕ ಈ ಕೆಂಪು ಚಟ್ನಿ ಪಕ್ಕ ನಮ್ಮ ಗುರೊಳ್ಳು ಚಟ್ನಿ, ಮಗ್ಗಲಕ ಸೇಂಗಾ ಚಟ್ನಿ, ಎರಡರ ನಡುವೆ ಸೇತುಬಂಧ ಆಗೂದು ಕಲ್ಹೂವಿನಂಥ ಮೊಸರು. ಹಿಂಗ ಸೃಷ್ಟಿಯ ಸಕಲ ಬಣ್ಣಗಳೂ ನಿಮ್ಮ ತಟ್ಟೆಗೆ ಬಂದಾವ ಅನ್ನೂದು ಖಾತ್ರಿ ಆದಮೇಲೆ ಸಜ್ಜಿ ರೊಟ್ಟಿ ಬರ್ತಾವ, ಬಿಳಿಜೋಳದ ರೊಟ್ಟಿ ಬರ್ತಾವ. ಅಲ್ಲಿಂದ ಮೆತ್ತನೆಯ ಚಪಾತಿ ಬೇಕಿದ್ದೋರಿಗೆ.

ಹಿಂಗ ಮಾದ್ಲಿಯೂಟ ಅಂದ್ರೂ ಅದರ ಬೆನ್ಹತ್ತಿ ಮಾರುದ್ದದ ಪಟ್ಟಿ ಬೆಳೀತದ. ಇದೇ ಮಾದ್ಲಿ ಕಲ್ಯಾಣ ಕರ್ನಾಟಕದೊಳಗ ಮಲೊದಿ ಆಗ್ತದ. ಲಿಂಗ ಕಟ್ಕೊಂಡ್ರ ಮಾಲ್ದಿ, ಜನಿವಾರ ಇದ್ರ ಮಲೋದಿ. ಹಿಂಗ ಜಾತಿಯನ್ನೂ ಪತ್ತೆ ಮಾಡಬಹುದು. ರುಚಿ ಒಂದೇ ಇರ್ತದ. ಆದ್ರ ಹೆಸರಿಗೆ ಜಾತಿಯ ರಂಗು ಇದ್ದೇ ಇರ್ತದ.

ಮಾದ್ಲಿಯೂಟಕ್ಕ ಹೊಂಟ್ರ ಮುಂಜೇನೆ ಚಾ, ಬಿಸ್ಕೆಟ್‌ ಅಷ್ಟೇ ಹೊಟ್ಟಿಗೆ. ಪಾಪ ಕರುಳಿಗೆ ತ್ರಾಸ್‌ ಆಗಬಾರದಲ್ಲ ಅದಕ್ಕ. ಇಷ್ಟೆಲ್ಲ ಉಂಡು, ನೀರು ಕುಡ್ಯಾಕೂ ಅಲುಗಾಡೋರು. ಮುಂದ ಒಂದು ಗ್ಲಾಸಿನ ತುಂಬ ಮಜ್ಜಿಗಿ ಅಥವಾ ಪಾನಕ ಕುಡದೇ ತೀರ್ತಾರ. 

ಇಲ್ಲಾಂದ್ರ ಅದೆಷ್ಟು ನೀರಡಸ್ತದಂದ್ರ ತೃಷೆಯ ಆರಂಭ ಆಗೂದು ಅಲ್ಲಿಂದಲೇ. ಹಿಂಗಾಗಿ ಮಾದ್ಲಿಯೂಟ ಒಂದು ಬದುಕನ್ನೇ ಬಿಂಬಸ್ತದ. ಒಮ್ಮೆಯರೆ ಮಾದ್ಲಿಯೂಟ ಸವಿಯೋರು ಇಷ್ಟೆಲ್ಲ ಮುಂದಿರೂದು ನೋಡಿದ್ರ, ಇದು ಬದುಕಿನ ಬುತ್ತಿಯೂಟ ಅನಿಸ್ತದ.

‍ಲೇಖಕರು ಅನಾಮಿಕಾ

August 30, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: