ವೀರೇಶ ಬಡಿಗೇರ ಓದಿದ ʼಜಂಗ್ಲಿ ಕುಲಪತಿಯ ಜಂಗೀಕಥೆʼ

ಹತಭಾಗ್ಯರ ಹಿತಕಾಯ್ದ ಜಂಗ್ಲಿ ಕುಲಪತಿ…

ಡಾ ವೀರೇಶ ಬಡಿಗೇರ

ಡಾ.ತೇಜಸ್ವಿ ಕಟ್ಟೀಮನಿ ಕಥನಗಳು ಜಂಗ್ಲಿ ಕುಲಪತಿಯ ಜಂಗೀಕಥೆ (ಮನೋಹರ ಗ್ರಂಥಮಾಲೆ, ಧಾರವಾಡ, ೨೦೨೧) ಸುಡು ಅನುಭವಗಳ ಕಟುವಾಸ್ತವದ ಕಥನವಾಗಿದೆ. ಜಂಗೀ ಅಂದರೆ ಆಡು ಭಾಷೆಯಲ್ಲಿ ‘ಭಾರಿ ಬಯಲು ಕುಸ್ತಿ’ ಅಥವಾ ‘ಗುದ್ದಾಟ’ ಎಂದರ್ಥ. ಗರಡಿಮನಿಯಲ್ಲಿ ಕಲಿತ ಪಟ್ಟುಗಳನ್ನು ಸಮಯೋಚಿತವಾಗಿ ಎದುರಾಳಿ ಚಿತ್ತ ಬೀಳುವಂತೆ ದೃಢತೆಯಿಂದ ಪ್ರಯೋಗಿಸುವ ಜಾಣ್ಮೆಯೇ ಜಂಗೀ ಕುಸ್ತಿ.

ಮುಚ್ಚು ಮರೆಯಿಲ್ಲದ, ಅತೀನಾಜೂಕಲ್ಲದ, ದೈಹಿಕ ಮತ್ತು ಮಾನಸಿಕ ಬಲದ ಮೇಲೆ ನಿಂತಿರುವ ಜಂಗೀ ನಿಕಾಲಿ ಕುಸ್ತಿಯಲ್ಲಿನ ಗೆಲವು ಸೋಲುಗಳು ಆಡುವವನ ಮತ್ತು ಊರಿನ ಮಾನ ಅಪಮಾನಗಳೊಂದಿಗೆ ಹೆಣೆದುಕೊಂಡಿರುತ್ತಿದ್ದವು. ಸೋಲು ಗೆಲುವುಗಳು ಇಲ್ಲಿ ಕೇವಲ ತಂತ್ರ ಪ್ರತಿತಂತ್ರಗಳಾಗಿರದೆ ಸಮುದಾಯದ ಸ್ವಾಭಿಮಾನ ಕಾಯುವ, ತನ್ನ ಕನಸುಗಳಿಗೆ ಕಸುವನ್ನು ತುಂಬಿಕೊಳ್ಳಬೇಕೆನ್ನುವ ಇರಾದೆಯನ್ನು ಹೊಂದಿರುತ್ತಿದ್ದವು. ಹೀಗೆ ತನ್ನ ಸಾಂಸ್ಕೃತಿಕ ಅಸ್ತಿತ್ವ ಮತ್ತು ಅನನ್ಯತೆಯನ್ನು ಮರುಕಟ್ಟಿಕೊಳ್ಳಲು ಇಟ್ಟ ದಿಟ್ಟ ಹೆಜ್ಜೆಯ ಗಟ್ಟಿ ಕಥನವೇ ಜಂಗ್ಲಿ ಕುಲಪತಿಯ ಜಂಗೀಕಥೆ ಕೃತಿಯ ಹೂರಣವಾಗಿದೆ.

‘ಬೆಟ್ಟದ ಜೀವಗಳ ದೇಶಿಜ್ಞಾನ ಪರಂಪರೆ, ಅವರ ನಿಖರ ಹಾಗೂ ಅಗೋಚರ ರೂಪದ ವೈಜ್ಞಾನಿಕ ತಿಳುವಳಿಕೆಗಳನ್ನು ಆಧುನಿಕ ಭಾಷೆ ಹಾಗೂ ತಂತ್ರಜ್ಞಾನದಲ್ಲಿ ಹಿಡಿದಿಡಬೇಕು, ಆಧುನಿಕ ಶಿಕ್ಷಣ ಪಡೆದು ಸ್ವಾವಲಂಬಿಗಳಾಗಬೇಕು, ಅವರ ಕಲೆ ಹಾಗೂ ಶ್ರಮ ಜಗತ್ತಿನ ಒಳಮರ್ಮಗಳನ್ನು ನಾಗರಿಕ ಬದುಕಿನೊಂದಿಗೆ ಹೆಣೆಯಬೇಕು. ಕುಟುಕ ಜೀವದಲ್ಲಿರುವ ಬುಡಕಟ್ಟುಗಳ ಬರವಣಿಗೆರಹಿತ ಇತಿಹಾಸವನ್ನು ಅದು ‘ಗೊಟಕ್’ ಎನ್ನುವ ಮೊದಲೆ ದಾಖಲಿಸಿ, ಸಂಗ್ರಹಿಸಿ, ಪ್ರಕಟಿಸುವುದು, ದೇಶವ್ಯಾಪಿ ಶೈಕ್ಷಣಿಕ ಚರ್ಚೆಗಳನ್ನು ಹಬ್ಬಿಸುವುದು, ಬುಡುಕಟ್ಟು ಇತಿಹಾಸದ ಅಧ್ಯಯನ, ಅಧ್ಯಾಪನ, ನಡೆಸುವುದು, ಹೊಸ ತಲೆಮಾರಿಗೆ ಬುಡುಕಟ್ಟು ಮಂದಿಯ ಬದುಕಿನ ವೈಶಿಷ್ಟ್ಯಗಳನ್ನು ಪರಿಚಯಿಸುವುದು’ ಭಾರತದ ವಿವಿಧ ಬುಡಕಟ್ಟುಗಳ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಸಬಲೀಕರಣಕ್ಕೆ ಕಾರಣವಾಗಬೇಕಿದ್ದ ವಿಶ್ವವಿದ್ಯಾಲಯ, ತನ್ನ ಉದ್ದೇಶಿತ ಬೆಳವಣಿಗೆಯ ಗತಿಯನ್ನು ಮರೆತ ಹೊತ್ತಿನಲ್ಲಿ ಡಾ.ತೇಜಸ್ವಿ ಕಟ್ಟೀಮನಿಯವರು ಕುಲಪತಿಗಳಾಗಿ ನಿಯೋಜಿತರಾಗುತ್ತಾರೆ. (೧೫ ಜನವರಿ ೨೦೧೪) ಭೌತಿಕವಾಗಿ ಹಾಗೂ ಬೌದ್ಧಿಕವಾಗಿ ಕಸದ ಕೊಂಪೆಯಾಗಿದ್ದ ಜಂಗ್ಲಿ ಜನರ ಕ್ಯಾಂಪಸ್‌ನ್ನು ಕಾಂಪೋಸ್ಟ ಆಗಿ ರೂಪಾಂತರಿಸುವುದು ಹೇಗೆ, ಎನ್ನುವುದನ್ನು ಹೊಣೆಗಾರಿಕೆ ಹೊತ್ತ ರಾತ್ರಿಯುದ್ದಕ್ಕೂ ಮಗ್ಗಲು ಬದಲಿಸುತ್ತಾ ಧೇನಿಸುತ್ತಾರೆ.

ಚರಿತ್ರೆಯಲ್ಲಿ ಇದ್ದೂ ಇಲ್ಲದಂತಿರುವ ಜಂಗ್ಲಿ ಜನರ ಆಶೋತ್ತರಗಳ ಹೊಣೆಹೊತ್ತ ಸಮಾಜದ ಮುಖ್ಯವಾಹಿನಿಯಲ್ಲಿರದ ತಳವಾರ ಯಂಕಪ್ಪನ ಮಗ ತಾನು ಕುಲಪತಿಯಾದ ವಿಸ್ಮಯ ಹಾಗೂ ಸಂಭ್ರಮಗಳಲ್ಲಿ ಮೈಮರೆಯದೆ ‘ಬೆಟ್ಟದ ಜೀವಗಳ ದೇಶಿಜ್ಞಾನ ಪರಂಪರೆ, ಅವರ ನಿಖರ ಹಾಗೂ ಅಗೋಚರ ರೂಪದ ವೈಜ್ಞಾನಿಕ ತಿಳುವಳಿಕೆಗಳನ್ನು ಆಧುನಿಕ ಭಾಷೆ ಹಾಗೂ ತಂತ್ರಜ್ಞಾನದಲ್ಲಿ ಹಿಡಿದಿಡಬೇಕು, ಆಧುನಿಕ ಶಿಕ್ಷಣ ಪಡೆದು ಸ್ವಾವಲಂಬಿಗಳಾಗಬೇಕು, ಅವರ ಕಲೆ ಹಾಗೂ ಶ್ರಮ ಜಗತ್ತಿನ ಒಳಮರ್ಮಗಳನ್ನು ನಾಗರಿಕ ಬದುಕಿನೊಂದಿಗೆ ಹೆಣೆಯಬೇಕು, ಕುಟುಕ ಜೀವದಲ್ಲಿರುವ ಬುಡಕಟ್ಟುಗಳ ಬರವಣಿಗೆರಹಿತ ಇತಿಹಾಸವನ್ನು ಅದು ‘ಗೊಟಕ್’ ಎನ್ನುವ ಮೊದಲೆ ದಾಖಲಿಸಿ, ಪ್ರಕಟಿಸುವುದು, ದೇಶವ್ಯಾಪಿ ಶೈಕ್ಷಣಿಕ ಚರ್ಚೆಗಳನ್ನು ಹಬ್ಬಿಸುವುದು, ಬುಡುಕಟ್ಟು ಇತಿಹಾಸದ ಅಧ್ಯಯನ, ಅಧ್ಯಾಪನ, ನಡೆಸುವುದು, ಹೊಸ ತಲೆಮಾರಿಗೆ ಬುಡುಕಟ್ಟು ಮಂದಿಯ ಬದುಕಿನ ವೈಶಿಷ್ಟ್ಯಗಳನ್ನು ಪರಿಚಯಿಸುವುದು’ ಹೀಗೆ ತಲೆತುಂಬಾ ಗಿಜುಗುಡುತ್ತಿದ್ದ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದು ಹೇಗೆಂದು ದಾರಿ ಹುಡುಕುತ್ತಾರೆ.

ನೆಲ್ಲಿನ ಬಿಳಿ ಅನ್ನ ಉಣ್ಣುವುದು ತನ್ನ ದೊಡ್ಡ ಕನಸೆಂದು ಅಂದುಕೊಂಡಿದ್ದ ಹುಡುಗನೊಬ್ಬ, ಮಳೆಯಾದರೆ ಹುದುಲು ಬೀಳುವ, ಬಿಸಿಲಿಗೆ ಬಾಯಿಬಿಡುವ, ಥಂಡಿಗೆ ಥರಗುಟ್ಟುವ ಪರಿಸರವನ್ನು ಹದವರಿತು ಬೆದೆ ಮಾಡುವ ಕೆಲಸಕ್ಕಿಳಿಯುತ್ತಾನೆ. ಸ್ವತಃ ಗಂಡ ಹೆಂಡತಿ ಕಸಬರಿಗೆ ಹಿಡಿದು ಆಯಾ ಕ್ಷೇತ್ರದ ಸಾಧಕರ ಸಹಾಯದಿಂದ ಕಸವನ್ನು ಕಾಂಪೋಸ್ಟ್ ಆಗಿ ಪರಿವರ್ತಿಸಿ, ಗಿಡ ಮರಗಳ ಆರೈಕೆಗೆ ಬಳಸಿ ಹಕ್ಕಿಪಕ್ಷಿಗಳ ವಂಶಾಭಿವೃದ್ಧಿಗೆ ಶ್ರಮಿಸುತ್ತಾರೆ. ಆವರಣದಲ್ಲಿ ದೆವ್ವಿನಂತೆ ಬೆಳೆದ ಹುಲ್ಲನ್ನು, ಸಿಬ್ಬಂದಿಗಳ ಮನೆಯ ಪ್ರತಿದಿನದ ಮುಸುರೆ ನೀರನ್ನು ಸುತ್ತಲಿನ ಹಾಡಿಯ ಜನ ತಮ್ಮ ದನಕರಗಳಿಗೆ ತಗೆದುಕೊಂಡು ಹೋಗಲು ಪ್ರೇರೇಪಿಸುತ್ತಾರೆ.

ಬಡ ಮತ್ತು ಅಮಾಯಕ ಬುಡಕಟ್ಟು ಮಹಿಳೆ ಹಾಗೂ ಪುರುಷರ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳನ್ನು, ಬೇಕಾಯ್ದೆಸಿರಿ ಕೆಲಸಗಳನ್ನು ನಿಲ್ಲಿಸಿ, ಅವರಲ್ಲಿ ಸ್ವಾಭಿಮಾನದ ಬೀಜ ಬಿತ್ತುತ್ತಾರೆ, ಅದಕ್ಕಾಗಿ ವಿವಿಧ ರೀತಿಯ ಸ್ವಸಹಾಯ ಗುಂಪುಗಳು, ಸರಕಾರಿ ಹಾಗೂ ಖಾಸಗಿ ಕಂಪನಿಗಳ ಸಹಯೋಗದಲ್ಲಿ ಜಾಗೃತಿ ಹಾಗೂ ತರಬೇತಿ ಶಿಬಿರಗಳನ್ನು ಸಂಘಟಿಸಿ ಜಂಗ್ಲಿ ಜನರಲ್ಲಿ ಶುಚಿತ್ವ ಮತ್ತು ಸ್ವಾವಲಂಬನೆಯ ಗುಣ ಬೆಳೆಸುತ್ತಾರೆ.

ಸಾಂಪ್ರದಾಯಕ ದುಡಿಮೆಗಳ ಜೊತೆಗೆ ಟೌನ್‌ಶಿಪ್, ಹೋಟೆಲುಗಳ ಮೂಲಕ ಬಂಡವಾಳ ಆಕರ್ಷಿಸಿ ಆಧುನಿಕ ಉದ್ಯೋಗಾವಕಾಶಗಳನ್ನು ಸೃಷ್ಠಿಸಿ ಜಂಗ್ಲಿ ಜನರ ಭೌತಿಕ ಹಾಗೂ ಬೌದ್ಧಿಕ ಸಂಪತ್ತು ಹೆರವರ ಪಾಲಾಗದಂತೆ ಮಾಡುತ್ತಾರೆ. ‘ಪಲಾಸ್’ ನಂತಹ ಥೇಟರ್ ಗ್ರೂಪ್‌ಗಳ ಮೂಲಕ ಕಾಡು ಜನರಲ್ಲಿ ಹುದುಗಿದ್ದ ಅಂತಃಶಕ್ತಿಯನ್ನು ಸೃಜನಾತ್ಮಕವಾಗಿ ಹೊರತೆಗೆದು ಹೊರ ಜಗತ್ತಿಗೆ ಪರಿಚಯಿಸುತ್ತಾರೆ. ಗೊಂಡಿ ಚಿತ್ರಕಲೆ, ಆರ್ಚರಿಯಂತಹ ಬುಡಕಟ್ಟು ಕಲೆ ಮತ್ತು ಕ್ರೀಡೆಗಳು, ಪಾರಂಪರಿಕ ವೈದ್ಯ ವಿದ್ಯೆಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಲು ದಣಿವರಿಯದೆ ದುಡಿಯುತ್ತಾರೆ.

ಹುಲಿಯೊಡನೆ ಹುಲಿಯಾಗಿ ಬದುಕುವ, ಕಠಿಣ ಪರಿಶ್ರಮ, ಬಲಿಷ್ಠ ದೇಹ, ಅಪಾರ ದೈಹಿಕ ಸಾಮರ್ಥ್ಯ ಹೊಂದಿ ಸಹಜ ವಿಜ್ಞಾನಿಗಳೂ ಆದ ಇಂತಹ ಶಕ್ತಿವಂತ ಜನ, ವಿಶ್ವವಿದ್ಯಾಲಯದಂತಹ ಶೈಕ್ಷಣಿಕ ಹಾಗೂ ನಾಗರಿಕತೆಯ ನಾಜೂಕಿನೆದುರು ಹೀನಭಾವದಿಂದ ತಲೆತಗ್ಗಿಸುತ್ತಿದ್ದರು. ಹಿಂಜರಿಕೆಯಿಂದ ಮುದುರಿಕೊಳ್ಳುತ್ತಿದ್ದರು. ಇಂತಹ ಹತಭಾಗ್ಯ ಸಮುದಾಯಗಳಲ್ಲಿ ಮಾನಸಿಕ ಸದೃಢತೆಯನ್ನು ಬೆಳೆಸಿ ಜೀವನೋತ್ಸಾಹ ತುಂಬುತ್ತಾರೆ.

‘ಅಂತರಂಗದ ಹಿಂಜರಿಕೆಯನ್ನು ಮೆಟ್ಟಿ ನಿಲ್ಲುವುದು ಒಂದು ಮರುಹುಟ್ಟು’ ಎನ್ನುವುದು ತೇಜಸ್ವಿಯವರ ಅನುಭವದ ಮಾತು. ಸುಳ್ಳುಸುದ್ದಿಯ ಸುಗ್ಗಿಯ ನಡುವೆ ಜರ್ಜರಿತವಾಗಿದ್ದ, ಬಲಾಢ್ಯರ ಕೂಪವಾಗಿದ್ದ ಬುಡಕಟ್ಟು ವಿಶ್ವವಿದ್ಯಾಲಯ ಮತ್ತು ಅದರ ವಾರಸುದಾರರನ್ನು ಧೈರ್ಯವಾಗಿ ತಲೆ ಎತ್ತಿ ನಿಲ್ಲುವಂತೆ ತಿದ್ದುತ್ತಾರೆ.

ಡಾ. ತೇಜಸ್ವಿಯವರ ದೂರದೃಷ್ಠಿ ಅಗಾಧವಾದದ್ದು. ವರ್ತಮಾನದ ಸಮಸ್ಯೆಗಳ ಪರಿಹಾರದ ಜೊತೆ ನಾಳಿನ ಕನಸುಗಳು ಅರಳಬೇಕು, ಅದಕ್ಕೆ ಬೇಕಾದ ಸಿದ್ಧತೆಗಳು ಈಗಿನಿಂದಲೇ ನಡೆಯಬೇಕು. ಬುಡಕಟ್ಟು ಬದುಕು ಹಾಗೂ ಜ್ಞಾನ ಪರಂಪರೆಗಳು ಕೇವಲ ಕಳೆದು ಹೋದ ಕತೆಯಾಗಬಾರದು, ಸಂಗ್ರಹಿಸಬಹುದಾದ ವಸ್ತುವೂ ಆಗಬಾರದು. ಬದಲಾಗಿ ಆಧುನಿಕ ಕಾಲಕ್ಕೆ ತಕ್ಕಂತೆ ಅವು ತನ್ನೆಲ್ಲ ಅಂತಃಸಾಧ್ಯತೆಗಳೊಂದಿಗೆ ಮರುಸೃಷ್ಠಿಯಾಗಬೇಕೆಂದು, ಹಲವು ರಚನಾತ್ಮಕ ಯೋಜನೆಗಳನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಅನುಷ್ಠಾನಕ್ಕೆ ತರುತ್ತಾರೆ. ಬೆನ್ನುಹತ್ತಿದ ಕಿರುಕುಳಗಳ ಮಹಾಪೂರವನ್ನು ನುಂಗಿಕೊಂಡು ಬೆಟ್ಟದ ಮಕ್ಕಳ ಹೊಸ ಬದುಕಿಗೆ ಹೊಸ ಅರ್ಥ ನೀಡಲು ನಿಜವಾದ ಜಂಗೀಕುಸ್ತಿ ಮಾಡುತ್ತಾರೆ.

ಕಾಡಿನ ಮಕ್ಕಳ ಗುಣಾತ್ಮಕ ಶಿಕ್ಷಣ ಹಾಗೂ ಉತ್ತಮ ನಾಗರಿಕತ್ವಕ್ಕಾಗಿ ವಿಶ್ವವಿದ್ಯಾಲಯದ ಆವರಣದಲ್ಲಿ ಏಕಲವ್ಯ ಕಿಂಡರ್ ಗಾರ್ಟನ್ ಮಾಡೆಲ್ ಟ್ರೈಬಲ್ ಸ್ಕೂಲ್ ಮತ್ತು ಕೇಂದ್ರೀಯ ವಿದ್ಯಾಲಯಗಳನ್ನು ಆರಂಭಿಸುತ್ತಾರೆ. ಹಲವು ಕಾನೂನಾತ್ಮಕ ಹಾಗೂ ಆರ್ಥಿಕ ಅಡಚಣೆಗಳು ಎದುರಾದರೂ “ಎಲ್ಲವನ್ನು ಕಾನೂನು ನೋಡಿಕೊಳ್ಳುವುದಿಲ್ಲ, ಹೃದಯದಿಂದಲೂ ನೋಡಬೇಕು” ಎನ್ನುವ ಜೀವಪ್ರೀತಿ ಡಾ.ತೇಜಸ್ವಿ ಅವರದು.

ಬುಡಕಟ್ಟು ಮಕ್ಕಳಿಗಾಗಿ ವಿಶ್ವವಿದ್ಯಾಲಯದ ವಿವಿಧ ಅಧ್ಯಯನ ವಿಭಾಗಗಳಲ್ಲಿ ಸಂಪ್ರದಾಯ ಹಾಗೂ ಆಧುನಿಕತೆಯ ಸಂಯೋಜನೆಯುಳ್ಳ ಹೊಸ ಹೊಸ ವೃತ್ತಿಪರ ಕೋರ್ಸುಗಳನ್ನು ತೆರೆಯುತ್ತಾರೆ. ಬುಡಕಟ್ಟು ಯುವಕರ ಉದ್ಯೋಗ ಭದ್ರತೆಯನ್ನು ತಲೆಯಲ್ಲಿಟ್ಟುಕೊಂಡು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕೈಗಾರಿಕಾ ಕಂಪನಿಗಳು, ವಿಶ್ವವಿದ್ಯಾಲಯಗಳು, ಸರಕಾರಿ ಇಲಾಖೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಬೋಧನೆ ಮತ್ತು ಶೋಧನೆಗೆ ಆದ್ಯತೆ ನೀಡುತ್ತಾರೆ.

ಸುಸಜ್ಜಿತ ಹಾಗೂ ವೈಜ್ಞಾನಿಕ ಪ್ರಯೋಗಾಲಯ, ಪೀಠೋಪಕರಣಗಳು, ಒಳಾಂಗಣ ಕ್ರೀಡಾಂಗಣ, ಕೇಂದ್ರಗ್ರಂಥಾಲಯ, ಟ್ರೈಬಲ್ ಮ್ಯೂಸಿಯಂ, ಸಮ್ಮಕ್ಕ ಸಾರಕ್ಕ ಮೆಗಾಮೆಸ್, ಕ್ಯಾಂಟೀನುಗಳು, ರಸ್ತೆಗಳು, ಪಾರ್ಕಗಳು, ವಿವಿಧ ವಿನ್ಯಾಸದ ಕಟ್ಟಡಗಳು, ವಿವಿಧ ರೀತಿಯ ಕ್ರೀಡೆ ಮತ್ತು ಮನರಂಜನೆಗಳು ಬುಡಕಟ್ಟು ವೀರರ, ಸಾಧಕರ, ಕಲಾಕಾರರ, ಹೆಸರಿನೊಂದಿಗೆ ಬೆರೆತು ವಿದ್ಯಾರ್ಥಿ, ಪಾಲಕರು ಹಾಗೂ ಸಿಬ್ಬಂದಿಯಲ್ಲಿ ನವಚೈತನ್ಯ ತುಂಬುತ್ತವೆ. ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದ ಸಾಧಕರನ್ನು, ಚಿತ್ರಗಾರರನ್ನು, ಕ್ರೀಡಾಪಟುಗಳನ್ನು, ಕಲಾವಿದರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸೃಷ್ಠಿ ಮಾಡುವ ಮೂಲಕ ಇಡೀ ದೇಶ ಅಮರಕಂಠಕದತ್ತ ಕಣ್ಣೆತ್ತಿ ನೋಡುವಂತೆ ಮಾಡುತ್ತಾರೆ.

ಕಾಡು ಮತ್ತು ನಾಡಿನ ನಾಗರಿಕತೆಗಳು ಹೊಕ್ಕು ಬಳಕೆ ಮಾಡಬೇಕು, ಕಾಡಿನ ಜನರ ಕಠಿಣ ಹಾಗೂ ಪ್ರಾಮಾಣಿಕ ಜೀವನಶ್ರದ್ದೆ ನಾಗರಿಕರಿಗೂ ನಾಗರಿಕ ಮನುಷ್ಯರ ತಾಜಾ ತಿಳುವಳಿಕೆ ಹಾಗೂ ಆಧುನಿಕ ವೃತ್ತಿ ಕೌಶಲ್ಯಗಳು ಕಾಡಿನ ಜನರಿಗೂ ನಿಲುಕುವಂತಾಗಬೇಕು. ಈ ಪ್ರಕ್ರಿಯೆಯಲ್ಲಿ ಕಾನೂನು ಮುರುಕರಿಂದ ಎಂತಹ ಅಡಚಣೆಗಳು ಬಂದರೂ ಎದುರಿಸಿ ಅಡವಿ ಜನರ ಅಸ್ಮಿತೆಯ ಭಾಗವಾಗಿರುವ ಬುಡಕಟ್ಟು ವಿಶ್ವವಿದ್ಯಾಲಯವನ್ನು ರಕ್ಷಿಸಿ ಬೆಳೆಸುವುದು ನನ್ನ ಧರ್ಮ. ಇದು ಅಕಾಡೆಮಿಕ್ ಲೀಡರಶಿಪ್‌ನ ಪ್ರಮುಖ ಕರ್ತವ್ಯ ಎಂದು ನನ್ನ ಅಂತಃಕರಣ ಹೇಳುತ್ತದೆ. ಯಾಕಂದರೆ ಅಧಿಕಾರ ಯಾವತ್ತೂ ಹೂವಿನ ಹಾಸಿಗೆಯಲ್ಲ.

ಅಪಮಾನ ನುಂಗಿ ನಗುವುದು ನನಗೆ ರೂಢಿಯಾಗಿದೆ. ದ್ವೇಷ ಮಾಡುವವರ ಜೊತೆ ಯಾತ್ರೆ ಮಾಡುತ್ತ ಅವರ ದ್ವೇಷದ ಜ್ವಾಲೆಯನ್ನು ಶಮನ ಮಾಡುವುದು ನನ್ನ ಸ್ವಭಾವ. ನನ್ನ ವಿರುದ್ದ ಹಿಂಸೆ ಮಾಡುವವರು ದಣಿದು ಹಿಂದೆ ಬಿದ್ದಿದ್ದಾರೆ. ನಾನೆಂದೂ ದಣಿದಿಲ್ಲ. ಮುನ್ನೆಡೆಯುವುದೆ ನನಗೆ ಅಭ್ಯಾಸ. ಇವು ತೇಜಸ್ವಿಯವರ ಸ್ಪಷ್ಟ ಮಾತುಗಳು. ತೇಜಸ್ವಿಯವರು ತಮ್ಮ ಅಚಲಶ್ರದ್ಧೆ, ಪಟ್ಟುಸಡಿಲಿಸದ ಜಂಗ್ಲಿತನಗಳಿಂದ ಬೆಟ್ಟದ ಮಕ್ಕಳ ಬದುಕಿನ ಖದರ್‌ನ್ನು ಅಮರಕಂಠಕದಿಂದ ಯುರೋಪಿನ ತನಕ ಹಬ್ಬಿಸುತ್ತಾರೆ.

ಕಾಡು ಜನ ಘನತೆಯಿಂದ ಬದುಕುಬೇಕು, ಅವರ ಪ್ರಗತಿಗಾಗಿ ಹುಟ್ಟಿದ ಬುಡಕಟ್ಟು ವಿಶ್ವವಿದ್ಯಾಲಯ ಅವರ ಉಸಿರಿನ ಭಾಗವಾಗಬೇಕು ಎಂದು, ಹಲವು ಕಾರಣಗಳಿಂದ ಬೆಳೆಯುವ ಗೊಡವೆಯನ್ನೇ ಮರೆತಿದ್ದ ಬುಡಕಟ್ಟು ವಿಶ್ವವಿದ್ಯಾಲಯವನ್ನು ತಮ್ಮ ಅಸಾಧಾರಣ ಕರ್ತೃತ್ವಶಕ್ತಿ, ಆತ್ಮಸ್ಥೈರ್ಯ, ಮನುಷ್ಯಪ್ರೀತಿಗಳ ಮೂಲಕ ಡಾ.ತೇಜಸ್ವಿಯವರು ಸಶಕ್ತವಾಗಿ ಮರುನಿರ್ಮಿಸುತ್ತಾರೆ. ವ್ಯಕ್ತಿಗೆ ಇಂತಹ ರಚನಾತ್ಮಕ ಶಕ್ತಿ ಬರುವುದು ಸತ್ಯ ಮತ್ತು ಮಹಾ ಪ್ರಾಮಾಣಿಕತೆಯಿಂದ ಮಾತ್ರ ಇಂತಹ ಅಲುಗದ ಸತ್ಯ, ಪ್ರಾಮಾಣಿಕ ಕಾಳಜಿ ಹಾಗೂ ಅನುಭವಯಾತ್ರೆಯ ಅಕ್ಷರ ರೂಪವೇ ಜಂಗ್ಲಿ ಕುಲಪತಿಯ ಜಂಗೀಕಥೆ ಕೃತಿಯಾಗಿದೆ.

‍ಲೇಖಕರು Admin

January 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: