ವಿಶ್ವ ರಂಗ ಪ್ರವೇಶಿಸಿದ ಕರೋನ; ನಿಲುಗಡೆಯಾಗಿದೆ ರಂಗಚಾರಣ

ಡಾ. ನಿಂಗು ಸೊಲಗಿ,

ಲೇಖಕರು-ನಾಟಕಕಕಾರರು, ಮುಂಡರಗಿ.

ಪ್ರತಿ ವರ್ಷ ಮಾರ್ಚ್ ೨೭ ರಂದು ಜಗತ್ತಿನಾದ್ಯಂತ ವಿಶ್ವ ರಂಗಭೂಮಿ ದಿನ ಆಚರಣೆ ಮಾಡಲಾಗುತ್ತಿದೆ. ಜಾಗತಿಕವಾಗಿ ರಂಗಭೂಮಿಯಲ್ಲಿ ಕಾರ್ಯ ಮಾಡಿದ ಸಾಧಕರೊಬ್ಬರಿಂದ ಸಂದೇಶ ಸಾರುವ ಮೂಲಕ ಎಲ್ಲರೂ ಆ ಕುರಿತು ಚಿಂತನ-ಮಂಥನ, ಸಂವಾದ-ಸನ್ಮಾನ ನಡೆಸುವುದರೊಂದಿಗೆ ಎಲ್ಲೆಡೆ ರಂಗ ಪ್ರದರ್ಶನಗಳು ನಡೆಯುತ್ತವೆ. ಕೆಲವೆಡೆ ವಾರಪೂರ್ತಿ ನಾಟಕ ಪ್ರದರ್ಶನಗಳನ್ನು ಸಂಘಟಿಸಲಾಗುತ್ತದೆ.

ಆದರೆ ಈ ವರ್ಷ ಕೋವಿಡ್-೧೯ ಪರಿಣಾಮದಿಂದಾಗಿ ಪ್ರಪಂಚದ ತುಂಬ ಭಯ ಆವರಿಸಿ ಎಲ್ಲ ಕಾರ್ಯಕ್ರಮಗಳು ಮುದುಡಿ ಮನೆ ಸೇರಿ ಮಲಗಿವೆ. ಜಾಗತಿಕವಾಗಿ ಪ್ರಾತಿನಿಧಿಕ ರಂಗ ಸಂಸ್ಥೆ ಐ.ಟಿ.ಐ. ಯೇ ಆನ್‌ಲೈನ್ ಮೂಲಕ ವಿಶ್ವ ರಂಭೂಮಿ ದಿನವನ್ನು ಹಂಚಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ನಾನೂ ಕೂಡ ಏನೂ ಮಾಡದವನಾಗಿ ಕನಿಷ್ಟ ರಂಗಭೂಮಿಯ ಕುರಿತು ಈ ವರ್ಷದ ರಂಗ ಸಂದೇಶವನ್ನು ಮುಂದಿಟ್ಟುಕೊಂಡು ಕೆಲವು ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದು ಬಯಸಿ ಬರೆಯುತ್ತಿರುವೆ.

ಈ ವರ್ಷದ ರಂಗಭೂಮಿ ಸಂದೇಶ ನೀಡುವ ಗೌರವಕ್ಕೆ ಪಾತ್ರರಾದವರು ಪಾಕಿಸ್ತಾನದ ಪ್ರಮುಖ ನಾಟಕಕಾರ ಪ್ರತಿಷ್ಠಿತ ‘ಅಜೋಕಾ’ ರಂಗ ಸಂಸ್ಥೆಯ ಮುಖ್ಯಸ್ತ ಶಾಹಿದ್ ನದೀಮ್ ಅವರು.

‘ರಂಗಭೂಮಿಯ ಹಾದಿ ಸರಳ ಸುಗಮವಾದುದಲ್ಲ ಇದು ಹೋರಾಟ’ ಎಂಬುದನ್ನರಿತಿರುವ ಇವರು ಇದನ್ನು ‘ಹಗ್ಗದ ಮೇಲೆ ನಡೆಯುವ ಸಾಹಸ’ ಎನ್ನುತ್ತಾರೆ. ಅವರ ಮೂವತ್ತಾರು ವರ್ಷದ ರಂಗಾನುಭವ ಇದಕ್ಕೆ ಪುಷ್ಠಿ ನೀಡುತ್ತದೆ. ರಂಗಭೂಮಿ ಒಂದು ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಬೆಳೆದು ನಡೆಯುವಂಥದು. ಇಲ್ಲಿ ಯಾರೂ ಮುಖ್ಯರಲ್ಲ ಎಲ್ಲರನ್ನೂ ಎಲ್ಲವನ್ನೂ ಒಳಗೊಳ್ಳುವ ಸಮೂಹ ಕ್ರಿಯೆ. ಜಾತಿ, ಮತ, ಧರ್ಮಗಳನ್ನು ಮೀರಿದ ಸಮನ್ವಯದ ವೇದಿಕೆ.

ರಂಗಭೂಮಿ ಕುರಿತು ಹಲವು ಪ್ರಶ್ನೆಗಳು ಇವೆ. ರಂಗಭೂಮಿ ಇದೇನು ಮನರಂಜನೆಯೋ ಅಥವಾ ಶಿಕ್ಷಣವೊ?, ಗತಕಾಲದ ಶೋಧ-ಕಲಿಕೆಯೋ ಅಥವಾ ಭವಿಷ್ಯಕ್ಕಾಗಿ ಸಿದ್ಧತೆಯೊ? ಸೃಜನಾತ್ಮಕವಾದ ಸ್ವತಂತ್ರ ಅಭಿವ್ಯಕ್ತಿಯೋ ಅಥವಾ ಅಧಿಕಾರಯುತ ಸಾಹಸೀ ಮುಖಾಮುಖಿಯೊ? ಸಮಾಜದ ಹಿತವೋ ಅಥವಾ ವ್ಯವಹಾರಿಕವೋ? ಹೀಗೆ ಈ ಎಲ್ಲ ಜಿಜ್ಞಾಸೆ-ದ್ವಂದ್ವಗಳ ಮಧ್ಯ ಸಮತೋಲನ ಕಾಪಾಡಿಕೊಳ್ಳುತ್ತ ರಂಗಭೂಮಿ ಕಟ್ಟುವ ಕೆಲಸ ನಿರಂತರವಾಗಿ ನಡೆದುಕೊಂಡು ಬಂದಿದೆ. ಇದು ಸಾಮಾನ್ಯವಾದುದಲ್ಲ; ಸಂದರ್ಭವಶಾತ್ ರಂಗಕರ್ಮಿ ಒಬ್ಬ ಮಾಂತ್ರಿಕನಾಗಬೇಕಾಗುತ್ತದೆ.

ಶಾಹಿದ್ ನದೀಮ್ ಅವರು ಪಾಕಿಸ್ತಾನದಲ್ಲಿ ಧಾರ್ಮಿಕ ಹಾಗೂ ಲೌಕಿಕದ ನಡುವೆ ಸ್ಪಷ್ಟ ಭೇದವಿರುವುದನ್ನು ಗುರುತಿಸುತ್ತಾರೆ. ಏಕೆಂದರೆ ಅಲ್ಲಿನ ಧರ್ಮದ ನೆಲೆಯಲ್ಲಿ ಮುಕ್ತ ಚರ್ಚೆ, ಹೊಸ ವಿಚಾರಗಳು ಸಾಧ್ಯವಿಲ್ಲ. “ಕಲೆ ಸಂಸ್ಕೃತಿಗಳನ್ನು ಅವು ತಮ್ಮ ಪವಿತ್ರ ಲೀಲೆಗಳಿಂದ ಹೊರಗೇ ಇಟ್ಟಿವೆ” ಎನ್ನುತ್ತಾರೆ. ಹಾಗಾಗಿಯೇ ಅಲ್ಲಿನ ಪ್ರದರ್ಶನ ಕಲೆಗಾರರ ನಡೆ ಹರ್ಡಲ್ಸ್ ಓಟದಂತೆ ಅಡೆತಡೆಗಳಿಂದ ಕೂಡಿದೆಯಂತೆ. ಇವರಿಲ್ಲಿ ಮೊದಲು ತಾವು ಮುಸ್ಲಿಂ ಧರ್ಮಿಷ್ಟರು ಹಾಗೂ ವಿಧೇಯ ನಾಗರಿಕರು ಎಂಬುದನ್ನು ಋಜುವಾತುಪಡಿಸಬೇಕು. ಹೀಗೆ ಪ್ರದರ್ಶನ ಕಲೆಗಳನ್ನು ತಮ್ಮದಾಗಿಸಿಕೊಳ್ಳಲು ಹಿಂಜರಿಕೆಯಿರುವ ನೆಲದಲ್ಲಿ ಧಾರ್ಮಿಕ ಹಾಗೂ ಲೌಕಿಕವನ್ನು ಒಂದೇ ಸ್ತರದಲ್ಲಿ ನಿಲ್ಲಿಸಬಲ್ಲಂತಹ ಉಪಸಂಸ್ಕೃತಿಯೊಂದನ್ನು ಮುನ್ನೆಡೆಸಿಕೊಂಡು ಬಂದುದು ಇವರಿಗಿರುವ ರಂಗಭೂಮಿಯ ವಿಶೇಷ ಆಸಕ್ತಿ, ಶಕ್ತಿ ಮತ್ತು ಸಾಮಾಜಿಕ ಬದ್ಧತೆ ಕಾರಣವಾಗಿದೆ.

ಇಂಥ ನೆಲದಲ್ಲೂ ಎಂಭತ್ತರ ದಶಕದಲ್ಲಿ ಮಿಲಿಟರಿ ಸರ್ವಾಧಿಕಾರದ ವಿರುದ್ಧ ಅಸಮ್ಮತಿಯ ಧ್ವನಿ ಎತ್ತಲೆಂದು ಹುಟ್ಟಿಕೊಂಡ ಯುವ ಕಲಾವಿದರ ತಂಡವೊಂದಕ್ಕೆ ಪಂಜಾಬಿನ ಶ್ರೇಷ್ಠ ಸೂಫಿ ಕವಿ ಬುಲ್ಲೆಹ್ ಶಾಹ್ ಅವರ ಬದುಕು-ಬವಣೆಗಳ ಕಾವ್ಯವನ್ನಾಧರಿಸಿ ‘ಬುಲ್ಹಾ’ ನಾಟಕವನ್ನು ಶಾಹಿದ್ ನದೀಮ್ ರಚಿಸಿಕೊಟ್ಟರು. ಚಕ್ರವರ್ತಿಗಳ ಸಾರ್ವಭೌಮತ್ವ ಮತ್ತವರ ಅನುಯಾಯಿಗಳ ಪುಢಾರಿತನವನ್ನು ನಿರ್ಭೀತಿಯಿಂದ ಪ್ರಶ್ನಿಸುತ್ತಿದ್ದ ಸಂತಕವಿ ಬುಲ್ಲೇಹ್ ಶಾಹ್ ಸಂಗೀತ ನೃತ್ಯಗಳ ಮೂಲಕ ಶೋಷಕ ಧರ್ಮ ಮತ್ತು ಮಧ್ಯವರ್ತಿಗಳನ್ನು ಉಪೇಕ್ಷಿಸಿ, ದೈವ ಮತ್ತು ಮಾನುಷ ಸಂಬಂಧದ ಕೊಂಡಿ ಹುಡುಕ ಹೊರಟವರು. ಕವ್ವಾಲಿ ಭಕ್ತಿ ಸಂಗೀತ, ಸೂಫಿ ಧಮಲ್ ನೃತ್ಯ, ಸ್ಪೂರ್ತಿದಾಯಕ ಕವನವಾಚನಗಳ ಜೊತೆಗೆ ಜಿಕಿರ್ ಪಠಣವೂ ಸೇರಿ ನಾಟಕವು ಹೊಸದೊಂದು ರಂಗಭೂಮಿಯೇ ಉದಯವಾದ ಅನುಭವ ತಂದುಕೊಟ್ಟಿತು.

ಪಾಕಿಸ್ತಾನದಲ್ಲಿ ಮಾತ್ರವಲ್ಲ, ‘ಅಜೋಕಾ’ದ ಭಾರತ ಯಾತ್ರೆಯ ಮೂಲಕ ೧೮ ವರ್ಷಗಳ ಕಾಲ ಭಾರತದ ಉದ್ದಗಲಕ್ಕೂ ಈ ನಾಟಕ ಪ್ರದರ್ಶನಗೊಂಡಿತು. ಬುಲ್ಲೇಹ್ ಶಾಹ್‌ನ ಪಾತ್ರಧಾರಿ ಅವನ ಅವತಾರವೇ ಆಗಿರುವಂತೆ ಜನ ಪರಿಭಾವಿಸುವಷ್ಟರ ಮಟ್ಟಿಗೆ ನಾಟಕ ಪರಿಣಾಮ ಬೀರಿತು. ರಂಗಭೂಮಿಯ ಶಕ್ತಿಯೇ ಇದು. ನಟನೊಬ್ಬ ತಾನು ನಿರ್ವಹಿಸುವ ಪಾತ್ರದ ಅವತಾರವೇ ಆಗಿಬಿಡುವ ಸಾಧ್ಯತೆ ಒಂದು ಆದ್ಯಾತ್ಮಿಕ ಅನುಭವ. ಪ್ರೇಕ್ಷಕನ ಮೇಲಿನ ಪರಿಣಾಮ ಈ ರೀತಿಯದಾದರೆ ಈ ನಟನ ಮೇಲೆ ಸೂಫಿ ಪ್ರಭಾವ ಎಷ್ಟಾಯಿತೆಂದರೆ ಆತ ತಾನೇ ಸೂಫಿ ಕವಿಯಾಗಿ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರಂತೆ.

ಪ್ರದರ್ಶನ ಆರಂಭವಾದಾಗ ಬುಲ್ಲೇಶ್ ಶಾಹ್‌ನ ಆತ್ಮ ತಮ್ಮೊಂದಿಗಿರುತ್ತದೆಯೆಂದು ವೇದಿಕೆ ಒಂದು ಅಲೌಕಿಕದಲ್ಲಿರುವಂತೆ ಭಾಸವಾಗಿರತ್ತದೆಂದು ಕಲಾವಿದರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದರು. ಹೀಗೆ ರಂಗಭೂಮಿಯ ಆಧ್ಯಾತ್ಮಿಕ ಆಯಾಮಗಳನ್ನು ಹುಡುಕುತ್ತಾ ಭವಿಷ್ಯದ ದಾರಿತೋರುವ ಭೂತ-ವರ್ತಮಾನಗಳ ಮಧ್ಯ ಸೇತುವೆ ನಿರ್ಮಿಸಬಹುದು. ಈ ಹಿನ್ನೆಲೆಯಲ್ಲಿಯೇ ‘ರಂಗಸ್ಥಳ ಒಂದು ದೇಗುಲ’ ಎಂಬ ಶೀರ್ಷಿಕೆಯನ್ನು ಶಾಹಿದ್ ಅವರು ತಮ್ಮ ಸಂದೇಶಕ್ಕೆ ನೀಡಿರಬಹುದು.

ತಮ್ಮ ಸಂದೇಶದ ಕೊನೆಯಲ್ಲಿ ಶಾಹಿದ್ ಅವರು “ದೇಶ ದೇಶಗಳ ಮಧ್ಯ, ಸಮುದಾಯ ಸಮುದಾಯಗಳ ಮಧ್ಯ ದ್ವೇಷ ಕಾರುತ್ತಿರುವ; ಹಗೆಯ ಸಿದ್ಧಾಂತಗಳು ರಾರಾಜಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ಭೂಗೋಳ ಸಹಿತ ಹವಾಮಾನದ ದುರಂತದಿಂದಾಗಿ ವಿನಾಶದ ಪರಾಕಾಷ್ಟೆಯಲ್ಲಿದೆ. ಈ ಸಂದರ್ಭದಲ್ಲಿ ನಮ್ಮೊಳಗೆ ಆತ್ಮಶಕ್ತಿಯನ್ನು ಮತ್ತೆ ಪೂರೈಸಿ ನಾವಿರುವ ಜಗತ್ತಿನ ಬಗ್ಗೆ ಹಾಗೂ ನಾವು ನಡೆದಾಡುವ ಭೂಮಿಯ ಬಗ್ಗೆ ನಮಗಿರುವ ನಿರಾಸಕ್ತಿ, ಜಡತೆ, ನಿರಾಶಾವಾದ, ಲಾಲಸೆ ಹಾಗೂ ಅನಾಧಾರಗಳನ್ನು ಹೊಡೆದೋಡಿಸಬೇಕಿದೆ. ಮಾನವ ಕುಲವನ್ನು ಅದಃಪಥನದ ಹಾದಿಯಿಂದ ಮೇಲೆಬ್ಬಿಸಿ, ಹುರದುಂಬಿಸಿ; ಕ್ರಿಯಾಶೀಲವಾಗುವ ಉನ್ನತ ಪಾತ್ರ ರಂಗಭೂಮಿಗಿದೆ. ಇದು ರಂಗಭೂಮಿಯನ್ನು ಪಾವಿತ್ರತೆಯ, ಆಧ್ಯಾತ್ಮಿಕ ಸ್ಥರಕ್ಕೆ ಕೊಂಡೊಯ್ಯಬಲ್ಲುದು.” ಎನ್ನುತ್ತಾರೆ.

ರಂಗಭೂಮಿಯ ಇವರ ಚಿಂತನೆ ಈ ವರ್ಷದ ರಂಗ ನಡೆಗೆ ಪಥವಾಗಲಿ ನಾವೂ ಕೂಡ ಹೊಸತನದ ಹುಡುಕಾಟದೊಂದಿಗೆ ಸಾಗುವ ಪಥಿಕರಾಗೋಣ. ರಂಗಭೂಮಿ ಅರಿಯದವರಿಗೆ ಮಾಡುವ ಅಜ್ಞಾತ ಕೆಲಸವಲ್ಲ, ಅರಿತವರು ಅರಿವಿನ ಪರಿಧಿಯಲ್ಲಿ ಕಟ್ಟುವ ಸೃಜನ ಕ್ರಿಯೆ.

‍ಲೇಖಕರು avadhi

March 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Roopa s

    Sundaravadha rangaboomiya pradarshana .adhake samanadha sarisati yavodu ela. edanu anivaryavagi acharisoke agada karanadinada ee varsha acharisoke aguthila adhakagi nama manadali acharisona always keep smiling

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: