ವಿಶ್ವ ರಂಗಭೂಮಿ ದಿನದ ಸಂದೇಶ: “ಅಕಾಲವೇ ರಂಗಚಳವಳಿಗೆ ಸಕಾಲ”

೨೭ ಮಾರ್ಚ್ ೨೦೨೦ರ ವಿಶ್ವ ರಂಗದಿನದ ಸಂದೇಶ –
ಪಾಕಿಸ್ತಾನಿ ರಂಗಕರ್ಮಿ ಶಾಹೀದ್ ನದೀಮ್ ಅವರ ಸಂದೇಶದ ಕನ್ನಡ ಅನುವಾದ

ಅನುವಾದ: ಬಿ. ಸುರೇಶ

(ಸಂದೇಶದ ಪೂರ್ಣಪಾಠ)

೨೦೨೦ರ ವಿಶ್ವರಂಗದಿನದ ಸಂದೇಶವನ್ನು ನೀಡುವ ಅವಕಾಶ ದೊರೆತಿರುವುದು ಬಹು ದೊಡ್ಡ ಗೌರವ. ಇದು ಎಂತಹ ವ್ಯಕ್ತಿಯನ್ನೂ ವಿನೀತನಾಗಿಸುತ್ತದೆ ಎಂಬುದು ಒಂದೆಡೆಯಾದರೆ, ಐಟಿಐ (ಇಂಟರ್‌ನ್ಯಾಷನಲ್ ಥಿಯೇಟರ್ ಇನ್ಸ್ಟಿಟ್ಯೂಟ್) ಸಂಸ್ಥೆಯು ಪಾಕಿಸ್ತಾನದ ರಂಗಚಳವಳಿಗೆ ಮತ್ತು ಪಾಕಿಸ್ತಾನದಂತಹ ದೇಶಕ್ಕೆ ಈ ಅವಕಾಶ ಒದಗಿಸಿರುವುದು ಬಹುದೊಡ್ಡ ಸಂಭ್ರಮದ ಸಂಗತಿಯೂ ಹೌದು. ಇದು ‘ಅಜೋಕ ಥಿಯೇಟರ್’ ಸ್ಥಾಪಕರಾದ ಮತ್ತು ನಮ್ಮ ರಂಗಭೂಮಿಯ ಬಹುದೊಡ್ಡ ಮಾದರಿಗಳಲ್ಲಿ ಒಬ್ಬರಾದ, ನನ್ನ ಜೀವನದ ಜೊತೆಗಾತಿಯಾಗಿದ್ದ, ಎರಡು ವರ್ಷಗಳ ಹಿಂದೆ ನಮ್ಮನ್ನಗಲಿದ ಮದೀಹ ಗೌಹರ್ (^೧) ಅವರ ಕೆಲಸಗಳಿಗೆ ಸಂದ ಗೌರವ ಎಂದು ಭಾವಿಸುತ್ತೇನೆ. ಇಂದು ರಂಗಚಳವಳಿಯನ್ನು ಉಳಿಸಿ ಬೆಳೆಸುವುದು ಯಾವುದೇ ರಂಗತಂಡಕ್ಕೆ ಬಹು ಕಷ್ಟದ ಕೆಲಸ ಹಾಗೂ ತ್ರಾಸಿನ ಪ್ರಯಾಣ.

ಇಸ್ಲಾಂ ಜನರು ಬಹುಸಂಖ್ಯಾತರಾಗಿರುವ ದೇಶದವನು ನಾನು. ನನ್ನದು ಅತಿ ಹೆಚ್ಚು ಸೇನಾ ಸರ್ವಾಧಿಕಾರಿಗಳನ್ನ ಕಂಡ ಹಾಗೂ ಅತಿ ಹೆಚ್ಚು ಧಾರ್ಮಿಕ ಆತಂಕವಾದಿಗಳನ್ನ, ಮೂಲಭೂತವಾದಿಗಳನ್ನ ಹೊಂದಿದ ದೇಶ. ಯಾವ ನೆಲದ ಜೊತೆಗೆ ಚಾರಿತ್ರಿಕ ಹಾಗೂ ಸಾಂಸ್ಕೃತಿಕವಾದ ಬಹುದೊಡ್ಡ ಇತಿಹಾಸವನ್ನು ಹಂಚಿಕೊಂಡಿದೆಯೋ ಅದೇ ನೆರೆಯ ದೇಶದ ಜೊತೆಗೆ ಮೂರು ಯುದ್ಧಗಳನ್ನು ನಡೆಸಿದ ದೇಶವಿದು. ಇವೆರಡೂ ನೆರೆಯ ದೇಶಗಳು ಅಣ್ವಸ್ತ್ರಗಳನ್ನು ಹೊಂದಿರುವ ಈ ಕಾಲದಲ್ಲಿ, ಯಾವುದೇ ಕ್ಷಣದಲ್ಲಿ ಮತ್ತೊಂದು ಬೃಹತ್ ಯುದ್ಧ ಆಗಬಹುದೇನೋ ಎಂಬ ಆತಂಕದಲ್ಲಿ ನಾವೆಲ್ಲರೂ ಇದ್ದೇವೆ.

“ಅಕಾಲವೇ ರಂಗಚಳವಳಿಗೆ ಸಕಾಲ” ಎಂದು ಒಮ್ಮೊಮ್ಮೆ ತಮಾಷೆಗೆ ಹೇಳುತ್ತಾ ಇರುತ್ತೇವೆ. ನಾವಿಂದು ಎದುರಿಸಬೇಕಾಗಿರುವ ಸವಾಲುಗಳಿಗೆ, ನೋಡುಗರೆದುರು ನಾವು ಬಿಚ್ಚಿಡಬೇಕಾದ ಆಡಳಿತದ ವೈಫಲ್ಯ ಹಾಗೂ ವೈರುಧ್ಯಗಳಿಗೆ ಇಂದು ಕೊರತೆಯೇ ಇಲ್ಲ. ನಾನು ಮತ್ತು ನನ್ನ ರಂಗತಂಡ ಅಜೋಕ ಥಿಯೇಟರ್(*^೨) ಈ ತಂತಿಯ ಮೇಲಿನ ನಡಿಗೆಯನ್ನು ಕಳೆದ ಮುವ್ವತ್ತಾರು ವರ್ಷದಿಂದ ನಡೆಸಿದ್ದೇವೆ. ವಾಸ್ತವವಾಗಿ ರಂಜನೆಯ ಜೊತೆಗೆ ಸಂದೇಶವನ್ನೂ ಹೂರಣವಾಗಿಸಿಕೊಂಡ ನಾಟಕಗಳನ್ನು ಅಭಿನಯಿಸುವುದು, ಭೂತ ಕಾಲದ ವಿವರಗಳ ಮೂಲಕ ನಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುವಂತಹ ನಾಟಕ ಕಟ್ಟುವುದು, ನಮ್ಮ ಸೃಜನಶೀಲತೆಯನ್ನು ಉಳಿಸಿಕೊಳ್ಳುತ್ತಲೇ ಅಧಿಕಾರಶಾಹಿಯ ಒತ್ತಡಗಳನ್ನು ಎದುರಿಸುವ ಸಾಹಸ ಮಾಡುವುದು, ಸಮಾಜದ ಹುಳುಕನ್ನು ವಿಮರ್ಶಿಸುತ್ತಲೇ ಆರ್ಥಿಕ ಸಂಕಷ್ಟಕ್ಕೆ ಈಡು ಮಾಡದಂತಹ ನಾಟಕ ಕಟ್ಟುವುದು ಮತ್ತು ಜನಸಾಗರ ಹಾಗೂ ಬುದ್ಧಿಜೀವಿ ವಲಯ ಎಂಬ ಎರಡೂ ಬಣಗಳನ್ನು ತಾಗುವಂತಹ ಪ್ರದರ್ಶನ ನೀಡುವುದು ಎಂದಿಗೂ ಹಗ್ಗದ ಮೇಲಿನ ನಡಿಗೆಯೇ ಹೌದು. ಈ ಹಿನ್ನೆಲೆಯಲ್ಲಿ ರಂಗಕರ್ಮಿಗಳನ್ನು ಜಾದೂಗಾರರು ಎನ್ನಬಹುದು.

ಪಾಕಿಸ್ತಾನದಲ್ಲಿ ಪವಿತ್ರ/ಧಾರ್ಮಿಕ ಮತ್ತು ಅಪವಿತ್ರ/ಅಧಾರ್ಮಿಕ ಎಂಬುದರ ನಡುವಿನ ಗೆರೆ ತೀರಾ ಸ್ಪಷ್ಟವಾಗಿದೆ. ಅಪವಿತ್ರ/ ಅಧಾರ್ಮಿಕ ಎನಿಸಿಕೊಳ್ಳುವವರು ಯಾವುದೇ ಕಾರಣಕ್ಕೂ ಪವಿತ್ರ/ಧಾರ್ಮಿಕ ವಿಷಯವನ್ನು ಪ್ರಶ್ನಿಸುವಂತಿಲ್ಲ. ಪವಿತ್ರ/ ಧಾರ್ಮಿಕ ಎನಿಸಿಕೊಳ್ಳುವವರು ಯಾವುದೇ ಹೊಸ ಆಲೋಚನೆಯನ್ನು ಕುರಿತ ಚರ್ಚೆಯಲ್ಲಿ ಭಾಗವಹಿಸುವಂತಿಲ್ಲ. ವಾಸ್ತವವೆಂದರೆ, ನಮ್ಮ ದೇಶದಲ್ಲಿ ಸಾಂಪ್ರದಾಯಿಕ ಆಡಳಿತ ವ್ಯವಸ್ಥೆಯು ಕಲೆ ಮತ್ತು ಸಂಸ್ಕೃತಿಯನ್ನು ತನ್ನೆಲ್ಲಾ ಚಟುವಟಿಕೆಗಳಿಂದ ದೂರವೇ ಇಟ್ಟಿದೆ. ಹೀಗಾಗಿ ಪ್ರದರ್ಶನ ಕಲೆಗಳನ್ನು ವೃತ್ತಿಯಾಗಿಸಿಕೊಂಡವರ ಬದುಕು ನಿರಂತರವಾಗಿ ಅಡೆತಡೆಗಳನ್ನು ಎದುರಿಸಿಯೇ ಸಾಗಬೇಕಾಗಿದೆ. ನಮ್ಮ ದೇಶದ ಕಲಾವಿದ ಮೊದಲಿಗೆ, ತಾನೊಬ್ಬ `ಒಳ್ಳೆಯ ಮುಸ್ಲಿಮ್’ ಎಂದು ಸಾಬೀತು ಪಡಿಸಬೇಕು. ನಂತರ ಎಲ್ಲ ಕಾಲದಲ್ಲಿಯೂ ಕಾನೂನು ಪಾಲಿಸುವವನು ಎಂದು ಗೊತ್ತುಪಡಿಸಬೇಕು. ಇವುಗಳ ಜೊತೆಗೆ, `ನೃತ್ಯ ಮತ್ತು ಸಂಗೀತಗಳಿಗೆ ಇಸ್ಲಾಂ ಧರ್ಮದಲ್ಲಿಯೂ ಅವಕಾಶವಿದೆ’ ಎಂದು ಮತ್ತೆ ವಾದ ಮಂಡಿಸಿ ಎಲ್ಲ ಅಧಿಕಾರಿಗಳನ್ನೂ ಒಪ್ಪಿಸುತ್ತಲೇ ಇರಬೇಕು. ಈ ತಾಪತ್ರ‍್ರಯಗಳನ್ನು ಎದುರಿಸಲಾಗದೆ ಬಹುತೇಕ ಮುಸಲ್ಮಾನರು ಪ್ರದರ್ಶನ ಕಲೆಗಳಿಂದ ದೂರವೇ ಉಳಿದಿದ್ದಾರೆ. ನೃತ್ಯ, ಸಂಗೀತ, ನಾಟಕ ಎಂಬುದು ಸಮಾಜದ ಅವಿಭಾಜ್ಯ ಅಂಗವೆಂದು ತಿಳಿದಿದ್ದರೂ ಸಹ ಅನೇಕರು ಇವುಗಳಿಂದ ಹೊರಗೆ ಇದ್ದಾರೆ. ಇಂತಹ ಸಂದರ್ಭದಲ್ಲಿಯೇ ನಾವೊಂದು ಹೊಸ ಉಪಸಂಸ್ಕೃತಿಯ ಹಾದಿಯನ್ನು ಕಂಡುಕೊಂಡೆವು. ಈ ಹಾದಿಯು ಧಾರ್ಮಿಕವೂ ಹೌದು, ಅಧಾರ್ಮಿಕವೂ ಹೌದು.

೧೯೮೦ರಲ್ಲಿ ಪಾಕಿಸ್ತಾನವೂ ಸೇನಾಡಳಿತದಲ್ಲಿ ಇದ್ದಾಗ, ಸರ್ವಾಧಿಕಾರಿ ವ್ಯವಸ್ಥೆಯನ್ನು ಸಾಮಾಜಿಕ ಹಾಗೂ ರಾಜಕೀಯ ಸಿದ್ಧಾಂತಗಳನ್ನುಳ್ಳ ರಂಗಪ್ರದರ್ಶನಗಳ ಮೂಲಕ ವಿರೋಧಿಸಲೆಂದು “ಅಜೋಕ ಥಿಯೇಟರ್” ರಂಗತಂಡ ಆರಂಭವಾಯಿತು. ನಮ್ಮೊಳಗಿನ ಸಿಟ್ಟು, ನಮ್ಮ ಹತಾಶೆಗಳು, ನಮ್ಮ ಆತಂಕಗಳೆಲ್ಲವನ್ನೂ ಮುನ್ನೂರು ವರ್ಷಗಳ ಹಿಂದೆ ಬದುಕಿದ್ದ ಸೂಫಿ (*^೩) ಸಂತ ಅತ್ಯಂತ ಸ್ಪಷ್ಟವಾಗಿ ತನ್ನ ಕಾವ್ಯದ ಮೂಲಕ ಹಿಡಿದಿಟ್ಟಿದ್ದ. ಆ ಸೂಫಿ ಸಂತನ ಹೆಸರು “ಬುಲ್ಲೇಹ್ ಷಾ”(*^೪).

ಈ ಕವಿಯ ,ಹಾಡುಗಳ/ಪದ್ಯಗಳ ಮೂಲಕವೇ ಅತ್ಯಂತ ಸ್ಪಷ್ಟವಾದ ಹಾಗೂ ನಿಖರವಾದ ರಾಜಕೀಯ ಮಾತುಗಳನ್ನು ಆಡಬಹುದು, ಆ ಮೂಲಕ ಭ್ರಷ್ಟ-ಧರ್ಮಾಂಧ ರಾಜಕೀಯ ವ್ಯವಸ್ಥೆಗೆ ಉತ್ತರ ಕೊಡುವುದು ಸಾಧ್ಯವಾಗಬಹುದು ಎಂದು “ಅಜೋಕ ಥಿಯೇಟರ್” ತಂಡವು ಅರಿತುಕೊಂಡಿತು. ಅಧಿಕಾರಶಾಹಿ ನಮ್ಮನ್ನು ದೇಶಭ್ರಷ್ಟರನ್ನಾಗಿಸಬಹುದು ಅಥವಾ ನಮ್ಮ ನಾಟಕಗಳನ್ನು ಬಹಿಷ್ಕರಿಸಬಹುದು. ಆದರೆ ಜನರು ಪೂಜಿಸುವ, ಗೌರವಿಸುವ, ಸಂತನ ಸ್ಥಾನ ನೀಡಿರುವ ಕವಿ ಬುಲ್ಲೇಹ್ ಷಾನನ್ನ ಬಹಿಷ್ಕರಿಸುವುದು ಸಾಧ್ಯವಿರಲಿಲ್ಲ. ಆ ಸೂಫಿ ಕವಿಯ ಜೀವನವೇ ಸ್ವತಃ ನಾಟಕೀಯವೂ ಹಾಗೂ ಪ್ರಗತಿಪರವೂ ಆಗಿತ್ತು. ಹಾಗಾಗಿ ಆತನ ಕಾಲದಲ್ಲಿ ಆ ಕವಿಯನ್ನು ಕುರಿತು ಧರ್ಮಾಂಧರು ಫತ್ವಾಗಳನ್ನು ಹೊರಡಿಸಿದ್ದರಂತೆ, ಬಹಿಷ್ಕರಿಸಿದ್ದರಂತೆ. ಆದರೆ ಕಾಲಾಂತರದಲ್ಲಿ ಬುಲ್ಲಾ ಸಂತನೆನಿಸಿಕೊಂಡ. ಇದನ್ನರಿತಾಗ ನಾವು “ಬುಲ್ಲಾ” ನಾಟಕ ಬರೆದೆವು. ಅದು ಆತನ ಬದುಕನ್ನು ಕಟ್ಟಿಕೊಡುವ ನಾಟಕ.

ದಕ್ಷಿಣ ಏಷ್ಯಾದ ಜನ ಪ್ರೀತಿಯಿಂದ ಬುಲ್ಲಾ ಎಂದು ಕರೆಯುವ ಈ ಸೂಫಿಸಂತ ತನ್ನ ಕಾಲದ ಅಧಿಕಾರಸ್ಥರನ್ನ ಮತ್ತು ಸಾಮ್ರಾಟರನ್ನ ತನ್ನ ಕವನಗಳು ಮತ್ತು ಹಾಡುಗಳ ಮೂಲಕವೇ ಎದುರಿಸಿದ್ದ. ಈ ಸಂತನ ಹಿಂಬಾಲಕರೂ ಸಹ ಜನರ ಭಾಷೆಯಲ್ಲಿಯೇ ಸಮಾಜದ ಸಂಕಷ್ಟಗಳನ್ನು ಆತಂಕಗಳನ್ನು ಹಾಡಾಗಿಸಿದ್ದರು. ಸಂಗೀತ – ನೃತ್ಯಗಳನ್ನು ಮನುಷ್ಯ ಮತ್ತು ದೇವರ ನಡುವಿನ ಸೇತುವೆಯಾಗಿ ಬಳಸಿಕೊಂಡು, ಶೋಷಕ ಮಧ್ಯವರ್ತಿಗಳ ವಿರುದ್ಧ ಕಟುವಾದ ಮಾತುಗಳನ್ನಾಡಿದ್ದರು. ಲಿಂಗ ಮತ್ತು ವರ್ಗ ತಾರತಮ್ಯವನ್ನು ವಿರೋಧಿಸಿದ್ದರು. `ಈ ಜಗತ್ತೇ ದೇವರ ಸೃಷ್ಟಿ, ಇಲ್ಲಿ ಯಾವುದೇ ಬೇಧಗಳಿಲ್ಲ’ ಎಂದಿದ್ದರು. ಇಂಥಾ ವಿವರಗಳಿದ್ದ ಬುಲ್ಲೇಷಾನ ಬದುಕನ್ನುಳ್ಳ “ಬುಲ್ಲಾ” ನಾಟಕದ ಮೊದಲ ಪ್ರದರ್ಶನಕ್ಕೆ ಲಾಹೋರಿನ ಆರ್ಟ್ ಕೌನ್ಸಿಲ್ ಪರವಾನಗಿ ಕೊಡಲಿಲ್ಲ. ಆದರೆ ಗೋಥೆ ಸಂಸ್ಥೆಯಲ್ಲಿ ಈ ನಾಟಕದ ಮೊದಲ ಪ್ರದರ್ಶನ ಆಯಿತು. ನಾಟಕವನ್ನು ನೋಡಿದ ಜನರು, ಈ ಕವಿಯ ಕತೆಯ ಮೂಲಕವೇ ತಮ್ಮ ಸಮಕಾಲೀನ ಬದುಕಿಗೆ ಇರುವ ಸಮಾನ ಅಂಶಗಳನ್ನು ಕಂಡುಕೊAಡರು.

೨೦೦೧ರ ಆ ದಿನ ಒಂದು ಹೊಸ ರಂಗಭೂಮಿಯು ಹುಟ್ಟಿತು. ಖವ್ವಾಲಿ (*^೫) ಸಂಗೀತ, ಸೂಫಿ ಧಮಾಲ್ (*^೬) ನೃತ್ಯಗಳ ಜೊತೆಗೆ, ನೋಡುಗರಲ್ಲಿ ಹೊಸ ಸ್ಪೂರ್ತಿ ಹುಟ್ಟಿಸುವ ಕವನಗಳ ಓದು, ಧ್ಯಾನಕ್ಕೆ ಹಚ್ಚುವ ಜಿ಼ಕರ್ (*^೭) ಪಠಣ ಇವೆಲ್ಲವೂ ಈ ಹೊಸ ರಂಗಭೂಮಿಯ ಭಾಗವಾಗಿದ್ದವು. ಪಂಜಾಬಿ ಮೇಳಕ್ಕೆಂದು ಬಂದಿದ್ದ ಸಿಖ್ಖರ (*^೮) ಗುಂಪೊಂದು ನಮ್ಮ ನಾಟಕ ನೋಡಿತು. ನಾಟಕದ ಅಂತ್ಯದಲ್ಲಿ ಈ ಸಿಖ್ಖರ ಗುಂಪು ವೇದಿಕೆಗೆ ಹತ್ತಿ ಕಲಾವಿದರನ್ನು ಅಪ್ಪಿ ಹಿಡಿದು ಅಳತೊಡಗಿತು. ೧೯೪೭ರಲ್ಲಿ ಆದ ದೇಶ ವಿಭಜನೆಯ (*^೯) ನಂತರ ಆ ಸಿಖ್ಖರು ಮೊದಲ ಬಾರಿಗೆ ಪಂಜಾಬಿ ಮುಸ್ಲಿಮರ ಜೊತೆಗೆ ವೇದಿಕೆ ಹಂಚಿಕೊಂಡಿದ್ದರು. ಪಂಜಾಬ್ ವಿಭಜನೆಯು ಧರ್ಮಾಧಾರಿತವಾಗಿ ಆಗಿತ್ತು. ಆದರೆ ಬುಲ್ಲೇಷಾ ಪಂಜಾಬಿನ ಮುಸ್ಲಿಮರಿಗೆ ಮಾತ್ರವಲ್ಲ ಸಿಖ್ಖರಿಗೂ ಅತ್ಯಂತ ಪ್ರಿಯವಾದವನಾಗಿದ್ದ. ಆತನ ಸೂಫಿ ಸಿದ್ಧಾಂತವು ಎಲ್ಲಾ ಧಾರ್ಮಿಕ ಒಡಕುಗಳನ್ನು ಮೀರಿ ಜೀವಿಸಿತ್ತು.

ನಮ್ಮ ಮೊದಲ ಪ್ರದರ್ಶನದ ನಂತರ ಬುಲ್ಲೇಷಾನ ಕುರಿತಂತೆ ಇದ್ದ ಭಾರತೀಯ ಭಾಗದ ಕತೆಯನ್ನೂ ಸೇರಿಸಿದೆವು. ಭಾರತೀಯ ಪಂಜಾಬಿನ ಉದ್ದಗಲಕ್ಕೂ ಈ ನಾಟಕದ ಪ್ರದರ್ಶನಗಳಾದವು. ನಂತರ ಭಾರತದ ಉದ್ದಗಲಕ್ಕೂ “ಬುಲ್ಲಾ” ವೇದಿಕೆಯನ್ನೇರಿದ. ಎರಡು ನೆರೆಹೊರೆಯ ದೇಶಗಳ ನಡುವೆ ಅತ್ಯಂತ ತೀವ್ರ ರಾಜಕೀಯ ಬಿಕ್ಕಟ್ಟು ಇದ್ದ ಕಾಲದಲ್ಲಿ ಬುಲ್ಲಾನ ಬಗ್ಗೆ ಏನೂ ಅರಿಯದ ನೋಡುಗರೂ ಸಹ ಈ ನಾಟಕದ ಪ್ರತೀ ಕ್ಷಣವನ್ನೂ ಮೆಚ್ಚಿಕೊಂಡರು. ಎರಡು ದೇಶಗಳ ನಡುವಣ ಮಾತುಕತೆಯ ಬಾಗಿಲು ಮುಚ್ಚಿಕೊಳ್ಳಲು ಆರಂಭಿಸಿದಾಗ ಸಾಮಾನ್ಯ ಜನರ ಮನಸ್ಸಿನ ಬಾಗಿಲುಗಳನ್ನು ‘ಬುಲ್ಲಾ’ ನಾಟಕ ತೆರೆಯಲು ಆರಂಭಿಸಿತ್ತು.

೨೦೦೪ರಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ ‘ಅಜೋಕ ಥಿಯೇಟರ್’ ಪ್ರವಾಸ ನಡೆಯುತ್ತಿದ್ದ ಕಾಲದಲ್ಲಿ ಸಾವಿರಾರು ಜನ ಈ ನಾಟಕವನ್ನು ನೋಡಿದ್ದರು. ಅಂತಹ `ಬುಲ್ಲಾ’ ನಾಟಕ ಪ್ರದರ್ಶನದ ಒಂದು ದಿನ ಒಬ್ಬ ಮುದುಕ ನೊಬ್ಬ ಬಾಲಕನ ಜೊತೆಗೆ ಬುಲ್ಲಾ ಪಾತ್ರಧಾರಿಯ ಬಳಿಗೆ ಬಂದ. “ನನ್ನ ಮೊಮ್ಮಗನ ಆರೋಗ್ಯ ಸರಿಯಿಲ್ಲ. ನೀನು ಅವನಿಗೆ ಆಶೀರ್ವದಿಸು” ಎಂದು ಕೇಳಿದ. ಆ ಬುಲ್ಲಾ ಪಾತ್ರಧಾರಿಯು, “ಬಾಬಾಜಿ (*^೧೦), ನಾನು ಬುಲ್ಲೇಷಾ ಅಲ್ಲ, ಕೇವಲ ಆ ಪಾತ್ರವನ್ನು ಅಭಿನಯಿಸುವ ನಟ” ಎಂದ. ಆ ವೃದ್ಧ, ಪಾತ್ರಧಾರಿಯ ಕಾಲಿಗೆ ಬಿದ್ದು ಅಳಲಾರಂಭಿಸಿದ, “ದಯಮಾಡಿ ನನ್ನ ಮೊಮ್ಮಗನಿಗೆ ಆಶೀರ್ವದಿಸು. ನೀನು ಹಾರೈಸಿದರೆ ಅವನು ಗುಣವಾಗುತ್ತಾನೆ” ಎಂದು ಗೋಗರೆದ. ನಮ್ಮ ತಂಡದ ನಟನಿಗೆ ಆ ವೃದ್ಧನ ಆಸೆಯನ್ನು ಪೂರೈಸುವಂತೆ ನಾವೆಲ್ಲರೂ ಹೇಳಿದೆವು. ಆ ನಟ ತನ್ನ ಕೈಯಿಗೆ ಮುತ್ತನ್ನಿತ್ತು ಆ ಪುಟ್ಟ ಬಾಲಕನ ದಿಕ್ಕಲ್ಲಿ ಆ ಕೈಯನ್ನು ಹಾರಿಸಿದ, ಹಾರೈಸಿದ. ವೃದ್ಧ ಸಂತೃಪ್ತನಾಗಿ ಹೊರಡುವ ಮುನ್ನ, “ಮಗು, ನೀನು ಕೇವಲ ನಟನಲ್ಲ. ನೀನು ಬುಲ್ಲೇಷಾನ ಅವತಾರ (*^೧೧)” ಎಂದ. ಆ ಕ್ಷಣದಲ್ಲಿ ನಮ್ಮ ರಂಗ ಸಾಧ್ಯತೆಗೆ ಹೊಸ ಕಲ್ಪನೆಯೊಂದು ಸೇರಿಕೊಂಡಿತು. ಪಾತ್ರವನ್ನು ಅಭಿನಯಿಸುವ ಕಲಾವಿದ ಸ್ವತಃ ಆ ಪಾತ್ರದ ಅವತಾರ ಎಂಬಂತೆ ಪಾತ್ರವನ್ನು ರೂಢಿಸುವ ಕಲ್ಪನೆ ಅದು.

“ಬುಲ್ಲಾ” ನಾಟಕದ ೧೮ ವರ್ಷಗಳ ಪಯಣದಲ್ಲಿ ಇಂತಹ ಹಲವು ಬಗೆಯ ಪ್ರತಿಕ್ರಿಯೆಗಳನ್ನು ಪಡೆದಿದ್ದೇವೆ. ನೋಡುಗರಿಗೆ ಈ ನಾಟಕವು ಕೇವಲ ಮನರಂಜನೆಯೋ ಬುದ್ಧಿಗೆ ಕಸರತ್ತು ಕೊಡುವ ಜಾಣ್ಮೆಯ ವಿಷಯವೋ ಅಲ್ಲ, ಬದಲಿಗೆ ಮನಸ್ಸನ್ನು ಅರಳಿಸುವ ಹೂರಣವಾಗಿದೆ. ಬುಲ್ಲಾನ ಪಾತ್ರ ಮಾಡುತ್ತಿದ್ದ ಕಲಾವಿದನಂತೂ ಅದೆಷ್ಟು ಆ ಪ್ರಭಾವಕ್ಕೆ ಒಳಗಾಗಿದ್ದನೆಂದರೆ ಸ್ವತಃ ಸೂಫಿ ಕವಿಯಾಗಿ ಎರಡು ಸೂಫಿ ಕಾವ್ಯ ಸಂಕಲನಗಳನ್ನು ಪ್ರಕಟಿಸಿದ್ದಾನೆ. ನಮ್ಮ ತಂಡದ ಎಲ್ಲಾ ಪಾತ್ರಧಾರಿಗಳೂ ಈ ನಾಟಕವು ಹೇಗೆ ತಮ್ಮ ಚೇತನವನ್ನು ಹೆಚ್ಚಿಸುತ್ತದೆ ಎಂದು, ಬುಲ್ಲೇಷಾ ತಮ್ಮ ಜೊತೆಗೆ ಇಂದಿಗೂ ಇದ್ದಾನೆ ಎಂಬ ಭಾವನೆ ಹುಟ್ಟಿಸುತ್ತದೆ ಎಂದು, ಆ ಮೂಲಕ ಹೇಗೆ ಪ್ರದರ್ಶನದ ಗುಟಮಟ್ಟ ಪ್ರದರ್ಶನದಿಂದ ಪ್ರದರ್ಶನಕ್ಕೆ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ. ಒಬ್ಬ ಭಾರತೀಯ ರಂಗವಿಮರ್ಶಕರಂತೂ ಈ ನಾಟಕವನ್ನು ನೋಡಿ, “ರಂಗಭೂಮಿಯೇ ದೇವಾಲಯವಾಗಿದೆ” ಎಂದಿದ್ದಾರೆ.

ನಾನೊಬ್ಬ ಧರ್ಮನಿರಪೇಕ್ಷ ಜಾತ್ಯಾತೀತ ವ್ಯಕ್ತಿ. ನನಗೆ ಈ ಸೂಫಿ ತತ್ವ ಹಾಗೂ ಕವಿಯ ಜೊತೆಗಿನ ಸಂಬಂಧ ಕೇವಲ ಸಾಂಸ್ಕೃತಿಕವಾದದ್ದು, ಈ ಕವಿಯ ಜೀವನವನ್ನು ರಂಗದ ಮೇಲೆ ತರುವಷ್ಟಕ್ಕೆ ಮಾತ್ರವೇ ಆಗಿತ್ತು. ಆದರೆ ನೋಡುಗರ ನಡುವೆ ಇರಬಹುದಾದ ಆತಂಕವಾದಿಗಳು, ಉಗ್ರಗಾಮಿಗಳು, ಕೋಮುವಾದಿಗಳು, ಧರ್ಮಾಂಧರುಗಳು ಹಾಗೂ ಸಾಮಾನ್ಯ ಜನರನ್ನೊಳಗೊಂಡ ಸಮಾಜದ ನಡುವೆ ಸೇತುವೆಯೊಂದನ್ನು ಈ ನಾಟಕ ಸ್ವತಃ ಸೃಷ್ಟಿಸುತ್ತಿದೆ. ಭೂತ ಹಾಗೂ ಭವಿಷ್ಯಗಳ ನಡುವೆ ಸೇತುವೆಯನ್ನು ಸೃಷ್ಟಿಸಿ ನಮ್ಮ ನಾಳೆಯ ಕಡೆಗೆ ಸಾಗುವುದು, ಆಸ್ತಿಕರು – ನಾಸ್ತಿಕರು ಅಥವಾ ನಾಟಕ ಪ್ರದರ್ಶನದಲ್ಲಿ ತನ್ನ ಮೊಮ್ಮಗನಿಗೆ ಹಾರೈಕೆ ಬೇಡಿದ ಆ ವೃದ್ಧನ ಹಾಗೆ ಇರುವ ಜನರ ನಡುವೆ ಕೊಂಡಿಯಾಗುವುದೇ ರಂಗಭೂಮಿಯ ಗೆಲುವು.

ನಾನು ಬುಲ್ಲೇಹ್ ಷಾನ ವಿವರಗಳನ್ನು ಹಾಗೂ ಆ ನಾಟಕವನ್ನು ವೇದಿಕೆಗೆ ತಂದ ವಿವರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಕಾರಣವಿದೆ. ನಾವು ಅನೇಕ ಸಲ ರಂಗಸಿದ್ಧಾಂತಗಳ ಭ್ರಮೆಯಲ್ಲಿ ಕಳೆದುಹೋಗಿ, ಇದೇ ಸಮಾಜದ ಒಂದು ಬೃಹತ್ ವರ್ಗವನ್ನು ಮುಟ್ಟುವ ಪ್ರಯತ್ನವನ್ನೇ ಮಾಡುವುದಿಲ್ಲ. ನಮ್ಮದೇ ಸವಾಲುಗಳಿಗೆ ಉತ್ತರಿಸುವ ಅವಸರದಲ್ಲಿ ಮೈ ಮರೆಯದೆ, ಸಮಾಜದ ಎಲ್ಲಾ ವರ್ಗಗಳ ಜನರನ್ನು ತಲುಪಿದಾಗ ಮಾತ್ರ ರಂಗಕರ್ಮಿಗೆ ಸಿಗುವ ಚಿದಾನಂದ ಸ್ಥಿತಿಯನ್ನು ಮುಟ್ಟಬಹುದು. ಧರ್ಮಾಂಧತೆಯಿಂದಾಗಿ ಜಾತಿ-ಜಾತಿಗಳ ನಡುವಣ ದ್ವೇಷ ಮತ್ತು ಹಿಂಸೆಗಳು ಹೆಚ್ಚುತ್ತಿರುವ ಕಾಲದಲ್ಲಿ, ದೇಶಗಳ ವಿರುದ್ಧ ದೇಶಗಳು ಕತ್ತಿ ಮಸೆಯುತ್ತಿರುವ ಹೊತ್ತಲ್ಲಿ, ವಿಭಿನ್ನ ನಂಬಿಕೆಯವರ ನಡುವೆ ಯುದ್ಧಗಳಾಗುತ್ತಿರುವ ಕಾಲದಲ್ಲಿ, ಮಕ್ಕಳು ಅಪೌಷ್ಟಿಕತೆಯಿಂದ ಸಾಯುತ್ತಿರುವ ಹೊತ್ತಲ್ಲಿ, ಹೆರಿಗೆಯ ಸಮಯದಲ್ಲಿ ಸರಿಯಾದ ವೈದ್ಯಕೀಯ ಸಹಾಯ ಸಿಗದೆ ಮಹಿಳೆಯರು ಪ್ರಾಣ ಕೊಡುತ್ತಿರುವ ಹೊತ್ತಲ್ಲಿ, ದ್ವೇಷದ ವಿಷವು ಇಡೀ ಸಮಾಜವನ್ನು ಇಡಿಕಿರಿದಿರುವ ಕಾಲದಲ್ಲಿ ನಮ್ಮ ರಂಗಕರ್ಮಿಗಳು ಎಚ್ಚೆತ್ತುಕೊಳ್ಳಬೇಕಿದೆ. ಇಡಿಯ ಜಗತ್ತು ಹವಾಮಾನ ಬದಲಾವಣೆಯ ವೈಪರೀತ್ಯಗಳನ್ನು ಎದುರಿಸುತ್ತಿರುವಾಗ, ಅಪೋಕಲಿಪ್ಸ್ ನ (*^೧೨) ನಾಲ್ಕು ಕುದುರೆ ಸವಾರರ ಖರಪುಟದ ಸದ್ದು ಕಿವಿಗೆ ಹತ್ತಿರವಾಗುತ್ತಿರುವಾಗ ರಂಗಭೂಮಿಯು ಹೊಸ ಶಕ್ತಿ ಸಂಚಯನ ಪಡೆದುಕೊಳ್ಳಬೇಕಿದೆ.

ಬದುಕಿನ ಬಗ್ಗೆಯೇ ನಿರಾಸಕ್ತಿ ಹೊಂದಿರುವವರನ್ನ, ಸೋಮಾರಿ ಆಗಿರುವವರನ್ನ, ದುರಾಸೆಯಲ್ಲಿ ಮುಳುಗಿರುವವರನ್ನ, ಪ್ರೀತಿ ಕಳಕೊಂಡವರನ್ನ ಮರಳಿ ಈ ಜಗತ್ತಿನತ್ತ ಹೊರಳಿಸಲು ರಂಗಭೂಮಿ ಸಿದ್ಧವಾಗಬೇಕಿದೆ. ಜನರನ್ನು ಒಗ್ಗೂಡಿಸುವ, ಜನರನ್ನು ಅವರಿಸಿರುವ ಕಂದಕದಿಂದ ಮೇಲೆತ್ತುವ, ಜನರನ್ನು ಮರಳಿ ಮಾನವೀಯತೆಗೆ ಎಳೆದು ತರುವ ಮಹತ್ರವದ ಪಾತ್ರವಿದೆ ರಂಗಭೂಮಿಗೆ. ಇಂತಹ ಕೆಲಸಗಳ ಮೂಲಕ ನಾವು ಅಭಿನಯಿಸುವ ವೇದಿಕೆಯನ್ನೇ ನಾವು ದೇಗುಲವನ್ನಾಗಿಸಬೇಕಿದೆ.

ದಕ್ಷಿಣ ಏಷಿಯಾದ ಕಲಾವಿದರು ಯಾವುದೇ ವೇದಿಕೆ ಏರುವ ಮುನ್ನ ಆ ನೆಲವನ್ನು ಅತ್ಯಂತ ಗೌರವದಿಂದ ನಮಸ್ಕರಿಸುವ ಅಭ್ಯಾಸವಿದೆ. ಇದು ಪುರಾತನ ಕಾಲದಿಂದ ಪರಂಪರೆಯು ಉಳಿಸಿಕೊಂಡು ಬಂದಿರುವ ಸಾಂಸ್ಕೃತಿಕ ಕೊಂಡಿ. ಕಲಾವಿದ ಮತ್ತು ನೋಡುಗರ ನಡುವಿನ ಸಹಜೀವನದ ಸಂಬಂಧಗಳನ್ನು ಇಂತಹ ಪರಂಪರೆಯ ಕೊಂಡಿಗಳ ಮೂಲಕವೇ ಪುನರುಜ್ಜೀವನಗೊಳಿಸಿ, ನಮ್ಮ ಭೂತ ಮತ್ತು ಭವಿಷ್ಯಗಳನ್ನು ನವೀಕರಿಸಬೇಕಾಗಿದೆ. ರಂಗ ಪ್ರಕ್ರಿಯೆಯನ್ನು ಪವಿತ್ರವಾಗಿಸಲು ಪಾತ್ರಧಾರಿಗಳು ತಾವು ಅಭಿನಯಿಸುವ ಪಾತ್ರದ ಅವತಾರ ಎಂಬ ಎತ್ತರಕ್ಕೆ ನಟನೆಯನ್ನು ಏರಿಸಿಕೊಳ್ಳಬೇಕಿದೆ. ನಟನೆ ಎಂಬುದು ರಂಗಭೂಮಿಯನ್ನು ಖಂಡಿತವಾಗಿ ಆಧ್ಯಾತ್ಮದ ಪವಿತ್ರ ಎತ್ತರಕ್ಕೆ ಏರಿಸಬಲ್ಲದು. ರಂಗಭೂಮಿ ಸ್ವತಃ ಜನರನ್ನು ಒಗ್ಗೂಡಿಸುವ ರಂಗಕಲಾವಿದರೇ ಸೃಷ್ಟಿಸಿದ ದೇಗುಲ ಆಗಬಹುದು.

ಅರ್ಥ 

[^೧. ಮದೀಹ ಗೌಹರ್ (೧೯೫೬-೨೦೧೮): ರಂಗನಿರ್ದೇಶಕಿ, ನಟಿ, ಸ್ತ್ರೀವಾದಿ ಮತ್ತು ಅಜೋಕ ಥಿಯೇಟರ್ ತಂಡದ ಸಂಸ್ಥಾಪಕಿ. ಲಂಡನ್ನಿನ ಹಾಲ್‌ವೇ ಕಾಲೇಜಿನಲ್ಲಿ ರಂಗಭೂಮಿ ಕುರಿತು ಸ್ನಾತಕೋತ್ತರ ಪದವಿ ಪಡೆದವರು. ಪಾಕಿಸ್ತಾನೀ ಸರ್ಕಾರದಿಂದ ವಿಶೇಷ ಸೇವೆಗೆ ಗೌರವ ಪದಕ ಹಾಗೂ ನೆದರ್‌ಲ್ಯಾಂಡ್ಸ್ ದೇಶದ ಪ್ರಿನ್ಸ್ ಕ್ಲಾಸ್ ಪ್ರಶಸ್ತಿ ದೊರೆತಿದೆ.]

[*^೨. ಅಜೋಕ ಥಿಯೇಟರ್ : ೧೯೮೪ರಲ್ಲಿ ಸ್ಥಾಪಿತವಾದದ್ದು. ಅಜೋಕ ಎಂದರೆ ಪಂಜಾಬಿ ಭಾಷೆಯಲ್ಲಿ “ಸಮಕಾಲೀನ” ಎಂದು ಅರ್ಥ. ಈ ತಂಡದ ನಾಟಕಗಳಲ್ಲಿ ಕೋಮು ಸೌಹಾರ್ದ, ಶಾಂತಿ, ಮಹಿಳೆಯರ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸುವುದು ಮತ್ತು ಮಾನವ ಹಕ್ಕುಗಳನ್ನ ಕುರಿತ ವಸ್ತುಗಳು ಪ್ರಧಾನವಾಗಿ ಇರುತ್ತವೆ.]

[(*^೩) ಸೂಫಿ ತತ್ವ – ಇಸ್ಲಾಮಿನ ಒಂದು ಮಿಥಿಕ ಸಂಪ್ರದಾಯ. ಆ ತತ್ವವು ಸತ್ಯದ ಹುಡುಕಾಟಕ್ಕೆ ದಿವ್ಯ ಪ್ರೇಮದ ಮೂಲಕ ದೇವರನ್ನು ಹುಡುಕು ಎನ್ನುತ್ತದೆ. ಜಾಗತಿಕ ಸೋದರತ್ವನ್ನು ಬೋಧಿಸುತ್ತಾ, ಕಟು ಮತ್ತು ಕರ್ಮಠ ಧಾರ್ಮಿಕ ಕಟ್ಟುಪಾಡುಗಳನ್ನು ವಿರೋಧಿಸುತ್ತದೆ. ಸೂಫಿ ಕವನಗಳು ಸಂಗೀತದ ಮೂಲಕವೇ ಪ್ರೇಮವು ನಾಸ್ತಿಕವೂ ಆಗಬಹುದು ಎಂಬ ರೂಪಕವನ್ನು ಬಿಚ್ಚಿಡುತ್ತದೆ.]

(*^೪) ಬುಲ್ಲೇಹ್ ಷಾ – (೧೬೮೦-೧೭೫೭) ಜನಪ್ರಿಯ ಪಂಜಾಬಿ ಸೂಫಿ ಕವಿ. ಆತ ತತ್ವಶಾಸ್ತ್ರದ ಸಂಕೀರ್ಣ ವಿಷಯಗಳನ್ನು ಸರಳ ಭಾಷೆಯಲ್ಲಿ ಕಟ್ಟಿದ. ಧಾರ್ಮಿಕ ಮಧ್ಯವರ್ತಿಗಳ ಮತ್ತು ಆಡಳಿತ ವರ್ಗದ ಕಟ್ಟುಪಾಡುಗಳನ್ನು ಕಟುವಾಗಿ ಟೀಕಿಸುತ್ತಿದ್ದ. ಕಸೂರ್ ನಗರದ ಆಡಳಿತಶಾಹಿಯು ಈತನ ನಿಲುವನ್ನು ಖಂಡಿಸಿ ಈತನನ್ನು ಮಣ್ಣು ಮಾಡಲು ಜಾಗ ನೀಡಲಿಲ್ಲ. ಜನಪದ ಗಾಯಕರು ಈ ಕವಿಯನ್ನು ಮತ್ತಷ್ಟು ಜನಪ್ರಿಯಗೊಳಿಸಿದರು. ಎಲ್ಲ ಧರ್ಮದವರು ಈ ಕವಿಯನ್ನು ಮೆಚ್ಚುತ್ತಾರೆ.]

[(*^೫) ಖವ್ವಾಲಿ – ಸೂಫಿ ಭಕ್ತಿ ಸಾಹಿತ್ಯದ ಕವನಗಳನ್ನು ಗುಂಪು ಗಾಯನದ ಮೂಲಕ ಪ್ರಸ್ತುತ ಪಡಿಸುವ ಸಂಗೀತ. ಆರಂಭದಲ್ಲಿ ಸೂಫಿ ಸಂತರ ದೇವಾಲಯಗಳಲ್ಲಿ ಮಾತ್ರ ಇದನ್ನು ಹಾಡಲಾಗುತ್ತಿತ್ತು. ಈ ಹಾಡು ಕೇಳಿದ ಜನ ಮೈಮರೆತು ಕುಣಿಯುತ್ತಿದ್ದರು.

(*^೬) ದಮ್ಮಾಲ್ – ಚರ್ಮವಾದ್ಯದ ತಾಳಕ್ಕೆ ಮೈ ಮರೆತು ಕುಣಿಯುವುದು. ಇದು ಸಾಮಾನ್ಯವಾಗಿ ಸೂಫಿ ದೇವಾಲಯಗಳಲ್ಲಿ ನಡೆಯುವಂತಹದು.

(*^೭) ಜಿ಼ಕ್ರ್ – ತಾಳಕ್ಕೆ ತಕ್ಕಂತೆ ಭಕ್ತಿ ಪ್ರಧಾನವಾದ ಪ್ರಾರ್ಥನೆಗಳನ್ನು ಹೇಳುವ ಮೂಲಕ ದಿವ್ಯಜ್ಞಾನ ಪಡೆಯುವ ಪ್ರಯತ್ನ

(*^೮) ಸಿಖ್ಖ್ – ಪಂಜಾಬ್ ಪ್ರಾಂತ್ಯದಲ್ಲಿ ೧೫ನೇ ಶತಮಾನದಲ್ಲಿ ಇದ್ದ ಗುರು ನಾನಕ್‌ರ ಹಿಂಬಾಲಕರು ಮತ್ತು ಅವರ ಪಂಥವಾಗಿದ್ದ ಸಿಖ್ ಧರ್ಮವನ್ನು ಪಾಲಿಸುವವರು.

(*^೯) ಪಾಕಿಸ್ತಾನ ಎಂಬ ಮುಸ್ಲಿಮ್ ದೇಶವನ್ನು ೧೯೪೭ರಲ್ಲಿ ಭಾರತವನ್ನು ವಿಭಜಿಸಿ ಸೃಷ್ಟಿಸಲಾಯಿತು. ಇದರಿಂದಾಗಿ ಹಿಂದೆಂದೂ ಕಂಡುಕೇಳರಿಯದ ಸಾವು ನೋವುಗಳಾದವು ಹಾಗೂ ಬೃಹತ್ ಸಂಖ್ಯೆಯಲ್ಲಿ ಜನರು ವಲಸೆ ಹೋಗುವಂತಾಯಿತು.]

[(*^೧೦) ಬಾಬಾಜಿ – ಹಿರಿಯರನ್ನು ಗೌರವದಿಂದ ಕರೆಯುವ ಕ್ರಮ

(*^೧೧) ಅವತಾರ – ಹಿಂದೂ ಪುರಾಣಗಳ ಪ್ರಕಾರ ದೇವರು ಕಾಲಾಂತರದಲ್ಲಿ ಒಳಿತು ಸಾಧಿಸಲು ಮತ್ತೆ ಮತ್ತೆ ಬರುತ್ತಾನೆ. ಹೀಗೆ ಆತ ಪ್ರತಿ ಭಾರಿ ಬಂದುದನ್ನು ಅವತಾರ ಎಂದು ಕರೆಯಲಾಗುತ್ತದೆ.]

[(*^೧೨) ಅಪೋಕಾಲಿಪ್ಸ್ ನ ನಾಲ್ಕು ಕುದುರೆ ಸವಾರರು – ಲಾಸ್ಟ್ ಟೆಸ್ಟಮೆಂಟ್‌ನ ಕಡೆಯ ಭಾಗವಾದ ಬುಕ್ ಆಫ್ ರಿವಿಲೇಷನ್ಸ್ ನಲ್ಲಿ ಪಾಟ್‌ಮೋಸ್‌ನ ಜಾನ್ ವಿವರಿಸುವಂತೆ ಈ ನಾಲ್ಕು ಕುದುರೆ ಸವಾರರು ಧಾಳಿ, ಯುದ್ಧ, ಬರ ಮತ್ತು ಸಾವುಗಳ ಸಂಕೇತ ಎಂಬ ಕ್ರಮದಲ್ಲಿ ಬರುತ್ತಾರೆ.]

 

‍ಲೇಖಕರು avadhi

March 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಚಂದ್ರಪ್ರಭ ಕಠಾರಿ

    ಲೇಖನ ಮಾಹಿತಿ ಪೂರ್ಣವಾಗಿದೆ. ಅಜೋಕ ಥಿಯೇಟರ್ ನ ಹುಟ್ಟು, ಅದರ ನಡೆದು ಬಂದ ಹಾದಿ ಕರ್ಮಠ ಧಾರ್ಮಿಕ ದೇಶದಲ್ಲಿ ವಿಸ್ಮಯವಾಗಿ ಕಾಣುತ್ತದೆ. ಹಾಗೆ ಸಂತ ಬುಲ್ಲೇಹ್ ಷಾನ ಪರಿಚಯ ಮನನೀಯವಾದುದು. ಪೂರ್ಣ ಪಾಠವನ್ನು ಓದಿ ಮುಗಿಸಿದಾಗ ಶಾಹೀದ್ ನದೀಮ್, ಮದೀಹ ಗೌಹರ್ ಪ್ರಯತ್ನದಂತೆ ನಮ್ಮ ದೇಶದಲ್ಲೂ ರಂಗವನ್ನು ದೇಗುಲವಾಗಿಸುವ ಅಗತ್ಯತೆ ಇಂದಿಗೆ ಹೆಚ್ಚು ಕಾಣುತ್ತದೆ. ಅರ್ಥಪೂರ್ಣ ಲೇಖನವನ್ನು ಅನುವಾದ ಮಾಡಿದ್ದಕ್ಕಾಗಿ ಮತ್ತು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: