ವಿವೇಕ ರೈ ಅವರ ಹೊಸ ಕೃತಿ ಬಂದಿದೆ..

‘ಸ್ಲಾವೊಮೀರ್ ಮ್ರೋಜೆಕ್ ನ  ಕತೆಗಳು’ ಪ್ರೊ ವಿವೇಕ ರೈ ಅವರ ಹೊಸ ಕೃತಿ. ಪೊಲಿಶ್ ಲೇಖಕ ಸ್ಲಾವೊಮೀರ್ ಮ್ರೋಜೆಕ್ ನ ೨೨ ಕತೆಗಳ ಸಂಕಲನ ಇದು.

ಈ ಕೃತಿಗೆ ವಿವೇಕ ರೈ ಅವರು ಬರೆದಿರುವ ಮಾತು ಹಾಗೂ ಅನುವಾದಿಸಿದ ಒಂದು ಕತೆ ‘ಅವಧಿ’ ಓದುಗರಿಗಾಗಿ ಇಲ್ಲಿದೆ-

ಡಾ ಬಿ ಎ ವಿವೇಕ ರೈ

‘ಸ್ಲಾವೊಮೀರ್ ಮ್ರೋಜೆಕ್ ನ  ಕತೆಗಳು’ – ಪೋಲಿಷ್ ಲೇಖಕ ಸ್ಲಾವೊಮೀರ್ ಮ್ರೋಜೆಕ್ ನ ೨೨ ಕತೆಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಇಲ್ಲಿ ಕೊಟ್ಟಿದ್ದೇನೆ. ನಾನು ಕಳೆದ ವರ್ಷ ( ೨೦೧೯) ಮೇ-ಜೂನ್ ನಲ್ಲಿ ಪೋಲಂಡ್ ನಲ್ಲಿ ಇದ್ದಾಗ ಕ್ರಾಕೊವ್ ನ ವಿಶ್ವವಿದ್ಯಾಲಯದಲ್ಲಿ ಪಂಪ ಭಾರತದ ಬಗ್ಗೆ ಉಪನ್ಯಾಸ ಕೊಡಲು ಹೋದಾಗ ಅಲ್ಲಿನ ಪುಸ್ತಕದ ಅಂಗಡಿಯಲ್ಲಿ ಸಿಕ್ಕಿದ ಪುಸ್ತಕ ಸ್ಲಾವೊಮೀರ್ ಮ್ರೋಜೆಕ್ ನ ಕತೆಗಳ ಸಂಕಲನ ‘ದ ಎಲಿಫೆಂಟ್’. ಅದು ಆತನ ಮೂಲ ಪೋಲಿಷ್ ಕತೆಗಳ ಇಂಗ್ಲಿಷ್ ಅನುವಾದ.

ಆ ಸಂಕಲನದಿಂದ ಆಯ್ದ ೨೨ ಕತೆಗಳ ಕನ್ನಡ ಅನುವಾದ ಈ  ಪುಸ್ತಕದಲ್ಲಿ ಇದೆ. ನನ್ನ ಈ ಪೋಲಂಡ್ ಪ್ರವಾಸಕ್ಕೆ ಆಹ್ವಾನ ಕೊಟ್ಟು ತಮ್ಮ ಅಭಿಜಾತ ಸಾಹಿತ್ಯದ ಯೋಜನೆಯಲ್ಲಿ ನನ್ನನ್ನು ತೊಡಗಿಸಿಕೊಂಡು ಕ್ರೊಕೊವ್ ಗೆ ಕರೆದುಕೊಂಡು ಹೋದವರು ಪ್ರೊ. ಉಲ್ರಿಶ್ ತಿಮ್ ಕ್ರಾಗ್ ಮತ್ತು ಅವರ ಹೆಂಡತಿ ಸಂಶೋಧಕಿ ಕೇಟ್ ಕ್ರಾಗ್.

ನನ್ನ ಬದುಕಿನ ಒಂದು ಅನುಭವ ಮಂಟಪ ಎಂದು ನಾನು ಸದಾ ಪ್ರೀತಿಸುವ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಈ ಅನುವಾದ ಗ್ರಂಥ ಪ್ರಕಾಶನಗೊಳ್ಳುತ್ತಿರುವುದು ನನಗೆ ಅಭಿಮಾನದ ಸಂಗತಿ. ಇದಕ್ಕೆ ಕಾರಣಕರ್ತರಾದವರು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಸ.ಚಿ.ರಮೇಶ್ ಅವರು. ನಾನು ಅನುವಾದ ಮಾಡಿದ ಮೊದಲ ಮೂರು ಕತೆಗಳನ್ನು ಓದಿ ಮೆಚ್ಚಿಕೊಂಡು ಅವರು ಈ ಸಂಕಲನವನ್ನು ವಿಶ್ವವಿದ್ಯಾಲಯದ ಪ್ರಸಾರಾಂಗದ ಮೂಲಕವೇ ಪ್ರಕಟಮಾಡಿಸುತ್ತೇನೆ ಎಂಬ ಅಭಿಮಾನದ ಒತ್ತಾಸೆಯನ್ನು ಕೊಟ್ಟ ಕಾರಣ ಈ ಪುಸ್ತಕ ಇಷ್ಟು ಬೇಗನೆ ಅಚ್ಚುಕಟ್ಟಾಗಿ ಬೆಳಕು ಕಾಣುತ್ತಿದೆ.

ಕುಲಪತಿ ಪ್ರೊ.ಸ.ಚಿ.ರಮೇಶ್ ಅವರ ಪ್ರೀತಿ ವಿಶ್ವಾಸ ನನಗೆ ಸಂತೋಷ ಮತ್ತು ಸಂತೃಪ್ತಿಯನ್ನು ಕೊಟ್ಟಿದೆ. ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಎಸ್.ಡಿ.ಪ್ರಶಾಂತ್ ಅವರು ಬಹಳ ಅಕ್ಕರೆಯಿಂದ ಮತ್ತು ನನ್ನ ಬಗೆಗಿನ ಅಭಿಮಾನದಿಂದ ಈ ಪುಸ್ತಕವನ್ನು ಸುಂದರವಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ಮುದ್ರಿಸಿ ಉಪಕರಿಸಿದ್ದಾರೆ. ಆಡಳಿತಾತ್ಮಕವಾಗಿ ನೆರವಾದ ಕುಲಸಚಿವರಾದ ಪ್ರೊ.ಸುಬ್ಬಣ್ಣ ರೈ ಅವರಿಗೆ ವಂದನೆಗಳು. ಪ್ರಸಾರಾಂಗದ ಎಲ್ಲ ಆಪ್ತ ಸಿಬ್ಬಂದಿಯವರ ಸಹಕಾರವನ್ನು ವಿಶೇಷವಾಗಿ ನೆನೆಯುತ್ತೇನೆ .

ಇಲ್ಲಿನ ಮೂರು ಕತೆಗಳನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಿದ ಪ್ರಜಾವಾಣಿ (‘ಆನೆ , ಬಂತೊಂದಾನೆ’), ಸುಧಾ (‘ಮಕ್ಕಳು ಮಾಡಿದ ಹಿಮಮನುಷ್ಯ’) ಮತ್ತು ತುಷಾರ (‘ಫಾರೆಸ್ಟರ್ ನ ಪ್ರಣಯ’) ಪತ್ರಿಕೆಗಳ ಸಂಪಾದಕರಿಗೆ ಕೃತಜ್ಞತೆಗಳು. ಕಾಲ ಬದಲಾದರೂ ಪ್ರಭುತ್ವದ ಹಿಡಿತಗಳು ಅನ್ಯರೂಪಗಳಲ್ಲಿ ಜಗತ್ತಿನಾದ್ಯಂತ ಮತ್ತೆ ಗಟ್ಟಿಗೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಮ್ರೋಜೆಕ್ ಬರೆದ ಕತೆಗಳು ಅನ್ಯೋಕ್ತಿ ಮತ್ತು ಅಸಂಗತತೆಯ ಮೇರೆಗಳನ್ನು ಮೀರಿ ನಮ್ಮನ್ನು ಮತ್ತೆ ಮತ್ತೆ ಓದಲು ಒತ್ತಾಯ ಮಾಡುತ್ತವೆ.

ಸಿಂಹದ ರಾಜಕೀಯಪ್ರಜ್ಞೆ

ಚಕ್ರವರ್ತಿ ಸನ್ನೆಮಾಡಿದ. ಸುರಂಗದ ಪ್ರವೇಶದ್ವಾರವನ್ನು ಮುಚ್ಚಿಕೊಂಡಿದ್ದ ಕಬ್ಬಿಣದ ಚೌಕಟ್ಟು ಮೇಲಕ್ಕೆ ಸರಿಯಿತು. ಸುರಂಗದ ಕತ್ತಲೆಯಿಂದ ಹೊರಟ ಭಯಾನಕ ಗರ್ಜನೆಯ ಏರುಧ್ವನಿ ತಾರಕಕ್ಕೇರಿತು. ಅಂಗಣದ ನಡುವಿನಲ್ಲಿ ಇದ್ದ ಕ್ರಿಶ್ಚಿಯನ್ ಪಕ್ಷದವರ ಗುಂಪು ಆತಂಕದಿಂದ ಇನ್ನಷ್ಟು ಒತ್ತೊತ್ತಾಗಿ ಮಂದೆಯಂತೆ ಒಟ್ಟುಸೇರಿತು. ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತುಕೊಂಡು ನೋಡುತ್ತಿದ್ದರು. ಕಾತರದ ಚಟಪಟಗುಟ್ಟುವಿಕೆ, ಭಯಮಿಶ್ರಿತ ಆಕ್ರಂದನ, ಹಿಮಪಾತದ ಭೋರ್ಗರೆತದಂತೆ ಸಮೀಪಿಸುತ್ತಿರುವ ಗರ್ಜನೆ. ಸುರಂಗದೊಳಗಿನಿಂದ ರಭಸವಾಗಿ ಮುನ್ನುಗುತ್ತಾ ಮೌನವಾಗಿ ಹೆಜ್ಜೆಯಿಡುತ್ತಾ ಮೊದಲು ಹೊರಬಂದದ್ದು ಒಂದು ಸಿಂಹಿಣಿ. ಸರಿ, ಬೀಭತ್ಸ ಸಾರ್ವಜನಿಕ ಪ್ರದರ್ಶನ ಆರಂಭವಾಯಿತು.

ಸಿಂಹಪಾಲಕನಾದ ಗೇಅಸ್ ನು ಒಂದು ಉದ್ದವಾದ ಕೋಲನ್ನು ಹಿಡಿದುಕೊಂಡು, ಆ ಭಯಾನಕ ಮನೋರಂಜನೆಯಲ್ಲಿ ಪಾಲುಗೊಳ್ಳಲು ಎಲ್ಲಾ ಪ್ರಾಣಿಗಳು ಅಂಗಣಕ್ಕೆ ಹೋಗಿವೆಯೇ ಎಂದು ತಪಾಸಣೆ ಮಾಡುತ್ತಿದ್ದನು. ಇನ್ನೇನು ಅವನು ನೆಮ್ಮದಿಯ ನಿಟ್ಟುಸಿರು ಬಿಡಬೇಕು ಎನ್ನುವಷ್ಟರಲ್ಲಿ ಸುರಂಗದ ಪ್ರವೇಶ ದ್ವಾರದ ಬಳಿ ಒಳಗಡೆ ನಿಂತುಕೊಂಡು ಆರಾಮವಾಗಿ ಕ್ಯಾರೆಟ್ ಜಗಿಯುತ್ತಾ ನಿಂತಿದ್ದ ಸಿಂಹವೊಂದನ್ನು ಕಂಡನು. ‘ಥತ್, ಮುಂಡೇದು’ ಗೇಅಸ್ ನ ಉದ್ಗಾರ.

ಯಾವುದೇ ಪ್ರಾಣಿಯು ಸೋಮಾರಿಯಾಗಿ ಇರಲು ಬಿಡಬಾರದು ಎನ್ನುವುದು ಅವನ ಕರ್ತವ್ಯಗಳಲ್ಲಿ ಮುಖ್ಯವಾದುದು. ಸ್ವರಕ್ಷಣೆ ಮತ್ತು ಆರೋಗ್ಯದ ನಿಯಮಗಳನ್ನು ಪಾಲಿಸಿಕೊಂಡು ಅವನು ಆ ಸಿಂಹದ ಬಳಿಸಾರಿದನು. ಚೂಪಾದ ಮೊನೆಯುಳ್ಳ ತನ್ನ ಕೋಲಿನಿಂದ ಅವನು ಆ ಸಿಂಹದ ಕುಂಡೆಗೆ ತಿವಿದನು. ಅವನಿಗೆ ಆಶ್ಚರ್ಯವಾಗುವ ಹಾಗೆ ಆ ಸಿಂಹವು ತನ್ನ ತಲೆಯನ್ನು ಮಾತ್ರ ಅವನ ಕಡೆಗೆ ತಿರುಗಿಸಿ, ಬಾಲವನ್ನು ಅಲ್ಲಾಡಿಸಿತು. ಗೇಅಸ್ ಮತ್ತೆ ಇನ್ನಷ್ಟು ಜೋರಾಗಿ ತನ್ನ ಕೋಲಿನಿಂದ ಅದನ್ನು ತಿವಿದನು. ‘ಓ, ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡು’ ಸಿಂಹ ಹೇಳಿತು.

ಗೇಅಸ್ ತಲೆ ತುರಿಸಿಕೊಂಡನು. ಆ ಸಿಂಹವು ತಾನು ಹಿಂಸೆಯ ಆ ಬರ್ಬರ ಅಂಗಣಕ್ಕೆ ಹೋಗುವುದಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಸೂಚಿಸಿತು. ಗೇಅಸ್ ಸ್ವಭಾವತಃ ಬಹಳ ದಯಾಪರ. ಆದರೆ ತಾನು ತನ್ನ ಕರ್ತವ್ಯದಲ್ಲಿ ನಿರ್ಲಕ್ಷ್ಯ ಮಾಡಿದ್ದನ್ನು ಮೇಲ್ವಿಚಾರಕ ಕಂಡುಬಿಟ್ಟರೆ, ತಾನು ಕೂಡಾ ಆ ಬರ್ಬರ ಅಂಗಣದಲ್ಲಿ ಬಲಿಪಶುಗಳ ಜೊತೆಗೆ ಇರಬೇಕಾಗುತ್ತದೆ ಎನ್ನುವ ಭಯ ಅವನನ್ನು ಕಾಡುತ್ತಿತ್ತು. ಹಾಗಿದ್ದರೂ ಆ ಸಿಂಹದೊಡನೆ ವಾದಮಾಡಲು ಅವನಿಗೆ ಮನಸ್ಸಾಗಲಿಲ್ಲ.ಆತ ಅದರ ಮನವೊಲಿಸಲು ಪ್ರಯತ್ನಿಸಿದ:

‘ಬಹುಶಃ ನೀನು ನನಗಾಗಿಯಾದರೂ ಹೊರಗೆ ಬರಬಹುದಲ್ಲ?’
‘ನಾನು ಮೂರ್ಖ ಅಲ್ಲ’ ಮಾರುತ್ತರ ಕೊಟ್ಟ ಸಿಂಹವು ಕ್ಯಾರೆಟ್ ತಿನ್ನುವುದನ್ನು ಮುಂದುವರಿಸಿತು.

ಈಗ ಗೇಅಸ್ ತನ್ನ ಧ್ವನಿಯನ್ನು ತಗ್ಗಿಸಿದ: ‘ನೀನು ಆ ಅಮಾಯಕರಲ್ಲಿ ಯಾರಾದರೊಬ್ಬರ ಮೇಲೆ ಜಿಗಿದು, ಅವನನ್ನು ಸೀಳುಸೀಳು ಮಾಡಬೇಕೆಂದು ನಾನು ಹೇಳುತ್ತಿಲ್ಲ. ನೀನು ಅಂಗಣದಲ್ಲಿಗೆ ಹೋಗಿ, ಸ್ವಲ್ಪ ಓಡಾಡಿ, ಗರ್ಜನೆಮಾಡಿಬಿಡು. ಅದು ನನಗೆ ‘ಅಲಿಬಿ’ (ಹಾಜರಿ ಸಾಕ್ಷ್ಯ) ಪುರಾವೆಯನ್ನು ಕೊಡುತ್ತದೆ.’ ಸಿಂಹವು ತನ್ನ ಬಾಲವನ್ನು ಅಲ್ಲಾಡಿಸುತ್ತಾ ಹೇಳಿತು: ‘ಮಹಾರಾಯ, ನಾನು ಹೇಳಿದ್ದು ನಿನಗೆ ಗೊತ್ತಾಗಲಿಲ್ಲವೇ, ನಾನು ಮೂರ್ಖ ಅಲ್ಲ ಎಂದು.

ನಾನು ಅಲ್ಲಿಗೆ ಹೋದರೆ ಅಲ್ಲಿ ಅಂಗಣದಲ್ಲಿ ಇರುವವರು ನನ್ನನ್ನು ನೋಡುತ್ತಾರೆ ಮತ್ತು ನೆನಪಿಟ್ಟುಕೊಳ್ಳುತ್ತಾರೆ. ಆಮೇಲೆ ಅವರಲ್ಲೊಬ್ಬನನ್ನು ನಾನು ತಿನ್ನಲಿಲ್ಲ ಎಂದು ನಿಜವನ್ನೇ ಹೇಳಿದರೂ ಅವರು ಯಾರೂ ನಂಬುವುದಿಲ್ಲ.’
ಸಿಂಹಪಾಲಕನು ನಿಟ್ಟುಸಿರು ಬಿಟ್ಟನು. ಆಕ್ಷೇಪಣೆಯ ಧಾಟಿಯಲ್ಲಿ ಅವನು ಸಿಂಹದೊಡನೆ ಕೇಳಿದ:
‘ನೀನು ಯಾಕೆ ಅಲ್ಲಿಗೆ ಹೋಗಲು ಇಚ್ಚಿಸುವುದಿಲ್ಲ?’

‘ಅಲಿಬಿ’ ಪದವನ್ನು ನೀನೇ ಪ್ರಯೋಗಮಾಡಿದ್ದೀಯ. ಆ ಅರಿಸ್ಟಾಕ್ರೆಟ್ ಗಳು ತಾವೇ ಅಂಗಣಕ್ಕೆ ಓಡಿಕೊಂಡು ಬಂದು, ಕ್ರಿಶ್ಚಿಯನ್ ಪಕ್ಷದವರನ್ನು ಸೀಳಿ ಚೂರುಚೂರು ಮಾಡುವುದರ ಬದಲು, ಸಿಂಹಗಳಾದ ನಮ್ಮ ಮೆಲೆ ಯಾಕೆ ಅವಲಂಬಿತರಾಗಿ ಇರುವುದು ಎನ್ನುವುದು ನಿನಗೆ ಹೊಳೆದಿಲ್ಲವೇ?’
‘ಓ, ನನಗೆ ಗೊತ್ತಿಲ್ಲ. ಅವರು ಅರಿಸ್ಟಾಕ್ರೆಟ್ ಗಳು ಬಹುಶಃ ಮುದುಕರಾಗಿರಬೆಕು. ಅವರಿಗೆ ಉಸಿರಾಟದ ತೊಂದರೆ ಇರಬೇಕು. ಅಸ್ತಮಾ…’
‘ಮುದುಕರು!’ ವ್ಯಂಗ್ಯದ ಧ್ವನಿಯಲ್ಲಿ ಸಿಂಹವು ಕುಹಕವಾಡಿತು. ‘ನಿನಗೆ ರಾಜಕೀಯದ ಬಗ್ಗೆ ಬಹಳ ಗೊತ್ತಾ? ಅರಿಸ್ಟಾಕ್ರೆಟ್ ರಿಗೆ ಬೇಕಾದದ್ದು ಒಂದು ‘ಅಲಿಬಿ’ ಮಾತ್ರ. ಕ್ರಿಶ್ಚಿಯನ್ ಪಕ್ಷದವರನ್ನು ಹಿಂಸಿಸಿ ಕೊಲ್ಲುವಾಗ ತಾವು ಆ ಸ್ಥಳದಲ್ಲಿ ಹಾಜರಿರಲಿಲ್ಲ ಎನ್ನುವ ಸಾಕ್ಶ್ಯ.’
‘ಯಾಕೆ?’
‘ಯಾಕೆ ಅಂದರೆ, ಹೊಸ ಸತ್ಯ ಈಗ ಬಲವತ್ತರವಾಗುತ್ತಿದೆ. ರಾಜಕೀಯದಲ್ಲಿ ಹೊಸ ಬೆಳವಣಿಗೆ ಏನು ಎನ್ನುವುದನ್ನು ಗಮನಿಸುತ್ತಾ ಇರಬೇಕು. ಕ್ರಿಶ್ಚಿಯನ್ ಪಕ್ಷ ದವರು ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎನ್ನುವುದು ನಿನ್ನ ಮನಸ್ಸಿಗೆ ಹೊಳೆದಿಲ್ಲವೇ?’
‘ಅವರು – ಅಧಿಕಾರಕ್ಕೆ?’

‘ಹೌದು. ಯಾರೇ ಆದರೂ ಸಾಲುಗಳ ನಡುವಿನ ಅರ್ಥವನ್ನು ಓದಲು ಸಮರ್ಥರಾಗಿರಬೇಕು. ನನಗೆ ಅನ್ನಿಸುವಂತೆ ಕಾನ್ ಸ್ಟೆಂಟೈನ್ಚ ಕ್ರವರ್ತಿಯು ಕ್ರಿಶ್ಚಿಯನ್ ಪಕ್ಷದವರ ಜೊತೆಗೆ ಮುಂದೊಂದು ದಿನ ಒಪ್ಪಂದಕ್ಕೆ ಬರುತ್ತಾನೆ. ಆಮೇಲೆ ಏನಾಗುತ್ತದೆ? ತನಿಖೆಗಳು ನಡೆಯುತ್ತವೆ. ದೌರ್ಜನ್ಯಕ್ಕೆ ಒಳಗಾದವರು ಮತ್ತೆ ಅಧಿಕಾರಕ್ಕೆ ಬರುತ್ತಾರೆ. ಈಗ ಆಂಪಿಥಿಯೇಟರ್ ಒಳಗೆ ಕುಳಿತುಕೊಂಡು ಕ್ರೌರ್ಯದ ತಮಾಷೆ ನೋಡುತ್ತಿರುವವರು, ಅರಿಸ್ಟಾಕ್ರೆಟ್ ಗಳು ಆಗ ಹೇಳಬಹುದು: ‘ಅದು ಹಿಂಸೆಮಾಡಿದ್ದು ನಾವು ಅಲ್ಲ. ಅದೆಲ್ಲಾ ಸಿಂಹಗಳ ಕೆಲಸ.’ ಎಂದು
‘ಹೌದಾ , ನಾನು ಈರೀತಿ ಯೋಚಿಸಲೇ ಇಲ್ಲ’

‘ಹಾಗೆ ಹೇಳು. ನೀನು ಅವನ್ನೆಲ್ಲ ಗಮನಿಸುವುದಿಲ್ಲ. ನನಗೆ ಮುಂದೆ ಬರುವ ಅಪಾಯದಿಂದ ನನ್ನನ್ನು ರಕ್ಷಿಸಿಕೊಳ್ಳಬೇಕಾಗಿದೆ. ಮುಂದೆ ಈ ಹಿಂಸಾಚಾರದ ಬಗ್ಗೆ ವಿಚಾರಣೆ ನಡೆದಾಗ, ನಾನು ಅಲ್ಲಿಗೆ ಹೋಗಿರಲಿಲ್ಲ, ಕೇವಲ ಇಲ್ಲಿ ಕ್ಯಾರೆಟ್ ತಿಂದುಕೊಂಡು ಇದ್ದೆ ಎಂದು ಹೇಳಲು ಸಾಕ್ಷಿಗಳು ಇರುತ್ತಾರೆ. ಗೊತ್ತಾಯಿತಾ , ನೋಡು ಇದು ಕೊಳೆತ ಕ್ಯಾರೆಟ್.’
‘ಆದರೆ ನಿನ್ನ ಆ ಎಲ್ಲಾ ಒಡನಾಡಿಗಳು ಯಾವುದೇ ತಕರಾರು ಇಲ್ಲದೆ, ಅವರೆಲ್ಲಾ ಕ್ರಿಶ್ಚಿಯನ್ ಪಕ್ಷದವರನ್ನು ಬರ್ಬರವಾಗಿ ಗಬಗಬನೆ ಕಬಳಿಸುತ್ತಿದ್ದಾರಲ್ಲ?’ ಗೇಅಸ್ ಕೇಳಿದ.

‘ಅವೆಲ್ಲಾ ದಡ್ದಪ್ರಾಣಿಗಳು. ದೂರದೃಷ್ಟಿ ಇಲ್ಲದ ಅವಕಾಶವಾದಿಗಳು. ತಂತ್ರಗಾರಿಕೆಯ ಬುದ್ಧಿಮತ್ತೆ ಇಲ್ಲದವರು. ಅದೇ ಆಫ್ರಿಕಾದ ಕತ್ತಲೆಯ ಖಂಡದಿಂದ…’
‘ನಾನು ಕೇಳುವುದು’ ಗೇಅಸ್ ನಡುವೆ ಬಾಯಿಹಾಕಿದ.
‘ಏನು?’
‘ಆ ಕ್ರಿಶ್ಚಿಯನ್ ಪಕ್ಷದವರು ನಿನಗೆ ಗೊತ್ತಾ?’
‘ಅವರ ಬಗ್ಗೆ ಯಾಕೆ?’
‘ಅವರು ಅಧಿಕಾರಕ್ಕೆ ಬಂದರೆ…’
ಬಂದರೆ?’
‘ನಾನು ನಿನ್ನನ್ನು ಈರೀತಿಯ ಹಿಂಸೆಮಾಡಲು ಒತ್ತಾಯಮಾಡಲಿಲ್ಲ ಎಂದು ನನ್ನ ಪರವಾಗಿ ನೀನು ಸಾಕ್ಷಿ ಹೇಳಬಹುದೇ?’
‘ಜನರ ಕಲ್ಯಾಣವೇ ಪರಮಶ್ರೇಷ್ಟ ಕಾನೂನು ಆಗಬೇಕು’ ಎಂದು ಅರ್ಥಗರ್ಭಿತವಾಗಿ ಹೇಳಿದ ಆ ಸಿಂಹವು ಮತ್ತೆ ತನ್ನ ಕ್ಯಾರೆಟ್ ತಿನ್ನಲು ಶುರುಮಾಡಿತು.

‍ಲೇಖಕರು Avadhi

March 31, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: