ವಿವೇಕ ರೈ ಅವರಿಗೆ ಮಂಗಳೂರು ವಿ ವಿ ಗೌರವ ಡಾಕ್ಟರೇಟ್

ಹಿರಿಯ ವಿದ್ವಾಂಸ, ಎರಡು ವಿಶ್ವವಿದ್ಯಾಲಯಗಳನ್ನು ಕುಲಪತಿಯಾಗಿ ಸಮರ್ಥವಾಗಿ ಮುನ್ನಡೆಸಿದ ಡಾ ಬಿ ಎ ವಿವೇಕ ರೈ ಅವರಿಗೆ ಮಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಘೋಷಿಸಿದೆ. 

ನಾಳೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಜರುಗುವ ಘಟಿಕೋತ್ಸವದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. 

ವಿವೇಕ ರೈ ಅವರಿಗೆ ‘ಅವಧಿ’ಯ ಅಭಿನಂದನೆಗಳು 

ಡಾ.ಬಿ.ಎ.ವಿವೇಕ ರೈ ಅವರು ೮ ದಶಂಬರ ೧೯೪೬ರಂದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಪುಣಚಾ ಗ್ರಾಮದಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದರು . ಪುಣಚಾ ಪರಿಯಲ್ತಡ್ಕ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ , ಪುತ್ತೂರು ಬೋರ್ಡ್ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣವನ್ನು ಪಡೆದು, ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ೧೯೬೭ರಲ್ಲಿ ಬಿ ಎಸ್ಸಿ ಪದವಿಯನ್ನು ಪಡೆದರು . ೧೯೬೮ರಲ್ಲಿ ಮಂಗಳೂರಿನಲ್ಲಿ ಆರಂಭವಾದ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದಲ್ಲಿ ಮೊದಲ ತಂಡದ ವಿದ್ಯಾರ್ಥಿಯಾಗಿ ಸೇರಿ, ೧೯೭೦ರಲ್ಲಿ ಕನ್ನಡ ಎಂ ಎ ಪದವಿಯನ್ನು ಪ್ರಥಮ ದರ್ಜೆ ಮತ್ತು ಪ್ರಥಮ ಸ್ಥಾನದೊಂದಿಗೆ ಪಡೆದರು . ತಾನು ಕಲಿತ ಸ್ನಾತಕೋತ್ತರ ಕೇಂದ್ರ ಮಂಗಳಗಂಗೋತ್ರಿಯ ಕನ್ನಡ ವಿಭಾಗದಲ್ಲಿ ೧೯೭೦ರಲ್ಲಿ ಅಧ್ಯಾಪಕನಾಗಿ ಸೇರಿ , ವಿಭಾಗ ಮುಖ್ಯಸ್ಥರಾಗಿದ್ದ ಪ್ರೊ .ಎಸ್ ವಿ ಪರಮೇಶ್ವರ ಭಟ್ಟರ ಜೊತೆಗೆ ವಿಭಾಗ ಮತ್ತು ಮಂಗಳಗಂಗೋತ್ರಿ ಕೇಂದ್ರವನ್ನು ಕಟ್ಟಿ ಬೆಳೆಸಿದರು .ಡಾ.ಹಾ .ಮಾ. ನಾಯಕರ ಮಾರ್ಗದರ್ಶನದಲ್ಲಿ ’ತುಳು ಜನಪದ ಸಾಹಿತ್ಯ’ ದ ಬಗ್ಗೆ ಸಂಶೋಧನೆ ನಡೆಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ೧೯೮೧ರಲ್ಲಿ ತುಳು ಜಾನಪದದ ಮೊತ್ತಮೊದಲನೆಯ ಪಿ ಎಚ್ ಡಿ ಪದವಿಯನ್ನು ಪಡೆದರು .

ಮೈಸೂರು ವಿವಿಯ ಸ್ನಾತಕೋತ್ತರ ಕೇಂದ್ರ ಮಂಗಳಗಂಗೋತ್ರಿಯು ೧೯೮೦ ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವಾಗಿ ರೂಪಾಂತರಗೊಂಡಾಗ ಡಾ.ರೈ ಅವರು ವಿವಿಯ ಬೆಳವಣಿಗೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು . ವಿವಿಯ ಅಂಗಸಂಸ್ಥೆಗಳಾದ ಸಿಂಡಿಕೇಟ್ , ಸೆನೆಟ್ ಮತ್ತು ಅಕಡೆಮಿಕ್ ಕೌನ್ಸಿಲ್ ಗಳ ಸದಸ್ಯರಾಗಿ , ಆರ್ಟ್ಸ್ ಫ಼್ಯಾಕಲ್ಟಿಯ ಡೀನ್ ಆಗಿ ಅನೇಕ ಹೊಸಸುಧಾರಣೆಗಳನ್ನು ಶೈಕ್ಷಣಿಕ ಮಟ್ಟದಲ್ಲಿ ತರಲು ಕೆಲಸಮಾಡಿದರು. ಮಂಗಳೂರು ವಿವಿದಲ್ಲಿ ತುಳು ಪೀಟ, ಪ್ರಸಾರಾಂಗ, ಡಾ.ಶಿವರಾಮ ಕಾರಂತ ಪೀಟ, ಸಾಂಸ್ಕೃತಿಕ ವಸ್ತುಸಂಗ್ರಹಾಲಯ , ಯಕ್ಷಗಾನ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲು ಕಾರಣಕರ್ತರಾಗಿ , ಅವುಗಳ ಸ್ಥಾಪಕ ನಿರ್ದೇಶಕರಾಗಿ ಮುಖ್ಯಸ್ಥರಾಗಿ ಅವುಗಳನ್ನು ಕಟ್ಟಿ ಬೆಳೆಸಿದರು . ಕನ್ನಡ ವಿಭಾಗದಲ್ಲಿ ತುಳು ಅಧ್ಯಯನ ಮತ್ತು ಸಂಶೋಧನೆಗೆ ಅವಕಾಶ ಕಲ್ಪಿಸಿ , ಅಂತಾರಾಷ್ಟ್ರೀಯ ಮಟ್ಟದಲ್ಲಿ ಫಿನ್ಲೇಂಡ್, ಅಮೇರಿಕ, ಜರ್ಮನಿ , ಜಪಾನ್ , ಫ಼್ರಾನ್ಸ್ ಮುಂತಾದ ದೇಶಗಳ ವಿದ್ವಾಂಸರು ವಿಭಾಗದೊಂದಿಗೆ ಸಹಯೋಗ ನಡೆಸಲು , ಜಂಟಿ ಸಂಶೋಧನಾ ಯೋಜನೆಗಳನ್ನು ನಡೆಸಲು ಅವಕಾಶ ಕಲ್ಪಿಸಿದರು . ಕನ್ನಡ ಸಾಹಿತ್ಯದ ಎಲ್ಲ ಹಿರಿಯ ಸಾಹಿತಿಗಳು ವಿಭಾಗದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲುಗೊಳ್ಳುವಂತೆ ಮಾಡಿದರು . ವಿಭಾಗದಲ್ಲಿ ನಡೆಸಿದ ವಿಚಾರಸಂಕಿರಣ, ಕಮ್ಮಟ, ಸಮ್ಮೇಳನ,ಉಪನ್ಯಾಸ ಕಾರ್ಯಕ್ರಮಗಳು ಮಂಗಳೂರು ವಿವಿಯ ಗೌರವವನ್ನು ಹೆಚ್ಚಿಸಿದವು .ಡಾ.ರೈ ಅವರು ಮಂಗಳಗಂಗೋತ್ರಿಯಲ್ಲಿ ೩೪ ವರ್ಷಗಳ ಕಾಲ ಅಧ್ಯಾಪನ , ಸಂಶೋಧನೆ ,ಆಡಳಿತ ಮತ್ತು ಸಂಘಟನೆಗಳ ಮೂಲಕ ಮಂಗಳೂರು ವಿಶ್ವವಿದ್ಯಾನಿಲಯದ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಕೊಡುಗೆಗಳನ್ನು ಕೊಟ್ಟಿದ್ದಾರೆ.

ಡಾ.ವಿವೇಕ ರೈಯವರು ಕನ್ನಡ ವಿಶ್ವವಿದ್ಯಾಲಯ , ಹಂಪಿಯ ಕುಲಪತಿಯಾಗಿ ( ೨೦೦೪-೨೦೦೭) ಅಲ್ಲಿ ಬಹುಮುಖಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಯೋಜಿಸಿ ಕಾರ್ಯರೂಪಕ್ಕೆ ತಂದರು .ರಾಜ್ಯಸರಕಾರ ಮತ್ತು ಯು ಜಿ ಸಿ ಯಿಂದ ಅನೇಕ ಯೋಜನೆಗಳನ್ನು ಮತ್ತು ಅನುದಾನಗಳನ್ನು ತಂದು, ಕರ್ನಾಟಕದ ಸಾಂಸ್ಕೃತಿಕ ಸಂಶೋಧನೆಗೆ ಹೊಸದಿಕ್ಕನ್ನು ತೋರಿಸಿಕೊಟ್ಟರು. ಯುಜಿಸಿ ನೆರವಿನಿಂದ ಮಹಿಳಾ ಅಧ್ಯಯನ ಕೇಂದ್ರ, ಕಂಪ್ಯೂಟರ್ ಕೇಂದ್ರ, ಬುಡಕಟ್ಟು ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲಾಯಿತು . ವಿವಿಯ ಪ್ರಸಾರಾಂಗದ ಮೂಲಕ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು ೨೫೦ ಪುಸ್ತಕಗಳನ್ನು ಪ್ರಕಟಿಸಲಾಯಿತು . ಕನ್ನಡ ಪ್ರಾಚೀನ ಜೈನ ಸಾಹಿತ್ಯದ ೧೯ ಸಂಪುಟಗಳು, ಮಹಿಳಾ ಸಾಹಿತ್ಯ ಚರಿತ್ರೆ , ತುಳು ಸಾಹಿತ್ಯ ಚರಿತ್ರೆ , ಸುವರ್ಣ ಕರ್ನಾಟಕ ಯೋಜನೆಯ ಸಂಪುಟಗಳು ಇತ್ಯಾದಿ . ಕುವೆಂಪು ಕನ್ನಡ ತಂತ್ರಾಂಶದ ಮೊದಲ ಆವೃತ್ತಿಯ ನಿರ್ಮಾಣ ಇನ್ನೊಂದು ಮುಖ್ಯ ಕೊಡುಗೆ. ಕರ್ನಾಟಕ ರಾಜ್ಯ ಮುಕ್ತ ವಿವಿ, ಮೈಸೂರಿನ ಕುಲಪತಿಯಾಗಿ (೨೦೦೭-೨೦೦೯) ಡಾ.ರೈ ಅವರು ಆ ವಿಶ್ವವಿದ್ಯಾನಿಲಯಕ್ಕೆ ಮೊತ್ತಮೊದಲಬಾರಿ ೨೦೦೮ರಲ್ಲಿ ಕೇಂದ್ರ ಸರಕಾರದ ದೂರ ಶಿಕ್ಷಣ ಮಂಡಳಿಯ ಐದು ವರ್ಷಗಳ ಅವಧಿಯ( ೨೦೦೮-೨೦೧೩) ಮಾನ್ಯತೆಯನ್ನು  ದೊರಕಿಸಿಕೊಟ್ಟರು. ಮತ್ತು ದೂರಶಿಕ್ಷಣ ಮಂಡಲಿಯ ನಿಯಮಗಳಿಗೆ ಅನುಸಾರವಾಗಿ  ಕಮ್ಮಟಗಳನ್ನು ನಡೆಸಿ ವಿವಿಧ ಕೋರ್ಸ್ ಗಳ ಶೈಕ್ಷಣಿಕ ಸಾಮಗ್ರಿಗಳನ್ನು ಸಿದ್ಧಪಡಿಸಿದರು .

ಪ್ರೊ.ರೈಯವರು ೨೦೦೯-೨೦೧೨ರ ಅವಧಿಯಲ್ಲಿ ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗದಲ್ಲಿ ಯುರೋಪಿಯನ್ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಯನ್ನು ಬೋಧಿಸಿದ್ದಾರೆ , ಆಸಕ್ತರಿಗಾಗಿ ಕನ್ನಡಬೇಸಿಗೆ ಶಿಬಿರಗಳನ್ನು ನಡೆಸಿದ್ದಾರೆ, ಕನ್ನಡ ಸಾಹಿತ್ಯ ಮತ್ತು ತುಳು ಜಾನಪದದ ಬಗ್ಗೆ ಉಪನ್ಯಾಸಗಳನ್ನು ಕೊಟ್ಟಿದ್ದಾರೆ, ಕನ್ನಡ ಮತ್ತು ತುಳುವನ್ನು ಹೊರಜಗತ್ತಿಗೆ ಅನಾವರಣ ಮಾಡಿದ್ದಾರೆ.

ವಿವೇಕ ರೈಯವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರಾಗಿ ೧೯೯೪-೧೯೯೮ರ ಅವಧಿಯಲ್ಲಿ ತುಳು ಭಾಷೆ ಮತ್ತು ಸಾಹಿತ್ಯಕ್ಕೆ ಶೈಕ್ಷಣಿಕ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ. ತುಳು ಸಾಹಿತ್ಯ ರಚನೆಗೆ ಕಮ್ಮಟಗಳನ್ನು ನಡೆಸಿ , ಅಕಾಡೆಮಿಯ ವತಿಯಿಂದ ೫೭ ಪುಸ್ತಕಗಳನ್ನು ಪ್ರಕಟಿಸಿದ್ದಾರೆ, ಹೊಸ ಲೇಖಕರ ತಲೆಮಾರು ನಿರ್ಮಾಣವಾಗಲು ಶ್ರಮಿಸಿದ್ದಾರೆ, ದಲಿತ ಮತ್ತು ಬುಡಕಟ್ಟು ಸಮುದಾಯಗಳ ಸಂಸ್ಕೃತಿಗಳ ಅನಾವರಣ ಮಾಡಿದ್ದಾರೆ.

ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಆಡಳಿತ ಮಂಡಳಿಯ ಸದಸ್ಯರಾಗಿ , ಸಂಸ್ಕೃತಿಗ್ರಾಮ ಯೋಜನೆಯ ನಿರ್ದೇಶಕರಾಗಿ ತುಳುನಾಡಿನ ಸಂಸ್ಕೃತಿಯ ಪುನರುಜ್ಜೀವನದ ಯೋಜನೆಗಳಿಗೆ ಚಾಲನೆಯನ್ನು ಕೊಟ್ಟಿದ್ದಾರೆ.ಪಿಲಿಕುಳ ನಿಸರ್ಗಧಾಮದ ಗುತ್ತಿನ ಮನೆ ಸಹಿತದ ಸಂಸ್ಕೃತಿ ಗ್ರಾಮ ಮತ್ತು ಕರಕುಶಲ ಗ್ರಾಮ -ಇವು ವಿವೇಕ ರೈಯವರ ಸೃಜನಶೀಲ ಪರಿಕಲ್ಪನೆಯ ನಿರ್ಮಾಣಗಳು. ಇವು ನಮ್ಮ ದೇಶದಲ್ಲೇ ಅಪೂರ್ವವಾದ ’ಜೀವಂತ ಪರಂಪರೆಯ ಗ್ರಾಮ’ದ ವಿಶಿಷ್ಟ ನಿದರ್ಶನಗಳು.

ಸಾಹಿತಿಯಾಗಿ ಸಂಶೋಧಕರಾಗಿ ರೈ ಅವರು  ವಿಶೇಷ ಸಾಧನೆ ಮಾಡಿದ್ದಾರೆ. ಅವರ ಒಟ್ಟು ೪೩ ಗ್ರಂಥಗಳು ಪ್ರಕಟವಾಗಿವೆ . ಕನ್ನಡದಲ್ಲಿ ಸ್ವತಂತ್ರ ಮತ್ತು ಅನುವಾದದ ೧೭ ಪುಸ್ತಕಗಳು , ೧೮ ಸಂಪಾದಿತ ಗ್ರಂಥಗಳು, ಇಂಗ್ಲಿಷ್ ನಲ್ಲಿ ಸಹಸಂಪಾದನೆಯ ೬ ಕೃತಿಗಳು, ತುಳು ಭಾಷೆಯಲ್ಲಿ ಎರಡು ಪುಸ್ತಕಗಳು ಪ್ರಕಟಗೊಂಡಿವೆ. ಸುಮಾರು ೫೦೦ ಕ್ಕೂ ಹೆಚ್ಚಿನ ಸಂಖ್ಯೆಯ ಲೇಖನಗಳು ಕನ್ನಡ, ಇಂಗ್ಲಿಷ್ ಮತ್ತು ತುಳುವಿನಲ್ಲಿ ರಚನೆಯಾಗಿವೆ . ಭಾಷೆ , ಸಾಹಿತ್ಯ , ಇತಿಹಾಸ , ಜಾನಪದ, ಸಂಸ್ಕೃತಿ, ರಂಗಭೂಮಿ,ಶಿಕ್ಷಣ -ಹೀಗೆ ಅನೇಕ ಕ್ಷೇತ್ರಗಳ ಹರಹಿನಲ್ಲಿ ಇವರ ಗ್ರಂಥ ಮತ್ತು ಲೇಖನಗಳು ವ್ಯಾಪಿಸಿಕೊಂಡಿವೆ. ಫಿನ್ ಲೇಂಡ್ ನ ಜಾನಪದ ವಿದ್ವಾಂಸ ಪ್ರೊ.ಲೌರಿ ಹಾಂಕೊ ಅವರ ಜೊತೆಗೆ ನಡೆಸಿದ ’ಸಿರಿ ಮಹಾಕಾವ್ಯ ’ ಯೋಜನೆ ಮತ್ತು ಜರ್ಮನಿಯ ಪ್ರೊ.ಬ್ರೂಕ್ನರ್ ಅವರ ಜೊತೆಗೆ ನಡೆಸಿದ ತುಳು ಪಾಡ್ದನಗಳ ಸಂಪಾದನೆ ಹಾಗೂ ಅನುವಾದದ ಯೋಜನೆ- ಇವುಗಳ ಪ್ರಕಟನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಮನ್ನಣೆಯನ್ನು ತಂದುಕೊಟ್ಟಿವೆ

‍ಲೇಖಕರು avadhi

March 2, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Kum Veerabhadrappa

    ವಿದ್ವಾಂಸರಾ ಪ್ರೊ ವಿವೇಕ ರೈ ಅವರಿಗೆ ಗೌರವ ಡಾಕ್ಟರೇಟ್ ನೀಡುವುದರ ಮೂಲಕ ಮಂಗಳೂರು ವಿಶ್ವವಿದ್ಯಾಲಯ ತನ್ನ ಗೌರವ ಹೆಚ್ಚಿಸಿಕೊಂಡಿದೆ, ಅವರಿಗೆ ನಮ್ಮೆಲ್ಲರ ಹಾರ್ದಿಕ ಅಭಿನಂದನೆಗಳು, ಇನ್ನೋರ್ವ ಬಹುಶ್ರುತ ಚಿಂತಕರಾದ ನಮ್ಮ ಪ್ರೊ ಸಿ ಎನ್ ರಾಮಚಂದ್ರನ್ ಅವರಿಗೆ ಮುಂದೆ ಇದೇ ಗೌರವ ನೀಡಿದರೆ ಇನ್ನೂ ಸಂತೋಷ, ಕಾರಣ ಸಹ ಮಂ ವಿವಿ ಯ ಇಂಗ್ಲೀಷ್ ವಿಭಾಗವನ್ನು ಎತ್ತರಕ್ಕೇರಿಸಿದ ವಿದ್ವಾಂಸರು
    ಕುಂವೀ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: