ಜರ್ಮನಿಯಲ್ಲಿ ಅನಂತಮೂರ್ತಿಗಳದ್ದೇ ಮಾತು..

ಅದು ಅವರ ಬದುಕಿನ ಧನ್ಯತೆಯ ಕ್ಷಣ..

ಡಾ ಬಿ ಎ ವಿವೇಕ ರೈ

ಡಾ. ಯು. ಆರ್  ಅನಂತಮೂರ್ತಿ ಅವರ ಕತೆಗಳ ಜರ್ಮನ್ ಅನುವಾದ ಗ್ರಂಥ ‘SONNENPFERDCHEN ERZAHLUNGEN’ ಇದರ ಬಿಡುಗಡೆ ಸಮಾರಂಭವು ನಿನ್ನೆ ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗದಲ್ಲಿ ಸರಳವಾಗಿ ಆತ್ಮೀಯವಾಗಿ ನಡೆಯಿತು.

ವಿಭಾಗದ ಹಿಂದಿ ಪ್ರಾಧ್ಯಾಪಕಿ ಪ್ರೊ. ಬಾರ್ಬರಾ ಲೊಟ್ಜ್ ಅವರು ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಅರ್ಥಪೂರ್ಣವಾಗಿ ಸಂಯೋಜಿಸಿದರು.

ಅವರು ತಮ್ಮ ಸ್ವಾಗತಭಾಷಣದಲ್ಲಿ ಕನ್ನಡ ಮತ್ತು ಜರ್ಮನ್ ಭಾಷೆಗಳ ಕೊಳುಕೊಡೆಗಳ ಅಗತ್ಯವನ್ನುಅನುವಾದ ಸಾಹಿತ್ಯ ಹೇಗೆ ಪೂರೈಸುತ್ತದೆ ಎಂದು ಪ್ರತಿಪಾದಿಸಿದರು ಮತ್ತು  ಹೈದ್ರೂನ್ ಬ್ರೂಕ್ನರ್ ಜರ್ಮನಿಯ ಟ್ಯೂಬಿಂಗನ್ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗದಲ್ಲಿ ಇದ್ದಾಗ ಅನಂತಮೂರ್ತಿ ಅವರು ಅಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಉಪನ್ಯಾಸಗಳನ್ನು ಕೊಟ್ಟದ್ದನ್ನು ನೆನಪಿಸಿದರು.

ಬಳಿಕ ಪುಸ್ತಕದ ಬಿಡುಗಡೆ ಕಾರ್ಯಕ್ರಮವು ವಿಶಿಷ್ಟವಾಗಿ ನಡೆಯಿತು.

ಇಂಡಾಲಜಿ ವಿಭಾಗದ ಇಬ್ಬರು ಪಿ ಎಚ್ ಡಿ ಸಂಶೋಧನಾ ವಿದ್ಯಾರ್ಥಿನಿಯರಾದ ಸಾರಾ ಮೆರ್ಕ್ಲೆ ಮತ್ತು ಪೌಲಿನೆ ಲೋಹ್ಲು ಅವರಿಗೆ ಪುಸ್ತಕಬಿಡುಗಡೆ ಮಾಡುವ ಅಪೂರ್ವ ಅವಕಾಶವನ್ನು ಕಲ್ಪಿಸಲಾಗಿತ್ತು.

ಈ ಇಬ್ಬರು ಸಂಶೋಧಕಿಯರು ತಮ್ಮ ಎಂಎ ಪದವಿಯ ಪ್ರೌಢ ಪ್ರಬಂಧಗಳನ್ನು ಕರ್ನಾಟಕದ ಜಾನಪದ ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳನ್ನು ಆರಿಸಿಕೊಂಡು ವ್ಯಾಪಕ ಕ್ಷೇತ್ರ ಕಾರ್ಯ ಮಾಡಿ ರಚಿಸಿದ್ದರು. ಈಗ ಇವರಿಬ್ಬರೂ ತಮ್ಮ ಪಿ.ಎಚ್.ಡಿ ಪದವಿಗೆ ಕೂಡಾ ಕರ್ನಾಟಕದ ಜಾನಪದದ ಭಾಗವಾದ ಆರಾಧನೆ ಮತ್ತು ಮೌಖಿಕ ಕಾವ್ಯಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ.

ತಮ್ಮ ಅಧ್ಯಯನಕ್ಕಾಗಿ ಇವರು ಕನ್ನಡವನ್ನು ಕಲಿತು, ಕಳೆದ ಐದು ವರ್ಷಗಳಿಂದ ಪ್ರತಿ ವರ್ಷ ಕರ್ನಾಟಕಕ್ಕೆ ಬಂದು ಹಳ್ಳಿಗಳಲ್ಲಿ ಸುತ್ತಾಡಿ ಕನ್ನಡದ ಸಂಸ್ಕೃತಿಯನ್ನು ಜರ್ಮನಿಯಲ್ಲಿ ಉಳಿಸುವ ಕೆಲಸಮಾಡುತ್ತಿರುವ ಯುವತಿಯರು.

ಸಾರಾ ಮತ್ತು ಪೌಲಿನೆ ಸುಂದರವಾದ ಬಣ್ಣದ ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಪುಸ್ತಕವನ್ನು ಸಂಭ್ರಮದಿಂದ ಅನಾವರಣ ಮಾಡಿದರು. ಅದು ಅವರ ಬದುಕಿನ ಧನ್ಯತೆಯ ಕ್ಷಣ, ಗ್ರಂಥ ಬಿಡುಗಡೆಯ ಮೊದಲ ರೋಮಾಂಚನ.

ಅನಂತಮೂರ್ತಿ ಅವರ ಬಗ್ಗೆ ನಾನು ಸಂಕ್ಷಿಪ್ತವಾಗಿ ಪರಿಚಯಮಾಡಿದೆ. ಅವರ ಬದುಕು, ಸಾಹಿತ್ಯಕೃತಿಗಳು, ಅವುಗಳ ಧೋರಣೆಗಳು, ಅವರ ಸಂಸ್ಕೃತಿ ಚಿಂತನೆಯ ಮುಖಗಳು ಹೀಗೆ ಹೇಳುತ್ತಾ ಅವರ ಕತೆಗಳ ಜರ್ಮನ್ ಅನುವಾದ ಹೇಗೆ ಕನ್ನಡ ಜಗತ್ತನ್ನು ಹೊರಜಗತ್ತಿನ ಜೊತೆಗೆ ಅನುಸಂಧಾನ ಮಾಡಬಹುದು ಎನ್ನುವ ಸೂಚನೆಗಳನ್ನು ಕೊಟ್ಟೆ.

ಬಳಿಕದ ವಿಶಿಷ್ಟ ಕಾರ್ಯಕ್ರಮ ಅನಂತಮೂರ್ತಿ ಕತೆಗಳ ಓದು.

ಜರ್ಮನ್ ಭಾಷೆಗೆ ಅನುವಾದಗೊಂಡ ಕತೆಗಳನ್ನು ಮೂಲ ಕನ್ನಡದಲ್ಲಿ ಓದಿ, ಮತ್ತೆ ಅದೇ ಭಾಗದ ಜರ್ಮನ್ ಅನುವಾದವನ್ನು ಓದುವ ಅವಳಿ ಜವಳಿ ಸನ್ನಿವೇಶ. ‘ಆಕಾಶ ಮತ್ತು ಬೆಕ್ಕು’ ಕತೆಯ ಒಂದು ಭಾಗವನ್ನು ಕನ್ನಡದಲ್ಲಿ ನಾನು ಓದಿದೆ. ಅದನ್ನು ಜರ್ಮನ್ ಗೆ ಅನುವಾದ ಮಾಡಿದ ಡಾ. ಕತ್ರಿನ್ ಬಿಂದರ್ ಆ ಭಾಗದ ಜರ್ಮನ್ ಅನುವಾದವನ್ನು ಓದಿದರು.

ಪ್ರೊ. ಬ್ರೂಕ್ನರ್ ಅವರು ತಾವು ಅನುವಾದ ಮಾಡಿದ ‘ಸೂರ್ಯನ ಕುದುರೆ’ ಕತೆಯ ಜರ್ಮನ್ ಭಾಗವನ್ನು ಓದಿದರು. ಇದಕ್ಕೆ ಸಂವಾದಿಯಾಗಿ ಅದರ ಮೂಲ ಕನ್ನಡದ ಭಾಗವನ್ನು ಓದಿದವರು ಡಾ. ಯು.ಆರ್  ಅನಂತಮೂರ್ತಿ ಅವರು !

ಆಶ್ಚರ್ಯ, ಆದರೂ ನಿಜ.

ಅನಂತಮೂರ್ತಿ ಅವರು ೧೯೯೨ರಲ್ಲಿ ಟ್ಯುಬಿಂಗನ್ ವಿಶ್ವವಿದ್ಯಾಲಯಕ್ಕೆ ಸಂದರ್ಶಕ ಪ್ರಾಧ್ಯಾಪಕರಾಗಿ ಬಂದಿದ್ದಾಗ ಅವರು ಓದಿದ ‘ಸೂರ್ಯನ ಕುದುರೆ’ ಕತೆಯ ಆಡಿಯೋ ಕ್ಯಾಸೆಟ್ ನ್ನು ಬ್ರೂಕ್ನರ್ ಜತನದಿಂದ ಕಾಪಾಡಿಕೊಂಡು ಬಂದಿದ್ದರು. ಅದನ್ನು ನಿನ್ನೆ ಆ ಸಂದರ್ಭದಲ್ಲಿ ಹಾಕಿ ಕೇಳಿಸಲಾಯಿತು. ಅನಂತಮೂರ್ತಿ ಅವರ ಧ್ವನಿಯಲ್ಲಿ ಅದನ್ನು ಕೇಳುವುದೇ ನಿನ್ನೆಯ ಕಾರ್ಯಕ್ರಮದ ದೊಡ್ಡ ಆಕರ್ಷಣೆ ಆಗಿತ್ತು.

ಅಧ್ಯಕ್ಷರು ಇಲ್ಲದ ನಿನ್ನೆಯ ಕಾರ್ಯಕ್ರಮದಲ್ಲಿ ಕೊನೆಗೆ ಪ್ರೊ. ಲೊಟ್ಜ್ ಅವರೇ ಸಮಾರೋಪದ ಪ್ರೀತಿಯ ಮಾತುಗಳನ್ನು ಆಡಿದರು.

ಈ ಚಿಕ್ಕ ಚೊಕ್ಕ ಕಾರ್ಯಕ್ರಮದಲ್ಲಿ ಇಲ್ಲಿನ ಇಂಡಾಲಜಿ ವಿಭಾಗದ ಅಧ್ಯಾಪಕರು ಸಂಶೋಧಕರ ಜೊತೆಗೆ, ನಾನು ಇಲ್ಲಿ ಈಗ ನಡೆಸುತ್ತಿರುವ ‘ಪ್ರಾಚೀನ ಕನ್ನಡ ಸಾಹಿತ್ಯದ ಬೇಸಗೆ ಶಿಬಿರ’ದ ಶಿಬಿರಾರ್ಥಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.

ಈ ಶಿಬಿರಾರ್ಥಿಗಳಲ್ಲಿ ಫ್ರಾನ್ಸ್ ನ ಲಿಯೋನ್ ವಿವಿಯ ಇಂಡಾಲಜಿ ವಿಭಾಗದ ಪ್ರೊ. ಕ್ರಿಸ್ಟಿನ್ ಚೊಯ್ನಕಿ, ಇಟಲಿಯ ಸಂಶೋಧಕಿ ಡಾ. ಎಲೆನಾ ಮುಚ್ಚಿಯರೆಲ್ಲಿ, ಜರ್ಮನಿಯ ಮ್ಯೂನಿಕ್ ನ ಡೆನ್ನಿಸ್ ರೋಚ್ ಮತ್ತು ಲೈಫ್ಜಿಗ್ ನ ಮ್ಯಾಕ್ಸಿಮ್ ಶಿಲ್ಲೊ ಭಾಗವಹಿಸಿದ್ದರಿಂದ ಕಾರ್ಯಕ್ರಮಕ್ಕೆ ಅಂತಾರಾಷ್ಟ್ರೀಯ ಸಮ್ಮಿಲನದ ಸೊಗಡು ಪ್ರಾಪ್ತವಾಗಿತ್ತು.

‍ಲೇಖಕರು admin

March 25, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. C. N. Ramachandran

    ಪ್ರಿಯ ಪ್ರೊ. ವಿವೇಕ ರೈ ಅವರಿಗೆ: ವ್ಯುತ್ಸ್‍ವರ್ಗ್ ವಿವಿಯಲ್ಲಿ ನಡೆದ ಅನಂತಮೂರ್ತಿಯವರ ಕಥೆಗಳ ಜರ್ಮನ್ ಅನುವಾದದ ಕೃತಿಯ ಬಿಡುಗಡೆಯ ಕಾರ್ಯಕ್ರಮವನ್ನು ಸಂಕ್ಷಿಪ್ತವಾಗಿ ನಮಗೆಲ್ಲರಿಗೂ ಕಟ್ಟಿಕೊಟ್ಟಿದ್ದೀರಿ. ಅದರಲ್ಲಿಯೂ ಒಂದು ಸಂದರ್ಭದಲ್ಲಿ ಅನಂತಮೂರ್ತಿಯವರ ಧ್ವನಿಯನ್ನೇ ಕಾಪಿಟ್ಟು ಆ ಕಾರ್ಯಕ್ರಮದಲ್ಲಿ ಉಪಯೋಗಿಸಿಕೊಂಡುದು ಹೃದಯಸ್ಪರ್ಶಿಯಾಗಿದೆ. ಬಹು ದೂರದ ನಗರವೊಂದರಲ್ಲಿ ಕನ್ನಡದ ಕೆಲಸವನ್ನು ಪ್ರತಿ ವರ್ಷವೂ ಒಂದು ವ್ರತದಂತೆ ಮಾಡುತ್ತಿರುವ ನಿಮಗೆ, ತುಂಬಾ ಪ್ರೀತಿಯಿಂದ ಅನಂತಮೂರ್ತಿಯವರ ಕಥೆಗಳನ್ನು ಜರ್ಮನ್ ಭಾಷೆಗೆ ಅನುವಾದಿಸಿರುವ ಪ್ರೊ. ಬ್ರೂಕ್ನರ್ ಮತ್ತು ಪ್ರೊ. ಬೈಂದರ್ ಅವರಿಗೆ, ಮತ್ತು ಅಲ್ಲಿರುವ ಇತರ ಕನ್ನಡಾಭಿಮಾನಿಗಳಿಗೆ ಅಭಿನಂದನೆಗಳು ಹಾಗೂ ಅನಂತ ಧನ್ಯವಾದಗಳು. ಸಿ. ಎನ್. ರಾಮಚಂದ್ರನ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: