ವಿಮಾನಕೂ ಹಚ್ಚಬೇಕು ಕೀಲೆಣ್ಣೆ!

ಕೇಶವರೆಡ್ಡಿ ಹಂದ್ರಾಳ

ಇತ್ತೀಚೆಗೆ ಸಪ್ನ ಬುಕ್ ಹೌಸ್ ಪ್ರಕಟಿಸಿದ ‘ಬೆರಕೆ ಸೊಪ್ಪು’ ಪ್ರಬಂಧ ಸಂಕಲನದ ಮೊದಲ ಪ್ರಬಂಧ ಇಲ್ಲಿದೆ.

1998 ರಿಂದ 2000 ರದವರೆಗೂ ನಾನು ಮೈಸೂರಿನಲ್ಲಿ ನಮ್ಮ ಇಲಾಖೆಯ ಇಂಟೆಲಿಜೆನ್ಸ್ ವಿಭಾಗದಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ಕೆಲಸ ಮಾಡುತ್ತಿದ್ದೆ. ಸಾಮಾನ್ಯವಾಗಿ ಸರ್ಕಾರಿ ಮತ್ತು ಖಾಸಗಿ ಇಲಾಖೆಗಳಲ್ಲಿ ಕೆಲಸ ಮಾಡುವ ಬಹುತೇಕ ಅಧಿಕಾರಿಗಳು ಬಹಳ ಗಂಭೀರವಾಗಿರುತ್ತಾರೆ. ಬೇರೆಯವರೊಂದಿಗೆ ಬೆರೆಯುವುದು, ಮಾತನಾಡುವುದು ಕಡಿಮೆ. ಬೆರೆತರೂ, ಮಾತನಾಡಿದರೂ ತಮ್ಮ ಲೆವೆಲ್ ಜನರೊಂದಿಗೆ ಮಾತ್ರವೆ. ಆದರೆ ನನಗೆ ಎಲ್ಲಿಯೂ ಅಂಥ ಬಿಗುವಿನ ವಾತಾವರಣ ಹಿಡಿಸುವುದಿಲ್ಲ.

ನಮ್ಮ ಕೆಲಸದೊಂದಿಗೆ ಮಾನವೀಯತೆ ಮತ್ತು ಸ್ವಲ್ಪ ವಿನೋದವೂ ಇದ್ದರೆ ನಮ್ಮ ಕೆಲಸಗಳು ಸುಗಮವಾಗಿರುವವಲ್ಲದೆ ಕೆಲಸದಲ್ಲಿ ಉಲ್ಲಾಸವೂ ಇರುತ್ತದೆ. ಅದನ್ನು ನಾನು ನನ್ನ ಸೇವೆಯ ಉದ್ದಕ್ಕೂ ಅನುಭವಿಸಿದ್ದೇನೆ ಕೂಡಾ. ಕೆಲವು ಅಧಿಕಾರಿಗಳು ಅದರಲ್ಲೂ ಐಎಎಸ್ ಅಧಿಕಾರಿಗಳು ಎಲ್ಲಾ ಕಾಲದಲ್ಲೂ ಸೂಟು ಬೂಟಿನಲ್ಲಿ ಮೆರೆಯುತ್ತಿರುತ್ತಾರೆ. ಏಕೆಂದರೆ ಇವರಿಗೆ ಮನೆ ಮತ್ತು ಕಚೇರಿ ಎರಡು ಕಡೆಗಳಲ್ಲೂ ಪುಗಸಟ್ಟೆ ಎ ಸಿ ಸೌಲಭ್ಯ ಇರುತ್ತಲ್ಲ! ನಾನು ಜೀವಮಾನದಲ್ಲಿಯೇ ಸೂಟು ತೊಟ್ಟವನಲ್ಲ. ಚಳಿಯನ್ನು ತಡೆದುಕೊಂಡರೂ ನನಗೆ ಸೆಕೆ ತಡೆದುಕೊಳ್ಳಲಾಗುವುದಿಲ್ಲ. ಹಾಗಾಗಿ ಬೇಸಿಗೆಯಲ್ಲಿ ತೊಟ್ಟಿರುವ ಶರ್ಟನ್ನೂ ಬಿಚ್ಚಿ ಬಿಸಾಡೋಣವೆನಿಸುತ್ತದೆ. ಅದಿರಲಿ, ಆಗ ನಮಗೆ ಜಾಯಿಂಟ್ ಕಮಿಷನರ್ ಆಗಿದ್ದವರು ಉದಯರಾಜ್ ನಾಯಕ್.

ಕೆಂಪಗೆ ತುಂಬಾ ಸ್ಮಾರ್ಟಾಗಿದ್ದರು. ತುಸು ಕೋಪ ಬಂದರೂ ಮುಖ ಮತ್ತಷ್ಟು ಕೆಂಪಾಗಿಬಿಡುತ್ತಿತ್ತು. ಅಂಕೋಲಾದವರು. ಅವರ ತಾತ ಸ್ವಾತಂತ್ರ್ಯ ಹೋರಾಟಗಾರರು. ಸಮಯ ಪಾಲಿಸುವುದರಲ್ಲಿ ಶಿಸ್ತಿನ ಸಿಪಾಯಿ. ಹಾಗಾಗಿ ಕೆಳಗಿನ ಅಧಿಕಾರಿಗಳು ಮೀಟಿಂಗ್ ಟೈಮಿನಲ್ಲಿ ಅರ್ಧ ಗಂಟೆ ಮೊದಲೇ ಹಾಜರಿದ್ದುಬಿಡುತ್ತಿದ್ದರು. ಅದೇ ಟೈಮಿನಲ್ಲಿ ಡೆಪ್ಯುಟಿ ಕಮಿಷನರ್ ಆಗಿ ಅತ್ತಿಹಳ್ಳಿ ದಾಸೇಗೌಡ ಇದ್ದರು. ಇವರು ಕನ್ನಡ ಲಿಟರೇಚರ್ ಸ್ಟೂಡೆಂಟ್ ಅಲ್ಲದೆ ಕುವೆಂಪುರವರ ಆಪ್ತ ಶಿಷ್ಯರಲ್ಲೊಬ್ಬರಾಗಿದ್ದವರು. ತುಂಬಾ ಸರಳ ಜೀವಿ. ಆದರೆ ಹಾಸ್ಯ ಪ್ರವೃತ್ತಿಯವರು. ಮಾತುಗಳಂತೂ ತುಂಬಾ ಮೆತುವು. ಆಗೀಗ ಬಿಡುವಿನ ಸಮಯದಲ್ಲಿ ಸಾಹಿತ್ಯದ ಚರ್ಚೆಯನ್ನೂ ಮಾಡುತ್ತಿದ್ದೆವು. ನಾನು ಸಾಮಾನ್ಯವಾಗಿ ಪ್ರತಿನಿತ್ಯ ಆಫೀಸಿಗೆ ಬಂದ ಕೂಡಲೇ ಡಿ. ಸಿ. ದಾಸೇಗೌಡರ ಚೇಂಬರಿಗೆ ಹೋಗಿ ಮಾತನಾಡಿಸಿಕೊಂಡು, ಅಲ್ಲೆ ಒಂದಿಷ್ಟು ಕಾಫಿ ಕುಡಿದು ಮುಂದಿನ ಕೆಲಸ ಕಾರ್ಯಗಳಲ್ಲಿ ತೊಡಗುತ್ತಿದ್ದದ್ದು.

ಒಂದು ದಿನ ಹಾಗೆ ಹೋದಾಗ ದಪ್ಪನೆಯ ಉದ್ದಕ್ಕೆ ಇದ್ದ ಸುಮಾರು ಐವತ್ತು ವರ್ಷಗಳ ಮೇಲ್ಪಟ್ಟ ವಯಸ್ಸಿನ ಹೆಂಗಸೊಬ್ಬರು ನಿಂತುಕೊಂಡೇ ದಾಸೇಗೌಡರ ಹತ್ತಿರ ಮಾತನಾಡುತ್ತಿದ್ದರು. ” ರೆಡ್ಡಿ ಇವ್ರು ಶೇಷಮ್ಮ ಅಂತ ನಮ್ಮಲ್ಲಿ ಇನ್ಸ್ಪೆಕ್ಟರ್. ಶ್ರೀರಂಗಪಟ್ಟಣ ಚೆಕ್ ಪಾಯಿಂಟ್ ನಲ್ಲಿ ಕೆಲ್ಸ ಮಾಡ್ತಿದ್ದಾರೆ. ಮಗಳು ಅಳಿಯ ಅಮೆರಿಕದಲ್ಲಿ ಇದಾರೆ. ಅಮೆರಿಕಕ್ಕೆ ಹೋಗೋದಕ್ಕೆ ಮೂರು ತಿಂಗಳು ರಜ ಕೇಳಲು ಬಂದಿದಾರೆ.” ಎಂದು ಅವರನ್ನು ಪರಿಚಯ ಮಾಡಿಕೊಟ್ಟಿದ್ದರು. ನಾನು ” ಕೂತ್ಕೊಳಿ ಮೇಡಮ್.” ಎಂದು ಪಕ್ಕದಲ್ಲಿದ್ದ ವುಡೆನ್ ಚೇರ್ ತೋರಿಸಿದ್ದೆ. ಅವರು ಕೂರಲಾರದೆ ಚೇರ್ ಮೇಲೆ ಕುಳಿತಿದ್ದರು. ರಜ ಸ್ಯಾಂಕ್ಷನ್ ಮಾಡಿಸಲು ದಾಸೇಗೌಡರು ಒಷ್ಪಿದ್ದರು. ಈಗಾಗಲೇ ಒಮ್ಮೆ ಅಮೆರಿಕಕ್ಕೆ ಹೋಗಿ ಬಂದಿದ್ದ ಶೇಷಮ್ಮನವರು ಅಮರಿಕದ ಬಗ್ಗೆ ಸುಮಾರು ವಿಷಯಗಳನ್ನು ಹೇಳಿದ್ದರು. ಅಲ್ಲಿ ಮಗಳ ಮನೆಯಲ್ಲಿ ಮಟನ್ ಸಾರು ಮತ್ತು ಮುದ್ದೆ ಮಾಡುತ್ತಿದ್ದರ ಬಗ್ಗೆ ಸ್ವಾರಸ್ಯಕರವಾಗಿ ಹೇಳಿದ್ದರು. ದಾಸೇಗೌಡರು ವಿಮಾನದಲ್ಲಿ ಕಾಲಿಟ್ಟವರೇ ಅಲ್ಲ. ನಾನೇನೋ ಅಷ್ಟರಲ್ಲಿ ಇಲಾಖೆಯ ಕೆಲಸದ ಮೇಲೆ ಒಮ್ಮೆ ಹೈದರಾಬಾದ್ ಗೆ ಹೋಗಿ ಬಂದಿದ್ದೆ. ದಾಸೇಗೌಡರು ಕಾಫಿ ಕುಡಿಯುತ್ತಾ ” ಮೇಡಮ್ ವಿಮಾನದಲ್ಲಿ ನೀವು ಎಲ್ಲಿ ಕೂತ್ಕೊತಿರಾ.” ಎಂದು ಕೇಳಿದ್ದರು. ಶೇಷಮ್ಮನವರು “ಎಲ್ಲಿ ಸೀಟು ಸಿಕ್ತದೋ ಅಲ್ಲೆ ಕೂತ್ಕೊಬೇಕು ಸಾ.” ಎಂದಿದ್ದರು. “ವಿಮಾನದಲ್ಲಿ ನಮ್ಮ ಎತ್ತಿನಗಾಡಿ ತರ ಹಿಂಭಾರ, ಮುಂಭಾರ ಆಗಿ ಲೆಗ್ಗೆಗಿಗ್ಗೆ ಎದ್ದೋಳಲ್ವಾ.” ಎಂದಿದ್ದರು. ಶೇಷಮ್ಮ ನಗುತ್ತಾ “ಸಾ ಎಷ್ಟು ಟ್ರೈ ಮಾಡಿದ್ರೂ ಒಂದಿಂಚೂ ಸಣ್ಣ ಆಗೋಕೆ ಆಗ್ಲಿಲ್ಲ ಸಾ. ಎಲ್ಲಾ ಸರಿ ಸಾ, ಅದೇನೋ ಮಟನ್ ಅಂದ್ರೆ ಬಾಯಿ ಕಟ್ಟೋಕೆ ನನ್ನಿಂದಾಗಲ್ಲ ಸಾ.” ಎಂದು ಹೊರಡಲು ಎದ್ದು ನಿಂತರು. ಅವರು ಕುಳಿತಿದ್ದ ವುಡನ್ ಚೇರ್ ಕೂಡಾ ಅವರೊಂದಿಗೆ ಎದ್ದು ನಿಂತಿತ್ತು! ಶೇಷಮ್ಮನವರು ಶರೀರವನ್ನು ಸ್ವಲ್ಪ ಒದರಿದ ಮೇಲೆ ಚೇರ್ ಕೆಳಕ್ಕೆ ಬಿದ್ದಿತ್ತು.

ಶೇಷಮ್ಮನವರು ಮುಜುಗರದಿಂದಲೇ ಹೊರಹೋಗಿದ್ದರು. ಅಟೆಂಡರ್ ಬಂದು ಬಿದ್ದ ಚೇರನ್ನು ಸರಿಯಾಗಿ ಎತ್ತಿಟ್ಟಿದ್ದ. ದಾಸೇಗೌಡರು. ” ರೀ ರೆಡ್ಡಿ ಶೇಷಮ್ಮನೋರಿಗೆ ನಾನೇಕೆ ಕೂತ್ಕೊಳ್ಳೋಕೆ ಹೇಳಿರ್ಲಿಲ್ಲ ಅಂತ ಈಗ ತಿಳಿತಾ. ನಿಮಗೆ ಮಾತ್ರ ಹೆಣ್ಮಕ್ಕಳ ಮೇಲೆ ಪ್ರೀತಿ, ಗೌರವ ಇದೆ ಅಂದ್ಕೊಂಡ್ರ. ನಾನೂ ನಿಮ್ಮಂಗೆ ಹಳ್ಳಿಗಾಡಿನವನೇ ಕಣ್ರಿ. ಚೇರ್ ಹೋದ್ರೆ ಹೋಗ್ಲಿರೀ, ಅಕಸ್ಮಾತ್ ಕೂತಾಗ ಚೇರ್ ಮುರ್ದು ಶೇಷಮ್ಮ ಉರುಳ್ಕೊಂಡಿದ್ರೆ ಯಾರೆತ್ತಾಕಾಗ್ತಿತ್ರಿ. ಅವ್ರು ಅಮೆರಿಕಕ್ಕೆ ಹೋಗ್ದಿದ್ರೆ ಮಗಳಿಗೆ ಬಾಣಂತನ ಯಾರ್ ಮಾಡೋದ್ರಿ.” ಎಂದು ಹುಸಿಕೋಪ ತೋರಿದ್ದರು. ಅಮೆರಿಕಕ್ಕೆ ಹೋಗುವ ಮೊದಲು ಶೇಷಮ್ಮನವರು ನನ್ನನ್ನು ಮತ್ತು ದಾಸೇಗೌಡರನ್ನು ಮನೆಗೆ ಊಟಕ್ಕೆ ಕರೆದಿದ್ದರು. ಮುದ್ದೆ, ಮಟನ್ ಸಾರು, ಕೈಮ ಗೊಜ್ಜು. ಆಹಾ ರುಚಿಯೋ.. ಮಾರನೆಯ ದಿನವೂ ಕೈ ಘಮ್ ಎನ್ನುತ್ತಿತ್ತು! ಇನ್ನು ಶೆಷಮ್ಮನವರಾದರೂ ಹೇಗೆ ಸಣ್ಣಗಾದಾರು!!

ಇನ್ನೊಂದು ದಿನ ಬೆಳಿಗ್ಗೆ ಹತ್ತೂವರೆ ಗಂಟೆಯಲ್ಲಿ ನಾನು ಮತ್ತು ನನ್ನ ಇನ್ನೊಬ್ಬ ಸಹೋದ್ಯೋಗಿ ಸುಜೀಂದ್ರ ರಾಜ್ ದಾಸೇಗೌಡರ ಚೇಂಬರಿನಲ್ಲಿ ಕಾಫಿ ಕುಡಿಯುತ್ತಾ ಕುಳಿತಿರಬೇಕಾದರೆ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ವಸಂತಮ್ಮ ಎಂಬ ಹೆಂಗಸು ಜೋರಾಗಿ ಬಿಕ್ಕಳಿಸಿಕೊಂಡು ಅಳುತ್ತಾ ಚೇಂಬರನ್ನು ಪ್ರವೇಶಿಸಿದ್ದಳು. ನಮಗೆ ಗಾಬರಿಯಾಗಿತ್ತು. ಯಾವಾಗಲೂ ನಗುನಗುತ್ತಾ ಕೆಲಸದಲ್ಲಿ ತೊಡಗುತ್ತಿದ್ದ ವಸಂತಮ್ಮ ದುಃಖದಿಂದ ಅಳಲು ಕಾರಣವೇನಿರಬಹುದೆಂದು ಅಚ್ಚರಿಯಾಗಿತ್ತು.

ಆಯಮ್ಮನಿಗೆ ನಾಲ್ಕು ಜನ ಮಕ್ಕಳು ಮತ್ತು ಒಬ್ಬ ಕುಡುಕ ಗಂಡ ಇದ್ದರು. ಆಫೀಸಿನಿಂದ ತಿಂಗಳಿಗೆ ಆರು ಸಾವಿರ ಸಂಬಳ ಕೊಡುತ್ತಿದ್ದರು. ನಾವು ಹತ್ತು ಜನ ಅಧಿಕಾರಿಗಳು ಪ್ರತಿ ತಿಂಗಳೂ ಮಕ್ಕಳ ವಿಧ್ಯಾಭ್ಯಾಸಕ್ಕೆಂದು ತಲಾ ಇನ್ನೂರು ರೂಪಾಯಿಗಳನ್ನು ಆಕೆಗೆ ಕೊಡುತ್ತಿದ್ದೆವು. ಕಪ್ಪಗೆ, ದಪ್ಪಕ್ಕೆ ಇದ್ದ ಆವಮ್ಮನಿಗೆ ಹಲ್ಲುಬ್ಬಿತ್ತು. ಕಚೇರಿಯಲ್ಲಿನ ಕ್ಲೀನಿಂಗ್ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಳು. ದಾಸೇಗೌಡರು ಮೆಲ್ಲಿಗೆ ” ಏನಾಯ್ತಮ್ಮ, ಹೇಳು ನಿನ್ನ ಪ್ರಾಬ್ಲಂ ಏನು. ಸಮಾಧಾನಮಾಡ್ಕೊಂಡು ಮಾತನಾಡು.” ಎಂದಿದ್ದರು.

ವಸಂತಮ್ಮ” ಸಾರ್ ದೊಡ್ಸಾಹೇಬ್ರು ಇವೊತ್ತಿಂದ ಕೆಲಸಕ್ಕೆ ಬರ್ಬೇಡ ಅಂದ್ ಬಿಟ್ರು ಸಾರ್, ನಾನು ಮಕ್ಕುಳ್ನ ಯಂಗ್ ಸಾಕ್ಲಿ ಸಾರ್, ನೀವೇ ಕಾಪಾಡ್ಬೇಕು ಸಾರ್..” ಎಂದು ಬಿಕ್ಕಳಿಸುತ್ತಲೇ ಮಾತನಾಡಿದ್ದಳು. ನಡೆದದ್ದು ಇಷ್ಟೆ. ಆಕೆಯ ಚಿಕ್ಕ ಮಗುವಿಗೆ ಜ್ವರ ಬಂದಿದ್ದ ಕಾರಣ ಆವಮ್ಮ ಎರಡು ಮೂರು ದಿನ ನಮ್ಮ ಜಾಯಿಂಟ್ ಕಮಿಷನರ್ ಉದಯರಾಜ್ ನಾಯಕ್ ರವರು ಬಂದು ಅರ್ಧ ಗಂಟೆ ಮೇಲಾದರೂ ಆಫೀಸಿಗೆ ಬಂದಿರಲಿಲ್ಲ. ಶಿಸ್ತಿಗೆ ಹೆಸರಾಗಿದ್ದ ನಾಯಕರು ಏನನ್ನೂ ವಿಚಾರಿಸದೆ ” ನೀನು ಟೈಮಿಗೆ ಸರಿಯಾಗಿ ಬರ್ತಾ ಇಲ್ಲ. ಹಾಗಾಗಿ ಕೆಲಸಕ್ಕೆ ಬರಬೇಡ, ಬೇರೆಯವರನ್ನು ನೇಮ್ಕ ಮಾಡ್ಕೊತಿನಿ.” ಎಂದು ರೇಗಿಬಿಟ್ಟಿದ್ದರಂತೆ. ಹಾಗೆ ಹೇಳಿದ್ದೇ ತಡ, ಏನೂ ತೋಚದೆ ಅಲ್ಲಿಂದ ದಾಸೇಗೌಡರ ಚೇಂಬರಿಗೆ ಓಡಿಬಂದಿದ್ದಳು.

.ಬಿಕ್ಕಳಿಸುತ್ತಾ ನಿಂತಿದ್ದ ವಸಂತಮ್ಮನಿಗೆ ದಾಸೇಗೌಡರು ಸಮಾಧಾನ ಹೇಳಿ ನನ್ನ ಕಡೆಗೆ ತಿರುಗಿ ” ರೆಡ್ಡಿ, ಸಾಹೇಬ್ರಿಗೆ ಹೇಳ್ರಿ. ಇವ್ರು ಏಳೆಂಟು ವರ್ಷಗಳಿಂದ ಇಲ್ಲೆ ಕೆಲ್ಸ ಮಾಡ್ತ ಇದಾರಂತೆ, ಈಗ ಸಡನ್ನಾಗಿ ತೆಗೆದಾಕಿದ್ರೆ ಏನ್ಮಾಡ್ತಾರ್ರಿ ಪಾಪ. ನಿಮ್ಮ ಮಾತ್ನ ಸಾಹೇಬ್ರು ತೆಗೆದಾಕಲ್ಲ.” ಎಂದಿದ್ದರು. ನಾಯಕ್ ಸಾಹೇಬರು ನಾನು ಈ ಇಲಾಖೆಗೆ ಬರುವುದಕ್ಕಿಂತ ಮೊದಲಿನಿಂದಲೂ ನನ್ನ ಕಥೆಗಳ ಅಭಿಮಾನಿಯಾಗಿದ್ದರಿಂದ ನನ್ನ ಜೊತೆ ಸ್ವಲ್ಪ ಸಲುಗೆಯಿಂದಲೇ ಮಾತನಾಡುತ್ತಿದ್ದರು. ನಾನು ವಸಂತಮ್ಮನಿಗೆ ” ಒಂದು ಕೆಲ್ಸ ಮಾಡ್ತೀಯೇನಮ್ಮ.” ಎಂದೆ. ” ಅದೇನೇಳಿ ಸಾಹೇಬ್ರೆ ನನ್ ಮಕ್ಕಳಾಣೆಗೂ ಮಾಡ್ತೀನಿ.” ಎಂದು ಬಿಕ್ಕಳಿಸುತ್ತಲೇ ಹೇಳಿದ್ದಳು. ” ಸಾಹೇಬ್ರು ಚೇಂಬರ್ನಲ್ಲಿ ಒಬ್ರೆ ಇದ್ದಾಗ ಹೋಗಿ ಗಟ್ಟಿಯಾಗಿ ತಬ್ಕೊ ಬಿಡಮ್ಮ. ಮತ್ತೆ ಕೆಲ್ಸಕ್ಕೆ ಬನ್ನಿ ಅನ್ನೋವರ್ಗೂ ಬಿಡ್ಬೇಡ..” ಎಂದಿದ್ದೆ. ಬಿಕ್ಕಳಿಸುತ್ತಿದ್ದ ವಸಂತಮ್ಮ ಪಕ್ಕನೆ ನಕ್ಕುಬಿಟ್ಟಳು. ಕಾಫಿ ಕುಡಿಯುತ್ತಿದ್ದ ಸುಜೀಂದ್ರ ರಾಜು ನಗುವಿನಿಂದ ಕೈ ಸೋತು ಹೋಗಿ ಒಂದಿಷ್ಟು ಕಾಫಿಯನ್ನು ಪ್ಯಾಂಟ್ ಮೇಲೆ ಚೆಲ್ಲಿಕೊಂಡಿದ್ದರು. ದಾಸೇಗೌಡರು ಮಂಕು ಬಡಿದವರಂತೆ ನೋಡುತ್ತಿದ್ದರು. ಮತ್ತೆ ನಾನೇ ಮಾತನಾಡಿದ್ದೆ : ” ಇನ್ನೊಂದರ್ಧ ಗಂಟೆ ಆದ್ಮೇಲೆ ನಾನು ಸಾಹೇಬ್ರ ಚೇಂಬರಿಗೆ ಹೋಗಿ ಮಾತನಾಡಿ ನಿನ್ನ ಕರಿಸ್ತೀನಮ್ಮ, ನೀನು ತಪ್ಪಾಯ್ತು ಅಂತ ಕೇಳ್ಕೊ. ಸಾಹೇಬ್ರ ಮಾತು ಜೋರಷ್ಟೆ, ಮನಸ್ಸು ತುಂಬಾ ಮೃದು. ಸುಮ್ಮನೆ ಹೆದ್ರಿಸಿದ್ದಾರೆ. ನಿಮ್ಮನ್ನ ಕೆಲಸದಿಂದ ತೆಗೆದು ಅವರು ಯಾವ ನರಕಕ್ಕೆ ಹೋಗ್ಬೇಕು..” ಎಂದು. ವಸಂತಮ್ಮನಿಗೆ ನನ್ನ ಮಾತಿನ ಮೇಲೆ ಭರವಸೆ ಮೂಡಿ ” ಆಯ್ತು ಸಾಹೇಬ್ರೆ..” ಎಂದು ಗೆಲುವಾಗಿಯೇ ದಾಸೇಗೌಡರ ಚೆಂಬರಿನಿಂದ ಹೊರ ಹೋಗಿದ್ದಳು. ದಾಸೇಗೌಡರು ” ಎಂಥ ಐಡಿಯಾ ಕೊಡ್ತಿಯಾ ಮಾರಾಯ ನೀನು, ಇನ್ನು ಸಾಹೆಬ್ರು ಉಸ್ರ್ಗಿಸ್ರು ಕಟ್ಕಂಡು ಒದ್ದಾಡ್ಲಿ ಅಂತಾನ..” ಎಂದು ನಕ್ಕಿದ್ದರು. ಸುಜೀಂದ್ರ ರಾಜು ” ಅಯ್ಯಪ್ಪ..” ಎಂದು ತಮ್ಮ ಚೇಂಬರಿಗೆ ತೆರಳಿದ್ದರು.

ಅರ್ಥಶಾಸ್ತ್ರದ ವಿಧ್ಯಾರ್ಥಿಯಾದ ಮತ್ತು ಹಳ್ಳಿಗಾಡಿನ ರೈತ ಕುಟುಂಬದಲ್ಲಿ ಹುಟ್ಟಿದ ನನಗೆ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಮಹಿಳೆಯರದು ಎಂಥ ಮಹತ್ವದ ಪಾತ್ರವಿದೆಯಂಬ ಸತ್ಯ ತಿಳಿಯದ್ದೇನಲ್ಲ. ಇವೊತ್ತಿಗೂ ಮಹಿಳೆಯಿರಿಲ್ಲದೆ ಕೃಷಿ ಬದುಕನ್ನಾಗಲೀ, ನಗರದ ಬದುಕನ್ನಾಗಲೀ ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ತಾಯಿ ಸತ್ತರೆ ಮಾತ್ರ ಮಕ್ಕಳು ಅನಾಥವಾಗುತ್ತವೆಯೇ ಹೊರತು ತಾಯಿ ಇದ್ದು ತಂದೆ ಸತ್ತ ಮಕ್ಕಳು ಯಾವೊತ್ತಿಗೂ ಅನಾಥರಾಗಲಾರರು ಎಂಬ ಸತ್ಯವನ್ನು ನನ್ನ ಕಥೆ, ಲೇಖನಗಳಲ್ಲಿ ನಿರೂಪಿಸಿಕೊಂಡು ಬಂದವನು ನಾನು.

ಮುಂಬಯಿಯ ನಾಗ್ಪಾಡ್ ಮತ್ತು ಕಲ್ಕತ್ತಾದ ಸೋನಾಗಾಚಿ ಎಂಬ ಕಾಮಾಟಿಪುರಗ (Red light areas) ಳಲ್ಲಿ ಒಂದು ಸುತ್ತು ಹೊಡೆದರೆ ಹೆಣ್ಣುಮಕ್ಕಳು ತಮ್ಮ ತಂದೆ, ತಾಯಿ, ಮಕ್ಕಳು ಮತ್ತು ಗಂಡಂದಿರನ್ನು ಸಾಕಲು ತಮ್ಮ ದೇಹಗಳನ್ನೇ ಮಾರುವ ಪರಿ ಕಣ್ಣಿಗೆ ಬಿದ್ದು ಹೆಣ್ಣು ಎಂಥಾ ತ್ಯಾಗಮಯಿ ಎನ್ನುವ ವಾಸ್ತವ ಸಾಕ್ಷಾತ್ಕಾರಗೊಳ್ಳುತ್ತದೆ. ಮತ್ತು ನೌಕರಿ ಮಾಡುವ ಮಹಿಳೆಯರು ಸಹ ಕೆಲಸದ ಸ್ಥಳಗಳಲ್ಲಿ ಮತ್ತು ಮನೆಗಳಲ್ಲಿ ತಮ್ಮ ಕರ್ತವ್ಯಗಳನ್ನು ನಿಭಾಯಿಸುವಾಗ ಅವರು ಅನುಭವಿಸುವ ಯಾತನೆಗಳಿಗೆ ಮಿತಿಯೇ ಇರುವುದಿಲ್ಲ. ಹಾಗಾಗಿಯೇ ಹೆಣ್ಣು ಒಂದು ರೀತಿಯಲ್ಲಿ ಭೂಮಿಯಂತೆಯೇ ಸರಿ.

ಇನ್ನು ಬಡತನದಲ್ಲಿ ಹುಟ್ಟುವ ಕೆಲವು ಮಹಿಳೆಯರಿಗಂತೂ ಬದುಕು ಯಮಯಾತನೆಯೇ ಆಗಿರುತ್ತದೆ. ವಸಂತಮ್ಮ ಕೂಡಾ ಅಂಥ ಒಬ್ಬ ಹೆಣ್ಣು ಮಗಳೇ ಆಗಿದ್ದಳು. ಆಕೆಯ ಮನದ ದುಗುಡವನ್ನು ಹೋಗಲಾಡಿಸಿ ಒಂದಿಷ್ಟು ಉಲ್ಲಾಸವನ್ನು ತುಂಬಲು ಆ ರೀತಿಯ ತಮಾಷೆಯ ಮಾತುಗಳನ್ನು ಹೇಳಿದ್ದೆ.

ಇಪ್ಪತ್ತು ನಿಮಿಷಗಳ ನಂತರ ಜಂಟಿ ಆಯುಕ್ತರ ಚೇಂಬರ್ ಕಡೆ ನಡೆದಿದ್ದೆ. ಹೊರಗೆ ಚೆಂಬರ್ ಬಾಗಿಲಿನ ಬಳಿಯೇ ವಸಂತಮ್ಮ ನಿಂತಿದ್ದರು. ಒಳಹೋದಾಗ ಉದಯರಾಜ್ ನಾಯಕರು ” ಬನ್ನಿ ಹಂದ್ರಾಳ್, ಕಾಫಿ ಕುಡಿಯೋಣವಾ.” ಎಂದಿದ್ದರು. ನಾನು ಕುಳಿತುಕೊಳ್ಳುತ್ತಾ ” ಬೇಡಿ ಸಾರ್ ಡಿ. ಸಿ ಸಾಹೇಬರ ಚೇಂಬರ್ ನಲ್ಲಿ ಈಗ ತಾನೆ ಆಯ್ತು.” ಎಂದಿದ್ದೆ. ” ಇನ್ನೇನು ಸಮಾಚಾರ ” ಎಂದಾಗ ” ಹೌಸ್ ಕೀಪಿಂಗ್ ವಸಂತಮ್ಮ ಅಳ್ತಾ ಇದಾಳೆ ಸಾರ್ ಪಾಪ, ನೀವು ಇವೊತ್ತಿಂದ ಕೆಲಸಕ್ಕೆ ಬೇಡ ಅಂದ್ರಂತೆ.” ಎಂದೆ. ” ಏನು ಶಿಫಾರಸ್ಸ, ಜವಾಬ್ದಾರಿ ಬೇಡ್ವ ಆ ಲೇಡಿಗೆ. ಐದಾರು ದಿವಸ ನೋಡಿದ್ದೀನಿ ಲೇಟಾಗಿ ಬಂದಿರೋದನ್ನ. ಅದನ್ನೇ ಹ್ಯಾಬಿಟ್ ಮಾಡ್ಕೊಂಡ್ರೆ ಹೇಗೆ.” ಎಂದಿದ್ದರು. ನಾನು ಆಕೆಯ ಮಗುವಿಗೆ ಹುಷಾರಿಲ್ಲದ ವಿಷಯದಿಂದ ಹಿಡಿದು ಎಲ್ಲವನ್ನೂ ಹೆಳಿದ್ದೆ. ” ಮೊದ್ಲೆ ಯಾಕೆ ಹೇಳಿಲ್ಲ ಆಕೆ.” ಎಂದಿದ್ದರು. ” ನಿಮ್ಮನ್ನು ಕಂಡ್ರೆ ಆಫೀಸರ್ರುಗಳಿಗೇನೆ ಭಯ, ಇನ್ನು ಆವಮ್ಮನಿಗೆ ಸಾರ್..” ಎಂದಿದ್ದೆ.” ಭಯ ಹಿಡ್ಲಿಕ್ಕೆ ಹಾಗೆ ಹೇಳಿದ್ದೆ.” ಎಂದಿದ್ದರು.

ಯಾವುದೋ ಪೈಲು ಹಿಡಿದು ಬಂದ ಅಟೆಂಡರ್ ಗೆ ವಸಂತಮ್ಮನನ್ನು ಒಳ ಕರೆಯಲು ಹೇಳಿದ್ದೆ. ವಸಂತಮ್ಮ ಬಂದವಳು ” ತಪ್ಪಾಯ್ತು ಸ್ವಾಮಿ, ಇನ್ಮೇಲೆ ಲೇಟ್ ಮಾಡಲ್ಲ.” ಎಂದು ಕೈ ಮುಗಿಯುತ್ತಾ ನಿಂತಿದ್ದಳು. ಸಾಹೇಬರು ಜೇಬಿಗೆ ಕೈ ಇಟ್ಟು ಐನೂರು ರೂಪಾಯಿ ತೆಗೆದು ವಸಂತಮ್ಮನಿಗೆ ಕೊಟ್ಟು ” ಮಗೂನ ಡಾಕ್ಟರ್ ಶಾಪಿಗೆ ಕರೆದುಕೊಂಡು ಹೋಗಿ ತೋರ್ಸು, ಗಂಡನ ಕೈಗೆ ಕಾಸು ಕೊಟ್ಬಿಟ್ಟೀಯ. ಮತ್ತೆ ಇನ್ಮೇಲೆ ಕೆಲಸಕ್ಕೆ ಮಾತ್ರ ಲೇಟಾಗ್ಬಾರ್ದು.” ಎಂದು ಎಚ್ಚರಿಸಿದ್ದರು. ” ಆಯ್ತು ಸ್ವಾಮಿ.” ಎಂದು ವಸಂತಮ್ಮ ಮುಖ ಅರಳಿಸಿಕೊಂಡು ಹೊರಹೋಗಿದ್ದಳು. ಇದಾಗಿ ತಿಂಗಳಾದ ಮೇಲೆ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಪಾರ್ಟಿ ಮಾಡುತ್ತಿರುವಾಗ ಒಂದು ಬಿಯರ್ ಕಂಪ್ಲೀಟ್ ಮಾಡಿದ್ದ ದಾಸೇಗೌಡರು ವಸಂತಮ್ಮನ ಘಟನೆಯನ್ನು ಮತ್ತು ಆವಮ್ಮನಿಗೆ ನಾನು ಕೊಟ್ಟಿದ್ದ ಐಡಿಯಾವನ್ನು ಉದಯರಾಜ್ ನಾಯಕರ ಬಳಿ ಹೇಳಿಬಿಟ್ಟಿದ್ದರು. ಒಂದು ಪೆಗ್ ವಿಸ್ಕಿ ಕುಡಿದಿದ್ದ ನಾಯಕರ ಮುಖ ಕೆಂಪಾಗಿತ್ತಲ್ಲದೆ ನಕ್ಕು ನಕ್ಕು ಕಣ್ಣಲ್ಲಿ ಬುಳಬುಳನೆ ನೀರು ಕಿತ್ತುಕೊಂಡಿತ್ತು!

ಉದಯರಾಜ್ ನಾಯಕ್ ಅಡಿಷನಲ್ ಕಮಿಷನರ್ ಆಗಿ, ದಾಸೇಗೌಡರು ಜಾಯಿಂಟ್ ಕಮಿಷನರ್ ಆಗಿ, ನಾನು ಡೆಪ್ಯುಟಿ ಕಮಿಷನರ್ ಆಗಿ ನಿವೃತ್ತಿ ಹೊಂದಿದ್ದೇವೆ. ಮೂವರೂ ಆರೋಗ್ಯದಿಂದಲೇ ಇದ್ದೇವೆ. ಇದುವರೆಗೂ ನಾನು ಸೂಟ್ ಹಾಕಿಲ್ಲ ಮತ್ತು ದಾಸೇಗೌಡರು ವಿಮಾನವನ್ನು ಹತ್ತಿಲ್ಲ ಎಂಬ ಸಂಗತಿಗಳಂತೂ ನೂರಕ್ಕೆ ನೂರು ಸತ್ಯವಾದದ್ದು! ಶೇಷಮ್ಮ ಮತ್ತು ವಸಂತಮ್ಮನವರ ಸಂಗತಿಗಳಂತೂ ಗೊತ್ತಿಲ್ಲ. ಆದರೆ ನೆನಪುಗಳಂತೂ ಮಾಸಿಹೋಗಿಲ್ಲ.

‍ಲೇಖಕರು Admin

May 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: