ತಂಪಾದ ಹೊತ್ತಲ್ಲಿ, ಕೆಂಪಾದೆವು ನಾವು !

ದೇಶಾದ್ರಿ ಹೊಸ್ಮನೆ

ದಿನ, ಸಮಯದ ಬಗ್ಗೆ ಹತ್ತಾರು ಕತೆಗಳಿವೆ. ನಂಬಿಕೆ, ಅಪನಂಬಿಕೆಗಳು ಇವೆ. ಮಂಗಳವಾರ ಅಂದ್ರೆ ಅದೇನೋ ಒಳ್ಳೆಯ ಕೆಲಸ ಬೇಡ ಅನ್ನುವರು ಇದ್ದಾರೆ. ಗುರುವಾರ ರಾಯರ ವಾರ, ಶುಕ್ರವಾರ ಶುಭದಿನ. ಶನಿವಾರ ಆಂಜನೇಯನ ವಾರ. ಇತ್ಯಾದಿ ಬಗೆಯಲ್ಲಿ ನಂಬಿಸಲಾಗಿದೆ. ನಂಗೇನು ಅಂತಹ ನಂಬಿಕೆ ಇಲ್ಲದಿದ್ದರೂ, ಕೆಲವು ಸಮಯಗಳು ತುಂಬಾ ಕಾಕತಾಳೀಯ ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಇದೆ. ಅಂತಹದೇ ಒಂದು ಘಟನೆ ಇಂದು ಆಯಿತು. ಅದಕ್ಕೆ ಸಾಕ್ಷಿ ಈ ಕೆಂಪು ಕಲರವ.

ಶಿವಮೊಗ್ಗದ ಮಟ್ಟಿಗೆ ಕಾಮ್ರೆಡ್‌ ಲಿಂಗಪ್ಪ ಅಂದ್ರೆ ಕೆಂಪು. ಬೇಕಾದ್ರೆ ಈ ಚಿತ್ರದಲ್ಲಿಯೇ ನೋಡಿ, ಅವರು ತಲೆಗೆ ಹಾಕಿರುವ ಹ್ಯಾಟ್‌ ಕೆಂಪು. ಕೋಟು ಕೆಂಪು. ಕಪ್ಪು ಶೋಗೆ ಬಳಿಸಿದ ಸಾಕ್ಸ್‌ ಕೂಡ ಕೆಂಪು. ಕೆಂಪಿನ ಮೇಲೆ ಅವರಿಗ್ಯಾಕೆ ಅಷ್ಟು ಮೋಹ ಅಂದರೆ ಅವರು ಒಬ್ಬ ಕಮ್ಯುನಿಷ್ಟ್.‌ ನಂಗೂ ಕೆಂಪು ಅಂದ್ರೆ ತುಂಬಾನೆ ಇಷ್ಟ. ಅದ್ಯಾಕೆ ಅಂತಹ ಹೆಚ್ಚೇನು ವಿಶೇಷತೆ ಇಲ್ಲ, ಅದಕ್ಕೊಂದೇ ಕಾರಣ ಹೋರಾಟದ ನಂಟು. ಅದೇ ಕಾರಣಕ್ಕೆ ನನ್ನವರು ತುಂಬಾನೆ ಪ್ರೀತಿಸುತ್ತಿದ್ದರು. ಕಾಳಜಿ ತೋರುತ್ತಿದ್ದರು. ಅಕ್ಕರೆಯಿಂದ ಮಾತನಾಡಿಸುತ್ತಿದ್ದರು. ಸಿಕ್ಕಾಗೆಲ್ಲ ಅಷ್ಟೇ ಪ್ರೀತಿಯಿಂದ ಹೋಟೆಲ್‌ ಗೆ ಕರೆದುಕೊಂಡು ಹೋಗಿ ಚಹಾ, ತಿಂಡಿ ತಿನ್ನಿಸುತ್ತಿದ್ದರು. ಆದರೆ ನಾನು ಬೆಂಗಳೂರಿಗೆ ಹೋದ ನಂತರ ಅವರನ್ನು ಭೇಟಿ ಮಾಡುತ್ತಿದ್ದ ದಿನಗಳು, ಅವರೊಂದಿಗೆ ಚಹಾ ಕುಡಿಯುತ್ತಾ ಮಾತನಾಡುತ್ತಿದ್ದ ಸಮಯಗಳು, ಅವರು ಕೆಲವರನ್ನು ಬೈಯುತ್ತಿದ್ದ ಕ್ಷಣಗಳನ್ನು ಮಿಸ್‌ ಮಾಡಿಕೊಂಡಿದ್ದೆ. ಅವರು ಕೂಡ ನನ್ನನ್ನು ಮರೆತೇ ಬಿಟ್ಟಿದ್ದರೇನೋ, ಆದರೆ ಅವರ ನೆನಪಾದಾಗೆಲ್ಲ ನನಗೆ ಅವರೊಂದಿಗೆ ಒಂದು ಫೋಟೋವಾದರೆ ಇಲ್ಲವೇ ಎಂದು ಕೊರಗುತ್ತಿದ್ದೆ. ಇವತ್ತು ಅದಕ್ಕೆ ಕಾಲ ಕೂಡಿ ಬಂತು. ಅದು ಕೂಡಯ ಇಬ್ಬರು ಈ ಕೆಂಪು ನೆನಪಿನೊಳಗೆಯೇ ಸಿಕ್ಕು ಬಿಟ್ಟೆವು. ಇದೊಂಥರ ಕಾಕತಾಳೀಯ.

ಮಂಗಳವಾರ ಮಧ್ಯಾಹ್ನ ಎಲ್ಲೆಲ್ಲೂ ಮೋಡ ಕವಿದ ವಾತಾವರಣ. ಸಣ್ಣಗೆ ಮಳೆ ಜಿಗುತ್ತಿತ್ತು. ಸ್ನೇಹಿತರೊಬ್ಬರನ್ನು ಭೇಟಿ ಮಾಡಲು ನಾನು ಸ್ಕೂಟಿಯಲ್ಲಿ ಹೊರಟಿದ್ದಾಗ ಶಿವಮೊಗ್ಗದ ಆರ್‌ ಟಿ ಓ ಕಚೇರಿ ಅವರು ರಸ್ತೆ ದಾಟುತ್ತಿದ್ದರು. ಹಿಂಭಾಗದಿಂದಲೇ ಅವರ ಗುರುತು ಸಿಕ್ಕಿತು. ತಕ್ಷಣವೇ ರಸ್ತೆ ಪಕ್ಕದಲ್ಲಿ ಸ್ಕೂಟಿ ನಿಲ್ಲಸಿ, ಅವರ ಮುಂದೆ ಬಂದು ನಿಂತು, ಸರ್‌ ..ಹೇಗಿದ್ದೀರಿ ಎಂದೆ. ಅದಕ್ಕವರು, ಯಾರು ಗೊತ್ತಾಗ್ಲಿಲ್ಲ ಅಂದ್ರು. ನಾನ್‌ ಸರ್‌, ದೇಶಾದ್ರಿ ಅಂದು ಪರಿಚಯಿಸಿಕೊಂಡೆ. ತಕ್ಷಣವೇ,ʼ ಬಾರೋ ಮಾರಾಯ, ಎಷ್ಟು ದಿನ ಆಯ್ತು, ನಿನ್ನ ನೋಡ್ದೆʼ ಅಂದವರೆ, ಪಕ್ಕದಲ್ಲಿ ನಿಲ್ಲಿಸಿಕೊಂಡು ಮತ್ತದೇ ಪ್ರೀತಿಯಿಂದ ಮೈದಡಿ ಮಾತನಾಡಿಸಿದರು.ʼ ಏನ್‌ ಮಾಡ್ಕೊಂದ್ದೀಯಾ, ಎಲ್ಲಿದ್ದೀಯಾ, ಹೇಗಿದ್ದೀಯಾ ಅಂತೆಲ್ಲ ವಿಚಾರಿಸಿ, ಪಕ್ಕದಲ್ಲಿದ್ದ ಅರಸ್‌ ಹೋಟೆಲ್‌ ಗೆ ಕರೆದುಕೊಂಡು ಹೋದರು.

ಇಬ್ಬರು ಅಲ್ಲಿ ಕುಳಿತು ಬಜ್ಜೆ ತಿಂದು ಟೀ ಕುಡಿದೆವು. ಅಲ್ಲಯ್ಯ, ನಾನ್‌ ನಿಂಗೆ ಬಾರೋ, ನನ್‌ ಪೇಪರ್‌ ನಡೆಸ್ಕೊಂಡು ಅಂತ ಹೇಳಿರಲಿಲ್ಲವೇ? ಬರ್ತೀನಿ ಅಂದವ್ನು .. ಎಲ್ಲಿಗೆ ಹೋಗಿದ್ದೀಯಾ .. ಅಂತೆಲ್ಲ ಕೇಳಿದರು. ಒಂದಷ್ಟು ಹೊತ್ತು ಹೀಗೆ ಮಾತುಕತೆ ನಡೆಯಿತು. ಅಷ್ಟೊತ್ತಿಗೆ ವೈಟರ್‌ ಬಿಲ್‌ ತಂದು ಕೊಟ್ಟರು. ನಾನದನ್ನು ತೆಗೆದುಕೊಂಡು ಕ್ಯಾಷಿಯರ್ ಹತ್ತಿರ ಹೋಗುತ್ತಿದ್ದಂತೆ ಕಾಮ್ರೆಡ್‌ ಸಿಟ್ಟಾಗಿ, ವೈಟರ್‌ ಗೆ ಅವಾಜ್‌ ಹಾಕಿದ್ರು.ʼ ಅಲ್ಲಯ್ಯ, ನೀನು ಅವ್ನಿಗೆ ಯಾಕೆ ಬಿಲ್‌ ಕೊಟ್ಟಿ, ನಾನಿಲ್ವಾ, ಇನ್ನೊಂದು ಬಿಲ್‌ ಕೊಡು ಇಲ್ಲಿ ಅಂದವರೆ, ಅದನ್ನು ತೆಗೆದುಕೊಂಡು ಕ್ಯಾಷಿಯರ್‌ ಗೆ ಕೊಟ್ಟರು.‌ ಅಲ್ಲಿಂದ ಅವರ ಸ್ನೇಹಿತರೊಬ್ಬರ ಕಚೇರಿ ಹೋದೆವು. ಒಂದಷ್ಟು ಹೊತ್ತು ಅಲ್ಲಿ ಮಾತನಾಡಿದ ನಂತರ ಬರ್ತೀನಿ ಸರ್‌, ಅಂತ ನಾನು ಅಲ್ಲಿಂದ ಹೊರಟೆ. ಆಯ್ತು ಹೊರಡು ಅಂದ್ರು. ಅಲ್ಲಿಂದ ಹೊರಟಾಗ, ಆಗಾಗ ಸಿಕ್ತೀರಪ್ಪ… ಸಿಗೋಣ ಅಂದು ಹಾರೈಸಿದರು.

ನಾನ್ಯಾರೋ, ಅವ್ರು ಯಾರೋ, ಆದರೂ ನನ್ನನ್ನು ಅಷ್ಟು ಪ್ರೀತಿಯಿಂದ ಮಾತನಾಡಿಸುವ ಅವರ ಪ್ರೀತಿ ಅಕ್ಕರೆಗೆ ನಾನು ತುಂಬಾನೆ ಅಬಾರಿಯಾಗಿರುವೆ. ಇಲ್ಲಿ ಅವರ ಬಗ್ಗೆ ಯಾರಿಗೆ ಹೇಗೆ ಎಷ್ಟು ಭಿನ್ನಾಭಿಪ್ರಾಯಗಳಿಯೋ, ಎಷ್ಟು ಜನಕ್ಕೆ ಅವರು ಮಿತ್ರರೋ, ಶತ್ರುಗಳೋ ಗೊತ್ತಿಲ್ಲ. ನನ್ನ ಪಾಲಿಗೆ ಅವರು ಸರಿ ಸುಮಾರು ೨೦ ವರ್ಷಗಳಿಂದ ತಾಯಿ ಮಮತೆಯಂತಹ ನಿಷ್ಕಲ್ಮಶ ಪ್ರೀತಿಯಿಂದ ಮಾತನಾಡಿಸುವ, ಅಕ್ಕರೆಯಿಂದ ವಿಚಾಸಿರುವ ಒಬ್ಬ ಹಿರಿಯ ಜೀವಿ. ಹಾಗಾಗಿ ಇಷ್ಟೆಲ್ಲ ನಿಮ್ಮೊಂದಿಗೆ ಹಂಚಿಕೊಂಡಿರುವೆ. ಅವರೀಗ ೯೭ ವರ್ಷ. ಈಗಲೂ ಯಾರ ಆಶ್ರಯ ಬೇಡದೆ ೨೦ರ ಯುವಕನಂತೆ ತಿರುಗಾಡುತ್ತಾರೆ. ಅವರಿಗೆ ಇನ್ನಷ್ಟು ಆಯಸ್ಸು, ಆರೋಗ್ಯ ಸಿಗಲಿ ಎನ್ನುವುದು ನನ್ನ ಪ್ರಾರ್ಥನೆ.

‍ಲೇಖಕರು Admin

May 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: