ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಮರ್ಶೆಯ ವರ್ತಮಾನ ಈ ‘ನುಡಿ ಚಿಗುರು’

ಡಾ ಎ.ರಘುರಾಂ ಅವರ ‘ನುಡಿ ಚಿಗುರು’

ಈ ಕೃತಿಯ ಕುರಿತ ಡಾ ರವಿಶಂಕರ್ ಎ.ಕೆ ಅವರ ಒಂದು ಬರಹ ಇಲ್ಲಿದೆ.

-ಡಾ ರವಿಶಂಕರ್ ಎ.ಕೆ

ಕನ್ನಡದ ಮೊದಲ ಕೃತಿಗಳಾದ ಪಂಪನ ಕಾವ್ಯಗಳೇ ಮೊದಲ ವಿಮರ್ಶಾ ಕೈಪಿಡಿಗಳು. ಇದನ್ನು ತಿಳಿಯಲು ಕವಿರಾಜಮಾರ್ಗದ ಸೂಕ್ಷ್ಮ ಅಧ್ಯಯನವು ನಮಗೆ ಲಭಿಸಿರಬೇಕು. ವಿಮರ್ಶೆಯ ಪ್ರಯೋಗವು ಕವಿರಾಜಮಾರ್ಗದಲ್ಲಿ ಕಾವ್ಯ, ಕವಿ ಮೊದಲಾದ ಮಾರ್ಗದಲ್ಲಿ ಚರ್ಚಿಸಲಾಗಿತ್ತು. ಆದರೆ, ಒಂದು ಕಾವ್ಯವನ್ನು ವರ್ತಮಾನದೊಂದಿಗೆ ಗ್ರಹಿಸುವ ನೋಟಗಳು ಪಂಪನವರೆಗೂ ನಡೆದಿರಲಿಲ್ಲ. ರನ್ನನ ಕಾವ್ಯಗಳೂ ಭವ್ಯ ವಿಮರ್ಶೆಗಳೇ ಆಗಿವೆ. ನಾಗಚಂದ್ರ, ವಚನಕಾರರು, ಹರಿಹರ, ಲಕ್ಷ್ಮೀಶ, ಕುಮಾರವ್ಯಾಸ ಮೊದಲಾದಂತೆ ವಿಮರ್ಶೆಯನ್ನು ಜನಮಾನಸಕ್ಕೂ ತಂದು ಕಾವ್ಯಕುತೂಹಲವನ್ನು ಸರಳಗೊಳಿಸಿದವರು. ಸಂಸ್ಕೃತದ ಭವ್ಯತೆಯನ್ನು ಕನ್ನಡದ ದೇಸಿಯತೆಗೆ ಅಳವಡಿಸಿದವರು.

ಈ ಸ್ವರೂಪದಲ್ಲಿಯೆ ಹಲವು ವಿಮರ್ಶಾ ವ್ಯಾಖ್ಯಾನಗಳು ನಮಗೆ ಲಭಿಸುತ್ತವೆ. ಭಾರತೀಯ ಕಾವ್ಯಮೀಮಾಂಸೆಯೇ ನಮ್ಮ ಮಣ್ಣಿನ ಅಸ್ತಿತ್ವ. ಇಲ್ಲಿ ವಿಮರ್ಶೆಯ ಸೂಕ್ಷ್ಮ ಅಧ್ಯಯನಗಳ ಮಹಾಪರ್ವವೇ ವಿಕಾಸಗೊಂಡಿದೆ. ವಿಮರ್ಶೆಯ ಪದವನ್ನು ಪಾಶ್ಚಾತ್ಯ ಧೋರಣೆಗಳಿಂದ ಸ್ವೀಕರಿಸಿ, ಅದೇ ಕಣ್ಣಿನಿಂದ ನೋಡುತ್ತಾ ಬಂದ ನಮಗೆ ಇಂದು ವಿಮರ್ಶೆ ಎಂಬುದು ಅನಗತ್ಯ ಕ್ಷೇತ್ರ ಎನಿಸಿರಬಹುದು. ಆದರೆ, ವಿಮರ್ಶೆಯನ್ನು ಆತ್ಮಗತ ಸ್ವೀಕಾರದಲ್ಲಿ ಕೃತಿಜನ್ಯವಾಗಿ ಜ್ಞಾನಮೃತಗೊಳಿಸುವ ಒಂದೆರಡು ಪುಟಗಳನ್ನು ಓದಿದರೂ ಸಾಕು ವಿಮರ್ಶೆಯ ಜೀವಂತಿಕೆಯು ಗೋಚರಿಸುತ್ತದೆ.  

ವರ್ತಮಾನದ ಓದುಗಳನ್ನು ಸೂಕ್ಷ್ಮಗೊಳಿಸುವ ವಿಮರ್ಶಾಕೃತಿಗೆ ಎ. ರಘುರಾಂ ಅವರು ‘ನುಡಿ ಚಿಗುರು’ ಎಂಬ ಶೀರ್ಷಿಕೆ ನೀಡಿದ್ದಾರೆ. ಇದು ಈ ಕಾಲದ ಓದುವಿನ ಗಂಭೀರ ಚಹರೆಯ ಮೂರ್ತರೂಪ. ಒಂದು ಕೃತಿಯನ್ನು ಹೇಗೆ ಓದಬೇಕು, ಆ ಓದುವಿನ ಮೂಲಕ ತೆರೆದುಕೊಳ್ಳುವ ಹಲವು ಓದುಗಳ ಮಾರ್ಗ ಯಾವುದು ಎಂಬ ಜಿಜ್ಞಾಸೆಗಳಿಗೆ ಈ ಕೃತಿಯು ಉತ್ತರಿಸುತ್ತದೆ. ಉತ್ತರಿಸುವ ಮುನ್ನ ನಮ್ಮೊಳಗೆ ಅಂತಹ ಪ್ರಶ್ನೆಗಳನ್ನು ಸೃಷ್ಟಿಸುತ್ತದೆ. ಪಥ ಯಾವುದೇ ಇರಲಿ, ಪದ ನಮ್ಮದಾಗಲಿ ಎಂಬಂತೆ ನಮ್ಮೊಳಗಿನ ಚಿಂತನೆಗಳಿಗೆ ಪುಷ್ಠಿಕೊಡುವ ಮಾರ್ಗದರ್ಶಿ ಬರಹಗಳ ಸಂಕಲವೇ ಈ ವಿಮರ್ಶಾ ಕೃತಿಯಾಗಿದೆ. 

ಡಾ. ಎ. ರಘುರಾಂ ಅವರ ‘ನುಡಿ ಚಿಗುರು’ ಕನ್ನಡ ಸಾಹಿತ್ಯದ ಅರ್ಥಪೂರ್ಣ ವಿಮರ್ಶಾಕೃತಿಯಾಗಿದೆ. ವಿಮರ್ಶೆಯು ಕೃತಿಯೊಂದರ ವಿಭಿನ್ನ ಅನಾವರಣ ಸ್ವರೂಪಿ ಕಲೆ. ಆ ಕಲೆಯ ಅಭಿವ್ಯಕ್ತಿಯನ್ನು ಸರಿಯಾಗಿ ಗ್ರಹಿಸಲು ಆಳವಾದ ಅಧ್ಯಯನ, ಕೃತಿಯೋದುಗಳ ಅನುಭವ, ಸಮಗ್ರೀಯ ಬದುಕು ಇವೆಲ್ಲವೂ ಪಾಕಗೊಂಡಾಗ ಮಾತ್ರ ವಿಮರ್ಶೆಯು ಹದಗೊಳ್ಳುತ್ತದೆ. ‘ನುಡಿ ಚಿಗುರು’ ಕೃತಿಯ ಯಾವುದೇ ಒಂದು ಲೇಖನವನ್ನು ಓದುವ ಪ್ರತಿಯೊಬ್ಬರಿಗೂ ವಿಮರ್ಶೆಯ ಹೊಸ ವ್ಯಾಖ್ಯಾನಗಳು ದೊರೆಯುತ್ತವೆ. ವಿಮರ್ಶೆ ಎಂದರೇನು, ಒಂದು ಕೃತಿ ವಿಮರ್ಶೆಗೊಳ್ಳುವುದು ಹೇಗೆ ಎಂಬ ಬಹುಶಿಸ್ತೀಯ ಅಧ್ಯಯನವು ಏಕಮುಖವಾಗಿ ಲಭ್ಯವಾಗುತ್ತದೆ.

ಈ ಕೃತಿಯಲ್ಲಿ ಇಪ್ಪತ್ತು ಲೇಖನಗಳು ಮೂರು ನೋಟಗಳಲ್ಲಿ ಕೇಂದ್ರಿಕೃತವಾಗಿವೆ. ಕೃತಿ, ಕೃತಿಕಾರರು, ಪರಿಕಲ್ಪನಾತ್ಮಕ ಪ್ರವೇಶ ಈ ಬಗೆಯಲ್ಲಿ ನಮ್ಮ ಓದುವು ಹದಗೊಳ್ಳಲು ಸ್ವತಂತ್ರ ಅಭಿವ್ಯಕ್ತಿಗಳಿವೆ. ಹಿನ್ನುಡಿಕಾರರಾದ ರಘುನಾಥ ಚ.ಹ ಅವರ ಗ್ರಹಿಕೆಯಂತೆ “ಕನ್ನಡ ವಿವೇಕ’ ಹಾಗೂ ಅದರ ಭಾಗವಾದ ವಿಮರ್ಶಾ ವಿವೇಕವನ್ನು ಹಲವು ನಿದರ್ಶನಗಳ ಮೂಲಕ ಗುರ್ತಿಸುವ ವಿಶಿಷ್ಟ ಪ್ರಯತ್ನ.”ವಾಗಿದೆ. ಈ ದಶಕದ ಅತ್ಯುತ್ತಮ ವಿಮರ್ಶಾಕೃತಿಯಾಗಿ ಪೂರ್ವನೋಟದ ತಲ್ಲಣ ಹಾಗೂ ಲೋಕೋತ್ತರಗಳನ್ನು ಸರಳವಾಗಿ ತೆರೆದಿಟ್ಟಿದೆ. ಒಂದು ಕವಿತೆ, ಕೃತಿ ಹಾಗೂ ರಚನಕಾರರ ಭವ್ಯತೆಯನ್ನು ಸೈದ್ಧಾಂತಿಕ ನಿಲುವುಗಳಿಲ್ಲದೆ ಚರ್ಚಿಸುವ ಅರ್ಥಪೂರ್ಣ ಕೃತಿ ಇದು.

‍ಲೇಖಕರು Admin

20 May, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading