ವಿಕ್ರಮ ಬಿ ಕೆ ನೋಡಿದ ‘ಡೇರ್ ಡೆವಿಲ್ ಮುಸ್ತಫಾ’

ವಿಕ್ರಮ ಬಿ ಕೆ

ʻಕನ್ನಡ ಮೂವೀ ಮಗ… ಬಹಳ ಚೆನ್ನಾಗೈತೆ ಅಂತೆ… ಡಾಲಿ… ಧನುಂಜಯ ಕಡೆಯವರ ಮೂವೀ ಅಂತೆ…ʼ

ಸ್ಕ್ರೀನ್ ನಂಬರ್ 2ರ ಪಕ್ಕ ಪಾಪ್‌ಕಾರ್ನ್‌ ಕೊಡ್ತಿರೋ ಸಿಬ್ಬಂದಿ ಮಾತಾಡ್ತ ಇದ್ದದ್ದು ನನ್ನ ಕಿವಿಗೆ ಬಿತ್ತು. ಗೋಪಾಲನ್ ಸಿನಿಮಾಸ್ ಅಲ್ಲಿ ಜನ ತುಂಬಿದ್ರು, ವ್ಯಾಪಾರ ಭರ್ಜರಿ ನಡೀತಾ ಇತ್ತು. ಫ್ಯಾಮಿಲಿ ಸಮೇತ ಬಂದ ಸಿನಿಮಾ ಪ್ರಿಯರು ಒಂದೊಳ್ಳೆ ಸಿನಿಮಾ ನೋಡಲು ಸಜ್ಜಾಗಿದ್ದರು.

ಪೂರ್ಣಚಂದ್ರ ತೇಜಸ್ವಿ ಅವರ ವಿಡಿಯೋ ತೆರೆಮೇಲೆ ಕಂಡ ಕ್ಷಣ, ಸಾಹಿತ್ಯ ಅಭಿಮಾನಿ ಆದ ನನಗೆ ವಾಹ್ – ‘ಇದು ಇಷ್ಟಪಟ್ಟು ಸಿನಿಮಾ ಮಾಡೋದು ಅಂದ್ರೆ, ಇದು ನಿಜವಾದ ಅಭಿಮಾನಿಗಳ ಪ್ರೀತಿ ಅಂದ್ರೆ’ ಅನಿಸ್ತಾ ಇತ್ತು. ಹಿಂದೆ ಸೀಟಲ್ಲಿ ಕೂತ ಮಗ ತನ್ನ ತಂದೆಗೆ ʻಅಪ್ಪಾ ಯಾರಿದು, ಏನು ಅಂತಿದ್ದಾರೆʼ ಅಂತ ಕೇಳ್ತಾ ಇದ್ದಾಗ ಮನಸ್ಸಲ್ಲಿ ʻಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಅಪ್ಪ ತನ್ನ ಮಗನ ಮೂಲಕ ಹೂವ ಅರಳಿಸುವಲ್ಲಿ ತೊಡಗಿದ್ದಾನೆ, ಮತ್ತು ನಾನು ಆ ಕ್ಷಣಗಳಿಗೆ ಸಾಕ್ಷಿ ಆಗಿದ್ದೇನೆ, ಚಿತ್ರಮಂದಿರದಲ್ಲಿʼ. ಇಲ್ಲಿ ಒಂದು ಕಲೆ ಗೆಲ್ಲುತ್ತದೆ.

ಟ್ರೈಲರ್ ನೋಡಿ, ಸಿನಿಮಾ ನೋಡಲೇಬೇಕು ಅಂತ ಹೋದವನಿಗೆ ಟ್ರೈಲರ್‌ಗಿಂತ ಖುಷಿ ಜಾಸ್ತಿ ಕೊಟ್ಟಿದ್ದು ಶಿಶಿರ್ ನಟನೆ. ಪಾತ್ರಕ್ಕೆ ತಕ್ಕ ಹಾಗೆ ಎಲ್ಲಾ ನಟ, ನಟಿಯರು ಅದೆಷ್ಟು ಚೆಂದ ತಮ್ಮ ಪಾತ್ರಗಳನ್ನು ನಿಭಾಯಿಸಿದ್ದಾರೆ. ಪುಸ್ತಕ ಓದಿ ಬಂದವರು ಇವರೆಲ್ಲರ ನಟನೆ ನೋಡಿ ತಮ್ಮ ಕಲ್ಪನೆಗೂ ಮೀರಿ ಅಬಚೂರಿನ ಬದುಕನ್ನು ಅನುಭವಿಸುತ್ತಾರೆ. ನಿಜ ಇಲ್ಲಿ ಆಯತಾಕಾರದ ಬೆಳ್ಳಿತೆರೆಯ ಮಿತಿ ನಮಗೆ ಗೊತ್ತೇ ಆಗೋಲ್ಲ. ಅಷ್ಟು ಚೆಂದದ ನಿರ್ದೇಶನ, ತಕ್ಕ ಹಾಗೆ ಸಂಗೀತ ಮತ್ತು DOP ಇಂದ ಊರ ಚಿತ್ರಣ.

ರೋಸ್ ಕುಕ್ಕೀಸ್, ಶರಬತ್, ಶಂಕಪೊಳಿ – ಹಸಿವನ್ನು ಹೆಚ್ಚಿಸೋದು ಗ್ಯಾರಂಟಿ. ಅದರ ಜೊತೆಗೆ ನಮ್ಮ ಬಾಲ್ಯ ನೆನಪಾಗೋದು ಅಷ್ಟೇ ಗ್ಯಾರಂಟಿ. ನಗಿಸುವ ಡೈಲಾಗ್ – ಮತ್ತೆ ಸ್ವಲ್ಪಹೊತ್ತಲ್ಲಿ ಗಂಟಲು ಕಟ್ಟಿಕೊಳ್ಳುವಸ್ಟು ಭಾವ ಸೃಷ್ಟಿ ಆಗುತ್ತಿರುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ, ಸಣ್ಣ ಸಣ್ಣ ವಿಷಯಗಳನ್ನ ಬಹಳ ಎಚ್ಚರದಿಂದ ತೋರಿಸಿದ್ದಾರೆ. ಅದು ಊರೂ – ಶಾಲೆ – ಮನೆ – ಓಣಿ ಚಿತ್ರಿಸಲು ಬಳಸಿರುವ ಪ್ರಾಪರ್ಟೀಸ್ ಇರಲಿ, ಪಾತ್ರಗಳಿಗೆ ಬೇಕಾಗಿರುವ ಅಭಿನಯ ಆಗಲಿ, ಡೈಲಾಗ್ಸ್ ಆಗಲಿ ಎಲ್ಲಾ ಸೂಪರ್!

ಶಿಶಿರ್ ಬೈಕಡಿ – ಮುಸ್ತಫಾ ಹೀರೋ ಆಗಿ ಮಿಂಚಿದರೆ, ಆದಿತ್ಯ ಅಶ್ರೀ ರಾಮಾನುಜಂ ವಿಲನ್ ಆಗಿ ಮಿಂಚಿದ್ದಾರೆ. ವಿಲನ್ ಆಗಿ ಅಬ್ಬರದ ಡೈಲಾಗ್ ಅಲ್ಲ, ಕಣ್ಣನೋಟದಲ್ಲಿ ನಮ್ಮನ್ನು ಕಾಡುತ್ತಾರೆ. ಅದಕ್ಕೆ ತದ್ವಿರುದ್ಧವಾಗಿ ಮುಸ್ತಫಾರ ಮುಗ್ಧತೆ ನಿಮ್ಮನ್ನು ಕರಗಿಸಿಬಿಡುತ್ತದೆ. ಮುಸ್ತಫಾ ಕನ್ನಡದಲ್ಲಿ ಪಂಪನ ಸಾಲುಗಳನ್ನು ಓದುವ ಮೂಲಕ – ಸ್ಟೀರಿಯೋಟೈಪ್ ಅನ್ನು ಮುರಿಯುತ್ತಾರೆ. ಇವರಿಬ್ಬರ ಅಭಿನಯಕ್ಕೆ ಸಾವಿರದ ಶರಣು. ಶಶಾಂಕ್ ಸೋಗಲ್ – ಕನ್ನಡದವರಿಗೆ ಬೇಕಾಗಿರುವ ನಿರ್ದೇಶಕ. ಕನ್ನಡ ಸಾಹಿತ್ಯದ ಒಂದು ಉತ್ತಮ ಕತೆಯನ್ನು ಸಿನಿಮಾ ಮಾಡಿ, ಇವರು ನಿಜವಾದ ʻಕರ್ನಾಟಕ ಸ್ಟೋರಿʼ ಹೇಳ ಹೊರಟ ಯಶಸ್ಸು ಇವರಿಗೆ ದಕ್ಕಿದೆ. ಹಿಂದೆ ಪುಟ್ಟಣ್ಣ ಕಣಗಾಲ್ ಕಾದಂಬರಿ ಆಧಾರಿತ ಸಂದೇಶ, ಕಾಂಪ್ಲೆಕ್ಸ್ ಭಾವಗಳು, ಮನೋರಂಜನೆ ಜೊತೆಗೆ ತೆರೆಮೇಲೆ ಸಿನಿಮಾ ಮೂಲಕ ಯಶಸ್ಸನ್ನು ಕಂಡಿದ್ದನ್ನು ನೆನಪಿಸಿಕೊಳ್ಳುತ್ತೇನೆ.

ಇಲ್ಲಿ ʻಜೈ ಶ್ರೀರಾಮ್ʼ ಕೂಗು ಕೇಳಲಿಲ್ಲ, ʻಭಾರತ್ ಮಾತಾ ಕೀ ಜೈʼ ಮೊಳಗಲಿಲ್ಲ. ಇಲ್ಲಿ ಯಾರೂ ಪ್ರಮುಖರಾಗಲಿಲ್ಲ, ಯಾರೂ ಅಮುಖ್ಯರಾಗಲಿಲ್ಲ. ಸಿನಿಮಾ ಮುಗಿದಮೇಲೆ ಜನ ಎದ್ದು ನಿಂತು ಜೋರಾಗಿ ಚಪ್ಪಾಳೆ ಹಾಕಿದರು. ಹೊರಬಂದು ಎಲ್ಲರ ಮುಖ ನೋಡುತ್ತಿದ್ದೆ, ಎಲ್ಲರ ಮೊಗದಲ್ಲೂ ಹೂವ ಅರಳುತ್ತಿದ್ದವು. ಅವು ಅದೇ ತೋಟದಿಂದ ಬೆಳೆದ ಗಿಡಗಳದ್ದು.

‍ಲೇಖಕರು avadhi

May 22, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: