ರೂಪಾ ಮಂಜಪ್ಪಅರೆ ಎಲ್ಲೋ ಕೇಳಿದ ಪದ ಅಂತ ಅನ್ನಿಸುವ ಪದ, ಆದರೆ ಇದನ್ನು ಕೇಳಿರುವುದಕ್ಕಿಂತ ಯಾರಿಗೂ ಕೇಳಬಾರದು ಎಂದು ಬಚ್ಚಿಡುವುದೇ ಹೆಚ್ಚು.. ಹೇಳಿಕೊಳ್ಳೋಣ ಎಂದು ಯಾವುದಾದರು ಒಂದು ಹೆಣ್ಣು ಜೀವ ಮನಸು ಮಾಡಿದರೆ ಒಳ್ಳೆಯದಕ್ಕಿಂತ ಹೆಚ್ಚಾಗಿ ಅವಳ ಧೈರ್ಯವನ್ನ ಕುಗ್ಗಿಸುವ ಸಮಾಜ…
ಇದನ್ನೇ ಬಂಡವಾಳ ಮಾಡಿಕೊಳ್ಳುವ ಕೆಟ್ಟ ಹುಳುಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರೆ ತಪ್ಪಾಗಲಾರದು. ನಮ್ಮ ಮನೆಯ ಮಗಳೆ ಆಗಲಿ ಅಥವಾ ನಿಮ್ಮ ಮನೆಯ ಮಗಳ ಕಥೆಯಾಗಲಿ, ಯಾರದ್ದೇ ಮನೆಯಲ್ಲೂ ಹತ್ತರಲ್ಲಿ ಒಂದು ಮಗಳ ಮಡಿಲಿನಲ್ಲಿ ಇಂಥದೊಂದು ಕ್ರೂರ ಕಥೆಯಿರುವುದಂತು ನಿಜಾ.
ಯಾವುದೋ ಕೆಲಸದ ನಿಮಿತ್ತ ಹೊರಟ ಹೆಣ್ಣು ಜೀವ, ಬಸ್ಸಿನ ಒಂದು ಮೂಲೆಯ ಸೀಟ್ ನಲ್ಲಿ ಕುಳಿತುಕೊಂಡಿತ್ತು ಎಂದುಕೊಳ್ಳಿ, ಸರಿಯಾದ ಸಮಯ, ಜಾಗ ನೋಡಿ ಅಲ್ಲೊಬ್ಬ ಕೆಟ್ಟ ಹುಳ ಬಂದು ಅದೇ ಹೆಣ್ಣಿನ ಪಕ್ಕ ಕೂರುತ್ತಾನೆ. ಅವನ ತಲೆಯೊಳಗೆ ಅಡಗಿರುವ ಕೆಟ್ಟ ಆಸೆ ಅರಿಯದ ಆ ಹೆಣ್ಣು ಜೀವ ತನ್ನದೇ ಲೋಕದಲ್ಲಿತ್ತು ಎಂದುಕೊಳ್ಳಿ.. ನೆಮ್ಮದಿಯಿಂದ ಕುಳಿತಿತ್ತು.

ಹೀಗಿರುವಾಗಲೆ ಪಾಪಿ ತನ್ನ ಕೈ ಬಳಸಿ ಕೆಟ್ಟ ಆಸೆಯಿಂದ ಆಟವಾಡತೊಡಗಿದ, ನೋಡುವವರ ಕಣ್ಣಿಗೆ ಮಹಾಪುರುಷನಂತೆ ಕೈ ಕಟ್ಟಿ ಕುಳಿತಿದ್ದರೂ, ಒಂದು ಹೆಣ್ಣಿನ ಪಕ್ಕ ಕುಳಿತಾಗ, ಹುಡುಗಿಯೋ, ಆಂಟಿಯೋ, ತಂಗಿಯೋ, ಅಕ್ಕನೋ, ಅಮ್ಮನದೇ ವಯಸ್ಸಿನವಳು ಎಂದು ಯೋಚಿಸದೆ ತನ್ನ ಕೈ ಬೆರಳುಗಳಿಂದ ಆಕೆಯ ದೇಹದ ಭಾಗಗಳನ್ನು ಮುಟ್ಟಲು ಪ್ರಯತ್ನಿಸಿದ ಎಂದಿಟ್ಟುಕೊಳ್ಳಿ..
ಅದರಿಂದ ತಪ್ಪಿಸಿಕೊಳ್ಳಲು ಏನೇನೋ ಉಪಾಯ ಮಾಡಿ, ಮುದುಡಿಕೊಂಡು ಕೂತರೂ, ಪದೇ ಪದೇ ಅಷ್ಟು ಜಾಗವನ್ನು ಆಕ್ರಮಿಸಿ ಕೂತು, ಹೇಗಾದರೂ ಮಾಡಿ ಈ ಮಾಂಸದ ಮುದ್ದೆಯನ್ನು ಮುಟ್ಟಲೇ ಬೇಕು ಎಂದುಕೊಂಡಿದ್ದನೇನೊ, ಅದಕ್ಕೆ ಪದೇ ಪದೇ ಕಟ್ಟಿದ ಕೈ ಬೆರಳುಗಳನ್ನು ಸುಮ್ಮನಿರಲು ಬಿಡದೆ, ಕಾಟ ಕೊಡುತ್ತಿದ್ದ. ಎದ್ದು ಎಲ್ಲರೆದುರು ಆ ಪಾಪಿ ಕೆನ್ನೆಗೆ ಬಾರಿಸಬೇಕು ಎಂದು ಅನಿಸಿದರೂ, ಮಾನಕ್ಕಾಗಿ ಅಂಜಿಯೋ ಅಥವಾ ಇನ್ನಾವುದೋ ಭಯಕ್ಕೊ ಸುಮ್ಮನಿದ್ದ ಆ ಜೀವ, ಯಾರಿಗೆ ಹೇಗೆ ತಾನೆ ಆಕೆ ಹೇಳುತ್ತಾಳೆ.
ಈ ವಿಕೃತ ಜೀವಿಗಳ ಕಥೆ ಇಲ್ಲಿಗೆ ಮುಗಿಯುವುದಲ್ಲ, ದಾರಿಯಲ್ಲಿ ಊರುದ್ದದ ಜಾಗವಿದ್ದರೂ ಮೈ ಮೇಲೆ ಬಿದ್ದು ನಡೆಯುವವರೆಷ್ಟೋ, ಹೆಣ್ಣಿನ ಮುಖ, ಮನಸನ್ನು ಬಿಟ್ಟು ಬೇರೆಲ್ಲವನ್ನ ಚೆನ್ನಾಗಿ ನೋಡಿ ಸವಿಯುವವರೆಷ್ಟೋ, ಕೊನೆಗೂ ತಮ್ಮ ಆಸೆಗಳನ್ನು ತಡೆಯಲಾಗದೇ ಮೈ ಮೇಲೆರಗಿ ತಮ್ಮ ವಿಕೃತ ರೂಪವನ್ನ ಜಗತ್ತಿಗೆ ತೋರಿಸಿದವರೆಷ್ಟೋ, ಇಂತವರಿಗೆ ಹಸುಗೂಸು, ಶಾಲೆಗೆ ಹೋಗುವ ಪುಟ್ಟ ಬಾಲೆ, ಅಜ್ಜಿ, ಆಂಟಿ ಯಾರದರು ಓಕೆ, ಒಟ್ಟಿನಲ್ಲಿ ತಮ್ಮ ಅಸಹ್ಯದ ಚಟ ಈಡೇರಿಸಿಕೊಳ್ಳಬೇಕಷ್ಟೇ.
ಇಂತಹ ವಿಕೃತ ಮನಸಿನವರ ಮಧ್ಯೆ ನಾವು ನೀವು ಬದುಕುತ್ತಿರುವಾಗ ಏನು ಮಾಡುತ್ತೇವೆ. ಇಂಥದ್ದೇ ಹಲವು ಸಂದರ್ಭಗಳನ್ನು ನಮ್ಮ ಬಳಿ ಆತ್ಮೀಯರು ಹೇಳಿಕೊಂಡಾಗ, ನೋವನ್ನು ಹೊರ ಹಾಕಿದಾಗ ನಮಗೆ ಅಷ್ಟು ಅಸಹ್ಯ ಎನಿಸಿದ್ದರೆ ಇಂಥದ್ದನ್ನು ಅನುಭವಿಸಿದ ಜೀವಗಳದೆಷ್ಟು ಕಷ್ಟ ಪಟ್ಟಿರಬೇಕು. ಯಾರ ಬಳಿಯೂ ಹೇಳಲಾಗದೆ ಕೊರಗಿ ಕೊರಗಿ ಕೂತವರು ಅದಿನ್ನೆಷ್ಟು ನಾ ಕಾಣೆ, ಜಗತ್ತಿಗೆ ಗೊತ್ತಾದ ಪ್ರಕರಣಗಳು ಒಂದಷ್ಟು ಆದರೆ, ಕತ್ತಲ ಕೋಣೆಯೊಳಗೆ ಕೊರಗಿ ಸೊರಗಿ ಸತ್ತವರು, ಸಾಯುತ್ತಿರುವವರು ಅದಿನ್ನೆಷ್ಟು!.
ಆದರೆ, ಅದೇ ಕತ್ತಲಿನ ವಿಕೃತ ರೂಪ ಕೊಟ್ಟ ನೋವಿನ ಅನುಭವ ಅನುಭವಿಸಿದವರಿಗೆ ಗೊತ್ತು.. ಬ್ಯಾಡ್ ಟಚ್ ಎನ್ನುವುದು, ಅನುಭವವಾದಾಗಲೆ ತಿಳಿಯಬೇಕು ಎಂದಿಲ್ಲ, ಅದರ ನೆರಳಿನಿಂದಲೆ ತಿಳಿಯಬಹುದು.
ಹಲವು ಬಾರಿ ನಮ್ಮ ಸುತ್ತಮುತ್ತ ಸಿಗುವ ಸನ್ನೆಗಳನ್ನು ಅರಿತು ಎಚ್ಚರವಾಗಬೇಕಿದೆ, ನಾವು ಅರಿತು ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು, ಜೊತೆಯಲ್ಲಿ ಏನು ಅರಿಯದ ಮಕ್ಕಳು ಇಂತಹ ಬ್ಯಾಡ್ ಟಚ್ ಅರಿವಿಲ್ಲದೆ ದುರುಪಯೋಗವಾಗಿಬಿಟ್ಟಿರುತ್ತವೆ, ಎಲ್ಲರಿಗೂ ಎಚ್ಚರ ವಹಿಸುವ ಕರೆ ಕೊಡುವುದರ ಜೊತೆಗೆ, ಅಂತಹ ಅನುಭವ ನೀಡುವ ವಿಕೃತ ರೂಪ ಮನಸುಗಳು ಇಲ್ಲವಾಗಬೇಕು ಆಗಲೇ, ನಿಜವಾಗಿ ನಾವು ಮತ್ತು ನಮ್ಮ ಸುತ್ತಮುತ್ತಲಿನ ಮುದ್ದು ಮನಸಿನ ಜೀವಗಳು ಖುಷಿಯಿಂದ ಬದುಕಬಹುದು.
ವಿಕೃತ ಮನಸುಗಳ ಇಲ್ಲವಾಗುವವರೆಗೂ ನಾವಂತೂ ನೆಮ್ಮದಿಯನ್ನು ಸಂಪೂರ್ಣವಾಗಿ ಕಾಣಲು ಅಸಾಧ್ಯ. ನಾವು ಎಚ್ಚರವಾಗಿ ಕೆಟ್ಟದ್ದನ್ನು ಧಿಕ್ಕರಿಸುವ ಗುಣ ಬೆಳೆಸಿಕೊಂಡರೆ, ವಿಕೃತ ಮನಸುಗಳ ಅಂತ್ಯ ಅತೀ ಬೇಗ ಆಗುವುದಂತೂ ಸತ್ಯ ಸಂಗತಿ.






ಅಂದಿನಿಂದ ಇಂದಿನವರೆಗೆ ವಿವಿಧ ರೀತಿಯಲ್ಲಿ ನಡೆಯುತ್ತಿರುವ ಶೋಷಣೆ.
Nice article roopa…
ನಿಜ…..ಸಹಿಸುವುದನ್ನು ಬಿಟ್ಟು, ಎಲ್ಲರೆದುರು ಹೇಳುವ ಧೈರ್ಯ ತರೀಸಬೇಕಷ್ಟೇ…..