ವಾಲ್ಮೀಕಿಯ ಭಕ್ತರೂ ಅನ್ಯ ರಾಮದ್ವೇಷಿಗಳೂ

ಆರ್‌ ವಿಜಯರಾಘವನ್‌

ಕಳೆದುಹೋದ ಪ್ರೀತಿಗಳು ಕಥೆಯಾಗಿ ವಾಲ್ಮೀಕಿಯ ರಾಮಾಯಣ ಎಂಬ ಕೆ. ಸತ್ಯನಾರಾಯಣ ಅವರ ಲೇಖನ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ (ಅಕ್ಟೋಬರ್‌ ೩೦) ಪ್ರಕಟವಾಗಿದೆ. ಇದು ಒಂದು ಬಗೆಯಲ್ಲಿ ಅರ್ಷಿಯಾ ಸತ್ತಾರ್‌ ಎಂಬ ಹೆಸರಿನ ಬೆಂಗಳೂರಿನ ಲೇಖಕಿ ಬರೆದಿರುವ – ಲಾಸ್ಟ್‌ ಲವ್ಸ್‌: ಎಕ್ಸ್‌ಪ್ಲೋರಿಂಗ್‌ ರಾಮಾಸ್‌ ಆಂಗ್ವಿಶ್‌- ಇಂಗ್ಲಿಷ್‌ ಕೃತಿಯ ಪರಿಶೀಲನೆ ಅಥವಾ ಅಲ್ಲಿನ ವಿಚಾರಗಳ ಅನುಸಂಧಾನ. ಏ.ಕೆ ರಾಮಾನುಜನ್‌ರ ರಾಮಾಯಣಗಳ ಕುರಿತ ಮನೋಜ್ಞವೂ, ಬೋಧಪ್ರಧವೂ ಆದ ಪ್ರಬಂಧದ ವಿಚಾರದಲ್ಲಿ ದೆಹಲಿ ಯೂನಿವರ್ಸಿಟಿಯಲ್ಲಿ (ಭಾರತದ ಬಹಳ ಯೂನಿವರ್ಸಿಟಿಗಳನ್ನು ಯೂನಿವರ್ಸಲ್‌ ವರ್ಸ್ಟ್‌ ಸಿಟಿಗಳು ಎಂದು ಓದಬೇಕೆಂಬ ಹಂಬಲ ನನ್ನಲ್ಲಿ ಎಂದು ಮೂಡಿದ್ದು ಎಂದು ನೆನಪಿಲ್ಲ) ಆಗಿರುವ ರಾಮಾಯಣದ ಬೆನ್ನಲ್ಲೆ ಈ ಪರಿಶೀಲನೆ ನಡೆದು ಪ್ರಬಂಧ ಪ್ರಕಟವಾಗಿರುವುದು ಸಮಂಜಸವಾಗಿದೆ. ರಾಮಾನುಜನ್‌ ಕೃತಿಯ ಕುರಿತು ಎದ್ದಿರುವ ವಿವಾದವು ವಿನಾಕಾರಣವೆಂದು ಆದಿಯಲ್ಲೇ ಸತ್ಯನಾರಾಯಣ ಅಭಿಪ್ರಾಯ ಪಡುತ್ತಾರಾದರೂ ಅದು ವಿನಾಕಾರಣ ಅಲ್ಲ ಎನ್ನುವುದು ಅವರಿಗೂ ಗೊತ್ತಿರುವುದೇ. ವಿನಾಕಾರಣ ಆಗಿರುವುದೆಂದರೆ ಆ ಪ್ರಬಂಧವನ್ನು ಪಠ್ಯಪುಸ್ತಕದಿಂದ ಕಿತ್ತುಹಾಕಿರುವುದು ಮಾತ್ರ.

 

ಅರ್ಷಿಯಾ ಸತ್ತಾರ್‌ ಒಬ್ಬರು ಸ್ತ್ರೀ ವಾದಿ ಚಿಂತಕಿ. ಆಕೆಯ ೨೮.೧೧.೨೦೦೯ರ ಲೇಖನವೊಂದು  ಎ ಫೆಮಿನಿಸ್ಟ್‌ ಟಿಲ್‌ ಐ ಡೈ ಎಂಬ ಶಿರೋನಾಮೆಯಲ್ಲಿ ಅಂತಜಾಲದಲ್ಲಿ ಲಭ್ಯವಿದೆ. ಅದರ ಬೈ ಲೈನ್‌ The wild hair may have taken on strands of silver and seats may be offered to her on the bus. But Arshia Sattar keeps her sword polished and shining because there’s many a battle to be fought still ಎಂದಿದೆ. ಇದು ಆಕೆಯ ಸಂಘರ್ಷಾತ್ಮಕ ಮನೋಭಾವವನನ್ನು ಸೂಚಿಸುತ್ತದೆ. ಈ ಹಿನ್ನೆಲೆಯನ್ನು ಏನಾದರೂ ಮನಸ್ಸಿನಲ್ಲಿಟ್ಟು ಆಕೆಯ ಲಾಸ್ಟ್‌ ಲವ್ಸ್‌: ಎಕ್ಸ್‌ಪ್ಲೋರಿಂಗ್‌ ರಾಮಾಸ್‌ ಆಂಗ್ವಿಶ್‌- ಮುಂತಾದ ಕೃತಿಗಳನ್ನು ಓದಿದರೆ ಆಕೆಯ ಬರಹಗಳಿಗೆ ಬೇರೆ ಅರ್ಥಕೊಟ್ಟುಕೊಳ್ಳುವ ಬೌದ್ಧಿಕ ಒತ್ತಡಗಳು ಒಳಗೇ ಹುಟ್ಟಿಬಿಡುವುದರ ಸಂಭವನೀಯತೆಗಳು ಹೆಚ್ಚು. ಸತ್ಯನಾರಾಯಣರು ಸತ್ತಾರ್‌ ಅವರ ಉಲ್ಲೇಖಿತ ಲೇಖನವನ್ನು ಓದಿರುವರೋ ಇಲ್ಲವೋ ಗೊತ್ತಿಲ್ಲ. ಆದರೆ ಅವರಲ್ಲಿರುವ ಪರಿಶೀಲಕ ಮನಸ್ಸು ಅಂತಹ ಒತ್ತಡಗಳನ್ನು ಅವು ಎದುರಾದಾಗ್ಯೂ ಬದಿಗೆ ಸರಿಸಿ ಕೃತಿಯನ್ನು ಅದರ ಜನ್ಯ ನೆಲೆಯಲ್ಲಿ ಪರಿಗ್ರಹಿಸುವತ್ತ ಕೆಲಸ ಮಾಡುವುದನ್ನು ಅವರ ಬೇರೆ ಬೇರೆ ಕೃತಿಗಳ ಉದ್ದಕ್ಕೂ ನೋಡಬಹುದು. ಈ ವಿಮರ್ಶನ ಪ್ರಕ್ರಿಯೆಯು ಬರಹಗಾರನ ಮನೋಭಾವದ ಮೇಲೆಯೇ ಮೊದಲ ಕೆಲಸವನ್ನು ಶುರುಮಾಡಿಕೊಂಡಿರುತ್ತದೆ.

 

ಸಾಮಾನ್ಯವಾಗಿ ಓದುವ ಕ್ರಿಯೆಯಲ್ಲಿ ಒಪ್ಪಿತ ಮತ್ತು ಒಪ್ಪಿತವಲ್ಲದ ವಿಚಾರಗಳು ಎಂಬ ಎರಡು ಭಾವನೆಗಳು ಕೆಲಸ ಮಾಡುತ್ತವೆ. ಓದುಗನ ಪ್ರತಿಕ್ರಿಯೆಗಳು ಸಾಮಾನ್ಯವಾಗಿ ಮೊದಲ ನೋಟಕ್ಕೆ ಇವುಗಳ ಮೇಲೆಯೇ ಕಟ್ಟಿಕೊಳ್ಳಲಾಗಿರುತ್ತದೆ. ಆದರೆ ಪ್ರಜ್ಞಾವಂತ ಓದುಗನು ಅದನ್ನು ತನ್ನಲ್ಲಿನ, ಮತ್ತು ತಾನು ಸಂಪಾದಿಸಿಕೊಳ್ಳುವ ಪರಿಕರಗಳ ಆಧಾರದ ಮೇಲೆ ಪುನರ್‌ಪರೀಕ್ಷೆಗೆ ಒಡ್ಡುತ್ತಾನೆ. ಆ ನಿಕಷವು ಒಬ್ಬ ಸಿದ್ಧಸೂತ್ರದ ಆಧಾರದಲ್ಲಿ ಪಾಠ ಮಾಡುವ ಅಧ್ಯಾಪಕನ ಮನೋಭಾವಕ್ಕಿಂತ ಭಿನ್ನವಾಗಿರುತ್ತದೆ.

 

ಒಂದು ಉದಾಹರಣೆಯ ಮೂಲಕ ಇದನ್ನು ವಿಸ್ತಾರಗೊಳಿಸಬಹುದು ಎನ್ನಿಸುತ್ತದೆ. ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ತಯಾರಾಗುವ ಪಠ್ಯಪುಸ್ತಕದಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮಾತ್ರ ಇರಲು ಸಾಧ್ಯ. ಆದರೆ ಅಕಡೆಮಿಕ್‌ ವರ್ಷದ ನಡುವೆಯೇ ಯಡಿಯೂರಪ್ಪ ಸಿಂಹಾಸನವಿಳಿದು ಸದಾನಂದಗೌಡ ಕರ್ನಾಟಕದ ಮುಖ್ಯಮಂತ್ರಿಯಾಗಿ ಹೋದರೆ ಮಕ್ಕಳು ಪರೀಕ್ಷೆಯಲ್ಲಿ ತಾವು ಅರಿತಿದ್ದನ್ನು ಬರೆಯಬೇಕೋ ಅಥವಾ ತಾವು ಕಲಿತಿದ್ದನ್ನು ಬರೆಯಬೇಕೋ ಎಂಬುದು ಪ್ರಶ್ನೆ. ಅರಿತಿದ್ದನ್ನು ಬರೆದ ಮಗುವಿಗೆ ಅಂಕಗಳನ್ನು ನೀಡಬೇಕೋ, ಕಲಿತಿದ್ದನ್ನು ಬರೆದ ಮಗುವಿಗೆ ಕೊಡಬೇಕೋ ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾದ ಅನಿವಾರ್ಯತೆ ಬಂದರೆ ಚರ್ಚೆಯಾದೀತು. ಅನಗತ್ಯವಾದರೂ ಸಹ ಅದು ಸರಿಯಾದದ್ದು. ಆ ಅನಿವಾರ್ಯತೆಯೇ ಬಾರದಿದ್ದರೆ, ಅಂದರೆ ಪುಸ್ತಕದ ಪ್ರಶ್ನೆಗೆ ಪುಸ್ತಕದ ಉತ್ತರ ಎಂದು ಆಗಿಹೋದರೆ ಭಾರತದಲ್ಲಿ ರಾಮಾಯಣ ಎಂದರೆ ವಾಲ್ಮೀಕಿಯ ರಾಮಾಯಣ ಮಾತ್ರ ಎಂಬ ನೆಲೆಗೆ ತಲುಪಿ ಬಿಡುತ್ತೇವೆ. ಆಗ ನಮಗೆ ರಾಮಾನುಜನ್‌ರ ಅಥವಾ ಅಂತಹ ಯಾವುದೇ ಲೇಖಕರ ಬರೆಹಗಳು ಅರ್ಥವಾಗದವೋ, ಅನರ್ಥಕಾರಿಯೋ ಆಗಿಬಿಡುತ್ತವೆ. ಅವರ ವಿಚಾರಗಳು ಅಧ್ಯಾಪಕರಿಗೆ ಪಾಠಮಾಡಲು ಸಾಧ್ಯವಾಗದವು ಆಗಿಬಿಡುತ್ತವೆ. ಅಂತಹ ಬಾಲಿಶ ಚರ್ಚೆಗಳಿಗೆ ಯೂನಿವರ್ಸಿಟಿಗಳಲ್ಲಿ ಅವಕಾಶಗಳು ಹುಟ್ಟಿ ರಾಮಾನುಜನ್‌ರನ್ನು banish

ಮಾಡುವುದಕ್ಕೆ ಒದಗುತ್ತವೆ. ತಮಗೆ ಗೊತ್ತಿಲ್ಲದ ಎಲ್ಲ ವಿಚಾರಗಳೂ ಅಗ್ರಾಹ್ಯ ಎನ್ನುವ ಅಹಂಕಾರವೂ, ಅಂತಹ ಅಗ್ರಾಹ್ಯವಾದುದೆಲ್ಲವೂ ಮರಣದಂಡನೆಗೆ ಅರ್ಹವಾದವು ಎನ್ನುವ ಮೌಢ್ಯವೂ, ಅಥವಾ ಈ ಸಂದರ್ಭವನ್ನು ಅನುಕೂಲಕ್ಕೆ ಬಳಸಿಕೊಂಡು ರಾಮಾನುಜನ್‌ ದಕ್ಷಿಣವೆಂದೋ, ಹಿಂದೂ ವಿಚಾರಗಳ blasphemy ಯೆಂದೋ ಕಿತ್ತುಹಾಕುವ ಹುನ್ನಾರವೂ ನಡೆದು ಹೋಗುತ್ತದೆ. ರೋಮಿಲಾ ಥಾಪರ್‌ ಅದಕ್ಕೆಂದೇ ಕುಪಿತರಾಗಿ ಕೇಳುವುದು: ಅಂತಹ ಅಧ್ಯಾಪಕರನ್ನು ನೇಮಕ ಮಾಡಿಕೊಂಡಿರೇಕೆ. ಅವರಿಗೆ ಅಂತಹ ತರಬೇತಿಗಳನ್ನು ಕೊಟ್ಟಿರಿ ಏಕೆ? ಎಂದು.

 

ಇಷ್ಟಕ್ಕೂ ರಾಮಾನುಜನ್ನರ ಪ್ರಬಂಧದಲ್ಲಿ ಇರುವ ಧಾರ್ಮಿಕ ಮನಸ್ಸುಗಳಿಗೆ ಘಾಸಿಯುಂಟುಮಾಡುವ ಅಥವಾ ಪಾಠ ಮಾಡಲು ಅರ್ಥವಾಗದ ವಿಚಾರಗಳು ಯಾವುವು ಎನ್ನುವುದನ್ನು ಅರಿಯಲು ನಾನು ಪ್ರಯತ್ನಿಸಿ ಸೋತುಹೋಗಿದ್ದೇನೆ. ರಾಮಾನುಜನ್‌ ಹೆಚ್ಚು ವಿಶ್ಲೇಷಣೆಗೇ ತೊಡಗುವುದಿಲ್ಲ. ಅವರು ನಮ್ಮ ಮುಂದೆ ಹಲವಾರು ಮಾರ್ಗಗಳ ರಾಮಾಯಣಗಳ ಮಾದರಿಯನ್ನು ಬಿಡಿ ಬಿಡಿ ಮಾಡಿ ನಮ್ಮ ಮುಂದೆ ಇಡುತ್ತಾರೆ. ಇಡೀ ರಾಮಾಯಣದಲ್ಲಿನ ಭಿನ್ನತೆಗಳಲ್ಲಿ ಯಾವ ಯಾವ ಪಯಣದಲ್ಲಿ ಎಂತೆಂಥವು ಉಂಟಾದವು ಎನ್ನುವುದನ್ನು ಪರಿಶೀಲಿಸಿ ರಾಮಾನುಜನ್‌ ಹೇಳುವುದಿದು: ಅಂತಿಮವಾಗಿ ರಾಮ, ಅವನ ಅನುಜ, ಅವನ ಹೆಂಡತಿ, ಮತ್ತು ಅವಳನ್ನು ಕದ್ದೊಯ್ಯುವ ಪ್ರತಿನಾಯಕ ರಾವಣ ಇವುಗಳನ್ನು ಹೊರತುಪಡಿಸಿದರೆ, ರಾಮನ ಕಥೆಗಳಿಗೆಲ್ಲ ಸಾಮಾನ್ಯವಾದ ಒಂದು ಬೀಜಾಂಕುರವಿದೆ. ಈ ಕಥೆಗಳೆಲ್ಲವೂ, ವಿಟ್ಜೆನ್‌ಸ್ಟೀನ್‌ ಹೇಳಬಹುದಾದಂತೆ, ಕೌಟುಂಬಿಕ ಸಾಮ್ಯಗಳಿಂದಲೇ ಕೂಡಿಕೊಂಡಿವೆಯೇ? ಅಥವಾ ಇದು ಅರಿಸ್ಟಾಟಲ್‌ನ ಜಾಕ್‌ಚಾಕು(ಸ್ವಿಸ್‌ ನೈಫ್‌)ವಿನಂತಹುದೇ?

 

ಅವರು ಹೇಳುವ ಕಥೆ ಕೇಳಿ: ಅರಿಸ್ಟಾಟಲ್‌ ಒಬ್ಬ ಮುದುಕ ಬಡಗಿಯನ್ನು ಕೇಳಿದ: ಅಯ್ಯಾ ನೀನು ಎಷ್ಟು ದಿನಗಳಿಂದ ಈ ಬಾಚಿಯನ್ನು ಬಳಸುತ್ತಿರುವೆ ಎಂದು. ಬಡಗಿ ಉತ್ತರಿಸಿದ: ಓ ಮುವ್ವತ್ತು ವರ್ಷಗಳಿಂದ ಇದನ್ನು ಬಳಸುತ್ತಿದ್ದೇನೆ. ನಾನು ಇದರ ಕಬ್ಬಿಣದ ಬಾಚಿಯನ್ನು ಒಂದಷ್ಟು ಸಲ, ಇದರ ಹಿಡಿಕೆಯನ್ನು ಒಂದಷ್ಟು ಸಲ ಬದಲಾಯಿಸಿದ್ದೇನೆ. ಅಷ್ಟೆ. ಆದರೆ ಇದು ಅದೇ ಬಾಚಿ ಎಂದು. ಇಷ್ಟು ಹೇಳಿ ರಾಮಾನುಜನ್‌ ಹೇಳುವುದಿದು: ಸಂಬಂಧದ ಆಕೃತಿಯ ಯಾವುದೋ ನೆರಳು ರಾಮಾಯಣದ ಹೆಸರನ್ನು ಆರೋಪಿಸಿಕೊಳ್ಳುತ್ತದೆ. ಆದರೆ ಸೂಕ್ಷ್ಮವಾಗಿ ನೋಡಿದರೆ ಒಂದರಂತೆ ಇನ್ನೊಂದು ಇರಬೇಕಿಲ್ಲ. ಒಂದೇ ಹೆಸರಿನ ಹಲವು ಜನರಿದ್ದಂತೆ. ಅವರು ಗುಂಪಿಗೆ ಸೇರಿದವರು ಎಂದರೆ ಬರಿಯ ಹೆಸರಿನ ಗುಂಪು ಅಷ್ಟೇ.

 

ವಾಲ್ಮೀಕಿ ರಾಮಾಯಣ ಮಾತ್ರವೇ ರಾಮಾಯಣ ಎಂದು ನಂಬಲು ಬಯಸುವವರಿಗೆ ರಾಮಾನುಜನ್‌ ಯಾವ ಸಲಹೆಯನ್ನೂ ಕೊಡುವುದಿಲ್ಲ. ಹಾಗೆಯೇ, ಕಂಬನ್‌ನ ಅಥವಾ ಇನ್ನಿತರರ ರಾಮಾಯಣದ ಬಗ್ಗೆಯೂ. ಅಂತಿರುವಲ್ಲಿ ಬಹುತ್ವದ ಪರವಾಗಿರುವ ಧ್ವನಿಯಾದ ರಾಮಾನುಜನ್ನರ ಸದ್ದಡಗಿಸಲು ತೊಡಗುವುದು ಏನು ಎನ್ನುವುದು ಬಣ್ಣಿಸಲು ಅಸಹ್ಯಕರವಾದುದು. ಇದು ಕೇಳುವುದನ್ನು ಅಂದರೆ ಶ್ರವಣ ಮಾಧ್ಯಮವನ್ನು ಬಿಟ್ಟುಬಿಟ್ಟ ನಮ್ಮ ಮನಸ್ಸಿನ ಅವನತಿ. ಅದನ್ನು ಕುರಿತೂ ಒಂದು ಉಪಕತೆಯನ್ನು ರಾಮಾನುಜನ್‌ ಆ ಲೇಖನದಲ್ಲಿ ಹೇಳುತ್ತಾರೆ. ಈ ಹೇಳುವ-ಕೇಳುವ ಕ್ರಿಯೆಗಳ ಪ್ರಾಮುಖ್ಯತೆಯ ಅರಿವಿನಿಂದಲೇ ರಾಮಾನುಜನ್‌ ಡಿಸ್ಕೋರ್ಸ್‌‌ನಂತಹ ಪದಗಳ ಬದಲಿಗೆ ಟೆಲ್ಲಿಂಗ್ಸ್‌ ಎಂಬ ವಿಚಿತ್ರವಾದ ಪದ ಬಳಸುತ್ತಾರೆ. ಆನಂತರದ ಬಹಳ ಮಂದಿ ವಿಶ್ಲೇಷಕರು ಕೂಡ ಅದೇ ಪದವನ್ನು ಬಳಸಿದ್ದಾರೆ.

 

ಕೆ. ಸತ್ಯನಾರಾಯಣ ಅವರ ಲೇಖನದ ಬಗ್ಗೆ ಮಾತಾಡಲು ಹೊರಟು ಇಲ್ಲಿಗೆ ಮುಟ್ಟಿದ್ದು ಈ ಘಟನೆಗಳು ಮಾಡುತ್ತಿರುವ ಮೋಸ ತಂದಿರಿಸಿರುವ ಸಾಂಸ್ಕೃತಿಕ ತಲ್ಲಣವನ್ನು ಕುರಿತು ಹೇಳುವುದಕ್ಕಾಗಿದೆ. ಅಷ್ಟೇ ಅಲ್ಲ ಇದಕ್ಕೆ ತಕ್ಕ ಉತ್ತರ ಕೊಡುವ ವಿವೇಚನಾಪೂರ್ಣ ಜವಾಬ್ದಾರಿಗಳನ್ನು ನಾವು ಹೊರಬೇಕಾದ ಅಗತ್ಯದ ಬಗ್ಗೆ ಹೇಳುವುದಕ್ಕಾಗಿದೆ.

 

೧೯೮೦-೯೦ರ ದಶಕದಲ್ಲಿ ಮುನ್ನೆಲೆಗೆ ಬಂದ ರಾಮ – ಎಂದು ಹೇಳುವಾಗ ಸತ್ಯನಾರಾಯಣ ಶಂಬೂಕ, ವಾಲಿ ಮುಂತಾದ ವಧೆಗಳ ಸಂಬಂಧ ಎದ್ದ ಚರ್ಚೆಗಳನ್ನೂ, ಬಾಬರಿ ಮಸೀದಿಯ ಘಟನೆಯನ್ನೂ ಸೇರಿಸಿ ಹೇಳುತ್ತಿದ್ದಾರೆ ಎನ್ನಿಸಿದೆ. ಇಂತಹ ತಲ್ಲಣಗಳ ಶನಿನೆರಳಿನಲ್ಲಯೇ ನಮ್ಮನ್ನು ನಾವೇ ಇನ್ನೂ ಕಟ್ಟಿಕೊಂಡಿರುವ ನಾವು ಜಾತ್ಯತೀತ ಪಠ್ಯವನ್ನು ಗ್ರಹಿಸಲು ಇಟ್ಟುಕೊಳ್ಳಬೇಕಾದ ಮಾನದಂಡಗಳೇನು ಎನ್ನುವುದರ ಕುರಿತೂ ಲೇಖನ ಮಾತಾಡುತ್ತದೆ. ಅರ್ಷಿಯಾ ಸತ್ತಾರ್‌ ವಾಲ್ಮೀಕಿ ರಾಮಾಯಣವನ್ನು ಇಂಗ್ಲಿಷ್‌ಗೆ ಹದಿನಾಲ್ಕು ವರ್ಷ ಶ್ರಮಪಟ್ಟು ಅನುವಾದ ಮಾಡಿದವರು. ಹಾಗೆಯೇ ಕಥಾಸರಿತ್ಸಾಗರವನ್ನೂ ಇಂಗ್ಲಿಷ್‌ಗೆ ಕೊಂಡೊಯ್ದವರು. ರಾಮಾಯಣವನ್ನು ಅನುವಾದ ಮಾಡಲು ಅಷ್ಟು ಕಾಲ ತೆಗೆದುಕೊಂಡಿದ್ದು ರಾಮನ ಬಗ್ಗೆ ತನ್ನಲ್ಲಿ ಮೂಡಿದ್ದ ತಾತ್ಕಾಲಿಕ ಮಂಕು ಎಂದು ಆ ೯೦ರ ಸಂಧಿಕಾಲದಲ್ಲಿ ಅದನ್ನು ಅನುವಾದ ಮಾಡುತ್ತಿದ್ದ ಆಕೆ ಹೇಳಿಕೊಂಡಿರುವುದು ಸಹಜವಾಗಿಯೇ ಇದೆ. ಈಚಿನ ವರ್ಷಗಳಲ್ಲಿ ಮತ್ತೆ ರಾಮಾಯಣದ ಪಠ್ಯನಿಷ್ಠ ಓದು ಜಾಗೃತವಾಗಿ ಸಂವೇದನಾಶೀಲವಾದ ನೃತ್ಯ-ನಾಟಕ ಪ್ರಯೋಗಗಳಲ್ಲಿ… ಬರುತ್ತಿರುವುದನ್ನು ಸತ್ತಾರ್‌ ಸೂಚಿಸುವುದನ್ನು ಗುರುತಿಸುವ ಸತ್ಯನಾರಾಯಣ ಪುಸ್ತಕವನ್ನು ವಸ್ತು ನಿಷ್ಠತೆ ಮತ್ತು ಬಹುತ್ವದ ಕಾರಣಗಳಿಂದ ಮೆಚ್ಚುತ್ತಾರೆ.

 

ಅರ್ಷಿಯಾ ಸತ್ತಾರ್‌ ಕಟ್ಟಾ ಸ್ತ್ರೀ ವಾದಿಯಂತೆ ತೋರಿದರೂ, ಅವರ ಕೃತಿಯ ಪರಿಶೀಲನೆ ತೋರುವಂತೆ ಅವರು ತಮ್ಮ ವಸ್ತು ನಿಷ್ಠತೆ, ಬಹುತ್ವ ಮತ್ತು ಅಧ್ಯಯನಶೀಲತೆಯನ್ನು ಸ್ತ್ರೀವಾದದ ಪರವಾಗಿ ಬಿಟ್ಟುಕೊಟ್ಟಿರುವಂತೆ ಕಂಡುಬರುವುದಿಲ್ಲ. ಅಲ್ಲದೆ ಅವರ ಬರೆಹಗಳು ಅಪ್ಪಟ ಜಾತ್ಯತೀಯತೆಯ ಆಧಾರದ ಮೇಲೆ ಕಟ್ಟಲ್ಪಟ್ಟಿವೆ. ಅವರ ಕೃತಿ ಬಿಡಿಸಲು ಯತ್ನಿಸುವ ಆದರ್ಶ ಗಂಡ, ಆದರ್ಶ ಅರಸ, ಆದರ್ಶ ಮಾನವ ಆಗಲು ಬಯಸುವ ರಾಮನ ತಲ್ಲಣಗಳನ್ನು ನಮ್ಮ ಕಣ್ಣಿಗೆ ತರಲು ಯತ್ನಿಸಿದ ಪರಿಶೀಲನೆ ಎನ್ನುವ ಸತ್ಯನಾರಾಯಣ ಅವರ ಅನುಸಂಧಾನದ ಓದು ಸಂತೋಷ ಕೊಡುತ್ತದೆ.ಅದರ ಜೊತೆಗೇ ಅರ್ಷಿಯಾ ಸತ್ತಾರರ, ರಾಮಾನುಜನ್ನರ ಬಗ್ಗೆ ಪ್ರೀತಿ ಗೌರವವನ್ನು ಸಹ ಹೆಚ್ಚುಮಾಡುತ್ತದೆ.

 

ರಾಮಾನುಜನ್‌ ಹೇಳುವ ಮಾತೊಂದರಿಂದ ಈ ಲೇಖನವನ್ನು ಮುಗಿಸಬಹುದು ಎನ್ನಿಸುತ್ತದೆ.These various texts not only relate to prior texts directly, to borrow or refute, but they relate to each other through this common code or common pool. Every author, if one may hazard a metaphor, dips into it and brings out a unique crystallization, a new text with a unique texture and a fresh context.

 

 

 

‍ಲೇಖಕರು sreejavn

November 4, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. M SHAKUNTHALA NAYAK

    nam nam manaalli maneyalli uooralli kelasa maduva jagadalli dinavu ee ramayana mahabharatha galu ghatisuthale iruthave !! antadralli univerity yantha kade iro rajakeeyadalli ramanujan avara prabhandhavannu horagidalu ondu nepavagi yaro nadesida chadurangadata… ishtakku ramanujan sir iddiddare idakkella hege react agtidru anno kutuhala nange bejaru madkotidra…ilva ?

    ಪ್ರತಿಕ್ರಿಯೆ
  2. vijayaraghavan

    I have two things to say:

    1. Today’s The Hindu carries an interview with K.N. Panikkar on this issue. It is worth reading.

    2. Why in Kannada we are not furthering the debate on this?

    R.Vijayaraghavan

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: