‘ವಾಗರ್ಥ’ ಸತ್ಯಾರ್ಥಿ…

ಜಿ ಎನ್ ರಂಗನಾಥ ರಾವ್

‘ವಾಗರ್ಥ’, ಈಗಿನವರಿಗೆ ನವೋದಯ-ನವ್ಯದ ಪಳೆಯುಳಿಕೆಯಂತೆ ಕಾಣಬಹುದಾದ ಕನ್ನಡದ ಹಿರಿಯ ಸ್ವೋಪಜ್ಞ ವಿಮರ್ಶಕ ಡಿ.ಎ. ಶಂಕರ್ ಅವರ ಸಮಗ್ರ ವಿಮರ್ಶೆಯ ಸಂಪುಟ.

ಶ೦ಕರ್, ಯು.ಆರ್. ಅನ೦ತ ಮೂರ್ತಿ, ರಾಜೀವ ತಾರಾನಾಥ್, ಜಿ.ಎಚ್. ನಾಯಕ್ ಅವರುಗಳ ಓರಗೆಯವರು. ಹಾಗೆಂದು ಅವರು ನವೋದಯ ನವ್ಯಗಳನ್ನು ಕಣ್ಮುಚ್ಚಿ ಸ್ವೀಕರಿಸಿದವರಲ್ಲ. ‘ಖಂಡಿತವಾದಿ ಲೋಕವಿರೋಧಿ’ ಎನ್ನುವ ಮಾತು ಶಂಕರ್‌ಗೆ ಚೆನ್ನಾಗಿ ಅನ್ವಯಿಸುತ್ತದೆ. ಅವರ ಸಾಹಿತ್ಯ ವಿಮರ್ಶೆಯಲ್ಲೂ ಈ ಖಡಾಖಂಡಿತವಾದಿಯ ದರ್ಶನ ನಮಗಾಗುತ್ತದೆ. ಸ್ಪಷ್ಟವಾದ ವಿಮರ್ಶಾ ಧೋರಣೆ, ಗೊಂದಲಮುಕ್ತವಾದ ತಿಳಿವಳಿಕೆ ಮತ್ತು ಚಿಂತನ ಕ್ರಮ ಹಾಗೂ ಹಾಗೂ ಇವುಗಳಿಗೆ ಹೆಗಲೆಣೆಯಾಗಿ ಬರುವ ಜೀವನ ದರ್ಶನ, ಪಾಶ್ಚಾತ್ಯ-ಪೌರಾತ್ಯ ಸಾಹಿತ್ಯದ ಅಧ್ಯಯನ ಶಂಕರ್ ಅವರ ವಿಮರ್ಶೆಯ ಹಿಂದಿನೆ ಗಟ್ಟಿ ಬೆನ್ನೆಲುಬಾಗಿದೆ.

ವಾಗರ್ಥ' ೫೬೪ ಪುಟಗಳ ಒಂದು ಬೃಹತ್ ಗ್ರಂಥವಷ್ಟೇ ಅಲ್ಲ, ತೂಕದ ಮೌಲಿಕ ಸಂಪುಟವೂ ಹೌದು. ಇದನ್ನು ‘ನಿರ್ವಹಣೆ', ‘ವಸ್ತು ವಿನ್ಯಾಸ’, ‘ಅನುಕ್ರಮ', ‘ಅನುಬಂಧ’ ಮತ್ತು ‘ಇತ್ತೀಚಿನ ವಿಮರ್ಶಾ ಕಾವ್ಯ ವ್ಯವಸಾಯ' ಎಂದು ವಿಂಗಡಿಸಲಾಗಿದೆ. ಈ ಸಂಪುಟವನ್ನು ಶಂಕರ್ ‘ಸಾಹಿತ್ಯ- ಸಾಮಾಜಿಕ ವಿಮರ್ಶಾ ಲೇಖನ ಸಂಪುಟ’ ಎಂದು ಕರೆದಿದ್ದಾರೆ. ಸಹಜವೇ….ಸಮಾಜ ಮತ್ತು ಸಾಹಿತ್ಯಗಳ ನಡುವಣ ಅವಿನಾಭಾವ ಸಂಬ೦ಧವನ್ನು ವಿಚ್ಛೇದನಗೊಳಿಸಲು ಸಾಧ್ಯವೆ? ಈ ಲೇಖನಗಳು ಸುಮಾರು ೧೯೭೬ರಿಂದ ತಹಲುವರೆಗೆ ಬರೆದವು.

ವಚನಗಳು, ಬಸವಣ್ಣ, ಬಿ.ಎಂ.ಶ್ರೀ., ಕುವೆ೦ಪು, ಅಡಿಗ, ಕೆ.ಎಸ್.ನರಸಿ೦ಹಸ್ವಾಮಿ, ಗೋಕಾಕ್, ಎ.ಕೆ. ರಾಮಾನುಜನ್, ಪುತಿನ, ಅನಂತಮೂರ್ತಿ, ಯಶವ೦ತ ಚಿತ್ತಾಲ ಅವರಂಥ ಲೇಖಕರುಗಳ ಬಗ್ಗೆ ಒಂದಕ್ಕಿ೦ತ ಹೆಚ್ಚು ಲೇಖನಗಳಿವೆ. ಆದರೆ ಇವು ಪುನರುಕ್ತಿ ಅನ್ನಿಸುವುದಿಲ್ಲ, ಬಹುಮಟ್ಟಿಗೆ ಪೂರ್ವ ಲೇಖನದ ಮುಂದುವರಿದ ಭಾಗವಾಗಿ, ಹಿಂದಿನ ನಿಲುವಿಗೆ ಪುಷ್ಟಿಕೊಡುವ ಮರು ಅಧ್ಯಯನಗಳಾಗಿ ಸಹೃದಯರ ಮರುಚಿಂತನೆಗೆ ಇಂಬಾಗುತ್ತವೆ.

ಎ.ಕೆ.ರಾಮಾನುಜನ್ ಅವರ ಕಾವ್ಯದ ವೈಶಿಷ್ಟ್ಯ ಇರುವುದು ಅವರ ಹೇಳಿಕೆಯ ಶೈಲಿಯಲ್ಲಿ. ಅವರ ಕಾವ್ಯವನ್ನು ಅರ್ಥಮಾಡಿಕೊಳ್ಳಬೇಕಾದರೆ ಅವರ ಭಾಷೆಯ ಮರ್ಮವನ್ನು ಓದುಗರು ಅರಿತುಕೊಳ್ಳಬೇಕಾಗುತ್ತದೆ. ಶಂಕರ್ ಅಭಿಪ್ರಾಯಪಟ್ಟಿರುವಂತೆ, ರಾಮಾನುಜನ್ ಅವರದು ಅಡಿಗರಿಗಿಂತ ಭಿನ್ನವಾದ ಭಾಷೆ, ಅದಕ್ಕೆ ಪರಂಪರೆಯೊ೦ದಿಗೆ ಯಾವ ಜ್ಞ್ಷಾತಿ ಬಾಂಧವ್ಯವೂ ಇಲ್ಲ. ಅವರು ಉದ್ದೇಶಪೂರ್ವಕವಾಗಿಯೋ ಎಂಬ೦ತೆ ಉದ್ದೀಪನ ತಂತ್ರವನ್ನು ಅಲಕ್ಷಿಸುತ್ತಾರೆ. “ಬುದ್ದಿಪೂರ್ವಕವಾಗಿ ದೀಪನ ತಂತ್ರವನ್ನು ಬಿಟ್ಟುಕೊಟ್ಟು, ಕೇವಲ ವಸ್ತುನಿಷ್ಠವಾಗಿ, ಹೇಳಿಕೆಯ ಧಾಟಿ ಮೂಲಕವೇ ಅನುಭವವನ್ನು ಕಾವ್ಯವನ್ನಾಗಿಸುವ ರಾಮಾನುಜನ್ನರ ಭಾಷೆ ಕನ್ನಡಕ್ಕೆ ಹೊಸದು….”(ಪು ೭). ಆದರೆ ಹೊಸ ಬಗೆಯ ಶೈಲಿ ಮತ್ತು ಭಾಷೆಯ ಮೂಲಕ ತಮ್ಮ ಕಾವ್ಯ ವ್ಯಕ್ತಿತ್ವವನ್ನು ಛಾಪಿಸುವ ಹಟಮಾರಿತನದ ಧೋರಣೆಯಿಂದ೦ಲೋ ಎಂಬ೦ತೆ “ಆರಿಸಿಕೊಂಡಿರುವ ಹೇಳಿಕೆಯ ಮಾರ್ಗದಿಂದಾಗಿ” ಅವರ ಕಾವ್ಯ “ಒಂದು ವಿಶಿಷ್ಟ ರೀತಿಯಲ್ಲಿ ಸೀಮಿತವಾಗಿದೆ. ಅದಕ್ಕೆ ಅವರು ಅನುಭವಗಳ ಮೌಲ್ಯ ನಿರ್ಣಯಕ್ಕೆ ಹೋಗದೆ ಅವುಗಳ ಬಗ್ಗೆ ಒಂದು ನೈಜ ಜಾಣತನದ, ಚೇಷ್ಟೆಯ, ವ್ಯಂಗ್ಯದ ಮಾತನ್ನು ಹೇಳುವುದರಲ್ಲಿ ತೃಪ್ತರಾಗುತ್ತಾರೆ. ಇದು ಹೇಳಿಕೆಯ ಕಾವ್ಯಮಾರ್ಗಕ್ಕಿರುವ ಪರಿಮಿತಿಯಿಂದ ಬಂದದ್ದು” (ಪು ೧೦) ಎನ್ನುವ ತೀರ್ಮಾನಕ್ಕೆ ಬರುತ್ತಾರೆ ಶಂಕರ್. ಬಹುಶ: ರಾಮಾನುಜನ್ ಅವರ ಕಾವ್ಯದ ಮೌಲ್ಯಮಾಪನ ಕನ್ನಡ ಕಾವ್ಯ ವಿಮರ್ಶೆಯಲ್ಲಿ ವಿರಳವಾದ್ದರಿಂದ ಶಂಕರ್ ಅವರ ಈ ವಿಮರ್ಶೆ ಹೆಚ್ಚಾಗಿ ನಮ್ಮ ಗಮನವನ್ನು ಸೆಳೆಯುತ್ತದೆ. ಇಲ್ಲಿ “ಈ ಉರಿ ಓದುಗನನ್ನು ತಾಕಬೇಕಾದರೆ ಇಲ್ಲ ಮಾಮೂಲಿ ದೀಪನ ಕ್ರಿಯೆಯ ಎರವನ್ನು ಪಡೆಯಬೇಕು, ಇಲ್ಲ, ಒಮ್ಮೆಲೆ ಇಂದ್ರಿಯ ಗ್ರಾಸವಾಗಬಲ್ಲ ವಸ್ತು ಪ್ರತಿರೂಪವನ್ನು ಹುಡುಕಬೇಕು”(ಪು ೨೧) ಎಂದು ರಾಮಾನುಜನ್ ಕಾವ್ಯವನ್ನು ಓದುವ ಬಗ್ಗೆ ಕೆಲವು ಒಳನೋಟಗಳನ್ನೂ ನೀಡುವುದರಿಂದ ಶಂಕರ್ ಅವರ ಎರಡು ಲೇಖನಗಳೂ ಇಂದಿನ ಪೀಳಿಗೆಯವರಿಗೆ ಎ.ಕೆ.ಯವರ ಕಾವ್ಯ ಪ್ರವೇಶಿಕೆಯೂ ಆಗಿ ಉಪಯುಕ್ತವೆನಿಸುತ್ತೆದೆ.

ರಾಮಾನುಜನ್‌ರಂತೆಯೆ, ಗೋಪಾಲಕೃಷ್ಣ ಅಡಿಗರನ್ನೂ ನರಸಿಂಹಸ್ವಾಮಿಯವರನ್ನೂ ಶಂಕರ್ ಇಲ್ಲಿನ ಲೇಖನಗಳಲ್ಲಿ ವಿಮರ್ಶಿಸಿದ್ದಾರೆ. ಅಡಿಗರ ಕಾವ್ಯದ ಧ್ವನಿ, ರೂಪಕಾಲಂಕಾರಗಳು, ಪ್ರತಿಮಾ ವಿಧಾನಗಳು, ಜೀವನ ದರ್ಶನಗಳು, ಕಲ್ಪನೆಗಳು ಒಂದು ಓದಿಗೆ ದಕ್ಕುವಂಥದಲ್ಲ. ಹಾಗೆಯೇ ರಾಮಾನುಜನ್ ಅವರದೂ. ಕೆ.ಎಸ್.ನರಸಿಂಹಸ್ವಾಮಿಯವರನ್ನು ಇವರಿಬ್ಬರ ಅಕ್ಕಪಕ್ಕ ಇಟ್ಟು ನೋಡಿದರೆ ಕೆ.ಎಸ್.ನ.; ಸುಭಗ ಕವಿ ಎನ್ನುವುದು ನಮ್ಮ ಅನುಭವ-ಜ್ಞಾನೇಂದ್ರಯಗಳಿಗೆ ಥಟ್ಟನೆ ತಾಕುತ್ತದೆ. ಅಡಿಗರ ಕಾವ್ಯದ ಭಾಷೆಗೆ ಅದರದೆ ಆದ ಚೆಲುವಿದೆ. ಕೆ.ಎಸ್.ನ.ಅವರ ಕಾವ್ಯಕ್ಕೂ. ಇದನ್ನುಶಂಕರ್ ಅವರು ಗಮನಿಸದೇ ಇಲ್ಲ. “ನರಸಿಂಹಸ್ವಾಮಿಯವರ ಕಾವ್ಯವಿಸ್ತಾರದಲ್ಲಿ, ವಸ್ತು ವೈವಿಧ್ಯತೆಯಲ್ಲಿ ಎಂದೂ ಬಡವಾಗಿರಲಿಲ್ಲ”(ಪು ೧೪) ಎನ್ನುವ ಶಂಕರ್, “ಅವರ ಕಾವ್ಯದುದ್ದಕ್ಕೂ ನಿರಂತರವಾಗಿ ಕಾಡಿರುವ ಪ್ರಶ್ನೆ ನಮ್ಮನ್ನು ಒಳಕೊಂಡು ನಿಂತಿರುವ ತಾಯಿ ನೆಲಕ್ಕೆ ಸಂಬ೦ದಿಸಿದ್ದು, ಎಲ್ಲ ಜೀವಕ್ಕೂ ಮೂಲಾಧಾರವಾಗಿದ್ದರೂ ತನ್ನ ನಿಜ ಸ್ವರೂಪವನ್ನು ನೂರುಬಣ್ಣ ನೂರು ರೀತಿಗಳಲ್ಲಿ ಹುದುಗಿಸಿಕೊಂಡು ಎಲ್ಲರ ಕಣ್ಣನ್ನೂ ಜಪ್ಪಿಸಿವ ಪ್ರಕೃತಿ ಇವರ ಕಾವ್ಯ ಮೂಲದ್ರವ್ಯ”(ಪು ೧೩) ಎಂದು ಸರಿಯಾಗಿಯೇ ಅರ್ಥಮಾಡಿಕೊಂಡಿದ್ದಾರೆ. ಆದರೂ ಅವರಿಗೆ ಹಿಗೊಂದು ಅಸಮಾಧಾನವಿದೆ: “ವಸ್ತು ವೈಶಾಲ್ಯತೆಗಳಿದ್ದರೂ ಶ್ರೀ ನರಸಿಂಹಸ್ವಾಮಿಯವರ ಬರವಣಿಗೆ ಅಡಿಗರ ಅಥವಾ ಕಾರಂತರ ಬರವಣಿಗೆಯಂತೆ ಏಕೆ ಅತಿ ಮುಖ್ಯ (ಮೇಜರ್ ಇಂಪಾರ್ಟೆನ್ಸ್) ಅಂತ ಅನ್ನಿಸುವುದಿಲ್ಲ” ( ಪು ೧೬) ಎನ್ನುವ ಗಹನವಾದ ಪ್ರಶ್ನೆಯನ್ನು ಎತ್ತುತ್ತಾರೆ. ಆದರೆ ಕೆ.ಎಸ್.ನ ‘ಮೌಲ್ವಿಕ ಬೆಳವಣಿಗೆ’ಯಲ್ಲಿ (ಪು ೧೭೪) ಅವರ ಕವನಗಳಿಗೆ ಹೊಸದಾಗಿ ಬಂದು ಸೇರಿದ ಸಂಗತಿಯಾದ ಸಂಕೀರ್ಣತೆಯನ್ನು ಎತ್ತಿಹೇಳಿದ್ದಾರೆ.

ಶಂಕರ್ ಅವರ ಮುಕ್ತ ಮನದ ಇಂಥ ನಿರ್ಭಿಡೆಯ ವಿಮರ್ಶೆಗೆ ಈ ಸಂಪುಟದಲ್ಲಿ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಬೇಂದ್ರೆ, ಪುತಿನ, ಕಾರ೦ತ, ಶ್ರೀರಂಗ ಮೊದಲಾದವರ ಬಗೆಗಿನ ಅವರ ವಿಮರ್ಶಾ ನಿಲುವನ್ನು ನಾವು ಪರಾಮರ್ಶಿಸಬಹುದು. ಬೇಂದ್ರೆಯವರ ಬಗ್ಗೆ ಬರೆಯುತ್ತಾ, “ಬೇಂದ್ರೆಯವರು ರವೀಂದ್ರನಾಥ ಠಾಕೂರರಿಗಿಂತ ಶಕ್ತಿಶಾಲಿ ಕವಿ” (ಪು ೨೯೬) ಎಂಬ ತೀರ್ಮಾನಕ್ಕೂ ಬರುತ್ತಾರೆ. ಆದರೆ ಅರವಿಂದರ ಕಾವ್ಯತತ್ವ ಪ್ರಣಾಳಿಯನ್ನು ಬೇಂದ್ರೆ ಒಪ್ಪಿಕೊಂಡಾಗ “ಕಾವ್ಯ ದೃಷ್ಟಿಯಿಂದ ವಿಶೇಷ ನಷ್ಟ ಸಂಭವಿಸಿತು”(ಪು ೨೯೩) ಎನ್ನುತ್ತಾರೆ. ಆದರೆ ಈ ಆಧ್ಯಾತ್ಮಿಕ ಪ್ರೇರಣೆಗಳು ಪ್ರಭಾವ ಬೀರಿದರೂ “ಅದು ಆಜ್ಯವಾಗಿ, ಹವಿಸ್ಸಾಗಿ ಪರಿವರ್ತನಗೊಂಡು “ಕಾಣುವುದು ಉರಿಯುವ ಬೇಂದ್ರೆ ಕಲ್ಪನೆಯ, ಪ್ರತಿಭೆಯ ಯಜ್ಞಾಗ್ನಿ ಮಾತ್ರ”(ಪು ೨೯೮) ಎನ್ನುವ ನ್ಯಾಯೋಚಿತ ನಿರ್ಣಯಕ್ಕೆ ಬರುತ್ತಾರೆ.

ಪು.ತಿ.ನ, ನಮ್ಮ ಮಹಾಕವಿತ್ರಯರಲ್ಲಿ ಒಬ್ಬರು. ಅವರ ಕಾವ್ಯ ಧೋರಣೆಗೆ ನಿಕಷಿತ ಬುದ್ಧಿಮತ್ತೆಯಂತೆಯೇ ವಸ್ತುವಿನ ಆಯ್ಕೆಯ ನಂಟೂ ಇರುವುದು ಈವರೆಗೆ ಚರ್ಚಿತ. ಅವರ ನೆಲೆ ಸತ್ಯ-ಶಿವ-ಸುಂದರ ಮೌಲ್ಯಗಳದ್ದು. “ನವ್ಯ ಸಾಹಿತ್ಯದ ಮೂಲ ದ್ರವ್ಯ ನಮ್ಮ ಸಹಜ ಬದುಕಲ್ಲ; ಅನ್ಯರ ಬಾಳುವೆಯ ರೀತಿಗೂ ಸಾಹಿತ್ಯ ಸಂಪ್ರದಾಯಗಳಿಗೂ ಮರುಳಾದ ಆಧುನಿಕ ವ್ಯಸನಗಳು (ಪು ೧೩೫) ಎಂಬುದು ಅವರ ನಿಲುವು. ಶಂಕರ್, ಋಗ್ವೇದದ ಯಮಾಯಮಿ ನಿದರ್ಶನದ ಮೂಲಕ. “…ಸತ್ಯಶಿವಸುಂದರದ ಭಾರತದಲ್ಲೂ ವಿಕ್ಷಿಪ್ತ ಪ್ರಜ್ಞೆಯ, ಅನಾಥ ಪ್ರಜ್ಞೆಯ, ಹಳವಂಡ ಭಾರತಗಳು ಇರುವುದು ಸರ್ವಥಾ ಸಾಧ್ಯವಷ್ಟೇ ಅಲ್ಲ, ಇವೆ. ಇದನ್ನು ನಮ್ಮ ನೆಲದಿಂದ ಬಂದ ಜೀವನ ದ್ರವ್ಯವಲ್ಲ ಎನ್ನುವುದು ಪೂರ್ವಗ್ರಹಿಕೆಯ ಮಾತಾಗಿಬಿಡುತ್ತದೆ”(ಪು ೧೩೫) ಎಂದು ದೃಢವಾಗಿ ಹೇಳುತ್ತಾರೆ. ಶಿವರಾಮ ಕಾರಂತರ ಸುಪ್ರಸಿದ್ಧ ಕಾದಂಬರಿ ಮೂಕಜ್ಜಿಯ ಕನಸುಗಳ" ಬಗ್ಗೆಯೂ ಅವರ ಮೂಕಜ್ಜಿಯ ಕನಸುಗಳು ತುಂಬಾ ರ‍್ಯಾಷನಲ್ ಅಥವಾ ಎಚ್ಚೆತ್ತ ವೈಚಾರಿಕ ಮನಸ್ಸಿಗೆ ಸೇರಿದವು; ಒಳ ಮನಸ್ಸಿನವಲ್ಲ, ಕಲ್ಪನಾ ವಿಲಾಸಕ್ಕೆ ಸೇರಿದುವಲ್ಲ, ಹಾಗಾಗಿ ಈ ಕಾದಂಬರಿ… ನಿರೀಕ್ಷಿತ ತೃಪ್ತಿ ನೀಡುವುದಿಲ್ಲ” (ಪು ೧೨೪) ಎನ್ನುವ ನಿರ್ಧಾರಕ್ಕೆ ಬರುತ್ತಾರೆ. ಶ್ರೀರಂಗರ ನಾಟಕಗಳು,ಅನಂತಮೂರ್ತಿಯವರ ‘ಸಂಸ್ಕಾರ'ಮತ್ತು ಭಾರತೀಪುರ’, ಭೈರಪ್ಪನವರ ‘ದಾಟು'ಅಡಿಗರ ‘ಉದ್ವಿಗ್ನ ಗದ್ಯ’, ಚದುರಂಗರ ಸಾಹಿತ್ಯ ಸೇರಿದಂತೆ ನಮ್ಮ ಅನೇಕ ಪ್ರಮುಖ ಲೇಖಕರ ಬಗ್ಗೆ ಶಂಕರ್ ಇಂಥ ಧಾಷ್ಟ್ರ್ಯದ, ಹರಳುಗಟ್ಟಿಸುವ ನಿರ್ಧಾರಗಳಿಗೆ ಬರುತ್ತಾರೆ. ‘ಸಂಸ್ಕಾರ'ಸುತ್ತಣ ಜೀವನವನ್ನು ಸೂಕ್ಷ್ಮವಾಗಿ, ತೀಕ್ಷ್ಣವಾಗಿ ಆದರೂ ಇಡಿಯಾಗಿ ನೋಡಬಲ್ಲ ಯಥಾರ್ಥ ಕವಿದೃಷ್ಟಿ ಪಡೆದಿದ್ದು ಪ್ರಶಂಸೆಗೆ ಅರ್ಹವಾದುದಾದರೂ ಅದರ ತಾತ್ವಿಕ ತಳಹದಿ ಭದ್ರವಿಲ್ಲದೆ ಪೂರ್ವಗ್ರಹಪೀಡಿತವಾಗಿದೆ” (ಪು೮ ೩೩೧) ಎನ್ನುತ್ತಾರೆ; ‘ಭಾರತೀಪುರ’ದಲ್ಲಿನ ಹೊಲೆಯರ ಚಿತ್ರವನ್ನು ಮೆಚ್ಚಿಕೊಳ್ಳುತ್ತಲೇ ಅದರಲ್ಲಿ ಕ್ರಾಂತಿಯ ದುರಂತವನ್ನು(ಪು ೩೩೬) ಎತ್ತಿ ತೋರುತ್ತಾರೆ. ಭೈರಪ್ಪನವರ ʼದಾಟು’ ಕಾದಂಬರಿಯಲ್ಲಿ ಲೇಖಕರ ಸ್ವಂತ ವಿಚಾರಗಳು ಕಾದಂಬರಿಯ ಅನುಭವವನ್ನು ಆಧರಿಸಿ ನಿಲ್ಲದೆ ಪ್ರತಿಗಾಮಿ ತಿರುವು ಪಡೆಯುವುದನ್ನು (ಪು ೩೪೧) ಸ್ಪಷ್ಟವಾಗಿ ಹೇಳುತ್ತಾರೆ. ಸಿದ್ಧ ತತ್ವವಿಚಾರ ಪ್ರಣಾಳಿಗಳ ಗಡಿದಾಟಿ ಚದುರಂಗರ ಬರವಣಿಗೆ ಜೀವನದೃಷ್ಟಿಗೆ ಅನುಗುಣವಾದ ಹೊಸ ಆಯಾಮವನ್ನು ಪಡೆದುಕೊಳ್ಳುವುದನ್ನು (ಪು ೩೬೯) ಸರಿಯಾಗಿಯೇ ಗುರುತಿಸಿದ್ದಾರೆ. ಇಂಥ ನಿರ್ಧಾರಗಳಿಗೆ ಆಧಾರವಾಗಿ ಕೃತಿಗಳ ಸಮೀಚೀನ ವಿವೇಚನೆ-ವಿಶ್ಲೇಷಣೆಗಳು ಇದ್ದು ಶಂಕರ್ ಅವರ ನಿರ್ಧಾರಗಳಿಗೊಂದು ವಿಮರ್ಶೆಯ ಗುಣಾಢ್ಯತೆ ಲಭ್ಯವಾಗುತ್ತದೆ.

ಒಂದು ಅಂಕಣದ ಮಿತಿಯಲ್ಲಿ ಶಂಕರ್ ಅವರ ಈ ಬೃಹತ್ ಸಂಪುಟದ ಸಮಗ್ರ ವಿಮರ್ಶೆ ಸಾಧ್ಯವಿಲ್ಲ. ಎಂಭತ್ತಕ್ಕೂ ಹೆಚ್ಚಿನ ಲೇಖನಗಳು ಅವರ ದಿಟ್ಟ ವಿಮರ್ಶಾ ನಿಲುವಿನಿಂದಾಗಿ ಗಮನ ಸೆಳೆದು ಚರ್ಚಾರ್ಹವೆನಿಸುತ್ತವೆಯಾದರೂ ‘ಶೂನ್ಯ ಸಂಪಾದನೆ’ ಕುರಿತ ಎರಡು ಲೇಖನಗಳು, ‘ವಚನ ಚಳವಳಿ ಮತ್ತು ವಚನಕಾರರು’, ‘ ಭಕ್ತಿ ಭಂಡಾರಿ ಬಸವಣ್ಣ’ ಮತ್ತು ‘ಕನಕದಾಸರ ಜೀವನ ಹಾಗೂ ಸಾಹಿತ್ಯ’ ಇವು ಈ ಸಂಪುಟಕ್ಕೆ ಕಳಶಪ್ರಾಯವಾದ ಲೇಖನಗಳು. ಶೂನ್ಯ ಸಂಪಾದನೆಗೆ ಸಂವಾದಿಯಾದ ಗ್ರಂಥ ಇಂಗ್ಲಿಷ್ ನಲ್ಲಿ ಇಲ್ಲ ಎನ್ನುವ ಶಂಕರ್ ಪಾಶ್ಚಾತ್ಯ ಸಾಹಿತ್ಯ ಪ್ರಪಂಚದ ಪ್ಲೇಟೋನ ‘ಡೈಲಾಗ್ಸ್’ನ ಎದುರು ನಿಲ್ಲಿಸಿ, ಹೋಲಿಕೆ ಮಾಡಿ, ‘ಶೂನ್ಯಸಂಪಾದನೆ’ ಅದಕ್ಕಿಂತ ಮಹತ್ತಾದುದು….’ಡೈಲಾಗ್ಸ್’ನಲ್ಲಿ ಯಾವಾಗಲೂ ಗೆಲ್ಲುವುದು ಪ್ಲೇಟೋನ ದೃಷ್ಟಿಕೋನವೇ…. ಶೂನ್ಯ ಸಂಪಾದನೆ ಹೆಚ್ಚು ತೆರೆದ ಮನಸ್ಸ್ಸಿನ, ಹೆಚ್ಚು ಸೃಜನಶೀಲ ಮನಸ್ಸಿನ ಕೃತಿ. ಇಲ್ಲಿ ಅನೇಕ ಧ್ವನಿಗಳು, ಅನೇಕ ದೃಷ್ಟಿಕೋನಗಳು, ಅನೇಕ ಅಭಿವ್ಯಕ್ತಿ ಕ್ರಮಗಳು ಇವೆ. ಮತ್ತೆ ಯಾವುದೇ ನಿಲುವಿನ ಗೆಲವೂ ಪೂರ್ವ ನಿಶ್ಚಿತವಾದುದಲ್ಲ, ಪೂರ್ವ ಸಂಯೋಜಿತವಾದದ್ದು ಅಲ್ಲ. ಅದು ಅನುಭವ-ವಿಚಾರಗಳು, ವಾಸ್ತವ-ಅಧ್ಯಾತ್ಮಗಳ ಮುಕ್ತ ಸಂವಾದದದಲ್ಲಿ ರೂಪುಗೊಳ್ಳುವಂಥಾದ್ದು. ಈ ವಿಶೇಷ ಪ್ರಭೆ ಶೂನ್ಯ ಸಂಪಾದನೆಯ ವಿಶಿಷ್ಟ ವಿಶೇಷ” (ಪು ೨೧೫) ಎನ್ನುವ ನಿಲುವಿನೊಂದಿಗೆ ‘ವಿಶಿಷ್ಟ ವಿಶೇಷ’ಗಳ ದರ್ಶನ ಮಾಡಿಸುತ್ತಾರೆ.

ವಚನ ಅಥವಾ ಶರಣ ಚಳವಳಿ ಜನಪರ ಚಳವಳಿಯಾದುದನ್ನು ಕಾರಣಸಹಿತ ಸ್ಫಟಿಕ ಶಿಲೆಯಂತೆ ಬಿಂಬಿಸುವ ಶಂಕರ್, “ಎಲ್ಲ ಸಾಹಿತ್ಯ ಬರವಣಿಗೆಯಲ್ಲಿ ಅಗತ್ಯವಾಗಿ ಇರಬೇಕಾದ ನೈತಿಕ ಪ್ರಜ್ಞೆ ಹಾಗೂ ಸೌಂದರ್ಯ ಪ್ರಜ್ಞೆಗಳ ಅವಿನಾಸಂಬ೦ಧವನ್ನು ರಸವಿಮರ್ಶೆಯ ಮಾನದಂಡಗಳಿಗೂ ಒಡ್ಡುತ್ತಾ ಬಸವಣ್ಣ, ಅಲ್ಲಮ, ಅಕ್ಕ ಹೇಗೆ ಕನ್ನಡದ ಅಪರೂಪದ ಹಿರಿಯಾಸ್ತಿ (ಪು ೨೩೭) ಎನ್ನುವುದನ್ನು ನಮಗೆ ಮನವರಿಕೆ ಮಾಡಿಕೊಡುತ್ತಾರೆ. ‘ಭಕ್ತಿ ಭಂಡಾರಿ ಬಸವಣ್ಣ’ ಮತ್ತು ‘ಕನಕದಾಸರ ಜೀವನ ಮತ್ತು ಸಾಹಿತ್ಯ’ ಲೇಖನಗಳಲ್ಲಿ ಸಂತರೂ ಸಮಾಜ ಸುಧಾರಕರು ಆದ ಈ ಮಹಾನುಭಾವರ ಮಾತು-ಕೃತಿ, ಆಚಾರ-ವಿಚಾರಗಳ ಮೂಲಕವೇ ಅವರ ವ್ಯಕ್ತಿತವವನ್ನೂ ತತ್ವಾದರ್ಶಗಳನ್ನು ಮನಂಬುಗೊವ೦ತೆ, ದೃಷ್ಟಿಗೊ೦ಬುವ೦ತೆ ಸಾಕ್ಷಾತ್ಕಾರಗೊಳಿಸುತ್ತಾರೆ.

ಬಸವಣ್ಣನನ್ನು ಹಾಪ್ ಕಿನ್ಸ್ಕೊಂದಿಗೆ ಹೋಲಿಸಿ”ಬಸವಣ್ಣನವರ ಮನಸ್ಸಿನಲ್ಲೂ ಇಂಥ ಪರ್ವತಗಳು, ಪ್ರಪಾತಗಳು, ಭಯ ಹುಟ್ಟಿಸುವ ಕಂದರಗಳು ಕಾಣುತ್ತವೆ; ಈ ಎಲ್ಲವನ್ನೂ ಶಿವಕೃಪೆ, ಸಾಧನೆಗಳ ಮುಖಾಂತರ ದಾಟಿ, ದಿಗಿಲು, ಸಂಶಯ, ಸ೦ಕಟಗಳ ಉತ್ಕಟ ಶ್ರದ್ಧೆಯಿಂದ, ಪ್ರಾಮಾಣಿಕತೆಯಿಂದ ಪರಿಹರಿಸಿ ಆತ್ಮತ್, ಪರಮಾತ್ಮಗಳ ಐಕ್ಯತೆಯ ಹಾಡನ್ನು ಸಂತೋಷ ಸ೦ಭ್ರಮದಿ೦ದ ಹಾಡಿದವರು ಅಪರೂಪದ ಸಂತ ಕವಿ ಬಸವಣ್ಣ”(ಪು ೨೪೬) ಎನ್ನುವ ಮಾತುಗಳಲ್ಲಿ, ಬಸವಣ್ಣ ‘ಭಕ್ತಿ ಭಂಡಾರಿ’ಯಷ್ಟೇ ಅಲ್ಲ ಇಂದಿನ ಹುಲುಮಾನವರಿಗೂ `ಬೆಳಕು’ ಎನ್ನುವುದನ್ನು ನಮ್ಮ ಪ್ರಜ್ಞೆಗೆ ತಾಕಿಸುತ್ತಾರೆ.

ಕನಕದಾಸರ ಜೀವನ ಮತ್ತು ಸಾಹಿತ್ಯ ಸುಮಾರು ಮುವತ್ತು ಪುಟಗಳಿಗೂ ಮೀರಿದ ಸುದೀರ್ಘ ವಿಮರ್ಶೆ. ಕನಕದಾಸರ ಪೂರ್ವಾಶ್ರಮವನ್ನೂ ದಾಸಾಶ್ರಮವನ್ನೂ ಸಾರೋದ್ಧಾರವಾಗಿ ನಿರೂಪಿಸುವ ಈ ಲೇಖನದಲ್ಲಿ ಕನಕರೊಳಗಿನ ಸಮಾಜ ಸುಧಾರಕ, ಆಧ್ಯಾತ್ಮಿಕ ಚಿಂತಕನ ಪ್ರಾತ್ಯಕ್ಷಿಕೆ ಇದೆ. ಕನಕರ ಬಗೆಗಿನ ಕಟು ಟೀಕೆಗಳು, ದೈವಿಕ-ಸಮಾಜಿಕ ನಡಾವಳಿಗಳ ಬಗ್ಗೆ ಅವರ ವ್ಯಂಗ್ಯ ವಿಡಂಬನೆಗಳು,ಅವರ ಕಾಣ್ಕೆ ಎಲ್ಲವನ್ನೂ ಆಮೂಲಾಗ್ರವಾಗಿ ಶೋಧಿಸುವ ಶಂಕರ್ ಅವರ ವಿಮರ್ಶಾ ವಿವೇಕ `ರಾಮಧಾನ್ಯ’ ಚರಿತ್ರೆಯ ವಿಶ್ಲೇ಼ಷಣೆಯಲ್ಲಿ ಒಂದು ನಿರ್ಣಾಯಕ ಘಟ್ಟವನ್ನು ತಲುಪಿ ಕನಕರ ಒಂದು ಸಮಗ್ರ ಶಿಲ್ಪವನ್ನು ನಮ್ಮ ಮುಂದೆ ನಿಲ್ಲಿಸುತ್ತವೆ.

ವಿಮರ್ಶೆ ತಲಸ್ಪರ್ಶಿಯಾಗಿರಬೇಕು. ಹಾಗಾಗಬೇಕಾದರೆ ಕೃತಿಯ ಅಂತರ೦ಗ ಬಹಿರ೦ಗಗಳ ವಿವೇಚನೆ, ವಿಶ್ಲೇಷಣೆಯ ಜೊತೆಗೆ ಅದರ ಪೌರಾಣಿಕ, ಐತಿಹಾಸಿಕ ಹಿನ್ನೆಲೆಗಳ ಶೋಧನೆ ಅಗತ್ಯವಾಗುತ್ತದೆ. ಶಂಕರ್ ಅವರಲ್ಲಿನ ಈ ಸಂಶೋಧಕ ಪ್ರವೃತ್ತಿ ಅವರ ವಿಮರ್ಶೆಗೆ ಹೆಚ್ಚಿನ ಮೌಲಿಕತೆಯನ್ನು ತಂದುಕೊಟ್ಟಿದೆ. ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು ಎನ್ನುತ್ತಾರೆ ವಚನಕಾರರು. ‘ವಾಗರ್ಥ’ದಲ್ಲಿ ಶಂಕರ್ ನಮ್ಮ ಸಾಹಿತ್ಯದ ಮಾತು-ಪರಂಪರೆಗಳೊಳಗಣ ಅರ್ಥ, ಸತ್ಯ, ಸೌಂದರ್ಯಗಳನ್ನು `ತಿಳಿ’ಗಣ್ಣಿನಿಂದ ನೋಡಿ ನಮ್ಮೆದುರು ತೆರೆದಿಟ್ಟುಇದ್ದಾರೆ. ಸಾಹಿತ್ಯಾಸಕ್ತರಿಗೆ, ಅಧ್ಯಯನಶೀಲರಿಗೆ ಇದೊಂದು ಅತ್ಯುತ್ತಮ ಆಕರ ಗ್ರಂಥ ಎಂದು ಹೇಳಲು ಸಂತೋಷವಾಗುತ್ತದೆ.

‍ಲೇಖಕರು Admin

December 29, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: