ವಸಂತಕುಮಾರ ಎಸ್ ಕಡ್ಲಿಮಟ್ಟಿ ಓದಿದ ‘ನುಡಿ ದೀಪ’

ಡಾ ವಸಂತಕುಮಾರ ಎಸ್ ಕಡ್ಲಿಮಟ್ಟಿ

–––––––––––––––––––––––––––––

ವೃತ್ತಿಯಿಂದ ಶಿಕ್ಷಕರು (ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರು) ಸಾಮಾಜಿಕ ವಿದ್ಯಮಾನಗಳ ತೀಕ್ಷ್ಣ ಅವಲೋಕನಕಾರರು, ಚಿಂತಕರು, ಲೇಖಕರೂ ಆದ ಶ್ರೀಮತಿ ದಾನೇಶ್ವರಿ ಬಿ. ಸಾರಂಗಮಠರ “ನುಡಿ ದೀಪ” ಅವರ ವ್ಯಕ್ತಿತ್ವದಷ್ಟೇ ಗಟ್ಟಿಯಾದ ಪುಸ್ತಕ. ಒಂದೇ ಪುಸ್ತಕದಲ್ಲಿ ವಿಭಿನ್ನ ನೆಲೆಗಟ್ಟಿನ ವಿಚಾರಗಳನ್ನ ಅಷ್ಟೇ ತೀಕ್ಷ್ಣವಾಗಿ ಆಸಕ್ತಿದಾಯಕವಾಗಿ ಚಿತ್ರಿಸುವುದು ಯಾವ ಲೇಖಕಕನಿಗೂ ಸುಲಭದ ಮಾತಲ್ಲ. ಸಾಹಿತ್ಯದ ವಿವಿಧ ಪ್ರಕಾರಗಳನ್ನ ಅವುಗಳದೇ ಆದ ರಚನಾ ಪರಂಪರೆಯನ್ನ ಅನುಸರಿಸಿಕೊಂಡೇ ಹೋಗಬೇಕೆಂಬ ನಿಯಮವೇನೂ ಇಲ್ಲ. ಯಾವುದರಲ್ಲಿ ನಿರಾತಂಕವಾಗಿ ನಿರಂತರ ಬದಲಾವಣೆಗೆ ಸಾಧ್ಯತೆಗಳು ಇರುತ್ತವೋ ಆ ಕಲೆ ಹಾಗೂ ಸಾಹಿತ್ಯದ ಪ್ರಕಾರಗಳು ತಮ್ಮ ಅಸ್ತಿತ್ವವನ್ನ ಉಳಿಸಿಕೊಳ್ಳುತ್ತ ಬಹುಕಾಲ ನಿಲ್ಲಬಲ್ಲವು.

ಮಹಾಕಾವ್ಯಗಳ ಮರೆಯಾಗುವಿಕೆಯ ಬಗ್ಗೆ ಈಚೆಗೆ ನಾವು ಅನೇಕ ಸಾಹಿತಿಗಳು ಧ್ವನಿ ಎತ್ತಿರುವುದನ್ನ ಕಾಣುತ್ತೇವೆ. ಆದರೆ ಆ ಪ್ರಕಾರದ ಸಾಹಿತ್ಯವೊಂದು ಮತ್ತೊಂದು ದಿಕ್ಕಿನಲ್ಲಿ ವಿಭಿನ್ನವಾಗಿ ಸಂಕೀರ್ಣವಾಗಿ ಉದ್ಭವ ಪಡೆಯುವುದರ ಸಂಕೇತವಾಗೇ ಇರುತ್ತೆ. ನಾವು ಭಾಷಾ ಸಂರಚನೆ ಹಾಗೂ ಸಾಹಿತ್ಯದ ಶಿಷ್ಟ ಪ್ರಕಾರಗಳ ನಿಷ್ಠೆಗೆ ಒತ್ತು ಕೊಟ್ಟಂತೆಲ್ಲ ವೈಚಾರಿಕತೆಯ ಹೊಳವುಗಳು ಗೌಣವಾಗುತ್ತ ಹೋಗುತ್ತವೆ ಎಂಬುದು ನನ್ನ ಅನಿಸಿಕೆ. ಒಬ್ಬ ಸೃಜನಶೀಲ ಲೇಖಕನಿಗೆ ಮೂಲವಾಗಿ ಬೇಕಿರುವುದು ವೈಚಾರಿಕ ವಿಭಿನ್ನತೆ. ಆಗ ಯಾವುದೇ ಭಾಷೆ, ಸಾಹಿತ್ಯಿಕ ಪ್ರಕಾರಗಳು ಸಹಜವಾಗಿ ಅವುಗಳನ್ನ ಸುತ್ತುವರಿಯುತ್ತವೆ. ಆಗಲೇ ಅಲ್ಲವೇ ಒಬ್ಬ ಸಹಜ ಲೇಖಕ ಉದ್ಭವ ಆಗುವುದು. ಇದೆಲ್ಲ ಹೇಳಲಿಕ್ಕೆ ಕಾರಣ “ನುಡಿ-ದೀಪ” ದಲ್ಲಿರುವ ವಿಶಿಷ್ಟ ಭಾಷೆ ಮತ್ತು ಪರಂಪರಾಗತ ಸಾಹಿತ್ಯಿಕ ಪ್ರಕಾರಗಳಿಂದ ವಿಭಿನ್ನತೆ ಪಡೆದ ಚಿತ್ರಣ.

ಇಲ್ಲಿ ಲೇಖಕರು ವೈವಿಧ್ಯಮಯ ವಿಚಾರಗಳನ್ನ, ಚರ್ಚೆಗಳನ್ನ, ಆದರ್ಶಗಳನ್ನ ಸಹಜವೆನ್ನುವ ರೀತಿಯಲ್ಲಿ ಪರೋಕ್ಷವಾಗಿ ಓದುಗರನ್ನು ಒಪ್ಪಿಸುವ ಬಗೆಯಲ್ಲಿ ಮಂಡನೆಯಾಗಿವೆ. ಬಹುತೇಕ ಒಂದು ಕೃತಿಯಲ್ಲಿ ಒಂದು ಬಗೆಯ ಆದರ್ಶವನ್ನ ಒತ್ತಾಯಪೂರ್ವಕವಾಗಿ ಹೇಳುವ ಇರಾದೆ ಇರುತ್ತದೆ. ಆದರೆ ಇಲ್ಲಿ ಅಂಕಣ ಬರಹಗಳ ಸಂಪಾದನೆಯ ಕೃತಿ ಎಂದು ತೀರ್ಮಾನಿಸದಿರುವಷ್ಟು ಸಂಕೀರ್ಣವಾಗಿದೆ. ಒಮ್ಮೆ ಆಳವಾದ ಸಾಮಾಜಿಕ ಚಿಕಿತ್ಸೆಯ ನೋಟವಿದ್ದರೆ, ಮತ್ತೊಮ್ಮೆ ತಾಯಿ ಹೃದಯದ ಮಮತೆ ಮಾತಾಡುತ್ತದೆ. ಒಮ್ಮೆ ಶಿಕ್ಷಣ ತಜ್ಞರ ಗಂಭೀರ ಸಲಹೆಗಳಂತೆ ಕಂಡರೆ, ಮತ್ತೊಂದು ಕಡೆ ಭಾರತೀಯ ಸಮಾಜದ ತೀರಾ ಸಾಮಾನ್ಯ ಮಹಿಳೆಯ ಅಸಹಜ ವೈಫಲ್ಯಗಳ ಗೋಳನ್ನ ಹೇಳುವ ತೀರ ಸಹಜ ಎನ್ನುವ ನಿರೂಪಣೆ ಇದೆ.

ಸುಮಾರು ಎಪ್ಪತ್ತಕ್ಕಿಂತ ಹೆಚ್ಚು ಲೇಖನಗಳಿರುವ, ಬಹುತೇಕ ಪತ್ರಿಕೆಗಳಲ್ಲಿ ಪ್ರಕಟನೆಗೊಂಡ ಇಲ್ಲಿನ ಬರಹಗಳನ್ನ ಲೇಖಕರೇ ಮೂರು ಭಾಗದಲ್ಲಿ ವಿಂಗಡಿಸಿ ಕೊಟ್ಟಿದ್ದಾರೆ. ಓದುಗನು ಲೇಖಕರ ಎಲ್ಲ ವಿಚಾರಗಳನ್ನ ಒಪ್ಪಲೇಬೇಕಿಲ್ಲ ಅಂದರೂ ಒಪ್ಪುವ ಹಾಗೆ ವ್ಯವಸ್ಥೆಯ ಮಗ್ಗಲುಗಳನ್ನು ತಮ್ಮ ಆಧಾರಕ್ಕೆ ಜಾಣತನದಿಂದ ಬಳಸಿಕೊಂಡಿದ್ದಾರೆ. ಬಹುಶಃ ಇದಕ್ಕೆ ಲೇಖಕರು ಇತರರ ಬದುಕುಗಳನ್ನ ಸಮೀಪದಿಂದ ಗಮನಿಸಿದ್ದೂ ಕೂಡ ಒಂದು ಕಾರಣವಿರಬಹುದು. ಶಿಕ್ಷಕರಾದ್ದರಿಂದ ಮಕ್ಕಳ ಮನೋಭಿಲಾಷೆಯನ್ನ ತಾಯಿ ಹೃದಯದಿಂದ ಕಂಡಿರುವುದಕ್ಕೆ ಇಡೀ ಪುಸ್ತಕದಲ್ಲಿ ಅನೇಕ ದಾಖಲೆಗಳು ಕಾಣಸಿಗುತ್ತವೆ.

ನನಗೆ ಲೇಖಕರು ಇಲ್ಲಿ ಪ್ರಸ್ತಾಪಿಸಿದ ಶೈಕ್ಷಣಿಕ ಸಂಗತಿಗಳಿಗಿಂತ ಒಬ್ಬ ಶಿಕ್ಷಕನಾದವನು ಹೇಗೆ ಸಮಾಜವನ್ನ, ವಿದ್ಯಾರ್ಥಿಗಳನ್ನ, ಇವುಗಳ ಸಂಯೋಜನೆಯಲ್ಲಿ ಶಿಕ್ಷಣದ ಪಾತ್ರವನ್ನ ಹೇಗೆ ಅರಿಯುತ್ತಾನೆ ಎಂಬುದೇ ಮುಖ್ಯವಾಗುತ್ತದೆ. ಉದಾಹರಣೆಗೆ “ಅವ್ವ ಎಲ್ಲಾ ನಿನಗಾಗಿ” ಎಂಬ ಲೇಖನದಲ್ಲಿ ಲೇಖಕರು ತಾಳ್ಮೆಯಿಂದ ವಿದ್ಯಾರ್ಥಿಯ ವೈಯುಕ್ತಿಕ ಬದುಕಿನ ಹತ್ತಿರಕ್ಕೆ ಬಂದು ಮಕ್ಕಳ ಕಲಿಕೆಯಲ್ಲಿನ ತೊಡಕುಗಳನ್ನ ಗ್ರಹಿಸುವ ರೀತಿ ನಿಜಕ್ಕೂ ಮೆಚ್ಚುವಂಥದ್ದು. ಇಂತಹ ಅನೇಕ ದೃಸ್ಟಾಂತಗಳು ಪುಸ್ತಕದಲ್ಲಿ ಕಂಡುಬರುತ್ತವೆ.

ಶಿಕ್ಷಕರು ಮಕ್ಕಳ ಬೆಳವಣಿಗೆಯ ಮನೋವೈಜ್ಞಾನಿಕ ವಿಷಯಗಳನ್ನಲ್ಲದೆ ಕಲಿಕಾ ಸಮಸ್ಯೆಗಳನ್ನ ಗುರುತಿಸಿ ಪರಿಹರಿಸುವ ನಿಟ್ಟಿನಲ್ಲಿ ಹೇಗೆ ಮಕ್ಕಳೊಂದಿಗೆ ಆತ್ಮೀಯತೆಯನ್ನ ಬೆಳೆಸಿಕೊಳ್ಳಬೇಕು ಎಂಬುದು ಇಂದಿನ ತುರ್ತು. ಆದರೆ ಶಿಕ್ಷಣದ ಯಾಂತ್ರಿಕತೆ ಬಗ್ಗೆ ವಿವರಿಸೋ ಲೇಖಕರು “ಯಾರಿಗೆ ಹೇಳೋನ್ರಿ ನಮ್ಮ ಸಂಕಟನ?” “ಎಲ್ಲದಕ್ಕೂ ಹೊಣೆ ಹೊರುವವರು ನಾವೇ ಏಕೆ?” “ರಜೆಯ ಸಜೆ” ಎಂಬ ಲೇಖನಗಳಲ್ಲಿ ಶಿಕ್ಷಕರ ಬಗ್ಗೆ ಸ್ವಲ್ಪ ಮೃದು ಧೋರಣೆ ತಳೆದಂತೆ ಕಾಣುತ್ತದೆ. ಆದರೆ ವಾಸ್ತವವಾಗಿ ಶಿಕ್ಷಕರಿಂದಾಗುವ ಅನೇಕ ದೋಷಗಳು ವ್ಯವಸ್ಥೆಗೂ ಕಾಣದಂತೆ ಮತ್ತೊಂದು ಕಡೆ ಕಾನೂನಿನ ಮೂಲಕ ಯಾಂತ್ರಿಕವಾಗಿ ಸರಿಯಾಗಿರುವ ಬಗ್ಗೆ ನನಗೆ ಅಸಮಾಧಾನವಿದೆ. ಏನೇ ಇದ್ದರೂ “ಕಳೆಯದಂತೆ ಕಟ್ಟುತ್ತ” “ಬಹುಮಾಧ್ಯಮ, ಶಿಕ್ಷಕರ ಪ್ರಸ್ತುತತೆ” ” ಬೋಧನೆಯ ಸುಖದ ಹಾದಿಯಲ್ಲಿ” ಎಂಬ ಲೇಖನಗಳಲ್ಲಿ ಲೇಖಕರು ಶಿಕ್ಷಣದ ಬಗ್ಗೆ ಹೊಂದಿರುವ ತೀವ್ರ ಕಾಳಜಿ ಇದನ್ನ ದೂರ ಮಾಡುತ್ತದೆ.

ಇನ್ನುಳಿದಂತೆ “ನನಗೂ ಆದ್ಯತೆ ನೀಡಿದ್ದರೆ..?” ಎಂಬ ಲೇಖನ ಇವತ್ತಿನ ಶಿಕ್ಷಕರಲ್ಲಿ ವಿರಳವಾಗಿರುವ ಉನ್ನತ ಅಧ್ಯಯನ ತುಡಿತವನ್ನ ವ್ಯಕ್ತಪಡಿಸುತ್ತದೆ. ಶಿಕ್ಷಕ ಸದಾ ಒಂದಿಲ್ಲೊಂದು ಅಧ್ಯಯನದ ಭಾಗವಾಗಿ ತನ್ನ ಪ್ರಸ್ತುತತೆಯನ್ನ ಉಳಿಸಿಕೊಳ್ಳಲು ಗಳಿಸಿಕೊಳ್ಳಬೇಕಾದ ಜ್ಞಾನದ ತುಡಿತವನ್ನ ಹೇಳುತ್ತದೆ. ಇವೆಲ್ಲ ಈಗಿನ ಶಿಕ್ಷಕರಲ್ಲಿ ಅಪರೂಪವೇ. ಮತ್ತೊಂದು ಕಡೆ ವ್ಯವಸ್ಥೆ ಶಿಕ್ಷಕರ ಇಂತಹ ತೀವ್ರ ಆಸಕ್ತಿಗಳಿಗೆ ಹೇಗೆ ತೊಡಕಾಗಿದೆ ಎಂಬುದನ್ನ ಕೂಡ ಅಲ್ಲಗಳೆಯುವಂತಿಲ್ಲ.

“ಕೊಡೆ ನಾ ಬಿಡೆ”, “ನೆನಪಿಗೆ ಬಾರದ ಇಂಗ್ಲಿಷ್ ಪದ್ಯವೂ ಹಾಗೂ ಕೇಳಿಸಿಕೊಳ್ಳದ ಕಿವಿಯೂ” ಎಂಬ ಲೇಖನಗಳು ಶಿಕ್ಷಕರಾಗಿ ವೃತ್ತಿಯ ಒತ್ತಡವನ್ನು ಹೇಗೆ ನಿಭಾಯಿಸಿಕೊಳ್ಳುತ್ತ ತಮ್ಮನ್ನು ತಾವು ಹಗುರಗೊಳಿಸಿಕೊಳ್ಳುತ್ತಾರೆ ಎಂದು ಹೇಳುತ್ತವೆ. ಇವಲ್ಲದೆ ರಾಂಡಿ ಪಾಶ್ ರ “ದಿ ಲಾಸ್ಟ್ ಲೆಕ್ಚರ್”, “ಕಾಡದಿರು ಹರೆಯ” ಲೇಖಕರ ಓದಿನ ಪ್ರತಿಕ್ರಿಯೆಯಾಗಿ ಹಾಗೂ ಮಕ್ಕಳ ಹರೆಯದ ಲೈಂಗಿಕ ಶಿಕ್ಷಣದ ಬಗ್ಗೆ ಅಭಿಪ್ರಾಯ ರೂಪದಲ್ಲಿ ಬಂದಿರುವ ನೈಜ ಘಟನೆಗಳ ನಿರೂಪಣೆ ಇದೆ.

ಇನ್ನು ವೈಚಾರಿಕ ಲೇಖನಗಳು ಎಂದು ವಿಭಾಗಿಸಿರುವ ಭಾಗದಲ್ಲೂ ಕೂಡ ಅಷ್ಟೇ ವೈವಿಧ್ಯಮಯ ಲೇಖನಗಳು ಕಂಡುಬರುತ್ತವೆ. ಅದರಲ್ಲೂ “ಎಸೆಯದಿರಿ ನುಡಿಯ ನಂಜು” ಲೇಖಕರ ವೈಯುಕ್ತಿಕ ಜೀವನದ ತಲ್ಲಣಗಳನ್ನ ವ್ಯಕ್ತಪಡಿಸುತ್ತಲೇ ಸಮಾಜದ ಪಾರಂಪರಿಕ ಕಟ್ಟುಪಾಡುಗಳ ಸ್ವರೂಪವನ್ನ ಎಳೆ ಎಳೆಯಾಗಿ ಚಿತ್ರಿಸುತ್ತದೆ. ಇದು ಹಿಂದೂ ಧರ್ಮದ ವ್ಯಥೆಯಾಗಿದ್ದರೂ ಕೂಡ ಮುಂದೆ ಮತ್ತೊಂದು ಲೇಖನದಲ್ಲಿ “ಬಹುತ್ವ ಭಾರತದಲ್ಲಿ ಸಹಿಷ್ಣುತೆಯ ಸುರಕ್ಷಿತ ಬದುಕು” – ಹಿಂದೂ ಧರ್ಮದವನ್ನ ಸಹಿಷ್ಣುತೆಯ ಆಗರವೆಂಬಂತೆ ಬಿಂಬಿಸಿದ್ದು ಧರ್ಮದ ಪೂರ್ವಾಗ್ರಹಗಳಿಂದ ನಾವು ಅಷ್ಟು ಸುಲಭದಲ್ಲಿ ಬಿಡುಗಡೆ ಹೊಂದಲಾರೆವೇನೋ ಎಂಬುದು ನನ್ನ ಅನಿಸಿಕೆ. ಮುಂದುವರೆದು ಅದೇ ಲೇಖನದಲ್ಲಿ ಲೇಖಕರ ಕೆಲವು ಗ್ರಹಿಕೆಗಳನ್ನ ಒಪ್ಪಲು ಸಾಧ್ಯವಿಲ್ಲ. “ಜಾತಿ ಆಧಾರದಲ್ಲಿ ಹಿಂದುಳಿದಿರುವಿಕೆ ಮತ್ತು ಮುಂದುವರೆದಿರುವಿಕೆಯನ್ನ ಗುರುತಿಸುವುದು ಅವೈಜ್ಞಾನಿಕ ಮತ್ತು ಅಮಾನವೀಯ” ಎಂಬ ಅಭಿಪ್ರಾಯವೇ ಅಸಂವಿಧಾನಿಕವಾದದ್ದು.

ಭಾರತೀಯ ಸಮಾಜದ ಮಟ್ಟಿಗೆ “ಸಮಾನತೆ” ಎನ್ನುವುದು ಕೇವಲ ಆರ್ಥಿಕ ಅಂಶಗಳ ಮೇಲೆ ಅವಲಂಬಿಸಿರುವುದಲ್ಲ. ಇಲ್ಲಿ ಜಾತಿಯೇ ಆರ್ಥಿಕ ಶೋಷಣೆಯ ಮೂಲವಾಗಿರುವಾಗ ಅದನ್ನ ಬೇರ್ಪಡಿಸಿ ಹೇಳಿಕೆಗಳ ಮೂಲಕ ನಿರ್ಧರಿಸುವುದು ಸರಿಯಲ್ಲ. ಹಾಗೆ ಸರ್ವಧರ್ಮ ಸಹಿಷ್ಣುತೆಯ ಬಗ್ಗೆ ಉಲ್ಲೇಖಿಸುತ್ತ ಆಮಿಷದ ಮೂಲಕ ಮತಾಂತರ ಮಾಡುವ ಸಂದರ್ಭದಲ್ಲಿ ಬಂದ ವಿರೋಧಗಳನ್ನ, ಪ್ರತಿರೋಧಗಳನ್ನ ಅಪಪ್ರಚಾರ ಮಾಡಿ ಹಿಂದೂ ಧರ್ಮದ ಜನರ ಕುರಿತು ಇತರರಲ್ಲಿ ಅಸಹನೀಯ ಭಾವನೆ ಮೂಡಿಸುವ ವ್ಯವಸ್ಥಿತ ಹುನ್ನಾರ ಎಂದು ಹೇಳುವ ಲೇಖಕರು ಮುಂದುವರೆದು ಜಗತ್ತಿನ ರಾಷ್ಟ್ರಗಳ ಬಹುತ್ವದ ಬಗ್ಗೆ ಪ್ರಶ್ನೆಯೆತ್ತುತ್ತಾರೆ. ಅಲ್ಲದೆ 12 ನೇ ಶತಮಾನದ ವಚನಕಾರರನ್ನ ಉಲ್ಲೇಖಿಸುತ್ತಾರೆ. ಇದೆಲ್ಲದಕ್ಕೂ ಅಂಬೇಡ್ಕರ್ ಬರಹಗಳಲ್ಲಿ ಸ್ಪಷ್ಟವಾಗಿ ನೇರವಾಗಿ ಉತ್ತರ ಸಿಗುವುದು. (ಅನ್ನಿಹಿಲೇಷ ಆಫ್ ಕಾಸ್ಟ್, ಸ್ಲೇವರಿಸಮ್ ಅಂಡ್ ಅನ್ಟಚಾಬಿಲಿಟಿ ವಿಚ್ ಇಸ್ ವರ್ಸ್ ಹಾಗೂ ಇತರೆ ಬರಹಗಳಲ್ಲಿ) ಬಹುಶಃ ಭಾರತೀಯತೆಯ ಪ್ರಜ್ಞೆಯನ್ನ ನಾವು ಹಿಂದೂಗಳು ಬಾಡಿಗೆಗೆ ತೆಗೆದುಕೊಂಡಂತೆ ವಾದಿಸುವುದು ಹೊಸದೂ ಅಲ್ಲ. ಇಲ್ಲಿರುವ ಎಷ್ಟೋ ಹೋರಾಟಗಾರರ ಹೋರಾಟಗಳು, ವಚನಕಾರರು, ಬರಹಗಾರರು, ಚಿಂತನಕಾರರು, ಸುಧಾರಣವಾದಿಗಳು, ಸನ್ಯಾಸಿ ಸಾಧು ಸಂತರುಗಳು, ದಲಿತನ ಅಸ್ತಿತ್ವದ ಯಾವ ಪ್ರಶ್ನೆಗಳಿಗೂ ಉತ್ತರಿಸಲಿಕ್ಕೆ ತಡಕಾಡುತ್ತವೆ. ನಾವೇನಾದರೂ ಸಮಾನತೆ, ಸಹಿಷ್ಣುತೆ, ಏಕತೆ, ಬಗ್ಗೆ ಮಾತಾಡುವುದಿದ್ದರೆ ಒಂದು ಗಳಿಕೆಯಷ್ಟು ನಮ್ಮದೇ ಸುತ್ತಲಿನ ದಲಿತರ ಹಾಗೂ ವಿಜಾತಿ ಜನರ ಬಗ್ಗೆ ಕಣ್ಣಾಡಿಸಿ ಮುಂದುವರೆಯುವುದನ್ನ ಅಭ್ಯಾಸ ಮಾಡಿಕೊಳ್ಳಬೇಕು.

ಇನ್ನುಳಿದಂತೆ “ಬೆಚ್ಚಿ ಬೀಳಿಸಿದ ಶಕುನ”, “ದನಪೀಡೆ ನಿವಾರಣೆ ಪವಾಡದ ಮುತ್ತತ್ತಿ” ಗಳು ಗ್ರಾಮೀಣ ಬದುಕಿನಲ್ಲಿನ ಮುಗ್ಧತೆಯ ಬಗ್ಗೆ ಬೆಳಕು ಚೆಲ್ಲುತ್ತವೆ. “ನೋವುಗಳು ಮಹಾಪೂರ ಆದರೂ ಬದುಕು ಸುಂದರ”, “ಮನುಷ್ಯರಂತೆ ಬದುಕಲು ಬಿಡಿ”, ಅಪ್ಪಟ ಮಾನವೀಯ ತುಡಿತವನ್ನ ಹೇಳುವಂತವು. ಇಲ್ಲಿ ಇನ್ನೆರಡು ಲೇಖನಗಳು ತುಂಬಾ ಗಮನ ಸೆಳೆಯುವಂತವು “ಹೆಂಡತಿಯಂತಿದ್ದು ಹೆಂಡತಿಯಾಗದವಳು”, “ನನ್ನಪ್ಪನ ಫೋಟೋಗ್ರಫಿ ಹಾಗೂ ಪಾರ್ಕಿನ್ಸನ್”. ಮೊದಲನೆಯದು ಹೆಣ್ಣಿನ ಅಸಹಾಯಕತೆಯನ್ನ ಗಂಡು ಬಳಸಿಕೊಳ್ಳುವ ರೀತಿ, ಅವಳ ಸಾಮಾಜಿಕ ಸ್ಥಾನಮಾನಗಳ ಬಗ್ಗೆ ಮದುವೆ ಹಾಗೂ ಕುಟುಂಬ ಎಂಬ ಸಂಸ್ಥೆಗಳ ಮೂಲಕ ವಿವರಿಸಿರುವುದು ಅದ್ಭುತ. ಹಾಗೆ ಎರಡನೆಯದ್ದರಲ್ಲೂ ವ್ಯಕ್ತಿಗಳ ಬದುಕಿನ ಅಸಂಗತ ತಿರುವುಗಳ ಬಗ್ಗೆ ಸೊಗಸಾಗಿ ಕಟ್ಟಿಕೊಡುವಂತ ಲೇಖನಗಳು.

ಕೃತಿಯ ಕೊನೆಯ ಭಾಗದಲ್ಲಿ ಸಂಕೀರ್ಣ ಲೇಖನಗಳು ಎಂದು ಪಟ್ಟಿ ಮಾಡಿದ್ದಾರೆ. ಇದರಲ್ಲೇ ಸುಮಾರು ಮೂವತ್ತಕ್ಕೂ ಹೆಚ್ಚು ಲೇಖನ ಬರಹಗಳ ಸಂಗ್ರಹವಿದೆ. ಇಲ್ಲೂ ಕೂಡ ಬಹುತೇಕ ವೈಯುಕ್ತಿಕ ಜೀವನದಲ್ಲಿ ನಡೆದ ಘಟನೆಗಳ ವಿಚಾರಗಳನ್ನ, ವ್ಯಕ್ತಿ ಪರಿಚಯಗಳನ್ನ ಕೊಡುತ್ತಾ ಹೋಗುತ್ತಾರೆ. “ನಾನು ಮತ್ತು ನಿರಂತರತೆ”, “ನೆನಪುಗಳ ಮಾತು ಮಧುರ”, “ನನ್ನಪ್ಪ ನನಗೊಂದು ಹೆಮ್ಮೆ”, “ಒಡಲ ಹೊಯ್ದಾಟ”, “ಮರೆಯಲಾರೆ ಇಡ್ಲಿ ಕೊಟ್ಟವಳ”, “ಟಿಪಿಕಲ್ ಇಂಡಿಯನ್ ಗೆಟಪ್”, “ಚಂದ್ರಾಮ ಚುಕ್ಕಿಯೊಂದಿಗಿನ ಪಯಣ”, “ಜಾತ್ರೆ ಎಂಬ ಅವ್ಯಕ್ತ ಸುಖ” “ಚಳಿಯಲೊಂದು ನೆನಪಿನ ಮೆರವಣಿಗೆ”, “ಅದೊಂದು ಇಲ್ಲದೆ ಹೋಗಿದ್ರೆ”.. ಹೀಗೆ ಅನೇಕ ಬರಹಗಳು ಲೇಖಕರ ಬದುಕಿನ ವಿಭಿನ್ನ ಸಂದರ್ಭಗಳಲ್ಲಿ ಎದುರಾದ ಸಂಬಂಧಗಳ ಬಗ್ಗೆ ನವಿರಾದ ಅಷ್ಟೇ ವಿಷಾದ ತುಂಬಿದ ಭಾವ ತೀವ್ರದಲ್ಲಿ ವ್ಯಕ್ತವಾಗಿವೆ.

ಮಗಳು, ಅತ್ತೆ, ಚಿಕ್ಕಮ್ಮನ ಮಗ, ತಮ್ಮ, ಕೊನೆಗೆ ಗಂಡ ಹೀಗೆ ವೃತ್ತಿಯನ್ನೂ ಒಳಗೊಂಡು ಸ್ತ್ರೀ ಸಂವೇದನೆಯ ಹುಡುಕಾಟಗಳು ಬರಹದಲ್ಲಿ ವ್ಯಕ್ತವಾಗಿವೆ. ಇವು ನಮ್ಮದೇ ಜೀವನದ ಘಟನೆಗಳನ್ನ ನೆನಪಿಸಿಕೊಂಡು ಮುನ್ನಡೆಯುವಷ್ಟು ಗಾಢವಾಗೆ ನಮ್ಮನ್ನು ತಟ್ಟುವುದರಲ್ಲಿ ಸಂದೇಹವಿಲ್ಲ. ಲೇಖಕರ ಓದಿನ ಹಿನ್ನೆಲೆಯಲ್ಲಿ ಬಂದ ಲೇಖನಗಳೂ ಕಾಣಸಿಗುತ್ತವೆ. “ನಾನು ಮತ್ತು ನಿರಂತರತೆ”, “ಬುಡುಬುಡುಕೆಯವರು”, ಜೇನಿನ ಗೂಡು ನಾವೆಲ್ಲ..” “ಸಹಕಾರಿ ಕ್ಷೇತ್ರದಲ್ಲಿ ಮಹಿಳಾ ಸಬಲೀಕರಣ” ಹೀಗೆ ಅನೇಕ.

ಈ ಭಾಗದಲ್ಲಿ “ಮಳೆಯಲ್ಲಿ ಮರೆಯಲಾಗದ ಉಪಚಾರ” ಎಂಬದು ಲೇಖಕರ ವೈಯುಕ್ತಿಕ ಅನುಭವದ ಬರಹವಾಗಿದ್ದರೂ ಸಮಾಜದಲ್ಲಿ ಜಾತಿ ಶ್ರೇಷ್ಟತೆಯ ವ್ಯಸನ ಹೇಗಿದೆ ಎಂದು ಬೇರೆಯವರಿಗೆ ವ್ಯಕ್ತಪಡಿಸುತ್ತೆ. ಇಂತಹ ಲೇಖನಗಳಿಂದ ಸಮಾಜಕ್ಕೆ ಏನೂ ಪ್ರಯೋಜನ ಇರಲಾರದು ಎಂಬುದೇ ನನ್ನ ಅಭಿಪ್ರಾಯ. ಅದೇ ರೀತಿ “ಲಿಂಗೋದ್ಭವ”, “ಶರಣ ಸಂಸ್ಕೃತಿ”, “ಕಾಯಕ ತತ್ವದ ಪ್ರಸ್ತುತತೆ” ಎಂಬ ಲೇಖನಗಳಲ್ಲಿ ಸ್ವಜಾತಿ-ಸ್ವಧರ್ಮ ರತಿ ಸ್ವಲ್ಪ ಹೆಚ್ಚೇ ಅನ್ನುವ ರೀತಿಯಲ್ಲಿ ಮೂಡಿ ಬಂದಿವೆ. ಉದಾಹರಣೆಗೆ “ಶರಣ ಸಂಸ್ಕೃತಿ..”ಯಲ್ಲಿ (261 ಪುಟ) ಲೇಖಕರು ವ್ಯಕ್ತಪಡಿಸುವ ಹಾಗೆ ಮಾಂಸಾಹಾರ ಒಂದು ಅಸಹನೀಯ ಆಹಾರ ಪದ್ಧತಿ..! ಅದೇ ಸಸ್ಯಾಹಾರ ಶ್ರೇಷ್ಟ..! ಎಂಬ ಅನಿಸಿಕೆ. ಮುಂದುವರೆದು ಅದನ್ನ ಸಾರ್ವತ್ರಿಕಗೊಳಿಸಿ ಅಪಮೌಲ್ಯವನ್ನಾಗಿ ಬಿಂಬಿಸುವಷ್ಟು ಕೀಳು ಮನಸ್ಥಿತಿ ಶರಣ ಸಂಸ್ಕೃತಿಯಲ್ಲಿದೆ ಅಂದರೆ ಅದೇ ಸಂಸ್ಕೃತಿಯ ಭಾಗವಾಗಿ ಈಗ ಜಾತಿ ಕಾರಣವಾಗೇ ದಲಿತರಿಗೆ, ಮಾಂಸಾಹಾರಿಗಳಿಗೆ ಬಾಡಿಗೆ ಮನೆಯನ್ನೂ ಕೊಡದಿರುವಷ್ಟು ಸಸ್ಯಾಹಾರಿ ಕ್ರೂರ ಪ್ರಾಣಿಗಳು ಶರಣರಲ್ಲಿ, ಲಿಂಗವಂತರಲ್ಲಿ, ವೀರಶೈವರಲ್ಲಿ ಇದ್ದಾರೆ ಅಂದರೆ ಅಂತಹ ಯಾವುದು ಕೂಡ ಒಬ್ಬ ಸಾಮಾನ್ಯನ ಬದುಕಿನ ಸಾರ್ವತ್ರಿಕ ಸ್ವೀಕಾರಾರ್ಹ ವಿಚಾರಗಳೇ ಅಲ್ಲ. ಇಂತಹ ವಿಚಾರಗಳು ಉಳಿದ ಲೇಖನಗಳ ಮೌಲ್ಯವನ್ನ ಕುಸಿಯುವಂತೆ ಮಾಡಿಬಿಡುತ್ತವೆ. ಇದೇ ಕಾರಣಕ್ಕೆ ಬಸವಣ್ಣನವರನ್ನ ಏನೇ ಹೊಗಳಿದರೂ ಅದು ಲಿಂಗಾಯತ, ವೀರಶೈವರನ್ನ ಹೊರತುಪಡಿಸಿದ ಜನಕ್ಕೆ ತಪ್ಪಾಗೇ ವ್ಯಕ್ತವಾಗುತ್ತೆ. ಹೀಗೆ ಒಂದು ಜನಾಂಗಕ್ಕೆ ಸೀಮಿತವಾದ ಹಿತಕರ ಅಂಶಗಳು ಎಂದಿಗೂ ಸಾರ್ವತ್ರಿಕ ಮೌಲ್ಯಗಳಾಗಲಾರವು. ಇದೆ ಮಾತನ್ನ “ಮರೆಯಲಾರೆ ಇಡ್ಲಿ ಕೊಟ್ಟವಳ” ಎಂಬ ಲೇಖನಕ್ಕೆ ಹೀಗೆ ಹೇಳಲಾಗದು ಕಾರಣ ಅದು ಸಂಪೂರ್ಣ ಮಾನವೀಯ ಋಣಸಂದಾಯದ ರೀತಿಯಲ್ಲಿ ಬಂದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು.

“ಕಾಯಕ ತತ್ವ ಅಂದು-ಇಂದು” ಎಂಬ ಲೇಖನದಲ್ಲಿ ಗೊಂದಲಕಾರಿ ಅಂಶಗಳು ವ್ಯಕ್ತವಾಗಿವೆ.. ಉದಾಹರಣೆಗೆ (ಪುಟ -222) “ಕರ್ಮದಿಂದ ಬರುವುದು ಜಾತಿ. ಕಾಯಕದಿಂದ ಬರುವುದು ಕರ್ಮ ಸುಡುವ ಜ್ಯೋತಿ. ಚತುರ್ವರ್ಣಗಳಾದವು, ಹೊಲೆಹದಿನೆಂಟು ಜಾತಿಗಳಾದವು ಕರ್ಮಗಳಿಂದ. ಕರ್ಮದಿಂದ ಕಾಯಕ ಜನ್ಮ ವ್ಯರ್ಥ. ಕಾಯಕದಿಂದ ಮಾನವ ಜನ್ಮ ಕೃತಾರ್ಥ…” ಹೀಗೆ ಮುಂದುವರೆಯುವ ಲೇಖನದ ಭಾಗ ಹೇಳುತ್ತಿರುವ ವಿಷಯವನ್ನ ವಿಪರೀತ ಸಂಕೀರ್ಣಗೊಳಿಸಿ ಅರ್ಥವಾಗದಂತಹ ಪುರೋಹಿತರ ಮಂತ್ರದಂತಾಗಿದೆ. ಅಂದು-ಇಂದುವಿನ ಕಾಯಕ ತತ್ವದಲ್ಲಿ ಮತ್ತೆ ಬಸವಣ್ಣನವರನ್ನೇ ಎಳೆದು ತಂದು ಹೇಳುವುದರಲ್ಲಿ ವಿಶೇಷವೇನೂ ಅನಿಸುವುದಿಲ್ಲ. ಕಾರಣ ಈ ಮನೋಧೋರಣೆ ಲಿಂಗಾಯತ, ವೀರಶೈವರ ಕಿಸೆಯಲ್ಲಿ ಭದ್ರವಾಗಿ ಕುಳಿತಿರುವ ಬಸವಣ್ಣನಾಗಿ ಮಾತ್ರ ಉಳಿದವರಿಗೆ ವೇದ್ಯವಾಗುತ್ತದೆ. ಸ್ತ್ರೀ ಸ್ವಾತಂತ್ರ್ಯ, ವೈಯುಕ್ತಿಕ ಸ್ವಾತಂತ್ರ್ಯ, ಕುಟುಂಬದ ಹಕ್ಕುಗಳ ಬಗ್ಗೆ, ಸ್ವಾವಲಂಬನೆ ಬಗ್ಗೆ, ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ಮಾತಾಡುವಾಗ ಅಲ್ಲಿ ಇಲ್ಲಿ ವಿದೇಶಿಗರನ್ನ (ಥೋರು) ಹೆಸರಿಸುವ ಲೇಖಕರು ಅಪ್ಪಿ-ತಪ್ಪಿ ನಮ್ಮದೇ ನಾಡಿನ ಅಂಬೇಡ್ಕರ್, ಸಾವಿತ್ರಿ ಬಾಯಿ ಪುಲೆ ಅಂಥವರು ನೆನಪಾಗದಿರುವುದು ವಿಷಾದವೇ ಸರಿ.

ಈ ಕೃತಿಗೆ ಡಾ. ಮೀರಸಾಬಿಹಳ್ಳಿ ಶಿವಣ್ಣ ಅವರು ಮುನ್ನುಡಿ ಬರೆದಿದ್ದು ಕನ್ನಡ ಸಾಹಿತ್ಯದ ವಾಗ್ವಾದಗಳನ್ನ ಸಂಕ್ಷಿಪ್ತವಾಗಿ ದಾಖಲಿಸಿದ್ದಾರೆ. ಅದೇ ರೀತಿ ಸಿವಿಜೆ ಪಬ್ಲಿಕೇಷನ್, ಬೆಂಗಳೂರು ಅವರಿಂದ ಪ್ರಕಟಗೊಂಡಿದೆ. ಒಟ್ಟಾರೆ ಕೃತಿಯ ಬಗ್ಗೆ ಹೇಳುವುದಾದರೆ ಮಾನವೀಯ ಬರಹಗಳನ್ನ ಇಡಿಯಾಗಿ ಕೊಡುವ ಒಂದು ಕೃತಿ ಎನ್ನುವುದು ಇದರ ಶ್ರೇಷ್ಟತೆಯಾದರೆ, ಪ್ರಬಲ ಸ್ವಜಾತಿ ಮೋಹದ ಅಥವಾ ಜಾತಿ ಶ್ರೇಷ್ಟತೆಯ ವ್ಯಸನದಿಂದ ಹೊರಗೆ ಬರದ ಟಿಪಿಕಲ್ ಇಂಡಿಯನ್ ಮೈಂಡ್ ಸೆಟ್ ರೀತಿ ಬಂದಿರುವುದು ಇದರ ಮಿತಿ ಎಂದು ಹೇಳಬಹುದು. ಮತ್ತಷ್ಟು ವಿಭಿನ್ನ ವೈಚಾರಿಕ ನೋಟಗಳಿರುವ ಕೃತಿಗಳು ಲೇಖಕರಿಂದ ಬರಲಿ ಎಂದು ಹಾರೈಸುತ್ತೇನೆ.


‍ಲೇಖಕರು Admin

September 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: