ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವರ್ಧನ್ ಕವಿತೆಗಳು

ವರ್ಧನ್

ಕವಿತೆ-1
ಅದೋ ತೆರೆ ತೆರೆ ಎದ್ದು ಕಡಲೆದೆಯ ಮೇಲೆ
ಒಂದು ತೆರೆಯೊಳಗಿಂದ ಇನ್ನೊಂದು ತೆರೆ
ಎಲ್ಲ ತೆರೆ ಸಂತಾನದಲ್ಲೂ ಇಡಿಯ ಕಡಲು
ಬಯಲ ಧಗೆಯಲ್ಲಿ ನೆರಳ ಹುಡುಕುವ ಕವಿತೆ
ಕಂಬನಿಯನಾರಿಸುವ ನಗುವ ಹುಡುಕುವ ಕವಿತೆ
ಮಡಿಲಂಥ ಕವಿತೆ
ತುಟಿಯಂಥ ಕವಿತೆ
ಮುದ್ದು ಮಗುವಂಥ ಕವಿತೆ
ಒಂದೆ ಒಂದೇ ಕವಿತೆ
ತೆರೆಯ ಒಳಗಿಂದೆದ್ದು ಇನ್ನೊಂದ ಅಳಿಸುತ್ತ ತಾನೂ ಅಳಿಯುವ ಕವಿತೆ

ಊಹುಂ, ಇದು ಸಾಲದು ಏನೋ ಐಬು,
ಛೇ, ಇದರಲ್ಲು ಲಯ ತಪ್ಪು
ಕಡಲ ಜೋಗಿಯ ಒಂದೆ ಕವಿತೆಯ ತಿದ್ದುಪಡಿ ತಿದ್ದು ಪಡಿ ಅದರ ತಿದ್ದುಪಡಿ
ತೆರೆಯ ಹಿಂದಿನ ತೆರೆಯ ಅಳಿಸುವ ಇನ್ನೊಂದು ತೆರೆ ಹಾಳೆ.
 
ಎಷ್ಟು ತಿದ್ದಿದರೇನು
ತೆರೆಯ ಲಯಗಾರಿಕೆಯ ತಪ್ಪು ಇಡಿ ಕಡಲ ಮನಸಿನ ತಪ್ಪು
ಬರಿ ಪ್ರತಿಯ ಮಾಡಿದರೆ ತಿದ್ದಬಹುದೇ!
 
ಕವಿತೆ-2
ಸುತ್ತಲೂ ಗಾಳಿ ಒಳಹೊರಗು ಗಾಳಿ ನಡುವೊಂದು ನೀರ ಪೊರೆ
ಸಾಬೂನುಗುಳ್ಳೆ,
ಹೊರಗಾಳಿಯ ಲಯಕ್ಕೆ
ಒಳಗಾಳಿಯೊತ್ತಡಕ್ಕೆ
ತೇಲುವುದು
ಮೈಮೇಲೆ ಕಾಮನಬಿಲ್ಲಿನ ಹಾಗೆ ನೂರಾರು ಲೋಕದ ಬಣ್ಣ ತುಂಬಿಕೊಂಡು
ಕುಣಿವ ಕಂದನ ಕೈಯಲ್ಲಿ ಇಳಿದು ನಿಂತು
ಟಪ್ಪೆಂದು
ನೂರು ಚೂರಾಗಿ ಒಡೆಯುವ ತನಕ
ಎಂಥ ಬೆರಗು!
 
ಕವಿತೆ-3
ನನ್ನೆದುರು ಮೈಮುರಿಯುತ್ತಾ ನಿಂತಿದೆ ಬೆಳದಿಂಗಳ ಹಾಗೆ
ಈಗಷ್ಟೇ ಸಡಿಲಿದ ತೋಳು
ಇನ್ನೂ ನಿಲ್ಲದ ಮೇಲುಸಿರು
ಪಸೆಯಾರದ ಬಿಳುಪಳಿಯದ ಒಸಡು
ಹಣೆಯ ನಸುಬೆವರಲ್ಲಿ ಅಂಟಿದ ಗುಂಗುರೆಳೆ
ಮೈ ಪೂರಾ, ಉಗುರು-ತುಟಿ ಗುರುತು
 
ಮತ್ತೊಮ್ಮೆ ಜಾರಿದ ತನ್ನ ಕನ್ನೆತನಕ್ಕಾಗಿ
ಬೀಗುತ್ತಾ

‍ಲೇಖಕರು G

19 October, 2013

6 Comments

  1. nagraj.harapanahalli

    ಚೆಂದ ಕವಿತೆಗಳು….ಕಡಲನ್ನು ಹೊಸದಾಗಿ ನೋಡುವಂತಾಯಿತು.

  2. Anonymous

    abba! kavite higella irabahude! wonderful…..
    Basavaraj

  3. mmshaik

    tumba chennaagide.

  4. Anonymous

    ಸುಂದರವಾದ ಕವಿತೆಗಳು.’ಮತ್ತೊಮ್ಮೆ ಜಾರಿದ ತನ್ನ ಕನ್ನೆತನಕ್ಕಾಗಿ ಬೀಗುತ್ತಾ’…..ಕವಿತೆ ಹೆಣ್ಣು, ಕವಿತೆ ಕಡಲು, ಕವಿತೆ ಸಾಬೂನು ಗುಳ್ಳೆ…. ಎಂಥ ಸೊಗಸಾದ ಕಲ್ಪನೆಗಳು…..

  5. MANJUNATH DOLLIN

    kavitegalu sogasagive

  6. Anonymous

    idu yaru ee vardhan?
    gandaso hengaso?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading