ವರ್ತಮಾನದ ದುರಂತಕ್ಕೆ ಕನ್ನಡಿ: ಮೊಹೆಂಜೋದಾರೋ

b m basheer

ಬಿ ಎಂ ಬಷೀರ್ 

ಅಶುತೋಶ್ ಗೋವಾರಿಕರ್ ಸದಾ ವಿಭಿನ್ನವಾಗಿ ಯೋಚಿಸುವ ನಿರ್ದೇಶಕ.

ಜನಪ್ರಿಯ ಆದರ್ಶಗಳನ್ನು ಸರಳ ನಿರೂಪಣೆಯ ಮೂಲಕ ಪ್ರೇಕ್ಷಕರಿಗೆ ತಲುಪಿಸುವ ಕಲೆ ಇವರಿಗೆ ಸಿದ್ಧಿಸಿದೆ. ಈ ಹಿನ್ನೆಲೆಯಲ್ಲಿ, ಇವರು ಯಾವುದೇ ಚಿತ್ರದಲ್ಲಿ ತೊಡಗಿದರೂ ಅದರ ಕುರಿತಂತೆ ಜನರು ಬಹು ನಿರೀಕ್ಷೆಗಳನ್ನು ಇಟ್ಟುಕೊಳ್ಳುತ್ತಾರೆ. ಆಮಿರ್ ಖಾನ್ ಅವರು ನಟಿಸಿದ ಲಗಾನ್ ಚಿತ್ರ ಇವರ ದೆಸೆಯನ್ನೇ ಬದಲಿಸಿತು.

ashutosh gourikerಅದು ಬಾಲಿವುಡ್‌ನಲ್ಲಿ ಮಾಡಿದ ದಾಖಲೆಗಳೇ, ಗೋವಾರಿಕರ್ ಪಾಲಿಗೆ ಮುಳುವಾಯಿತೇನೋ? ಆ ಬಳಿಕ ಅವರ ಪ್ರತಿ ಚಿತ್ರಗಳ ಕುರಿತಂತೆಯೂ ಜನರ ನಿರೀಕ್ಷೆ ಹಿರಿದಾಯಿತು. ಈ ನಿರೀಕ್ಷೆಗಳು ಹುಸಿಯಾದಾಗಲೆಲ್ಲ ಗೋವಾರಿಕರ್ ಚಿತ್ರಗಳು ಮುಗ್ಗರಿಸತೊಡದವು. ಲಗಾನ್‌ನ ಕನವರಿಕೆಯಲ್ಲಿದ್ದ ಪ್ರೇಕ್ಷಕರಿಗೆ ಶಾರುಕ್‌ಖಾನ್ ನಟಿಸಿದ ‘ಸ್ವದೇಶ್’ ಚಿತ್ರ ಇಷ್ಟವಾಗಲಿಲ್ಲ. ಸರಳ ಕತೆಯನ್ನು ಹೊಂದಿರುವ ದೇಶಪ್ರೇಮದ ಕುರಿತ ಅಪ್ಪಟ ಸದಭಿರುಚಿಯ ಚಿತ್ರವಾಗಿತ್ತು ಸ್ವದೇಶ್.

ಆದರೆ ಕ್ರಿಕೆಟ್ ಮೂಲಕವೇ ದೇಶಪ್ರೇಮವನ್ನು ಅರ್ಥಮಾಡಿಕೊಳ್ಳುವ ಮಂದಿಗೆ ‘ಸ್ವದೇಶ್’ ಪ್ರತಿಪಾದಿಸುವ ಹಳ್ಳಿ, ನೀರು, ವಿದ್ಯುತ್‌ನ ದೇಶಪ್ರೇಮ ನೀರಸ ಎನಿಸಿತು. ‘ಜೋಧಾ ಅಕ್ಬರ್’ ಕೂಡ ಒಳ್ಳೆಯ ಸಂದೇಶವನ್ನು ವಸ್ತುವಾಗಿಟ್ಟುಕೊಂಡು ಮಾಡಿದ ಐತಿಹಾಸಿಕ ಚಿತ್ರ. ಆದರೆ ಲಗಾನ್ ಚಿತ್ರವನ್ನು ತಲುಪಲು ಸಾಧ್ಯವಾಗಲಿಲ್ಲ. ಹೃತಿಕ್ ರೋಷನ್ ಮತ್ತು ಐಶ್ವರ್ಯ ರೈ ಅವರ ಅಭಿನಯ ಈ ಚಿತ್ರವನ್ನು ಎತ್ತರಕ್ಕೇರಿಸಿತ್ತು. ಸಂಗೀತವೂ ಎಲ್ಲರ ಎದೆಯೊಳಗೆ ಹೊಸ ಅಲೆಯನ್ನು ಎಬ್ಬಿಸಿತ್ತು. ಆದರೆ ಬಾಕ್ಸ್‌ಆಫೀಸ್‌ನಲ್ಲಿ ಅಕ್ಬರ್ ಸೋಲಬೇಕಾಯಿತು.

ಈ ಕಾರಣದಿಂದಲೋ ಏನೋ, ತನ್ನ ಇಮೇಜನ್ನೇ ಬದಲಿಸುವ ಉದ್ದೇಶದಿಂದ ‘ವಾಟ್ ಇಸ್ ಯುವರ್ ರಾಶಿ’ ಚಿತ್ರವನ್ನು ನಿರ್ದೇಶಿದರು. ಇದು ಹಾಸ್ಯ ಚಿತ್ರವಾಗಿತ್ತು. ಆದರೆ ಈ ಅಪ್ಪಟ ಸದಭಿರುಚಿಯ ಚಿತ್ರದಲ್ಲೂ ಅವರು ಯಶಸ್ವಿಯಾಗಲಿಲ್ಲ. ಖೇಲೇ ಹಮ್ ಜೀ ಜಾನೇ ಸೇ ಮತ್ತೆ ದೇಶಭಕ್ತಿಯನ್ನೊಳಗೊಂಡ ಚಿತ್ರವಾಗಿತ್ತು. ಆದರೆ ಅದು ವಿಫಲವಾಯಿತು. ಆದರೆ ಅವರ ಪ್ರತಿ ಚಿತ್ರಗಳು ಈ ನೆಲಕ್ಕೆ ಬದ್ಧವಾದವುಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರ ಚಿತ್ರಗಳು ಸದಭಿರುಚಿಯಿಂದ ಕೂಡಿರುತ್ತವೆ. ಹಾಗೆಯೇ ಜೀವಪರವಾದ ಆಶಯವನ್ನು ಹೊಂದಿರುತ್ತದೆ.

‘ಮೊಹೆಂಜೋದಾರೋ’ ಚಿತ್ರದ ಹೆಸರೇ ವಿಭಿನ್ನ ಮತ್ತು ವಿಶಿಷ್ಟವಾದುದು. ಸಿಂಧೂ ದಡದ ನಾಗರಿಕತೆಯನ್ನು ಹಿನ್ನೆಲೆಯಾಗಿಟ್ಟು ಗೋವಾರಿಕರ್‌ರಂತಹ ಅತ್ಯುತ್ತಮ ನಿರ್ದೇಶಕ ಚಿತ್ರ ಮಾಡುತ್ತಾರೆಂದರೆ ನಿರೀಕ್ಷೆಗಳು ಹುಟ್ಟುವುದು ಸಹಜ ಕೂಡ. ಗೋವಾರಿಕರ್ ಜೊತೆಗೆ ಎರಡನೆ ಬಾರಿಗೆ ಹೃತಿಕ್ ರೋಷನ್ ಕೈ ಜೋಡಿಸುತ್ತಾರೆ ಎಂದರೆ ಅದು ಪ್ರೇಕ್ಷಕ ವಲಯವನ್ನು ಇನ್ನಷ್ಟು ವಿಸ್ತರಿಸಿಕೊಳ್ಳುತ್ತದೆ.

‘ಮೊಹೆಂಜೋದಾರೋ’ ಇತಿಹಾಸಕ್ಕೆ ಬದ್ಧವಾಗಿರಬೇಕು ಎಂದು ನಾವು ಗೋವಾರಿಕರ್ ಮೂಲಕ ನಿರೀಕ್ಷಿಸುವುದು ದುಬಾರಿಯಾಗುತ್ತದೆ. ಸಿಂಧೂ ನಾಗರಿಕತೆಯ ಕುರಿತಂತೆ ಚರ್ಚೆಗಳು ಬಹಳಷ್ಟು ನಡೆದಿವೆ. ಈ ದೇಶಕ್ಕೆ ಮಧ್ಯ ಪ್ರಾಚ್ಯದಿಂದ ಆರ್ಯನ್ನರು ಕಾಲಿಡುವ ಮೊದಲೇ ಹೇಗೆ ನಾಗರಿಕತೆಯೊಂದು ಸಿಂಧೂ ನದೀ ತಟದಲ್ಲಿ ಹರಡಿತ್ತು ಎನ್ನುವುದನ್ನು ಇತಿಹಾಸ ನಮಗೆ ತಿಳಿಸಿಕೊಡುತ್ತದೆ.

ಆದರೆ ಇತಿಹಾಸದ ಚರ್ಚೆ, ಶೋಧನೆಗಳನ್ನು ಒಂದು ಜನಪ್ರಿಯ ಚಿತ್ರದಲ್ಲಿ ನಿರೀಕ್ಷಿಸುವುದೇ ತಪ್ಪು. ತನ್ನ ಮಿತಿಯಲ್ಲಿ ಗೋವಾರಿಕರ್ ‘ಮೊಹೆಂಜೋದಾರೋ’ ಚಿತ್ರವನ್ನು ಎಷ್ಟರಮಟ್ಟಿಗೆ ಪ್ರೇಕ್ಷಕರಿಗೆ ಪರಿಣಾಮಕಾರಿಯಾಗಿ ತಲುಪಿಸಿದ್ದಾರೆ ಎನ್ನುವುದಷ್ಟೇ ಇಲ್ಲಿ ಮುಖ್ಯವಾಗುತ್ತದೆ. ಕನಿಷ್ಟ ಮನರಂಜನೆಗಾದರೂ ಈ ಚಿತ್ರ ಬದ್ಧವಾಗಿದೆಯೇ ಎನ್ನುವ ದೃಷ್ಟಿಕೋನವನ್ನು ಇಟ್ಟುಕೊಂಡು ನೋಡಬೇಕಾಗುತ್ತದೆ. ಈ ನೆಲೆಯಲ್ಲಿ ನಾವು ನೋಡಿದರೂ, ಗೋವಾರಿಕರ್ ಅದರಲ್ಲಿ ಭಾಗಶಃ ವಿಫಲರಾಗಿದ್ದಾರೆ. ಒಂದು ಒಳ್ಳೆಯ ಆಶಯವನ್ನು ಚಿತ್ರ ಪ್ರತಿಪಾದಿಸುತ್ತದೆಯಾದರೂ, ದುರ್ಬಲ ಕತೆಯಿಂದಾಗಿ ಚಿತ್ರ ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ತಲುಪುವುದಿಲ್ಲ.

mohenjadaro1ಚಿತ್ರದ ಕತೆ 2016 ಬಿಸಿ(ಬಿಫೋರ್ ಕ್ರೈಸ್ಟ್) ಕಾಲದ್ದಾಗಿದ್ದರೂ, ಅದರ ನಾಯಕನ ಕತೆ ಮಾತ್ರ 70 ದಶಕದ ಬಾಲಿವುಡ್‌ನ ಹಳಸಲು ವಸ್ತು. ತಂದೆಯ ಕೊಲೆ. ಬೇರೆಯಾಗುವ ಮಗ. ಮತ್ತೆ ಅರಿಯದೇ ತನ್ನ ತಂದೆ ಆಳುತ್ತಿದ್ದ ನಾಡಿಗೆ ವಾಪಾಸಾಗುವುದು, ಅಲ್ಲಿ ತನ್ನ ತಂದೆ ಕೊಲೆಯಾಗಿರುವುದು ಅವನ ಅರಿವಿಗೆ ಬರುವುದು. ಮತ್ತು ಶತ್ರುವಿನ ವಿರುದ್ಧ ಸೇಡು ತೀರಿಸುವುದು. ಈ ಕತೆ ಬಾಲಿವುಡ್‌ನಲ್ಲಿ ಅದೆಷ್ಟೋ ಬಾರಿ ಬಂದು ಹೋಗಿದೆ. ಇಂತಹದೊಂದು ಬಬಲ್‌ಗಮ್‌ನ್ನು ಜಗಿಯಲು ಮೊಹೆಂಜೋದಾರೋ ಎನ್ನುವ 2016 ಕಾಲಘಟ್ಟವನ್ನು ಬಳಸುವ ಅಗತ್ಯವಿತ್ತೆ? ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಏಳುವುದು ಸಹಜ.

ಅಂತೆಯೇ ರಾಜಮೌಳಿಯ ‘ಬಾಹುಬಲಿ’ ಮತ್ತು ಹಾಲಿವುಡ್‌ನ ಖ್ಯಾತ ಚಿತ್ರ ‘ಗ್ಲಾಡಿಯೇಟರ್’ ಎರಡರ ಕಲಬೆರಕೆಯ ವಾಸನೆ ನಿಮ್ಮ ಮೂಗಿಗೆ ಬಡಿದರೆ ಅದರಲ್ಲಿ ನಿಮ್ಮ ತಪ್ಪೇನೂ ಇಲ್ಲ. ಚಿತ್ರದ ಮೊದಲರ್ಧ ಬಾಹುಬಲಿ ಚಿತ್ರಕ್ಕೆ ಹೋಲಿಕೆಯಾದರೆ ಇನ್ನರ್ಧ ‘ಗ್ಲಾಡಿಯೇಟರ್’ನ್ನು ಹೋಲುತ್ತದೆ. ಇದೇ ಸಂದರ್ಭದಲ್ಲಿ ಬಾಹುಬಲಿ ಒಂದು ಚಂದಮಾಮ ಕತೆ. ಅದಕ್ಕೆ ಯಾವುದೇ ಗುರಿ, ಆಶಯ ಇದ್ದಿರಲಿಲ್ಲ. ಆದರೆ ಗೋವಾರಿಕರ್ ಅವರ ‘ಮೊಹೆಂಜೋದಾರೋ’ ನಾಯಕನ ಕತೆಯನ್ನು ಹೇಳುತ್ತಲೇ ಇನ್ನೊಂದು ದುರಂತವನ್ನೂ ಹೇಳುವ ಸಣ್ಣ ಪ್ರಯತ್ನ ಮಾಡುತ್ತದೆ. ಆ ಆಶಯವೇ ಈ ಚಿತ್ರದ ಹೆಗ್ಗಳಿಕೆ. ಅದನ್ನೇ ಮುಖ್ಯ ವಸ್ತುವಾಗಿಟ್ಟುಕೊಂಡು ಚಿತ್ರ ಮಾಡಿದ್ದರೂ ಗೋವಾರಿಕರ್ ಯಶಸ್ವಿಯಾಗುತ್ತಿದ್ದರು.

ಹರಪ್ಪ ನಾಗರಿಕತೆಯ ಮೇಲೆ ದಾಳಿ ಮಾಡಿ, ಅದರ ತಳಹದಿಯ ಮೇಲೆ ಮೊಹೆಂಜೋದಾರೋ ನಗರ ನಾಗರಿಕತೆ ತಲೆಯೆತ್ತಿತ್ತು ಎಂದು ನಿರ್ದೇಶಕರು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡುತ್ತಾರೆ. ಲಾಲಸೆ, ಲೋಭ, ಸ್ವಾರ್ಥ ತುಂಬಿದ ನಗರ ಲಾಲಸೆಯ ತಳಹದಿಯ ಮೇಲೆ ಮೊಹೆಂಜೋದಾರೋ ನಿಂತಿದೆ. ಸಿಂಧೂ ನದಿಯನ್ನು ಅವಲಂಬಿಸಿದ ಈ ನೆಲದ ಕಷಿಕರ ಹಿತಾಸಕ್ತಿಯನ್ನು ಬಲಿಕೊಟ್ಟು ಮೊಹೆಂಜೋದಾರೋ ನಗರವನ್ನು ಇನ್ನಷ್ಟು ವಿಸ್ತರಿಸುವ ಭಾರೀ ಕನಸನ್ನು ಅದರ ಪ್ರಧಾನ ಮಾಹಂ(ಕಬೀರ್ ಬೇಡಿ) ಕಾಣುತ್ತಾನೆ.

ಸಿಂಧೂನದಿಗೆ ಬಹತ್ ಅಣೆಕಟ್ಟು ಕಟ್ಟಿ, ಅದರಲ್ಲಿ ಹರಿದು ಬರುವ ಚಿನ್ನದ ಗಟ್ಟಿಗಳನ್ನು ತಡೆದು, ಅಪಾರ ಸಂಪತ್ತನ್ನು ಸಂಗ್ರಹಿಸುವ ದುರಾಸೆ ಅವನದು. ಇದನ್ನು ವಿರೋಧಿಸಿದವರನ್ನೆಲ್ಲ ಸದೆಬಡಿಯುತ್ತಾರೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯ ಭಾಗವಾಗಿರುವ ‘ವಿರಾಟ್’ನ್ನು ತನ್ನ ದುರುದ್ದೇಶಕ್ಕೆ ಬಳಸಿಕೊಳ್ಳುತ್ತಾನೆ. ಅದಕ್ಕೆ ಬಲಿಯಾದವನಲ್ಲಿ ನಾಯಕ ಶರ್ಮನ್(ಹೃತಿಕ್ ರೋಷನ್)ನ ತಂದೆ ಸುರ್ಜನ್ ಕೂಡ ಒಬ್ಬ. ಈತ ಮೊಹೆಂಜೋದಾರೋದ ಪ್ರಧಾನನಾಗಿದ್ದ. ಆದರೆ ಮಾಹಂನ ಲೋಭದ ಮಾತುಗಳಿಗೆ ಮರುಳಾಗುವ ವಿರಾಟ್ ಸದಸ್ಯರೆಲ್ಲ ಮಾಹಂ ಪರವಾಗುತ್ತಾರೆ. ಅಣೆಕಟ್ಟನ್ನು ತಡೆಯಲು ಕಟ್ಟಕಡೆಯವರೆಗೆ ಪ್ರಯತ್ನಿಸುವ ಸುರ್ಜನ್ ಅಂತಿಮವಾಗಿ ಮಾಹಂನ ಮೋಸಕ್ಕೆ ಬಲಿಯಾಗಿ ಮರಣದಂಡನೆ ಶಿಕ್ಷೆ ಎದುರಿಸುತ್ತಾನೆ.

ಅಣೆಕಟ್ಟಿನ ಪರಿಣಾಮವಾಗಿ ಸಿಂಧೂ ನದಿ ತನ್ನ ದಿಕ್ಕನ್ನು ಬದಲಿಸಿಕೊಳ್ಳುತ್ತದೆ. ಪರಿಣಾಮವಾಗಿ ಕೃಷಿಕರು ಭಾರೀ ಸಂಕಟಗಳನ್ನು ಎದುರಿಸಬೇಕಾಗುತ್ತದೆ. ಆದರೆ ಕೃಷಿಗಿಂತ ಚಿನ್ನ ಮುಖ್ಯ ಎಂದು ಮಾಹಂ ಪ್ರತಿಪಾದಿಸುತ್ತಾನೆ. ಅದರಿಂದ ಇಡೀ ಮೊಹೆಂಜೋದಾರೋ ಅತ್ಯಾಧುನಿಕವಾಗುತ್ತದೆ, ಜನರೆಲ್ಲ ಈ ನಗರದ ಕಡೆಗೆ ಆಗಮಿಸುತ್ತಾರೆ, ಸಂಪತ್ತು ಅಧಿಕವಾಗುತ್ತದೆ ಎನ್ನುತ್ತಾನೆ. ಆದರೆ ರೈತರ ಕಷ್ಟಗಳು ಅಧಿಕವಾಗುತ್ತದೆ. ಸಿಂಧೂನದಿಯ ಅಣೆಕಟ್ಟಿನಿಂದ ರಾಜನಿಗೆ ಚಿನ್ನ ದೊರಕುತ್ತದೆ. ಆದರೆ ಜನರ ಸಮಸ್ಯೆ ಅದರಲ್ಲೂ ರೈತರ ಸಮಸ್ಯೆ ಭೀಕರವಾಗುತ್ತದೆ.

mohenjadaro3ಇಂತಹ ಸಂದರ್ಭದಲ್ಲೇ ಮಳೆಗಾಲದಲ್ಲಿ ಸಿಂಧೂನದಿ ತುಂಬಿ ಹರಿದು, ಇಡೀ ಅಣೆಕಟ್ಟು ಒಡೆದು ಮೊಹೆಂಜೋದಾರೋ ನಗರವನ್ನು ಸರ್ವನಾಶ ಮಾಡುತ್ತದೆ. ನಾಯಕನ ಪ್ರವೇಶ, ಇಲ್ಲಿನ ರೈತರನ್ನು ಬದುಕಿಸುತ್ತದೆ. ನಾಶವಾದ ಮೊಹೆಂಜೋದಾರೋವನ್ನು ಬಿಟ್ಟು ಇವರು ಗಂಗಾ ನದಿಯ ಕಡೆಗೆ ವಲಸೆ ಬರುವುದರೊಂದಿಗೆ ಚಿತ್ರ ಮುಕ್ತಾಯವಾಗುತ್ತದೆ.

ಮೊಹೆಂಜೋದಾರೋ ನಾಶದ ಕತೆಯನ್ನು ಹೇಳುವ ಮೂಲಕ ಗೋವಾರಿಕರ್ ವರ್ತಮಾನದ ಭಾರತಕ್ಕೆ ಕನ್ನಡಿ ಹಿಡಿದಿದ್ದಾರೆ. ಅಭಿವದ್ಧಿಯ ಕುರಿತಂತೆ ಕನಸು ಕಾಣುವ, ಲಾಲಸೆ, ಲೋಭಕ್ಕೆ ಸಿಲುಕಿ ಮೊಹೆಂಜೋದಾರೋವನ್ನು ಬಲಿಕೊಟ್ಟ ಮಾಹಂ ಮತ್ತು ಕಾರ್ಪೊರೇಟ್ ಹಿಡಿತಕ್ಕೆ ಸಿಲುಕಿ ಇಡೀ ದೇಶವನ್ನು ತನ್ನ ಸ್ವಾರ್ಥ, ಲಾಲಸೆ, ಲೋಭಗಳ ಸಂತೃಪ್ತಿಗಾಗಿ ದುರಂತಕ್ಕೆ ತಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯ ಸಮೀಕರಣವೊಂದು ಚಿತ್ರದಲ್ಲಿ ನಡೆಯುತ್ತದೆ.

ಮೊಹೆಂಜೋದಾರೋ ದುರಂತ ಮತ್ತು ಇಂದಿನ ದುರಂತಗಳ ಸಾಮ್ಯತೆಯನ್ನು ಸೂಕ್ಷ್ಮವಾಗಿ ತಿಳಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸಬೇಕು.

‍ಲೇಖಕರು Admin

August 15, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: