ವಧುವಾಗಿ ತಲೆಬಾಗಿ…

ಶ್ಯಾಮಲಾ ಮಾಧವ


ಬಿ.ಎಸ್ ಸಿ. ಮೊದಲ ವರ್ಷದ ಫೈನಲ್  ಪರೀಕ್ಷಾ ದಿನಗಳು ಸಮೀಪಿಸುತ್ತಿದ್ದುವು. ಒಂದು ರವಿವಾರ ಬೆಳಿಗ್ಗೆ ಮಗು ಮಾಮ ಮನೆಗೆ ಬಂದರು. ನಾವು ಮಕ್ಕಳನ್ನೆಲ್ಲ ಪ್ರೀತಿಯಿಂದ ಮಗೂ, ಎಂದೇ ಸಂಬೋಧಿಸುತ್ತಿದ್ದ ಅವರನ್ನು ನಾವು ಮಗು ಮಾಮ ಎಂದೇ ಅನ್ನುತ್ತಿದ್ದೆವು.

ನಾನು ಮಾಡಿ ಕೊಟ್ಟ ಶರಬತ್ ಕುಡಿದು ಹೋದ ಅವರು, ಬೊಂಬೈಯಲ್ಲಿದ್ದ  ವರನಿಗೆ, “ಹುಡುಗಿ ಪಾಸ್ ಮಾಧವಾ.‌ ಎಂಥಾ ರುಚಿಯಾದ ಶರಬತ್ ಗೊತ್ತಾ? ” ಎಂದರಂತೆ! 

ನಮ್ಮೂರ ಶಾಲಾ ಸಂಬಂಧ ತಂದೆಯವರೊಡನೆ ಮಾತನಾಡಲು ಆಗಾಗ ಬರುತ್ತಿದ್ದ ಮಗುಮಾಮನ ಅಂದಿನ ಭೇಟಿಯಲ್ಲಿ ಈ ಗುಪ್ತ  ಉದ್ದೇಶ  ಇತ್ತೆಂದು ನಾನೆಂತು ತಿಳಿಯ ಬೇಕು?

ಅಂದಿನಿಂದ ಅವರು ಮಗುಮಾಮನ ಬದಲಿಗೆ ಶರಬತ್ ಮಾಮ ಆದರು! ತಂದೆ ವಿಷಯ ತಿಳಿಸಿದಾಗ, ನನಗಾಗ ಇನ್ನೂ ಹದಿನೇಳು ವರ್ಷವಷ್ಟೇ. ನನಗೀಗಲೇ ಮದುವೆ ಬೇಡ, ಎಂದು ನಾನೆಂದರೆ, ನಿನ್ನನ್ನು ಯಾರು ಕೇಳಿದರೀಗ, ಎಂದು ಅಮ್ಮ ನಕ್ಕರು.

ನಾನು ನೋಡುವುದಿರಲಿ, ನಮ್ಮ ತಾಯಿ ತಂದೆಯೂ ಹುಡುಗನನ್ನು ನೋಡಿರಲಿಲ್ಲ. ಶಾಲಾ ಸಂಬಂಧ ಮನೆಗೆ ಬರುತ್ತಿದ್ದ ಮೂಲ್ಕಿ ಮಾಮನ  ಸೋದರಳಿಯ. ಅಣ್ಣನಿಗೆ ಮಾವನ ಮಗಳನ್ನೇ ಕೊಟ್ಟು, ತಮ್ಮನಿಗೆ ನನ್ನನ್ನು ಕೊಡುವ ಯೋಜನೆ.‌ ಹುಡುಗ ಶೈಶವದಲ್ಲೇ ಅಗಲಿದ್ದ  ತನ್ನ  ತಂದೆಯಂತೆಯೇ ಬೆಳ್ಳಗೆ. ಮುಲ್ಕಿಯಲ್ಲಿ  ಮಾವನಲ್ಲೇ ಇದ್ದು ಬೆಳೆದವ;  ಮುಂಬೈಯಲ್ಲಿ  ಮಿಲ್ ನಲ್ಲಿ ಮ್ಯಾನೇಜರ್ , ಎಂದೆಲ್ಲ ವಿವರ ಕಿವಿಗೆ ಬಿತ್ತು. 

ಓರಗಿತ್ತಿ ಆಗುವ ಅಕ್ಕ ರಾಜೀವಿ ನಮ್ಮ ಕಾಲೇಜಲ್ಲೇ  ಬಿ.ಎಸ್.ಸಿ. ಫೈನಲ್ ನಲ್ಲಿದ್ದು ಹಾಸ್ಟೆಲ್ ನಲ್ಲಿದ್ದರು.

ನನ್ನ ಪ್ರೀತಿಯ ಬಾಟನಿ ಮಿಸ್ ಲೀಲಾ ರಾವ್ ಅವರಿಗೆ, ” ಮಿಸ್, ನನ್ನ ಮದುವೆ” ಎಂದು ಆಮಂತ್ರಣ ಪತ್ರ ಇತ್ತಾಗ ಅವರ ಮುಖದ ಅಚ್ಚರಿ ಇನ್ನೂ ನೆನಪಿದೆ.

ನಮ್ಮ ಅಜ್ಜಿ ಮನೆ ಗುಡ್ಡೆ ಮನೆಯಿಂದ ಮೇ ಮೂರರ ಮುಸ್ಸಂಜೆಗೆ  ವಧುವಿನ ದಿಬ್ಬಣ ಹೊರಟಿತು. ಹೊಂಬಣ್ಣದ  ಧರ್ಮಾವರಂ ಜರತಾರಿ ಸೀರೆ, ಚಿನ್ನಾಭರಣಗಳು, ಹೊರೆಗೂದಲಲ್ಲಿ ಮಲ್ಲಿಗೆಯ ಜಲ್ಲಿಯಿಂದ ಅಲಂಕೃತಳಾದ ಮದುಮಗಳನ್ನು ಕಾಣಲು, ನೆರೆಯ ಐಸಕುಂಞಿ, ಅವರಮ್ಮ, ಅತ್ತೆ, ಮತ್ತು ಇತರ ನೆರೆಕರೆಯೆಲ್ಲ ಬಂದಾಗ,  ಬೇಬೀ, ಸಾಮಳೇ ಎನ್ನುತ್ತಾ ಕಣ್ತುಂಬಿಕೊಂಡ ಐಸಕುಂಞಿಯ ಕಣ್ಣ ಮಿಂಚಿನ ನೆನಪೂ ಇದೆ. 

ಬಂತು, ಬಂತು ಎಂಬ ಸಂಭ್ರಮದಲ್ಲಿ ಉದ್ಯಾವರದಿಂದ ಹೊರಟು ಬಂದ ವರನ ದಿಬ್ಬಣ ಗರ್ನಾಲಿನ ಸದ್ದಿನೊಡನೆ ಮನೆಯೆದುರಿನ ಗದ್ದೆಯಾಚೆ ರಸ್ತೆಯಲ್ಲಿ ಜೊತೆಯಾಯ್ತು. ಮದುವೆ ನಡೆವ ಶಾಲೆಯತ್ತ ಸಾಗುವಾಗ ಗ್ಯಾಸ್ ಲೈಟಿನ ಬೆಳಕಲ್ಲಿ  ಪಕ್ಕದಲ್ಲಿ ಹೆಜ್ಜೆ ಹಾಕುತ್ತಿದ್ದ ಮದುಮಗಳು ರಾಜೀವಿ ಅಕ್ಕ ಕಂಡಿದ್ದರು.

ಚಪ್ಪರದೂಟವಾಗಿ, ಎಲ್ಲರೂ ಹೊರಟು ಹೋಗುವಾಗ, ಜೊತೆಗಿದ್ದ ನನ್ನ ಜೀವದ ಗೆಳತಿ ಹಾಗೂ ಬಂಧು ಸ್ವರ್ಣ, ಬೆಳಿಗ್ಗೆ ಬರುವೆನೆಂದು ಹೇಳಿ , ಶಾಲೆಯೆದುರಲ್ಲೇ ಇದ್ದ ತನ್ನ ಕೊಪ್ಪಳ ಮನೆಗೆ ಹೊರಟು ಹೋಗಿದ್ದಳು. ಬೆಳಿಗ್ಗೆ ಅವಳು ಬರಲಾರಳು; ಮೈ ನೆರೆದ ಮದುವೆಯಾಗದ ಹುಡುಗಿಯರು ಮದುವೆಗೆ ಬರುವಂತಿಲ್ಲ ಎಂದು ನಾನೆಲ್ಲಿ ಅರಿತಿದ್ದೆ!

ಸರ್ವಸಿಂಗಾರವಾಗಿ ಧಾರೆಗಿಳಿಯಲು ತಯಾರಾಗಿ ಕುಳಿತಿದ್ದಾಗ, ನನ್ನ ಸಂಕದ ಅಜ್ಜಿ ಬಳಿ ಬಂದು, ಸೋದರತ್ತೆ ಶಾರದತ್ತೆ ತೊಡಿಸಿದ್ದ ಕರಿಮಣಿ ಸರದ ತಾಳಿಯನ್ನೆತ್ತಿ ಹಿಡಿದು, ನನ್ನ ತಲೆಯನ್ನು ಬಗ್ಗಿಸಿ, ” ದೃಷ್ಟಿ ಈ ತಾಳಿಯಲ್ಲೇ  ಇರಬೇಕು; ತಲೆ ಎತ್ತಿದೆಯಾದರೆ ನೋಡು; ಜಾಗ್ರತೆ”, ಎಂದು ಗದರಿಸಿದರು.

ಹಾಗೆ ಬಾಗಿದ ನನ್ನ ತಲೆ ಮೇಲೇಳಲೇ ಇಲ್ಲ! ಕಾಲೇಜಿನಿಂದ ಬಂದ ಗೆಳತಿಯರನ್ನು ನಾನು ತಲೆಯೆತ್ತಿ ನೋಡಲೇ ಇಲ್ಲ! ಕರೆದು, ಬೇಸತ್ತು, ಸಿಟ್ಟಾಗಿ ಗೆಳತಿ ಕ್ರಿಸ್ತಿನ್, ನನ್ನ ಅಂಗೈಯ ಮೇಲ್ಭಾಗವನ್ನು ಚೆನ್ನಾಗಿ ಚಿವುಟಿದ ನೋವು ಈಗಲೂ ಇದೆ..

ಸಪ್ತಪದಿ ನಡೆಯುವಾಗ ಎದುರಲ್ಲಿ ನಡೆದಿದ್ದ ವರನ ಬೆಳ್ಳನೆ ಅಂಗಾಲು ಕಣ್ಣಿಗೆ ಕಂಡಿತ್ತು. ಹಾರ ಹಾಕುವಾಗ ಕ್ಷಣಕಾಲ ಮುಖ ಕಂಡಿತ್ತು. ಅದೇ ಆಗ ಮುಂಬೈಯಿಂದ ವಿಮಾನದಲ್ಲಿ ಬಂದಿದ್ದ ಕೆಲವೇ ತಿಂಗಳ ಪುಟ್ಟ ಸುರೇಖನಿಗೆ ಅವಳಮ್ಮ – ಅಕ್ಕನ ಚಿಕ್ಕಮ್ಮ- ನೋಡು, ನೋಡು, ಸ್ಮಾಲ್ ಅಂಕಲ್ ಮದುಮಗ ಆಗಿದ್ದಾರೆ, ನೋಡು ನೋಡು, ಎಂದುದು ಕೇಳಿತ್ತು.  

ಕನ್ಯಾದಾನದ ಸಮಯ  ಉಕ್ಕಿ ಬಂದ ಅಳು ನಿಲ್ಲಲೇ ಇಲ್ಲ.  ದಿಬ್ಬಣ ವರನ ಮನೆಗೆ ಹೊರಟ ದಾರಿಯುದ್ದಕ್ಕೂ ನಾನು ದುಃಖಿಸಿ ದುಖಿಸಿ ಅಳುತ್ತಲೇ ಸಾಗಿದ್ದೆ. ಅಜ್ಜಿ ಮನೆ ಆಚೆಗಿನ ಪ್ರಪಂಚವನ್ನು  ನಾನು ಕಂಡೇ ಇರಲಿಲ್ಲ.  ನಮ್ಮ ಕೂಡು ಕುಟುಂಬದ ತುಂಬಿದ ಮನೆಯನ್ನು ತೊರೆದು ಕಾಣದ ಊರಿಗೆ ಹೋಗುವ  ಸ್ಥಿತಿ ಸಹಿಸದಾಗಿತ್ತು.

ಸಾಲದ್ದಕ್ಕೆ, ದಿಬ್ಬಣದಲ್ಲಿ ಜೊತೆಗಿದ್ದ, ದೊಡ್ಡ ಗಿರಿಜತ್ತೆ ಎಂಬವರು, ಏನೇನೋ ಹೇಳಿ ನನ್ನನ್ನು ನಗಿಸಲೆತ್ನಿಸುವಾಗ ಆ ಗ್ರಾಮ್ಯ ಭಾಷೆಯ ಪರಿಚಯವೇ ಇರದ ನನ್ನ ಅವಸ್ಥೆ ಮತ್ತೂ ಶೋಚನೀಯವಾಗಿತ್ತು.  ಮೋಡ ಮುಸುಕಿತ್ತು. ನಮ್ಮ ಭಾಷೆಯಲ್ಲಿ ಮಳೆಗೆ ಮದ ಎನ್ನುವರು. ಇವರ ಹೆಸರು ಮಾಧವನಾದ್ದರಿಂದ, “ತಪ್ಪಿಯೂ ಮದ ಬರ್ ನ್  –  ಅಂತ ಹೇಳ್ಬೇಡ. ಕಾರ್ ಹಿಡಿದು ಈಗ ಸುರಿಯುತ್ತದೆ, ಎನ್ನ ಬೇಕು”, “ಬೆಳಿಗ್ಗೆ ಎದ್ದು ಪಾತ್ರೆಯ ಮಸಿ ಹೋಗುವಂತೆ ಚೆನ್ನಾಗಿ ತಿಕ್ಕಿ ತೊಳೆಯ ಬೇಕು. ಇಲ್ಲವಾದರೆ, ನಿನ್ನತ್ತೆ ಹೀಗೆ ಆ ಮಸಿ ಬಳಿದು, ನಿನ್ನ ಹಣೆಗೆ ತಿಕ್ಕುವರು”, ಎಂದೆಲ್ಲ ಸುತ್ತ ನಗೆ ಸಿಡಿವಾಗ ನಗಿಸಲು ನೋಡುತ್ತಿದ್ದರು.

ಅರಿಯದ ಊರಿನಲ್ಲಿ ಆ ಮುಸ್ಸಂಜೆಗೆ ಕವಿದ ಮ್ಲಾನತೆ ಮತ್ತೆ ಬಹುಕಾಲ ನನ್ನೊಡನೆ ಉಳಿದಿತ್ತು. 

ನಮ್ಮವರೊಡನೆ ಮಾತನಾಡಿದ್ದು, ಮದುವೆಯಾದ ಮೂರನೆಯ ದಿನಕ್ಕೆ! 

ವೃತ್ತಿ ಜೀವನದಲ್ಲಿ ರವಿವಾರವೂ ಇರದಂತೆ ಒಂದು ದಿನವೂ ರಜೆ ಮಾಡಿರದ ನಮ್ಮವರು, ಮದುವೆಗೆಂದು ಏಳು ದಿನಗಳ ರಜೆಯಲ್ಲಿ ಬಂದವರು, ಬಾಸ್ ಖೈತನ್ ರ  ತುರ್ತು ಕರೆ ಬಂದುದರಿಂದ ಏಳನೇ ದಿನದ ಬಸ್, ರೈಲು ಪಯಣ ಬಿಟ್ಟು ಏರ್ ಪೋರ್ಟ್ ದಾರಿ ಹಿಡಿಯಬೇಕಾಯ್ತು. ಮದುವೆಗೆಂದು ಬಂದು, ಅಂದು ಬೊಂಬಾಯಿಗೆಂದು ಕಡೂರಿಗೆ ಅಂಬಾಸಿಡರ್ ಕಾರಿನಲ್ಲಿ ಪ್ರಯಾಣಿಸಿದವರು , ಹನ್ನೆರಡು ಮಂದಿ! ನನ್ನ ದೊಡ್ಡಜ್ಜ,ಅಜ್ಜಿ, ಮಗು , ನನ್ನ ಸೋದರತ್ತೆ,  ಮಾವ, ಅವರ ಇಬ್ಬರು ಮಕ್ಕಳು, ನನ್ನ ಮಾವ, ಭಾವ, ಅಕ್ಕ, , ಶರಬತ್ ಮಾಮ ಹೀಗೆ. ಈಗ ಕಲ್ಪಿಸಿ ಕೊಳ್ಳುವುದೂ ಅಸಾಧ್ಯ!

‍ಲೇಖಕರು Avadhi

September 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: