ಲೋಕೇಶ ಅಗಸನಕಟ್ಟೆ ಅವರ ಹೊಸ ಕಾದಂಬರಿ ವೈಷ್ಣವ ಜನತೋ’

ಎಚ್ ಆರ್ ರಮೇಶ

ಪ್ರಸ್ತುತ ಭಾರತದ ರಾಜಕೀಯ ಮತ್ತು ಸಾಮಾಜಿಕ ಸಂದರ್ಭಗಳನ್ನು ಇದೇ ಮಣ್ಣಿನಲ್ಲಿ ಅರಳಿ ಹೋದ ಎರಡು ಮಹಾನ್ ವ್ಯಕ್ತಿತ್ವಗಳು ತುಂಬಾ ಪ್ರಭಾವಿಸುತ್ತಿವೆ. ಆ ಎರಡು ದಿವ್ಯ ವ್ಯಕ್ತಿತ್ವಗಳೆಂದರೆ ಗಾಂಧಿ ಮತ್ತು ಅಂಬೇಡ್ಕರ್. ಇವರಿಬ್ಬರೂ ಸಂಘರ್ಷದ ಕುಲುಮೆಯಲ್ಲಿ ಧೃತಿಗೆಡದೆ ಬದುಕಿ ತಮ್ಮ ಚಿಂತನೆಗಳನ್ನು ಈ ಮಣ್ಣಿನಲ್ಲಿ ಅಂತರ್ಗತವಾಗಿಸಿದ್ದಾರೆ. ಈ ಇಬ್ಬರ ಚಿಂತನೆಗಳನ್ನು ಹೊರತು ಪಡಿಸಿ ಪ್ರಸ್ತುತವನ್ನು ಅರಿಯುವುದಾಗಲೀ ಮತ್ತು ನಾಳೆಯನ್ನು ಆಗಮಿಸಿಕೊಳ್ಳುವುದಕ್ಕಾಗಲಿ ಆಗುವುದೇ ಇಲ್ಲ. ಈ ದೇಶಕ್ಕೆ ಸದ್ಯ ಮತ್ತು ಭವಿಷ್ಯ ಈ ಇಬ್ಬರೇ ಆಗಿದ್ದಾರೆ.

ಗಾಂಧಿ ವ್ಯಕ್ತಿಯ ಆಂತರಿಕ ಅರಿವಿನ ಮೂಲಕ ಸಮಾಜವನ್ನು ಕಟ್ಟಲು ಪ್ರಯತ್ನಪಟ್ಟರೆ, ಅಂಬೇಡ್ಕರರು ವ್ಯಕ್ತಿಯನ್ನು ಆವರಿಸಿಕೊಂಡಿರುವ ಜಾತಿಯತೆ, ಮೌಡ್ಯತೆಗಳನ್ನು ಕಿತ್ತು ಹಾಕುವುದರ ಮೂಲಕ ಸಮಾಜವನ್ನು ಕಟ್ಟಲು ಪ್ರಯತ್ನಪಡುತ್ತಾರೆ. ಅಂಬೇಡ್ಕರರದು ಅನುಭವಿಸಿದ ನೋವು. ಗಾಂಧಿಯದು ಅಂತಃಕರಣದ ಮಿಡಿತ. ಇವೆರಡು ಮಿಳಿತಗೊಂಡರೆ ಆಗುವ ಪರಿಣಾಮ ನಿಜವಾದ ಸಂಚಲನ, ಕ್ರಾಂತಿ. ಇವರಿಬ್ಬರ ಚಿಂತನೆಗಳ ಜೊತೆ ಬುದ್ಧನ ಮತ್ತು ಬಸವನ ಚಿಂತನೆಗಳನ್ನು ಅಂತರ್ಗತವಾಗಿಸಿಕೊಂಡು, ಜೊತೆಗೆ ಒಂದು ಚಿಟಿಕೆಯಷ್ಟು ಮಾರ್ಕ್ಸ್ ನ ಚಿಂತನೆಗಳನ್ನು ಮಿಶ್ರಗೊಳಿಸಿಕೊಂಡು ಲೋಕೇಶರು ಒಂದು ಮೋಹಕವಾದ ಕಾದಂಬರಿಯನ್ನು ಕಟ್ಟಿದ್ದಾರೆ. 

 ಆ ಮಹಾನ್ ಚೇತನಗಳ ಚಿಂತನೆಗಳನ್ನು ಒಟ್ಟುಗೂಡಿಸಿ ಸಮಾಜವನ್ನು ರೂಪಿಸಿಕೊಳ್ಳುವುದು ಪ್ರಾಯೋಗಿಕವಾಗಿ ಆಗುವುದೋ ಇಲ್ಲವೋ ಅದು ಬೇರೆ ಮಾತು; ಆದರೆ, ಆ ಥರದ ಒಂದು ಸಮಾಜವನ್ನು ರೂಪಿಸಿಕೊಳ್ಳುವ ಆಶಯವನ್ನು ತಮ್ಮ ಕಾದಂಬರಿಯಲ್ಲಿ ಲೋಕೇಶ್ ಅವರು ತುಂಬಾ  ಬ್ಯೂಟಿಫುಲ್ ಆಗಿ ಕಾಣಿಸಿದ್ದಾರೆ. ಇದೊಂದು ಕನಸು ಅಥವಾ ಆದರ್ಶ. ಕನಸು ಬೇಕಲ್ಲ ಬದುಕನ್ನು ಮತ್ತು ಸಮಾಜವನ್ನು ಹಾಗೂ ಮನಸ್ಸನ್ನು ಹಸನುಮಾಡಿಕೊಳ್ಳುವುದಕ್ಕೆ. ಜಗತ್ತಿನ ಶ್ರೇಷ್ಟ ಬರಹಗಾರರೆಲ್ಲ ಸುಂದರವಾದ ಕನಸುಗಾರರೇ ಆಗಿಹರು. ಇರುವ ಪ್ರಪಂಚವನ್ನು ತುಸು ಬೇರೆಯಾಗಿಯೇ ತೋರಿಸುತ್ತಾರೆ. 

ಈ ಕೃತಿಯ ಲೇಖಕರೂ ಸಹ ಅದೇ ಬಗೆಯ ಕನಸನ್ನು ಇಟ್ಟುಕೊಂಡಿರುವವರು. ಈ ಕೃತಿಯನ್ನು ಓದುವಾಗ ಹೌದಲ್ಲ ಎಷ್ಟು ಚೆನ್ನಾಗಿದೆ, ನಾವು ಬದುಕುತ್ತಿರುವ ಸಮಾಜ ಯಾಕೆ ಇಷ್ಟೊಂದು ಅದ್ವಾನವಾಗಿ ಹೋಗಿದೆ, ಇದು ಸರಿಯಾಗ ಬೇಕು, ಅದರಲ್ಲೂ ಜಾತಿಯತೆಯಿಂದ ನರಳುತ್ತಿರುವ ನಮ್ಮ ಭಾರತೀಯ ಸಮಾಜಕ್ಕೆ ಮೇಜರ್ ಸರ್ಜರಿಯ ಅವಶ್ಯಕತೆಯೇ ಇದೆ ಅನ್ನಿಸುತ್ತದೆ. ಲೋಕೇಶ ಅಗಸನಕಟ್ಟೆಯವರ ಈ ಹೊಸ ಕಾದಂಬರಿ ವೈಷ್ಣವ ಜನತೋ ಆ ಥರದ ಒಂದು ಪ್ರಯತ್ನವನ್ನು ಮಾಡಿದೆ. ಹೊಸ ಸಮಾಜವನ್ನು ತೋರಿಸುತ್ತದೆ. ಹೊಸದೆಂದರೆ ಅದು ಎಲ್ಲೋ ಆಕಾಶದಿಂದು ದುತ್ತೆಂದು ಉದುರುವುದಲ್ಲ, ಬದಲಿಗೆ ಅದ್ವಾನಗಳ ಜೊತೆಯಲ್ಲೇ ಹೊಸ ದಾರಿಗಳನ್ನು ಕಂಡುಕೊಂಡು, ಹೊಸ ಮನುಷ್ಯರಾಗಬಹುದಾದ ಸಾದ್ಯತೆ.

ಲೋಕೇಶರು ತಮ್ಮ ಶ್ರೇಷ್ಟಮಟ್ಟದ ಕಲಾವಂತಿಕೆ, ಸಮಚಿತ್ತದ ಕಥನಗಳಿಂದ ಸಾಕಾರಗೊಳಿಸಿದ್ದಾರೆ. ಗಾಂಧೀ ಮತ್ತು ಬಾಬಾ ಸಾಹೇಬರ ಚಿಂತನೆಗಳನ್ನು ಸಾಹಿತ್ಯದೊಳಕ್ಕೆ ತಂದು ಮನುಷ್ಯರ ಬದುಕನ್ನು, ಸಮಾಜವನ್ನು ಚಿತ್ರಿಸಿರುವ ಕ್ರಮ ಕನ್ನಡದ ಓದುಗರನ್ನು ಚುಂಬಕ ಶಕ್ತಿಯಂತೆ ಸೆಳೆಯುತ್ತದೆ. ಕೆಲವೊಮ್ಮೆ ನಿರೂಪಣೆಯೊಳಗೆ ಕಾದಂಬರಿಕಾರರ ಆಲ್ಟರ್ ಇಗೋ ನುಸುಳಿ ಇದೊಂದು ಕಾದಂಬರಿಯೋ ಅಥವಾ ಅವರಿಬ್ಬರ ತೌಲನಿಕ ಕಥನವೋ ಎಂದುಕೊಳ್ಳುವಂತೆ ಮಾಡುತ್ತಾರೆ. ಅಂದರೆ, ಅಷ್ಟರ ಮಟ್ಟಿಗೆ ಈ ಇಬ್ಬರ ಚಿಂತನೆಗಳು ತೀವ್ರ ಥರದಲ್ಲಿ ಅವರನ್ನು ಪ್ರಭಾವಿಸಿ, ಕಾಡಿಸಿ ಬದುಕಿನ ಪಾತ್ರಗಳ ಮೂಲಕ ಹೊರಹೊಮ್ಮಲು ಪ್ರೇರೇಪಿಸಿದ್ದಾವೆ.

ಈ ಇಬ್ಬರ ಚಿಂತನೆಗಳು ಮುಖಾಮುಖಿಯಾಗುವುದನ್ನು ಮತ್ತು ಮಿಳಿತಗೊಳ್ಳುವುದನ್ನು ಕಾದಂಬರಿಯನ್ನು ಓದುವಾಗ ಅನುಭವಿಸಿಯೇ ತೀರಬೇಕು. ನನ್ನ ಓದಿನ ಮಿತಿಯಲ್ಲಿ ಹೇಳುವುದಾದರೆ ಈ ಥರದ ಪ್ರಯತ್ನ ಇತ್ತೀಚಿನ ಬರಹಗಳಲ್ಲಿಯೇ ಫಸ್ಟ್ ಆಫ್ ಇಟ್ಸ್ ಕೈಂಡ್. ನಟರಾಜ ಹುಳಿಯಾರರು ತಮ್ಮ ಕಾಮನ ಹುಣ್ಣಿಮೆಯಲ್ಲಿ ಈ ಥರದ ಒಂದು ಪ್ರಯತ್ನ ಮಾಡಿದ್ದಾರೆ. ಆದರೆ ಇಲ್ಲಿ ಆ ಚಿಂತನೆಗಳಿಗೆ ಒಂದು ದೊಡ್ಡ ಹರಹು ಮತ್ತು ಸಮಗ್ರತೆ ಹಾಗೂ ಸೌಪಜ್ಞತೆ ಸಿಕ್ಕಿದೆಯೆಂದೇ ಹೇಳಬಹುದು.

ಕಲ್ಪನೆಯಿಲ್ಲದಿದ್ದರೆ ಕಾದಂಬರಿ ತನ್ನ ಅಸ್ತಿತ್ವವನ್ನೇ ಪಡೆಯುವುದಿಲ್ಲ. ಸೋಜಿಗದ ವಿಷಯವೆಂದರೆ ಲೋಕೇಶರು ವಾಸ್ತವವಾದಿ ಕ್ರಮವನ್ನು ಕಲ್ಪನೆಯು ಕಾಣದಂತೆ ಮಾಡಿದ್ದಾರೆ. ಅದು ಎಷ್ಟರ ಮಟ್ಟಿಗೆ ಎಂದರೆ, ಇಲ್ಲಿ ನಡೆಯುತ್ತಿರುವುದೆಲ್ಲ, ಆಗಿರುವುದೆಲ್ಲ ನಿಜ, ವಾಸ್ತವ ಎನ್ನುವಂತೆ ಇವರ ಕಥನ ಶೈಲಿ ಓದುಗರನ್ನು ಸಮ್ಮೋಹನಗೊಳಿಸುತ್ತದೆ. ಇದಕ್ಕೆ ಪುಷ್ಟಿಕೊಡುವಂತೆ ಸ್ವಾತಂತ್ರೋತ್ತರದ ಐವತ್ತು, ಅರವತ್ತರ ದಶಕದ ಕರ್ನಾಟಕದಲ್ಲಿ, ಮುಖ್ಯವಾಗಿ ದಾವಣಗೆರೆ ಮತ್ತು ಅದರ ಸುತ್ತ ಮುತ್ತಲಿನ ಕೆಲ ಹಳ್ಳಿಗಳಲ್ಲಿ ಜರುಗಿದ ಚಳವಳಿಗಳು, ಘಟನೆಗಳು ಮತ್ತು ಅದಕ್ಕೆ ಸಾಕ್ಷಿಯಾಗಿದ್ದ ಕೆಲವು ವ್ಯಕ್ತಿಗಳು ಮತ್ತು ನಾಯಕರೂ ಪಾತ್ರಗಳಾಗಿ ಮೂಡಿವೆ. ಕಾದಂಬರಿಯಲ್ಲಿಯೇ ಕಾಲದ ಉಲ್ಲೇಖಿಸಿದಂತೆ ಅಂದರೆ ಕಾದಂಬರಿಯಲ್ಲಿನ ಬಸನಕಟ್ಟೆಯಲ್ಲಿನ ದಲಿತರಿಗಾಗಿ ಬಾವಿಯನ್ನು ತೋಡಿಸುವ ಘಟನೆ- 1927 ರಲ್ಲಿ ಬಾಬಾ ಸಾಹೇಬರ ಮಹಾದ್ ಕೆರೆಯ ಸತ್ಯಾಗ್ರಹ ಆದ ಮುವತ್ತು ವರ್ಷದ ನಂತರ- ಜರುಗುತ್ತದೆ.

ಈ ಕಾದಂಬರಿಗೆ ಒಂದು ‘ಬಂಧ’ ಎನ್ನುವಂತಹದ್ದು ಇಲ್ಲ. ಮತ್ತು, ಇದೊಂದು ಘಟನೆಗಳ ಕೊಲಾಜ್ ಎಂದು ಒಮ್ಮೊಮ್ಮೆ ಅನ್ನಿಸಿದರೂ ಓದುವಾಗ, ಇಡೀ ಕಾದಂಬರಿಯನ್ನು ಓದಿಯಾದ ಮೇಲೆ ಹೌದು ಇಲ್ಲಿ ಘಟನೆಗಳ ರಾಶಿಯೇ ಇದೆ, ಒಂದು ಕೇಂದ್ರವಿಲ್ಲ; ಆದರೆ ಪ್ರತಿ ಘಟನೆ ಮತ್ತೊಂದಕ್ಕೆ ಕಾರಣವಾಗಿ ಬರುತ್ತದೆ. ಅವೆಲ್ಲವೂ ಬಸನಕಟ್ಟೆಯೆಂಬ ಹಳ್ಳಿಯಲ್ಲಿ ಜರಗುವಂತಹವು. ಸ್ವಲ್ಪಮಟ್ಟಿಗೆ ದಾವಣಗೆರೆ ನಗರದಲ್ಲಿ ನಡೆಯುವಂತಹವು. ಹಾಗಾಗಿ ಈ ಸ್ಥಳಗಳೇ ರೂಪಕಗಳಾಗಿ, ಪಾತ್ರಗಳಾಗಿ ಒಡಮೂಡಿವೆ ಅನ್ನಿಸುತ್ತದೆ. ಬಸನಕಟ್ಟೆಯೇ ಇಡೀ ಕತೆಯ ಕೇಂದ್ರಬಿಂದುವಾಗಿ ಕಾಣುತ್ತದೆ. ಮತ್ತು, ಅದೇ ಒಂದು ಮುಖ್ಯ ಪಾತ್ರವಾಗಿ ರೂಪಾಂತರಗೊಳ್ಳುತ್ತದೆ. ಆ ದೃಷ್ಟಿಯಲ್ಲಿ ನೋಡಿದಾಗ ಇದಕ್ಕೆ ಒಂದು ‘ಬಂಧ’ವೆನ್ನುವುದು ಸಿಕ್ಕಂತಾಗುತ್ತದೆ. ಇದಕ್ಕೆ ಗಾಂಧಿ ಮತ್ತು ಬಾಬಾ ಸಾಹೇಬರ ಚಿಂತನೆಗಳು ತುಂಬಾ ಗಟ್ಟಿಯಾದ ಹೆಣಿಗೆಯನ್ನು ಒದಗಿಸಿವೆ.

ಇಡೀ ಕಾದಂಬರಿಯ ಕತೆಯನ್ನು ಸಂಕ್ಷಿಪ್ತೀಕರಿಸಿ ಹೇಳಲು ಆಗುವುದಿಲ್ಲ, ಯಾಕೆಂದರೆ ಇಲ್ಲಿ ನಡೆಯುವುದು ಒಂದಾ ಎರಡಾ?! ಒಂದರ ನಂತರ ಒಂದರಂತೆ ಘಟನೆಗಳು ಜರುಗುತ್ತಾ ಹೋಗುತ್ತವೆ; ಅದೂ ತೀವ್ರಗತಿಯಲ್ಲಿ! ವಾಸ್ತವವಾದಿ ನಿರೂಪಣಾ ಕಾದಂಬರಿಯಲ್ಲಿ ಹೀಗೆ ನಡೆಯುವುದು ತುಂಬಾ ವಿರಳವೇ ಅನ್ನಬೇಕು. ಕಾಟನ್ ಮಿಲ್‍ಗಳಿದ್ದಾವೆ ಅಲ್ಲಿ ಕೆಲಸ ಮಾಡುವ ಕಾರ್ಮಿಕರಿದ್ದಾರೆ, ಬಂಡವಾಳ ಶಾಹಿಗಳಿದ್ದಾರೆ, ಶೋಷಣೆ, ಅಸಮಾನತೆ, ಪೋಲೀಸ್ ಅಟ್ರಾಸಿಟಿ, ದೌರ್ಜನ್ಯ, ಚಾದಂಗಡಿ, ಅಲ್ಲಿ ನಡೆಯುವ ಬೈಠಕ್ ಗಳು, ಚರ್ಚೆಗಳು, ಹಾಲು ಮಾರುವುದು, ಹಾಲಿಗೆ ನೀರು ಬೆರೆಸುವುದು, ಜಾತಿಯತೆ, ಖಾದಿ ಗ್ರಾಮೋದ್ಯೋಗ, ಒಳ ಸಂಚು, ಪಿತೂರಿ, ಮಡಿಕೆ ಮಾಡುವುದು, ಭಜನೆ ಪದ, ತತ್ವಪದ, ಗೌಡ, ಪಟೇಲರ ದಬ್ಬಾಳಿಕೆ, ಅವಮಾನ, ಹಿಂಸೆ, ಅಹಿಂಸೆ, ಹಳ್ಳಿಯ ವೈದ್ಯಕೀಯ ಪದ್ಧತಿ, ಬಾವಿ ನೀರಿಗಾಗಿ ಜಗಳ ಆಗುವುದು, ವಿಧವಾ ವಿವಾಹ, ಪ್ರೇಮವಿವಾಹ, ನವಿಲುಗಳ ಕುಣಿತ, ಹೆರಿಗೆ, ಪ್ರಸವವೇದನೆ, ಬಯಲು ಸೀಮೆಯ ಪರಿಸರ ಚಿತ್ರಣ, ಸೈಕಲ್ ಸವಾರಿ, ರಾಯಲ್ ಬಸ್ ಪ್ರಯಾಣ, ಮಠ, ಧಾರ್ಮಿಕ ಸುಧಾರಣೆ, ಕ್ರಾಂತಿ ಹೀಗೆ ಇದರ ಕಥಾ ಹರಹು ತುಂಬಾ ವಿಸ್ತಾರವಾಗಿದೆ.

ಆದರೆ ತುಂಬಾ ಆಸಕ್ತಿದಾಯಕವಾದ ಸಂಗತಿಯೆಂದರೆ ಲೋಕೇಶರು ಗಾಂಧಿ ಮತ್ತು ಬಾಬಾ ಸಾಹೇಬರ ಚಿಂತನೆಗಳ ಮೂಲಕ ಹೇಗೆ ರೂಪಿಸಿಕೊಳ್ಳಬಹುದು, ಹಾಗೆ ಮಾಡುವಾಗ ಏನೆಲ್ಲ ಸಂಘರ್ಷ, ಸವಾಲುಗಳು ಎದುರಾಗುವುವು ಎನ್ನವುದನ್ನು ಮನಸ್ಸಿಗೆ ಮುಟ್ಟುವಂತೆ ಅಭಿವ್ಯಕ್ತಿಸಿರುವುದು.

ಬಸನಕಟ್ಟೆಯಿಂದ ಕೊಂಡವಾಡಕ್ಕೆ ತಮ್ಮ ಗಬ್ಬಾದ ಎಮ್ಮೆ ಭಾರತಿಯನ್ನು ಮತ್ತದರ ಮಗಳು ಮಣಕನನ್ನು ಇಬ್ಬರು ಹುಡುಗರು ಮತ್ತೆ ಅವರ ಅಮ್ಮ ಬಸವ್ವ ಹುಡುಕಿಕೊಂಡು ಹೋಗುವುದರ ಮೂಲಕ ಆರಂಭವಾಗುವ ಕಾದಂಬರಿ ಮತ್ತೆ ಹಿಂದಕ್ಕೆ ಮರಳಿ ಬಸನಕಟ್ಟೆ ಮತ್ತೆ ದಾವಣಗೆರೆಯಲ್ಲಿ ನಡೆವೆ ಘಟನೆಗಳ ಸುರುಳಿಯನ್ನು ಬಿಚ್ಚುತ್ತಾ ಹೋಗುವ ಈ ಕಾದಂಬರಿ, ಕನಸು, ಆದರ್ಶಗಳನ್ನು ಇಟ್ಟುಕೊಂಡ ಮಧ್ಯ ವಯಸ್ಕ, ಗಾಂಧಿವಾದಿ ವಾಸಣ್ಣ, ಹಾಲು ಮಾರುವ ಕೊಟ್ರೀಶಿ, ಬಸವ್ವ, ಮಲ್ಲವ್ವ, ಗಿರಿಯಜ್ಜ, ಕುಂಬಾರ ನಿಂಗಜ್ಜ, ದಲಿತರ ಬಸವರಾಜು, ಶೀಲ, ವೆಂಕಬೋವಿ, ಶಂಭಯ್ಯ, ಮಠದ ಸ್ವಾಮಿಗಳು, ರಾಜಕಾರಣಿ ದುಗ್ಗಪ್ಪ, ಕಮ್ಯುನಿಸ್ಟ್ ಹೋರಾಟಗಾರ ಪಂಪಾಪತಿ, ಶಿಂಧೆ, ದಲಿತ ಚಳವಳಿಯ ಹೋರಾಟಗಾರರು, ಹೀಗೆ ಅನೇಕ ವ್ಯಕ್ತಿಗಳ ಬದುಕುಗಳನ್ನು ತೆರೆದಿಡುತ್ತದೆ. ಬಸನಕಟ್ಟೆಗ ವಾಸಣ್ಣನ ಆಗಮನವಾದ ಮೇಲೆ ಆ ಹಳ್ಳಿಯಲ್ಲಿ ತೀವ್ರಗತಿಯಲ್ಲಿ ಘಟನೆಗಳು ಜರುಗುತ್ತ ಹೋಗುತ್ತವೆ.

 ಕೆಲವು ಘಟನೆ, ಪ್ರಸಂಗ ಮತ್ತು ಪಾತ್ರಗಳು:

ಅಪಾರವಾದ ಸಾಮಾಜಿಕ ಕಳಕಳಿ ಮತ್ತು ಜಾತ್ಯಾತೀತ ಮನಸ್ಸಿನ ವಾಸಣ್ಣ ಅಪ್ಪಟ ಗಾಂಧಿವಾದಿ. ಬಸವರಾಜನ ಸಂಪರ್ಕದಿಂದಾಗಿ ಬಾಬಾ ಸಾಹೇಬರ ಚಿಂತನೆಗಳಿಗೂ ಮಾರುಹೋಗಿ, ಗಾಂಧಿ ಮತ್ತು ಬಾಬಾಸಾಹೇಬರ ಚಿಂತನೆಗಳು ಮಿಳಿತಗೊಂಡ ಆದರ್ಶ ಸಮಾಜದ ಕನಸನ್ನು ತುಂಬಿಕೊಂಡು ಅದನ್ನು ಸಾಕಾರ ಗೊಳಿಸಿಲು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸೋಲಗಳ ಸರಮಾಲೆಯನ್ನೇ ಕಂಡರೂ ಎಲ್ಲೂ ಧೃತಿಗೆಡದೆ ಹಾಗೂ ತನ್ನ ಚಿಂತನೆಗಳನ್ನು ಯಾವ ಸಂದರ್ಭಗಳಲ್ಲು ರಾಜಿಮಾಡಿಕೊಳ್ಳದೆ ಶತ್ರುಗಳ ಜೊತೆ ಅನೇಕ ಮಿತ್ರರನ್ನು ಪಡೆಯುತ್ತ ಆ ಊರಿನ ಅದಮ್ಯ ನೈತಿಕ ಶಕ್ತಿಯಾಗಿ ಕಾಣುತ್ತಾನೆ.

ಜಾತಿಯಿಂದ ಬ್ರಾಹ್ಮಣನಾದರೂ ಎಲ್ಲೂ ಮತ್ತೂ ಯಾರ ಮೇಲೂ ಬ್ರಾಹ್ಮಣಿಕೆಯನ್ನಾಗಲಿ, ವೈದಿಕ ಶಾಹಿಯನ್ನಾಗಲಿ ಹೇರುವುದಿಲ್ಲ. ಕನ್ನಡ ಕಾದಂಬರಿ ಲೋಕದಲ್ಲಿ ಬಂದಿರುವ ಬಹುಮುಖ್ಯ ಪಾತ್ರಗಳ ಸಾಲಿಗೆ ವಾಸಣ್ಣನ ಪಾತ್ರವೂ ಸ್ಥಾನವನ್ನು ಪಡೆಯುತ್ತದೆ. ಖಾದಿ ಕೇಂದ್ರಕ್ಕೆ ಮೇನೆಜರ್ ಆಗಿ ನೇಮಕಗೊಂಡು ಬಸನಕಟ್ಟೆಗೆ ಬರುವ ವಾಸಣ್ಣ, ಊರಲ್ಲಿ ನಡೆಯುವ ಅನೇಕ ಘಟನೆ ಮತ್ತು ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಾನೆ ಮತ್ತು ಅವುಗಳ ಒಂದು ಭಾಗವೂ ಆಗುತ್ತಾನೆ.

ಗಾಂಧಿಯು ಬಾಬಾ ಸಾಹೇಬರನ್ನು ಮುಖಾಮುಖಿಯಾದರೆ ಏನೆಲ್ಲ ಪ್ರಶ್ನೆಗಳನ್ನು ಕೇಳಬಹುದೋ ಆ ಥರದ ಪ್ರಶ್ನೆಗಳನ್ನು ಇಲ್ಲಿ ವಾಸಣ್ಣ ಬಸವರಾಜುವಿನಿಂದ ಎದುರಿಸಬೇಕಾಗುತ್ತದೆ. ಕೆಲವೊಂದು ಪ್ರಶ್ನೆಗೆ ಉತ್ತರಿಸಲಾರದೆ ಮೌನವಾಗುತ್ತಾರೆ. ಬಸವರಾಜು  ತುಂಬಾ ತಿಳಿದುಕೊಂಡಿರುವ ದಲಿತ ಯುವ ತರುಣ. ಇವರಿಬ್ಬರ ಪ್ರತಿ ಭೇಟಿಯಲ್ಲೂ ಗಾಂಧಿ ಮತ್ತು ಬಾಬಾ ಸಾಹೇಬರ ವಿಚಾರಗಳ ಸಂಘರ್ಷ, ತಿಕ್ಕಾಟ, ನಡೆಯುತ್ತದೆ.

ಗಾಂಧಿವಾದಿ ವಾಸಣ್ಣ ಬಸವರಾಜುವಿನ ಸಂಪರ್ಕದಿಂದಾಗಿ ಬಾಬಾ ಸಾಹೇಬರನ್ನು ಅರಿಯಲು ಮುಂದಾಗುತ್ತಾರೆ. ಹಾಗೆ ಬಸವರಾಜು ಗಾಂಧಿಯನ್ನು ಸಂಘರ್ಷದ ಜೊತೆಗೇ ಇಷ್ಟಪಡಲು ಮುಂದಾಗುತ್ತಾನೆ. ಶೀಲಳನ್ನು ಮದುವೆಯಾಗುವ ಪ್ರಸಂಗದಲ್ಲಿ ಅವನ ಮಾತುಗಳು ತುಂಬಾ ನಿಷ್ಠರುವಷ್ಟೇ ಅಲ್ಲ ಸತ್ಯದ ಮಿಂಚು ಸಂಚಲನವಾಗುತ್ತದೆ ಕೂಡ. ವಾಸಣ್ಣನಿಗೆ ಶೀಲ ಮತ್ತು ಬಸವರಾಜು ಜೋಡಿಯಾಗಿ ಬದುಕುವುದು ಇಷ್ಟವಾಗಿದ್ದರೂ ಅದನ್ನು ಕಾದಂಬರಿಕಾರರು ಸಾಕಾರಮಾಡುವುದು ಈತನ ಮೂಲಕವಲ್ಲ, ಬದಲಿಗೆ ಅದೇ ಊರಿನ ಅವಧೂತನಂತಿರುವ ತಂಬೂರಿ ಗಿರಿಯಜ್ಜ ಮುಖೇನ.

ಈ ಮದುವೆಗೆ ಬಸವರಾಜುವಿನ ಅಪ್ಪ ಸಿದ್ಲಿಂಗ ವಿರೋಧಿಸಿದರೂ ಆ ಅಜ್ಜ, ‘ನೀನು ಸುಮ್ಕಿರು ಸಿದ್ಲಿಂಗ, ಇದು ಹುಡುಗ್ರ ಕಾಲ, ಕಾಲಧರ್ಮಾಂತ ಒಂದಿರುತ್ತೆ, ಅದ್ನ ಯಾರು ತಡೀಯಾಕೆ ಆಗ್ತತೆ?’ ಎಂದು ಹೇಳಿ, ಬಸವರಾಜುವನ್ನು ಕೇಳುತ್ತೆ,’ಲೇ ಬಸ್ವ, ನೀನೇನು ಅಂತಿಯೇ?’ ಎಂದು. ಅದಕ್ಕೆ ಬಸವರಾಜು ಕೊಡುವ ಖಡಕ್ಕಾದ ಉತ್ತರ ಹೀಗಿದೆ: ‘ನಾವು ಹೆಂಗದಿವೋ ಹಂಗೆ, ನಮ್ಮಂಗೆ, ನಮ್ಮ ಹಟ್ಟಿಯವರಂತೆ ಇರ್ತೀನಿ ಅನ್ನೋದಾದ್ರೆ ಬರ್ಲಿ, ನಂದೇನು ಇಲ್ಲ, ನಂಗೂ ಇಷ್ಟಾನೆ, ಆಮೇಲೆ ನೀನು ಈಭೂತಿ ಹಚ್ಕಾ, ವಚ್ನ ಹೇಳು, ನಿಮ್ಮ ಕೇರಿ ಹಂಗೈತಿ, ಹಿಂಗೈತಿ ಅನ್ನೊಂಗಿದ್ರೆ ಬ್ಯಾಡ ಅಜ್ಜಾರೆ. ಆಕಿಗಾಗಿ ನಾನು ಬದ್ಲಾಗಕೆ ಆಗಲ್ಲಾ’.

ಕಾದಂಬರಿಯ ಮುಖ್ಯ ಅಧ್ಯಯಗಳಲ್ಲಿ ಒಂದಾದ ವೈಷ್ಣವ ಜನತೋ. ಇದರಲ್ಲಿ ಅತಿ ಸೂಕ್ಸ್ಮವಾಗಿ ಲೋಕೇಶ್ ಅವರು ಧರ್ಮ, ಜಾತಿ ಮತ್ತು ಮನುಷ್ಯನ ಆಂತರ್ಯವನ್ನು ಚಿತ್ರಿಸುತ್ತಾರೆ. ಪಾತ್ರಗಳ ಮೂಲಕ ಜಾತಿ ವ್ಯವಸ್ಥೆಯನ್ನು ತೀವ್ರಗತಿಯಲ್ಲಿ ಟೀಕೆಗೆ ಒಳಪಡಿಸುತ್ತಾರೆ. ಗಾಂಧಿಗ ಬಹುಪ್ರಿಯವಾದ ವೈಷ್ಟವ ಜನತೋ ಗೀತೆಯನ್ನು ಯಾವ ಧರ್ಮದ ಸೋಂಕಿಲ್ಲದೆ ವಾಸಣ್ಣ ಭಾವಾನುವಾದ ಮಾಡಿ ಅದನ್ನು ಖಾದಿ ಕೇಂದ್ರದ ಪ್ರಾರ್ಥನಾ ಗೀತೆಯನ್ನಾಗಿಸುವುದು ಒಟ್ಟು ಕಾದಂಬರಿಯ ಆಶಯವನ್ನು ಹೇಳುತ್ತದೆ: ಮನುಜನೆಂದರೆ ಯಾರೆಂದು ಬಲ್ಲೆ ನೀ/ ಸಕಲರ ನೋವಿಗೆ ಮಿಡಿವವನೇ/ಆಸೆಯ ಪಡದೆ ಉಪಕರಿಸಿ/ಮನದಲಿ ಅಹಂಕಾರ ಪಡದವನೆ.

ಕಟು ವಾಸ್ತವವಾದಿ ಕಾದಂಬರಿಯಾದ ಇದರಲ್ಲಿ ಮ್ಯಾಜಿಕಲ್ ರಿಯಲಿಸ್ಟಿಕ್ ಕಾದಂಬರಿಗಳಲ್ಲಿ ನಡೆಯುವಂತಹ ಘಟನೆಗಳು ನಡೆಯುತ್ತವೆ. ಅವುಗಳಲ್ಲಿ ಮುಖ್ಯವಾದುದು ಕಾಲು ದೀಪ. ಇದನ್ನು ಬಸನಕಟ್ಟೆಯ ಕುಂಬಾರ ನಿಂಗಜ್ಜ ತಯಾರು ಮಾಡಿರುತ್ತಾನೆ. ಎರಡು ಪಾದಗಳ ಮೇಲೆ ದೀಪ ನಿಂತಂತೆ ಪಾದಗಳ ಮಾಡಲಾಗಿರುತ್ತದೆ. ಪಾದಗಳೇ ಕಾಲಾಗಿ, ಕಾಲಿನ ಮೊಳಕಾಲೆ ಎಣ್ಣೆ ತುಂಬಿಕೊಳ್ಳೂವ  ಕುಡಿಕೆಯಾಗಿ ತುದಿ ಭಾಗದಲ್ಲಿ ಒಳಲೆಗಳೆರಡನ್ನುಮಾಡಿಎರಡಕ್ಕೂ ಬತ್ತಿ ಹಾಕಿ ಕುಡಿಕೆ ತುಂಬಾ ಎಣ್ಣೆ ಹಾಕಬೇಕಾಗಿರುತ್ತದೆ. ಎರಡೂ ಒಳಲೆಗಳಲ್ಲಿರುವ ಬತ್ತಿಯನ್ನು  ಹಚ್ಚಿದರೆ ಮಾತ್ರ ಅದು ಉರಿಯುವುದು.

ಮೊದಲಿಗೆ ಇದರ ಬಗ್ಗೆ ವಾಸಣ್ಣನಿಗೆ ಗೊತ್ತಾಗುವುದಿಲ್ಲ. ನಂತರ ಇದಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ವಾಸಣ್ಣನ ಮನೆಯಲ್ಲಿನ ಈ ದೀಪ ನಂದಿಹೋಗುವುದನ್ನು ಕುಂಬಾರ ನಿಂಗಜ್ಜ ತನ್ನ ಮನೆಯಲ್ಲಿದ್ದುಕೊಂಡೆ ಗ್ರಹಿಸುವುದು. ಇದನ್ನು ನಿಂಗಜ್ಜನೇ ಹೇಳಿದಾಗ ವಾಸಣ್ಣನಿಗೆ ಆಶ್ಚರ್ಯವಾಗುತ್ತದೆ. ನಿಂಗಜ್ಜ ಮತ್ತು ವಾಸಣ್ಣರ ಸಂಭಾಷಣೆ ಹೀಗೆದೆ: ‘ರಾತ್ರಿ ನಿನಗೆ ತೊಂದ್ರೆ ಆತಾ?’/ ‘ಯಾವ್ ತೊಂದ್ರೆ ಅಜ್ಜಾ’/ ‘ಅಲ್ಲಾ ಕಾಲು ದೀಪ ಕೆಟ್ಟು ಹೋಗಿರ್ಬೇಕು? ನಾನು ನಿನ್ಗೆ ಸೀಮೆ ಎಣ್ಣೆ ಕೊಡುವುದನ್ನೇ ಮರೆತಿದ್ದೆ, ನೀನು ತಗಂಬಂದಿಲ್ಲಾ’/ ‘ಆ ನಿನ್ಗೆ ಎಂಗೆ ಗೊತ್ತಾತು ಅಜ್ಜಾರೆ?’/ ‘ರಾತ್ರಿ ಜೋಡಿ ಬಾಸಿಂಗ ಮಾಡ್ತಾ ಕುಂತ್ನಾ, ರಾತ್ರಿ ಬಾಳ ಹೊತ್ತಾತು. ಆಗೊಮ್ಮೆ ಕಾಲು ದೀಪ ಗಕ್ ಗಕ್ ಅಂತು. ಈಟೋತ್ನ್ಯಾಗ ಇನ್ನು ಯಾರ ಮನೇಲಿ ಕಾಲುದೀಪ ಉರಿತಿರ್ಬೇಕು. ಅದ್ರಾಗೆ ಜೀವ ಹೋಕ್ತಾ ಐತಿ ಅಂತ ನನ್ಗೆ ಗೊತ್ತಾತು. ಈಟೊತ್ತ್ನಾಗೆ ಉರಿತಿರ್ಬೇಕಾದ್ರೆ ಅದು ನಿಂದೇ ಇರ್ಬೇಕೆನ್ನಿಸಿ ತಕ್ಷಣ ನೆಪ್ಪಾತಪ್ಪ..’ ಈ ಕಾಲುದೀಪದ ಜೋಡಿ ಜ್ಯೋತಿಗಳನ್ನು ಆ ಅಜ್ಜ ಜೀವಾತ್ಮ ಮತ್ತು ಪರಮಾತ್ಮನಿಗೆ ಹೋಲಿಸಿದರೆ, ವಾಸಣ್ಣ ಬಾಬಾ ಸಾಹೇಬ ಮತ್ತು ಗಾಂಧಿಗೆ ಹೋಲಿಸುತ್ತಾನೆ. ಈ ರೂಪಕ ಅಥವಾ ಹೋಲಿಕೆ ಕಾದಂಬರಿಗೆ ತುಂಬಾ ಸಮಂಜಸವಾಗಿ ಮೂಡಿಬಂದಿದೆ.

ತನ್ನ ಎಮ್ಮೆಯನ್ನು ಹುಡುಕಿಕೊಂಡು ಹೋದ ಬಸವ್ವ ಬ್ರಾಹ್ಮಣರ ಅನುಸೂಯಳಿಗೆ ಹೆರಿಗೆ ಮಾಡಿಸುವುದರ ಮೂಲಕ ಆ ಮೆನಯವರ ಮನವನ್ನು ಗೆಲ್ಲುವುದಷ್ಟೇ ಅಲ್ಲ, ಅವಳ ಬಾಳಿನಲ್ಲಿ ಹೊಸ ತಿರುವೊಂದನ್ನು ಪಡೆಯುತ್ತಾಳೆ. ಅನುಸೂಯಳ ಅತ್ತೆ ತುಂಬಾ ಸಂಪ್ರದಾಯಿಷ್ಟೆ. ಬಸವ್ವಳು ಹೆರಿಗೆ ಮಾಡಿಸುವುದನ್ನು ಮೊದಲಿಗೆ ಒಪ್ಪುವುದಿಲ್ಲ, ಸುಸೂತ್ರವಾಗಿ ಹೆರಿಗೆಯನ್ನು ಮಾಡಿ ಮುಗಿಸಿ ಮನೆಗೆ ತೆರಳುವಾಗ ವಿರೋಧಮಾಡಿದ ಹೆಂಗಸು ಅವಳನ್ನು ಕರೆದು ಹಣೆಗೆ ಕುಂಕುಮ ಮತ್ತು ಕೂದಲಿಗೆ ಸಂಪಿಗೆ ಹೂವನ್ನು ಮುಡಿಸುವುದರ ಮೂಲಕ ಜಿಡ್ಡುಗಟ್ಟಿದ ಶತಮಾನಗಳ ಮೌಡ್ಯವನ್ನು ಮುರಿಯುತ್ತಾಳೆ. ಬಸವ್ವ ಕಾದಂಬರಿಯ ಅಂತ್ಯದಲ್ಲಿ ವಾಸಣ್ಣನನ್ನು ಮದುವೆಯೂ ಆಗುತ್ತಾಳೆ. ಇಂತಹ ಅನೇಕ ಸಂಚಲನ ಮೂಡಿಸುವ, ಕ್ರಾಂತಿಕಾರಕ ಘಟನೆಗಳು ಕಾದಂಬರಿಯಲ್ಲಿ ತುಂಬಾ ಇದ್ದು, ಅವು ಈ ಕಾದಂಬರಿಗೆ ಒಂದು ಘನತೆಯನ್ನು ತಂದು ಕೊಟ್ಟಿವೆ. ಬಾವ ತೋಡುವ ಪ್ರಸಂಗವು ಇಡೀ ಜಾತಿಯೆನ್ನುವ ಮಲದಲ್ಲಿ ಬಿದ್ದು ಒದ್ದಾಡುತ್ತಿರುವ ಭಾರತೀಯ ಸಮಾಜಕ್ಕೆ ಹಿಡದ ಕನ್ನಡಿಯಂತಿದೆ.

ದಲಿತರಿಗಾಗಿ ಊರಿನಲ್ಲಿ ತೆಗೆಸಿರುವ ಕುಡಿಯುವ ನೀರನ ಬಾವಿಯ ಉದ್ಘಾಟನೆಗೆ ಮಠದ ಸ್ವಾಮಿಗಳು ಬಂದು, ದಲಿತರ ಮನೆಯಲ್ಲಿ ಊಟಮಾಡಿ, ಜಾತಿಯ ಬಗ್ಗೆ ಕಟು ಟೀಕೆ ಮಾಡಿ, ಡಾಂಬಿಕ ಭಕ್ತಿ, ಮತೀಯ ವಾಸನೆಯುಳ್ಳ ಧರ್ಮವನ್ನು ತೀವ್ರವಾಗಿ ಖಂಡಿಸಿ ಮಾತಾಡಿ ಹೋದ ನಂತರ ಜರುಗುವ ಘಟನೆಗಳು ಊರಿನ ಶಾಂತಿಯನ್ನು ಕದಡುವುದಷ್ಟೇ ಅಲ್ಲದೆ, ವಾಸಣ್ಣ, ಊರಿನವರ ಸಹಕಾರ ಮತ್ತು ಶ್ರಮದಿಂದ ಕಟ್ಟಿದ ಖಾದಿಕೇಂದ್ರ ಸುಟ್ಟು ಭಸ್ಮವಾಗುತ್ತವೆ.

ಈ ಚಿತ್ರಣದ ಮೂಲಕ ಕಾದಂಬರಿಯ ನಿರೂಪಕ ಆತ್ಮಘಾತುಕ ಸಮಾಜದ ಹಿಂಸ್ರಾ ಪ್ರವೃತ್ತಿಯನ್ನು ಮುಖಕ್ಕೆ ರಾಚುವಂತೆ ತೋರಿಸುತ್ತಾರೆ. ವಾಸಣ್ಣನಿಗೆ ದುಶ್ಕಂತ್ಯವನ್ನು ಎಸಗಿರುವವರು ಯಾರು ಎಂಬುದರ ಬಗ್ಗೆ ಊಹೆ ಇದ್ದರೂ ಅವರನ್ನು ಕ್ಷಮಿಸಿ ಮನಃಪರಿವರ್ತನೆ ಮಾಡಬೇಕೆನ್ನುವ ಹಂಬಲವಿದ್ದರೂ ಪರಿಸ್ಥಿತಿ ಕೈ ಮೀರಿ, ಮತ್ತೊಂದು ಕಡೆಯವರು ಕೃತ್ಯವನ್ನು ಎಸಗಿರುವವರು ಹೊಲದಲ್ಲಿ ಅಡಗಿರುವವರೆಂದು ಭಾವಿಸಿ ಬೆಳೆ ತುಂಬಿದ ಇಡೀ ಹೊಲವನ್ನು ಭಸ್ಮ ಮಾಡುತ್ತಾರೆ. ಗಾಂಧಿಯ ಅಹಿಂಸಾ ಮಾರ್ಗ ಮತ್ತು ಅಂಬೇಡ್ಕರರ ಜ್ಞಾನಮಾರ್ಗಗಳು ಅಷ್ಟು ಸುಲಭದಲ್ಲಿ ಸಮಾಜಕ್ಕೆ ಅರ್ಥವಾಗದಿರುವುದರ ಪ್ರತೀಕವಾಗಿ ಈ ಘಟನೆಗಳು ಕಾಣುತ್ತವೆ. ಇದೆಲ್ಲವನ್ನು ತೋರಿಸುತ್ತಲೇ ಕಾದಂಬರಿ ಆದರ್ಶ ಸಮಾಜದ ಕನಸನ್ನು ಎತ್ತಿ ಹಿಡಿಯುತ್ತದೆ

ಈ ಕಾದಂಬರಿಯ ಕತೆಯನ್ನು ಮತ್ತು ಪಾತ್ರಗಳನ್ನು ವಿಶ್ಲೇಷಣೆ ಮಾಡುವುದಕ್ಕಿಂತಲೂ ಮಿಗಿಲಾಗಿ ಗಾಂಧಿ ಮತ್ತು ಬಾಬಾ ಸಾಹೇಬರ ತತ್ವಗಳು ಒಂದಕ್ಕೊಂದು ಮಿಳಿತಗೊಂಡು ಹೊಸ ಸಮಾಜವನ್ನು ಹೇಗೆಲ್ಲ ಕಟ್ಟಿಕೊಳ್ಳಬಹುದು ಎನ್ನುವುದನ್ನು ಕಾದಂಬರಿಕಾರರು ತೋರಿಸಿರುವುದನ್ನು ಇಡೀ ಕಾದಂಬರಿಯ ಉದ್ದಕ್ಕೂ ಕಾಣುವುದೇ ಒಂದು ಸುಂದರವಾದ ಅನುಭವ.  

ಇಡೀ ಕಾದಂಬರಿಯ ಉದ್ದಕ್ಕೂ ಲೋಕೇಶ ಅಗಸನಕಟ್ಟೆ ಅವರ ಸೂಕ್ಷ್ಮ ಗ್ರಹಿಕೆಯನ್ನು ಕಾಣಬಹುದು. ಯಾವ ಸನ್ನೆವೇಶ ಅಥವಾ ಘಟನೆಯಲ್ಲಿ ಒಂದು ತೀರ್ಮಾನಕ್ಕೆ ಬರದೆ ನಿಷ್ಠುರತೆಯನ್ನು ಕಾಪಾಡಿಕೊಂಡಿದ್ದಾರೆ. ಕಾದಂಬರಿಕಾರರ ಧರ್ಮ ಸೂಕ್ಷ್ಮತೆ ಕಾದಂಬರಿಯಲ್ಲಿ ತುಂಬ ಸಟಲ್ ಆಗಿ ಮೂಡಿಬಂದಿದೆ, ಹಾಗೂ ಜಾತಿ ವ್ಯವಸ್ಥೆಯ ತೀಕ್ಷ್ಣ ವಿಮರ್ಶೆ ಅಂಡರ್ ಕರೆಂಟ್ ಥರ ಹರಿಯುತ್ತದೆ ಎಂದೇ ಹೇಳಬಹುದು. ಇದನ್ನು ಇನ್ನಷ್ಟು ಮುಂದವರೆಸಿ ಹೇಳುವುದಾದರೆ, ಜಾತಿ ಜಾತಿಗಳ ನಡುವಿನ ವೈಷಮ್ಯ, ಹಿಂಸಾಪ್ರವೃತ್ತಿಗಳನ್ನು ಅನಾವರಣಗೊಳಿಸುತ್ತ, ಜಾತಿ ಹೇಗೆ ನಾಶವಾಗಬೇಕು, ಆಗಿ ಹೊಸ ಬದುಕಿನ ದಾರಿಯನ್ನು ಹೇಗೆ ಕಂಡುಕೊಳ್ಳಬಹುದು ಎನ್ನುವುದರ ಕಡೆ ಒಲವನ್ನು ತೋರಿಸಿದ್ದಾರೆ. ಘಟನೆಗಳ ಮೂಲಕ ಮನುಷ್ಯರ ಬದುಕಿನ ಹೊರ ಜಗತ್ತು ಮತ್ತು ಒಳಜಗತ್ತುಗಳನ್ನು ಕಾಣಿಸಿದ್ದಾರೆ. ನಿಜ ಇದು. ಆದರೂ, ಇಲ್ಲಿಯ ಕಥನಕ್ಕೆ ಬದುಕಿನ ವಿವರಗಳನ್ನು ಇನ್ನಷ್ಟು ದಟ್ಟವಾಗಿ ಕಟ್ಟಿಕೊಡಲು ಸಾಧ್ಯವಾಗಿದ್ದಿದ್ದರೆ ಈ ಕಾದಂಬರಿಗೆ ಇನ್ನಷ್ಟು ಮೆರುಗು ಬರುತ್ತಿತ್ತೇನೋ. ಆದರೆ ಇದು ಟೀಕೆಯಲ್ಲ, ಒಂದು ಅನಿಸಿಕೆಯಷ್ಟೇ.

ಇತ್ತೀಚೆಗೆ ಬಂದ ಅನೇಕ ಕಾದಂಬರಿಗಳಲ್ಲೇ ಇದು ಭಿನ್ನವಾಗಿ ನಿಲ್ಲುವುದಷ್ಟೇ ಅಲ್ಲ ಅನೇಕ ಚರ್ಚೆಗೆ, ಓದಿಗೆ ಪ್ರೇರಣೆಯನ್ನಂತೂ ಕೊಡುತ್ತದೆ. ಮಲೆಗಳಲ್ಲಿ ಮದುಮಗಳು ಓದಿದ ಮೇಲೆ ಸಿಂಭಾವಿ, ತೀರ್ಥಹಳ್ಳಿ, ಮೇಗರಳ್ಳಿ, ಕುಪ್ಪಳ್ಳಿ ಮನಸ್ಸಿನೊಳಗೆ ಇಳಿದಂತೆ, ವೈಷ್ಣವ ಜನತೋ ಓದಿದ ನಂತರ ದಾವಣಗೆರೆ ಮತ್ತು ಬಸನಕಟ್ಟೆ ಮತ್ತು ಸುತ್ತಲಿನ ಹಳ್ಳಿಗಳು ನಮ್ಮ ಮನಸ್ಸನ್ನು ಆವರಿಸಿಕೊಳ್ಳುತ್ತವೆ. ಇಲ್ಲಿ ಅಭಿವ್ಯಕ್ತಿಗೊಂಡಿರುವ  ಹಳ್ಳಿಯ ಮತ್ತು ನಗರದ ಚಿತ್ರಣ ಭಾರತದ ಯಾವುದೇ ಭಾಗದಲ್ಲಿ ಕಾಣಬಹುದಾದಂತಹ ಚಿತ್ರಣವೇ ಆಗಿದೆ. ಹಾಗಾಗಿ ಇದು ಪ್ರಾದೇಶಿಕ ಕಾದಂಬರಿಯಾಗಿ ಕಾಣುವುದಕ್ಕಿಂತಲೂ ಮಿಗಿಲಾಗಿ    ಪ್ಯಾನ್ ಇಂಡಿಯದ ಆಯಾಮವುಳ್ಳ ಕಾದಂಬರಿಯಾಗಿ   ಕಾಣುತ್ತದೆ.

ರಾಜಕೀಯ ಧೃವೀಕರಣವಾಗುತ್ತಿರುವ, ಮತ್ತು, ಜಾತಿಯನ್ನು ಎನ್‍ಕ್ಯಾಷ್ ಮಾಡಿಕೊಳ್ಳುತ್ತಿರುವ ರಾಜಕೀಯದ ಈ ಸನ್ನಿವೇಶದಲ್ಲಿ ಯುವ ಪೀಳಿಗೆ ಇಂತಹ ಕೃತಿಗಳಿಂದ ಸ್ಫೂರ್ತಿಗೊಂಡು ಜಾತಿ ರಹಿತವಾದ ಹೊಸ ಸಮಾಜವನ್ನು ಕಟ್ಟಲು ಮನಸ್ಸುಮಾಡಲಿ. ಆಗ ಇಂತಹ ಕೃತಿಗೆ ಸಾರ್ಥಕತೆ ಸಿಗುತ್ತದೆ.

‍ಲೇಖಕರು Admin

October 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: