ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ರಂಗಾ… ಬಿಳಿಗಿರಿ ರಂಗಾ ಬೇಕು ನಿನ್ನ ಸಂಗ…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

7

ರಂಗಣ್ಣ ನನ್ನ ಅತ್ಯಾಪ್ತ. ರಂಗಾ. ಅದೇ ಆ ರಂಗನಾಥ. ಅವನೇ ಆ ಬಿಳಿಗಿರಿ ರಂಗನಾಥ. ಅವನ ಹೆಸರು ಹೇಳಿದರೆ ಎಲ್ಲೋ ಎದೆಯಾಳದಲ್ಲೆಲ್ಲೋ ಆಪ್ತತೆಯ ಭಾವ. ಬಿಳಿಗಿರಿರಂಗನಬೆಟ್ಟ ನನ್ನೂರಿಂದ ಸುಮಾರು ನೂರು ಮೈಲಿ ದೂರದಲ್ಲಿರುವ ಹೆಚ್ಚು ಪರಿಚಿತವಲ್ಲದ ಪರಿಚಿತ ತಾಣ. ಹೆಸರು ಕೇಳಿದ್ದೆ, ಆದರೆ ಅಲ್ಲಿಗೆ ಹೋಗಿದ್ದೆ ಒಂದೆರಡು ಸಲ ಮಾತ್ರ ಹೋಗಿದ್ದೆ. ಒಮ್ಮೆ ಮನೆಯವರೊಡನೆ ಮತ್ತೊಮ್ಮೆ ಮಂಡ್ಯದ ಮಹಿಳಾ ಕಾಲೇಜಿನ ಕನ್ನಡ ಐಚ್ಛಿಕ ವಿದ್ಯಾರ್ಥಿನಿಯರ ಜೊತೆ. ಅವರ ಅಂತಿಮ ಪರೀಕ್ಷೆ ಮುಗಿದ ಬಳಿಕ ರಿಸಲ್ಟ್ ಬರುವ ಹಿಂದಿನ ದಿನ ಜೊತೆಗೂಡಿ ಒಂದು ದಿನದ ಟೂರ್ ಹೊರಡಿಸಿ ಬಿಳಿಗಿರಿರಂಗನಬೆಟ್ಟಕ್ಕೂ ಕರೆತಂದಿದ್ದೆ. ಅಂದು ನನಗೆ ಮತ್ತೆ ಇಲ್ಲೇ ವರ್ಷಗಟ್ಟಲೆ ಅಲೆಯುತ್ತೇನೆಂಬ ಬ್ರಹ್ಮಬರಹ ನನ್ನ ಬುತ್ತಿಯಲ್ಲಿದೆ ಎಂಬುದರ ಸುಳಿವೇ ಇರಲಿಲ್ಲ.

ಬಹುದಿನದ ಕನಸಾದ ಸಂಶೋಧನಾ ವ್ಯಾಸಂಗಕ್ಕೆ ವಿಷಯದ ಆಯ್ಕೆಯ ಬಗ್ಗೆ ಮಾರ್ಗದರ್ಶಕರ ಜೊತೆ ಚರ್ಚಿಸುವಾಗ `ಸರ್ ಟೇಬಲ್ ವರ್ಕ್ ಮಾತ್ರ ಬೇಡವೇ ಬೇಡಿ’ ಎಂದು ಮನವಿ ಸಲ್ಲಿಸಿದೆ. ಆದ್ದರಿಂದ ಕ್ಷೇತ್ರಕಾರ್ಯ ಸುತ್ತಾಟದ `ಬಿಳಿಗಿರಿರಂಗನಬೆಟ್ಟ-ಒಂದು ಸಾಂಸ್ಕೃತಿಕ ಅಧ್ಯಯನ’ ವಿಷಯ ಓ.ಕೆ ಆಯಿತು. `ಕಾಣುವ ಊರಲಿ ಕಾಣದ ನೀನು ಕುಳಿತಿರುವೆ, ನನ್ನಯ ಕಥೆಯ ನೀನೇ ಬರೆದಿರುವೆ, ಐದು ವರುಷಕೆ ಮುಗಿಸಲಿರುವ ರೀಸರ್ಚನು ಸರ್ಚಿಸಬಂದಿರುವೆ, ನಾ ಬಂದಿರುವೆ’ ಎಂದು ಹಾಡಿಕೊಂಡೆ, ಬೇಡಿಕೊಂಡೆ. ಸತತ ಐದು ವರ್ಷಗಳ ಕಾಲ ಸುತ್ತಾಡಿ ಸುಸ್ತಾದ, ತಿರುತಿರುಗಿ ಖುಷಿಯಾದ ಬಳಲಿ ಬೆಂಡಾದ ತಾಣ ಬಿಳಿಗಿರಿ. ಬಿಳಿಗಿರಿಯ ಬೆಟ್ಟದವರೊಡನೆ ಬೆರೆತು ಲೀಲಾ ಅಪ್ಪಾಜಿ, ಡಾ.ಲೀಲಾ ಅಪ್ಪಾಜಿ ಆದೆ ಲೋಕದ ಲೆಕ್ಕಕ್ಕೆ. ಆದರೆ ಆಗ ನಾನು ಸಂಶೋಧನೆಯ ದೃಷ್ಟಿಯ ಕಣ್ಣುಪಟ್ಟಿಯೊಳಗೆ ಸ್ವಯಂಬಂಧಿಯಾಗಿದ್ದೆ.

ವರ್ಷ ವರ್ಷಗಳ ಕಾಲ ನನ್ನನ್ನು ಕಂಡವನು ಅವನು. ಅವನ ಆಲಯದ ಮೂಲೆ ಮೂಲೆಯನ್ನೂ ಅಳತೆಗೋಲಿನಿಂದ ಅಳೆಯುವಾಗ ಅರೆರೆ ಎಂದು ನಗೆಗಣ್ಣಿನಿಂದ ನೋಡಿದವನು. ಬಿಳಿಗಿರಿ ಏರಿದಾಗಲೆಲ್ಲ ತನ್ನ ಮುಂದೆ ಹಾಜರಿದ್ದೇ ಇರುವ ಭಕ್ತಳಲ್ಲದ ನನ್ನನ್ನು ಕಂಡರೆ ಫ್ರೆಂಡ್ಲೀ ಭಾವ ಅವನಿಗೆ. `ರಂಗಣ್ಣಾ… ಏನ್ ರಂಗ್ ಅಣ್ಣ. ನಿನ್ನನ್ನು ಹುಡುಕಿಕೊಂಡು ಬೆಟ್ಟ, ಕಾಡು, ಪೋಡುಗಳಲ್ಲೆಲ್ಲ ಅಲೆದೆ ಕಣೊ. ಒಂದಲ್ಲ, ಎರಡಲ್ಲ ಐದು ವರುಷ ಬಿಟ್ಟೂ ಬಿಡದೆ ಅಲೆದೆ ಕಣಯ್ಯ. ರಂಗನಾಥ, ರಂಗೈಯ್ಯಂಗಾರ್, ರಂಗರಾವ್, ರಂಗನಾಯಕ, ರಂಗೇಗೌಡ, ರಂಗಶೆಟ್ಟಿ, ರಂಗಯ್ಯ, ರಂಗಪ್ಪನವರು… ಹೀಗೆ ನಿನ್ನ ಹೆಸರು ಹೊತ್ತ ಮನುಷ್ಯರೇ ಸಿಕ್ಕಿದರಪ್ಪ. ನಿನ್ನ ಭಕ್ತರು, ನಿನ್ನದೇ ಹೆಸರಿನವರು, ಆದರೆ ನೀನು ಎಲ್ಲಿದ್ದೆಯಪ್ಪ? ಇಡಿಕಿರಿದ ಬಿದಿರಿನ ಮೆಳೆ, ಆಕಾಶದೆತ್ತರದ ತರು, ಇಳಿಬಿಟ್ಟ ಬಳ್ಳಿ… ಎಲ್ಲೆಲ್ಲಿ ನೋಡಿದರೂ ಹಸಿರಾಗೇ ಕಾಣುತ್ತಿದ್ದೆಯಲ್ಲೊ ರಂಗಾ. ಸೋಲಿಗರ ಬಾಲೆ ಕುಸುಮಾಲೆಯ ಲವ್ವಿಗೆ ಬಿದ್ದ ನೀನು ಅವಳಿಗೂ ಕಾಣದಂತೆ ರಂಗಿಯನ್ನು ಹುಡುಕಿಕೊಂಡೆ. ಅಲ್ಲಾಣೆ, ಇಲ್ಲಾಣೆ ಕಲ್ಯಾಣಿ ದಾರೀಲಿ ಹೋದಂಗೆ, ಇವರ‍್ಯಾರಿಗೂ ಕಾಣದಂತೆ ಇನ್ನೆಷ್ಟು ಲಡಕಿಯರನ್ನು ಮಂಜು ಹೊದ್ದು ಪಟಾಯಿಸಿದೆ ಹೇಳೊ ಮಾಯಾವಿ ರಂಗಾʼ ಎಂದು ರೇಗಿಸಿಕೊಂಡು ಕಿಚಾಯಿಸಿಕೊಂಡು ಅವನನ್ನು ಅರಸಿ ಗಿರಿಯ ನೆತ್ತಿಯೇರಿ ಇಳಿಯುತ್ತಿದ್ದೆ. ಆ ಊರಿನ ನಂಟರು ಹಬ್ಬ, ಜಾತ್ರೆಗೆ ಬಂದರೊ ಬಿಟ್ಟರೊ ನಾನಂತೂ ಐದು ವರ್ಷದ ಎಲ್ಲ ಹಬ್ಬ ಜಾತ್ರೆಗೂ ಹಾಜರಿದ್ದು `ಮಂಡ್ಯೇದ ಮೇಡಮ್ಮ ಬಂದಿಯವರೆ ಕಾಣಡೋ’ ಎಂದು ಹಾಡಿನಲ್ಲಿ ಸೇರಿಸಿ ಹಾಡಿಕೊಳ್ಳುವಂತೆ ಮಾಡಿದ್ದೆ.

ಸಂಶೋಧನೆಯ ಐದು ವರ್ಷ 2004ರಲ್ಲಿ ಮುಗಿಸಿದ ಬಳಿಕ ಒಂದೆರಡು ಸಲ ಬೆಟ್ಟಕ್ಕೆ ಹೋಗಿ ಬಂದಿದ್ದೆ. ಒಮ್ಮೆಯಂತೂ ಹೋದಾಗ ನನ್ನ ಮೊದಲ ಸಂಶೋಧನಾ ಪ್ರವಾಸದ ಮೊದಲ ಪರಿಚಿತೆ ತುಳಸಮ್ಮ ತಮ್ಮ ಅಂತಿಮಯಾತ್ರೆ ಮುಗಿಸಿ ರಂಗನ ಪಾದ ಸೇರಿದ ದಿನ. ಆದರೆ ನಂತರದ ದಶಕಗಳ ಕಾಲ ಕಳೆದು ಬಂದವಳನ್ನು ಕಾಣಲು ನನ್ನ ರಂಗನಿಗೂ ಕುತೂಹಲ ಇದ್ದೇ ಇರಬೇಕಲ್ಲವೆ. ಮೊದಲ ಆ ಐದು ವರ್ಷ ಕ್ಯಾಮೆರಾ ಹಿಡಿದು ರಂಗನನ್ನೇ ರಂಗನ ನೆಲೆಯನ್ನೇ ಕ್ಲಿಕ್ಕಿಸಿದ್ದರೂ ರಂಗನ ಕಾಡಿನ ಪ್ರಾಣಿ ಪಕ್ಷಿಗಳು ಕ್ಯಾಮೆರಾದ ಒಳಗೆ ಬಂದಿರಲಿಲ್ಲ, ಒಳಬರಿಸುವ ಆಲೋಚನೆಯೂ ಇರಲಿಲ್ಲ. ನನ್ನ ಆ ಕ್ಯಾಮೆರಾವೋ ಪಕ್ಷಿಗಳು ಕೈಯ ಅಳತೆಯಲ್ಲೇ ಕಂಡರೂ ಒಳಬಾರದಂತಹದ್ದು. ಆನೆಗಳು ಎದುರಾದರೂ ಓಡುವ ಭಯದಲ್ಲಿದ್ದೆನೆ ವಿನಾ ಕ್ಯಾಮೆರಾ ತೋರಿಸುವ ಧೈರ್ಯ ಎಂದೂ ಹುಟ್ಟಿರಲೇ ಇಲ್ಲ. ಆದರೆ ಬೆಟ್ಟದಿಂದ ದೂರವಿದ್ದು ವೃತ್ತಿಯಲ್ಲಿ ಮುಳುಗಿಹೋಗಿದ್ದ ನನಗೆ ನಿವೃತ್ತಿಯ ನಂತರದ ಪ್ರವೃತ್ತಿಯಿಂದಾಗಿ ರಂಗನ ನೆಲೆಯ ಪಕ್ಷಿಗಳಿಗಾಗಿ ಹೋಗುವ ಕನಸು ಹುಟ್ಟಿ ಕಟ್ಟಿಕೊಂಡಿತು. ನನ್ನ ಜೊತೆಯಾದವಳು ನನ್ನ ತಂಗಿ ರೂಪ ಯಾನೆ ಪ್ರಭಾ. ಲೋಕದ ಕಿವಿಗೆ ಪ್ರಭಾ, ಆಪ್ತರು ಸಂಬಂಧಿಕರಿಗೆ ರೂಪ. ನಾವಿಬ್ಬರೂ ಒಂದ್ ತರಹಕ್ಕೆ ಫ್ರೆಂಡ್ಸೆ. ನೋವಿಗಾಗಲಿ ನಲಿವಿಗಾಗಲಿ ಮೊದಲು ಹೆಗಲಾಗುವವರು ನಾವಿಬ್ಬರೂ. ಬರ್ತೀಯಾ ಎಂದೆ. ಓಹೋ ಹೋಗೋಣ ಎಂದಳು. ಬೆಂಗಳೂರಿನಿಂದ ಅವಳು ಬಂದಳು. ಮಂಡ್ಯದಿಂದ ನಾ ರೆಡಿಯಾದೆ. ಕಾರೇರಿ ಸವಾರಿ ಹೊರಟೆವು. ನನ್ನ ಸಾರಥಿಗೆ ಸೂಚನೆ ಕೊಟ್ಟೆ, ನಮ್ಮನ್ನು ಬಿಟ್ಟು ಹೋಗು, ನಾವೇ ವಾಪಸ್ ಬರ್ತೀವಿ ಎಂದು. ತಂಗಿಯ ಎಂ.ಎಸ್‌ಸಿ. ಸಹಪಾಠಿಯಾಗಿದ್ದ ನಾಗರಾಜು ಯಳಂದೂರಿನಲ್ಲಿ ಅರಣ್ಯಾಧಿಕಾರಿಯಾಗಿದ್ದರು. ಅಡ್ಡಿ ಆತಂಕವಿಲ್ಲದೆ ಆರಾಮಾಗಿ ಬೆಟ್ಟದಲ್ಲಿ ಸುತ್ತಬಹುದೆಂಬ ದೂರದಾಸೆ ತುಂಬಿಕೊಂಡ ನಾವಿಬ್ಬರೂ ಹೊರಟೆವು. ಸಂಶೋಧನೆಗೆ ಅಲೆಯುವಾಗ ಎಲ್ಲೆಂದರಲ್ಲಿ ಅಂದರೆ ಅಲ್ಲಲ್ಲೇ ಉಳಿದುಕೊಳ್ಳುತ್ತಿದ್ದೆ, ಶೆಟ್ಟಿ ಬಿಟ್ಟಲ್ಲೆ ಬಿಡಾರ ಎನ್ನುವ ಹಾಗೆ. ಆದರೆ ಈ ಸಲಕ್ಕೆ ಮಾತ್ರ ಹಾಗಾಗುವಂತಿರಲಿಲ್ಲ. ತಂಗಿ `ಅಕ್ಕನೇನೊ ಬಹಳ ಬೆಟ್ಟ ಬಲ್ಲವಳು, ಆದ್ದರಿಂದ ನಾನು ಅವಳ ಗೆಸ್ಟಾಗಿ ಹೋಗಬಹುದು, ಚೆನ್ನಾಗಿ ಬೆಟ್ಟ ನೋಡಬಹುದು’ ಎಂದುಕೊಂಡಿರುವಾಗ ನಾನು ಉಳಿದುಕೊಳ್ಳುತ್ತಿದ್ದಂತಹ ನೆಲೆಗಳಲ್ಲಿ ಉಳಿಸಲು ಸಾಧ್ಯವೆ. ಆದ್ದರಿಂದ ನನ್ನ ಅಧಿಕಾರಿ ಗೆಳತಿಯರ ಮೂಲಕ ಬಿಳಿಗಿರಿಯ ಐ.ಬಿಯಲ್ಲಿ ಎರಡು ದಿನದ ವಾಸ್ತವ್ಯಕ್ಕೆ ವಸತಿ ನಿಶ್ಚಿತ ಪಡಿಸಿಕೊಂಡೆ ಹೊರಟೆ. 

ರಂಗಯ್ಯನಗಿರಿಗೆ ಇರುವ ಎರಡು ಬಸ್ ದಾರಿಗಳ ಬಳುಕು ಬಾಗು ವೈಯಾರ ಅವನ ರಂಗಿಯರಂತೆ. ಒಂದು ಯಳಂದೂರಿನಿಂದ ಬರುವ ಕಡೆ ಸ್ವಲ್ಪ ಕುರುಚಲು ಕಾಡು ನಂತರ ಗಿಡಮರಗಳು, ಹೆಚ್ಚು ಸುತ್ತು ಬಳಸಿಲ್ಲ. ಆದರೆ ಚಾಮ ರಾಜನಗರದ ಕಡೆಯ ಕೇತೇದೇವರ ಗುಡಿಯ ಕಡೆಯ ಬಾಗು ಬಳುಕಿನ ಏರಿಳಿತದ ದಾರಿಯ ಹಸಿರ ಸೊಬಗು ಕಣ್ಣೊಳಗಿಳಿದು ಕಟ್ಟೆ ಕಟ್ಟಿಕೊಳ್ಳುತ್ತದೆ. ಬೆಟ್ಟಕ್ಕೆ ಹತ್ತಿಕೊಂಡು ಬರುವ ದಾರಿಯೂ ಒಂದಾನೊಂದು ಕಾಲದಲ್ಲಿತ್ತು. ರಸ್ತೆಗಳು ಬಂದ ಬಳಿಕ ಆ ಹತ್ತಿ ಬರುವ ರಸ್ತೆ ಬಳಕೆ ನಿಂತುಹೋಯಿತು. ಈಗ ಹುಲಿ ಸಂರಕ್ಷಿತ ಅಭಯಾರಣ್ಯವಾಗಿ, ಕಾಡಿನ ನಡುವಿನ ಆ ದಾರಿ ಬಹುತೇಕ ಮುಚ್ಚಿಹೋಗಿದೆ ಎನ್ನುವುದು ಬೆಟ್ಟದವರ, ಅರಣ್ಯ ಇಲಾಖೆಯವರ ಅಂಬೋಣ. ಎಲ್ಲೆಲ್ಲೂ ಆವರಿಸಿಕೊಂಡ ರಂಗನನ್ನು ಶಿಲೆಯ ಶಿಲ್ಪವಾಗಿಸಿ ಬಿಳಿಬೆಟ್ಟದ ಮೇಲೆ ಗುಡಿಯಲ್ಲಿ ಕಟ್ಟಿಹಾಕಿ ಇದ್ದಾನೆಂದು ಪೂಜಿಸುತ್ತಿದ್ದಾರೆ. ಆದರೆ ಅವರ ಕೈಗೆ ಅಷ್ಟು ಸುಲಭವಾಗಿ ಸಿಕ್ಕುವನೆ ಅವನು. ಹಾಗೆ ಸಿಗದ ಚಾಲಾಕಿ ನಮ್ಮ ರಂಗ.

ಬಿಳಿಗಿರಿಬೆಟ್ಟಕ್ಕೆ ಬರುವಾಗ ಬೇಕೆಂದೇ ಚಾಮರಾಜನಗರದ ಕಡೆಯ ಕೆ.ಗುಡಿಯ ದಾರಿ ಆರಿಸಿಕೊಂಡೆ, ಹೆಚ್ಚು ಹಕ್ಕಿಗಳನ್ನು ಕಾಣಬಹುದೆಂದು. ಹೆಚ್ಚು ಹಕ್ಕಿಗಳಿಗಿಂತ ಹೆಚ್ಚು ಹಳ್ಳಗಳನ್ನಂತೂ ನೋಡಿ ಗಾಡಿಯಲ್ಲೇ ನಾವಿಬ್ಬರೂ ಹಗ್ಗವಿಲ್ಲದೆ ಉಯ್ಯಾಲೆ ಆಡುತ್ತಿದ್ದೆವು. ಕೆ.ಗುಡಿ ಕಡೆಯಿಂದ ಬೆಟ್ಟಕ್ಕೆ ಬರಬೇಕು ಎಂದಾದರೆ ಇಷ್ಟೆಲ್ಲಾ ಸರ್ಕಸ್ ಮಾಡುವ ಬದಲು ಯಳಂದೂರು ಕಡೆಯಿಂದ ಬಂದು ಅಲ್ಲಿಂದಲೇ ಕೆ.ಗುಡಿಗೆ ಬರಬಹುದಿತ್ತು. ಏನು ಮಾಡೋದು ಕೆಲವು ಸಲ ತಲೆಗೆ ಸರಳ ಉಪಾಯಗಳು ಹೊಳೆಯುವುದೇ ಇಲ್ಲ ಎಡಿಸನ್ ತರಹಕ್ಕೆ. ಥಾಮಸ್ ಎಡಿಸನ್ ಸಂಶೋಧನೆ ಮಾಡುತ್ತಿದ್ದ ಕೊಠಡಿಗೆ ಅವನ ಮುದ್ದಿನ ಬೆಕ್ಕು ಬಂದು ಹೋಗಿ ಮಾಡುತ್ತಿತ್ತು. ಪದೇ ಪದೇ ಬಾಗಿಲು ತೆಗೆಯೋದು ಹಾಕೋದು ಕಷ್ಟವಾಗಿ ಒಂದು ರಂಧ್ರ ಕೊರೆಸಿದ. ಬೆಕ್ಕು ತನ್ನ ಪಾಡಿಗೆ ಬಂದು ಹೋಗುತ್ತಿತ್ತು. ನಂತರದಲ್ಲಿ ಬೆಕ್ಕು ಮೂರು ಮರಿ ಹಾಕಿದ ಕಾರಣ ಮತ್ತೂ ಮೂರು ರಂಧ್ರ ಕೊರೆಸಿದ. ಮೊದಲಿದ್ದ ದೊಡ್ಡ ರಂಧ್ರದಲ್ಲಿಯೇ ಮರಿಗಳು ಹೋಗಿ ಬರಬಲ್ಲವು ಎಂಬುದನ್ನು ಮರೆತ. ಹಾಗೇ ಬದುಕಿನಲ್ಲಿಯೂ ಇಂತಹ ಸನ್ನಿವೇಶಗಳು ಘಟಿಸುತ್ತವೆ. ಏನು ಮಾಡೋದು ನಾವು ಹುಲುಮಾನವರು. ಆ ಸಮಯಕ್ಕೆ ಅಂದುಕೊಂಡ ನಿರ್ಧಾರಗಳೆ ಗ್ರೇಟ್ ಎಂದು ವಾದಿಸಿ ಸಮರ್ಥಿಸುತ್ತೇವೆ ವಿನಾ ನಮ್ಮ ಪೆದ್ದುತನವನ್ನು ಒಪ್ಪಿಕೊಳ್ಳುವೆವೆ. ನಾನೂ ಅದಕ್ಕೆ ಹೊರತಲ್ಲ. ನಾನೂನೂ ಆ ರಂಗನ ಕೈಯ್ಯಲ್ಲಿ ಕುಣಿಯುವ ಗೊಂಬೆ. ಆಡಿಸುವಾತನ ಆಟಕ್ಕೆ ಮಣಿಯಬೇಕಲ್ಲ.

ಕೊಂಕಣ ಸುತ್ತಿ ಮೈಲಾರ ಬಳಸಿ ಕೆ. ಗುಡಿ ಕಡೆಯ ಗೇಟ್ ತಲುಪುವಷ್ಟರಲ್ಲಿ ಮಳೆರಾಯ ಬನ್ನಿ ಬನ್ನಿ ಎಂದು ಕೈಬೀಸಿ ಬರಮಾಡಿಕೊಂಡ. ಕಾರಿನ ಕಿಟಕಿಯನ್ನೂ ತೆರೆಯಲಿಲ್ಲ, ಹಕ್ಕಿಗಳನ್ನೂ ಕಾಣಲಿಲ್ಲ. ಕಂಡರೂ ಕ್ಲಿಕ್ಕಿಸುವ ಸ್ಥಿತಿಯಲ್ಲಿರಲಿಲ್ಲ. ಮಳೆ ಕಡಿಮೆಯಾದಾಗ ದಾರಿಯಲ್ಲಿ ಇಳಿದು ಒಂದೆರಡು ಕಡೆ ಫೋಟೋ ತೆಗೆದಿದ್ದೆವು ಬೆಟ್ಟ, ಮೋಡದ್ದು ನಾವು ಬಂದದ್ದಕ್ಕೆ ಸಾಕ್ಷಿಯೆನ್ನುವಂತೆ. ಆಗ ಕಣಿವೆ ನಡುಗುವ ಹಾಗೆ ಆರ್ಭಟ ಕೇಳಿಬಂದಿತು. ಆ ಧ್ವನಿ ಇವತ್ತಿಗೆ ನೆನೆದರೂ ಸಣ್ಣ ನಡುಕ ಎದೆಯಲ್ಲಿ. ಹೆದರಿದ ನಾವು ತೆಪ್ಪಗೆ ಗಾಡಿ ಹತ್ತಿ ಗಿರಿಯ ನೆತ್ತಿ ತಲುಪಿದೆವು. ನಮ್ಮ ಸಾರಥಿಗೆ ರಂಗನಿಗೆ ತನ್ನ ಅಟೆಂಡೆನ್ಸ್ ಹಾಕುವ ತವಕ. ಹಾಜರಾತಿ ಹಾಕಿದ ಬಳಿಕ ಬಿಳಿಗಿರಿಯ ಗೆಸ್ಟ್ ಹೌಸ್ ತಲುಪಿಕೊಂಡೆವು. ಅವನು ಊರಿನ ಕಡೆಗೆ ರೈಟ್ ಹೇಳಿದ. ಸಂಶೋಧನಾ ಅವಧಿಯಲ್ಲಿ ಬೆಟ್ಟಕ್ಕೆ ಬರುತ್ತಿದ್ದ ನನಗೆ ಐದು ವರ್ಷ ಏಕತಾನತೆಯ ರಸನೆಯ ರುಚಿಯ ಸತ್ವವನ್ನು ಮರೆಸಿದ್ದ ಊಟ ತಿಂಡಿ ಕೊಟ್ಟು ಪೊರೆದಿದ್ದ ಬೆಟ್ಟದ ಏಕಮಾತ್ರ ಮೆಸ್ ಆದ ಗಿರಿದರ್ಶಿನಿ ಮೆಸ್‌ನಲ್ಲಿ ನಮ್ಮಿಬ್ಬರ ಹೊಟ್ಟೆಪಾಡು ನೋಡಿಕೊಂಡು ಐ.ಬಿ.ಗೆ ಮರಳಿ ಬಳಲಿ ಬೆಂಡಾಗಿದ್ದ ದೇಹಕ್ಕೆ ಹಾಸಿಗೆ ಸಹವಾಸ ಕಾಣಿಸಿ ನಿದ್ರಾದೇವಿಯ ವಶಕ್ಕೆ ಒಪ್ಪಿಸಿಕೊಂಡೆವು.

ಮರುದಿನ ಬೆಳಿಗ್ಗೆಯ ಮಬ್ಬುಬೆಳಕಿನಲ್ಲಿ ಗೆಸ್ಟ್ ಹೌಸಿನ ಸುತ್ತಾ ಕಾಲೆಳೆದತ್ತ ಸುತ್ತಾಡಿದೆ. ನೋಡುತ್ತೇನೆ, ರಂಗನ ಅಂಗಳದಲ್ಲಿ ಮಣಿಗಳ ಮಾಲೆ, ಬೆಳ್ಳಂಬೆಳಿಗ್ಗೆ ರಂಗನಗಿರಿಯ ಸಚರಾಚರ ಜೀವಾಜೀವಗಳನೆಲ್ಲ ಕುಶಲವೇ, ಕ್ಷೇಮವೇ ಎಂದು ರಂಗ ಮುದ್ದುಮಾಡಿ ಮುತ್ತಿಟ್ಟದ್ದಕ್ಕೆ ಸಜೀವ ಸಾಕ್ಷಿಗಳಿದ್ದವು. ರಂಗನಿತ್ತ ಮುತ್ತಿನ ಮತ್ತಿಗೆ ರಂಗೇರಿದ ಕುಸುಮಾಲೆಗೆ ಸಾಕ್ಷಿಯಾಗಿದ್ದ ಸೂರಕ್ಕಿ ಇಬ್ಬನಿ ತುಂಬಿದ ಹೂವಿನೊಳಗೆ ಚಂಚು ಚಾಚಿ ಮಧು ಹೀರಿಕೊಳ್ಳುತ್ತಿತ್ತು. ಜೇಡನ ತೆಳು ತೆಳ್ಳನೆಯ ಎಳೆಗಳ ಜಾಲಗಳಲ್ಲಿ ಸಾಲುಸಾಲಿಕ್ಕಿ ರಂಗನಿತ್ತ ಅಸಂಖ್ಯ ಮುದ್ದಿನ ಮುತ್ತುಗಳಿದ್ದವು. ಅವನ್ನೇ ಕ್ಯಾಮೆರಾದೊಳಗೆ ಬರಮಾಡಿಕೊಂಡೆ.

ಪರಸ್ಪರ ಕಾಣಿಸುವಷ್ಟು ಬೆಳಕು ಮೂಡಿದ ಬಳಿಕ ನಾವಿಬ್ಬರೂ ರೆಡಿಯಾದೆವು, ಕಾಯುತ್ತಾ ಕುಳಿತೆವು. ತಂಗಿಯ ಮಿತ್ರರು `ನಾನು ಬಂದು ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ’ ಎಂದಿದ್ದರು. ಅವರು ಬರಲಿಲ್ಲ, ಆದರೆ ಅವರ ಫೋನ್ ಬಂದಿತು. ಹುಲಿ ಆನೆಯ ಮೇಲೆ ಅಟ್ಯಾಕ್ ಮಾಡಿದ ಜಾಗಕ್ಕೆ ಹೋಗ್ತಿದೀನಿ, ಸ್ವಲ್ಪ ತಡವಾಗುತ್ತದೆಂದು ವರ್ತಮಾನಿಸಿದರು. ಓಹೋ! ನಿನ್ನೆ ಬರುವಾಗ ನಾವು ಕೇಳಿದ ಅಬ್ಬರ ಹುಲಿಯದ್ದು ಎಂದು ಖಚಿತವಾಯಿತು. ಅವರಿಗಾಗಿ ಕಾಯುತ್ತಾ ಕಾಯುತ್ತಾ ಬೋರಾಗಿ ಗೆಸ್ಟ್ ಹೌಸ್ ಸುತ್ತಮುತ್ತ ಕ್ಲಿಕ್ ಮಾಡುತ್ತಿದ್ದೆವು. ಕೊನೆಗೂ ಅವರು ಬಂದರು, ನಾವೂ ಅವರ ಜೀಪೇರಿದವು. ಎಲ್ಲಿಗೆ ಎತ್ತ ಏನೂ ಗೊತ್ತಿಲ್ಲ, ನಾವೂ ಕೇಳಲಿಲ್ಲ, ಅವರೂ ಹೇಳಲಿಲ್ಲ. ಎಲ್ಲಿಗೋ ಕರೆದುಕೊಂಡಂತೂ ಹೋಗುತ್ತಾರೆಂದು ಹಿಂಬಾಲಿಸಿದೆವು. ಅವರು ನಮ್ಮನ್ನು ಕೆ.ಗುಡಿಗೆ ಕರೆದುಕೊಂಡು ಹೋದರು. ಊಟ ಕೊಡಿಸಿದರು, ಹೊಟ್ಟೆ ತುಂಬಾ ಉಂಡೆವು. ಸಹಪಾಠಿಗಳಿಬ್ಬರೂ ತಮ್ಮ ದಿನ ಜಮಾನಾದ ನಾಲ್ಕಾರು ಮಾತುಗಳಾಡುತ್ತಿರುವಾಗ ನನ್ನ ಕಣ್ಣಿಗೆ ಕಂಡ ಸಿಂಗಲೀಕನ ಆಟಗಳನ್ನೂ ಹರಿಣಗಳನ್ನೂ ಕ್ಲಿಕ್ಕಿಸಿದೆ. ಬಿದ್ದಿದ್ದ ಅನ್ನದ ಅಗುಳಿಗೆ ಬಾಯಿ ಹಾಕಲು ಬಂದ ಹರಟೆಮಲ್ಲಗಳನ್ನೂ ಬನ್ನಿರಪ್ಪ ಎಂದೆ, ಅವೂ ಬಂದವು.

ಉಂಡ ಊಟ ಸ್ವಲ್ಪ ಕರಗಿದ ಬಳಿಕ ಮತ್ತೆ ಜೀಪ್ ಹತ್ತಿದೆವು, ಕಾಡಿನೊಳಗೆ ಸವಾರಿ ಶುರುವಾಯಿತು. ನನ್ನ ಕ್ಯಾಮೆರಾಕ್ಕೆ ಕಿಂಚಿತ್ತೂ ಕೆಲಸ ಇರಲಿಲ್ಲ. ಸುರಿದ ಮಳೆಯಿಂದ ಕೊಚ್ಚೆಮಯವಾಗಿದ್ದ ಗೇಮ್ ರೋಡಿನಲ್ಲಿ ಗಾಡಿ ಓಡಿತು. ಓಡಿತೆ! ಅಲ್ಲಲ್ಲ ನಾಗಾಲೋಟ ಓಡಿತು. ಆ ಓಟದಲ್ಲಿ ಕಂಡವೂ ಕಾಣಿಸುತ್ತಿರಲಿಲ್ಲ. ಕತ್ತಲಾದಾಗ ಗೆಸ್ಟ್ ಹೌಸಿಗೆ ವಾಪಸ್ ಬಂದೆವು ಅಷ್ಟೆ. ದಾರಿಯಲ್ಲಿ ಒಂದೆಡೆ ದೊಡ್ಡ ಸಂಪಿಗೆ, ಸಿಕ್ಕಿದ ಕಲ್ಲುಗಳನ್ನು ಸಂಪಿಗೆ ಮರದ ಬೊಡ್ಡೆಯ ಬಳಿ ಇಟ್ಟು ಲಿಂಗವಾಗಿಸಿದ್ದ ಕಲ್ಲಿಂಗ ರಾಶಿಯನ್ನು ನೋಡಿ ಒಂದೆರಡು ಪಟ ಹಿಡಿದೆ ಅನ್ನೋದಷ್ಟೆ ಸಮಾಧಾನ, ಅದೂ ಮೇಲಿನ ರಸ್ತೆಯಿಂದಲೆ. ಹಳೆಯಗಾಲದ ಅರಣ್ಯ ಇಲಾಖೆಯ ಕಟ್ಟಡವೊಂದನ್ನು ನೋಡಿದೆ, ಫೋಟೋ ತೆಗೆಯಬೇಡಿ ಎಂದದ್ದರಿಂದ, ತೆಗೆಯಲಿಲ್ಲ ಅಷ್ಟೆ.

ಮರುದಿನ ಸ್ಥಳೀಯರಾದ ರಾಜಕುಮಾರರ ಕಾರು ಗೊತ್ತುಪಡಿಸಿಕೊಂಡಿದ್ದೆವು. ಬೆಟ್ಟ, ಬೆಟ್ಟದ ಕೆಳಗೆ ಒಂದಿಡೀ ದಿನ ಅಡ್ಡಾಡಿದೆವು. ಪಾಪ ಅವರು ನಾವು ಕೇಳಿದ ಕಡೆ ನಿಲ್ಲಿಸಿದರು, ಮತ್ತೆ ಹತ್ತಿಸಿಕೊಂಡು ಸವಾರಿ ಮಾಡಿಸಿದರು. ಹಕ್ಕಿಗಳೂ ಕೆಲವು ಒಳಗೆ ಬರಬಹುದೆ ಎಂದು ಕೇಳಿ ಒಳಗೆ ಬಂದವು. ಒಂದೆಡೆ ಏನೋ ಕಂಡಂತಾಗಿ ಸ್ವಲ್ಪ ಜೋರಾಗಿಯೇ ಕೂಗಿ ನಿಲ್ಲಿಸಿದೆ. ನೋಡುತ್ತೇನೆ ಯಾರೋ ಹೂವಿನ ಹಾರವನ್ನು ಗಿಡದ ಮೇಲೆ ಎಸೆದಿದ್ದರು ಅಷ್ಟೆ. ಕಣ್ಣೊಳಗೆ ಕೂತಿದ್ದ ಹಕ್ಕಿ Asian paradise flycatcher ಗಂಡು. ಏನು ಬೆಳ್ಳಗೆ ಕಾಣುತ್ತೊ ಅದೆಲ್ಲಾ ನನ್ನ ರಾಜದಂಡೆಯೇ ಇರಬಹುದೆಂಬ ಭ್ರಮೆಯಲ್ಲೇ ತೇಲಿ ನಿರಾಶಾಳಾಗುತ್ತಿದ್ದೆ. ತೇಲಿಸೋ ಇಲ್ಲ ಮುಳುಗಿಸೋ ರಂಗಾ. ಇಂದಿಗೂ ಎಷ್ಟು ಸಲ ತೆಗೆದರೂ ತಣಿಯದಷ್ಟು ಮೋಹಕ ಬಾಲದ ಹಕ್ಕಿಯ ಬಾಲ-ಫ್ಯಾನು ನಾನು. 

ಆ ದಿನದ ಸುತ್ತಾಟದಲ್ಲಿ ಒಂದೆಡೆ ಹುತ್ತದ ಬಳಿ ಮುಂಗುಸಿ ಕಾಯುತ್ತಿತ್ತು. ನೋಡಿದವಳೇ `ರಂಗಾ ಜೋಪಾನ’ ಎಂದು ಕೂಗಿದ್ದೆ. ರಂಗನಾಥ ಕಾವೇರಮ್ಮನನ್ನು ಎರಡೂ ತೋಳಿನಿಂದ ಬಳಸಿದ ಶ್ರೀರಂಗಪಟ್ಟಣದಲ್ಲಿ ಶೇಷಶಾಯಿ. ಹಾವಿನ ಹಾಸಿನ ಬಿಸಿಯಲ್ಲಿ ಸುಖನಿದ್ರೆ ಮಾಡುತ್ತಿದ್ದಾನೆ. ಆದರೆ ಬಿಳಿಗಿರಿಯಲ್ಲಿ ರಂಗ ಶೇಷನಿಲ್ಲದೆ ನಿಂತಿದ್ದಾನೆ. ಶೇಷ `ಹೊರಗೆ ಬರ್ತೀನಿ ರಂಗಾ’ ಅಂದರೆ ಮುಂಗುಸಿ ಬಿಡದೆ ಹುತ್ತಕ್ಕೆ ಕಾವಲಿಗೆ ನಿಂತಿದೆ. ʼರಂಗಾ ನಿನ್ನ ಶೇಷನನ್ನು ನೀನೇ ಜೋಪಾನ ಮಾಡಿಕೊಳ್ಳಪ್ಪ’ ಎಂದು ಸಾರಿ ಹೇಳಿದೆ.

ಸಂಜೆ ಹೊತ್ತಿಗೆ ಕೆ.ಗುಡಿಯ ಕಡೆಯಿಂದ ಬರೋಣ ಎಂದು ನಿರ್ಧರಿಸಿದ್ದ ಕಾರಣ ಅಲ್ಲಿಗೆ ನಿಧಾನವಾಗಿ ತಲುಪಿದ್ದೆವು. ನೋಡ್ತೀವಿ ಒಂದೆಡೆ ಚಿಟ್ಟೆ ಎದ್ದಿತ್ತು. ಕೆಳಗೆ ಇಳಿದೆವು ನಿಯಮ ಮರೆತು. ಆಹಾ ಅದೇನು ನೋಟ! ಹತ್ತಾರು ಬಗೆಯ ಹಕ್ಕಿಗಳು ಚಿಟ್ಟೆ ಹಿಡಿಯುವಾಟದಲ್ಲಿ ನಿಮಗ್ನ. ಹಳದಿ, ಹಸಿರು, ಕಪ್ಪು, ಕಂದು ನಾನಾ ಬಣ್ಣ ಬೆಡುಗುಗಳ ಹಕ್ಕಿಗಳು ಪೈಪೋಟಿಯಲ್ಲಿ ಹಾರಿ ನುಗ್ಗಿ ಕ್ಯಾಚ್ ಹಿಡಿದು ಕಬಳಿಸುತ್ತಿದ್ದೆವು. ಕಾಲ ಸ್ತಬ್ಧವಾಯಿತು ರಂಗನ ಬನದಲ್ಲಿ. ಮೈಮರೆತು ನಿಂತೇಬಿಟ್ಟೆವು ನಾವಿಬ್ಬರೂ. ಫೋಟೊ ತೆಗೆದಿದ್ದು ಕಡಿಮೆ. ಈಗಲೂ ನನ್ನನ್ನು ನಾನೇ ಬೈಯ್ದುಕೊಳ್ಳುವೆ, ವಿಡಿಯೋ ಮಾಡಿಕೊಳ್ಳಬಾರದಿತ್ತಾ ಎಂದು. So, I Missed the Chance. ಆದರೂ ನೀನೇನೂ ಕಳೆದುಕೊಂಡಿಲ್ಲ ಎಂಬ ಸಾಂತ್ವನ ನನ್ನಿಂದ ನನಗೆ. ಈ ಕ್ಷಣದಲ್ಲಿ ನೆನೆದರೂ ಇಡೀ ಚಿತ್ರ ಕಣ್ಣಿಗೆ ಕಟ್ಟಿದಂತೆ ಮನಸಿನ ಪರದೆಯಲ್ಲಿ ಹಾಯ್ದು ಹೋಗುತ್ತದೆ. ಕಣ್ಣಾರೆ ಕಂಡ ಸುಖ ಅನುಭವಿಸಿದ್ದೆ. ಮತ್ತೆ ಮತ್ತೆ ಬಯಸಿದರೂ ಆ ಸೊಬಗು ನನಗೆ ಸಿಕ್ಕಿಲ್ಲ. ಮೊದಲು ಕಂಡದ್ದರ ಹೊಳಪು ಮಾಸಿಲ್ಲ. 

ಹಕ್ಕಿಗಳ ಈ ಕ್ಯಾಚಾಟದ ಚಂದ ನೋಡ್ತಾ ನೋಡ್ತಾ ಕಾಲ ಸರಿದೇ ಹೋಗಿದೆ. ರಂಗನ ಕಾಡೊಳಗೆ ಸಮಯದ ಮಿತಿ ಇದೆಯಲ್ಲ, ದಾಟಿ ಹೋಗುತ್ತಿತ್ತು. ಗೇಟ್ ಹಾಕಿಬಿಟ್ಟರೆ ಎಂಬ ಭಯದಿಂದ ಬೆಟ್ಟಕ್ಕೆ ಅವಸರವಸರವಾಗಿ ಮರಳುತ್ತಿದ್ದೆವು. ಒಂದೆಡೆ ತಿರುವಿನ ರಸ್ತೆಯಿತ್ತು, ಸ್ವಲ್ಪ ಇಳಿಜಾರು ಬೇರೆ. ಮಬ್ಬುಬೆಳಕಿನಲ್ಲಿ ಆನೆಯೊಂದು ಘೀಳಿಡುತ್ತಾ ಬಂದಿತು. ಇನ್ನೂ ಮುಂದೆ ಬಂದಿದ್ದರೆ ಪೇಪರ್ ನ್ಯೂಸ್ ಆಗಿ ಇದನ್ನೆಲ್ಲಾ ಬರೆಯಲು ನಾನೇ ಇರುತ್ತಿರಲಿಲ್ಲ. ಆದರೆ ಆನೆಗೆ ಏನನ್ನಿಸಿತೋ ಅದೇ ಹತ್ತಡಿ ಹಿಂದೆ ಹೋಯಿತು. ನೋಡಿದರೆ ಅಲ್ಲೊಂದು ಗರ್ಭಿಣಿ ಆನೆ. ಓ, ಇದು ಅದನ್ನು safeguard ಮಾಡುತ್ತಿದೆ. ನಾವಾದರೂ ಅಡ್ಡಿ ಪಡಿಸಲು ಹೇಗೆ ಸಾಧ್ಯ. ಸುಮ್ಮನೆ ಗಾಡಿ ನಿಲ್ಲಿಸಿ ಉಸಿರು ಬಿಗಿಹಿಡಿದು ರಂಗಾ ರಂಗಾ ಎನ್ನುತ್ತಾ ಕಾಯುತ್ತಿದ್ದೆವು. ಏಕೆಂದರೆ ಹಿಂದೆ ಹೋಗಲೂ ಮುಂದೆ ಬರಲೂ ಆಗದಂತಹ ಇಕ್ಕಟ್ಟಿನ ದಾರಿ ಅದಾಗಿತ್ತು. 

ನನ್ನ ಹಿಂದಿನ ಆ ಐದು ವರ್ಷಗಳಲ್ಲಿ ಬಿಳಿಗಿರಿಯಲ್ಲಿ ಓಡಾಡುವಾಗ ಆನೆ ಕಂಡರೆ ರಂಗಪ್ಪಾ ನೀನೆ ಕಾಪಾಡು ಎಂದು ಗಾಡಿ ನಿಲ್ಲಿಸಿ ಕಾಯುತ್ತಿದ್ದ ಎಷ್ಟೊ ಘಟನೆಗಳು ನೆನಪಿನಂಗಳದಲ್ಲಿ ಮರಳಿ ಬಂದವು. ಇವತ್ತಿಗೂ ಬಗೆಹರಿಯದ ಪ್ರಶ್ನೆ ರಂಗಪ್ಪಾ ಅಂದಿದ್ದರಿಂದ ಆನೆ ತೊಂದರೆ ಮಾಡದೆ ಹೋಯಿತೋ ಅಥವಾ ನಾವೇನು ತೊಂದರೆ ಮಾಡದೆ ಇದ್ದ ಕಾರಣದಿಂದ ಅದು ತನ್ನ ಪಾಡಿಗೆ ಹೋಯಿತೊ. ನಂಬಿದವರಿಗೆ ನಂಬಿಕೆಯೇ ಅಭಯ ತಾನೆ. ಆದರೆ ಮರುಪ್ರಶ್ನೆ `ರಂಗಪ್ಪ, ರಂಗೇಗೌಡ ಹೆಸರಿನವರನ್ನೇ ಆನೆಗಳು ಈ ಕಾಡಿನಲ್ಲಿ ತುಳಿದು ಹೊಸಕಿದಾವಲ್ಲ ಎಂದು’. ಬಿಳಿಗಿರಿ ಬೆಟ್ಟದಲ್ಲಿ ಅರ್ಧ ಪಾಲು ಜನರ ಹೆಸರೆಲ್ಲಾ ರಂಗಮಯ ರಂಗಿನಿಂದಲೇ ಇತ್ತು. ನನಗೆ ನಾನೇ ಸಮಾಧಾನ ಮಾಡಿಕೊಂಡಿದ್ದು ರಂಗ ಅಂತಾ ಹೆಸರಿದ್ದರೂ ಅವನಿಗೆ ರಂಗನಲ್ಲಿ ಶ್ರದ್ಧೆ ಇರಲಿಲ್ಲವೇನೋ ಎಂದು. ದಾರಿ ಹೊಳೆಯದಿದ್ದಾಗ ಇಂತಹ ಸುಳ್ಳು ಸಮಾಧಾನದ ದಾರಿಗಳೂ ನೂರಾರು ಇದೆಯಲ್ಲ. ಹತ್ತಾರು ನಿಮಿಷ ಕಳೆದ ಬಳಿಕ ನಮ್ಮ ಎದುರಿದ್ದ ಆನೆಗಳೆರಡೂ ಕಾಡಿನಲ್ಲಿ ಮರೆಯಾದವು. ನಮ್ಮ ಗಾಡಿ ಮುಂದೆ ಓಡಿತು. ಆದರೆ ಅಷ್ಟರಲ್ಲಿ ಗೇಟ್ ಹಾಕಿತ್ತು. ಗಾಡಿ ದಾಟಿ ಬರುವ ಹಾಗಿರಲಿಲ್ಲ. ನನ್ನ ಬೆಟ್ಟದ ಬಂಧು ಶೇಷಾದ್ರಿಗೆ ಫೋನ್ ಮಾಡಿದೆ. ಅವರು ಫಾರೆಸ್ಟ್ ಡಿಪಾರ್ಟ್ಮೆಂಟಿನವರಿಗೆ ಫೋನ್ ಮಾಡಿದರು. ಅಂತೂ ಒಬ್ಬ ಗೊಣಗುತ್ತಾ ಬಂದು ಕೀ ತೆಗೆದು ಹೇಳಿದ “ನಿನ್ನೆ ಎಲ್ಲಾ ಫಾರೆಸ್ಟರ್ ಜೀಪಿನಲ್ಲಿ ಓಡಾಡಿದರಲ್ಲ ನೀವು, ನಾನೂ ಜೀಪಿನೊಳಗಿದ್ದೆ, ಬೇಗ ಬರೋದಲ್ವಾ, ಏನಾದರೂ ಆಗಿದ್ದರೆ ಏನು ಮಾಡಬೇಕಿತ್ತು.” ತಪ್ಪು ಮಾಡಿದ್ದ ನಾವು ತೆಪ್ಪಗೆ ಸಾರಿ-ಥ್ಯಾಂಕ್ಸ್ ಎಂದು ಬಂದೆವು. ಮರುದಿನ ಹತ್ತಕ್ಕೆ ಬಸ್ ಬಂದು ಏರುವ ತನಕ ಸುತ್ತಮುತ್ತ ಕ್ಯಾಮೆರಾ ತೋರಿಸಿ ಗಿರಿದರ್ಶಿನಿಯಲ್ಲಿ ತಿಂಡಿ ಹೊಟ್ಟೆಗಿಳಿಸಿ ನಮ್ಮ ನಮ್ಮ ಊರು ಸೇರಿಕೊಂಡೆವು ಎನ್ನುವಲ್ಲಿಗೆ ಬಿಳಿಗಿರಿಯ ಬನದಲ್ಲಿ ಲೀಲಾ ಹಕ್ಕಿಲೀಲೆಯ ಮೊದಲ ಯಾನ ಮುಕ್ತಾಯವಾಯಿತು.

ಕೆಲ ದಿನ ಕಳೆಯಿತು. ಬೆಟ್ಟಕ್ಕೆ ಹೋಗುವ ಬಯಕೆ ಮತ್ತೊಮ್ಮೆ ಹುಟ್ಟಿಕೊಂಡಿತು. ಒಂದು ದಿನ ನಮ್ಮ ಸಾರಥಿಗೆ ಹೇಳಿದೆ ಒಂದಿಡೀ ದಿನ ಬೆಟ್ಟ ಸುತ್ತಲು ಹೋಗೋಣವೆಂದು. ಅವ ಒಪ್ಪಿ ಟೀನರಸೀಪುರ, ಯಳಂದೂರು ಮಾರ್ಗವಾಗಿ ಬೆಳಿಗ್ಗೆ ಬೇಗನೆ ಬೆಟ್ಟ ತಲುಪಿದೆ. ಇಡೀ ದಿನ ಯಳಂದೂರು ಗೇಟಿನಿಂದ ಕೆ.ಗುಡಿ ಗೇಟ್, ಕೆ.ಗುಡಿ ಗೇಟಿನಿಂದ ಯಳಂದೂರು ಗೇಟ್‌ಗೆ ಎರಡು ಮೂರು ಸಲ ಸುತ್ತಿ ಬಂದೆವು. ಕಂಡದ್ದು ನಾಲ್ಕಾರು ಆನೆ, ಒಂದೆರಡು ಹಕ್ಕಿಗಳು, ಒಟ್ಟಿನಲ್ಲಿ ಐದಾರು ಚಿತ್ರ ಸಿಕ್ಕವು. 

ಬೆಟ್ಟಕ್ಕೆ ಮೂರನೆಯ ಸಲ ಹೋಗಿದ್ದು 2019ರಲ್ಲಿ. ಮೊಮ್ಮಗಳಿಗೆ ಪರೀಕ್ಷೆ ಮುಗಿದು ರಜೆ ಬಂದಿತ್ತು. ಅಜ್ಜಿ ಸುತ್ತಲು ಹೋಗೋಣವಾ ಎಂದಳು. ನನಗೆ ಸುತ್ತೋದು ಎಂದರೆ ಹಕ್ಕಿಗೆ ಸುತ್ತುವುದು ಮಾತ್ರ. ಬೇರೆ ಕಡೆಗೆ ತಿರುಗುವಷ್ಟೆಲ್ಲಾ ಕಾಲು ಸರಿಯಿಲ್ಲವೆಂದು ಅವಳಿಗೂ ಗೊತ್ತು. ಏಕೆಂದರೆ ಒಮ್ಮೆ ಮೈಸೂರು ಜೂ಼ಗೆ ಅವಳನ್ನು ಕರೆದುಕೊಂಡು ಹೋಗಿದ್ದೆ. ಅವಳಿಗೂ ಒಂದು ಕ್ಯಾಮೆರಾ ಕೊಟ್ಟು ಅಲೆಸುತ್ತಿದ್ದೆ, ಅವಳೂ ಸಂಭ್ರಮದಿಂದ ಅಲೆಯುತ್ತಿದ್ದಳು. ನನ್ನ ಕಾಲಿನ ಪವರ್ ಕಥೆ ನನಗೆ ಗೊತ್ತು. ಸ್ವಲ್ಪ ಹೊತ್ತಿನ ಬಳಿಕ ಕಾಲು ಎಳೆದು ಹಾಕಲಾರಂಭಿಸಿದೆ, ಅವಳಿಗೂ ಅರ್ಥವಾಯಿತು, ಆದರೂ ತನಗೆ ಪೂರ್ತಾ ನೋಡಲು ಬಿಡಲಿಲ್ಲ ಅನ್ನುವ ಅಸಮಾಧಾನ ಎದ್ದು ಕಾಣುತ್ತಿತ್ತು. ನಾನಿಲ್ಲಿ ಕುಳಿತಿರುತ್ತೇನೆ, ನೀನು ಹೋಗಿ ನೋಡಿ ಬಾರೋ ಎಂದರೆ ತಾರಮ್ಮಯ್ಯ ಎಂದು ತಲೆಯಲ್ಲಾಡಿಸಿದಳು, ಸಾರಥಿಯನ್ನು ಇನ್ನೊಂದು ಗೇಟಿನ ಬಳಿ ಬರಲು ಹೇಳಿ ಗಾಡಿ ಹತ್ತಿ ಮರಳಿ ಬಂದಿದ್ದೆವು. ಮೂರು ದಿನ ದುಸುಮುಸು ಎಂದು ನಂತರ ಸುಮ್ಮನಾದಳು. ಆದ್ದರಿಂದ ಈಗ ಸುತ್ತಲು ಹೋಗೋಣವೆಂದಾಗ ಈ ಹಿಂದೆ ಕಬಿನಿಗೆ ಹೋಗಿದ್ದ ಕಾರಣ ಬಿಳಿಗಿರಿಯನ್ನೇ ಆರಿಸಿಕೊಂಡೆವು. ಅವಳಿಗೂ ಇದು ಮೊದಲನೇ ಭೇಟಿಯಾಗಿತ್ತು. ರೈಟ್, ಬೆಳಿಗ್ಗೆಯೆ ಹೊರಟೆವು. ಹೊರಡುವ ಉತ್ಸಾಹ ಇದ್ದರೂ ಅವಳ ನಿದ್ದೆ ಪೂರ್ಣವಾಗದಿದ್ದರಿಂದ ಹಾದಿಯುದ್ದಕ್ಕೂ ಎಚ್ಚರವಿಲ್ಲದ ನಿದ್ದೆ ಮಾಡಿದಳು. ಬೆಟ್ಟದ ಬುಡದಲ್ಲಿದ್ದ ಮೆಸ್ಸಿನಲ್ಲಿ ತಿಂಡಿಯಂತೆ ಕಂಡದ್ದನ್ನು ತಿಂದು ಬೆಟ್ಟವೇರಿದೆವು. ಹಾದಿಯಲ್ಲಿ ಒಂದೆರಡು ಕಡೆ ಇಳಿದಳು, ಅವಳ ಪಟವನ್ನೇ ಕ್ಲಿಕ್ಕಿಸಿದೆ. ಹಕ್ಕಿಗಳೂ ಸಿಕ್ಕಿರಲಿಲ್ಲ. ನಮ್ಮನೆಯ ಮುದ್ದು ಮುದ್ದಿನ ಹಕ್ಕಿಯದೇ ಚಿತ್ರ. ಅವಳು ಮೊದಲ ಬಾರಿ ಬಂದಿದ್ದರಿಂದ ರಂಗನಾಲಯದ ಬಳಿಗೆ ಹೋದೆವು. 

ಈ ಗುಡಿಯ ಸವೆದ ಮೆಟ್ಟಿಲುಗಳ ಮೇಲೆ ಎಳೆಯಲಾರದ ಕಾಲು ಎಳೆದುಕೊಂಡು ಪ್ರತಿ ಸಲವೂ ಇದೊಂದೆ ಸಲವೆಂದು ಏದುಸಿರು ಬಿಡುತ್ತಾ ಹತ್ತಿದ ನೆನಪುಗಳನ್ನು ಹೊದ್ದುಕೊಂಡೆ. ಹತ್ತಿದ ಆಯಾಸ ಮರೆಸಿಬಿಡುವ ಸೊಬಗಿದೆ ಗುಡಿಯ ಕಮರಿಯ ಪಾರ್ಶ್ವದಲ್ಲಿ. ಕಮರಿಯ ಕಡಿದಾದ ಸಿದ್ದಪ್ಪನ ಗವಿಗೆ ಮಳೆ ಬಂದ ದಿನ ಕೋಲಿನ ಆಸರೆಯಿಂದ ಇಳಿದು ನೋಡಿದ ನೆನಪೇ ರೋಮಾಂಚನ. ಈ ಸಲ ಮೆಟ್ಟಿಲೇರಿ ನೀನೇನೂ ಒದ್ದಾಡಿ ಬರಬೇಡ, ನಾನೇ ಆಚೆ ಕೂತಿದ್ದೇನೆ, ರಿಪೇರಿ ಮಾಡುತ್ತಿದ್ದಾರೆ ಎಂದು ರಂಗ ಮೆಸೇಜ್ ಕಳಿಸಿದ್ದರಿಂದ ಗಾಡಿಯಲ್ಲೇ ನಿರಾಳವಾಗಿದ್ದೆ, ಅವಳೂ ಸಾರಥಿಯೂ ಹೋದರು, ಹೋದಷ್ಟೆ ಸ್ಪೀಡಾಗಿ ಮರಳಿದರು. ಅವಳಿಗೆ ಚಿಕ್ಕಂದಿನಿಂದ ದೇವರ ತಾಣಗಳಿಗೆ ಸುತ್ತಿಸಿ ಸುತ್ತಿಸಿ ಸುಸ್ತು ಮಾಡಿಸಿಟ್ಟಿರುವ ಕಾರಣ ಎಲ್ಲಿಗಾದರೂ ಎಂದರೆ ಅವಳ ಮೊದಲ ಪ್ರಶ್ನೆ ದೇವಸ್ಥಾನಕ್ಕಲ್ಲ ತಾನೆ ಎಂದು. ನಾನೆಂದೂ ಅವಳನ್ನು ಅಂತಹ ಜಾಗಗಳಿಗೆ ಒಯ್ದವಳೇ ಅಲ್ಲ, ಮೊದಲಿಗೆ ನಾನು ಹೋದರೆ ತಾನೆ! 

ದೇವರಿಗೆ ಹಾಜರಾತಿ ಹಾಕಿದ ಬಳಿಕ ಕೆ.ಗುಡಿಯ ಕಡೆಗೆ ಗಾಡಿ ಓಡಿತು. ದಾರಿಯಲ್ಲಿ ನೀರ್ದಾಣವೊಂದರ ಬಳಿ ನಮ್ಮ ಬಿಳಿಯೆದೆಯ ಕಿಂಗ್ ಫಿಷರಣ್ಣ ಕಾಯುತ್ತಿದ್ದ, ಕಳೆದ ಸಲ ಹೋಗಿದ್ದಾಗಲೂ ಅಲ್ಲಿದ್ದ ಕೈಪಂಪಿನ ಮೇಲೆಯೇ ಕುಳಿತು ಪೋಸ್ ನೀಡಿದ್ದ. ಈ ಸಲವೂ ಅದರ ಸಮೀಪದಲ್ಲೇ ಠಳಾಯಿಸುತ್ತಿದ್ದ. ಅವಳಿಗೆ 100-400 ಹಾಕಿ ಕೊಟ್ಟಿದ್ದೆ. ವಯಸ್ಸಾದ ಕೈಯಲ್ಲವಲ್ಲ, ಗಟ್ಟಿಯಾಗಿ ಹಿಡಿದು ನಾಲ್ಕಾರು ಚಿತ್ರ ತೆಗೆದಳು, ಖುಷಿಯಾದಳು. ಸ್ವಲ್ಪ ದೂರ ಕಳೆದ ಮೇಲೆ ಒಂದೆಡೆ ಇದ್ದಕ್ಕಿದ್ದಂತೆ ಏನೋ ಹಾರಿ ಕೊಂಬೆಯ ಮೇಲೆ ಕುಳಿತಂತೆ ಅನ್ನಿಸಿತು. ಗಾಡಿ ನಿಲ್ಲಿಸು, ಗಾಡಿ ನಿಲ್ಲಿಸು ಸ್ವಲ್ಪ ಧ್ವನಿಯೇರಿಸಿಯೇ ಕೂಗಿದೆ. ಅಷ್ಟರಲ್ಲಿ ನಾಲ್ಕೆಂಟು ಉರುಳು ಮುಂದೆ ಹೋಗಿ ನಿಂತಿತು. ನೋಡುತ್ತೇನೆ, ಜಂಗಲ್ ಔಲೆಟ್ ಕೂತಿದೆ. ಕ್ಯಾಮೆರಾ ಎತ್ತಿ ಸೆಟ್ ಮಾಡಿ ಕ್ಲಿಕ್ ಎನ್ನಿಸಿದೆ. ಮೊದಲ ಶಾಟ್ ಸುಮಾರಾಗಿತ್ತು. ಇನ್ನೊಂದೆರಡು ಶಾಟ್ ಹೊಡೆಯುವಷ್ಟರಲ್ಲಿ ಹಾರಿ ಅಂತರ್ಧಾನವಾಯಿತು. 

ಇನ್ನೂ ಮುಂದೆ ಹೋದೆವು. ಹಕ್ಕಿಗಳೂ ಕಾಣಸಿಗಲಿಲ್ಲ. ಅವಳಿಗೂ ತಲೆ ಬಿಸಿಯಾಗತೊಡಗಿತು. ಅವಳನ್ನು ಮೂಡಿಗೆ ತರಲು ಕೆಳಗಿಳಿಸಿ ಮುರಿದು ಬಿದ್ದ ಕೊಂಬೆಯನೇರಿಸಿ ದೊಡ್ಡ ಮರ ಏರಿದ್ದಾಳೆಂಬಂತೆ ಪಟ ತೆಗೆದೆ. ನಿಜವಾಗಿಯೂ ಆ ಕೊಂಬೆ ನೆಲದಿಂದ ಒಂದು ಅಡಿಯೂ ಮೇಲಿರಲಿಲ್ಲ. ಅವಳಿಗೆ ಮರದ ಗೆಲ್ಲಿನ ಮೇಲೆ ಕೂತು ಪಟ ತೆಗೆಸಿಕೊಳ್ಳುವ ಆಸೆ ಇತ್ತು, ಅದನ್ನು ಮಂಡ್ಯದ ಬಳಿಯ ಹಳ್ಳಿಯೊಂದರಲ್ಲಿ ಮರದ ಕೊಂಬೆಯ ಮೇಲೆ ಕೂರಿಸಿ ಕ್ಲಿಕ್ಕಿಸಿ ಆಸೆ ಪೂರೈಸಿದ್ದೆ.

ಕೆ.ಗುಡಿ ಗೇಟ್ ತನಕ ಸವಾರಿ ಮಾಡಿ ಮರಳುವ ಹಾದಿಯಲ್ಲಿ ಲಿಂಗಣ್ಣಯ್ಯನ ಕೆರೆಯಲ್ಲಿದ್ದ ಆಮೆಗಳನ್ನು ಹಿಡಿದು ಕ್ಯಾಮೆರಾದ ಒಳಗೆ ಹಾಕಿಕೊಂಡಳು. ಮುಂದೆ Imperial green pigeon ಕಾಯುತ್ತಿತ್ತು, ಇಬ್ಬರೂ ಒಟ್ಟಿಗೆ ಒಳಗೆ ಕರೆದೆವು. ಹತ್ತಡಿ ದಾಟಿದಾಗ ಬೆಳವ ಕಾಯುತ್ತಿತ್ತು ಸುಂದರ ಹಿನ್ನೆಲೆಯೊಡನೆ, ಅವಳಿಗೂ ಮೂಡ್ ಬಂದಿತು, ಕ್ಲಿಕ್ ಮಾಡುತ್ತಿದ್ದಂತೆ Brown backed Shrike ಅವಳ ಎದುರೆ ಬಂತು. ಅದಕ್ಕೂ ಪಟಪಟ ಎಂದಳು. ಇನ್ನೊಂದೆರಡು ಹಕ್ಕಿಗಳು ಕಂಡವು.. ಅಷ್ಟು ಹೊತ್ತಿಗೆ ಚಿತ್ರ ತೆಗೆಯಲು ನಮ್ಮ ಗಾಡಿ ರಸ್ತೆ ಬದಿಯಲ್ಲಿ ನಿಂತಿತ್ತಲ್ಲ, ಗಾಡಿಯಲ್ಲಿ ಬರುತ್ತಿದ್ದ ಅರಣ್ಯ ಇಲಾಖೆಯವನೊಬ್ಬ ಹತ್ತಿರ ಬಂದ. ಬಿಡ್ತಾನಾ ಇಂತಹ golden opportunity. “ಯಾರೋ, ಯಾಕ್ರೊ ಇಲ್ಲಿ ನಿಲ್ಸಿದೀರಾ, ಎತ್ರೊ ಗಾಡೀನಾ” ಎಂದ. `ಸರಿ ಕಣಯ್ಯʼ ಎಂದು ಕ್ಯಾಮೆರಕ್ಕೆ ಮುಸುಕು ಹಾಕಿ ಊರು ಸೇರಿದೆವು. 

ಆದರೆ ರಂಗ ನನ್ನಲ್ಲಿ ಅಭಿನ್ನ… ಅನಂತ… ಮತ್ತೆ ಮತ್ತೆ ಕೂಗುತ್ತಾನೆ, ಹೋದವಳನ್ನು ಕಣ್ತುಂಬ ನೋಡಿ ಖುಷಿ ಪಡುತ್ತಾನೆ. ನಾನೂ ಕಾಯುತ್ತಿದ್ದೇನೆ ವನರೂಪಿ ರಂಗನನ್ನು ನೋಡಲು, ಅವನನ್ನು ಕಣ್ತುಂಬಿಕೊಂಡು ಪಕ್ಷಿರೂಪದ ಅವನ ಮಂದಹಾಸವನ್ನು ಸವಿಯಲು, ಹರಸುವ ದನಿಯನ್ನು ಹಕ್ಕಿ ಕೂಜನ ರೂಪದಲ್ಲಿ ಕೇಳಲು. ಎಷ್ಟೇ ಆದರೂ ನನ್ನ ಒಲವಿನ ನಟಿ ಕಲ್ಪನಾ ಶರಪಂಜರದಲ್ಲಿ ರಂಗ ರಂಗ ರಂಗಯ್ಯಾ ಸ್ವಾಮಿ ಬಿಳಿಗಿರಿ ರಂಗಯ್ಯ ನೀನೆ ಕೇಳಯ್ಯ ನೀನೇ ಹೇಳಯ್ಯಾ ಎಂದು ಕೂಗಿ ಕರೆದಿದ್ದಳಲ್ಲ. ಕಾಜಾಣ ಗಿಳಿ ಕೋಗಿಲೆ ಎಲ್ಲವನ್ನೂ ಹೆಸರಿಸಿದ್ದಳಲ್ಲ. ನಾನೂ ಇವೆಲ್ಲವನ್ನೂ ಅವನ ಬಿಳಿಗಿರಿಯಲ್ಲಿ ಕಂಡಿದ್ದೆ. ಅದರಲ್ಲೂ ರಾಕೆಟ್ ಬಾಲದ ಕಾಜಾಣವೂ ಕಣ್ಣಿಗೆ ಬಿದ್ದಿತ್ತು. ಇಡೀ ವನದಲ್ಲಿ ಅನಂತ ರೂಪದಲ್ಲಿ ತನ್ನ ಅಸ್ತಿತ್ವವನ್ನು ತೋರಿಸುವ ರಂಗ ಸುಮ್ಮನಿರುವ ಮಾಯಾವಿಯೇ. ಕನಸುಗಳಲ್ಲೂ ಕಾಣುವ ಕಾಡುವ ರಂಗ ಆಗಾಗ ಕೈಬೀಸಿ ಕರೆಯುತ್ತಾನೆ. ಬಿಡದ ನಾನೂ ಬರುತ್ತೇನೆ ಕಾಣೋ ಎಂದು ಅವಕಾಶ ಸಿಕ್ಕಿದಾಗ ಕೈಬಿಡುತ್ತಿಲ್ಲ.

ಇತ್ತೀಚೆಗೆ ಕೊಳ್ಳೇಗಾಲದಲ್ಲಿರುವ ಗೆಳತಿ ಸುಧಾ `ಎದುರಿರುವ ಮತ್ತೋರ್ವ ಗೆಳತಿ ವಿಜಯಲಕ್ಷ್ಮಿ ಮನೆಯ ತೆಂಗಿನಮರದಲ್ಲಿ ಗೂಬೆ ಕುಳಿತಿದೆ, ನೋಡಿ’ ಎಂದು ಮೊಬೈಲಿನಲ್ಲಿ ಚಿತ್ರ ಕಳುಹಿಸಿದ್ದರು. ಅವರು ತೆಗೆದಿದ್ದ ವೈಖರಿಗೆ ಅದು ಸರಿಯಾಗಿ ಕಾಣದೆ ಜಂಗಲ್ ಔಲೆಟ್ ಎಂದು ಅನ್ನಿಸಿತು. ಹಿಂದಿನ ಸಲ ಒಂದೆರಡು ಬ್ಲರ್ ಷಾಟ್‌ಗೆ ಸೀಮಿತವಾಗಿತ್ತು. ಈಗ ಬೇಕಾದಂತೆ ಕ್ಯಾಮೆರಾ ಇರಿಸಿ ಜಂಗಲ್ ಗೂಬೆಯನ್ನು ಹಿಡಿದೇ ಬಿಡಬಹುದೆಂದು ಕ್ಯಾಮೆರಾ ಹೊತ್ತು ಕೊಳ್ಳೇಗಾಲಕ್ಕೆ ಕಾಲಿಟ್ಟೆ. ಗೂಬೆಯೇನೋ ಕುಳಿತಲ್ಲೆ ಕುಳಿತಿತ್ತು, ಗರಿಗಳ ಮರೆಯಲ್ಲಿ. ಕ್ಯಾಮರಾ ಟ್ರೈಪಾಡಿಗೆ ಹಾಕಲೂ ಕಷ್ಟ ಆಗುವಂತೆ ಮರೆಯಲ್ಲಿ ಕುಳಿತಿತ್ತು. ನೋಡಿದರೆ ಅದು ಬಾರ್ನ್ ಔಲ್ ಅಂದರೆ ಕಣಜ ಗೂಬೆ. ಗೂಬೆ ಮುದ್ದಾಗಿತ್ತು, ನನಗೆ ಲೈಫರ್ ಕೂಡಾ ಆಗಿತ್ತು. ಹೆಚ್ಚು ಹೊರಗೆ ಬರದ ಕಾಲದಲ್ಲಿ ಒಂದು ಲೈಫರ್ ಸಿಗುವುದು ಎಂದರೆ ಸ್ವರ್ಗ ಕೈಗೆಟುಕಿದಂತೆ. ಹೆಚ್ಚು ಚಂದಕ್ಕೆ ತೆಗೆಯಲಾಗದ ಬೇಸರಕ್ಕೆ ನನ್ನ ಸಾರಥಿಗೆ ನಡೆ ನಾವು ಬಿಳಿಗಿರಿಗೆ ಹೋಗೋಣ ಎಂದೆ. 

ಕೊಳ್ಳೇಗಾಲದ ಗೆಳತಿಯರಿಗೆ ಬಿಳಿಗಿರಿಗೆ ಹೋಗುವ ವಿಷಯ ತಿಳಿಸದೆ ಬಿಳಿಗಿರಿಯತ್ತ ತಿರುಗಿಸಿದೆ. ಬರುವ ದಾರಿಯಲ್ಲಿ ಗರುಡನೊಂದು ಸೀಗಡಿಗಾಗಿ ಹೊಂಚಿಹಾಕಿ ಕೂತಿತ್ತು. ರಂಗ ಇದ್ದಾನೆ ಹೋಗಿ, ನನಗಿಲ್ಲಿಯೇ ಕೆಲಸವಿದೆ ಎಂದು ತನ್ನ ಕಾಯುವ ಕಾಯಕ ಮುಂದುವರೆಸಿದ ಅವ. ನಾನು ಬಿಳಿಗಿರಿಗೆ ಏರಿದರೆ ಕಾಲಾಗದವಳೆಂದು ನನ್ನ ಜೊತೆಗೆ ಮಳೆಯೂ ಕೈ ಜೋಡಿಸಿತ್ತು. ಮತ್ತದೇ ಕಾಯಕ. ಯಳಂದೂರು ಗೇಟಿನಿಂದ ಕೆ.ಗುಡಿ ಕಡೆಯ ಗೇಟಿನ ತನಕ ಕಾರಿನಲ್ಲೇ ಸಫಾರಿ. ಅವತ್ತು ರಂಗಪ್ಪನನ್ನು ನೋಡೋಕೆ ಯುವಪಡೆ ಹಾಗೂ ಭಕ್ತರ ದಂಡು ದೌಡಾಯಿಸಿತ್ತು. ಬೈಕ್ ಕಾರುಗಳ ಸರ್ರೋ ಭರ್ರೋ ಸವಾರಿಯ ಸದ್ದಿನಲ್ಲಿ, ಸುರಿವ ಮಳೆ ಹನಿಗಳಲ್ಲಿ ಹಕ್ಕಿಗಳು ಕಾಣಲೋ ಬೇಡವೋ ಎಂದು ಕಂಡವೆ ವಿನಾ ಒಂದು ಒಳ್ಳೆಯ ಷಾಟ್ ಮಾಡಲಿಲ್ಲ. ಬೆಟ್ಟ ಹತ್ತಿದರೂ ಕಾರ್ ಹತ್ತಿತೆ ವಿನಾ ನಾನು ಕೆಳಗಿಳಿಯಲಿಲ್ಲ. ರಂಗನಿಗೂ ಸಾರಿ ಎಂದೆ. ಅವ `ಸರಿಬಿಡು, ಕಟ್ಟಡ ಕಟ್ಟಿ ನನ್ನನೀಗ ಮತ್ತೆ ಕೂಡಿಹಾಕಿದ್ದಾರೆ, ಮತ್ಯಾಕೆ ನೀನು ಬರುತ್ತೀಯಾ, ಎಷ್ಟು ಸಲ ನೋಡಿದೀಯಲ್ಲ, ನಾನೇನು ಹೊಸಬನೆ ನಿನಗೆ’ ಎಂದ. ನೀನೇ ಪರ್ಮಿಶನ್ ಕೊಟ್ಟ ಮೇಲೆ ನನ್ನದೇನು ದುಸರಾ ಮಾತಿಲ್ಲ. ಹೋಗಿ ಬರಲೆ ಎನ್ನದೆ ಬಂದುಬಿಟ್ಟೆ.

ಕೇವಲ ಎರಡು ಗಂಟೆಗಳಲ್ಲಿ ಬಿಳಿಗಿರಿಯ ಬೆಟ್ಟ ಅಲೆದು ಖಾಲಿ ಕೈಯಲ್ಲಿ ಅಲ್ಲಲ್ಲ ಕ್ಯಾಮೆರಾದಲ್ಲಿ ಊರು ಸೇರಿಕೊಳ್ಳಬೇಕೆ ಎಂದು ಮನಸು ಕೂಗಿ ಕೂಗಿ ಕೇಳುತ್ತಿತ್ತು. ಒಂದು ಐಡಿಯಾ ಹೊಳೆಯಿತು. ಸಾರಥಿಗೆ ಹೇಳಿದೆ `ರೈಟ್, ನಾವೀಗ ಬನ್ನೂರಿಗೆ ಹೋಗೋಣ’ ಎಂದು. ಹಿಂದೆ ಮೂರ್ನಾಲ್ಕು ಸಲ ಬನ್ನೂರು ಕೆರೆಗೆ ಹೋಗಿದ್ದೆ, ಹಕ್ಕಿಗಳೂ ಸಿಕ್ಕಿದ್ದವು. ಈಗಲೂ ಕೆರೆಗೆ ಒಂದು ಭೇಟಿ ಕೊಟ್ಟುಬಿಡೋಣ ಎಂದು ಕೆರೆಯ ದಾರಿ ಹಿಡಿದೆ. ಹಕ್ಕಿಗೆಂದು ಹೋದರೆ ಕೆರೆ ತುಂಬಾ ನೀರೋ ನೀರು. ಹಕ್ಕಿಗಳಂತೂ ಕಣ್ಣಿಗೆ ಕಾಣಲಿಲ್ಲ. ಕಣ್ಣಿಗೆ ಕಾಣದ ಹಕ್ಕಿಯನೆಂತು ಕ್ಲಿಕ್ಕಿಸಲಿ. ಕೊನೆಗೆ ನನ್ನೂರಿನ ಬಳಿಯ ಕ್ಯಾತುಂಗೆರೆಯ ಬಳಿಯ ನನ್ನ ಹಳೆಯ ಮಾಮೂಲಿ ಜಾಗಕೆ ತೆರಳಿದೆ. ಸೂರಿಸ್ವಾಮಿ ಮುಳುಗುವ ಮುಂಚೆ ಒಂದು ಗಂಟೆ ಸಿಕ್ಕ ಮುನಿಯ, ಸೂರಕ್ಕಿಗಳನ್ನೇ ಸೆರೆ ಹಿಡಿದು ಅಂದಿನ ಹಕ್ಕಿ ದಾಹ ತೀರಿಸಿಕೊಂಡೆ ಎನ್ನುವಲ್ಲಿಗೆ ರಂಗನಗಿರಿಗೆ ಈಗಿನ ಕೊನೆಯ ಪಯಣ ನಿಂತಿದೆ. ಮತ್ತೆ ಯಾವಾಗ ಕರೆಯಿಸಿಕೊಳ್ಳುತ್ತಾನೋ ಅಲ್ಲಿಯ ತನಕ ಕಾಯುವುದೇ ಕೆಲಸ. ನನ್ನನ್ನು ಕರೆದು ಹಕ್ಕಿಗಳನು ತೋರಿಸೋ ರಂಗಾ ಎಂದು ಬೇಡುತ್ತಾ ಕಾಯುವುದೇ ಕೆಲಸ. ಕಾಯಿಸುವ ರಂಗನನ್ನು ನಂಬಬಾರದು ಎಂದಂತೂ ಹಾಡಿಕೊಳ್ಳುವುದಿಲ್ಲ. ನಾನು ಹಕ್ಕಿ ಪ್ರೇಮಿ, ನನಗೆ ಕಾಯುವುದೇ ಕೆಲಸ ಸ್ವಾಮಿ ಎಂದು ಮಾತ್ರ ಹಾಡಿಕೊಳ್ಳಬಲ್ಲೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

November 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: