ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಕರಾವಳಿಯಲ್ಲಿ ಕಾಲಿಟ್ಟ ಲೀಲಾ…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

11

ಡಾಕ್ಟರು ಬರುತ್ತಾರೆಂದು ತ್ರಾಸಾದರೂ ತಾಸುಗಟ್ಟಲೆ ಕೂತಿದ್ದೆವು. ನನಗದು ಅನಿವಾರ್ಯವಿತ್ತು. ನಾವು ಕಾಯುತ್ತಿದ್ದ ಡಾಕ್ಟರ್ ಬಂದರು ನೋಡಿದರು, ಎಕ್ಸರೇ ಹಾಗೂ ನನ್ನನ್ನು. ಏನು ಹೇಳಬಹುದು ಎನ್ನುವುದನ್ನು ನಿರೀಕ್ಷಿಸಿಯೇ ಇದ್ದ ನನಗೆ ಅವರ ಪ್ರಶ್ನೆ ಬಂದೇಬಿಟ್ಟಿತು.
“ಹೇಳಲು ಏನುಂಟು? adverse ಸ್ಥಿತಿಯಿದೆ. ಇರಲಿ  ಮಾಡೋಣ. ರೈಟ್, ಯಾವಾಗ ಮಾಡಿಸಿಕೊಳ್ತೀರಿ”
“ರೈಟಾ… ರೈಟ್ ಆಮೇಲೆ, ಈಗ ಲೆಫ್ಟ್ ಜಾಸ್ತಿ ನೋವು” ಗಂಟಲ ಗುಹೆಯಿಂದ ದನಿ ಹೊರಡಿಸಿದೆ.
“ಅದು ಸರಿಯೆ, ಯಾವಾಗ?”
“ನೀವು ಈಗ ಮಾಡಿದರೆ ನಾನು ಈಗಲೇ ರೆಡಿ.”
ಡಾಕ್ಟರ್ ತಲೆ ಎತ್ತಿ ನೋಡಿ ನಸುನಕ್ಕರು.(ಅಥವಾ ನಾನೇ ಅಂದುಕೊಂಡಿದ್ದಾ, ಏಕೆಂದರೆ ಮಾತು ಆಡಲೇ ಪುರಸತ್ತು ಇಲ್ಲದ ಮೇಲೆ ನಗು ಎಲ್ಲಿಂದ?)
“ರೆಡಿಯಾ, ಹಾಗಾದರೆ ನಾಳೆ ಅಡ್ಮಿಟ್, ನಾಡಿದ್ದು ಓ.ಟಿ ಮಾಡುವಾ, ಆಯಿತಾ.”
“ಥ್ಯಾಂಕ್ಯೂ ವೆರಿಮಚ್” ಕೈ ಜೋಡಿಸಿ ನಿರಾಳ ಭಾವದಲ್ಲಿ ನುಡಿದೆ. ಯೂ ಟ್ಯೂಬ್ ಆಳದ ಅಧ್ಯಯನದಲ್ಲಿ, ಅವರಿವರನ್ನು ಪದೇ ಪದೇ ವಿಚಾರಿಸಿ ಗೊತ್ತಿದರೂ ಡೌಟ್ ಉಳಿದೇ ಇರ್ತಾವಲ್ಲ. “ಸರ್, ಕೆಳಗೆ ಕೂರಬಹುದಾ?” ಸಣ್ಣ ಪ್ರಶ್ನೆ ಮೆಲ್ಲಗೆ ತೂರಿದೆ. ಹಕ್ಕಿಗಳ ಗ್ರೌಂಡ್ ಷಾಟ್ ತೆಗೆಯಲು ನೆಲದ ಮೇಲೆ ಕೂತು, ಮಕಾಡೆ ಮಲಗಿ ತೆಗೆಯಬೇಕಿತ್ತಲ್ಲ, ಅದಕ್ಕೆ ಈ ವಿಚಾರಣೆ.
“ಕೆಳಗಾ…” ತಲೆಯನ್ನು ಜೋರಾಗಿಯೇ ಅಲುಗಾಡಿಸಿ “ಹಾಗೆ ಕೂರಬೇಕೆಂದರೆ ಓಟಿ ಅಗತ್ಯವಿಲ್ಲ ತಿಳಿಯಿತಾ. ಸರ್ಜರಿ ಮಾಡೋದು ವಾಕ್ ಮಾಡಲು, ಮೆಟ್ಟಿಲು ಹತ್ತಲು, ದಿನದ ಕೆಲಸ ಸುಗಮವಾಗಿ ಮಾಡಿಕೊಳ್ಳಲು ಅಷ್ಟೆ. ಸರ್ಜರಿ ಬೇಕಾ ಬೇಡವಾ?” ಕಡ್ಡಿ ತುಂಡು ಮಾಡಿದ ಮಾತು ಕೇಳಿ ಜಂಘಾಬಲ ಉಡುಗಿದಂತಾಗಿ ತತ್ ಕ್ಷಣವೇ “ಖಂಡಿತಾ ಮಾಡಲೇಬೇಕು” ಎಂದೆ ನನ್ನ ಪ್ರಶ್ನೆಗಳಿಗೆ ವಿರಾಮವಿತ್ತು. ಜೊತೆಗಿದ್ದ ಮಗಳಿಗೆ ಕೆಲವು ಟೆಸ್ಟ್ ಮಾಡಿಸಲು ಚೀಟಿ ಕೊಟ್ಟರು. ನಾಳೆ ಅಡ್ಮಿಟ್ ಮಾಡಿಸಿ ಎಂದು ನೆಕ್ಸ್ಟ್ ಎಂದರು. ಅದರರ್ಥ ನೀವು ಹೊರಡಿ, ಮುಂದಿನ ಪೇಷಂಟ್ ಬನ್ನಿ ಎಂದು.

ಹತ್ತಾರು ವರ್ಷ ಕುಂಟಿಕೊಂಡೇ ಕೆಲಸ ನಿರ್ವಹಿಸಿದ್ದೆ. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಸ್ಟಾಫ್ ರೂಂ ಮಹಡಿಯಲ್ಲಿ, ಪ್ರತಿ ಕ್ಲಾಸಿಗೂ ಕೆಳಗೆ ಬಾ, ಮೇಲೆ ಹೋಗುವ ಕಥೆ. ಇಳಿಯುವಾಗ ಹತ್ತುವಾಗ ಕಾಲಿನ ನೋವಿಗೆ ಕಣ್ಣು ನೀರು ಒಸರಿಸುತ್ತಿತ್ತು. ನಂತರ ಮಂಡ್ಯ, ವಿರಾಜಪೇಟೆ, ಮದ್ದೂರು, ಮಂಡ್ಯ ವೃತ್ತಿಯಲ್ಲಿ ಮೇಲ್ಮುಖವಾಗಿ ಹತ್ತಿದರೂ… ಹೆಚ್ಚು ಮೆಟ್ಟಿಲು ಹತ್ತಲಿಲ್ಲ. ಮುಕ್ಕಾಲಡಿ ಮೆಟ್ಟಿಲಿಗೂ ಒದ್ದಾಡಿದರೂ ಉತ್ಸಾಹಕ್ಕೆ ಕೊರತೆ ಇರಲಿಲ್ಲ. ಅಂದುಕೊಂಡ ಕೆಲಸವನ್ನು ಯಾರೇನೆ ಎಂದರೂ ಊರೇನೆ ಅಂದರೂ ನಿಲ್ಲಿಸದೆ ಮಾಡಿದ್ದೆ, ಮಾಡಿಸಿದ್ದೆ. ಆದರೂ ಸಂಗಾತಿಯಾಗಿ ನೋವು ಒಡಗೂಡಿಕೊಂಡೇ ಬಂದಿತ್ತು.

ಮಂಡ್ಯದ ನನ್ನ ಕೀಲುಮೂಳೆ ತಜ್ಞರು ಕೂಲ್ ಪಾರ್ಟಿ. ಅವರು ಹೇಳುವುದರಲ್ಲಿ ಒಂದು ರೀತಿಯ ಲಾಜಿಕ್ ಇರ್ತಿತ್ತು. ದೇವರನ್ನು ನಂಬೋದು ಬಿಡೋದು ವೈಯಕ್ತಿಕ. ನಮ್ಮ ಡಾಕ್ಟರ್ ‘ನೋಡೀಮ್ಮಾ ಅಪರೇಷನ್ ಮಾಡಿ ಹೊಸದನ್ನು ಜೋಡಿಸಿದರೂ ದೇವರು ಕೊಟ್ಟ ಕಾಲುಗಳಂತೆ ಇರಲು ಸಾಧ್ಯವೆ’ ಎಂದು. ಅವರ ಮಾತಿನಲ್ಲಿ ಇರುವ ಕಾಲನ್ನೇ ಆದಷ್ಟೂ ಕಾಲ ಬಳಸಿ ಎಂಬ ಸೂಚನೆ ಇತ್ತೆಂದು ಕಾಲನ್ನೇ ನಿಧಾನವಾಗಿ ಊರುತ್ತಾ ಕಾಲಯಾಪನೆಗೈದೆ. ವೃತ್ತಿಬದುಕು ಮುಗಿದು ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಮಾನಸಪುತ್ರಿ ವಾಣಿ ಕರೆದೊಯ್ದಳು. ಅವರಮ್ಮನಿಗೆ ಅದೇ ಡಾಕ್ಟರು ಎರಡೂ ಕಾಲುಗಳ ಸರ್ಜರಿ ಒಟ್ಟಿಗೆ ಮಾಡಿದ್ದರು. ಎಕ್ಸರೇ ನೋಡಿದ ಡಾಕ್ಟರ್ ನೀವು ನಾಳೆ ಸೇರಿದರೂ ಒಳ್ಳೆಯದೆ, ತಡಮಾಡಬೇಡಿ’ ಎಂದರು. ಸರಿ, ಬರ್ತೀನಿ ಎಂದು ಹೊರಬಂದೆ.  ಬಂದೆ ಅಷ್ಟೆ.

ಬೆಂಗಳೂರಿನ ತಜ್ಞರ ಬಳಿಗೆ ಹೋಗುವ ವೇಳೆಗೆ ಕ್ಯಾಮೆರಾ ಕೈಗೆ ಬಂದಿತ್ತು. ಹಕ್ಕಿ ಹಿಂದಿನ ಓಟಕ್ಕೆ ಮಾನಸಿಕವಾಗಿ ಸಿದ್ಧವಾಗಿದ್ದೆ, ದೈಹಿಕವಾಗಿ ಅಷ್ಟು ಸಾಮರ್ಥ್ಯ ಇರದಿದ್ದರೂ. ಸರ್ಜರಿಗೆ ಹೆದರದಿದ್ದರೂ ಇದ್ದ ಭಯ ಒಂದೇ, ಹಕ್ಕಿ ಹಾದಿಯಲ್ಲಿ ಹೆಚ್ಚು ಹೆಜ್ಜೆ ಇಡುವ ಮೊದಲೇ ಕಾಲಿಗೆ ಕತ್ತರಿ ಹಾಕಿಸಿಕೊಂಡು ಏನಾದರೂ ಆದರೆ ಎಂದು. ಹಕ್ಕಿಗೆ ಹೋಗುವ ಹುಮ್ಮಸ್ಸು. ಹೊರಟೆ ಕುಂಟುವ ಕಾಲಿನಲ್ಲಿಯೇ ಹಕ್ಕಿಯ ಹಿಂದೆ. ಪಯಣಗಳ ಮೇಲೆ ಪಯಣಗಳು. ಕೋಲು ಹಿಡಿದಾದರೂ ಕಾಲು ನಡೆಸುತ್ತಿದ್ದೆ. ಕೆಲವು ಹಕ್ಕಿ ಕಾಲಿನ ದೆಸೆಯಿಂದ ಮಿಸ್ ಆದವು, ಆದರೆ ಸಿಕ್ಕವುಗಳ ಸಂಖ್ಯೆ ಕಡಿಮೆ ಇರಲಿಲ್ಲ. ಫ್ಲೈ ಬಸ್ಸಿನಿಂದಿಳಿದು ಟ್ರಾಲಿಗೆ ಸಾಮಾನು ಹಾಕಿದರೆ ಟಿಕೇಟ್ ಕೌಂಟರ್ ತನಕ ಅದು ಸಪೋರ್ಟಿಂಗ್ ಸ್ಟ್ಯಾಂಡು.

ಕೌಂಟರಿನಲ್ಲಿ ಲಗೇಜ್ ತಳ್ಳಿದರೆ ವೀಲಿಲ್ಲದ ಕ್ಯಾಮೆರಾ ಬ್ಯಾಗು ಕೈ ಬದಲಾಯಿಸುತ್ತಾ ವಿಮಾನದ ಉದರ ಸೇರುತ್ತಿದ್ದೆ. ಕೆಲವು ಪುಣ್ಯಾತ್ಮರು ಕೊಡಿ ಮೇಡಂ ಬ್ಯಾಗು ತಂದುಕೊಡುತ್ತೇವೆಂದು ನೆರವು ನೀಡುತ್ತಿದ್ದರು. ಹೆಚ್ಚು ಹೊತ್ತು ನಿಲ್ಲಲಾಗದಿದ್ದರೂ ಗಂಟೆಗಟ್ಟಲೆ ಸ್ಟೂಲಿನಲ್ಲಿ, ನೆಲದ ಮೇಲೆ ಕುಳಿತು ಹಕ್ಕಿಗಾಗಿ ಕಾಯುವಾಗ ಕಾಲುನೋವು ಗೊತ್ತಾದರೂ ಗೊತ್ತಾಗುತ್ತಿರಲಿಲ್ಲ. ದಿನದ ಕಥೆ ಮುಗಿದಾಗ ಕಾಲು ರಾಗ ಹಾಡುತ್ತಿತ್ತು. ನಾನು ಸುಮ್ಮನಿರು ಓ ನನ್ನ ಕಾಲೇ, ಪ್ರಿಯ ಕಾಲೇ ಎಂದು ಕಾಲ ನೂಕಿಸುವಾಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದೆ, ಸರ್ಜರಿಗೆ ಸಿದ್ಧವಾದೆ.

2020ರ ಏಪ್ರಿಲ್ ಮೇ ತಿಂಗಳ ಅಸ್ಸಾಂ, ಸಿಕ್ಕಿಂ, ಅರುಣಾಚಲಪ್ರದೇಶದ ಟೂರ್ ಮುಗಿಸಿ ಜೂನಿಗೆ ಮಗಳಿರುವ ಮಣಿಪಾಲಕ್ಕೆ ಹೊರಡಬೇಕಿತ್ತು. ಕೊರೊನಾ ವಿಶ್ವವನ್ನೇ ಆವರಿಸಿದ ಮೇಲೆ ಟೂರ್ ಮತ್ತು ಅಪರೇಷನ್ ಪೋಸ್ಟ್ ಪೋನ್ ಆಯಿತು. ಎರಡನೇ ವೇವ್ ನಂತರ ಮಣಿಪಾಲಕ್ಕೆ ತೆರಳಲು ನಿರ್ಧರಿಸಿ ಹೊರಟೂ ಬಿಟ್ಟೆ ಮಗಳೊಡನೆ ಬ್ಯಾಗಿನಲ್ಲಿ ಕ್ಯಾಮೆರಾ ಸೇರಿಸಿ. ಸರ್ಜರಿಗೆ ಹೋಗುವವಳಿಗೆ ಕ್ಯಾಮೆರಾವೇಕೆ ಬೇಕು!? ಮಣಿಪಾಲದಲ್ಲಿ ಇಳಿದಾಗ ಟ್ಯಾಕ್ಸಿ ಹತ್ತಿಸಿ ಮನೆಯ ದಾರಿ ಸೂಚಿಸಿದಳು. ಗಾಡಿ ನಿಂತಾಗ ಬೆರಗಿನಿಂದ ನೋಡಿದೆ.

ಮಗಳು ಇದ್ದದ್ದು ಮನೆ ಬೇರೆ, ಈಗ ನಿಲ್ಲಿಸಿದ್ದು ಶಾಂಭವಿ ಅಪಾರ್ಟ್ಮೆಂಟಿನಲ್ಲಿ. ಇದೇನೊ ಮಗಳೆ ಎಂದೆ. ಇಳೀರಿ ಅಂದವಳು ಲಿಫ್ಟಿನಲ್ಲಿ ಆರನೆಯ ಮಹಡಿಗೆ ಏರಿಸಿ ಲಿಫ್ಟಿನ ಪಕ್ಕದ ಮನೆಯ ಬಾಗಿಲ ಕೀ ತೆಗೆದು ಬಾಮ್ಮಾ ಎಂದಳು. ಆ ಮನೆಗೆ ಮೆಟ್ಟಿಲು ಜಾಸ್ತಿ. ಅಪರೇಷನ್ ಆದಾಗ ಹತ್ತಲು ಕಷ್ಟ. ಅದಕ್ಕೀ ಮನೆ ಮಾಡಿದ್ದೇನೆಂದಳು. ಮನ ಮೂಕವಾಯಿತು ಅವಳ ಮುಂದಾಲೋಚನೆಗೆ. ನಂತರ ಕಾಲು ರಿಪೇರಿ ಸರ್ಜರಿ. ವಾರದೊಳಗೆ ಊರುಗಾಲೂರಿ ನಡೆದೆ. ಅವಳ ಮನೆಯ ಬಾಲ್ಕನಿಯಲ್ಲಿ ಬೆಳಿಗ್ಗೆ ಸಂಜೆ ಹಾಯ್ದು ಹಾರಿಹೋಗುವ ಹಕ್ಕಿ ಬೆಳ್ಳಕ್ಕಿಗಳಿಗೆ ಕ್ಯಾಮೆರಾ ಹಿಡಿದೆ. ಮನೆಯ ಕಿಟಕಿಯಲ್ಲಿ ಮರಿ ಮಾಡಿ ಪೋಷಿಸುತ್ತಿದ್ದ ಪಾರಿವಾಳಗಳನ್ನೇ ಪದೇಪದೇ ಚಿತ್ರವಾಗಿಸಿದೆ.

ಒಮ್ಮೊಮ್ಮೆ ಲಿಫ್ಟ್ ಸೇರಿ ಕೋಲು ಹಿಡಿದು ಕಾಂಪೌಂಡಿನ ಪಕ್ಕಕ್ಕೆ ಬರುತ್ತಿದ್ದ ಹಕ್ಕಿಗಳ ಚಿತ್ರ ತೆಗೆದೆ. ಕೊನೆಗೆ ಸೂರ್ಯನನ್ನು, ಮುಗಿಲ ಬಣ್ಣಗಳನ್ನು ಕೂಡಾ ಕ್ಯಾಮೆರಾ ಕಾಣುತ್ತಿತ್ತು. ಮೂರು ತಿಂಗಳು ಕಳೆಯಿತು. ಎರಡು ಕಾಲಿನ Knee replacement ಮುಗಿದು ಇನ್ನಷ್ಟು ಕಾಲ ಕಾಲಿನಲ್ಲಿ ನಡೆಯಲು ಅನುವಾದೆ. ಹೆತ್ತಬ್ಬೆಯಂತೆ ನೋಡಿಕೊಂಡ ಮಗಳಿಗೆ ಮನಸಾರೆ ಹರಸಿದೆ. ಊರುಗೋಲು ಹಿಡಿದು ಕರಾವಳಿಯಿಂದ ಮಂಡ್ಯಕ್ಕೆ ಮರಳಿದೆ. ನಿಧಾನವಾಗಿ ಮತ್ತೆ ಹಕ್ಕಿಯಾನಕ್ಕೆ ಹೊಂದಿಸಿಕೊಂಡೆ. ಹತ್ತಿರದ ಮೈಸೂರು, ತುಮಕೂರು, ರಾಮನಗರ ಮುಂತಾದೆಡೆಗೆ ಹೋಗಿಬಂದೆ. ಅಂತೆಯೆ ಗಣೇಶಗುಡಿಗೂ ಹೋದೆ. ಅಲ್ಲೋ ಹಕ್ಕಿ ಬಂದರೆ ಮೌನ, ಕ್ಲಿಕ್ ಕ್ಲಿಕ್. ಹಕ್ಕಿ ಇಲ್ಲದಿದ್ದರೆ ಕೂತಾಗ ನಿಂತಾಗ ಹಕ್ಕಿತಾಣಗಳ ಹೆಸರು ಪ್ರಶಂಸೆ, ಟೀಕೆ.

ಹೀಗೆ ಕೇಳಿದ ಹೆಸರುಗಳಲ್ಲಿ ಒಂದು ತಾಣ ಆನೆಜರಿ. ಕೆಲವು ಉತ್ಸಾಹಿಗಳಂತೂ ವರ್ಣಿಸಿದ್ದೇ ವರ್ಣಿಸಿದ್ದು. ನನಗೋ ಆನೆಜರಿ ಎನ್ನುವ ಜಾಗ ಇದೆ, ಅಲ್ಲಿ ಹಕ್ಕಿ ಲಭ್ಯ ಎಂಬ ಸಾಮಾನ್ಯ ಜ್ಞಾನವೂ ಅಲಭ್ಯ. ಗೂಗಲಣ್ಣ ಇರೋದ್ಯಾಕೆ, ಗೂಗಲಿಸಲು ತಾನೆ. ಗೂಗಲಿಸಿದರೆ ಉಡುಪಿ ಜಿಲ್ಲೆಯಲ್ಲಿ, ಕೊಲ್ಲೂರು ಫಾರೆಸ್ಟ್ ವ್ಯಾಪ್ತಿಯಲ್ಲಿದೆ. ಮೂಕಾಂಬಿಕೆ ಕೃಪೆ ಮಾಡೆಂದೆ. ಕೊಲ್ಲೂರು ಮೂಕಾಂಬಿಕೆಯನ್ನಲ್ಲ, ಕಾಲು ರಿಪೇರಿಸಿಸಿ ಇನ್ನೂ ನಾಲ್ಕು ಕಾಲ ಓಡಾಡು ಹಕ್ಕಿ ಹಿಡಿ ಎಂದು ಮಾಡಿಕೊಟ್ಟ ಮಗಳು ಮೂಕಾಂಬಿಕೆಯನ್ನು.

ಮೂಕಾಂಬಿಕಾ ಫಾರೆಸ್ಟಿನ ಆನೆಜರಿಗ ಹೋಗಬೇಕಲ್ಲ ಎಂದೆ. ಆಯಿತು ನೋಡುವ ಎಂದಳು. ಈ ನಡುವೆ ಕಿರಿಯ ಹಕ್ಕಿಮಿತ್ರ ವಿನೋದ್ 'ಅಮ್ಮಾ ಮಂಗಳೂರಿನ ವಿವೇಕ್ ನಾಯಕ್ ಹೈಡಿನಲ್ಲಿ ಪ್ಯಾರಡೈಸ್, ಪಿಟ್ಟಾ, ಓಡಿಕೆಎಫ್ ಬರ್ತಾ ಉಂಟು. ಟ್ರೈ ಮಾಡಿ ನೀವು' ಎಂದು ಫೋನಿಸಿದರು. ವಿವೇಕರಿಗೆ ಕರೆ ಮಾಡಿ ಬರುವ ಬಗ್ಗೆ ತಿಳಿಸಿದೆ. ಆಯಿತು ಬನ್ನಿ ಎಂದರು. ಊರಿಗೆ ಬಂದ ಮಗಳೊಡನೆ ಬಸ್ ಹತ್ತಿ ರೈಟ್ ರೈಟ್ ಹೇಳಿ ಮಣಿಪಾಲಕ್ಕೆ ಬಂದಿಳಿದೆ. ಒಂದು ದಿನ ರೆಸ್ಟಿನ ಬಳಿಕ ಮಂಗಳೂರಿಗೆ ಮಗಳೊಡನೆ ಸವಾರಿ ಹೊರಟಿತು.

ಗಣೇಶಗುಡಿಯಲ್ಲಿ ಬಿದ್ದೆದ್ದು ಬಂದವಳ ಬಗ್ಗೆ ಭಯದಿಂದ ಮಗಳು ರಜೆ ಹಾಕಿ ಹೈಡಿನಲ್ಲಿ ಕೂರಿಸಿದಳು. ವರ್ಡೀಟರ್, ಬೂದುತಲೆಯ ಪಿಕಳಾರ, ಪಿಟ್ಟಾ ಮತ್ತಿತರ ಹಕ್ಕಿಗಳು ಸಿಕ್ಕವು. ಪ್ಯಾರಡೈಸ್ ನಿಮಗೆ ಸ್ವರ್ಗ ಸೇರುವ ಭಾಗ್ಯವಿಲ್ಲ ಎಂದಿತು. ಓಡಿಕೆಎಫ್ ಇಳಿಸಂಜೆಯಾದರೂ ಇಳಿಯಲಿಲ್ಲ. ಮಣಿಪಾಲಕ್ಕೆ ಮರಳಿದರೂ ಮನಸ್ಸು ಮರಳಲಿಲ್ಲ‌ ಮರಳಿ ಮತ್ತೊಮ್ಮೆ ಮಂಗಳೂರು ಕೈಬೀಸಿ ಕರೆಯಿತು.

ಆ ದಿನವೂ ಸ್ವರ್ಗದಕ್ಕಿ ಮಿಂಚುಳ್ಳಿ ದೂರ ಉಳಿದವು. ಹೋದರೆ ಹೋಗಿ ನನಗೇನು, ನಾ ಆನೆಜರಿಗೆ ಹೋಗ್ತೀದೀನಿ. ಕುಳ್ಳ ಮಿಂಚುಳ್ಳಿ, ನೀಲಗಿವಿ ಮಿಂಚುಳ್ಳಿ ಹಿಡೀತೀನಿ’ ಎಂದುಕೊಂಡೆ. ವಿವೇಕರಿಗೆ ಆನೆಜರಿಗೆ ಹೋಗ್ತಿದೀನಿ ಎಂದುದನ್ನು ಕೇಳಿ ಬೆಂಗಳೂರಿನ ರಮೇಶ್ ಗಣೇಶನ್ ನನಗೀ ಜಾಗ ಗೊತ್ತಿರಲಿಲ್ಲ, ನಾಳೆ ಬೆಳಿಗ್ಗೆ ಹೋಗ್ತೇನೆಂದು ಬುಕ್ ಮಾಡಿಕೊಂಡರು. ದೀಪದಿಂದ ದೀಪವ ಹಚ್ಚಬೇಕು ಹಕ್ಕಿಪ್ರೀತಿ ಹಂಚಲು ಅಲ್ವಾ ಎನಿಸಿತು.

ಬೆಳಿಗ್ಗೆ ಎಂಟು ಗಂಟೆಯ ಬಳಿಕ ಹಕ್ಕಿ ಸಿಗುತ್ತವೆ ಬನ್ನಿ ಎಂದಿದ್ದರು ಆನೆಜರಿ ಜನ. ನಾವೋ ಏಳೂವರೆಗೆ ಹಾಜರಾದೆವು. ಕಾರಿಂದಿಳಿದಂತೆ ಕಂಡವರು ರಮೇಶ್. ಥ್ಯಾಂಕ್ಸ್ ಮೇಡಂ ಆನೆಜರಿ ವಿಷಯ ಹೇಳಿದ್ದಕ್ಕೆ ಮೂರು ಲೈಫರ್ ಆದವೆಂದರು ಸಾವಿರ ಹಕ್ಕಿ ಕಂಡ ಆ ಸರದಾರ. ಓಡಿಕೆಎಫ್ ಪರ್ಚಿಗೆ ಬಂದಿತ್ತು, ನಿಮಗೂ ಸಿಗಲೆಂದರು. ನನಗೋ ನೀಲಕಿವಿ ಮಿಂಚುಳ್ಳಿ ಕನಸು. ಅದೆಲ್ಲಿ ಕಾಣಬಹುದು ಎಂದೆ. ಹತ್ತಾರು ಮೆಟ್ಟಲಿಳಿಸಿ ಸೌಪರ್ಣಿಕಾ ನದಿಯ ದಡಕ್ಕೆ ತಂದು ಇಲ್ಲಿಯೇ ಕಾಯಬೇಕೆಂದರು. ಅಲ್ಲಾಗಲೇ ಕ್ಯಾಮೆರಾಕ್ಕೆ ಕೀಲಿಸಿದವರು ಮಲಬಾರ್ ಟ್ರೋಜನ್ ಎಂದ ಕೂಡಲೇ ಕಾಲಿಗೆ ಎಲ್ಲಿಲ್ಲದ ಜೋಶ್. ಟ್ರೈಪಾಡೇರಿಸಿ ಸಜ್ಜಾದೆ.

ನಾಲ್ಕಾರು ಕೊಂಬೆ ಜಿಗಿದು ಕಣ್ಮರೆ ಆಗುವತನಕ ಟ್ರೋಜನ್ ಕ್ಲಿಕ್ಕಿಸಿದ ನಂತರ ಮಿಂಚುಳ್ಳಿಗಾಗಿ ಕಣ್ಣಂಚಿನ ಮಿಂಚುನೋಟ ಹರಿಸಿದೆ. ಹೆಮ್ಮಿಂಚುಳ್ಳಿ ಹಾರಿ ಸೆಳೆದರೂ ಮರದ ಮರೆಯಲ್ಲಿ ಅಥವಾ ತುದಿಯೇರಿ ಆಸೆ ತೋರಿಸಿ ಮೋಸ ಮಾಡಿತು. ಆದದ್ದಾಗಲಿ ಶಿವಾ ಎಂದು ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಅಲ್ಲೇ ಠಳಾಯಿಸಿ ನದಿಯ ಮೀನುಗಳತ್ತ ನೋಟ ಬೀರಿದೆ. ಬ್ರೌನ್ ಫ್ಲೈಕ್ಯಾಚರ್ ನಾನು ಪುರಸೊತ್ತಾಗಿದ್ದಕ್ಕೆ ತಾನೂ ಪುರಸೊತ್ತಾಗಿ ಪೋಸ್ ನೀಡಿತು. ಪಾಯಿಂಟ್ ಶೂಟರ್ ಮಗಳ ಕೈಗಿತ್ತು ತೆಗೆಯೋ ಎಂದೆ. ಅವಳು ನನ್ನನ್ನು ಸುತ್ತಣ ನದಿ, ನೀರು, ಮೀನು, ಹಕ್ಕಿ ಸೆರೆ ಹಿಡಿದು ಸುತ್ತಾಡಿ ಬರ್ತೀನಿ ಎಂದು ಹೊರಟಳು. ನಾನು ಅಲ್ಲಿಯೇ ಕಾಯುತ್ತಾ ಕುಳಿತೆ.

ನನ್ನ ತಪಸ್ಸನ್ನು ನೋಡಿ ಟ್ರೋಜನಮ್ಮ ಬೇಸರಿಸಬೇಡ ಲೀಲಮ್ಮಾ  ನಾನಾದರೂ ಬರ್ತೀನಿ’ ಎಂದೊಮ್ಮೆ ಇಣುಕಿ ಸೆರೆಯಾದಳು. ಆನೆಜರಿ ಈ ಇಬ್ಬರನ್ನೂ ಕಾಣಿಸಿಸಿತು, ನೀಲಗಿವಿ ಮಿಂಚುಳ್ಳಿ ಬದಲಿಗೆ. ನಾನು ಹ್ಯಾಪುಮೋರೆ ಹಾಕಿ ಹೈಡಿನತ್ತ ಹೆಜ್ಜೆ ಹಾಕಿದೆ ಹೈಡ್ಗೆ ಬಂದರೆ ಅದು ಆರಡಿಯವರ ಹೈಟಿನ ಹೈಡ್. ನಾನೋ ಐದಡಿ ಮೀರದ ನೆಲಪ್ರೀತಿಯ ವಾಮನೆ. ಸುತ್ತಮುತ್ತ ನೋಡಿದೆ. ಜಂಬಿಟ್ಟಿಗೆಯೊಂದು ಕಾಣೋದೆ. ಮಗಳು ಇಟ್ಟಿಗೆ ಉರುಳಿಸಿ ಹಾಕಿಕೊಟ್ಟಳು. ಟ್ರೈಪಾಡು ಹಿಡಿದು ಪಾಡು ಪಡುತ್ತಾ ಜಂಬಿಟ್ಟಿಗೆ ಹತ್ತಿ ನಿಂತರೆ ಹಕ್ಕಿ ಬರುವುದು ಕಾಣುತ್ತಿತ್ತು. ಆದರೆ ಕ್ಯಾಮೆರಾ ವ್ಯೂವರಿನಲ್ಲಿ ನೋಡಲು ಬೆನ್ನು ಬಾಗಿಸಬೇಕಿತ್ತು. ಬರೋದು ಬಂದಿದ್ದೇನೆ, ಆದದ್ದಾಗಲಿ ಗೋವಿಂದ ಎನ್ನುತ್ತಾ ಸಜ್ಜಾದೆ. ಒಂದರೆಕ್ಷಣ ಮರೆಯಾದರೆ ಹಕ್ಕಿ ಮಿಸ್ಸಾದರೆಂಬ ಆತಂಕ. ಕಾರಿಗೆ ರಶ್ಮಿ ತಂದಿತ್ತ ಊಟ ಗಬಗಬನೆ ನುಂಗಿ ನೀರು ಕುಡಿದು ನಾನೇನೋ ಹೈಡಿಗೆ ಬಂದೆ, ಆದರೆ ನೀರು ಕುಡಿಯಲು ನೀರಿಗಿಳಿಯಲು ಹಕ್ಕಿ ಬರಲಿಲ್ಲ. ಒಂದೂವರೆಗೆ ಹೈಡಿಗೆ ಬಂದು ಕೂತು ಎದ್ದರೂ ಎದ್ದು ಕೂತರೂ ನಾಲ್ಕೂವರೆಯಾದರೂ ನಾಲ್ಕು ಹಕ್ಕಿ ಕೂರಲೂ ಬರಲಿಲ್ಲ, ಹಾರಲೂ ಬರಲಿಲ್ಲ. ನೀರು ಕುಡಿದರಲ್ವೆ ನೀರಾಟ. ಹೈಡಿನಲ್ಲಿ ಹೈಟಿದ್ದ  ನಾಲ್ವರಿದ್ದರು.

ನಾನು ಮಾತ್ರ ಒಂದಡಿ ಒಂದಡಿ ಉದ್ದಗಲದ ಎತ್ತರದ ಇಟ್ಟಿಗೆಯೇರಿ ಇಳಿದು ಅಲ್ಲಿದ್ದ ಬೆಂಚಾಸೀನಳಾಗಿ ಬೆನ್ನುನೋವಿನಲ್ಲಿ ಸುಖಿಸುತ್ತಿದ್ದೆ. ಈ ನಡುವೆ ಬೆಂಚಿನಲ್ಲಿ ಮೇಲೆದ್ದ ಕಬ್ಬಿಣಕ್ಕೆ ತೊಟ್ಟ ಬಟ್ಟೆ ಸಿಕ್ಕಿ ಆರಿಂಚು ಪರ್ರೆಂದು ಹರಿಯಿತು. ಅದು ಹರಿದರೂ ಹಕ್ಕಿ ಹುಚ್ಚು ಹಾರಲಿಲ್ಲ. ಐದಾಯಿತು. ಐದು ಹಕ್ಕಿ ಬಂದವು. ಎಲ್ಲಾ ಹಳೆಯ ನಂಟರೆ. ಓಡಿಕೆಎಫ್ ಇಣುಕಲೆ ಇಲ್ಲ. ಸುತ್ತಮುತ್ತ ಚಿಲಿಪಿಲಿ ಸದ್ದು ಕೇಳಿದರೂ ಇತ್ತ ಮಾತ್ರ ಸುಳಿಯಲಿಲ್ಲ. ಆಗಾಗ ಕೆಂದೈತ್ಯ ಅಳಿಲು  ಸದ್ದು ಮಾಡುತ್ತಿತ್ತು. ನಮ್ಮ ಸಾರಥಿ ಅರುಣ ಅಲ್ಲೊಂದು ಕೆಂಪು ಹಕ್ಕಿ ಇದೆ, ತೆಗೆಯಿರಿ ಎಂದ. ಹೈಡ್ ಸಹನಿಲ್ಲುಗರು ಟ್ರೋಜನ್ನಿಗಾಗಿ ಅವನೊಡನೆ ನಡೆದರು. ನಾನು ನಿಂತಲ್ಲೆ ನಿಂತೆ. ಹೋದವರು ಮರಳುವಾಗ ಸಾರಥಿಗೆನೀನು ಯಾವ ಊರಿನವ’ ಎಂದರು. ಆತ ಇಲ್ಲೇ ಹತ್ತಿರದವ’ ಎಂದ. ಕಾರಣ ಇಷ್ಟೆ - ಹೋದವರಿಗೆ ಅವ ತೋರಿಸಿದ್ದು ಕೆಂದೈತ್ಯ ಅಳಿಲನ್ನು. ಹಕ್ಕಿ ಯಾವುದು ಪ್ರಾಣಿ ಯಾವುದು ಗೊತ್ತಾಗಲ್ಲ ಇವನಿಗೆ ಎಂದವರಿಗೆ ಸಾರಥಿ ಹೇಳಿದ್ದುನನಗೆ ಅದರ ಬಾಲ ಮಾತ್ರ ಕಾಣಿಸಿತು, ಅದು ಹಕ್ಕಿಯೆ ಎಂದೆಣಿಸಿದೆ’. ನಾನೂ ಒಂದು ಹಂತದಲ್ಲಿ ಇಂತಹ ಸ್ಥಿತಿಯಲ್ಲಿಯೇ ಇದ್ದೆ ಅಲ್ವಾ… ಅರುಣ ಅಯ್ಯೋ ಪಾಪ ಎನಿಸಿತು.

ಗಂಟೆ ಆರೂ ದಾಟಿತು. ಐಎಸ್ಒ ಕೂಡಾ ಆರು ಸಾವಿರ ದಾಟಿತು. ನಾಲ್ಕಾರು ಫುಲ್ವೆಟ್ಟಾ ನೀರು ಹೀರಿ ಹಾರಿದವು. ಕಪ್ಪು ಮುಂದಲೆಯ ಹರಟೆಮಲ್ಲ ಸಂಜೆಗಪ್ಪಿನಲಿ ಮತ್ತೂ ಕಪ್ಪಾಗಿ ಕಂಡಿತು. ನೀಲ ಮೊನಾರ್ಕ್ ಬಂದಿತು. ಅಲ್ಲಿಯೇ ನಿಂತೇ ಇದ್ದ ಕಿತ್ತಳೆ ತಲೆಯ ಥ್ರಶ್ ಮೊನಾರ್ಕನನ್ನು ಬೆದರಿಸಿ ಅಟ್ಟಿ ನನ್ನ ಕ್ಯಾಮೆರಾ ಮಿಷನ್ ಗನ್ನಾಗುವ ಛಾನ್ಸ್ ತಪ್ಪಿಸಿ ತೆಪ್ಪಗಾಯಿತು. ಇಟ್ಟಿಗೆ ಹತ್ತಿಳಿದು ಹತ್ತಿಳಿದು ಕಾಲು ಬೆನ್ನು ಪದ ಹಾಡಿದವು. ಮಗಳು ಕೇಳಿದಳು ಹೊಟ್ಟೆ ತುಂಬಿದ ಮೇಲೂ ಒದ್ದಾಡುತ್ತಾ ಯಾಕೆ ತಿನ್ನುತ್ತೀರಾ. ಹತ್ತಾರು ಸಲ ತೆಗೆದ ಹಕ್ಕಿ ಚಿತ್ರಗಳನ್ನು ಇಷ್ಟು ಕಷ್ಟಪಟ್ಟು ಮತ್ತೂ ತೆಗೆಯೋದ್ಯಾಕೆ. ಹೌದಲ್ಲವೆ. ಆಹಾರ ಬಿಟ್ಟರೂ ಹಕ್ಕಿ ಬಿಡಲ್ಲ ಎನ್ನುವಂತಾಡುವ ನಾನು ಹಕ್ಕಿ-ಆಹಾರದ ನಡುವೆ ಸಮತೋಲನ ಸಾಧಿಸುವೆ ಎಂದುಕೊಳ್ಳುವ ಹೊತ್ತಿಗೆ ಹೊತ್ತುರಾಯ ಕಂತಿ ಬೈಬೈ ಎಂದ.  ನೀಲಗಿವಿ ಮಿಂಚುಳ್ಳಿಗಾಗಿ ಮಳೆಗಾಲದ ಕನಸಿನಿಂದ ಜರ್ಜರಿತ ಬೆನ್ನಿನೊಡನೆ ಆನೆಜರಿಗೆ ಬೈ ಬೈ ಹೇಳಿದೆ.

ಸಮತೋಲನ ಸಾಧಿಸುವ ಆಲೋಚನೆ ಬಂದಿದ್ದೇನೋ ನಿಜ, ಒಂದು ದಿನದ ರೆಸ್ಟ್ ಬಳಿಕ ಮರೆತೂ ಹೋಯಿತು. ಮತ್ತದೇ ಹಕ್ಕಿ ಅದೇ ಕ್ಲಿಕ್ ಮಾತಿಲ್ಲದೆ ತೆಗೆಯಲು ಮೂರನೆಯ ಸಲವೂ ಮಂಗಳೂರಿನತ್ತ ಹೊರಟವಳು ದಾರಿಯಲ್ಲಿ ಬೀಚಿನತ್ತ ಕಣ್ಣು ಆಡಿಸಿದರೆ ನಾಲ್ಕಾರು ಗಲ್ ಮಾತ್ರ ಕಂಡೆ. ಹೈಡಿಗೆ ಬರುವ ಮುನ್ನ ಉದ್ದಬಾಲದ ಬಾಲದಂಡೆ ಕಂಡಾಕ್ಷಣ ಕ್ಯಾಮೆರಾ ಅಲರ್ಟ್ ಆದರೂ ಅದು ಬಾಲ ಬೀಸುತ್ತಾ ದೂರಕೆ ಹಾರಿತು. ದೂರಕೆ ದೂರಕೆ ಬಹು ಬಹು ದೂರಕೆ ನಾ ಅದರ ಹಿಂದೆ ಹೋಗದೆ ಹೈಡಿನಲ್ಲಿ ಪ್ರತಿಷ್ಠಾಪಿತಳಾಗಿ ಸ್ಪರ್ ಕೋಳಿ ಜಗಳ ಕಂಡೆ. ಬಾಜಿ ಕಟ್ಟಲು ಮೀಸೆ ಮಾಮ ಇರಲಿಲ್ಲ ಅಷ್ಟೆ.

ನವರಂಗಿ ನನ್ನ ನೀ ನೋಡು ನೋಡು’ ಎನ್ನುತ್ತಾ ಬರುತ್ತಿತ್ತು. ವರ್ಡೀಟರ್ ನನಗೆ ರಜಾ ಬೇಕೆಂದಿತು. ಬೂದುತಲೆಯ ಬುಲ್ಬುಲ್ ಸ್ವಲ್ಪ ಲೇಟಾಗಿ ಬಂದರೂ ಎಂಟ್ಹತ್ತು ಸಂಖ್ಯೆಯಲ್ಲಿ ಲೇಟೇಸ್ಟಾಗಿ ಬಂದಿಳಿದವು. ಪ್ಯಾರಡೈಸ್ ಹೆಣ್ಣು ಬಿಂಕ ಬಿಟ್ಟರೂ ಬಿಗುಮಾನ ಬಿಡದೆ ಒಂದೆರಡು ಸಲ ಮಾತ್ರ ಅಟೆಂಡೆನ್ಸ್ ಹಾಕಿತು. ಮೇಲೆಲ್ಲೊ ರೂಫಸ್ ಮರಕುಟುಕದ ಕೂಗು ಕೇಳಿಬಂದರೂ ಕೆಳಗಿಳಿಯಲಿಲ್ಲ. ಅವಿನಾಶ್ ತಾವು ತೆಗೆದಿದ್ದ ಜೋಡಿ ಮರಕುಟುಕ ತೋರಿಸಿ ಉರಿಸಿದರು. ಸಂಜೆಗೆ ಹೈಡಿಗೆ ವಿವೇಕರಿಗೆ ಬೈ ಎಂದು ಹೊರಬಂದರೆ ಪ್ಯಾರಡೈಸ್ ಕಂಡಳು.

ಕ್ಯಾಮೆರಾಗೆ ಕೈ ಹಾಕುವಷ್ಟರಲ್ಲಿ ದೂರಕೆ ಹಾರಿದಳು. ಕುಟುಕನ ಕೂಗು ಕೇಳಿ ಅತ್ತ ಇತ್ತ ಕಣ್ಣು ಹುಡುಕಿತು. ಎದುರಿನ ಮರದ ಆಚೀಚೆ ಬದಿಯಲ್ಲಿ ಕುಟುಕಗಳೆರಡು ಕೂತಿವೆ, ಅದೂ ರೂಫಸ್ ವುಡ್ಪೆಕರ್ ಅವಿನಾಶ್ ತೋರಿಸಿದ ಮಾದರಿಯಲ್ಲಿ. ಲೀಲಾ ನೀನು ಲಕ್ಕಿ ಎಂದುಕೊಂಡು ಮೆಷಿನ್ ಗನ್ ಸ್ಟಾರ್ಟ್ ಎಂದೆ. ಸಂಜೆ ಮಬ್ಬುಬೆಳಕು. ಆದರೂ ಬಿಡಲಿಲ್ಲ. ಐ.ಎಸ್ ಒ ಏರಿಸಿ ನಾನು ಹುಡಿ ಹಾರಿಸಿಯೇ ಬಿಟ್ಟೆ, ಶಾರ್ಪ್ ಇರದಿರಬಹುದು. ಆದರೆ 2017ರಲ್ಲಿ ಧರ್ಮಸ್ಥಳದಲ್ಲಿ ರೆಕಾರ್ಡ್ ಷಾಟಿಗೆ ಸಿಕ್ಕ ಬಳಿಕ ಕೈಗೆ ಸಿಕ್ಕಿಯೇ ಇರದ ಈ ಮರಕುಟುಕ ನನ್ನ ಕೈಗೆ ವಶವಾಯಿತು. ಲೀಲಾ ದಿಲ್ ಫುಲ್ ಖುಷ್.

ಮರುದಿನದ ಕುಂದಾಪುರದ ಪಂಚಗಂಗಾವಳಿಯ ನೀರಯಾನ ನಿಶ್ಚಯಿಸಿಕೊಂಡೆ ಮರಳಿದ್ದೆ. ನೀರಿನ ನಾರಾಯಣ ಏಳು ಗಂಟೆಗೆ ಇರಬೇಕೆಂದಿದ್ದ. ನಾನೂ ಬ್ಲೂವಾಟರ್ ಹಿಂದೆ ಏಳಕ್ಕೆ ಹಾಜರಿದ್ದೆ. ಆವರಿಸಿದ್ದ ಮಬ್ಬು ಎಷ್ಟಿತ್ತೆಂದರೆ ನಾಲ್ಕಡಿ ದೂರದಲ್ಲಿ ಕಿರುಮಿಂಚುಳ್ಳಿ ಬುಳಕ್ ಎಂದು ನೀರಿಗಿಳಿದು ಮೀನು ಕಚ್ಚಿ ದೋಣಿಯ ಮೇಲೆ ಕೂತರೂ ನೀಲಬಣ್ಣವಿರದೆ ಬೂದು ಮಿಂಚುಳ್ಳಿಯಾಗಿ ಕಾಣಿಸಿ ಕ್ಯಾಮರಾ ಹೊರತೆಗೆಯದೆ ಮೊಬೈಲಿನಲ್ಲಿ ದಾಖಲಿಸಿಕೊಂಡೆ. ಬಿಳಿಯೆದೆಯ ಮಿಂಚುಳ್ಳಿಯೂಎಸ್ ಲೀಲಮ್ಮಾ’ ಎಂದರೂ ನೋ ಮಿಂಚುಳ್ಳಿ’ ಎಂದೆ. ನಾರಾಯಣನಾ ಬಂದೆ’ ಎಂದ. ನಾನೂ ಸಾರಥಿಯೊಡನೆ ದೋಣಿಯ ಖುರ್ಚಿಯಲ್ಲಿ ಆಸೀನಳಾಗಿ ಕ್ಯಾಮರಾ ಹಿಡಿದೆ. ಸೂರ್ಯ ಲೀಲಾ ಹೊರಟಾಳ ಬಂದೆ’ ಎಂದು ನೀರಿಗೆ ಬಂಗಾರದ ಬಣ್ಣ ಲೇಪಿಸಿ “ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರ… ಮಿಂಚು ಬಳಗ ತೆರೆತೆರೆಗಳಾಗಿ ಅಲೆಯುವುದು ಪುಟ್ಟ ಪೂರ” ಎಂದ. ನಾನೂ ಕ್ಯಾಮೆರಾ ಗಟ್ಟಿಯಾಗಿ ಹಿಡಿದೂ ಸೆಲ್ಫಿ ತೆಗೆದು ನೀರಿನಲ್ಲಿ ಲೀಲಾಳನ್ನು ಹಿಡಿದೆ. ದಾಸ ಖಾರ್ವಿ, ನಾರಾಯಣ ಖಾರ್ವಿ ದೋಣಿ ನೀರಿಗಿಳಿಸಿದರು.

ಕರೆ ಬಂದಿತಣ್ಣ ಹಕ್ಕಿ ಕರೆ ಬಂದಿತಣ್ಣ’ ಎನ್ನುತ್ತಾ ರೆಡಿಯಾದೆ. ಟರ್ನ್ ಕಡೆ ದೋಣಿ ತಿರುಗಿಸಿ ಫೋಟೋ ತಕ್ಕಳಿ ಮೇಡಮ್ಮ ಎಂದರು. ಈಗಾಗಲೆ ತೆಗೆದಿದ್ದರೂ ಹತ್ತಾರು ಕ್ಲಿಕ್ ಒತ್ತಿದೆ. ವೈಟ್ ಬೆಲ್ಲಿಡ್, ಆಸ್ಪ್ರೇ, ಕಾಣುತ್ತಿಲ್ಲ, ವಿಂಬ್ರೆಲ್. ಕರ್ಲೂ ಕಾಣ್ತಿಲ್ಲ ಎಂದರು. ಮತ್ತಿನ್ನೇನು ತೋರಿಸುತ್ತಾರೆಂದರೆ ನೋಡಿ ಬ್ರಾಹ್ಮಿನಿ’ ಎಂದರು. ಊರಾದ ಊರಲ್ಲೆಲ್ಲಾ ಸಿಗುವ ಅದನ್ನೂ ತೆಗೆಯಬೇಕೆ ಎನಿಸಿದರೂ ವಿಷ್ಣುವಾಹನ ಮುನಿದಾನೆಂದು ಕ್ಲಿಕ್ಕಿಸಿದೆ. ಮ್ಯಾಂಗ್ರೋವ್ ನಡುವೆ ಹಾಯ್ದು ಹೋಗುವಾಗ ಅದೋ ದೈವಸ್ಥಾನ ಎಂದರು. ನನಗೋ ಬರಿಯ ದೋಣಿಗಳೆ ಕಂಡು ಚಿಪ್ಪು ಹೆಕ್ಕುತ್ತಿದ್ದರು. ಇದೆಲ್ಲಾ ದೂರದೂರದ ಊರುಗಳಿಗೆ ಹೋಗುತ್ತವೆಂದರು.

ನೀರಯಾನ ಸಾಗುತ್ತಿತ್ತು. ದೋಣಿ ಮುಂದೆ ಸಾಗಿತು, ಅತ್ತ ನೋಡಿದರೆ ನೂರಾರು ಟರ್ನ್, ಗಲ್ ಹಾರುತ್ತಿವೆ. ಕ್ಯಾಮೆರಾ ತಿರುಗಿಸಿದೆ,ಅಲ್ಲಿಗೇ ಹೋಗುತ್ತೇವೆ ಹತ್ತಿರದಲ್ಲಿ ತೆಗೆಯಿರಿ’ ಎಂದರು. ಪಾಯಿಂಟ್ ಅಂಡ್ ಷೂಟರ್ ವಿಡಿಯೋ ಮಾಡಿತು. ದೋಣಿಯಿಂದಿಳಿದು ಹೂತುಕೊಳ್ಳುವ ಮರಳಿನಲ್ಲಷ್ಟು ದೂರ ನಡೆದು ಕ್ಯಾಮೆರಾ ಗ್ರೌಂಡ್ ಲೆವಲ್ಲಿಗೆ ಇಳಿಸಿದೆ. ಡಾಕ್ಟರ್ ನೆಲದ ಮೇಲೆ ಕೂರುವಂತಿಲ್ಲ ಎಂದ ಮಾತು ಮರವೆಯಂಚಿಗೆ ಸರಿದು ಮರಳಾಸೀನಳಾದೆ. ಹಾರುವವು ಹಾರುತ್ತಿವೆ, ಇಳಿಯುವವು ಇಳಿಯುತ್ತಿವೆ. ರಾಶಿರಾಶಿ ಟರ್ನ್ ಹಾಗೂ ಸೀಗಲ್. ಅಲ್ಲಿ ವೆಸ್ಟರ್ನ್ ರೀಫ್ ಇಗ್ರೆಟ್, ಗ್ರೇಟ್ ಇಗ್ರೆಟ್ ಇದ್ದವು. ಆದರೆ ಟರ್ನ್, ಗಲ್ ಗುಂಪಿನಲ್ಲಿ ಹಾರಿದಾಗ ಇಗ್ರೆಟ್ ದಡದಲ್ಲೆ ಉಳಿದವು. ಚಂದಾ ಚಂದಾ ಹಾರುವ ನೋಟವೆ ಚಂದ ಎನಿಸಿ ಕೈಗಿಂತ ಹೆಚ್ಚಾಗಿ ಕಣ್ಣೆ ಕೆಲಸ ಮಾಡಿತು.

ಮೀನು ಮಾರಿಬಂದ ಸ್ಟೀಂ ಬೋಟು ಅಲ್ಲಿಗೆ ಬಂದಿತು. ಹಕ್ಕಿಗಳು ಹಾರಿ ಮತ್ತೊಂದೆಡೆ ಜಮಾಯಿಸಿದವು. ಬಲೆಯಲ್ಲಿ ಅಳಿದುಳಿದ ಮೀನುಗಳನ್ನು ಕಿತ್ತೆಸೆಯುತ್ತಿದ್ದಂತೆ ಇಗ್ರೆಟ್, ಕಡಲಕಾಗೆ ದಂಡು ಲಗ್ಗೆ ಹಾಕಿದವು. ಹದ್ದುಗಳೂ ಹಾರುತ್ತಲೇ ಕ್ಯಾಚಿಸಿದವು. ಅನತಿ ದೂರದಲ್ಲಿ ಪ್ಲೋವರ್ ನಿಂತಿತ್ತು. ನಾನೂ ಓಲಾಡಿ ಮೇಲೆದ್ದು ದೋಣಿಯೇರಿ ಮರುಪಯಣಕ್ಕೆ ಸಾಗುತ್ತಿದ್ದಂತೆ ಕೆಂಟಿಷ್ ಪ್ಲೋವರ್ ದಂಡು ಹಾರಿ ಲ್ಯಾಂಡಿಂಗ್ ಆದವು. ಟರ್ನ್, ಗಲ್ ಬಂದಿಳಿದವು. ಸೂರ್ಯಪ್ಪ ಉರಿಯುತ್ತಿದ್ದ, ದಾಸ ನೀರು ತಂದಿಲ್ವಾ ಮೇಡಂ’ ಎಂದರೂ ಸುಸ್ತಾಗಿದ್ದ ಅವನೇ ತಾನೇ ತಂದಿದ್ದ ನೀರು ಕುಡಿದು ಸುಧಾರಿಸಿಕೊಂಡ. ವೃದ್ಧ ಮತ್ತು ಸಮುದ್ರದ ಸ್ಯಾಂಟಿಯಾಗೋ ನೆನಪಾದ, ನನಗೆ ಹುಳಿತೇಗು ಬಂದಂತೆನಿಸಿತು. ಬೇಕಿದ್ದ ಕ್ರಾಬ್ ಪ್ಲೋವರ್, ಆಯಿಸ್ಟರ್ ಕ್ಯಾಚರ್ ಸಿಗದಿದ್ದರೂ ನೀರಯಾನ ಬೇಸರ ಎನಿಸಲಿಲ್ಲ. ಬಿಳಿಹೊಟ್ಟೆಯ ಸಮುದ್ರಗಿಡುಗ ಅಂಡಮಾನಿನಲ್ಲಿ ಸಿಕ್ಕಿದ್ದ.ಕ್ಯಾಮೆರಾ ಲೀಲಾ ಮಾತ್ರ ಜೀವರು ನಮ್ಮ ಜೀವನನೌಕೆಗೆ’ ಎಂದು ಹಾಡಿಕೊಂಡೆ. ಹೋಗುವಾಗ ಇದ್ದ ನೀರಿನ ಎತ್ತರ ಇಳಿದಿತ್ತು. ಇಳಿಯುವುದು ತುಸು ಕಷ್ಟವಾಗಿ ಇನ್ನಷ್ಟು ದೂರ ಸಾಗಿ ಅಲ್ಲಿ ನನ್ನನ್ನು ದೋಣಿಯಿಂದ ಈಚೆಗೆ ಇಳಿಸಿಸಿಕೊಂಡೆ.

ಅರುಣನಿಗೆ ಸಮುದ್ರದ ದಡಕ್ಕೆ ಹೋಗಬೇಕೆಂದೆ. ಕೋಟೇಶ್ವರಕ್ಕೆ ಒಯ್ದ. ಬಿಸಿಲಿನಲ್ಲಿ ನಾಲ್ಕಾರು ವೆಸ್ಟರ್ನ್ ರೀಫ್ ಇಗ್ರೆಟ್ ಅಲೆಯೊಡನೆ ಅಲೆದಾಡುತ್ತಿದ್ದವು. ಮುಂದೆ ಕೋಡಿ ಕನ್ಹಾಣದ ಬಳಿಯೂ ಇಣುಕಿದೆ. ಮಣಿಪಾಲದಲ್ಲಿ ಇಳಿಯುವ ಮುನ್ನ ಎಂಡ್ ಪಾಯಿಂಟಿಗೂ ಹೋಗೋಣವೆಂದು ಸುವರ್ಣ ನದಿಯ ತಡಿಗೆ ಬಂದರೂ ಹಕ್ಕಿಗಳು ಕಾಣಲಿಲ್ಲ. ಮಣಿಪಾಲದಲ್ಲಿ ಗಣೇಶಗುಡಿಯಲ್ಲಿ ಬಿದ್ದದ್ದಕ್ಕೆ ರಿಪೇರಿಸಿದ ಕಾಲಿಗೇನಾದರೂ ಆಗಿದೆಯೆ ಎಂದು ಕ್ಷಕಿರಣಕ್ಕೊಡ್ಡಿ, ಕೀಲುಮೂಳೆ ತಜ್ಞರಿಗೂ ತೋರಿಸಿ ಎಲ್ಲ ನಾರ್ಮಲ್ ಆಗಿದೆ ಎಂಬ ಸಮಾಧಾನದ ಮಾತು ಕೇಳಿದ್ದಾಯಿತು. ಮಣಿಪಾಲ ಬಿಡುವ ಸಮಯ ಸನ್ನಿಹಿಸಿತು. ಕರಾವಳಿಯಿಂದ ಮೆಮೊರಿಗಳನ್ನು ಕಾರ್ಡ್ ಮತ್ತು ಮನದಲ್ಲಿ ತುಂಬಿಸಿಕೊಂಡೆ. ಮಗಳು ಬಸ್ ಹತ್ತಿಸಿದಳು, ಮತ್ತೆ ಮತ್ತೆ ಕರಾವಳಿಗೆ ಕಾಲಿಡುವ ಕನಸುಗಳನ್ನು ಕಾಣುತ್ತಾ ಮಂಡ್ಯಕ್ಕೆ ಮರಳಿದೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

January 29, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: