ಲಾವಣ್ಯದ ರಂಗಪಂಚಮಿಯಲ್ಲಿ ‘ರೈಲುಭೂತ’

ಜಿ ವಿ ಕಾರಂತ್

ಬೈಂದೂರಿನ ಪ್ರತಿಷ್ಠಿತ ನಾಟಕ ಸಂಸ್ಥೆ ಲಾವಣ್ಯದವರು ತಮ್ಮ ೪೬ನೆಯ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ ನಾಲ್ಕು ದಿನಗಳ ಕಾಲದ ‘ರಂಗಪಂಚಮಿ’ ರಂಗೋತ್ಸವದ ಸಮಾರೋಪ ಸಮಾರಂಭದ ಸಂದರ್ಭದಲ್ಲಿ ಹಿರಿಯಡ್ಕದ ಅಮೋಘ ತಂಡದ ಉತ್ಸಾಹಿ ಕಲಾವಿದರಿಂದ ಕನ್ನಡ ನಾಟಕ ‘ರೈಲುಭೂತ’ದ ಮೊದಲ ಪ್ರದರ್ಶನ ನಡೆಯಿತು. (ಮೂಲ : ಆರ್ನಾಲ್ಡ್ ರಿಡ್ಲೆ. ರೂಪಾಂತರ : ಪಾರ್ವತಿ ಜಿ.ಐತಾಳ್. ನಿರ್ದೇಶನ : ಪ್ರದೀಪಚಂದ್ರ ಕುತ್ಪಾಡಿ). ಹೆಜ್ಜೆಹೆಜ್ಜೆಗೂ ಕುತೂಹಲ ಹುಟ್ಟಿಸುತ್ತ ಪತ್ತೇದಾರಿ ಶೈಲಿಯಲ್ಲಿ ಸಾಗುವ ಕಥಾವಸ್ತುವನ್ನು ಹೊಂದಿದ ಈ ನಾಟಕವು ಬೈಂದೂರಿನ ಅನುಭವಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.

ಪ್ರಭುತ್ವ ಹಾಗೂ ಕಾನೂನುಗಳ ವಿರುದ್ಧ ವಿಚ್ಛಿದ್ರಕಾರಿ ಕೃತ್ಯಗಳನ್ನು ನಡೆಸುವ ಸಮಾಜದ್ರೋಹಿ ತಂಡವೊಂದರ ರಹಸ್ಯ ಪ್ರಯತ್ನಗಳನ್ನು ಬಯಲಿಗೆಳೆಯುವ ‘ರೈಲುಭೂತ’ದಲ್ಲಿ ಜನರ ಮುಗ್ಧ ನಂಬಿಕೆಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಹೀನ ಗುಣವನ್ನು ವಿರೋಧಿಸಿ ಆಧುನಿಕ ಜಗತ್ತಿನಲ್ಲಿ ಸಡಿಲವಾಗುತ್ತಿರುವ ಮನುಷ್ಯ ಸಂಬಂಧಗಳನ್ನು ಬಿಗಿಗೊಳಿಸುವ ಮಾನವೀಯ ಮೌಲ್ಯಗಳ ಬೆಚ್ಚನೆಯ ಸ್ಪರ್ಶವಿದೆ. ಹಳ್ಳಿಯೊಂದರ ನಿರ್ಜನ ರೈಲ್ವೇಸ್ಟೇಶನ್ನಿನಲ್ಲಿ ಬೇರೆ ಬೇರೆ ಹಿನ್ನೆಲೆಗಳುಳ್ಳ ನಾಲ್ಕಾರು ಪ್ರಯಾಣಿಕರು ಜತೆಯಾಗಿ ಕಳೆಯುವ ಒಂದು ರಾತ್ರಿಯಲ್ಲಿ ಅವರು ಆರಂಭದಲ್ಲಿ ಕಚ್ಚಾಡಿದರೂ ಆಕಸ್ಮಿಕವಾಗಿ ರೈಲು ಭೂತದ ಕಟ್ಟುಕಥೆಯು ಸೃಷ್ಟಿಸುವ ಭಯ ಮತ್ತು ರಹಸ್ಯ ಕೃತ್ಯಗಳಲ್ಲಿ ತೊಡಗಿಕೊಂಡ ಅಪರಾಧಿಗಳ ಕುತಂತ್ರದಿಂದಾಗಿ ಅವರ ಕಣ್ಣ ಮುಂದೆ ಸಂಭವಿಸುವ ಅಹಿತಕರ ಘಟನೆಗಳನ್ನು ಎದುರಿಸುತ್ತ ಎಲ್ಲರೂ ಹೇಗೆ ಒಂದಾಗುತ್ತಾರೆ ಅನ್ನುವುದನ್ನು ‘ಬದುಕೊಂದು ಭಾವನೆಗಳ ಬಂಡಿ’ ಎಂಬ ತನ್ನ ಶೀರ್ಷಿಕೆ ಗೀತೆಯ ಮೂಲಕ ನಾಟಕ ತೋರಿಸುತ್ತದೆ.

ನಾಟಕದ ವಸ್ತು ಗಂಭೀರವಾಗಿದ್ದರೂ ನಡೆ ಕೊನೆಯ ತನಕ ಹಾಸ್ಯಪ್ರಧಾನವಾಗಿದ್ದು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ಪಾತ್ರವಹಿಸಿದ ಎಲ್ಲ ಕಲಾವಿದರ ಚುರುಕಾದ ಅಭಿನಯ ನಾಟಕದ ಕಳೆ ಏರಿಸಿತು. ಮುತ್ತು(ಪೂರ್ಣೀಮಾ ಸುರೇಶ್) ಪಾತ್ರದ ಮೆಲೋಡ್ರಾಮಾಟಿಕ್ ಅಭಿನಯ, ಉದ್ದೇಶಪೂರ್ವಕವಾಗಿ ಜೋಕರ್ ನಂತೆ ವರ್ತಿಸುವ ಸಿ.ಐ.ಡಿ.ಯ (ಪ್ರಶಾಂತ ಉದ್ಯಾವರ) ಅಭಿನಯಗಳು ಮನೋಜ್ಞವಾಗಿದ್ದವು. ಹೊಸದಾಗಿ ಮದುವೆಯಾದ ಜೋಡಿ (ಗಿರೀಶ ಪ್ರಭು ಮತ್ತು ಸಿಂಚನಾ), ವಿಚ್ಛೇದನ ಪಡೆಯುವ ಮಾತಾಡಿ ಕೊನೆಗೆ ಒಂದಾಗುವ ಗಂಡ-ಹೆಂಡತಿ(ಗೀತಾ ದಯಾನಂದ್ ಮತ್ತು ಅನಿಲ್ ಶೆಟ್ಟಿ), ಡೊಳ್ಳುಹೊಟ್ಟೆಯ ಅಂಕಲ್( ಸಂದೀಪ್ ಓಂತಿಬೆಟ್ಟು), ಸ್ಟೇಷನ್ ಮಾಸ್ಟರ್(ಪ್ರಭಾಕರ ಕಲ್ಯಾಣಿ), ನಕ್ಸಲೈಟ್ ರಂಗರಾಜನ್ ಮತ್ತು ಡಾ.ರಾಕೇಶ್ ( ಪ್ರೀತಮ್ ಮತ್ತು ನಾಗೇಶ್) ಎಲ್ಲರೂ ಲವಲವಿಕೆಯ ಅಭಿನಯ ನೀಡಿದರು.

ರಂಗಸಜ್ಜಿಕೆ, ವಾತಾವರಣಕ್ಕೆ ತಕ್ಕ ಬಳಸಿದ ಪರಿಕರಗಳು, ಸಂಭಾಷಣೆಗಳ ಸಮರ್ಪಕ ನಿರ್ವಹಣೆ, ಪಾತ್ರಗಳು ರಂಗ ಸಮತೋಲನವನ್ನು ಕಾಪಾಡಿದ ರೀತಿ, ಸಂದರ್ಭಗಳಿಗೆ ಹೊಂದಿಕೆಯಾಗುವಂತೆ ಹದವಾಗಿ ಮೂಡಿ ಬಂದ ಬೆಳಕು- ಎಲ್ಲದರಲ್ಲೂ ನಿರ್ದೇಶಕರ ಜಾಣ್ಮೆ ಎದ್ದು ಕಾಣುತ್ತಿತ್ತು. ಹಾಡುಗಳು ಮತ್ತು ಲಯಬದ್ಧವಾದ ಗಾಯನಗಳು ( ಶೋಧನ್ ಎರ್ಮಾಳ್ , ಅವಿನಾಶ್ ನಾಯಕ್ ಮತ್ತು ಅರುಂಧತಿ) ನಾಟಕವನ್ನು ಇನ್ನಷ್ಟು ಅರ್ಥಪೂರ್ಣವಾಗುವಂತೆ ಮಾಡುವಲ್ಲಿ ಸಹಕರಿಸಿದವು. ಅಮೋಘ ತಂಡದ ಈ ನಾಟಕ ಇನ್ನಷ್ಟು ಪ್ರದರ್ಶನಗಳನ್ನು ಕಾಣುವುದರಲ್ಲಿ ಸಂದೇಹವಿಲ್ಲ.

‍ಲೇಖಕರು avadhi

February 27, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: