ಮಿರ್ಜಾ ಬಷೀರ್ ಕಥೆ – ‘ಚಂದನ ಗಾಂಧಿ’..

ಮಿರ್ಜಾ ಬಷೀರ್

ನವಿಲೇಹಾಳು ಗ್ರಾಮದ ಒಂಬತ್ತನೆ ತರಗತಿಯ ಚಂದ ಉರುಫ್ ಚಾಂದ್‌ಪೀರ್ ಮೇಷ್ಟ್ರುಗಳ ಲೆಕ್ಕದಲ್ಲಿ ಅಂಥಾ ಏನು ಪ್ರತಿಭಾವಂತ ವಿದ್ಯಾರ್ಥಿಯಾಗಿರಲಿಲ್ಲ. ಎಲ್ಲ ವಿಷಯಗಳಲ್ಲೂ ತಿಣುಕ್ಯಾಡಿ ೪೦-೪೫ ಮಾರ್ಕ್ಸ್ ತೆಗೀತಿದ್ದ.ಇದ್ದುದ್ರಾಗೆ ಕನ್ನಡದಲ್ಲಿ ಸ್ವಲ್ಪ ಜಾಸ್ತಿ ರ‍್ತಿದ್ವು. ಸಾಬ್ರನಾದ್ರೂ ಕನ್ನಡದಾಗೆ ಚಾಂಪಿಯನ್ ಅಂದ್ಕಬ್ಯಾಡ್ರಿ. ಸಾಬ್ರಲ್ಲಿ ಪಿಂಜಾರ ಸಮುದಾಯಕ್ಕೆ ಸೇರಿದ ಅವನ ಮಾತೃಭಾಷೆ ಕನ್ನಡವೇ ಆಗಿತ್ತು. ಅವನ ಸ್ಪೆಷಾಲಿಟಿ ಅಂದ್ರೆ ಮಾತುಗಾರಿಕೆ. ಎದುರಿದ್ದೋರು ಮೋಡಿ ಆಗಂಗೆ ಮಾತಾಡ್ತಿದ್ದ. ಅಂಗಾಗಿ ಆ ವರ್ಷ ಭಾಷಣ ಸ್ಪರ್ಧೇಲಿ ಚನ್ನಗಿರೀ ತಾಲ್ಲೂಕಿಗೆ ಫಸ್ಟು ಬಂದು ಜಿಲ್ಲಾ ಮಟ್ಟದ ಸ್ಪರ್ಧೆಗೂ ಶಿವಮೊಗ್ಗಕ್ಕೆ ಹೋಗಿ ಬಂದ. ಆ ವರ್ಷ ಸ್ಪರ್ಧೆಯಲ್ಲಿ ಗೆದ್ದೋರಿಗೆ ಬಹುಮಾನ ರೂಪದಲ್ಲಿ ಕಪ್ಪು, ತಟ್ಟೆ, ಟಿಫನ್ ಬಾಕ್ಸು, ಬಕೆಟ್ಟುಗಳನ್ನು ಕೊಡದೆ ಪುಸ್ತಕಗಳನ್ನು ಕೊಟ್ಟಿದ್ದರು. ಬಹುಮಾನವಾಗಿ ಬಂದಿದ್ದ ಹತ್ತಾರು ಪುಸ್ತಕಗಳೆಲ್ಲ ಮಹಾತ್ಮ ಗಾಂಧೀಜಿಯವರ ಬಗ್ಗೆಯೇ ಇದ್ದವು.

“ಚಂದಾ! ಇಷ್ಟಾಕಂದು ಪುಸ್ತಕಗಳ ಎಲ್ಲಿಡ್ತಿಯಲೇ? ಎಲ್ಲವ್ನೂ ಇಲಿ ಕಡೀತವೆ!” ಎಂದು ಅವನ ಫ್ರೆಂಡ್ಸ್ ಎಲ್ಲ ತಮಾಷಿ ಮಾಡೋರು. ಅದೇ ಯೋಚ್ನೇಲಿ ತನ್ನ ಮುರುಕಲು ಮನೆ ಸೇರಿದ ಚಂದ, ತನ್ನ ಸ್ಕೂಲ್ ಬುಕ್ಕುಗಳನ್ನು ಚೀಲದಲ್ಲಿಟ್ಟು ಗೋಡೆಗೆ ನೇತು ಹಾಕಿದ. ಗಾಂಧೀಜಿ ಬುಕ್ಕುಗಳನ್ನು ತನ್ನ ಟ್ರಂಕಿನೊಳಗಿಟ್ಟ. ಬಹುಮಾನದಲ್ಲಿ ಗೆದ್ದ ಬುಕ್ಕುಗಳೆಲ್ಲ ಬಣ್ಣ ಬಣ್ಣವಾಗಿ ಕಳಕಳ ಅಂತಿದ್ವು. ಅವರಪ್ಪ ಶಫಿ ಪುಸ್ತಕಗಳನ್ನೆಲ್ಲ ನೋಡಿ “ಇಸಾಕಂದು ಗೆದ್ಯಾ!” ಎಂದು ಆಶ್ಚರ್ಯಪಟ್ಟು “ಭಾರೀ ಇವ್ನು ಕಣಲೇ ನೀನು!” ಎಂದು ಅಭಿಮಾನದಿಂದ ನುಡಿದ.

ಅವರಿವರ ಮನೆಯಲ್ಲಿ ಸಂಬಳಕ್ಕಿದ್ದ ಶಫಿ ಅನಕ್ಷರಸ್ಥನಾಗಿದ್ದ. ಅವನಾಯ್ತು, ಅವನ ಕೆಲಸ ಆಯ್ತು ಅನ್ನಂಗಿದ್ದ. ಮಹಾಮೌನಿಯಾಗಿದ್ದ ಆತ ದಿನಕ್ಕೆ ನಾಲ್ಕು ಮಾತಾಡಿದರದೇ ಹೆಚ್ಚು. ಕೆಲಸಕ್ಕಿದ್ದ ಮನೆಯಲ್ಲೇ ಊಟ ತಿಂಡಿ ಮಾಡುತ್ತಿದ್ದರಿಂದ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋದರೆ ರಾತ್ರಿ ಮಲಗಲು ಮಾತ್ರ ಮನೆಗೆ ಬರುತ್ತಿದ್ದ. ಮನೆಯಲ್ಲಿ ಎಲ್ಲ ಕೆಲಸಕ್ಕೂ ಚಂದನಿಗೆ ತನ್ನಮ್ಮನೇ ಗತಿಯಾಗಿದ್ಲು. ಸ್ಕೂಲಿಗೆ ಸೇರಿಸುವುದಿರಲಿ, ಬಟ್ಟೆ ಬರೆ, ಚಪ್ಲಿ, ಪೆನ್ನು, ಪೆನ್ಸಿಲ್ ಕೊಡಿಸುವುದರ‍್ಲಿ ಎಲ್ಲಕ್ಕೂ ಮಾಬಕ್ಕ ಉರುಫ್ ಮಹಬೂಬಿಯೇ ಬೇಕಾಗಿದ್ದಳು. ಇನ್ನೊಂದು ಪಾಯಿಂಟ್ ಏನಂದ್ರೆ ಮಾಬಕ್ಕ ಒಂದಷ್ಟು ಕೋಳಿಗಳನ್ನು ಸಾಕಿದ್ದಳು. ಕೋಳಿ ಮತ್ತು ತತ್ತಿಗಳ ಮಾರಾಟದಿಂದ ಮಾಬಕ್ಕನಿಗೆ ಒಂದಷ್ಟು ಆದಾಯವಿತ್ತು. ಹಾಗಾಗಿ ಪ್ರತಿಯೊಂದಕ್ಕೂ ಗಂಡನ ಎದುರು ಮಾಬಕ್ಕ ಕೈ ಒಡ್ಡುತ್ತಿರಲಿಲ್ಲ.

ಒಂಬತ್ತನೇ ಕ್ಲಾಸಿನ ದೊಡ್ಡ ಪರೀಕ್ಷೆ ಬರೆದ ನಂತರ ಬ್ಯಾಸಿಗೆ ರಜದಲ್ಲಿ ಚಂದನಿಗೆ ಓದಲು ಭರ್ತಿ ಸಮಯ ಸಿಕ್ತು. ಅವನು ಭಾಷಣ ಸ್ಪರ್ಧೆಗೆ ಶಿವಮೊಗ್ಗಕ್ಕೆ ಹೋದಾಗ ಹಲವು ದೊಡ್ಡ ಮನುಷ್ಯರ ಉಪನ್ಯಾಸ ಕೇಳಿದ್ದ. ಅವರು ಗಾಂಧೀಜಿಯ ಸರಳತೆ ಬಗ್ಗೆ ನಂಬಲಸಾಧ್ಯವಾದಂತ ಸಂಗತಿಗಳನ್ನು ಹೇಳಿದ್ದರು. ದುಂಡು ಮೇಜಿನ ಪರಿಷತ್ತಿಗೆ ಹೋದಾಗ ಇಂಗ್ಲೆಂಡ್ ದೊರೆಯನ್ನು ಗಾಂಧಿ ಭೇಟಿ ಮಾಡಿದ ಸಮಯದಲ್ಲಿ ಬ್ರಿಟಿಷರೇ ಗಾಂಧಿಗೋಸ್ಕರವಾಗಿ ವಸ್ತ್ರ ಸಂಹಿತೆಯನ್ನು ಸಡಿಲಗೊಳಿಸಿದರಂತೆ! ಸೂಟು ಬೂಟು ಡೌಲಿನ ಮಹನೀಯರ ನಡುವೆ ಗಾಂಧಿಯವರು ತಮ್ಮ ತುಂಡು ಬಟ್ಟೆಯಲ್ಲಿ ಫಕೀರನಂತೆ ಪಾಲ್ಗೊಂಡಿದ್ದರಂತೆ! ಆರು ತಿಂಗಳ ಕೆಳಗೆ ಕೇಳಿದ ಭಾಷಣದ ಮಾತುಗಳು ಈಗಲೂ ಅವನ ಕಿವಿಯಲ್ಲಿ ಗುಂಗಿಯಾಡ್ತಿದ್ವು.

ಚಂದ ತನ್ನ ಸುತ್ತ ಇರುವ ಅನೇಕರ ಜೀವನಶೈಲಿಯನ್ನು ಗಮನಿಸುತ್ತಿದ್ದ. ೧೪-೧೫ ವರ್ಷದ ಚಂದನಿಗೆ ಒಂದೊಂದೇ ಸುಕ್ಷ್ಮಗಳೂ ಹೊಳೆಯತೊಡಗಿದವು – ಶ್ರಮರಹಿತ ಸುಖ ಜೀವನಕ್ಕೆ ಒಲವು ಬೆಳೆಸಿಕೊಂಡಿರುವ ಜನ, ಊರಿನ ಪ್ರತಿ ಹಬ್ಬ ಹರಿದಿನ ಸಮಾರಂಭದಲ್ಲೂ ತಲೆ ಹಾಕಿರುವ ಆಡಂಬರ-ಪ್ರದರ್ಶನ, ಶ್ರೀಮಂತರನ್ನು ನಕಲು ಮಾಡುವ ಹುಚ್ಚು ಮತ್ತು ಹೆಚ್ಚಿರುವ ಬಡವರ ಕೀಳರಿಮೆ.

ಇದೆಲ್ಲದರ ನಡುವೆ ಚಂದ ತನ್ನಲ್ಲಿದ್ದ ಗಾಂಧಿ ಪುಸ್ತಕಗಳನ್ನು ಓದಲೇಬೇಕೆಂದು ಪಟ್ಟಾಗಿ ಹಿಡಿದು ಕುಂತ. ಓದುತ್ತಾ ಹೋದಂತೆ ಗಾಂಧಿ ಎಂದೋ ಆಗಿಹೋದವರೆನ್ನಿಸಲಿಲ್ಲ. ಅವರು ನಿತ್ಯ ಪ್ರಸ್ತುತರಾಗಿದ್ದರು. ಅವರು ತಮ್ಮೊಬ್ಬರಿಗೇ ಬದುಕಿದರೆನಿಸಲಿಲ್ಲ. ಒಟ್ಟು ಪ್ರವಾಹದಲ್ಲಿ ಒಂದಾಗಿದ್ದ ಜೀವ ಗಾಂಧಿಯವರದ್ದು ಎನಿಸಿತು.

ಪ್ರಾಮಾಣಿಕನೂ, ಮುಗ್ಧನೂ ಆಗಿದ್ದ ಚಂದನಿಗೆ ಗಾಂಧಿ ತನ್ನ ಜೊತೆ ಮಾತುಕತೆಯಾಡುವ ಗೆಳೆಯನಂತೆ ಕಂಡರು. ಅಲ್ಲಿ ಇಲ್ಲಿ ತಿದ್ದುತ್ತಿದ್ದರು. ಒಂದು ಸಲ ನೆಲದ ಮೇಲೆ ಹರಿದಾಡುತ್ತಿದ್ದ ಇರುವೆಗಳಿಗೆ ಚಂದ ಬೆಲ್ಲದ ಪುಡಿ ಹಾಕಿದಾಗ ಗಾಂಧಿ “ಭೇಷ್ ಚಂದ” ಅಂದಿದ್ರು! ಪುಸ್ತಕಗಳನ್ನು ಓದ್ತಾ ಓದ್ತಾ ಗಾಂಧಿ ಚಂದನ ಜೊತೆ ಜೊತೆಯೇ ಇರತೊಡಗಿದರು. ಚಂದನು ಪುಸ್ತಕಗಳನ್ನು ವಾರಗಟ್ಟಲೆ ತಿಂಗಳುಗಟ್ಟಲೆ ಎಡಬಿಡದೆ ಓದೋದನ್ನು ನೋಡಿದ ಮಾಬಕ್ಕ ಅಚ್ಚರಿಗೊಂಡಳು. ಆಗಿಂದಾಗ್ಗೆ ಗಾಂಧಿ ತಮ್ಮ ಪಾಪಗಳನ್ನು ತೊಳೆದುಕೊಳ್ಳುವ ರೀತಿ ಚಂದನಿಗೆ ವಿಶೇಷವಾಗಿ ಕಂಡಿತು. ಮದುವೆಯಾಗಿ ಎರಡು ವರ್ಷದ ಮೇಲೆ ಗಾಂಧಿ ತಮ್ಮ ತಪ್ಪುಗಳನ್ನು ಒಂದು ಪತ್ರದಲ್ಲಿ ಬರೆದು ತಂದೆ ಕರಮಚಂದರಿಗೆ ಒಪ್ಪಿಸುವುದು ಅದ್ಭುತವೆಂದು ಒಪ್ಪಿ ಚಂದ ತನ್ನನ್ನೇ ತಾನು ನೋಡಿಕೊಂಡ. ಮರ‍್ನಾಲ್ಕು ತಿಂಗಳ ಕೆಳಗೆ ನಡೆದ ಒಂದು ಘಟನೆ ನೆನಪಾಯಿತು. ಕೂಲಿನಾಲಿಯ ಜೊತೆ ಕೋಳಿಗಳ ವ್ಯಾಪಾರವನ್ನು ಮಾಡಿ ನಾಲ್ಕು ಕಾಸು ಮಾಡಿಕೊಳ್ಳುತ್ತಿದ್ದ ಮಾಬಕ್ಕ ಕಷ್ಟಜೀವಿಯಾಗಿದ್ದಳು. ದುಡ್ಡು ದುಡಿಯುವುದು ಮತ್ತು ದುಡಿದ ದುಡ್ಡನ್ನು ದುಂಡಗಿಟ್ಟುಕೊಳ್ಳುವುದು ಎಷ್ಟು ಕಷ್ಟ ಎಂಬುದು ಆಕೆಗೆ ತಿಳಿದಿತ್ತು. ಒಂದು ಪೈಸೆಯನ್ನೂ ಆಕೆ ಪೋಲು ಮಾಡಿದವಳಲ್ಲ. ಪಿಂಜಾರಟ್ಟಿಯಲ್ಲಿ ಅವಳಿಗೆ ಜುಗ್ಗಿ ಎಂಬ ಅಡ್ಡ ಹೆಸರೂ ಸಹ ಇತ್ತು.

ರಂಜಾನ್, ಬಕ್ರೀದ್, ಮೊಹರಂ ಮುಂತಾದ ಹಬ್ಬಗಳಲ್ಲಿ ಮಾತ್ರ ಮನೆಯಲ್ಲಿ ಕೋಳಿ ಸಾರು ಇರುತ್ತಿತ್ತು. ಬೇರೆ ಬಿಡಿ ದಿನಗಳಲ್ಲಿ ಕೋಳಿ ಕೊಯ್ಯುವ ವಿಚಾರವೇ ಇರಲಿಲ್ಲ. ಅಷ್ಟು ಬಿಗಿ ಮಾಬಕ್ಕ. ಆದರೆ ಚಂದನಿಗೆ ಕೋಳಿ ಸಾರಿನ ಬಯಕೆಯಾಯಿತು. ಹಬ್ಬಗಳು ಇನ್ನೂ ಎಲ್ಲೋ ದೂರ ಇದ್ದವು. ಊರಲ್ಲಿ ಯಾವ ಸಾಹುಕಾರರ ಮನೆಯಲ್ಲಿಯೂ ದಾವತ್ ಹೇಳಿ ಮಾಂಸದ ಊಟ ಹಾಕಿಸಲು ಯಾವುದೇ ಶುಭಕಾರ್ಯಗಳಿರಲಿಲ್ಲ. ಆಗ ಒಂದು ದಿನ ಅಪ್ಪ ಅಮ್ಮ ಇಬ್ಬರೂ ಮನೆಯಲ್ಲಿಲ್ಲದ ವೇಳೆ ಒಂದು ದೊಡ್ಡ ತತ್ತಿ ಇಡುವ ಕೋಳಿಯನ್ನು ಹಿಡಿದು ಕಟ್ಟಿಹಾಕಿ ಕೋಲಲ್ಲಿ ಹಣ್ಣುಗಾಯಿ ನೀರುಗಾಯಿ ಆಗುವಂತೆ ಹೊಡೆದ. ಆ ಕೋಳಿ ಈಗಲೋ ಆಗಲೋ ಪ್ರಾಣ ಬಿಡುವಂತಾಯ್ತು. ಮಾಬಕ್ಕ ಎಲ್ಲಿಂದಲೋ ಬಂದವಳೇ ಕೋಳಿಯನ್ನು ನೋಡಿ, ಮುಲ್ಲಾ ಸಾಹೇಬರ ಬಳಿ ಕೊಂಡೊಯ್ದು ಹಲಾಲ್ ಮಾಡಿಸಿದಳು. ಸ್ವಲ್ಪ ತಡವಾಗಿದ್ದರೂ ಕೋಳಿ ಸತ್ತೇ ಹೋಗುತ್ತಿತ್ತು. ಅದು ಸ್ವರ್ಗಕ್ಕೋಯ್ತೋ ಇಲ್ಲವೋ ಗೊತ್ತಿಲ್ಲ ಆದರೆ ಏಟು ತಿಂದು ಹಿಂಸೆ ಅನುಭವಿಸುತ್ತಿದ್ದ ಕೋಳಿ ನೋವಿನ ನರಕದಿಂದ ಮುಕ್ತಿ ಹೊಂದಿತು. ಚಂದ ಯಾವ ಗುಟ್ಟನ್ನೂ ಬಿಟ್ಟುಕೊಡಲಿಲ್ಲ. ಮಳ್ಳಿಗನಂತಿದ್ದು ಕೋಳಿ ಸಾರು ಮನದಣಿಯೆ ತಿಂದ. ಗಾಂಧಿಯವರ ಬಗ್ಗೆ ಓದಿ ತಿಳಿದ ಮೇಲೆ ಚಂದನಿಗೆ ಈ ಘಟನೆ ಮತ್ತೆ ಮತ್ತೆ ನೆನಪಾಗಿ ಸಂಕಟವಾಯಿತು. ಎಲ್ಲ ಪಾಪಕೃತ್ಯಕ್ಕೂ ಪ್ರಾಯಶ್ಚಿತ್ತವಿದೆ. ಪ್ರಾಯಶ್ಚಿತ್ತವೇ ಆತ್ಮಶುದ್ಧಿಯ ಮಾರ್ಗ ಎಂದು ಗಾಂಧಿಯವರಿಂದ ಬಲ್ಲವನಾಗಿದ್ದ. ಚಂದ ತಾಯಿಯ ಕಡೆಗೆ ತಿರುಗಿದ. ಅವನಿಗೆ ತಾಯಿಯ ಬಳಿ ಪಾಪ ನಿವೇದನೆ ಮಾಡಿಕೊಳ್ಳಬೇಕಿತ್ತು. ಮಾಬಕ್ಕ ಮಗ ಓದಿ ಜಾಣನಾಗುತ್ತಿರುವ ಬಗ್ಗೆ ಅತಿ ಸಂತಸದಿಂದ ಮಗನನ್ನೇ ನೋಡುತ್ತ ನಿಂತಿದ್ದಳು. ಮಕ್ಕಳು ಜಾಣರಾಗುವುದು ಯಾವ ತಂದೆ ತಾಯಿಗಿಷ್ಟವಾಗುವುದಿಲ್ಲ?

ಗಾಂಧಿಯವರ ತಂದೆಗೆ ಓದು ಬರುತ್ತಿತ್ತು. ಆದರೆ ಚಂದನಿಗೆ ಆ ಅನುಕೂಲವಿರಲಿಲ್ಲ. ಅಪ್ಪ ಅಮ್ಮಂದಿರಿಬ್ಬರೂ ಅನಕ್ಷರಸ್ಥರಾಗಿದ್ದರು. ಚಂದ ತಾಯಿಯೆದುರು ನಿಂತ. ಬಾಯಿ ಬಿಡುವುದಕ್ಕಿಂತ ಮುಂಚೆಯೇ ಬಿಕ್ಕಳಿಸತೊಡಗಿದ. “ಯಾಕೋ, ಏನಾಯ್ತೋ” ಎಂದು ಗಾಬರಿಯಿಂದ ಮಾಬಕ್ಕ ಕೇಳಿದರೂ ಚಂದನಿಗೆ ಮಾತು ಹೊರಡಲಿಲ್ಲ. ಬಿಕ್ಕಳಿಸುತ್ತಿದ್ದವನು ಜೋರಾಗಿ ಅಳತೊಡಗಿದ. ಮಗ ಓದಿ ಓದಿ ತಲೆ ಕೆಟ್ಟಿತೋ ಏನೋ ಎಂದು ಭಯ ವಿಹ್ವಲಳಾದ ಮಾಬಕ್ಕ ಮಗನಿಗಿಂತ ಜೋರಾಗಿ ಅಳತೊಡಗಿದಳು. ಅಮ್ಮ ಮಗನ ದುಃಖ ತಹಬಂದಿಗೆ ಬರಲು ಸುಮಾರು ಹೊತ್ತಾಯಿತು. ಕ್ಷಮಾಪಣಾ ಪತ್ರ ಬರೆದು ತಂದೆಗೆ ಸಲ್ಲಿಸಿದ ಗಾಂಧೀಜಿಗೂ ಆ ಗಳಿಗೆಯಲ್ಲಿ ಎಷ್ಟು ದುಃಖವಾಗಿರಬಹುದು? ಎಂಥ ಹೆಂಗರುಳಿನ ವ್ಯಕ್ತಿಯಾಗಿರಬಹುದು ಗಾಂಧೀಜಿ? ಎಂಥ ಮೃದು ಹೃದಯಿಯಿರಬಹುದು? ಎಂದು ಚಂದನಿಗೆ ಚಕ್ಕನೆ ಮಿಂಚಿ ಹೋಯಿತು. ಬಾಯ್ಬಿಟ್ಟು ಅಮ್ಮನಿಗೆ ಹೇಳಲು ಚಂದನಿಗೆ ಹಿಂಜರಿಕೆಯಾಗಲಾರಂಭಿಸಿತು. ಆದರೆ ಚಂದ ತಪ್ಪೊಪ್ಪಿಕೊಳ್ಳಲು ದೃಢ ನಿಶ್ಚಯ ಮಾಡಿದ್ದ. ತಾನು ಹೊಡೆದ ಒಂದೊಂದು ಹೊಡೆತಕ್ಕೂ ಹೆದರಿ ಹಾರಾರಿ ಬೀಳುತ್ತಿದ್ದ, ನೋವಿನಿಂದ ಅರಚುತ್ತಿದ್ದ ಯಾಟೆ ಅವನ ಕಣ್ಣೆದುರು ಬಂತು.

ಇನ್ನು ಸುಮ್ಮನಿರಲಾಗದೆಂದು ಎಲ್ಲವನ್ನೂ ಹೇಳಿ ಕ್ಷಮೆಯಾಚಿಸಿದ. “ನೀನು ಜುಗ್ಗಿ ಎಂದು ಆಡಿಕೊಳ್ಳುತ್ತಿದ್ದೆ. ನನ್ನನ್ನು ಕ್ಷಮಿಸಮ್ಮ. ಗಾಂಧೀಜಿ ನಿನಗಿಂತಲೂ ಜುಗ್ಗನಾಗಿದ್ದರು.” ಎಂಬುದನ್ನು ಸಹ ಹೇಳಲು ಮರೆಯಲಿಲ್ಲ. ಮಾಬಕ್ಕ “ಅಯ್ಯೋ ಮಗನೆ! ಅದಕ್ಯಾಕೆ ಅಳ್ತೀಯ, ನೀನೆಚ್ಚೋ, ಏನು ಕೋಳಿ ಹೆಚ್ಚೋ ನನ್ನ ಬಂಗರ‍ದಂತ ಮಗನೇ? ಕೋಳಿಯೆಲ್ಲ ನಮ್ಮವೇ. ಕದ್ದವಲ್ಲ. ರ‍್ಪಾಲಿನವಲ್ಲ. ಹೋಗ್ಲಿ ಬಿಡು. ನೀನಿಷ್ಟು ಆಸೆ ಪಟ್ರೆ ಇನ್ನೊಂದು ಕೋಳೀನ ಈಗ್ಲೇ ಕೊಯ್ಯನ” ಎಂದಳು. ಆಕೆಗೆ ಚಂದನ ತಳಮಳ ಅರ್ಥವೇ ಆಗ್ಲಿಲ್ಲ. ಚಂದನ ದುಃಖ ಇನ್ನೂ ಹೆಚ್ಚಿತು. ಪಶ್ಚಾತ್ತಾಪದಿಂದ ಸಿಗುವ ಬಿಡುಗಡೆ ಅವನಿಗೆ ದಕ್ಕಲೇ ಇಲ್ಲ.

ನವಿಲೇಹಾಳಿನ ಪಿಂಜಾರ ಹಟ್ಟಿಯ ಪಕ್ಕದಲ್ಲಿ ದಲಿತರ ಕೇರಿ ಇದೆ. ಎರಡನ್ನೂ ಒಂದು ರಸ್ತೆ ಬೇರ್ಪಡಿಸಿತ್ತು. ಚಂದನ ಮನೆಯು ಪಿಂಜಾರ ಹಟ್ಟಿಯ ಕೊನೆಯ ಮನೆ. ಅದಾದ ಮೇಲೆ ದಲಿತರ ಕೇರಿ ಪ್ರಾರಂಭ. ಅಲ್ಲಿ ಮೊದಲ ಮನೆ ಚಂದನ ಶಾಲೆಯ ಜವಾನ ಬನಪ್ಪನ ಮನೆ ಇತ್ತು. ದಲಿತನಾದ ಅವನಿಗೆ ಊರಲ್ಲಿ ಯಾರೂ ಮನೆ ಕೊಟ್ಟಿರಲಿಲ್ಲವಾದ್ದರಿಂದ ದಲಿತರ ಕೇರಿಯಲ್ಲಿಯೇ ಬಾಡಿಗೆ ಮನೆ ಮಾಡಿಕೊಂಡಿದ್ದ. ಅದೇ ತಾಲ್ಲೂಕಿನ ತಾವರೇಕೆರೆಯವನಾದ ಅವನನ್ನು ಅತ್ಯಂತ ಕಡಿಮೆ ಸಂಬಳಕ್ಕೆ ಕೆಲಸಕ್ಕಿಟ್ಟುಕೊಂಡಿದ್ದರು. ಶಾಲೆಯ ಆಡಳಿತವರ್ಗದವರು ರಜೆಯೆನ್ನದೆ ಹಗಲಿರುಳೆನ್ನದೆ ಅವನಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಆದರೆ ಅದು ಬೇಸಿಗೆ ರಜೆಯ ದಿನಗಳಾದುದರಿಂದ ಕಾಡಿ ಬೇಡಿ ಮಂಡ ಬಿದ್ದು ರಜೆ ಪಡೆದು ಎಷ್ಟೋ ವರ್ಷಗಳ ನಂತರ ಹೆಂಡತಿಯೊಂದಿಗೆ ಮಾವನ ಮನೆಗೆ ಹೋಗಿದ್ದ.

ಬನಪ್ಪನ ಮನೆಯ ಒಳಗೆ ಹೊರಗೆ ಅಡ್ಡಾಡಿಕೊಂಡಿದ್ದ ಚಂದ ಬನಪ್ಪನ ಜಾತಿಯ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಗಾಂಧೀಜಿ ಪುಸ್ತಕಗಳನ್ನು ಓದಿದ ಮೇಲೆ ಜಾತಿಯೊಂದು ಶಾಪ ಎಂಬುದು ಅವನ ಹೊಸ ಅರಿವಾಗಿತ್ತು. ಅದೂ ಅಲ್ಲದೆ ಪಿಂಜಾರವನಾಗಿದ್ದ ಚಂದನಿಗೆ ಜಾತ್ಯತೀತ ಗುಣ ಹುಟ್ಟಿನಿಂದಲೇ ಸಹಜವಾಗಿ ಬಂದಿತ್ತು. ಬನಪ್ಪ ಊರಿಗೆ ಹೋಗಿದ್ದು ಚಂದನಿಗೆ ಅನಿರೀಕ್ಷಿತವಾಗಿತ್ತು. ದಿನವೂ ಬನಪ್ಪನ ಒಡನಾಟದಲ್ಲಿದ್ದ ಚಂದನಿಗೆ ಅವನ ಗೈರು ಬೇಸರ ತಂದಿತ್ತು. ಬನಪ್ಪನು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಮಕ್ಕಳ ಜೊತೆ ಸ್ನೇಹದಿಂದಿದ್ದ. ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗದೇ ಇದ್ದುದರಿಂದ ಅವನು ಮಕ್ಕಳಿಗಾಗಿ ಪರಿತಪಿಸುತ್ತಿದ್ದ. ಮೇಸ್ಟ್ರ ಕೈಯಲ್ಲಿ ಏಟು ತಿಂದು ಅಳುತ್ತಿದ್ದ ಮಕ್ಕಳನ್ನು ಅನೇಕ ಸಲ ಬನಪ್ಪನೇ ಸಂತೈಸುತ್ತಿದ್ದ.

ಅಮ್ಮನಲ್ಲಿ ಪಾಪ ನಿವೇದನೆ ಮಾಡಿಕೊಂಡ ದಿನ ಸಾಯಂಕಾಲದ ಹೊತ್ತು ಬನಪ್ಪನ ಬಂಧುವೊಬ್ಬರು ಬಂದರು. ಅವರು ಒಂದು ಪುಟ್ಟಿಯ ತುಂಬ ಮಾವಿನ ಹಣ್ಣು ತಂದಿದ್ದರು. ಬನಪ್ಪ ಊರಲ್ಲಿಲ್ಲದ್ದರಿಂದ ಹತ್ತಿರವೇ ಇದ್ದ ಚಂದನ ಮನೆಯಲ್ಲಿಟ್ಟು “ಬನಪ್ಪ ಬಂದ ಮೇಲೆ ಹಣ್ಣನ್ನು ಅವರಿಗೆ ಮುಟ್ಟಿಸಿ” ಎಂದು ಹೇಳಿ ಮಾಬಕ್ಕನ ಬಳಿ ಕಷ್ಟ ಸುಖ ಮಾತನಾಡಿ ಹೊರಟು ಹೋದರು. ಬನಪ್ಪ ಊರಿಂದ ಹಿಂತಿರುಗುವ ದಿನ ಯಾರಿಗೂ ಗೊತ್ತಿರಲಿಲ್ಲ. ಚಂದನಿಗಾಗಲೀ, ಮಾಬಕ್ಕನಿಗಾಗಲೀ ಬನಪ್ಪ ತಿಳಿಸಿರಲಿಲ್ಲ. ಒಂದೆರಡು ದಿನದಲ್ಲಿ ಹಿಂತಿರುಗಬಹುದೆಂದು ಮಾಬಕ್ಕ ತಿಳಿದಿದ್ದಳು. ಹಣ್ಣು ಇನ್ನೂ ಮಾಗಿರಲಿಲ್ಲ ಮತ್ತು ಹಣ್ಣಾಗಲು ಮರ‍್ನಾಲ್ಕು ದಿನವಾದರೂ ಬೇಕು ಎಂದು ಅನುಭವದಿಂದ ಬಲ್ಲವಳಾಗಿದ್ದಳು. ತನ್ನ ಚಿಕ್ಕ ಮನೆಯ ಒಂದು ಮೂಲೆಯಲ್ಲಿ ಹಣ್ಣಿನ ಪುಟ್ಟಿಯನ್ನು ತೆಗೆದಿರಿಸಿದಳು.

ಇದಾದ ಮರುದಿನ ಚಂದ ಎದ್ದವನೇ ಬನಪ್ಪನ ಮನೆ ಬಾಗಿಲು ನೋಡಿದ. ಅದು ಮುಚ್ಚಿತ್ತು. ಬನಪ್ಪ ಬಂದಿರಲಿಲ್ಲ. ಮಾಬಕ್ಕ ಹೋಗಿ ಹಣ್ಣಿನ ಬುಟ್ಟಿ ನೋಡಿದಳು. ಬುಟ್ಟಿಯಲ್ಲಿ ಏನಿಲ್ಲೆಂದರೂ ಅಂದಾಜು ಇಪ್ಪತೆಂದು ಹಣ್ಣುಗಳಿದ್ದವು. ಅವು ದೊಡ್ಡ ದೊಡ್ಡ ಗಾತ್ರದ ರಸಪುರಿ ಮಾವಿನ ಹಣ್ಣುಗಳಾಗಿದ್ದವು. ಪುಟ್ಟಿಯಲ್ಲಿ ಸಾಕಷ್ಟು ಒಣಹುಲ್ಲಿತ್ತು. ಹಣ್ಣುಗಳನ್ನು ಮುಟ್ಟಿ ನೋಡಿದಳು. ಗಟ್ಟಿಯಾಗಿದ್ದವು. ಹಸಿರಾಗಿದ್ದವು. ಮೂಸಿ ನೋಡಿ ಇನ್ನೂ ಹಣ್ಣಾಗದೇ ಇರುವುದನ್ನು ಖಾತ್ರಿಪಡಿಸಿಕೊಂಡಳು.

ಮಾಬಕ್ಕ, ಶಫಿ ಮತ್ತು ಚಂದ ಮೂವರೂ ಮಾವಿನ ಹಣ್ಣಿನ ಅದರಲ್ಲೂ ರಸಪುರಿ ಮಾವಿನ ಹಣ್ಣಿನ ಅಭಿಮಾನಿಗಳಾಗಿದ್ದರು. ಆರಾಧಕರಾಗಿದ್ದರು. ಹಣ್ಣಿನ ರುಚಿಯ ಗುಲಾಮರಾಗಿದ್ದರು. ಬಡವರಾದ ಅವರಿಗೆ ಹಣ್ಣಿನ ಮರಗಳೇ? ಕೊಂಡು ತಿನ್ನಲು ದುಡ್ಡೇ? “ನೀವೂ ತಿನ್ನಿ” ಎಂದು ಕೊಡುವ ಕೊಡುಗೈ ದಾನಿಗಳಿದ್ದರೇ? ಉಹೂಂ. ಮಾವಿನ ಋತುವಿನಲ್ಲಿ ಒಂದು ಸಲವೋ ಎರಡು ಸಲವೋ ಅದೃಷ್ಟವಿದ್ದರೆ ಅರ್ಧವೋ, ಒಂದೋ ಹಣ್ಣು ತಿನ್ನಬೇಕು. ಕೆಲವೊಮ್ಮೆ ಕದ್ದು ತಿಂದದ್ದೂ ಇದೆ. ಹೆದರಿಕೆಯಲ್ಲಿ ಪೂರ್ತಿ ರುಚಿಯನ್ನು ಆಸ್ವಾದಿಸದೇ ಗಬಗಬನೆ ತಿಂದದ್ದೂ ಇದೆ. ರುಚಿ ಸವಿದದ್ದಕ್ಕಿನ ಯಾರ ಕಣ್ಣಿಗೂ ಬೀಳದಿದ್ದರೆ ಸಾಕೆಂಬ ಹಪಹಪಿಯಲ್ಲಿ ಗುಳುಂ ಮಾಡಿದ್ದೂ ಇದೆ. ಅಂಥದ್ದರಲ್ಲಿ ಹಣ್ಣು ತುಂಬಿದ್ದ ಪುಟ್ಟಿಯು ಅವರಿಗೆ ಮನೆಗೆ ಬಂದು ಸೇರಿದ ದೊಡ್ಡ ನಿಧಿಯಂತೆ ಭಾಸವಾಗುತ್ತಿತ್ತು.

ಚಂದ: ಇವತ್ತೇನೂ ಬನಪ್ಪ ಬಂದಿಲ್ಲ ಬಿಡಮ್ಮ. ನಾಳೆ ಬರಬಹುದು.
ಮಾಬಕ್ಕ: ನಿಧಾನಕ್ಕೆ ರ‍್ಲಿ ತಗ. ಅವಿನ್ನೂ ಹಣ್ಣಾಗಿಲ್ಲ. ಇನ್ನೂ ಎರಡು ದಿನ ಪರವಾಗಿಲ್ಲ. ಆಮೇಲೆ ನೋಡ್ಕಾಳಣ.
ಚಂದ: ಬನಪ್ಪನಿಗೆ ಸ್ಕೂಲಲ್ಲಿ ಬಹಳ ಕೆಲಸ ಕಣಮ್ಮ. ಒಂದು ನಿಮಿಷ ರೆಸ್ಟ್ ಇಲ್ದಂಗೆ ದುಡುಸ್ತಾರೆ.
ಮಾಬಕ್ಕ: ಒಂದೆರಡು ದಿನ ನಿಧಾನಕ್ಕೆ ರ‍್ಲಿ ಬಿಡು. ಇಲ್ಲಿ ದಿನಾ ಸಾಯದು ಇದ್ದೇ ಐತೆ.
ಮರುದಿನ ಇವೇ ಮಾತುಗಳು ಅಮ್ಮ ಮಗನಲ್ಲಿ ವಿನಿಮಯವಾದವು.
ಮೂರನೇ ದಿನ ಎದ್ದಾಗ ಅಮ್ಮ ಮಗನಿಗೆ ಹೌದೋ ಅಲ್ಲವೋ ಅನ್ನುವಂತಿದ್ದ ಮಾವಿನ ಹಣ್ಣಿನ ಘಮ ಮೂಗಿನ ಸುತ್ತ ಆಡತೊಡಗಿತು.

ಮಾಬಕ್ಕ: ಎಲ್ಲಪ್ಪ ಈತ? ಮಾವನ ಮನ್ಯಾಗೆ ಕುಂತೇ ಬಿಟ್ನಲ್ಲ! ಅಳಿಯ ಬಾಳ ದಿನದ ಮ್ಯಾಲೆ ಬಂದ ಅಂತ ಮಾಂಸ ಮದ್ದು ಮಾಡಾಕ್ತರ‍್ಬೇಕು! ಮಗಳು ಈಗ ಬಸುರಿ ಬ್ಯಾರೆ!
ಶಫಿ: ಓಹ್! ಹೌದೇನು? ಅಂಗಾರೆ ಇನ್ನೂ ಒಂದು ವಾರ ಬರಲ್ಲ!
ಅಪ್ಪ, ಅಮ್ಮ, ಮಗ ಮೂವರಿಗೂ ರಸಪುರಿ ಹಣ್ಣಿನ ಆಸೆ ಕೆರಳತೊಡಗಿತು. ತೆಳ್ಳಗೆ ಹಬ್ಬುತ್ತಿದ್ದ ಹಣ್ಣಿನ ಘಮಲು ಪರರ ಹಣ್ಣು ತಿನ್ನಬಾರದೆಂಬ ಅವರ ಸಂಕಲ್ಪವನ್ನು ಸುಲಭವಾಗಿ ಸೋಲಿಸಿತು. ಅವರಿಗೆ ತಾವು ತಮ್ಮ ಹಿಡಿತದಲ್ಲಿಲ್ಲವೆಂಬAತೆ ಭಾಸವಾಗತೊಡಗಿತು. ಮಾವಿನ ಹಣ್ಣು ಎಷ್ಟಿವೆಯೆಂದು ಬನಪ್ಪನಿಗೆ ಗೊತ್ತಿಲ್ಲ. ಅವನು ಬರುವುದಕ್ಕೆ ಮುಂಚೆಯೇ ಒಂದಷ್ಟು ಹಣ್ಣು ತಿಂದು ಬಿಡೋಣವೇ? ಬನಪ್ಪನಿಗೆ ಹ್ಯಾಗೂ ಗೊತ್ತಾಗುವುದಿಲ್ಲ…! ಎಂಥಾ ಚಾನ್ಸು…!ಶಫಿ, ಮಾಬಕ್ಕರಿಗೆ ತಮ್ಮ ಒಬ್ಬನೇ ಮಗನನ್ನು ನೋಡಿ ಕರುಳು ಚರ‍್ರೆಂದವು. ನಾವು ಯಾವಾಗಲೋ ಸಂತೆಯಲ್ಲಿ ತಂದುಕೊಡುವ ಹುಳಿ ಮಾವಿನ ಹಣ್ಣನ್ನು ಮಾತ್ರ ತಿಂದಿರುವ ಚಂದ, ರಸಪುರಿ ಹಣ್ಣನ್ನು ತಿಂದೇ ಇಲ್ಲ ಎಂದು ನೊಂದುಕೊಂಡರು. ಇದೇ ಜಾಡಿನಲ್ಲಿ ಯೋಚಿಸುತ್ತ ಮೈಮರೆತಿದ್ದ ಚಂದನಿಗೆ ಇದ್ದಕ್ಕಿದ್ದಂತೆ ಗಾಂಧಿ ನೆನಪಾದರು. ‘ಚಂದಾ, ವಾಂಛಲ್ಯಗಳ ಗೆಲ್ಲಬೇಕು. ಆಸೆಗಳಿಗೆ ಬಲಿಯಾಗಬೇಡ. ಮಾವಿನ ಹಣ್ಣುಗಳು ಬನಪ್ಪನವಲ್ಲವೇ?” ಎಂದರು. ಚಂದನಿಗೆ ಕೂಡಲೆ ಪಾಪ, ಪ್ರಾಯಶ್ಚಿತ್ತ, ಸ್ವಯಂ ಶಿಕ್ಷೆ ಎಲ್ಲ ನೆನಪಾಗಿ ತಪ್ಪಾಯ್ತು ಎಂದುಕೊಂಡ.

ಮಾಬಕ್ಕ: ಚಂದಾ, ಎಲ್ರೂ ಒಂದೊಂದು ಎಲ್ಡೆಲ್ಡು ಹಣ್ಣು ತಗಂಡು ತಿನ್ನಾನ. ವಾಟೆ ಸಿಪ್ಪೆ ಎಲ್ಲಾರ ಕಾಣ್ದಂಗೆ ಎಸೆದ್ರಾತು. ಬನಪ್ಪ ಬಂದ್ಬಿಟ್ರೆ ತಿನ್ನಾದು ಕಷ್ಟ. ಈಗ ತಿಂದ್ರೆ ಯಾರಿಗೂ ಗೊತ್ತಾಗಲ್ಲ.
ಚಂದ: ಬ್ಯಾಡವ್ವ. ಹಂಗೆಲ್ಲ ಬೇರೆಯವರ ಸ್ವತ್ತು ತಿನ್ಬರ‍್ದು. ಗಾಂಧಿ ಅಂಥದಕ್ಕೆ ಆಪೋಸಿಟ್.
ಸ್ವಲ್ಪ ಸಮಯದ ಹಿಂದೆ ಅಪ್ಪ ಅಮ್ಮರ ಮನದಲ್ಲಿದ್ದದ್ದೇ ತನ್ನ ಮನದಲ್ಲೂ ಇತ್ತು ಎಂದು ಚಂದನಿಗೆ ನಾಚಿಕೆಯಾಯಿತು. ಅಪ್ಪ ಅಮ್ಮರ ದೌರ್ಬಲ್ಯವು ತನ್ನ ದೌರ್ಬಲ್ಯ ಸಹ ಆಗಿದ್ದರಿಂದ ಒರಟಾಗಿ ವರ್ತಿಸುವುದು ಅವನಿಗೆ ಆಗದೇ ಹೋಯಿತು. ಮನಸ್ಸು ಗಟ್ಟಿ ಮಾಡದಿದ್ದರೆ ಸೋಲು ಖಚಿತ ಎನ್ನಿಸಿತು.
ಶಫಿ: ಬನಪ್ಪನಿಗೆ ಗೊತ್ತಾಗಲ್ಲ. ಎಲ್ಡೇ ಎಲ್ಡು ತಿನ್ನು. ನಾನು ನಿಮ್ಮಮ್ಮನೂ ಸೈತ ತಿನ್ನಲ್ಲ.
ಚಂದ: ಬನಪ್ಪನಿಗೆ ಗೊತ್ತಾಗ್ದಿದ್ರೆ ನನ್ನ ಕಳ್ಳತನ ಸುಳ್ಳಾಗುತ್ತೇನು? ನನ್ನಾತ್ಮಸಾಕ್ಷಿ ಸತ್ತೋಗಿಲ್ಲ.
ಚಂದನ ಇಂಥ ಮಾತುಗಳಿಗೆ ಅಪ್ಪ ಅಮ್ಮರಲ್ಲಿ ಯಾವುದೇ ಉತ್ತರವಿರಲಿಲ್ಲ.

ಮಾಬಕ್ಕ : ತಿನ್ನೋ ಚಂದಾ. ತಿನ್ನೋ ಮಗ್ನೆ. ತಡ ಆದ್ರೆ ಹಣ್ಣು ಬಾಡ್ತವೆ. ರುಚಿಯನ್ನು ರಸವನ್ನು ಕಳೆದುಕೊಳ್ತವೆ. ಎಂದೂ ಮಾತಾಡದ ನಿಮ್ಮಪ್ಪ ಇವತ್ತು ಬಾಯ್ಬಿಟ್ಟು ನಿನ್ನನ್ನು ತಿನ್ನು ಅಂತ ಕೇಳ್ಕಂಡಿದಾನೆ. ಅಪ್ಪನಿಗೆ ಬೇಜಾರು ಮಾಡ್ಬೇಡ ತಿನ್ನು. ನೀನು ಹಿಂಗೆ ಗೆರೆ ಎಳ್ಕಂಡು ಇದ್ರೆ ಬದುಕು ಸಾಗಲ್ಲ. ನಾವೇನು ಹಣ್ಣನ್ನು ಕದೀತಿಲ್ಲ. ಬೇಕಂತಲೇ ಮೋಸ ಮಾಡ್ತಿಲ್ಲ. ಹಣ್ಣುಗಳು ಸುಕಾಸುಮ್ಮನೆ ಹಾಳಾಗೋಗ್ತವೆ. ಗಾಂಧಿ ಹಣ್ಣು ಹಾಳು ಮಾಡ್ರಿ ಅಂತ ಯಾಕೇಳ್ಯಾನು? ಆ ಅಜ್ಜನ ಮಕ್ಕೆ ಮಸಿ ಬಳಿಯೋ ಕೆಲಸ ಮಾಡಬ್ಯಾಡ. ಬನಪ್ಪ ಅರ್ಜೆಂಟಿಗೆ ಬರಲ್ಲ ಅಂತ ನನಿಗನ್ನಿಸ್ತಿದೆ.” ಅಂದ ಮಾಬಕ್ಕನಿಗೆ ಕೆಂಡದಂತ ಸಿಟ್ಟು ಬಂದಿತ್ತು. ಅವಳ ಸಿಟ್ಟಿಗೆ ಕಾರಣವು ಮಗನ ಮೇಲಿನ ವಾತ್ಸಲ್ಯವಾಗಿತ್ತು. ವಾತ್ಸಲ್ಯದಂಥ ಕೋಮಲಭಾವವು ಘಾಸಿಗೊಂಡು ಸಿಟ್ಟಾಗಿ ಬದಲಾಗಿತ್ತು.

ಚಂದ : “ನನ್ನಂತರಂಗ ಬ್ಯಾರೇನೇ ಹೇಳ್ತಾಯಿತೆ ಕಣಮ್ಮ. ಬನಪ್ಪ ರ‍್ಲಿ ಅಥವಾ ಬಿಡ್ಲಿ. ನಾವಂತೂ ಹಣ್ಣು ತಿನ್ನಂಗಿಲ್ಲ. ಹೌದ? ಯಾಕಂದ್ರೆ ಅವು ನಮ್ಮವಲ್ಲ. ನಾಳೆ ಬೆಳಗ್ಗೆ ತನ್ಕ ನೋಡಿ ಬನಪ್ಪ ರ‍್ದೆ ಹೋದ್ರೆ ಏನಾರ ಬ್ಯಾರೆ ಪ್ಲಾನು ಮಾಡ್ಬೇಕು” ಎನ್ನುತ್ತ ಒಂದು ಹಳೇ ಜಮಖಾನ ಹಾಸಿಕೊಂಡು ಉರುಳಿಕೊಂಡ. ಆಗಲೇ ಮಲಗುವ ಹೊತ್ತಾಗಿತ್ತು. ಶಫಿ ಆಗಲೇ ನಿದ್ದೆ ಹೋಗಿದ್ದ. ಮಾಬಕ್ಕ ಕೋಳಿಗಳನ್ನೆಲ್ಲ ಲೆಕ್ಕ ಹಾಕಿದಳು. ತತ್ತಿ ಕೋಳಿ ಎಷ್ಟು, ಕಾವಿಗೆ ಕುಂತಿರವೆಷ್ಟು? ಕಾವಿಗೆ ಕುಂತು ಎಷ್ಟು ದಿನಾತು? ಎಷ್ಟು ತತ್ತಿ ಮಾರಾಟಕ್ಕದಾವೆ? ಮುಂತಾದ ವಿವರಗಳು ಮಾಬಕ್ಕನ ಮನದಲ್ಲಿ ಹಾದು ಹೋದವು. ಬೆಳಕರುದ್ರೆ ಶುಕ್ರವಾರ. ನವಿಲೇಹಾಳಿನ ಸಂತೆ. ಈ ಸಲ ಯಾವ ಯಾವ ಕೋಳಿಗಳನ್ನು ಸಂತ್ಯಾಗೆ ಮರ‍್ಬೇಕು, ರೇಟು ಎಷ್ಟೇಳ್ಬೇಕು ಮುಂತಾಗಿ ಮನದಲ್ಲಿ ಲೆಕ್ಕ ಹಾಕುತ್ತ ನಿದ್ದೆ ಹೋದ್ಲು.

ಚಂದನಿಗೆ ತನ್ನಮ್ಮ ಹೇಳೋದ್ರಲ್ಲಿ ಅರ್ಥ ಐತೆ ಅನ್ನುಸ್ತು. ತಾನೆಂದೂ ಇಂಥ ಇಕ್ಕಟ್ಟಿಗೆ ಸಿಗೆಬಿದ್ದುದ್ದಿಲ್ಲ ಎಂದುಕೊಂಡ. ನಾಳೆ ಶುಕ್ರವಾರ. ತನ್ನಮ್ಮ ಕೋಳಿ ಮಾರಕೆ ಸಂತೆಗೆ ಹೋಗ್ತಳೆ ಅಂದ್ಕೊಂಡು , ಗಂಟು ಬಿದ್ದಿರುವ ಮಾವಿನ ಹಣ್ಣಿಗೇನು ಮಾಡೋದು ಎಂದು ಯೋಚಿಸುತ್ತ ನಿದ್ದೆ ಹೋದ.

ನವಿಲೇಹಾಳಿನ ಊರು ಬಾಗಿಲಲ್ಲೇ ಸಂತೆ ನೆರಿಯೋದು. ರಸ್ತೆಯ ಎರಡೂ ಬದಿಗೆ ಎಲ್ಲ ಸೇರಿ ಐವತ್ತು ಜನ ಮಾರಾಟಗಾರರು ಬಂದ್ರೆಚ್ಚು. ಹೆಚ್ಚು ಕಮ್ಮಿ ಅದರ ಡಬ್ಬಲ್ಲು ಕೊಳ್ಳುವವರು ರ‍್ತರೆ. ಪ್ರತಿ ಸಲದಂತೆ ಸಂತೆ ನೆರಿಯಾಕೇ ಹನ್ನೊಂದು ಗಂಟ್ಯಾತು. ಈ ಸಲ ಒಬ್ಬ ಹೊಸ ಮಾರಾಟಗಾರ ಬಂದಿದ್ದ. ಅವನೇ ಚಂದ. ಅವರ ಮನೆಯಿಂದ ಪ್ರತಿ ವಾರ ಮಾಬಕ್ಕ ಒಬ್ಬಳೇ ಬರುತ್ತಿದ್ಲು. ಈ ಸಲ ಅಮ್ಮ ಮಗ ಇಬ್ರೂ ಜೊತೇಲೇ ಬಂದಿದಾರೆ. ಮಾಬಕ್ಕ ಕೋಳಿಗಳ ಕಾಲು ಕಟ್ಟಿ ಪಾಟಿನ್ ಚೀಲದ ಮೇಲೆ ಉಲ್ಡಾಕಿದ್ಲು. ಚಂದ ಮತ್ತೊಂದು ಪಾಟಿನ್ ಚೀಲದ ಮೇಲೆ ಎರಡೂವರೆ ಡಜನ್ ಮಾವಿನ ಹಣ್ಣುಗಳನ್ನು ಜೋಡಿಸಿದ್ದ. ಆ ಮಾವಿನ ಹಣ್ಣುಗಳು ನೋಡಕೆ ಕಣ್ಣೆಸರಾಗಂಗಿದ್ವು. ಅವುಗಳ ಘಮಲು ಸಂತೆ ಬೀದಿ ದಾಟಿ ಮಿಶಿನ್ ಮನೆ ತನ್ಕ ಹಬ್ಬಿ ನಿಂತಿತ್ತು. “ಎಲ್ಲಿಂದ ತಂದ್ಯೆಲೆ ಚಂದಾ” “ಶಭಾಷ್, ಬಾಳ ಚನ್ನಾಗದವೆ” “ಎಂಗಲೇ ಡಜನ್ನಿಗೆ” ಮುಂತಾದ ಪ್ರಶ್ನೆಗಳು ಹಲವು ದಿಕ್ಕಿನಿಂದ ಚಂದನ ಮ್ಯಾಲೆ ಬಂದು ಬಿದ್ವು. ಗಿರಾಕಿಗಳೆಲ್ಲ ಚಂದನತ್ರ ಬರೋರೇ! ಅವರಮ್ಮ ಮಾಬಕ್ಕನ ವ್ಯಾಪಾರವೇ ಡಲ್ಲಾತು.

ಚೌಕಾಸಿ ಮಾಡುವುದರಲ್ಲಿ ಹೆಸರುವಾಸಿಯಾಗಿದ್ದ ನೂರಮ್ಮ, ಜಿನ್ನಮ್ಮ, ಚಿನ್ನಮ್ಮ, ಫರೀದಕ್ಕರಿಗೆ ಬಗ್ಗಲಿಲ್ಲ ಚಂದ. ‘ತ್ಯಾವಣಿಗೆ, ಚನ್ನಗಿರೀಲಿ ಯಾವ ರೇಟಿಗೆ ಸಿಗ್ತವೋ ಅದೇ ರೇಟು ನನ್ನತ್ರ, ಹೆಚ್ಚಿಲ್ಲ ಕಡಮಿಲ್ಲ’ ಎಂದ. ‘ನಿನ್ನವೇನು ಸೀಮ್ಯಾಗಿಲ್ದ ಹಣ್ಣೇನೋ? ಮೂಳ’ ಅಂತು ಫರೀದಕ್ಕ. ‘ಸೀಮ್ಯಾಗೆ ಸಿಗೋ ಹಣ್ಣೇ ಕಣಕ್ಕ’ ಅಂದ ತಣ್ಣಗೆ. ಮಾತಿಗೆ ಮಾತು, ವಾದಕ್ಕೆ ವಾದ, ಚೌಕಾಸಿಗೆ ಚೌಕಾಸಿ. ಯರ‍್ಗೂ ಸೋಲ್ಲಿಲ್ಲ ಚಂದ. ಆ ಹಣ್ಣಿನ ಬಣ್ಣ, ಘಮಲಿಗೆ ಮನಸೋತ ತುಂಬು ಬಸುರಿ ಮಂಗಳಮ್ಮ ಚೌಕಾಸಿ ಮಾಡ್ದಂಗೆ ಓಸೂ ಹಣ್ಣು ಕೊಂಡ್ಕತು. ‘ನಡಿ ಅತ್ತೆ, ನಾನೇ ನಿಮ್ಮನೆತಂಕ ಹೊತ್ಕಂಡು ರ‍್ತೀನಿ’ ಎಂದು ಅವರ ಮನೆಗೆ ಕೊಟ್ಟು ಬಂದ.

ಚಂದನ ಸಂತೋಷಕ್ಕೆ ಪಾರವೇ ಇಲ್ದಂಗಾಯ್ತು. ಕುಂತ್ರೆ ಕುಂದ್ರಂಗಾಗ್ವಲ್ದು. ನಿಂತ್ರೆ ನಿಲ್ಲಂಗಾಗ್ವಲ್ದು. ನಿಕ್ಕರ್ ಜೇಬಿನಲ್ಲಿದ್ದ ದುಡ್ಡನ್ನು ಕೈ ಹಾಕಿ ನೂರಾರು ಸಲ ಯಾರಿಗೂ ಕಾಣಿಸ್ದಂಗೆ ಎಣಿಸಿದ. ಅಷ್ಟೂ ದುಡ್ಡನ್ನು ಬನಪ್ಪನಿಗೆ ಮುಟ್ಟಿಸಿಬಿಟ್ರೆ ತನ್ನ ಜವಾಬ್ದಾರಿ ಸದ್ಯಕ್ಕೆ ಮುಗಿಯುತ್ತೆ ಅಂದ್ಕಂಡ್ರು . ಬನಪ್ಪನ ಬರುವಿಗಾಗಿ ಕಾತರಿಸತೊಡಗಿದ. ಮಾಬಕ್ಕ, ಶಫಿ ಸೈತ ಬಾಳ ಹಗೂರಾಗಿದ್ರು. ಋಜುಮಾರ್ಗದಲ್ಲಿಟ್ಟ ಒಂದು ಹೆಜ್ಜೆ ಅವರಲ್ಲಿ ಎಂಥ ಆತ್ಮವಿಶ್ವಾಸ, ಧೈರ್ಯ ತಂದಿತ್ತಂದ್ರೆ ……!
ಅದಕ್ಕೇ ಗಾಂಧೀಜಿಯವರಿಗೆ ಅಸೀಮ ಧೈರ್ಯವಿತ್ತೆಂದು ಕಾಣುತ್ತದೆ ಎಂದುಕೊಂಡ ಚಂದ.

‍ಲೇಖಕರು avadhi

February 27, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: