ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಯ ಬದ್ಧತೆಯಿಂದ ಕೂಡಿದ ಜ್ಞಾನ ದೀವಿಗೆಯಿದು..

ಎಲ್ ಎಸ್ ಶಾಸ್ತ್ರಿಯವರ ಕಾದಂಬರಿ ‘ಲಯ’

ಈ ಕೃತಿಯ ಕುರಿತ ಸುಧಾ ಭಂಡಾರಿ ಅವರ ಬರಹ ಇಲ್ಲಿದೆ.

– ಸುಧಾ ಭಂಡಾರಿ

ಇತ್ತೀಚಿಗೆ ಹಿರಿಯ ಸಾಹಿತಿಗಳಾದ ಶ್ರೀ ಎಲ್ ಎಸ್ ಶಾಸ್ತ್ರಿಯವರು ಪ್ರೀತಿಯಿಂದ ಕಳುಹಿಸಿದ ಲಯ ಕಾದಂಬರಿಯನ್ನು ತುಸು ತಡವಾಗಿಯಾದರೂ ಓದಿ ಮುಗಿಸಿದ ಮೇಲೆ ಅಭಿಮಾನದಿಂದ ದಾಖಲಿಸಿದ ಪ್ರತಿಕ್ರಿಯೆ ನಿಮಗಾಗಿ.

ಶ್ರೀಯುತ ಎಲ್ ಎಸ್  ಶಾಸ್ತ್ರಿಯವರು ಹಿರಿಯರು;  ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಪಡೆದ ಅಪಾರ ಅನುಭವಿಗಳು.  ಶರಾವತಿ ನದಿ ತೀರದ ರಮ್ಯ ಪರಿಸರದಲ್ಲಿ  ಸಾಂಸ್ಕೃತಿಕ ಹಿರಿಮೆ ಗರಿಮೆಯುಳ್ಳ ಕುಟುಂಬದ ಹಿರಿಯರಿಂದ ವಿವಿಧ ಕ್ಷೇತ್ರಗಳಲ್ಲಿ ಮಾರ್ಗದರ್ಶನ,  ಪ್ರಾವೀಣ್ಯತೆ   ಪಡೆದು  , ಯಕ್ಷಗಾನದ ಲಯಕ್ಕೆ ತಾಳ ಹಾಕುತ್ತಾ ಬೆಳೆದವರು. ತದನಂತರದ ತಮ್ಮ ಬದುಕನ್ನು ದೂರದ ಗಡಿನಾಡು ಬೆಳಗಾವಿಯಲ್ಲಿ ಕಟ್ಟಿಕೊಂಡು ಸಾಹಿತ್ಯ , ಪತ್ರಿಕಾ ರಂಗದಲ್ಲಿ  ತೊಡಗಿಸಿಕೊಂಡು ಎಲ್ಲ   ಪ್ರಕಾರಗಳಲ್ಲಿ ಕೃತಿಗಳನ್ನು ಸ್ರಜಿಸಿ ಸಿದ್ಧ ಹಸ್ತರೆನಿಸಿಕೊಂಡವರು. ಹೀಗಾಗಿ ಇವರ ಕೃತಿಯನ್ನು ವಿಶ್ಲೇಷಿಸುವಷ್ಟು ದೊಡ್ಡವಳು ನಾನಲ್ಲದಿದ್ದರೂ ಓದಿದ ಖುಷಿ , ಸಂತೃಪ್ತಿಯಿಂದ ನನ್ನ ಅಭಿಪ್ರಾಯಗಳನ್ನು ಉಲ್ಲೇಖಿಸುತ್ತೇನೆ.

ಶಾಸ್ತ್ರೀಯವರ ೭೫ ನೇ ವರ್ಷದ ಸಂಭ್ರಮದಲ್ಲಿ ಅವರ ಎಲ್ಲ  ಕೃತಿಗಳ ವಿಶ್ಲೇಷಣೆಯೊಂದಿಗೆ ಅಭಿನಂದನಾ ಸಮಾರಂಭವನ್ನು ಹೊನ್ನಾವರದಲ್ಲಿ  ಏರ್ಪಡಿಸಲಾಗಿತ್ತು. ಆಗ ಅವರ ಒಂದು ಲಲಿತ ಪ್ರಬಂಧ ಕೃತಿ ‘ರಾಧಕ್ಕನ ರಗಳೆ ‘ ಕೃತಿಯ ಕುರಿತಾಗಿ ವಿಶ್ಲೇಷಣೆ ಮಾಡುವ ಸೌಭಾಗ್ಯ ನನ್ನ ಪಾಲಿಗೆ ಒದಗಿ ಬಂದಿತ್ತು.  ಅಂದಿನಿಂದ ಇಂದಿನವರೆಗೆ ಅವರ ಒಡನಾಟ,  ಸಾಹಿತ್ಯ ಕೃಷಿ ,  ಸಂಘಟನೆ , ಅವರ ಅಭಿಮಾನಿ ಬಳಗ ಬೆಳಗಾವಿಯಲ್ಲಿ ಅವರು ಕಟ್ಟಿಕೊಂಡಿರುವ  ಸೃಜನಶೀಲ ಬಳಗದ ಪರಿಚಯವಿದೆ . ಕನ್ನಡ ಸಾಹಿತ್ಯ ಕ್ಷೇತ್ರದ ಹಲವು ಮಹಾನ್ ಸಾಹಿತಿಗಳೊಡನೆ ಒಡನಾಡಿದ್ದ   ಶಾಸ್ತ್ರೀಯವರು  ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಈ ಎಲ್ಲ  ಅನುಭವ , ಅನುಭಾವಗಳ  ಫಲಶ್ರುತಿಯೋ ಎಂಬಂತೆ ಅವರ ಚೊಚ್ಚಲ ಕಾದಂಬರಿ ‘ಲಯ’  ಅತ್ಯಂತ ಲಯಬದ್ಧವಾಗಿ ಹಲವು ಕ್ಷೇತ್ರಗಳ ವಿದ್ವತ್ಪೂರ್ಣ  ಜ್ಞಾನ ದೀವಿಗೆಯಂತಿದೆ.

ಶಾಸ್ತ್ರೀಯವರು ಅಪ್ಪಟ ಹವ್ಯಕ ಕುಟುಂಬದಲ್ಲಿ ಹುಟ್ಟಿದವರಾದರೂ ಹಲವು ವಿಚಾರಗಳಲ್ಲಿ ಅವರ ಪ್ರಗತಿಪರ ದೃಷ್ಟಿಕೋನಗಳು 

ಅವರ ಅನೇಕ ಬರಹಗಳಲ್ಲಿ ಎದ್ದು ಕಾಣುವಂತಿವೆ.  ‘ಲಯ’  ಕಾದಂಬರಿಯಲ್ಲಿ ಬರುವ ಅನೇಕ ಪಾತ್ರಗಳ ಮುಖೇನ ಶಾಸ್ತ್ರಿಯವರು ತಮ್ಮ ವಿಚಾರಗಳನ್ನು , ಚಿಂತನೆಗಳನ್ನು ಮತ್ತು  ಬದಲಾದ ಕಾಲಘಟ್ಟದಲ್ಲಿ ಮೌಲ್ಯಗಳ ಕುಸಿತದ ಬಗೆಗಿನ ಚಿಂತೆಯನ್ನು ಹೊರಗೆಡಹಿದ್ದಾರೆ. ಓರ್ವ ಲೇಖಕ ಕಥೆ,  ಕಾದಂಬರಿ ಯಾವುದೇ ಪ್ರಕಾರದ ಸಾಹಿತ್ಯ ಕೃತಿಗಳನ್ನು ರಚಿಸಿದರೂ ಅವನ ವಿಚಾರಗಳು ಅವನಿಗರಿವಿಲ್ಲದೆ ಅಥವಾ ಉದ್ದೇಶಪೂರ್ವಕವಾಗಿಯೂ ಪಾತ್ರಗಳ ಮುಖೇನ ಅರುಹಲ್ಪಡುತ್ತವೆ. ಶಾಸ್ತ್ರೀಯವರಲ್ಲಿ  ಸಂಗೀತ , ಸಾಹಿತ್ಯ,  ಪತ್ರಿಕೋದ್ಯಮ ಯಕ್ಷಗಾನ ಈ ಎಲ್ಲವೂ ಸಮ್ಮಿಳಿತವಾದ್ದರಿಂದ ಆ ಎಲ್ಲಾ ಕ್ಷೇತ್ರಗಳ ಪರಿಪೂರ್ಣ ಪಾತ್ರವನ್ನು ಈ ಕೃತಿಯಲ್ಲಿ ಕಟ್ಟಿ ಕೊಟ್ಟಿದ್ದಾರೆ . ಹೀಗಾಗಿ ಇದೊಂದು ಬೇಳೆ ಹೋಳಿಗೆಯ ಸಿಹಿ ಹೂರಣ ಮಾತ್ರವಾಗಿರದೆ ಸಮ್ಮಿಶ್ರ ರುಚಿಯ ಸತ್ವಭರಿತ ಸಿಹಿ ಹೋಳಿಗೆಯಾಗಿದೆ. 

 ಇಲ್ಲಿನ ಕಥಾ ಹಂದರ ಶರಾವತಿ ನದಿ ತೀರದ ಅಪ್ಪಟ ಹಸಿರು ಪರಿಸರದಲ್ಲಿ ಮೈತಳೆದು ಅಲ್ಲಿಂದ ಆಚೆ ಮುಂಬೈ ಮಹಾನಗರಿಯವರೆಗೆ ಅದರಾಚೆ ಭಾರತೀಯ ಸಂಸ್ಕೃತಿ  ಪರಂಪರೆಗಳನ್ನು ನೆಚ್ಚಿಕೊಂಡು ಭಾರತಕ್ಕೆ ಹಿಂದಿರುಗುವ ಸೋಫಿಯಾ ಪಾತ್ರದ ಮುಖೇನ ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಇಂಗ್ಲೆಂಡಿನವರೆಗೂ ಪಸರಿಸಿದ್ದಾರೆ. ಇದೇನು ಕಪೋಲ ಕಲ್ಪಿತವಲ್ಲ;  ವಿವೇಕಾನಂದರ ವಿಚಾರಲಹರಿಯನ್ನು ಒಪ್ಪಿಕೊಂಡು  ಹಾಲೆಂಡ್ ದೇಶದ ಸಹೋದರಿ ಮಾರ್ಗರೇಟ್ ವಿವೇಕಾನಂದರೊಂದಿಗೆ ಬಂದು ಸೋದರಿ ನಿವೇದಿತಾ ಎಂಬ ಹೆಸರಿನೊಂದಿಗೆ    ಹಾಗೆ ಮದರ್ ತೆರೇಸಾರಂತಹ  ಅನೇಕರನ್ನು ಇತಿಹಾಸದ ಪುಟದುದ್ದಕ್ಕೂ ನಾವು ಕಾಣುತ್ತೇವೆ. ಇಂದಿಗೂ  ಕೂಡ.  ಈ ಕಾದಂಬರಿಯಲ್ಲಿ ಬರುವ  ಪ್ರಬುದ್ಧ ವ್ಯಕ್ತಿತ್ವದ ಸಂಗೀತ ಗುರು ದೇವದತ್ತ ಶರ್ಮಾ ಅವರ ವೈಚಾರಿಕ ನಿಲುವು,  ತೆಗೆದುಕೊಂಡ ನಿರ್ಧಾರ ಅದೇನೂ ಹೇಡಿತನದಿಂದ ಕೂಡಿದ್ದು ಎಂದೆನಿಸಿಕೊಳ್ಳುವುದಿಲ್ಲ.  ಇಂದಿಗೂ ಕೂಡ ಹೆಣ್ಣಿನ ವಿಷಯದಲ್ಲಿ ಅನೈತಿಕವೆಂದು ಅಪವಾದ ಹೊರಿಸುವ ಅನೇಕ ವಿಚಾರಗಳು ರಾಮಾಯಣ ಮಹಾಭಾರತದಲ್ಲಿಯೇ ಧರ್ಮ ಸಮ್ಮತವೆಂದು ಒಪ್ಪಿಕೊಳ್ಳಲಾಗಿತ್ತು ಎಂಬುದನ್ನು ದೇವದತ್ತ ಶರ್ಮ ಅವರು ಸೋಫಿಯಾ ವಿಚಾರದಲ್ಲಿ ಪ್ರಸ್ತುತಪಡಿಸುವುದು ಗಮನ ಸೆಳೆಯುವಂತಿದೆ . 

ಯಕ್ಷಗಾನದ ಅಪ್ಪಟ ಪ್ರತಿಭೆ ಚಂದ್ರಣ್ಣ  ಯಕ್ಷಗಾನದಲ್ಲಿ ಉಂಟಾಗುತ್ತಿರುವ ಹೊಸ ಬಗೆಯ ಆಲಾಪ ಪ್ರಲಾಪಗಳೊಂದಿಗೆ ಎಂದೂ ರಾಜಿಯಾಗದೆ ಯಕ್ಷಗಾನದ ಮೂಲ ಸತ್ವವೇ ಕಳೆದು ಹೋಗುತ್ತಿರುವ ಇಂದಿನ ಕಾಲದಲ್ಲಿ ಕಳವಳಗೊಳ್ಳುತ್ತಾ ಕೊನೆಗೂ ತನ್ನತನವನ್ನೇ ಉಳಿಸಿಕೊಳ್ಳುವಲ್ಲಿ ಮೇಳದ ಯಜಮಾನರನ್ನೂ ತನ್ನ ನಿಲುವಿಗೆ  ಒಪ್ಪಿಸುವುದು  ಶಾಸ್ತ್ರೀಯವರಿಗೆ ಯಕ್ಷಗಾನದ ಕುರಿತಾಗಿ ಇರುವ ಅಪಾರ ಕಳಕಳಿಯನ್ನು ಬಿಂಬಿಸುವಂತಿದೆ.  ಅಕಾಲಿಕವಾಗಿ ಸಾವನ್ನಪ್ಪುವ ಚಂದ್ರಣ್ಣ ನಮ್ಮ ನಡುವೆಯೇ ಕಳೆದು ಹೋದ ಗ್ರಾಮೀಣ ಪ್ರತಿಭೆ ಚಂದ್ರಹಾಸ್ ಹುಡಗೋಡ್ ಅವರನ್ನು ಸ್ಮರಿಸುವಂತಿದೆ.  ಗೋಪಾಲನ ಪಾತ್ರ ಇಡೀ ಕೃತಿಯ ಉದ್ದಕ್ಕೂ ಎಲ್ಲರ ಕಥೆಗಳೊಂದಿಗೆ ಮಿಳಿತವಾಗಿ  ಲಯ ಕಾಯ್ದುಕೊಳ್ಳುವ  ವಿದ್ವತ್ಪೂರ್ಣ ನಡೆ ಮೆಚ್ಚುಗೆಗೆ ಪಾತ್ರವಾಗುವಂತಿದೆ, ಕೃಷಿಯಲ್ಲಿ ಉನ್ನತ ಪದವಿ ಪಡೆದು ಮಹಾನಗರದಲ್ಲಿ ನೌಕರಿ ಹಿಡಿದು ಸಮಾಧಾನ ಕಾಣದೆ ಪುನ: ಗ್ರಾಮೀಣ ಬದುಕಿಗೆ ಮುಖ ಮಾಡಿ ,  ಅಪ್ಪಟ ಕೃಷಿಕನಾಗಿ ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳೊಂದಿಗೆ ಗ್ರಾಮೀಣ ಪ್ರದೇಶದ ಹಲವು ಸಮಸ್ಯೆಗಳಿಗೆ ಸ್ಪಂದಿಸುತ್ತಾ ಪತ್ನಿ ಮಾಲತಿಯೊಂದಿಗೆ ಮುಂದುವರೆಯುವ ಪಾತ್ರ ಮನಸೆಳೆಯುವಂತಿದೆ.  ಕೃಷ್ಣ  ಸ್ವಂತ ಅಣ್ಣನಿಂದಲೇ ನಿರ್ಲಕ್ಷಕ್ಕೆ ಒಳಗಾಗಿ ಬರಿಗೈಲಿ ಮುಂಬೈ ಮಹಾನಗರಿಗೆ ಬಂದು ಸಂಗೀತ ಕ್ಷೇತ್ರದ ದೈತ್ಯ ಪ್ರತಿಭೆಯಾಗಿ ಬೆಳೆದು ಒಂದು ಸಂಸ್ಥೆಯ ಮುಖ್ಯಸ್ಥನಾದದು  ಜಯಂತ್ ಕಾಯ್ಕಿಣಿ ಅವರು ಮತ್ತೆ ಮತ್ತೆ ಹೇಳುವ ಹಾಗೆ ಎಲ್ಲರನ್ನೂ ಒಳಗೊಳ್ಳುವ ಮುಂಬೈ ಮಹಾನಗರಿಯ ವಿಶೇಷತೆಯೆ ನ್ನಬಹುದಾಗಿದೆ . ಶಂಕರ್ ಅವಧಾನಿಯವರ ಮುಖೇನ ಒಂದು ಊರಿನ ಜನರ ಕಷ್ಟ ಸಂಕಟಗಳಿಗೆ ಸ್ಪಂದಿಸುವ ಹಿರಿಯ ಜೀವಗಳನ್ನು ನಾವೆಲ್ಲ ಚಿಕ್ಕವರಿದ್ದಾಗ ನೋಡಿದ್ದೇವೆ.ಈಗ ಹುಡುಕಬೇಕಷ್ಟೆ!  ಈ ಪಾತ್ರದ ಮುಖೇನ ರಚಿತವಾದ ಧರ್ಮ ಸೂಕ್ಷ್ಮತೆಯನ್ನು ಒಳಗೊಂಡ ಕೃತಿ  ಮತ್ತು ವಿಶ್ಲೇಷಣೆ ಚಿಂತನೆಗೆ ಹಚ್ಚುವಂತಿದೆ ಮತ್ತು ನಮ್ಮ ಪ್ರಾಚೀನ ಸಂಸ್ಕೃತಿಯಲ್ಲಿ ಬೆರೆತುಕೊಂಡಿರುವ ಅನೇಕ ವಿಚಾರಗಳನ್ನು ಒಪ್ಪಿಕೊಳ್ಳಲೇಬೇಕೆಂದಿಲ್ಲ.. ಬದಲಾದ ಕಾಲಘಟ್ಟದಲ್ಲಿ ಮೌಲ್ಯಯುತವಾದುದನ್ನು ಉಳಿಸಿಕೊಳ್ಳಬೇಕಾಗಿದೆ. ಅರ್ಥಹೀನ ಎನಿಸಿದ್ದನ್ನು ಬಿಡಬಹುದಾಗಿದೆ ಎಂಬ ಪ್ರಗತಿಪರ ಧೋರಣೆ ಮೆಚ್ಚುವಂತದ್ದು ಮತ್ತು ಇಂದಿನ ಹಲವು ಧರ್ಮಾಂಧರ ತಪ್ಪು ತಿಳಿವಳಿಕೆಯನ್ನು  ಒರೆಗೆ ಹಚ್ಚುವಂತಿದೆ. ಹಾಗೆಯೇ ದೇವದತ್ತ ಶರ್ಮಾ ಅವರಿಂದ ಮುಂಬೈ ಮಹಾನಗರದಲ್ಲಿ ತಲೆ ಎತ್ತುವ ‘ ಭಾರತೀಯ ಸಂಸ್ಕೃತಿ ಅಧ್ಯಯನ ಕೇಂದ್ರದ ಕಲ್ಪನೆ ನಮ್ಮ ಪ್ರಾಚೀನ ನಲಂದಾ, ತಕ್ಷಶಿಲಾ ಮಹಾವಿದ್ಯಾಲಯಗಳನ್ನು ಸ್ಮರಿಸುವಂತಿದೆ ಮತ್ತು ಪ್ರಸ್ತುತ ಕಾಲಘಟ್ಟದಲ್ಲಿ ಇಂತಹ ಮಹಾವಿದ್ಯಾಲಯಗಳ ಅಗತ್ಯತೆ ಇದೆ ಎಂಬುದನ್ನು ಶಾಸ್ತ್ರೀಯವರು ಸೂಚ್ಯವಾಗಿ ಅರುಹಿದಂತಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಕ್ಲೈಮ್ಯಾಕ್ಸ್ ಸೋಫಿಯಾ ವೃದ್ಧಾಪ್ಯದಲ್ಲಿ ದೇವದತ್ತ ಶರ್ಮಾ ಅವರನ್ನು ಅರಸಿ ಹೊರಡುವುದು ಸುಖಾಂತ್ಯ ಕಾಣುವುದರ ಜೊತೆಗೆ ಓದುಗರ ಮನಸ್ಸಿಗೆ ಹಿತ ನೀಡುತ್ತದೆ ಜೊತೆಗೆ ಗಂಡ ಹೆಂಡತಿ ನಡುವಿನ ಸಂಬಂಧವೆಂಬುದು (ಅದಾವುದೇ ಬಗೆಯ ವಿವಾಹವಾಗಿರಲಿ)  ಆತ್ಯಂತಿಕವಾದುದು; ಅದುವೆ ಭಾರತೀಯ ಸಮಾಜದ ಭದ್ರ ಅಡಿಪಾಯ ಎಂಬುದನ್ನು ಸೋಫಿಯಾ ಕೂಡ ಮನಗಂಡಂತಿದೆ.

ಹೀಗೆ ಲಯ ಕಾದಂಬರಿ ವಿಭಿನ್ನ ಕಥಾ ಹಂದರವನ್ನು ಹೊಂದಿರುವ  ಹಲವು ಕ್ಷೇತ್ರಗಳ ವಿದ್ವತ್ಪೂರ್ಣ ವಿಚಾರಗಳನ್ನು ಒಳಗೊಂಡಿರುವ ಮೌಲ್ಯಯುತ ಕೃತಿಯಾಗಿದೆ.. ಅಭಿನಂದನೆಗಳು ಶಾಸ್ತ್ರೀಯವರಿಗೆ…

‍ಲೇಖಕರು Admin

20 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading