ಲತಾ ರಮೇಶ್ ವಾಲಿ ಓದಿದ ‘ತಂತಿ ತಂತಿಗೆ ತಾಗಿ’

ಲತಾ ರಮೇಶ ವಾಲಿ

ಎತ್ತ ನೋಡಿದರೂ ಕವಿತೆಯ, ಕಥೆಗಳ, ಕಾದಂಬರಿಗಳ ಇನ್ನೂ ಅನೇಕಾನೇಕ ಸಾಹಿತ್ಯ ಪ್ರಕಾರದ ಸಾಲುಗಳೇ ಕಾಣಿಸುತ್ತಿರುವ ಸಾಹಿತ್ಯದ ದಟ್ಟ ಕಾನನದಲ್ಲಿ ಸಂಪಿಗೆ ತನ್ನದೇ ಆದ ವಿಶೇಷ ಸುವಾಸನೆಯಿಂದ ಎಲ್ಲರ ಗಮನ ತನ್ನತ್ತ ಸೆಳೆಯುವಂತೆ; ವಿಶೇಷ ಕೃತಿಯೊಂದನ್ನು ಓದುಗರ ಕೈಗಿತ್ತಿದ್ದಾರೆ ಕವಯತ್ರಿ ದೀಪಾ ಗೋನಾಳ. ಇವರು ಅಪ್ಪಟ ಗ್ರಾಮೀಣ ಪ್ರತಿಭೆ. ಕಣ್ಣಂಚಿಗೆ ನಿಲುಕುವ ಪ್ರತಿ ವಸ್ತುವನ್ನು, ಪ್ರತಿ ಒಡನಾಟವನ್ನು, ಅನುಭವವನ್ನು ಕವಿತೆಯಾಗಿಸಬಲ್ಲ ಸಾಹಿತ್ಯದ ಒಡನಾಡಿ, ಪ್ರತಿಯೊಬ್ಬರಲ್ಲೂ ಸ್ನೇಹಪರತೆಯನ್ನೇ ಬಯಸುವ ಜೀವಪ್ರೀತಿಯ ಗೆಳತಿ. ತಂತಿ ತಂತಿಗೆ ತಾಗಿದಾಗ ವಿದ್ಯುತ್ ಪ್ರವಹಿಸುವಂತೆ ತನ್ನೊಳಗಿನ ಅನುಸಂಧಾನವನ್ನೇ ಕವಿತೆಯಾಗಿಸಿಕೊಂಡ ಜೀವನ್ಮುಖಿ. ಜೀವಮಿಡಿತದ ಈ ಕವನ ಸಂಕಲನಕ್ಕೆ “ಮುಚ್ಚಿಲ್ಲದ ಬಿಚ್ಚು ಮನಸ್ಸಿನ ಕಾವ್ಯ” ಎನ್ನುವ ಶೀರ್ಷಿಕೆಯಡಿಯಲ್ಲಿ ಹಾವೇರಿಯ ಹಿರಿಯ ಸಾಹಿತಿಗಳಾದ ಶ್ರೀ ಸತೀಶ್ ಕುಲಕರ್ಣಿ ಸರ್ ಅವರ ಮುನ್ನುಡಿ ಈ ಕೃತಿಗೆ ಮುಕುಟದಂತಿದೆ. ಜೊತೆಗೆ ಸದಾ ಕ್ರಿಯಾಶೀಲರಾಗಿರುವ ಅತ್ಯುತ್ತಮ ಪ್ರಾಧ್ಯಾಪಕಿಯೂ ಆಗಿರುವ ಶ್ರೀಮತಿ ಎಂ ಆರ್ ಕಮಲ ಮೇಡಮ್ ಅವರ ಬೆನ್ನುಡಿಯ ಸಾಲುಗಳು ದೀಪಾ ಅವರನ್ನು ಇನ್ನಿಲ್ಲದಂತೆ ಪ್ರೋತ್ಸಾಹಿಸುತ್ತವೆ.

ದೀಪ
ಕೊರೆವ ಚಳಿಯ ಮಧ್ಯೆ
ಇಷ್ಟು ಶಾಖವೆರೆವ ಜೀವಸೆಲೆ
ಹೆಣ್ಣು ಗುಪ್ತಗಾಮಿನಿಯಾದರೂ
“ಜೀವಸೆಲೆ” ಎಂದು ಹೇಳುತ್ತ ಒಂದು ದೀಪ ಬೆಳಕೂ ಕೊಡಬಲ್ಲದು; ಜೊತೆಗೆ ಶಾಖವನ್ನು ಕೂಡ ಎಂದು ನಾನಾರ್ಥ ಒಳಗೊಳ್ಳುವಂತೆ ಬರೆಯಬಲ್ಲ ಛಾತಿ ದೀಪಾ ಅವರದು. ತನ್ನನ್ನೇ ಸುಟ್ಟುಕೊಳ್ಳುವ ದೀಪ ಒಂದಕ್ಕೊಂದು ಅಂಟಿಕೊಂಡರೆ ಸಾಕು ಬೆಳದಿಂಗಳನ್ನೂ ಮೀರಿಸಬಲ್ಲ ಅದಮ್ಯ ಚೇತನ ಎಂಬುದನ್ನು ಬಹಳ ಸೂಚ್ಯವಾಗಿ ಹೇಳುತ್ತಾರೆ.

‘ಮೌನಕ್ಕೆ ನನ್ನ ಧಿಕ್ಕಾರ’ ಎನ್ನುವ ಕವಿತೆಯಲ್ಲಿ ಮೌನವೆ ತನ್ನ ಬದುಕಿನ ಆನೆಬಲ ಎಂದು ಬರೆದುಕೊಳ್ಳುವ ಕವಯತ್ರಿ ಅದೇ ಪ್ಯಾರಾದ ಕೊನೆಯ ಸಾಲಿನಲ್ಲಿ ತನ್ನೈದು ವಸಂತಗಳ ನುಂಗಿದ ಮೌನಕ್ಕೆ ಧಿಕ್ಕಾರ ಎನ್ನುತ್ತಾರೆ. ಅಂದರೆ ಕವಿ ಇಲ್ಲಿ ಆ ಮೌನವಿರದಿದ್ದರೆ ಈ ಐದು ವಸಂತಗಳೂ ಮುಗಿಯುತ್ತಿರಲಿಲ್ಲ ಎನ್ನುವ ಅರಿವಿನೊಂದಿಗೆ ಈ ಸಾಲುಗಳನ್ನು ಬರೆದಿದ್ದಾರೆ ಎನ್ನುವುದು ನನ್ನ ಇಂಗಿತ.

ಪ್ರತಿಯೊಬ್ಬ ಮಹಿಳೆಗೂ ಬದುಕು ಹೋರಾಟವೇ ಎನ್ನುವುದನ್ನು ಒಬ್ಬ ಬರಹಗಾರ್ತಿಯಾಗಿ, ಕವಯತ್ರಿಯಾಗಿ ದೀಪಾ ಅವರು ಕೂಡ “ಗೊಡವೆ ಮತ್ತು ಅರಿವು” ಎನ್ನುವ ಕವಿತೆಯಲ್ಲಿ ಈ ಕೆಳಗಿನ ಸಾಲುಗಳೊಂದಿಗೆ ತಮ್ಮನ್ನು ತೆರೆದುಕೊಳ್ಳುತ್ತಾರೆ. ಪುರುಷ ಪ್ರಧಾನ ಸಮಾಜದಲ್ಲಿ ದ್ವಿತೀಯ ದರ್ಜೆಯ ಪ್ರಜೆಯಂತಿರುವ ಹೆಣ್ಣು ಕೌಟುಂಬಿಕ ವಲಯದಲ್ಲಂತೂ ಅವಮಾನಿತಳಾಗದ ಉದಾಹರಣೆಗಳೇ ಇಲ್ಲವೇನೋ. ಪ್ರತಿ ಹೆಣ್ಣಿನ ಕುಟುಂಬದ ತಲ್ಲಣಗಳೇ ಈ ಸಾಲುಗಳು.

ಬದುಕು ಹೋರಾಟವೆಂಬುದು
ಅರೆಗಳಿಗೆ ತಡವಾಗಿಯಾದರೂ ಅರಿವಾಗಿದೆ
ಗೊಡವೆಗಳು ಬೇಡ ಎನ್ನುವುದು ಬೇಡ
ತಡೆಗೋಡೆಗಳ ನಿಲ್ಲಿಸಿ ಬಚಾವಾಗುವುದು ಸಾಕು.

ಹೆಣ್ಣೊಬ್ಬಳು ಎಲ್ಲ ಕಷ್ಟಗಳನ್ನು ಮೀರಿ ಹೇಗೆ ಎದ್ದುಬರಬಲ್ಲಳು ಎನ್ನುವುದಕ್ಕೆ ಉದಾಹರಣೆಯೆಂಬಂತೆ ಇದೇ ಕವಿತೆಯ

ಬಡೆದುರುಳಿಸುವವಂಗೆ ದಾರ್ಷ್ಯ್ಟವಷ್ಟೇ
ಗೆದ್ದು ಬರುವವಂಗೆ ಜೀವಚೈತನ್ಯವೇ ಎಲ್ಲ.
ಎಂದು ಹೇಳುವಲ್ಲಿ ದಾರ್ಷ್ಯ್ಟತನ ಮೆರೆವವರಿಗೆ ಕಪಾಳಮೋಕ್ಷ ಮಾಡಿದಂತಿದೆ. ಇಷ್ಟೆಲ್ಲ ದಿಟ್ಟತನ ತೋರಿದ ಕವಯತ್ರಿ ಮುಂದಿನ ಕವಿತೆಯಲ್ಲಿ ಮಗುವಾಗುತ್ತಾರೆ, ಮಮತೆಯಾಗುತ್ತಾರೆ, ಪ್ರಕೃತಿ ಮಾತೆಯನ್ನು ಆರಾಧಿಸುವ, ಅದರ ಕಾಳಜಿ ಮಾಡುವ ಸಹೃದಯಿಯಾಗುತ್ತಾರೆ. “ತಂತಿ ತಂತಿಗೆ ತಾಗಿ” ಕವಿತೆಯಲ್ಲಿ ತಮ್ಮ ಸಾಮಾಜಿಕ ಕಳಕಳಿಯಿಂದ ಉಂಟಾದ ಕಾಳಜಿಯಲ್ಲಿ ಪರಿಸರ ಹಾಳಾಗುವುದನ್ನು, ಗಿಡಮರ ಕಾಣಿಸದಿರುವುದನ್ನು ಮನಸ್ಸಿಗೆ ತೀವ್ರವಾಗಿ ತೆಗೆದುಕೊಂಡು ನೊಂದುಕೊಳ್ಳುವ ಕವಯತ್ರಿ;

ಕತ್ತೆತ್ತಿದೆ ಕಾಣಲಿಲ್ಲ ಗಿಡ ಮರ
ತಂತಿ ತಂತಿಗೆ ತಾಗಿ ಭುಗಿಲೆದ್ದ ಧಗೆ
ಎದೆ ಝಲ್
ಛಳಕ್ಕನೇ ಮುರಿದ ತಂ
ಮತ್ತೆ ಕೂಡಿಕೊಳಲಾರದು
ಹೊತ್ತುರಿಯುವ ನಭದಲ್ಲೀಗ
ಹಕ್ಕಿಗಳ ರೆಕ್ಕೆ ಸುಟ್ಟರೆಂಬ ಭಯ!

ಎಂದು ಭಯ ಬೀಳುವ ಕವಯತ್ರಿ ಪರಿಸ, ಹಕ್ಕಿಗಳ ಕಾಳಜಿ ಮತ್ತು ಅವುಗಳನ್ನು ಉಳಿಸಿಕೊಳ್ಳುವ ಬಗ್ಗೆ ಅತ್ಯಂತ ಆಪ್ತವಾಗಿ ತುಂಬ ಒಲವಿನಿಂದ ಮಾತನಾಡುತ್ತಾರೆ. ಪ್ರಕೃತಿಯನ್ನೇ ಧ್ಯಾನಿಸುವ ಕವಯತ್ರಿ ಗಿಡ ಮರ ಪಕ್ಷಿ ಪ್ರಾಣಿಗಳಿಗೂ ಗೆಳತಿಯಾಗಬಲ್ಲೆ ಎಂದು ನಿರೂಪಿಸಿಕೊಳ್ಳುತ್ತಾರೆ. ಹಾಗೇ ಮುಂದೆ ಬರೆಯುತ್ತ “ಆ ನಿನ್ನ ಪಾಂಡಿತ್ಯಕ್ಕೆ” ಕವಿತೆಯಲ್ಲಿ ತುಂಬ ಬಿಚ್ಚು ಮನಸ್ಸಿನಿಂದ ಅತ್ಯಂತ ನೇರವಾಗಿ ಮುಖಕ್ಕೆ ಹೊಡೆದಂತೆ, ಮನಸ್ಸಿನಲ್ಲುಂಟಾಗುವ ಪ್ರೇಮಾಲಾಪಕ್ಕೂ ನಿನ್ನ ಇಷ್ಟುದ್ದದ ಓದಿಗೂ ಏನೇನೂ ಸಂಬಂಧವಿಲ್ಲ ಎನ್ನುವುದನ್ನು,

“ಪ್ರೇಮದ ಮೊದಲಧ್ಯಾಯವೇ ತಿಳಿಯದ
ಆ ನಿನ್ನ ಸಾಲು ಸಾಲು ಸ್ನಾತಕೋತ್ತರಗಳಿಗೆ
ನನ್ನ ಧಿಕ್ಕಾರವಿರಲಿ”

ಎಂದು ಪ್ರೇಮದ ರೀತಿಯನ್ನು ಜಗಜ್ಜಾಹೀರುಗೊಳಿಸುತ್ತಾರೆ. ತೆಗೆದುಕೊಂಡ ಸಾಲು ಸಾಲು ಡಿಗ್ರಿಗಳಿಗೂ ಮನದಾಳದಲ್ಲಿ ಸ್ಫುರಿಸುವ ಒಲವಿಗೂ ಚೂರು ಸಂಬಂಧವೇ ಇಲ್ಲ ಎಂದು ತಕರಾರು ತೆಗೆಯುವ ಕವಯತ್ರಿ ತನ್ನ ಪ್ರೇಮಿಗೆ ಕೆ ಎಸ್ ನರಸಿಂಹಸ್ವಾಮಿಯವರ ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ ನಿನ್ನೊಳಿದೆ ನನ್ನ ಮನಸು” ಸಾಲನ್ನು ಓದಿ ಹೇಳಬೇಕಿತ್ತೇನೋ.

“ಮತ್ತೆ ಕೂಡಿ” ಎನ್ನುವ ಕವಿತೆಯಲ್ಲಿ ಒಲವು ಮತ್ತು ಪ್ರೇಮ ಎಷ್ಟು ಸೂಕ್ಷ್ಮ ಎನ್ನುವುದನ್ನು ತುಂತುರು ತುಂತುರಾಗಿ ಉದುರುವ ಮಳೆಹನಿಯನ್ನು ಉದಾಹರಣೆಯಾಗಿ ಬಳಸಿಕೊಂಡು ವಿವರಿಸುತ್ತಾರೆ.
“ಮತ್ತೆ…..
ಕೂಡಿಡಬೇಕು
ಹನಿಹನಿ ತೇವ ಜೋಪಾನವಾಗಿ
ತುಸುವೇ ತುಸು ಘರ್ಷಿಸಬೇಕು….
ಭುಜಕ್ಕೆ ಭುಜ ತಾಕಿದಷ್ಟೇ ಮೃದುವಾಗಿ
ಸುರಿಯಬೇಕು”

ಇಂತಹ ಸಾಕಷ್ಟು ಕವಿತೆಗಳ ಮೂಲಕ ಓದುಗರ ಮನಸ್ಸನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಾರೆ. ಮತ್ತೆ ದಾಂಪತ್ಯ ಮತ್ತು ಒಲವಿನ ಬಗ್ಗೆ ಮಾತನಾಡುವ ಕವಯತ್ರಿ ಅವರ “ನೋವು ನುಂಗಿಯೂ” ಕವಿತೆಯಲ್ಲಿ ದಾಂಪತ್ಯದ ಚೌಕಟ್ಟಿನ ಒಳತೋಟಿಯನ್ನು ತುಂಬ ಸೂಕ್ಷ್ಮವಾಗಿ ತೆರೆದಿಡುತ್ತಾರೆ. ಎಷ್ಟೊಂದು ಸಹಜವಾಗಿ, ಸರಳವಾಗಿ ಹೇಳುತ್ತಾರೆಂದರೆ ಪ್ರತಿ ಓದುಗನಿಗೂ ಅರೆ ಹೌದಲ್ಲ ನಿತ್ಯ ಜೀವನದ ನನ್ನ ಮನದ ಮಾತು ;ದೀಪಾ ಇದನ್ನೂ ಕವಿತೆಯಾಗಿಸಿದ್ದಾರಲ್ಲ! ಎನ್ನಿಸದೆ ಇರದು.

“ವೈರಿಯಾಗಿದ್ದರೆ ತೊರೆದು ಕಾಲಕಸವೆಂದು
ದಾಟಿಕೊಂಡು ಮುಂದೆ ಹೋಗಿ
ತುಂಬ ಕಾಲವಾಗಿರುತ್ತಿತ್ತು
ಸ್ನೇಹವಷ್ಟೇ ಉಳಿದಿದ್ದರೆ ಕ್ಷಣಕಾಲ ಸುಮ್ಮನಿದ್ದು
ಮುನಿಸ ತೋರಿ ಗುದ್ದಾಡಬಹುದಿತ್ತು
ಆದರಿದು ಪ್ರೀತಿ; ಸಮನಾಗಿ
ಕಾಳಜಿ, ಜಗಳ, ಸಮಯ ಬೇಡುತ್ತದೆ
ಸಿಗದಿದ್ದಾಗ ನೋವಾಗುತ್ತದೆ.
ಈ ಸಾಲುಗಳು ಒಂದಲ್ಲ ಒಂದು ಸಂದರ್ಭದಲ್ಲಿ ಪ್ರತಿ ದಂಪತಿಯ ಪಾಲಿಗೆ ಸಾಲುಗಳಾಗಿಯೇ ಇರುತ್ತವೆ. ಅಲ್ಲಿಗೆ ಕವಿತೆಗೆ ಮತ್ತು ಕವಯತ್ರಿಗೆ ಒಂದು ಸಾರ್ಥಕ್ಯ ದೊರೆಯಿತು ಎಂದೇ ಹೇಳಬಹುದು. ‘ಎಷ್ಟು ಬರೆದರೂ’ ಕವಿತೆಯಲ್ಲಿ ಬಹಳ ಅದ್ಭುತ ಸಾಲುಗಳನ್ನು ನಮಗೆ ಕೊಡುತ್ತಾರೆ. ಆ ಸಾಲುಗಳು ಹೀಗಿದೆ……..

“ನನ್ನ ಧ್ವನಿ ಕೇಳಿಸಿದಾಗಲೇ
ಅದರೊಳಗಿನ ಕಣ್ಣೀರ ಹನಿ ಸಿಡಿದದ್ದು
ಕರ್ಣಪಟಲಕ್ಕೆ ತಾಕಬೇಕಿತ್ತು”

ಕಣ್ಣೀರು ಕಣ್ಣಿನಿಂದ ಬಂದರೆ ಮಾತ್ರ ಕಣ್ಣೀರಲ್ಲ ಅದು ಧ್ವನಿಯಲ್ಲೂ ಇರುತ್ತದೆ ಎಂದು ಬಹಳ ವಿಭಿನ್ನ ಪದಗಳಲ್ಲಿ ಹೇಳುತ್ತಾರೆ. ಜೊತೆಗೆ ಸ್ನೇಹವಾಗಲಿ ಪ್ರೇಮವಾಗಲಿ ಅಲ್ಲಿ ಕ್ರಿಯೆಗೆ ಪ್ರತಿಕ್ರಿಯೆ ಸಿಕ್ಕಾಗ ಮಾತ್ರ ಅದು ಯೋಗ್ಯ ಇಲ್ಲವಾದರೆ ಅಂಥ ಬದುಕಿನ ಬಂಡಿಯ ಚಲನೆಯೇ ನಿಧಾನ ಎಂದು ಕೊರಗುತ್ತಾರೆ.

ಇನ್ನು’ ಗದ್ಯ ಪದ್ಯ ಇತ್ಯಾದಿ’ ಕವಿತೆಯಲ್ಲಿ ಕವಯಿತ್ರಿ ತಮ್ಮ ಪ್ರಯಾಣದ ಪ್ರತಿಕ್ಷಣವೂ ಸಾಹಿತ್ಯದ ಕುರಿತಾಗಿಯೇ ಯೋಚಿಸುತ್ತಾರೆನ್ನುವುದಕ್ಕೆ ಸಾಕ್ಷಿಯೆಂಬಂತೆ ಈ ಕೆಳಗಿನ ಸಾಲುಗಳು ಕಾಣಸಿಗುತ್ತವೆ.
ಇಲ್ಲಿ
ದಾರಿಯ ಇಕ್ಕೆಲಗಳಲ್ಲೂ
ಹರಡಿಕೊಂಡಿರುವ
ಗದ್ದೆಗಳೇ ಗದ್ಯ
ಇನ್ನುಳಿದಂತೆ ಅಲ್ಲಲ್ಲಿ ಸಿಗುವ
ತೋಟ ಪಟ್ಟಿಗಳೇ ಪದ್ಯ

“ನಿಲ್ಲಬಾರದು” ಕವಿತೆಯಲ್ಲಿ ಬದುಕಿಗೆ ಇತಿಶ್ರೀ ಹಾಡಬೇಕೆಂದುಕೊಂಡಾಗೆಲ್ಲ ಪ್ರಕೃತಿಯೇ ಪಾಠ ಕಲಿಸಿ ತಡೆದಂತೆನಿಸುತ್ತದೆ ಎನ್ನುವುದನ್ನು, ತುಂಬಾ ಚೆಂದದ ಸಾಲುಗಳಲ್ಲಿ ಕವಿತೆಯಾಗಿಸಿದ್ದಾರೆ ಕವಿಯತ್ರಿ.
ಈ ಬದುಕು ಇಲ್ಲಿಗೆ ನಿಲ್ಲಿಸಿ
ಸಾಕು ಎದ್ದು ಹೋಗುವ
ಎಂದಾಗೊಮ್ಮೆ ಅಡ್ಡಾಗುವ ಇವರು
ಮತ್ತೊಮ್ಮೆ ನಿಲ್ಲದಂತೆ ಬದುಕಲು ಕರೆಕೊಟ್ಟಂತಾಗುವುದು ಅದ್ಯಾಕೋ…..?

ಎಂದು ಪ್ರಶ್ನಿಸುತ್ತಲೇ ಸಾಕಷ್ಟು ನೊಂದ ಮನಸ್ಸುಗಳಿಗೆ, ಅರ್ಧದಲ್ಲೇ ಬದುಕನ್ನ ಮುಗಿಸಿಕೊಳ್ಳಬೇಕೆನ್ನುವವರಿಗೆ ಈ ಕವಿತೆಯ ಮೂಲಕ ಉತ್ತರವಾಗಿದ್ದಾರೆ. ಪ್ರಕೃತಿಯು ಕೂಡ ಇಂತಹ ಸಾವುಗಳನ್ನು ಒಪ್ಪುವುದಿಲ್ಲ ಎನ್ನುವುದನ್ನು ಪ್ರಕೃತಿಯೇ ಕಾಪಾಡಿತು ಎಂಬರ್ಥದಲ್ಲಿ ಹೇಳಿಕೊಳ್ಳುತ್ತಾರೆ.

ಪ್ರೇಮವನ್ನು ಹೂವಿನ ರೂಪದಲ್ಲಿ, ಒಲವಿನ ರೂಪದಲ್ಲಿ, ಹಾಡಿನ ರೂಪದಲ್ಲಿ, ಕವಿತೆಯ ರೂಪದಲ್ಲಿ, ಹೊಗಳಿಕೆ ರೂಪದಲ್ಲಿ, ಕಾಣುತ್ತಿದ್ದೆವಷ್ಟೇ. ಆದರೆ ಕವಯತ್ರಿ ದೀಪ ಅವರು ಒಂದು ಹೆಜ್ಜೆ ಮುಂದೆ ಹೋಗಿ ಕೆಂಡದೊಂಡಿಯಲ್ಲೂ ಪ್ರೇಮವನ್ನೇ
ಗುನುಗುಗುತ್ತಿದ್ದಾರೆ, ಅನುಭವಿಸುತ್ತಿದ್ದಾರೆ. ಅದೇ ಅನುಭವವನ್ನು ಈ ಸಾಲುಗಳಲ್ಲಿ ಹೀಗೆ ಹೇಳುತ್ತಾರೆ
ನಿನ್ನ ಮಾತು-ಕತೆ ತಲ್ಲೀನತೆ ನೆನೆಯುತ್ತ
ಒಲೆಯ ಬಾಯಿಗೆ ಸೌದೆ ಸರಿಸುತ್ತಾ ಕುಳಿತವಳಿಗೆ
ಕೈ ಕೆಂಡವಾದಾಗಲೇ ಗೊತ್ತಾದದ್ದು
ಎಂದು ಸುಟ್ಟ ಕೈಗೆ ಮುತ್ತಿಟ್ಟೆ

“ಪ್ರೇಮದ ವಿಭಿನ್ನ ಬರಹಗಳೆಂದೇ ಪರಿಗಣಿಸಬೇಕಾಗುತ್ತದೇನೋ ಈ ಸಾಲುಗಳನ್ನು.”ಗೆಳತಿಯೊಬ್ಬಳ ಎದೆಯ ತಳಮಳವನ್ನು ಅರ್ಥೈಸಿಕೊಂಡು ಕವಿತೆಯಾಗಿಸಿದ ದೀಪಾವ ಅವರು ಬಹಳ ಸುಂದರ ಪದಗಳಲ್ಲಿ ಆ ನೋವನ್ನು ಕಟ್ಟಿಕೊಡುತ್ತಾರೆ.
ಕೊಳೆತ ಟೊಮೇಟೊ ಬಣ್ಣದ
ಕಣ್ಗುಂಡಿ ಕಂಡಾಗಲೇ
ಊಹಿಸಿದೆ ಇಂದಿವಳಿಗೆ
ನೇರ ಎದೆಗೆ ಇರಿದಿದ್ದಾರೆಂದುಅದೇ ಪದ್ಯದ ಕೊನೆಯಲ್ಲಿ
ನೀ ಅತ್ತಾಗ ಅತ್ತು ನಕ್ಕಾಗ ನಕ್ಕು
ನಿನದೇ ಕನ್ನಡಿ ಎದುರು
ನಿನಗೆಂಥ ಬಿಗುಮಾನ…..!

ಇದೇ ಕೃತಿಯಲ್ಲಿ ಗಜಲ್ಗಳನ್ನು ಬರೆದಿರುವ ದೀಪಾ, ಗಜಲ್ ಗಳನ್ನು ಯಶಸ್ವಿಯಾಗಿ ಬರೆಯಬಲ್ಲರು ಎಂದು ಸಾಬೀತು ಮಾಡಿಕೊಳ್ಳುತ್ತಾರೆ.

” ಮರೆಯಾಯಿತು ಮುಗ್ದತೆ, ಕರಗಿತು ಮಾನವೀಯತೆ,ಹುಡುಕಬೇಕಿದೆ ನೈತಿಕತೆ:
ಮಾತಿನ ಮಲ್ಲರ ಊರಿನಲ್ಲಿ ಸಿದ್ದಾಂತಗಳು ಕಳೆದು ಹೋಗಿವೆ ಎಂದಿನಂತೆ ಸಾಕಿ…

ಎಂದು ಚಿಂತಿಸುವ ಕವಿ ನಾವು ನಿತ್ಯ ಬದುಕುವ ವ್ಯವಸ್ಥೆಗೆ ನಿರ್ಭಿಡೆಯಿಂದ ಹಿಡಿದ ಕೈಗನ್ನಡಿಯಂತಿದೆ ಈ ಸಾಲುಗಳು. ಪ್ರತಿ ಮಹಿಳೆಯರನ್ನು ಆಕರ್ಷಿಸುವ ಇಲ್ಲೊಂದಷ್ಟು ಸಾಲುಗಳು ಹೀಗಿವೆ. “ಸೂಜಿ ಮಲ್ಲೆ ಕಣ್ಣ ತುಂಬ ಹನಿಯು ತುಂಬಿ ತಂದ ದಿನ ಮದುವೆಯಂದು ಗೋಳು ಆಗದಿರಲಿ ನಿನ್ನ ಬಾಳು ನನ್ನಂತೆ ಅಂದೆಯಲ್ಲ ಗೆಳತಿ “

ಈ ಸಾಲುಗಳನ್ನು ಓದುವಾಗ ತುಟಿಯ ಮೇಲೆ ಸಣ್ಣ ನಗುವೊಂದು ಮೂಡಿತು ಕಾರಣ ಮದುವೆಯಾದ ಪ್ರತಿಯೊಬ್ಬ ಹೆಣ್ಣು ಮಕ್ಕಳ ಬಾಯಲ್ಲೂ ಈ ಮಾತು ಬಂದಿರುತ್ತದೆ. ಮದುವೆಯ ಬಗೆಗಿನ ಅವಳ ಕನಸುಗಳಿಗೂ ಅವಳು ಮದುವೆಯಾದ ಮೇಲೆ ಬದುಕುವ ವಾಸ್ತವ ಬದುಕಿಗೂ ಇರುವ ಅಜಗಜಾಂತರ ವ್ಯತ್ಯಾಸವು ಇರಬಹುದೇನೋ. ಬಹುಶಹ ನನಗೂ ಗೊತ್ತಿಲ್ಲ ಚರ್ಚೆಯನ್ನಂತೂ ಈ ಸಾಲುಗಳು ಹುಟ್ಟು ಹಾಕಿವೆ ವಿಚಾರಿಸಲೇಬೇಕಾದ ವಿಷಯ.

ಹೀಗೆ ಇಲ್ಲಿ ಇನ್ನು ಅನೇಕ ಕವಿತೆಗಳು ಕಜಲ್ ಗಳು ಓದುಗರನ್ನು ಹಿಡಿದಿರಬಲ್ಲ ಚಳೆಯವಲ್ಲ ಕವಿತೆಗಳ ಇವೆ ಪ್ರಮುಖವಾಗಿ ನೌಟಂಕಿ ಪ್ರಕಾಶನದಲ್ಲಿ ಪ್ರಕಟಗೊಂಡ ಈ ಪುಸ್ತಕದ ಮುಖಪುಟ ಕೂಡ ತುಂಬಾ ವಿಭಿನ್ನವಾಗಿ, ಸುಂದರವಾಗಿ, ಮೂಡಿಬಂದಿದೆ. ಅಲ್ಲಿರುವ ಕೃತಿಯ ಶೀರ್ಷಿಕೆಯಂತೆ ತಂತಿಗಳು ಕಂಡರೂ ಕೂಡ ಹಾಡು ಕೇಳಿಸುವ ಗ್ರಾಮಾಫೋನಿನಂತಿರುವುದು ಅದರ ವಿಶೇಷತೆಯನ್ನು ಹೆಚ್ಚಿಸಿದೆ.

ದೀಪಾವರ ಸಾಹಿತ್ಯದ ಜಗತ್ತು ಇನ್ನಷ್ಟು ವಿಸ್ತರಿಸಲಿ ಅವರ ನಗುಮುಖ ಸದಾ ಹೀಗೆ ಇರಲಿ. ಬದುಕು ಬಂಗಾರವಾಗಲಿ ಇನ್ನಷ್ಟು ಮತ್ತಷ್ಟು ಸ್ನೇಹಿತರನ್ನು ಒಳಗೊಳ್ಳಲಿ, ಅವರ ಇನ್ನಷ್ಟು ಬರಹಗಳು ಜೊತೆಗೆ, ಗಜಲ್ ಗಳು ಪುಸ್ತಕ ರೂಪದಲ್ಲಿ ಬರಲಿ ಎನ್ನುವ ಶುಭ ಹಾರೈಕೆಗಳೊಂದಿಗೆ.

‍ಲೇಖಕರು avadhi

February 10, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಗೋಪಾಲ ತ್ರಾಸಿ

    ಚೆಂದದ ಕೃತಿ ವಿಶ್ಲೇಷಣೆ.. ಅಭಿನಂದನೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: