ಸದಾಶಿವ್ ಸೊರಟೂರು ಕಥಾ ಅಂಕಣ – ಬ್ಲೂ ಟಿಕ್..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

29

ಮುಖದ ಮೇಲೆ ಕೆದರಿಕೊಂಡು ಹರಡಿದ್ದ ಕೂದಲುಗಳನ್ನು ಆಶಾ ಹಿಂದಕ್ಕೆ ಸರಿಸಿದಳು. ಅವಳ ಮುಖದ ತುಂಬಾ ಮೋಡಗಳಿದ್ದವು. ಆಸ್ಪತ್ರೆಯ ದಪ್ಪನೆ ದಿಂಬು ಎಳೆದುಕೊಂಡು ಅದನು ಗೋಡೆಗೆ ಆನಿಸಿ ಒರಗಿದಳು. ಸದಾ ಮಲಗಿ ಮಲಗಿ ಬೆನ್ನಲ್ಲಿ ಅವಳಿಗೆ ಸಣ್ಣ ನೋವು. ಸೊಂಟದಲ್ಲಿ‌ ಒಮ್ಮೆ ಚಳಕ್ ಅಂದ ಅನುಭವ. ಪಕ್ಕದ ಬೆಡ್ ನಲ್ಲಿ ಮಲಗಿದ್ದ ಎರಡು ದಿನದ ಹಸುಗೂಸೊಂದು ಒಮ್ಮೆ ತುಟಿ ಸವರಿಕೊಂಡು ಸುಮ್ಮನಾಯಿತು. ಎಲ್ಲವೂ ಒಂದು ನಿಶ್ಯಬ್ದದ ತಂತುವಿನಲ್ಲಿ ಎಣಿದುಕೊಂಡಿದ್ದವು.‌

ಇವತ್ತಿನ ಈ ಬೆಳಗಿಗೆ ನಾಲ್ಕು ದಿನಗಳು ಕಳೆದವು. ಮೋಡಗಳು ಕರಗಿಲ್ಲ.

ಆಸ್ಪತ್ರೆಯ ಕಿಟಕಿಯಿಂದ ನುಗ್ಗಿಬಂದ ಬೆಳಗಿನ ಬೆಳಕಿಗೂ ಔಷಧಿಯ ವಾಸನೆ ಇತ್ತು. ವಾರ್ಡ್ ಗೆ ಬೆಡ್ ಶೀಟು ಬದಲಿಸಿ, ಬಿಪಿ ಚೆಕ್, ತಿನ್ನುವ ಔಷಧಿಗಳನ್ನು ತೋರಿಸಿ ಹೋಗಲು ಬಂದ ನರ್ಸ್ ಒಮ್ಮೆ ಅವಳ ಕಡೆ ನೋಡಿ ತುಟಿ ಅಲುಗಿಸಿದಳು. ಮಾತಾಡಲಿಲ್ಲ. ಮೋಡದ ನಡುವೆ ಒಂದು ಮಿಂಚು ಹೊಳೆಯಲಿಲ್ಲ.

ಸೆಮಿ ಸ್ಪೆಷಲ್ ವಾರ್ಡ್ ನಲ್ಲಿ ಹಾಕಲಾಗಿದ್ದ ಎರಡು ಬೆಡ್ ಗಳಲ್ಲಿ ಅಶಾಳದು ಎರಡನೆ ಬೆಡ್. ಅವಳು ಸುಮ್ಮನೆ ಎದ್ದು ನಿಂತರೆ ಸಾಕು ಆಸ್ಪತ್ರೆಯ ಪಕ್ಕ ಮಲಗಿಕೊಂಡ ರಸ್ತೆ ಕಾಣಿಸುತ್ತದೆ. ಅದನ್ನು ತುಳಿದು ಸಾಗುವ ಜನ ಕಾಣಿಸುತ್ತಾರೆ. ಆದರೆ ಆಶಾ ನೋಡುವುದಿಲ್ಲ. ನಾಲ್ಕು ದಿನಗಳಲ್ಲಿ ಅವಳು ಹೆಚ್ಚು ನೋಡಿದ್ದು ವಾರ್ಡ್ ನ ಆ ಗೋಡೆಗೆ ನೇತುಹಾಕಿದ ಒಂದು ಚಿತ್ರಪಟ. ಅದರಲ್ಲೊಂದು ನೀಲಿ ಮೊಗ್ಗು ಇದೆ. ಅರಳಿರುವ ನೀಲಿ ಹೂವೂ ಇದೆ. ಹೂ ಉದುರಲಿ ಇಲ್ಲವೆ ಮೊಗ್ಗು ಅರಳಲಿ ಎಂದು ಕಾಯುತ್ತಾಳೆ. ಚಿತ್ರಪಟ ನಗುತ್ತದೆ, ಇವಳು ಸುಮ್ಮನಾಗುತ್ತಾಳೆ. ಬಾಗಿಲ ಕಡೆ ನೋಡುತ್ತಾಳೆ. ಯಾರೊ ಬರಬಹುದೆಂದು ಕಾಯುತ್ತಾಳೆ. ಹೊತ್ತಿಗೆ ಸರಿಯಾಗಿ ವೈದ್ಯರು ಬರುತ್ತಾರೆ, ಹೋಗುತ್ತಾರೆ. ಮುಖದ ಮೇಲೆ ಮತ್ತೆ ಮೋಡಗಳು ದಟ್ಟವಾಗುತ್ತವೆ. ಬಾಗಿಲ ಬಳಿ ಬೇಕಾದ ಹೆಜ್ಜೆ ಸದ್ದುಗಳ ಫಡಫಡ ಪಟಿಸುವುದಿಲ್ಲ. ಇವಳ ಕಾಯುವಿಕೆ ನಿಲ್ಲವುದಿಲ್ಲ.

ರೌಂಡ್ಸ್ ಮುಗಿಸಿ ಒಂದು ಕಪ್ ಕಾಫಿ ಹಿಡಿದುಕೊಂಡು ಬಂದ ಆ ನರ್ಸ್ ಇವಳ ಪಕ್ಕ ಕೂರುತ್ತಾಳೆ. ಪಕ್ಕದ ಬೆಡ್ ಗೆ ಒಂದು ಪರದೆ ಅಡ್ಡ ಇದೆ. ಜನ ಕಾಣಿಸುವುದಿಲ್ಲ, ಮಾತು ಕೇಳಿಸುತ್ತವೆ. ಇಬ್ಬರೂ ಕೂತು ಕಾಫಿ ಕುಡಿಯುತ್ತಾರೆ. ನರ್ಸ್ ಮಾತಾಡಿಸುತ್ತಾಳೆ. ಆದರೆ ಆಶಾ ಅವಳನ್ನು ಸುಮ್ಮನೆ ನೋಡುತ್ತಾಳೆ. ನರ್ಸಗೆ ಅವಳ ಕಣ್ಣಲ್ಲಿ ತುಂಬಿದ ಕಡಲು ಕಾಣಿಸುತ್ತದೆ. ಕಾಫಿ ಮುಗಿಯುತ್ತದೆ, ಇವಳ ಮಾತು ಖಾಲಿಯಾಗುತ್ತದೆ. ಆದರೆ ಆಶಾ ಮಾತು ಚೆಲ್ಲುವುದಿಲ್ಲ. ಯಾವುದೊ ಮಹತ್ ಕಾರ್ಯಕ್ಕೆ ತನ್ನ ಮಾತುಗಳನ್ನು ಎತ್ತಿಟ್ಟುಕೊಂಡವಳಂತೆ ಆಕೆ ತುಟ್ಟಿಯಾಗಿದ್ದಾಳೆ.

ಮಧ್ಯಾಹ್ನ ನರ್ಸ್ ನ ಅಂದಿನ ಡ್ಯೂಟಿ ಮುಗಿಯುತ್ತದೆ. ಹೋಗುವ ಮುಂಚೆ ಅವಳ ಕೆನ್ನೆಯನ್ನು ಲಘುವಾಗಿ ತಟ್ಟುತ್ತಾಳೆ. ‘ಹುಡುಗಿ ಎಲ್ಲದಕ್ಕೂ ದಾರಿಗಳಿವೆ. ದಾರಿಯೇ ಇಲ್ಲದ ಊರಾದರೂ ಎಲ್ಲಿದೆ?’ ಎಂದು ಕೇಳುತ್ತಾಳೆ. ಅದು ಪ್ರಶ್ನೆಯೊ, ಉತ್ತರವೊ ಎಂದು ಆಶಾ ಯೋಚಿಸುತ್ತಾಳೆ. ಅವಳು ಬಂದಿದ್ದು ಏನಕ್ಕೊ ಈಗ ಆಗುತಿರುವುದೆನೊ. ತುಂಬಿದ ಗೊಂದಲ.

‘ಇನ್ನೆರಡು ದಿನ. ಎರಡಕ್ಕೂ ಅವಕಾಶ ಇದೆ. ಎರಡೂ ತಪ್ಪು ದಾರಿ. ಆದರೆ ಕಡಿಮೆ ತಪ್ಪಿನದು ಹಿಡಿ. ಆದರೆ ಒಂದು ಜೀವ ಉಳಿಯುವುದು ಎಲ್ಲಾ ತಪ್ಪುಗಳನ್ನು ಮೀರಿದ್ದು..’ ಟೆಂಪರೇಚರ್, ಬಿಪಿ ಚೆಕ್ ಮಾಡಿ, ಹಾಸಿಗೆಯ ದಿಂಬು ಬದಲಿಸುವ ನರ್ಸ್ ಅವಳ ಮನಸು ಪರೀಕ್ಷಿಸಿ ಪರೀಕ್ಷಿಸಿ, ಬದಲಿಸಲು ನೋಡುತ್ತಾಳೆ. ಆದರೆ ಆಶಾ ಮೊದಲು ಬೀಳುವುದು ಮೊಗ್ಗಾ, ಹೂವಾ ಎಂಬ ಕಾತುರದಲ್ಲಿ ಅಲ್ಲಿ ನೇತು ಹಾಕಲಾದ ಪೋಟೊ ನೋಡುತ್ತಾ ಕೂರುತ್ತಾಳೆ. ಈಗ ನರ್ಸ್ ಎದ್ದು ಹೋಗಲೇ ಬೇಕು. ಏಕೆಂದರೆ ಬಿಪಿ ಮಿಷನ್ ಹಿಡಿದ ಇನ್ಯಾರದೊ ಸರದಿ ಕಾದಿದೆ.

ಅವಳು ಎದ್ದು ಹೋಗುತ್ತಾಳೆ. ಇವಳು, ಅವಳು ಹೋದ ಕಡೆಯೇ ನೋಡುತ್ತಾಳೆ. ಇವಳು ಹೋದ ದಾರಿಯಲ್ಲಿ ಅವನು ಬರಬಹುದಾ? ನಿರುಕಿಸುತ್ತಾಳೆ. ಅವನು ಸುಳಿವಿಲ್ಲ. ಬಂದಾನೊ ಬಾರನೊ..!

ವಾಟ್ಸಪ್ ನೋಡುತ್ತಾಳೆ. ಅವನಿಗೆ ಮೆಸೇಜ್ ತಲುಪಿದೆ. ಬ್ಲೂ ಟಿಕ್ ಬಂದಿಲ್ಲ. ಅವ್ನು ಮೆಸೇಜ್ ನೋಡುತ್ತಿಲ್ಲ. ನೋಡಲಾಗುತ್ತಿಲ್ಲವೆ? ನೋಡುವುದೇ ಬೇಡ ಅಂದುಕೊಂಡನೆ? ಅವನು ಹೋಗಿ ಮೂರು ತಿಂಗಳು, ಆದರೆ ಅವಳಿಗೆ ಈಗ ಐದು ತಿಂಗಳು.

‘ತಲುಪಿದೆ ಡಿಯರ್. ಇಲ್ಲಿ ಎಲ್ಲವೂ ಸರಿ ಇದೆ. ಆದರೆ ತುಂಬಾ ವರ್ಕ್ ಡಿಯರ್. ಇನ್ಮೇಲೆ ತುಂಬಾ ಬ್ಯೂಸಿ ಆಗಬಹುದು ನಾನು. ಮತ್ತೆ ಸಿಗ್ತೀನಿ ಟೇಕ್ ಕೇರ್’ ಆತ ಕಳುಹಿಸಿದ ಕೊನೆಯ ಮೆಸೇಜ್. ಅದನ್ನೇ ಸಾವಿರ ಸಾಲ ಓದಿಕೊಂಡಿದ್ದಾಳೆ.

ಆ ರಾತ್ರಿ ಅವನು ಹೇಳಿದ ಮಾತು ನೆನಪಾಗುತ್ತದೆ. ಅಂದು ಅವರಿಬ್ಬರೂ ಹಾಸಿಗೆಯ ಮೇಲೆ ಬೆವೆತ್ತಿದ್ದರು. ‌ಹೊಟ್ಟೆಯ ಮೇಲೆ ಕೈಯಾಡಿಸುತ್ತಾ ಹೇಳಿದ್ದ ‘ಡಿಯರ್ ಇವತ್ತೆ ಈ ರಾತ್ರಿಯೆ ನಿನ್ನ ಮಾತೃಚೀಲದೊಳಗೆ ನಮ್ಮ ಜೀವ ಮೂಡಬಹುದು’ ಮೇಲೆ ಹಾದು ಹೋಗುತ್ತಿದ್ದ ಅಶ್ವಿನಿ ದೇವತೆಗಳು ತಥಾಸ್ತು ಅಂದು ಬಿಟ್ಟರು. ಒಂದು ಜೀವ ಮಿಸುಕಾಡಿತ್ತು.

  • ನರ್ಸ್ ಎದುರಿಗೆ ಕಾಫಿ ಇಡುತ್ತಾಳೆ. ಕನ್ನಡಿಯಂತೆ ಮುಂದೆ ನಿಲ್ಲುತ್ತಾಳೆ. ‘ಕಾಫಿ ಮತ್ತು ಅವಳು ಹಾಗೂ ಕಾಫಿ ಮತ್ತು ನಾನು’ ಈ ಎರಡರಲ್ಲೂ ಯಾವುದೇ ವ್ಯತ್ಯಾಸವಿಲ್ಲ ಎನಿಸುತ್ತದೆ.

ಕಣ್ಣಲ್ಲೇ ಕೇಳ್ತಾಳೆ ‘what can I do?’

ನರ್ಸ್ ಕಣ್ಣಲ್ಲಿ ಉತ್ತರವಿಲ್ಲ; ಆದರೆ ಅವಳೇ ಉತ್ತರದಂತೆ ಮುಂದೆ ನಿಂತಿದ್ದಾಳೆ.‌ ಆದರೆ ಅವಳು ಪ್ರಶ್ನೆಯೊ, ಉತ್ತರವೊ ಇವಳಿಗೆ ಅಂದಾಜಾಗುತ್ತಿಲ್ಲ…

ಕಾಫಿ ಮುಗಿಯುತ್ತದೆ. ಪಟದಲ್ಲಿ ಅರಳಿದ ಹೂವು ಅಲುಗುವುದಿಲ್ಲ. ಮೊಗ್ಗು ಕದಲಿವುದಿಲ್ಲ.

ಏರ್ಪೋರ್ಟ್ ನೆನಪಾಗುತ್ತದೆ.. ಜೊತೆಗೆ ಅವನು ಕಣ್ಣುಗಳು? ಅವಳಿಗೆ ನೆನಪಾಗುತ್ತಿಲ್ಲ. ತುಂಬಿದ ಕಣ್ಣುಗಳಿಂದ ನೋಡಿದಾಗ ಯಾವುದೂ ಸ್ಪಷ್ಟವಾಗುವುದಿಲ್ಲ. ಸ್ಪಷ್ಟವಿರುವುದಿಲ್ಲ.

ನರ್ಸ್ ಎದ್ದು ಹೊರಟು ತಡೆದು ಹೇಳುತ್ತಾಳೆ ‘ ಡಾಕ್ಟರ್ ಒಪ್ಪಿದ್ದಾರೆ. ಇದು ತಪ್ಪು ಅಂತ ಅವರಿಗೆ ಗೊತ್ತು. ಈ ತಪ್ಪಿನಿಂದ ನಾಳೆ ಎಲ್ಲವೂ ಸರಿ ಹೋಗಬಹುದು ಎಂಬುದು ಅವರ ಎಣಿಕೆ. ಬಿಪಿ ಸರಿ ಹೋದ ಮೇಲೆ ಆದೀತು..’ ಅವಳ ಮಾತು ಮುಗಿಯುತ್ತದೆ. ಇವಳು ಮೊಬೈಲ್ ನೋಡುತ್ತಾಳೆ‌‌. ನೋ ಬ್ಲೂ ಟಿಕ್. ಪಕ್ಕದ ಮಗುವು ವಿನಾಕಾರಣ ನಗುತ್ತದೆ.ದೇಹದ ಮೂಲಕ ಮನಸಿಗೆ ಇಣುಕಬೇಕಾ? ಮನಸಿನ ಮೂಲಕ ದೇಹ ಸಾಧಿಸಬೇಕಾ? ಎಷ್ಟೊಂದು ಗೊಂದಲ ಈ ಹೊಸಗಾಲದ ಬದುಕಿಗೆ. ಒಟ್ಟಿಗೆ ಬದುಕುತ್ತೇವೆ; ಒಂದೆ ಒಲೆಯ ಊಟ, ಒಂದೇ ಹಾಸಿಗೆಯಲ್ಲಿ ನಿದ್ದೆ. ಆದರೆ ಒಂದೇ ರೇಷನ್ ಕಾರ್ಡ್ ನಲ್ಲಿ ಇಬ್ಬರ ಹೆಸರಿಲ್ಲ. ಆಧಾರ್ ವಿಳಾಸವೂ ಬೇರೆ. ಒಂದೇ ವಿಳಾಸ ಮಾಡಿಕೊಳ್ಳಲು ಸಾಧ್ಯವೇ ಎಂಬುದಕ್ಕೆ ಇದು ಪ್ರಯೋಗಾತ್ಮಕ ಬದುಕು.. ಅದು ಅವರಿಬ್ಬರ ಸ್ವಗತ ಮತ್ತು ಅವರಿಬ್ಬರ ನಡುವೆ ಕಳೆದ ಹೋಗುತ್ತಿರುವ ದಿನಗಳಿಗೆ ಹೇಳಿದ ಸಬೂಬು.

ಅವನು ದೇಶ ಬಿಟ್ಟ, ಇವಳು ಕೈ ಸಡಿಲ ಬಿಟ್ಟಳು. ಅವನು ದುಡಿದು ಬರ್ತೀನಿ ಅಂದ, ಇವಳು ಬಾಗಿಲು ತೆರದ ಕೊಟ್ಟಳು. ಉಳಿದಿದ್ದು ಹೊಟ್ಟೆಯಲ್ಲಿ ತಿರುಗಿ ಮಲಗಿದ ಮಗು.
ಅವನಿಗೆ ಹಿಂದುರುಗಬೇಕು ಅನ್ನುವ ದರ್ದಿಲ್ಲ, ಅವನು ತಾಳಿ ಕಟ್ಟಿಲ್ಲ. ಇವಳಿಗೆ ಅವನ ಕತ್ತಿನಪಟ್ಟಿ ಸಿಗುವುದಿಲ್ಲ ಏಕೆಂದರೆ ಇವಳ ಕೊರಳಲ್ಲಿ ತಾಳಿ ಇಲ್ಲ. ಉಳಿದಿದ್ದು ಮಗು. ಅವತ್ತು ಮೈ ಧಾತು ಹರಿದುಹೋದ ಖುಷಿಗೆ ಅವನು ಬೇಕು ಅಂದ, ಇವಳು ಮೈ ಹಗುರಾದ ಖುಷಿಗೆ ಇರಲಿ ಅಂದಳು. ಇವರ ಖುಷಿಯ ಉತ್ತುಂಗಕ್ಕೆ ಒಳಗೆ ಕೂಸಿನ ಜೀವ ಕೈಕಾಲು ಬಡಿದಿತ್ತು.

ಮರುದಿನ ಸೂರ್ಯ ಸರಿಯಾದ ಟೈಮಿಗೆ ಆಕಳಿಸುತ್ತಾನೆ. ಬೆಳಗ್ಗೆ ಡ್ಯೂಟಿಗೆ ಬಂದ ಅದೇ ನರ್ಸ್ ಬಿಪಿ ನೋಡಿ ‘ಬಿಪಿ ನಾರ್ಮಲ್. ಇವತ್ತು ಡಾಕ್ಟರ್ ಮುಂದುವರೆಯಬಹುದು’ ಎನ್ನುತ್ತಾಳೆ. ಆಶಾ ಬೆಚ್ಚುತ್ತಾಳೆ.

ಅವಳಿಗೆ ಮಾತು ಇಷ್ಟ ಇಲ್ಲ; ಆದರೂ ಆಡಬೇಕು.
ಪಕ್ಕದ ಬೆಡ್ಡಿನ ಮಗು ಬೆಳಗಿನ ಚಳಿಗೆ ಮುದುಡಿ ಮಲಗಿದೆ.
ತೂಗು ಹಾಕಿದ್ದ ಚಿತ್ರಪಟದಲ್ಲಿರಬೇಕಾದದ್ದು ಹೂವೊ, ಮೊಗ್ಗೊ..?
ನರ್ಸ್ ಆಶಾಳ ಕಣ್ಣು ಓದಿಕೊಳ್ಳುತ್ತಾಳೆ.

ನಿನಗೆ ಕಥೆ ಹೇಳಲು ಬರುತ್ತದಾ? ನರ್ಸ್ ಒಂದು ಪ್ರಶ್ನೆ ಮುಂದಿಡುತ್ತಾಳೆ.
ಆಶಾ ಸುಮ್ಮನೆ ನೋಡುತ್ತಾಳೆ.
ಜಗತ್ತು ಕಥೆಗಳನ್ನು ನಂಬುವಷ್ಟು ಮತ್ತೇನನ್ನು ನಂಬುವುದಿಲ್ಲ. ಆ ದೇಶಕ್ಕೆ ಹೋದ ಅವನ ಬಳಿ ಒಂದು ಕಥೆ ಸಿದ್ದವಿದೆ. ಆ ಕಥೆಯೇ ಅವನನ್ನು ಬದುಕಿಸುತ್ತದೆ. ಒಳ್ಳೆಯ ಕಥೆಯನ್ನು ತೊಟ್ಟರೆ ಒಳ್ಳೆಯ ಬದುಕು. ನೀನು ನಾಳೆ ಹೊಸ ಊರಿಗೆ ಹೋದರೆ ಒಂದು ಹೊಸ ಕಥೆ ಹೇಳು. ಆ ಕಥೆಯೇ ನಿನ್ನ ಬದುಕು ಕಟ್ಟುತ್ತದೆ.

ನಾನೂ ಈ ಊರಿಗೆ ಹೊಸ ಕಥೆಯೊಂದಿಗೆ ಬಂದೆ. ಆ ಕಥೆಯಲ್ಲಿ ನನಗೊಬ್ಬ ಗಂಡ ಇದ್ದ. ಅವನು ಸತ್ತು ಹೋಗಿದ್ದ. ಅವನು ನನಗೊಂದು ಮಗು ದಯಪಾಲಿಸಿದ್ದ. ನನ್ನ ಊರಲ್ಲಿ ನನಗೆ ಕಥೆಗಳಿರಲಿಲ್ಲ ಬರೀ ಬದುಕಿತ್ತು. ಬರೀ ಬದುಕಿನಿಂದಷ್ಟೇ ಜೀವಿಸಲು ಸಾಧ್ಯವಿಲ್ಲ. ಮನುಷ್ಯನಿಗೆ ಕಥೆಗಳು ಬೇಕು. ನರ್ಸ್ ಓದಿದೆ. ಕೆಲಸ ಸಿಗ್ತು. ಜೊತೆಗೆ ಆಸ್ಪತ್ರೆಯಲ್ಲಿ ಯಾರೊ ಬಿಟ್ಟು ಹೋದ ಮಗು ಸಿಕ್ತು.

ಮಗು ಮಡಿಲಲ್ಲಿರಬೇಕಾದರೆ ಕೊರಳಲ್ಲಿ ತಾಳಿ ಇರ್ಬೇಕು. ನನಗೆ ತಾಳಿ ಇರಲಿಲ್ಲ. ಕಟ್ಟುವವನು ಸಿಕ್ಕಿರಲಿಲ್ಲ. ಯಾರದೊ ಮಗು ಸಿಕ್ಕಿತ್ತು. ಮಗು ಬಿಡಬಹುದಿತ್ತು. ಬಿಡಲಾಗಲಿಲ್ಲ. ಬಿಡಲಾಗದಿದ್ದರೆ ಊರು ಬಿಡಬೇಕು. ಮಗು ಎತ್ತಿಕೊಂಡು ಹೊಸ ಕಥೆ ಹೆಣೆದುಕೊಂಡು ಊರು ಬಿಟ್ಟೆ. ಹೊಸ ಊರು, ಹೊಸ ಕಥೆ. ಇಲ್ಲಿ ಆ ಮಗುವಿಗೆ ಕಥೆಯಲ್ಲಿ ಅಪ್ಪ ಸಿಕ್ಕ‌. ನನಗೊಂದು ಹರಿದ ತಾಳಿ ಸಿಕ್ತು. ಯಥಾಪ್ರಕಾರ ಅರ್ಧ ಮುರಿದು ಹೋದ ಬದುಕು…’

ಮಾತು ಮುಗಿಸಿದಳು; ಕಥೆ ಮತ್ತಷ್ಟು ಜೀವಂತವಾಯಿತು.

ನೇತು ಹಾಕಲಾಗಿದ್ದ ಚಿತ್ರಪಟದಲ್ಲಿ ಮೊಗ್ಗು ಸದ್ದಿಲ್ಲದೆ ನಕ್ಕಿತು.
ಆಶಾ ಉಸಿರು ನುಂಗಿದಳು.

ನರ್ಸ್ ಎದ್ದು ಹೋದಳು. ಆಶಾ ಕಿಟಕಿ ಪಕ್ಕ ಹೋಗಿ ನಿಂತಳು. ಕಿಟಕಿಯಾಚೆ ಜನ ಕಾಣಿಸಲಿಲ್ಲ. ಕಥೆಗಳು ಕಾಣಿಸಿದವು. ಪಾತ್ರಗಳು ಕಾಣಿಸಿದವು.‌ ಎಷ್ಟೊ ಹೊತ್ತು ಅಲ್ಲಿ ನಿಂತಿದ್ದಳು. ಅವಳೊಳಗೊಂದು ಕಥೆ ಸಿದ್ದವಾಗುತ್ತಿತ್ತಾ? ಪಕ್ಕದ ಬೆಡ್ಡಿನ ಮಗು ಈಗಲೂ ವಿನಾಕಾರಣ ನಕ್ಕಿತು.ರೌಂಡ್ಸ್ ಮುಗಿಸಿ ನರ್ಸ್ ಕಾಫಿಯೊಂದಿಗೆ ಬಂದಳು. ಆಶಾ ಎದ್ದು ಕೂತಳು. ಕಾಫಿಯ ಹಬೆಗೆ ಅವಳು ಚುರುಕಾದಳು.
ಒಂದು ಗುಟುಕು ಕಾಫಿ ಹೀರಿ. ಕಪ್ ಅಲ್ಲಿ ಬಿಟ್ಟು ಕಿಟಕಿಯ ಬಳಿ ಬಂದು ನಿಂತಳು.

ಬಂದ ಐದು ದಿನದಿಂದಲೂ ಅವಳ ದನಿ ಕೇಳದ ಆಸ್ಪತ್ರೆಯ ಗೋಡೆಗಳು ಅವಳ ದನಿ ಕೇಳಲು ಸಿದ್ದವಾದವು.

‘ನಿಮ್ಮ ಡಾಕ್ಟರ್ ಗೆ ಹೇಳು. ಎಲ್ಲವನ್ನೂ ಸರಿ ಮಾಡುವ ಆ ತಪ್ಪು ಬೇಡವೆಂದು. ನನ್ನ ಪಾಲಿಗೆ ಆ ತಪ್ಪೇ ಇರಲಿ. ನನ್ನೊಳಗೆ ಒಂದು ಕಥೆ ಮೂಡಿದೆ. ಬದುಕಲು ಅಷ್ಟು ಸಾಕು…’ ಆಶಾ ಮಾತು ಮುಗಿಸಿದಳು.

ಇಬ್ಬರೂ ಎಷ್ಟೊ ಹೊತ್ತಿನವರೆಗೂ ಸುಮ್ಮನೆ ಕೂತರು.

ನರ್ಸ್ ಎದ್ದು ಹೊರಟಳು.
ಅವಳು ಬಾಗಿಲ ಬಳಿ ತಲುಪಿರಬೇಕು.‌ ಆಗ ಆಶಾ ಅವಳನ್ನು ಕರೆದು ಕೇಳಿದಳು..

‘ಎದೆಗೆ ಬಂದು ಕೂತ ನಿನ್ನ ಹೆಸರೇ ನನಗೆ ಗೊತ್ತಿಲ್ಲ. ನಿನ್ನ ಹೆಸರೇನು ಡಿಯರ್?’

ನರ್ಸ್ ತುಟಿಗೆ ನಗು ಸವರಿಕೊಂಡು ಹೇಳಿದಳು

‘ಆಶಾ…

|ಇನ್ನು ಮುಂದಿನ ವಾರಕ್ಕೆ|

‍ಲೇಖಕರು avadhi

February 11, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: