ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಗೂನೆ ಬಾರೆ…

ಗೀತಾ ಹೆಗ್ಡೆ ಕಲ್ಮನೆ 

ಎಣ್ಣೆ ತೀಡಿ ತೆಗೆದ ಬೈತಲೆ
ಒಪ್ಪವಾಗಿ ಬಾಚಿ ಮಡಿಚಿದ ಪುಟ್ಟ ತುರುಬು
ಮಲ್ಲಿಗೆಯೊ, ಅಬ್ಬಲಿಗೆಯೋ ಇಲ್ಲಾ ಸೇವಂತಿಗೆಯೋ
ಹಿಂದಿನ ದಿನ ತಾನೇ ಕೊಯ್ದು ಕಟ್ಟಿದ ದಂಡೆ
ಸುತ್ತಲೂ ಸುತ್ತಿ ತುರುಬಿಗೊಂದು ಮೆರುಗು
ಹಣೆಗೆ ಕೆಂಪು ಹುಡಿ ಕುಂಕುಮ
ಚಂದ್ರನ ಗತ್ತು
ತನ್ನಮ್ಮ ಮದುವೆಯಲ್ಲಿ ಕೊಟ್ಟ ಮೇಕಪ್ ಬಾಕ್ಸ್ ತೆರೆದು
ಕನ್ನಡಿ ಹಿಡಿದು
ಕತ್ತು ಆ ಕಡೆ ಈ ಕಡೆ ತಿರುಗಿಸಿ
ನೋಡಿಕೊಂಡರೆ ಆಯಿತು
ಮುಗಿದೇ ಹೋಯಿತು ನನ್ನಮ್ಮನ ಶೃಂಗಾರ
ಕಾಡಿಗೆ ಪೌಡರ್ ಗೊತ್ತೇ ಇಲ್ಲ
ದೇವರ ತಲೆ ಮೇಲೆ ಹೂ ತಪ್ಪಿದರೂ
ಅಮ್ಮನ ತುರುಬಲ್ಲಿ ಹೂ ಇಲ್ಲದ ದಿನ
ನಾ ನೋಡೇ ಇಲ್ಲ
ದಿನವಿಡೀ ಮತ್ತೆ ಕನ್ನಡಿ ನೋಡಿಕೊಳ್ಳುವಂತಿಲ್ಲ
ಪುರುಸೊತ್ತು ಇರಬೇಕಲ್ಲ.

ನಾಲ್ಕು ಮಕ್ಕಳ ಹೆತ್ತ ಗರತಿ
ಅಡಿಗೆ ಕೆಲಸ, ಮನೆ ಕೆಲಸ, ಕೊಟ್ಟಿಗೆ ಕೆಲಸ, ಹಿತ್ತಲ ಕೆಲಸ
ಸಾಲಾಗಿ ಕ್ಯೂ ಹಚ್ಚಿ ನಿತ್ಯ ನಿಂತಿರುವಾಗ
ಸುಸ್ತಾಯ್ತಾ? ನಾ ನೆರವಾಗಲಾ?
ಕೇಳುವವರೂ ಇಲ್ಲದ ಮೇಲೆ
ಅಮ್ಮನಿಗೆ ರಜೆ ಎಂಬುದು
ಹೇಗೆ ಗೊತ್ತಿರಲು ಸಾಧ್ಯ?

ಮನೆಯಲ್ಲಿ ಇದ್ದೂ ಇದ್ದೂ ಬೇಜಾರು ಎಂಬ ಪದ
ಅವಳಿಗೆ ಬಹುಶಃ ಗೊತ್ತೇ ಇರಲಿಲ್ವೋ
ಅಥವಾ ಗೊತ್ತಾಗಲೇ ಇಲ್ವೋ
ಏಕೆಂದರೆ ಅಮ್ಮ ತವರಿಗೆ ಹೋಗ್ತಿದ್ದದ್ದು
ಅವಳಮ್ಮನ ವರ್ಷದ ತಿಥಿಗೆ
ಅಥವಾ ಸಿರ್ಸಿ ಮಾರಿ ಜಾತ್ರೆಯಲಿ
ಹಣ್ಕಾಯಿ ಮಾಡಿಸಿ
ಉಡಿ ತುಂಬಿ ಕೈ ತುಂಬ ಬಳೆ ತೊಟ್ಟು
ಸಂಜೆಯೊಳಗೆ ಮನೆ ಸೇರಬೇಕಿತ್ತು
ಇದು ಅಪ್ಪನ ತಾಕೀತು.

ಒಮ್ಮೊಮ್ಮೆ ಜೊತೆಯಾಗಿ
ಅಪ್ಪ ಹೋಗಿದ್ದೂ ಉಂಟು
ಹೋಗುವಾಗ ಅಪ್ಪ ಅಷ್ಟು ದೂರ ದಾಪುಗಾಲು
ಅಮ್ಮನ ನಿಧಾನ ನಡಿಗೆ
ಹಿಂತಿರುಗಿ “ಲಗೂನೆ ಬಾರೆ”
ಮುಸಿ ಮುಸಿ ನಗು ಗಲ್ಲ ಇಷ್ಟಗಲ
ಗಂಡನ ಜೊತೆ ಹೊರಟಿದ್ದಕ್ಕೆ….

ಇವತ್ಯಾಕೊ….
ಅಮ್ಮ ತುಂಬಾ ನೆನಪಾಗ್ತಾಳೆ ಕ್ಷಣ ಕ್ಷಣಕ್ಕೂ
ಯಾವ ಸವಲತ್ತಿಲ್ಲದ ಹಳ್ಳಿ ಮನೇಲಿ
ತನ್ನ ಆಯುಷ್ಯವೆಲ್ಲ ಹೀಗೆ ಕಳೆದಿದ್ದು
ಸದಾ ಹಸನ್ಮುಖಿ
ಬಂದವರನ್ನೆಲ್ಲ ಮಾತಾಡಿಸಿ ಅನ್ನಪೂರ್ಣೆ ಅನಿಸಿಕೊಂಡಿದ್ದು
ಸಂತೃಪ್ತಿಯಿಂದ ಕಳೆ ಕಳೆಯಾಗಿರ್ತಿದ್ದಿದ್ದು
ಕನಸಾ ಅನ್ನುವಷ್ಟು ಅಚ್ಚರಿ.

ಕಾರಣ ಈ ಸ್ವಲ್ಪ ಸಮಯದ ಲಾಕ್ಡೌನ್ ಸಮಯದಲ್ಲಿ
ನಾನ್ಯಾಕೆ ಚಡಪಡ್ತೀನಿ ಎಲ್ಲಾ ಇದ್ದೂ
ಗೊತ್ತಿದ್ದೂ ಗೊತ್ತಿದ್ದೂ
ಸುಮ್ಮನೆ ಮನೆಯಲ್ಲಿ ಇರಲು ಏನು ಧಾಡಿ
ಸಕಲ ಸೌಲತ್ತು ದಂಡಿಯಾಗಿದ್ರೂ
ಅಯ್ಯೋ! ಕೆಲಸ ಕೆಲಸ ಅಂತ ಒದ್ದಾಡೋದು
ಮನೆಯೊಳಗೇ ಇರಬೇಕಲ್ಲಾ
ಮೂರೊತ್ತೂ ಅಡಿಗೆ ಮಾಡಬೇಕಲ್ಲಾ
ಮಕ್ಕಳ ದಾಂದಲೆ ಸಹಿಸ್ಕೋಬೇಕಲ್ಲಾ
ಬ್ಯೂಟಿ ಪಾರ್ಲರ್ ಓಪನ್ ಇಲ್ವಲ್ಲಾ
ಟ್ರಿಪ್ಪು, ಮಾಲು, ಹೊಟೇಲು, ಸಿನೇಮಾ,
ನಿತ್ಯ ಧಾರಾವಾಹಿ ಒಂದೂ ಇಲ್ವಲ್ಲಾ
ಇನ್ನೆಷ್ಟು ದಿನವಪ್ಪಾ ಈ ಕೊರೋನಾ ಕಾಟಾ
ಒಂದಾ ಎರಡಾ…..

ರಾತ್ರಿಯೆಲ್ಲಾ ತೆಗೆದುಕೊಂಡ ನಿರ್ಧಾರ
ಅಮ್ಮನಂತಾಗಬೇಕು, ತಾಳ್ಮೆ ವಹಿಸಬೇಕು
ಬೆಳಗಾಗುತ್ತಿದ್ದಂತೆ ಮಟಾ ಮಾಯಾ
ಅಮ್ಮನಂತಾಗುವುದು ಬೋ ಕಷ್ಟ ಕಂಡ್ರೀ…..

ಆಗೆಲ್ಲಾ ಕೊರೋನಾ ಹೇಳುತ್ತದೆ
“ಮಂಗನಿಂದ ಮಾನವಾ”
ನೀನೂ ಅಷ್ಟೇ….
ಎಂತಿದ್ದರೂ ನಾಯಿ ಬಾಲ ಡೊಂಕೇ!

‍ಲೇಖಕರು avadhi

10 May, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading