ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಕ್ಷ್ಮಿ ಕೆ ಬಿ ಕವಿತೆಗಳು

ಲಕ್ಷ್ಮಿ ಕೆ ಬಿ

1. ನೆನಪುಗಳ ನಾವಿಕ

ಮರೆತ ನೆನಪುಗಳು
ಮರೆತು ನೆನಪಾಗಲು
ದುಃಖ ಉಮ್ಮಳಿಸಿ
ಅಳುವು ಬಿಕ್ಕಳಿಸಿ
ಧಾರಕಾರವಾಗಿ ಸುರಿಯುವುದು
ಇದು ಕಣ್ಣೀರೋ ಮಳೆಹನಿಯೋ?

ಮೋಡಗಳ ಬೆನ್ನಹಿಂದೆ
ನಿಂತು ಮರೆಯಾಗಿ
ಅಳುತಡೆದು ಮಡುಗಟ್ಟಿದ
ನೋವು ಹರಿದು
ಕಣ್ಣೀರ ಮಳೆಹನಿಯಾಗಿ
ಒಲವಿನೆದೆಯ ಭುವಿಯ ತಾಕಲು

ತಾಪದೊಡಲಲಿ ಬೆಂದು
ನೊಂದ ಭುವಿಯೊಡಲು
ನಗುವಾಗಿ ಮಗುವಾಗಿ
ಮಳೆಯೊಡನೆ ಒಲವಾಗಿ
ಸಂತಸದ ಭಾವದಲಿ
ಜಗಕ್ಕೆಲ್ಲ ಒಲವ ಚೆಲ್ಲಲು

ಕಷ್ಟ-ಸುಖಗಳ ಬಂಧ
ಜಗಕೆ ಒಲವಿನಾನಂದ
ನಗುವ ತೇರು ಅಳುವ ಸೂರು
ಮತ್ತದೇ ಬೇಸರ
ಆವಿಯಾಗಿ ಮುಗಿಲುಮುಟ್ಟಿದ
ನೋವ ನೆನಪುಗಳು

ಮತ್ತದೇ ನೆನಪುಗಳು
ಮರೆತು ನೆನಪಾಗಲು
ದುಃಖ ಉಮ್ಮಳಿಸಿ
ಅಳುವು ಬಿಕ್ಕಳಿಸಿ
ಧಾರಾಕಾರವಾಗಿ ಸುರಿಯುವುದು
ಮತ್ತೆ ತಾ ಹಗುರಾಗಲು
ಇದು ಕಣ್ಣೀರೋ ಮಳೆಹನಿಯೋ?

2. ಒಲವ ಸ್ಪರ್ಶ

ನಿನ್ನ ಕಾಲ್ಬೆರಳಿಗೆ
ನನ್ನ ಕಾಲ್ಬೆರಳು….
ಲಜ್ಜೆ ಮಾಡಿಸದ್ದು
ವಯ್ಯಾರದಿ ಮಾತಿಗಿಳಿದು
ಮಾತಿಗೆಳೆಯಲು ನಿನ್ನೊಲವ
ಬೆರಳ ತುದಿ ಮನದಿ ಕುದಿ
ಕೂಡಿ ಆಡಿ ಜಗಳವಾಡಿ
ಆಸೆ ಹಕ್ಕಿ ಬಾನ ಸೇರಿ
ಒಲವ ಸಸಿ ಮನದಿ ಚಿಗುರಿ
ಭಾವ ಹೊಮ್ಮಿ ಅನುರಾಗ ಚಿಮ್ಮಿ
ಹೂಎದೆಯ ಬನದಿ
ಶೃಂಗಾರ ಅರಳಿತು

ಹೂ ಬೆರೆಯುವ ರವಿ
ಜೇನ ಸವಿಯುವ ದುಂಬಿ
ಮೊದಲ ಮಳೆಯ ಮಣ್ಣು
ನಿನ್ನ ಒಲವ ಕಣ್ಣು
ಮಳೆಸುರಿದ ಮುಗಿಲು
ನಿನ್ನೊಲವ ನವಿಲು
ನಿನ್ನೊಲವ ಸ್ಪರ್ಶ
ಸೋತು ಶರಣಾದ ಹರ್ಷ
ನಿನ್ನ ಕಾಲ್ಬೆರಳಿಗೆ
ನನ್ನ ಕಾಲ್ಬೆರಳು….

‍ಲೇಖಕರು Admin

5 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading