ನನ್ನ ಬಟ್ಟಲುಗಣ್ಣಿನ ಕಟ್ಟಾಣಿ ಹುಡುಗನೇ..

ನಂದಿನಿ ಹೆದ್ದುರ್ಗ

ಹನೀ…
ಈ ಸಂಜೆಯೂ ಅದೇ ಫೋಟೊ ಕಳಿಸಿದ್ದೇನೆ ಅನ್ಕೋಬೇಡ.
ಇದು ಇವತ್ತಿನ ಫೋಟೊ.ಈ ಬೆಳಿಗ್ಗೆಯೂ ಕ್ಲಿಕ್ಕಿಸಿದ್ದೆ.
ಆ ಪುಟಾಣಿ ಹಕ್ಕಿಜೋಡಿ ಬೆಳಗು ಬೈಗು ಅದೇ ತಂತಿಯ ಮೇಲೆ ಕುಳಿತು ಚಿಲಿಪಿಲಿಯ ಕಲರವ ಮಾಡುತ್ತವೆ. ನೋಡಿದಾಗೆಲ್ಲ ಫೋಟೊ ತೆಗೆಯುವ ಅನಿಸ್ತದೆ.
ಒಂದಿನ್ನೊಂದರ ನಡುವೆ ಒಂದು ಮುದ್ದು ಅಂತರ.
ಲೋಕದೆದುರಿಗೆ ನಮ್ಮದು ಸ್ನೇಹವಷ್ಟೇ ಎಂದು ತೋರುವ ಹುನ್ನಾರ.
ಆಗಾಗ ತನ್ನ ಕೊಕ್ಕಿನಿಂದ ರೆಕ್ಕೆಯಡಿ ಕಚ್ಚಿಕೊಳ್ಳುತ್ತಲೋ, ಎರಡೂ ರೆಕ್ಕೆ ಅಗಲಿಸಿ ಪಟಪಟಿಸಿ‌ ಮತ್ತೆ ಅಲ್ಲೇ ಕೂರುತ್ತಲೋ ಮಾಡುತ್ತಿರುತ್ತವೆ.

ನಿಂಗೊತ್ತಿರಲಿ ಹನೀ.
ಅವು ಹಾಗೆ ಹೊರಗೆ ಕುಳಿತಾಗ ಪಾರಿವಾಳಗಳಂತೆ ಚುಂಚಿಗೆ ಚುಂಚು ಸೇರಿಸುವುದಿಲ್ಲ. ಒಂದಿನೊಂದರ ಮೇಲೇರಿ ಹೋಗುವುದಿಲ್ಲ. ಎಷ್ಟು ಚಂದದ ಸುಂದರ ಪ್ರೇಮ ಅನಿಸ್ತದೆ. (ಚುಪ್ಚುಪ್ ಮೊಹಬತ್.ನಮ್ ಥರ)
ಮನಸ್ಸು ಬಂದಾಗ ಎರಡರಲ್ಲಿ ಒಂದು ಸುಯ್ಯನೆ ಗಾಳಿಯಲ್ಲಿ ಜೋಲಿ ಹೊಡೆದು ಹಾರಿ ದೂರದ ಮನೆಯೊಂದರ ಮೇಲೆ ಹೋಗಿ ಕೂತು ‘ನೋಡು ಹೇಗೆ’ ಅಂತನ್ನುವ ಹಾಗೆ ತನ್ನ ಸಂಗಾತಿಯನ್ನು ನೋಡುತ್ತದೆ.

ಹನೀ.
ತಂತಿ ಮೇಲೇ ಕುಳಿತಿರುವ ಈ ಹಕ್ಕಿಗೆ ಹಾರಿಹೋದ ಸಂಗಾತಿಯ ಮೇಲೆ ಒಂದಿಷ್ಟೂ ಅಪನಂಬಿಕೆಯಿಲ್ಲ. ಬಂದಾನೋ ಬಾರನೋ ಎಂಬ ದಿಗಿಲಿಲ್ಲ. ಬೇರೆ ಸಂಗಾತಿ ಹುಡುಕಿಕೊಂಡರೆ‌, ಜವಾಬ್ದಾರಿ ಯಿಂದ ಕಳಚಿಕೊಂಡರೆ ಎಂಬ‌ ಸಂದೇಹವೇ ಇಲ್ಲ.
ಹೋದವನು‌ ಮತ್ತೆ ತನ್ನಲ್ಲಿಗೇ ಬರಬೇಕು ಎನ್ನುವಂತೆ ಬಹಳ ನಿಶ್ಚಿಂತೆಯಿಂದ ಕೂತಿರ್ತದೆ.

‘ಹಾದಿಯಾದರೆ ನಿನ್ನ ಕಾಲು
ಅನಂತವಾದರೆ ನಿನ್ನ ರೆಕ್ಕೆ
ನನ್ನತ್ತಲೇ ಹೊಳ್ಳುತ್ತದೆ
ಇದು ಸತ್ಯ,
ಎಲ್ಲಿ ಹೋಗುತ್ತಿ ನನ್ನ ಬಿಟ್ಟು
ಅಸ್ತು’

ಒಂದೆರಡು ಘಳಿಗೆ ಬಿಟ್ಟು ಹಾರಿಹೋದ ಈ ಪ್ರೇಮಿ ಹೊಸ ಹಾಡು ಕಲಿತು ಮತ್ತೆ ಹೊಸದಾಗಿ ಓಲೈಸುತ್ತಾ ಅವಳ ಪಕ್ಕಕ್ಕೆ ಬಂದು ಕೂರುತ್ತದೆ. ಪ್ರತಿ ಬೆಳಿಗ್ಗೆ ದೇವರಿಗೆ ಹೂಬಿಡಿಸಲು ಹೋದಾಗ ಸಂಜೆ ಗಿಡಕ್ಕೆ ನೀರು ಹಾಕುವಾಗ ಈ ಮುದ್ದು ಪ್ರೇಮಿಗಳನ್ನು ಕಣ್ತುಂಬಿಕೊಳ್ಳುತ್ತೇನೆ.
ಆ ಪುಟ್ಟ ಹಕ್ಕಿಗೆ ಇರುವ ತನ್ನ ಪ್ರೇಮದ ಕುರಿತಾದ ‌ನಂಬಿಕೆಯಲ್ಲಿ ನನಗೆ ಕಿಂಚಿತ್ತಾದರೂ ಇರಬಾರದಿತ್ತಾ ಅನಿಸ್ತದೆ.

ಜಗದ ಆ ಬದಿಯಲ್ಲಿರುವ ನಿನ್ನ ಪ್ರತಿ ಮಿಸುಕನ್ನೂ ಮಿಡುಕನ್ನೂ ಅನುಭವಿಸುವ ನಾನು ನೀನೇದಾರೂ ಅರ್ಧ ಗಂಟೆ ನನ್ನ ಗಮನಿಸದೇ ಹೋದರೆ, ನನ್ನ ಮೆಸೇಜಿಗೆ ತಕ್ಷಣ ಉತ್ತರಿಸದೇ ಹೋದರೆ ,ನಾನೇ ಸುಮ್ಮನಾದಾಗ ನೀನೂ ಸುಮ್ಮನಿದ್ದರೆ ಮುಗಿದೇ ಹೋಯ್ತು.
ನಿನ್ನ ಕುರಿತು ಆರಂಭವಾಗುವ ಸಣ್ಣ ಅನುಮಾನಕ್ಕೆ ನನ್ನ ಆತಂಕದ, ಇನ್ಸೆಕ್ಯೂರಿಟಿ ಯ ಕಿಡಿ ತಾಗಿ ಭಗ್ಗನೆ ಹೊತ್ತಿ ಉರಿಯಲಾರಂಬಿಸುತ್ತದೆ.
ನೀನಲ್ಲಿ ಇನ್ನಾರದೋ ಜೊತೆಗೆ ಫ್ಲರ್ಟ್ ಮಾಡ್ತಿದೀಯಾ ಎಂಬಂತ ದೃಶ್ಯವೊಂದು ನನ್ನ ಕಲ್ಪನೆಗೆ ಬಂದು ಹೊಯ್ದಾಟ ಶುರುವಾಗುತ್ತದೆ.ನಾನು ಇಳಿದುಹೋಗ್ತೀನಿ.

ನಮ್ಮ ಪ್ರೇಮದ ಮೊದಲ ದಿನಗಳಲ್ಲಿ ನೀನು ಮುಗಿದುಹೋದ ನಿನ್ನ ಪ್ರೇಮದ ಬಗ್ಗೆ ಹೇಳಿದಾಗ ನಾನು ವರ್ತಿಸಿದ್ದು ಅದರಿಂದ ನೀನು ಕಂಗಾಲಾಗಿದ್ದು, ಅಪರಾಧಿಭಾವದಿಂದ ಕುಗ್ಗಿ ಹೋಗಿದ್ದು‌‌ ,ನನ್ನಿಂದಾಗಿ ನೀನು ಕಣ್ಣೀರಾಗಿದ್ದು ಎಲ್ಲವೂ ‌ನೆನಪಿದೆ.

ನನ್ನ ಪ್ರೇಮಿಸಿದ್ದರಿಂದ ಏನೆಲ್ಲಾ ಅನುಭವಿಸುವಂತಾಯ್ತು ನೀನು. ಮತ್ತೆಂದೂ ಹೀಗೆ ತೊಂದರೆ ಕೊಡಲ್ಲ ನಾನು ಅಂತ ಹುಸಿ ಆಶ್ವಾಸನೆ ಕೊಡುವಾಗೆಲ್ಲಾ ಕಣ್ಣು ಹೊಡೆದು ಪೋಲಿ ಹುಡುಗನಂತೆ ‘ಹೌದಲ್ಲಾ, ಎಷ್ಟೆಲ್ಲ ಅನುಭವಿಸುವಂತಾಯ್ತು’ ಅಂತೀಯಾ.

ಆದರೂ ಎಷ್ಟು ಸರ್ತಿ ತಿಳಿಹೇಳಿದ್ದಿ‌ ನನಗೆ ನೀನು.
‘ನನ್ನ ಮುದ್ದು ದಾಸವಾಳವೇ..ಒಲಿದ ಮೇಲೆ ನಂಬಿಕೆಯಿರಲೇಬೇಕು. ಹೊರತು ಹೃದಯ ಹೊರಲಾರದಷ್ಟು ನೋವು ತುಂಬಿಕೊಳ್ತಿಯಾ. ನಾನು ನಿನ್ನವನು.ಮತ್ತು ಕೇವಲ ನಿನ್ನವನು’
ಹೀಗೆ ನೀ ಹೇಳಿದ ಅರ್ಧ ದಿನ‌ಮಾತ್ರ ಮನಸ್ಸು ಪ್ರಸನ್ನ ವಾಗಿರ್ತದೆ. ಮತ್ತೆ ಯಥಾಸ್ಥಿತಿ.
ಎಷ್ಟು ಇಮ್ಮೆಚ್ಯೂರ್ ಅಲ್ವಾ ನಾನು?
ಕಡಲು ಅದೇ ನದಿಯ ಧ್ಯಾನದಲ್ಲಿ ಇದೆ ಎಂದಾಗ ಮಾತ್ರ ಸಂಭ್ರಮಿಸುವ ನನ್ನ ಹುಚ್ಚು ಪ್ರೀತಿಯನ್ನು ನಿಭಾಯಿಸುವ ಹೊಣೆ ನಿನ್ನದು. ನೆನಪಿರಲಿ.

ಮೊನ್ನೆ ನೀ ಹೇಳಿದ್ಯಲ್ಲಾ, ಅದು ನನಗೆಷ್ಟು ಇಷ್ಟವಾಯಿತು ಗೊತ್ತಾ?

‘ಎಂಬತ್ತು ವರ್ಷದ ಅಜ್ಜಿಯ ಜೊತೆ ‌ಮಾತಾಡಿದರೂ‌ ನೀನು ನನ್ನ ಪ್ರಶ್ನೆ ಮಾಡಬೇಕು
ಏಯ್.ಎಷ್ಟು ಮಾತು ಅವರ ಜೊತೆ.,ಏನ್ ಸಮಾಚಾರ, ಹಿಂದೆ ಏನಾದರೂ ಇತ್ತಾ?
ಖುಲ್ಲಂಖುಲ್ಲ ಹೇಳ್ತಿರು’
ನಕ್ಕು ಸುಸ್ತಾದೆ ನಾನು.
ಇಷ್ಟೆಲ್ಲಾ ಜೋರು ಮಾಡ್ತೀನಾ ಹನೀ ನಾನು?
ಆದರೂ‌
ಚಂದ ಅರ್ಥ ಮಾಡಿಕೊಂಡಿರುವ ಒಳ್ಳೆಯ ಪ್ರೇಮಿ ಅಂತ ಸರ್ಟಿಫಿಕೇಟ್ ಕೊಡಬಹುದು ನೋಡು ‌ನಿನಗೆ.

‘ನಿನ್ನ ಈ ಪೊಸೆಸಿವ್ನೆಸ್ ಉಸಿರು ಕಟ್ಟಿ ಸಾಯಿಸುವಷ್ಟು ತ್ರಾಸ ಕೊಡ್ತದೆ.
ಆದರೂ ಎಂಥಾ ಸುಖ ಪುಟ್ಟಾ ಇದು’ಎಂದಾಗ ನಿನ್ನ ತಬ್ಬಬೇಕು ಅನಿಸ್ತದೆ.

ಓಯ್
ನೀನೇನೋ ಈ ಸುಖದ ನೋವನ್ನು ಹಾಯಾಗಿ ಅನುಭವಿಸ್ತೀ. ಆದರೆ ನನಗೆ?
ಆ ಅನುಭವವೇ ಇಲ್ಲ
ನಾನು ಬೇಕಂತಲೇ ದಿನಾ ಕತೆ ಕಟ್ತೀನಿ.
ನಿನ್ನೆ ರಾತ್ರಿ ತಡವಾಗಿ ಮಲಗಿದೆ, ಹಳೆಗೆಳೆಯ ಚ್ಯಾಟಿಗೆ ಸಿಕ್ಕಿದ್ದ
ಅಂತಲೋ ಬಸ್ಸಿನಲ್ಲಿ ಚಂದದ ಹುಡುಗ ನನ್ನ ಪಕ್ಕ ಕೂತಿದ್ದ ಅಂತಲೋ ಆ ಹೆಸರಾಂತ ಕತೆಗಾರ ನನಗೆ ಪ್ರಪೋಸ್ ಮಾಡಿದ ಅಂತಲೋ ಹೇಳಿದರೆ ನಿಂದೇನೂ ತಕರಾರಿಲ್ಲ. ಬೇಗ ಮಲಗಬೇಕು ಚಿನ್ನಾ ಅಂತೀಯಾ.
ನಮ್ ಹುಡುಗಿ ಏನಂಥ ನಮಗ್ಗೊತ್ತಿಲ್ವಾ ಅಂತ ಪರೋಡಿ ಸ್ಟೈಲು ಹೊಡಿತೀಯಾ.
ಒಂದುಸರಿಯಾದರೂ ನನ್ನ ಥರ ಜಗಳ ಮಾಡಬಾರದಾ ಹನೀ.
ಹಳೆಯದು ಹಳೆಯದೇ,
ಈಗೆಂತಕೆ ಮತ್ತೆ ತೇಪೆ ಹಾಕ್ತಿರುವುದು ಅಂತೆಲ್ಲ ದಬಾಯಿಸಬಾರದಾ ನನ್ನ ನೀನು.

ಮೊನ್ನೆ ಏನೋ ಹುಡುಕುವಾಗ ನಿನ್ನ ಹಳೆಯ ಪತ್ರ ಸಿಕ್ತು.
‘ಧಗೆಯ ಧೂಳು ತುಂಬಿದ

ಕಡು ಮಧ್ಯಾಹ್ನದ ಹೊತ್ತು
ಬೆಳಕೊಂದು ನನ್ನ ‌ಪಕ್ಕ ಕುಳಿತಿತ್ತು’
ಸುಮ್ಮನೆ ಅಕ್ಷರಗಳ ನೇವರಿಸಿದೆ.
ಅದಕ್ಕೆ ಉತ್ತರವಾಗಿ ನಾನು ಬರೆದದ್ದೂ ನೆನಪಿದೆ ನನಗೆ. ನಮ್ಮ ನಡುವೆ ಒಲವು ಮೊಳೆತು ಸಸಿಯಾದರೂ ಅಂತರದ ಕಾರಣಕ್ಕೆ ನಾವು ಭೇಟಿಯಾಗಿರಲಿಲ್ಲ.
‘ಒಂದು ಹನಿ ಮಧು
ಒಂದು ಬೊಗಸೆ ಬೆಳಕು
ನಡುವೆ ಕುದಿವ ಲಾವಾ
ಒಂದೇ ಒಂದು ತಂಪು ನೋಟ
ಬರುವೆ ನಿನ್ನೆದೆಗೆ
ದೂರ ಭಾರವೆನಿಸದು ನಮಗೆ’

ಹನೀ..
ವಿಧಿಯ ಆಸರೆಯಲ್ಲೇ ನಡೆಯವ ಈ ಎಲ್ಲವೂ ಕಾಲದ ಹರಿವಿನಲ್ಲಿ ಸೊರಗುತ್ತವೆ. ಸದ್ದು ಕಳೆದುಕೊಳ್ಳುತ್ತವೆ.
ಆದರೆ ನಮ್ಮ ಪ್ರೇಮ ನೋಡು. ಮೊದಲ ದಿನದ ನೂರು ಪಟ್ಟು ಹೆಚ್ಚಾಗಿದೆ.
ಇದ್ಯಾಕೆ ಹೀಗೆ ಅಂದರೆ ನಮ್ಮದು ಈ ಲೋಕದ ಪ್ರೀತಿಯಲ್ಲ ಚಿನ್ನಾ ಅನ್ನುತ್ತಿ ನೀನು.
ಆದರೂ ಹೆಜ್ಜೆಹೆಜ್ಜೆಗೂ ಅನುಮಾನಿಸ್ತೀನಿ‌ ನಾನು, ಸರಿಯಲ್ಲ ಅಂತ ಗೊತ್ತಿದ್ರೂ. ದಿನ ಮುಗಿಯುವ ಹೊತ್ತಿನಲ್ಲಿ ನೀನು ನನ್ನಿಂದ ದೂರಾಗ್ತಿದ್ದೀಯಾ ಅಂತ ಕಾಲುಕೆರೆದು ಜಗಳಾಡಿ ಸಂಬಂಧವಿರದ ಸಂಗತಿಗಳೆಲ್ಲವನ್ನೂ ಜಗಳಕ್ಕೆ ಬೆಸೆದು ದಿಂಬಿನ‌ ಮೇಲೆ ನೀ ಕೊಡಿಸಿದ ದುಪ್ಪಟ್ಟಾ ಹರಡಿ ನಿನ್ನ ಎದೆಯ ಮೇಲೆ ಮಲಗಿ ದುಃಖಿಸುತ್ತಿದ್ದೇನೆ ಎಂದುಕೊಂಡು ನಿದ್ದೆ ಹೋಗುತ್ತೇನೆ.
ಹೀಗೊಂದು ರಾತ್ರಿ ಸಂಭವಿಸಬಹುದೇ ನನ್ನ ಪಾಲಿಗೆ ಎನ್ನುವ ನಿರೀಕ್ಷೆಯಲ್ಲಿ, ಕರುಣಿಸು ಎಂಬ ಪ್ರಾರ್ಥನೆಯೊಂದಿಗೆ ನಿನ್ನ ಕನವರಿಸಿ ಆಯಾಸ ಗೊಂಡಿದ್ದ ಮನಸ್ಸು ಮತ್ತೆ ನಿನ್ನನ್ನು ಮುದ್ದಾಗಿ ತುಂಬಿಕೊಂಡು mornings ಹನೀ ಹೇಳಲು ತವಕಿಸುತ್ತದೆ.
ನಾಳೆಗೇನಿದೆ ಹೊಸ ಜಗಳ ಅಂತ ಮತ್ತೆ ಕಾಯ್ತೀನಿ.

ನನ್ನ ಹನೀ
ನಿನ್ನ ಮೀಸಲು ಹೆಣ್ಣು ನಾನು.
ನಿನ್ನ ನಿಷ್ಠೆಯ ಬಗ್ಗೆ, ನಿನ್ನ ಪ್ರಾಮಾಣಿಕತೆಯ ಬಗ್ಗೆ ನನಗೆ ಅಪನಂಬಿಕೆ ಬಂದಾಗ ನನ್ನ ಸಂಭಾಳಿಸಿಕೊ. ನಾನು ಪ್ರೀತಿಸದಿದ್ದರೂ, ಬಿಟ್ಟು ಹೊರಟರೂ ನೀನು ಮಾತ್ರ ಅದೇ ಮೊದಮೊದಲ ಪ್ರೇಮಿಯಂತೆ ನನ್ನ ಪ್ರೀತಿಸು.
ಯಾವ ಹೆಣ್ಣನ್ನೂ ಹೆಚ್ಚು ನೋಡಬಾರದು ಎಂಬ ನನ್ನ ನಿತ್ಯದ ತಾಕೀತಿಗೆ ಹು ಅನ್ನು.

ಅದ್ಯಾಕೆ ಹನೀ.
ನಾವಿಬ್ಬರೂ ಒಟ್ಟಿಗೆ ಹೊರಡುವವರು ಎಂದಾಗ ನಿನಗೆ ಅಷ್ಟೊಂದು ಸಿಡಿಮಿಡಿ.
‘ನನ್ನ ಚಿನ್ನಾ. ನಿನಗೂ ಸಾಕಷ್ಟು ದೊಡ್ಡವನು ನಾನು. ಆದರೂ ನೀನೇ ಹೋಗು ಮೊದಲು. ನಿನ್ನ ಹಿಂದೆಯೇ ನಾನು. ಬಸವನ ಹಿಂದಿನ ಬಾಲ, ಅದಕ್ಕೂ ಮೊದಲು ಜಗದ ಕರ್ತವ್ಯ ಮುಗಿಸೋಣಾ’
ಎದೆ ಭಾವ ಗಟ್ಟಿ ಮಾಡಿಕೊಂಡು ನೀ ಹೀಗೆ ಹೇಳುವಾಗ ನಿನ್ನ ಎದೆಯೊಳಗೆ ಮುಖವಿಟ್ಟು ಕಣ್ಣೀರಾಗುವ ಆಸೆಯಾಗುತ್ತದೆ.
ಆದರೂ ಸಂದೇಹ.
‘ನಾ ಹೋದಮೇಲೆ ಯಾರ ಜೊತೆಯಾದರೂ ಪೋಲಿ ಸುತ್ತಬಹುದು ಅಂತಲೋ’ ಅಂದಾಗ ನಿನ್ನ ಕಂಗಾಲು ಕಣ್ಣುಗಳಲ್ಲಿ ತುಂಬಿರುವ ಪ್ರೀತಿ ಈ ಲೋಕದ್ದಲ್ಲ.

ಅದೊಂದು ದಿನ ಮುದ್ದಿನಲಿ ಹೇಳಿದ್ದೆ ನಾನು.
‘ಇನ್ನು ಹೀಗೆ ಸಂದೇಹ ಪಡುವುದಿಲ್ಲ ನನ್ನಾಣೆ’
ಹಾಗೇ ಮೂರು ದಿನ ಸುಮ್ಮನಿದ್ದೆ.
ಮೂರನೇ ದಿನಕ್ಕೆ ನಿನ್ನ ಪುಟ್ಟ ಪತ್ರ

‘ಅವಳು ಅನುಮಾನಿಸದ
ಈ ಹಗಲು
ನಮ್ಮ ಪ್ರೇಮದ
ಕುರಿತೇ ಸಂದೇಹ ನನಗೆ’

ನನ್ನ ಬಟ್ಟಲುಗಣ್ಣಿನ ಕಟ್ಟಾಣಿ ಹುಡುಗನೇ.
‘ಈ ಮೂರು ದಿನ ಯಾರ್ಯಾರನ್ನು ನೋಡಿದ್ದೆ, ಹೇಳು’
ನಾನು ಮುಖ ಧುಮ್ಮಿಸಿ ಕೇಳಿದ ಆ ಹೊತ್ತು
ನೀನು ಹಂಬಲಿಸಿ ತುಟಿಯೊಡ್ಡಿದ ಘಳಿಗೆಗಳ ಮೆಲುಕಿನಲ್ಲಿರುವೆ.
ಪತ್ರ ಮುಂದುವರಿಸಲಾರೆ.
….
ನಿನ್ನ ಚಿನ್ನಾ

‍ಲೇಖಕರು Admin

July 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಸಂಗೀತ ರವಿರಾಜ್

    ಬರಹ ಚೆನ್ನಾಗಿದೆ ಅಕ್ಕ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: