ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಕ್ಷ್ಮಣ ವಿ ಎ ಕವಿತೆ- ಬುದ್ಧಿ ಹೇಳುವುದು ಹೇಗೆ ?

ಡಾ ಲಕ್ಷ್ಮಣ ವಿ ಎ 

ಹರೆಯದ ಹುಡುಗಿಯ
ಎಡಗಾಲಿನ ಹೈ ಹೀಲ್ಡಿನ
ಹವಾಯಿಯೊಂದನ್ನು
ದಡಕ್ಕೆ ತಂದೆಸಿದಿದೆ ಅರಬ್ಬೀ ಕಡಲು

ಹೇಳಿ ಕೇಳಿ
ಹುಣ್ಣಿಮೆಯ ಇರುಳು
ಹುಚ್ಚೆದ್ದು ಕುಣಿವ ಅಲೆಗಳು
ರೇತಿನಲಿ ಅಂಗಾತ ಬಿದ್ದು
ಎದೆಯೊಡೆದು ರೋದಿಸುವಂತೆ
ಜೋರು ಗಾಳಿಗೆ ಸಣ್ಣಗೆ ಕಂಪಿಸುವಂತೆ
ಕಾಣುವ ಒಂಟಿ ಹೈ ಹೀಲ್ಡು

ಬದುಕಿ ಬಿಡುತ್ತೇನೆ ದಮ್ಮಯ್ಯ,
ಅವಳು ಬಿಟ್ಟು ಎಸೆದರೂ ಆ ಇನ್ನೊಂದರ
ಜೊತೆಗೆ ಹೀಗೋ ಹಾಗೋ ಹೊಂದಿಕೊಂಡು

ಆಕಾಶವಾಣಿಯ ಇಂದಿನ
ಹವಾಮಾನ ವರದಿ ಕಡಲಿಗಿಳಿಯದಂತೆ
ಎಚ್ಚರಿಸಿದೆ ಬೆಸ್ತರನು
ಬಡ ಒಡಲುಗಳ ಒಲೆಯ
ಮೇಲೆ ಎಡೆಬಿಡದ ಸುರಿಯುವ ಆಷಾಢದ ಮಳೆ
ಬಲೆಯಿಲ್ಲ ಬೆಸ್ತನಿಲ್ಲ ದೋಣಿಯಿಲ್ಲ
ಸುರಿವ ಮಳೆಗೆ ಕರುಣೆಯಿಲ್ಲ –
ಮೀನು ಸಾರಿಗೆ ಮೂಗರಳಿಸಿ ಕುಂತ
ಪೇಟೆಯ ಬೀದಿ

ಅಗೋ
ಅಲ್ಲೊಂದು – ಕೆಂಪು ದಾವಣಿ
ತೇಲುತ್ತ
ದೂರದ ಕಡಲನೀಲಿಯಲಿ
ಇನ್ನಷ್ಟೇ ನಂದಿ ಹೋಗುವ
ದೀಪದಂತೆ

ಕೊನೆಯ ಬಾರಿಗೆ
ಕೊನೆಯ ತಿರುವಿನಲಿ ತಿರುಗಿ
ನಿಂತು ನೋಡಿದ ಕಡಲು ಕಣ್ಣುಗಳು
ತೀರದ ಬಂಡೆಗೆ ಬಡಿಯುವ
ಅಲೆಯ ಸದ್ದಿನ ಎದೆಯ ಬಡಿತಗಳು

ಕಣ್ಣು ಮುಚ್ಚಿ
ಅವಳ ಚಿತ್ರ ಕಳಚಬಹುದು ಹೇಗೊ
ಎದೆಯ ಬಡಿತಗಳಿಗೆ
ಬುದ್ದಿ ಹೇಳಲಿ ಹೇಗೆ ?

‍ಲೇಖಕರು Admin

18 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading