ಲಕ್ಷ್ಮಣ ವಿ ಎ
ನಿನ್ನೆ ರಾತ್ರಿ ಅರ್ಧ ಬರೆದಿಟ್ಟ ಸಾಲು
ಇಂದು ಪೂರ್ಣಗೊಳಿಸಲು ಕುಳಿತೆ
ಎಲ್ಲಿ
ಅವಿತುಕೊಂಡಿತೊ!? ಅರೆ ಬರೆ ಕವಿತೆ !
ಹೆಗಲಿಗೆ ಹೆಗಲು ಕೊಟ್ಟು
ಸಾಲಾಗಿ ಒತ್ತೊತ್ತಾಗಿ ಬಿಸಿಯೂಟಕೆ
ಶಾಲೆಯ ಮಕ್ಕಳು ಕುಳಿತಂತೆ
ತುಸು ಸ್ಪೇಸು ಬಿಡಬಿಡಬೇಕಿತ್ತು
ಉಸಿರು ಕಟ್ಟದ ಹಾಗೆ ಪದ
ನಿನ್ನೆ ಮೊನ್ನೆಯತನಕ ಜೊತೆ ಜೊತೆಯಾಗಿ
ನಡೆದವರು ಇಂದು ಯಾರೂ
ಕಾಣಿಸುತಿಲ್ಲ ಹಿಂದೆ ಮುಂದೆ
ಕೂಗಿದರೆ ಯಾರು ಯಾರೋ ತಿರುಗಿ
ನೋಡುವರು ಗುರುತಿರುವವರ ಹಾಗೆ
ಬೇಕಾದವರೊಬ್ಬರು ಕಣ್ಣು ತಪ್ಪಿಸಿಕೊಂಡು
ತಿರುಗುವ ಜಗದ ಹಾಗೆ

ಸುಡು ಹಗಲಿನ ಆಯಾಸ ನೀಗಲು
ರಾತ್ರಿ
ಅಲ್ಲಲ್ಲಿ ತುಸು ತುಸುವೆ ನಿಂತು ಸಾವರಿಸಿಕೊಂಡು ಸಾಗುವ ನದಿ
ಬೆಳಗು ನಿದ್ದೆಗಣ್ಣಿನಲಿ ಆಕಳಿಸುತಿದೆ
ಕಿರು ಬೆಟ್ಟದ ಬಳಿ ನಡುಗಡ್ಡೆ ಸೀಳಿ
ರಾತ್ರಿ ದಾಟಿದ ಸೇತುವೆ ಅರೆ ಬರೆ ಕನಸಿನಲಿ
ಕಣ್ಣೆದಿರು ಸವೆದು ಸಾಗಿದ
ಸುಖದ ದಾರಿ
ಹಿಡಿದು ಹಿಂದುರುಗಿ ನಡೆದರೆ ಮಣ್ಣಾಗದ ಕಾಲು
ಬೆಟ್ಟಗಳು ಬಸವಳಿದು ಬಸಿದು
ನದಿಯ ಬೆವರುಗಣ್ಣಿನಲಿ
ಎರಡೆರಡು ಚಿತ್ರ ನಿನ್ನೆ ದಾಟಿದ
ಬೆಟ್ಟವೇ ಅಥವಾ ಆ ಇನ್ನೊಂದವೇ?
ಕಣ್ಣು ಕಂಬನಿಯಲಿ
ಲಂಗರು ಹಾಕಿದ ದೋಣಿ
ಮರಳ ಬಿಸಿಯ ಸುಖದಲಿ ಬಿದ್ದು
ಹೊರಳಾಡುವ ಅಲೆ ಅಲೆ!
ಎಲೆ ಕಡಲೆ
ಕಳಿಸು ಮತ್ತೊಮ್ಮೆ
ನಿನ್ನೆ ಬಂದಂತಹ ಆ ಸುಖದ ಅಲೆ
ತೀರದಲಿ
ಬರಿ ಪಾದದಲಿ
ನಡೆದ ಅವಳ ಹೂವ ಮೇಲಿನ
ಚಿಟ್ಟೆಯ ಹಗುರಿನ
ಹೆಜ್ಜೆಯ ಗುರುತು ಮರಳಿಸು
ಒಮ್ಮೆ ಬರೆದುದ ನಾ
ಇನ್ನೊಮ್ಮೆ ಬರೆಯಲಾರೆ






ಬೇಕಾದವರೊಬ್ಬರು ಕಣ್ತಪ್ಪಿಸಿಕೊಂಡು
ತಿರುಗುವ ಜಗದ ಹಾಗೆ..