ಲಂಕೇಶ್ ಗೆ ಹೊಡೆದುಬಿಟ್ರಂತೆ ಅಂತ ಸುದ್ದಿ ಗೊತ್ತಾದಾಗ್ಲಿಂದ..

ಅವ್ರು ನಮ್ದೆಲ್ಲಾ ಬರದವ್ರೇ ಅಂದ್ರೆ ನಂ ಥರಾನೇ!

GNM Yagna light version

ಜಿ ಎನ್ ಮೋಹನ್ 

ಡೋರ್ ನಂ ೧೪೨ ಕೃತಿಯಿಂದ 

 

ಠ ಹಿಡಿದು ಕೂತುಬಿಟ್ಟಿದ್ದೆ. ಮುಖ ಊದಿಸಿಕೊಂಡಿದ್ದೆ. ಅಮ್ಮನಿಗೋ ಇದೇನಪ್ಪಾ ಯಾವ್ದೋ ಹೊಸ ಥರದ್ದು ಮನೇಲಿ ಇಣುಕ್ತಾ ಇದೆಯಲ್ಲಾ ಅನಿಸಿಬಿಟ್ಟಿತ್ತೇನೋ. ಇಷ್ಟು ದಿನ ನೋಡಿದ ನಾಟ್ಕಾನೇ ಸಾಕು ಇದೊಂದು ಹೊಸಾದು ಹುಟ್ಕಂತಲ್ಲ ಅನಿಸಿತ್ತೇನೋ.

vatalವಿಷಯ ಇಷ್ಟೆ. ಲಂಕೇಶ್ ಗೆ ಹೊಡೆದುಬಿಟ್ರಂತೆ ಅಂತ ಸುದ್ದಿ ಗೊತ್ತಾದಾಗ್ಲಿಂದ ತಳಮಳಿಸಿ ಹೋಗಿದ್ದೆ. ನಾನೇನು ಲಂಕೇಶ್ ಗೆ ನೆಂಟನೂ ಅಲ್ಲ, ದೋಸ್ತೂ ಅಲ್ಲ ಅವರನ್ನ ನೋಡೂ ಇರ್ಲಿಲ್ಲ. ಅದ್ರಲ್ಲೂ ಅವಾಗ ನಂಗೆಷ್ಟು ವಯಸ್ಸು. ಮೀಸೆ ಬಂದು ನಾಲ್ಕು ದಿನಾ ಆಗಿತ್ತು. ಹೈಸ್ಕೂಲ್ ವರೆಗೂ ಚಡ್ಡೀನೇ… ಅನ್ನೋ ಅಪ್ಪನ ರೂಲ್ಸ್ ಸಕ್ಸಸ್ ಮಾಡಿ ಪ್ಯಾಂಟ್ ಕಾಲಕ್ಕೆ ಬಂದಿದ್ದೆ. ಅವಾಗ್ಲೇ ಬಂತಲ್ಲ ವಾಟಾಳ್ ನಾಗರಾಜ್ ಹೊಡೆಸಿಬಿಟ್ರಂತೆ ಲಂಕೇಶ್ ಗೆ ಅನ್ನೋ ಸುದ್ದಿ. ವಾಟಾಳ್ ಮುಖ ಹೆಂಗೈತೆ ಅಂತ ಯಾರಿಗೆ ಗೊತ್ತಿತ್ತು. ಆ ವಿಚಿತ್ರ ಟೋಪಿ ಕನ್ನಡಕ ಅಷ್ಟೇ ಕಣ್ಣಿಗೆ ಬೀಳ್ತಾ ಇದ್ದದ್ದು.

ಅದ್ರೆ ಈ ವಾಟಾಳ್ ಬಗ್ಗೇನೂ ಒಂದಿಷ್ಟು ಮರ್ಯಾದೆ ಇತ್ತು. ಯಾಕಂದ್ರೆ ನಮ್ಮಣ್ಣ ನವೆಂಬರ್ ೧ ಬಂತು ಅಂದ್ರೆ ಎಲ್ಲಾರ್ನೂ ಗುಡ್ಡೆ ಹಾಕ್ಕೊಂಡು ಬಸ್ ಹತ್ತಿಸಿಕೊಂಡು ಮೈಸೂರು ಬ್ಯಾಂಕ್ ಸರ್ಕಲ್ ಗೆ ಕರ್ಕೊಂಡೋಗೋರು. ಕೆಆರ್ ಸರ್ಕಲ್ ಗೆ ಹೋಗೋ ರೋಡಲ್ಲಿ ಜನ ಜನ ಜನಾ. ಆ ರಷ್ ನಲ್ಲಿ ನಾವು ಎರಡನೇ ಕ್ಲಾಸು. ಮೂರ್ನೇ ಕ್ಲಾಸುಗಳು ಅವರಿವರ ಕಾಲು ಕೆಳಗೆ ಬಗ್ಗಿ ನೋಡ್ತಾ ಇದ್ದಾಗ ಬರೋದು ವಾಟಾಳ್ ಜಾತ್ರೆ. ಟ್ಯಾಬ್ಲೋ ಅಂದ್ರೆ ಏನು ಅಂತ ಫಸ್ಟ್ ಗೊತ್ತಾಗಿದ್ದೇ ಅವಾಗ. ಗಂಟೆಗಟ್ಟಲೆ ಮೆರವಣಿಗೆ, ಯಾವ್ ಯಾವ ಸಾಹಿತೀದೋ ದ್ವಾರಗಳು, ಚೆನ್ನಾಗಿರೋದು. ಇದನ್ನೆಲ್ಲಾ ಮಾಡಿಸ್ತಾ ಇದ್ದದ್ದು ವಾಟಾಳ್ ಅಲ್ವಾ. ಸಖತ್ತಾಗಿ ಮಾಡಿಸ್ತಾನೆ ಅನ್ನೋದೊಂದು ತಲೇಲಿ ಕೂತುಬಿಟ್ಟಿತ್ತು.

ಈಯಪ್ಪ ಸಖತ್ತಾಗಿ ಎಂತದೂ ಮಾಡಿಸ್ತಾನೆ ಅಂತಾ ಅರ್ಥ ಆಗೋಕೆ ಹತ್ತು ವರ್ಷ ಬೇಕಾಯ್ತು ನಂಗೆ. ಅದೂ ಪಿಯುಸಿಗೆ ದಾಟಿಕೊಂಡ ಮೇಲೇ. ಲಂಕೇಶ್ ಗೆ ಹೊಡೆಸಿದ ಮೇಲೇ. ಲಂಕೇಶ್ ಅಂದ್ರೇನು ಕಡಿಮೇನಾ? ಕ್ಲಾಸಲ್ಲಿ ಕೂತಿದ್ದೋನು ಟೀಚರ್ರು ಬೋರ್ಡ್ ಮೇಲೆ ಏನೋ ಬರಿಯಕ್ಕೆ ತಿರುಗಿದಾಗ ದಿಢೀರ್ ಅಂತ ಮಾಯಾ ಆಗೋಗ್ತಿದ್ದೆ. ಸಿಕ್ಕಸಿಕ್ಕ ಅಂಗಡಿ ಮುಂದೆ ಲಂಕೇಶ್ ಬಂತಾ ಲಂಕೇಶ್ ಬಂತಾ ಅನ್ತಿದ್ದೆ. ಅಂಗಿತ್ತು ಅಟ್ರಾಕ್ಷನ್ನು. ಗುಂಡೂರಾವ್, ಬಂಗಾರಪ್ಪ ಅಂದ್ರೆ ಎಲ್ಲಾರ್ಗೂ ಒಂಥರಾ ಹೆದ್ರಿಕೆ ಇತ್ತು. ಗುಂಡೂರಾವ್ ರೌಡಿಗಳನ್ನ ಬಿಡ್ತಾನೆ ಅಂತ. ಬಂಗಾರಪ್ಪ ಪ್ರಜಾವಾಣಿನೋರ ಜಾತೀನೇ ಅಂತ. ಅಂತಾದ್ರಲ್ಲಿ ಈ ಲಂಕೇಶ್ ಅಂತಾ ಪ್ರಜಾವಾಣೀಲೇ ಶುರು ಮಾಡಿದ್ರಲ್ಲಾ ವರಸೆ. ಬಂಗಾರಪ್ಪಂಗೆ “ಬಂ” ಗುಂಡೂರಾವ್ ಗೆ “ಗುಂ” ಅಂತ ಹೆಸರಿಟ್ರು. ಪ್ರತೀ ವಾರ ಲೇಖನ ಬರೆಯೋರು. ಯಾರೋ ಹೇಳೋರಪ್ಪ ಒಂದೇ ಥರಾ ಪುಕ್ಕ ಇರೋ ಪಕ್ಷಿಗಳೆಲ್ಲಾ ಒಂದ್ಕಡೆ ಸೇರ್ಕಂತವೆ ಅಂತಾ. ಹಂಗೆ ನನ್ನ ಪುಕ್ಕ, ಲಂಕೇಶ್ ಪುಕ್ಕ ಒಂದೇ ಥರಾ ಇತ್ತೇನೋ. ಅವರು ಬರೆಯೋದು ಸಖತ್ತಾಗಿದೆ ಅನಿಸೋಕೆ ಶುರು ಮಾಡ್ತು.

lankeshಒಂಥರಾ ಯಾರ ಮುಲಾಜೂ ಇಲ್ಲ, ಯಾವ ಮುಲಾಜೂ ಇಲ್ಲ, ಬರೆಯೋ ಭಾಷೇನಲ್ಲಿ ನಾಜೂಕಿಲ್ಲ, ಮಡಿವಂತಿಕೆ ಮಾಡಲ್ಲ. ಒಂಥರಾ ವೆಜ್ಜು-ನಾನ್ ವೆಜ್ಜು ಮಧ್ಯೆ ಯುದ್ಧ ಆದ್ರೆ ನಾನ್ ವೆಜ್ ಮಸಾಲೇನೇ ಒಂದ್ ಕೈ ಮೇಲ್ ಮಾಡ್ಕಂಡಿರ್ತದಲ್ಲಾ ಹಂಗಿತ್ತು. ನಂಗಂತೂ ಯಾಕೆ ಇಷ್ಟ ಆಗ್ತಿತ್ತಪ್ಪಾ ಅಂದ್ರೆ ನಾನೂ ಮನೇಲಿ ಒಂಥರಾ ಯುದ್ಧ ನಡೆಸಿದ್ದೆ. ನಮ್ಮಪ್ಪನ ವಿರುದ್ಧ. ನೀವು ಹೇಳಿದ್ ಯಾಕ್ ಕೇಳ್ಬೇಕು? ನೀವು ಹಿಂಗ್ ಅಂದ್ರೆ ನಾನ್ ಅದ್ನ ಬಿಟ್ಟು ಇನ್ನೆಂಗೋ ಮಾಡೋನೇ…ಅನ್ನೋ ಥರಾ ಯುದ್ಧ ಮಾಡ್ತಿದ್ದೆ. ನಂಗೆ ಲಂಕೇಶ್ ಬರೆಯೋಕೆ ಶುರು ಮಾಡ್ದಾಗ ನನ್ನ ಯುದ್ಧ ಮನೇನಲ್ಲಿ, ಅವರ ಯುದ್ಧ ಬೀದೀನಲ್ಲಿ ಅನಿಸ್ತು. ಒಂಥರಾ ನಾನೂ ಲಂಕೇಶೂ ಮೀಟ್ ಮಾಡ್ದಿರಾನೇ, ಮಾತಾಡ್ದಿರಾನೇ ಬಾಳಾ ಕ್ಲೋಸ್ ಆಗ್ಬಿಟ್ವಿ.

“ಬಂ” “ಗುಂ” ಬರ್ದಿದ್ದಕ್ಕೇ ಇಷ್ಟ್ ಆಗಿತ್ತಾ. ಆಮೇಲೆ ಶುರುವಾಯ್ತು ನೋಡಿ ಅವರ ಪೇಪರ್ರು. ಆ ಲಂಕೇಶ್ ಎಷ್ಟು ವಿಚಿತ್ರ ಅನಿಸಿದ್ದು ಯಾಕಪ್ಪಾ ಅಂದ್ರೆ ಅವರೆಸರೇ ಇಟ್ಕೊಂಡ್ರಲ್ಲಾ ಅದಕ್ಕೆ. ನನಗೆ ಒದ್ದಾಟ ಆಗ್ತಾ ಇದ್ದದ್ದು ಪೇಪರ್ ಅಂಗಡಿ ಮುಂದೆ ನಿಂತ್ಕೊಂಡಾಗ ಹೆಂಗಪ್ಪಾ ಕೇಳೋದು ಒಂದು ಲಂಕೇಶ್ ಕೊಡ್ರಿ ಅಂತಾ. ಆ ಗುಜ್ಜಾರ್ ಎಳೀತಾ ಇದ್ದ ಗೆರೆ ಲಂಕೇಶ್ ಇಡ್ತಾ ಇದ್ದ ಬರೆ ಎರಡೂ ಹೆಂಗೆ ಅಟ್ರಾಕ್ಟ್ ಮಾಡ್ಬಿಡ್ತು ಅಂದ್ರೆ…

ಚಿಕನ್ ಪಲಾವ್, ಬೆಂಡೆಕಾಯಿ ಗೊಜ್ಜು ಎಲ್ಲಾ ಪೇಪರ್ಗೆ ಎಂಟರ್ ಆಗಿದ್ದೇ ಅವ್ರಿಂದ. ಅಲ್ಲಾ ರಾಜಕೀಯಾನ ಪಲಾವು, ಗೊಜ್ಜುನಲ್ಲಿ ಹೇಳ್ಬಿಡಬೌದಾ ಅಂತಾ. ಹಿಂಗಾಗೆ ಲಂಕೇಶು ಫೇಮಸ್ ಆಗಿದ್ರು. ಫೇಮಸ್ ಅಂತಾ ಅಲ್ಲ. ಯಾಕಂದ್ರೆ ಅಷ್ಟೊತ್ತಿಗೆ ಅವ್ರು ಸಿಕ್ಕಾಪಟ್ಟೆ ಬರ್ದಿದ್ರು. ಫಿಲಂ ತೆಗೆದಿದ್ರು. ಹಾಡು ಬರ್ದಿದ್ರು. ಪೇಪರ್ ಮಾಡಿದ್ಮೇಲೆ ಫೇಮಸ್ ಆಗ್ಬೇಕು ಅನ್ನೋದೇನೂ ಇರ್ಲಿಲ್ಲ.

ಅವ್ರು ಎಲ್ಲಿಂದಲೋ ಬಂದವರು ಫಿಲಂ ಮಾಡಿದ್ರಲ್ಲಾ ಆಗಂತೂ ನಂಗೆ ತುಂಬಾ ಇಷ್ಟ ಆಗೋಗಿದ್ರು. ಯಾಕಂದ್ರೆ-ಕರಿಯವ್ನ ಗುಡಿತಾವ ಅರಳಾವೆ ಬಿಳಿಹೂವು/ಸೀಮೇಯ ಜನ ಕುಣಿದು ನಕ್ಕಾಂಗದ/ತುಂಟ ಹುಡುಗ್ಯಾರಲ್ಲಿ ನೆವ ಹೇಳಿ ಬರುತಾರೆ/ಹರಯದಾ ಬಲೆಯಲ್ಲಿ ಸಿಕ್ಕಾಂಗದ/ಊರಿಂದ ನಾಕೆಜ್ಜೆ ಹಾಕಿದರೆ ಕಾಣತೈತೆ/ಅಲ್ಲೀಯೆ ಹರಿದವಳೆ ಐರಾವತಿ… ಅಂತಾ ಬರೆದಿದ್ರು. ನಾನೂ ಅವಾಗ ಆ ಹರಯದ ಬಲೆಯಲ್ಲಿದ್ದೆ. ಆಗ ಅನ್ನಿಸೋದು ಅಲ್ಲಾ ಈ ಮನುಷ್ಯಾ ಏನೇನೆಲ್ಲಾ ಆಟಾ ಆಡಿರ್ಬೇಕು ಅಂತ. ಅದಕ್ಕಿಂತ ನಮ್ದೆಲ್ಲಾ ಬರದವ್ರೆ ಅಂದ್ರೆ ಅವ್ರು ನಮ್ ಥರಾನೇ ಅಂಥ ಡಿಸೈಡ್ ಮಾಡಿಬಿಟ್ಟಿದ್ದೆ. ಹಂಗಾಗೇನೇ ಅವ್ರು ನಮ್ಮೋರು ಆಗ್ಬಿಟ್ಟಿದ್ರು.

ಕೆಂಪಾದವೋ ಎಲ್ಲಾ ಕೆಂಪಾದವು/ಹಸುರಿದ್ದ ಗಿಡಮರ/ಬೆಳ್ಳಗಿದ್ದ ಹೂವೆಲ್ಲಾ/ನೆತ್ತಾರ ಕುಡಿದಾಂಗ ಕೆಂಪಾದವು/ಅಲ್ಲೊಂದು ಗಿಣಿ ಕೂತು ಕಥೆಯೊಂದ ಹೇಳೈತೆ/ಕೇಳಾಕೆ ನಾನಿಲ್ಲ ಊರೊಳಗೆ/ಕಥೆ ನಡೆದ ದಿನದಿಂದ ಕೆಂಪಾಗಿ ಹರಿದವಳೆ/ಕಥೆಗಳಾ ಮಾರಾಣಿ ಐರಾವತಿ… ಇವೆಲ್ಲಾ ಒಂಥರಾ ನಾಡಗೀತೆ ಆಗೋಗಿತ್ತು. ಸದಾ ತಲೇನಲ್ಲಿ ಗುನುಗುನಿಸ್ತಾ ಇರ್ತಿತ್ತು.

ಅದ್ರಲ್ಲೂ… ಎಲ್ಲಿದ್ದೆ ಇಲ್ಲೀ ತಂಕ/ಎಲ್ಲಿಂದ ಬಂದ್ಯವ್ವ/ನಿನ ಕಂಡು ನಾ ಯಾಕೆ ಕರಗಿದೆನೋ/ಸುಡುಗಾಡು ಹೈದನ್ನ/ಕಂಡವಳು ನೀನ್ಯಾಕೆ/ಈಸೊಂದು ತಾಯಾಗಿ ಮರುಗಿದೆಯೋ… ಹಾಡಂತೂ ನನ್ನೊಳಗಿದ್ದ ದುಃಖಾನ ಹೊರಗೆಳೆದು ಕೂರಿಸ್ತಿತ್ತು. ಆ ಹಾಡೂ, ಆ ರಾಗಾ ಈಗ್ಲೂ ನೋವಾದಾಗ್ಲೆಲ್ಲಾ ಕುಣಿಯುತ್ತೆ.

GNM Lankesh AK Subbaiahವಿಮಲಾನಾಯ್ಡು ಅಂತ ಇದ್ರು. ಎಂಇಎಸ್ ಕಾಲೇಜಿನಲ್ಲಿ ಓದ್ತಾ ಇದ್ರು. ನಮ್ಮಣ್ಣನ್ನ ಕ್ಲಾಸ್ ಮೇಟ್. ಅವ್ರು ಲಂಕೇಶ್ ಸಿನಿಮಾಗೆ ಸೆಲೆಕ್ಟ್ ಆಗ್ಬಿಡ್ಬೇಕಾ! ಹಂಗಾಗಿ ವಿಮಲಾನಾಯ್ಡು ಇರೋ ಸಿನಿಮಾ ಅಂತ ಶುರುವಾಗಿದ್ದು, ಕೊನೇಗೆ ವಿಮಲಾನಾಯ್ಡು ಮಾಯ. ಬರೀ ಲಂಕೇಶ್ ಕೂತುಬಿಟ್ರು ಮನಸೊಳಗೆ. ಪತ್ರಿಕೆ ಶುರುವಾಗಿದ್ದೇ ಅದ್ರಲ್ಲಿ ವಿಮಲಾನಾಯ್ಡು ಜಡೆ ಬಗ್ಗೆ ಬರೆದ್ರು, ಜಯಮಾಲಾ ನನ್ನ ತಮ್ಮ ಅಂತ ಬರೆದ್ರು. ಇದೆಲ್ಲಾ ಯಾವ ಪೇಪರಲ್ಲಿತ್ತು. ಟಿಎಸ್ ಆರ್ ಛೂಭಾಣ ಕಾಲದೋರಂತೂ ನಾವಲ್ಲ. ಕಿಡಿ ಶೇಷಪ್ಪ ಅಂತ ಇದ್ರು ಅಂತಾರೆ. ನಾವು ಕಾಣ್ಲಿಲ್ಲ. ಇನ್ಯಾರಿದ್ರು. ಫಸ್ಟ್ ಆಫ್ ಆಲ್ ಟ್ಯಾಬ್ಲ್ಯಾಯ್ಡ್ ಅಂತ ಎಲ್ಲಿತ್ತು. ಅವಾಗ ಬಂತು ನೋಡಿ ಸಾಯಿಬಾಬಾ ಬಟ್ಟೇನಲ್ಲೇ ಎಲ್ಲಾ ಮಾಡ್ಕಂಡ್ರಂತೆ, ಟೆನಿಸ್ ಆಡೋ ಮಾರ್ಟಿನಾ ನವ್ರಾಟಿಲೋವಾ ಮಲಗೋದು ಹೆಂಗಸರ ಜೊತೇನೇ ಅಂತೆ. ಇಬ್ರಾಹಿಂ ವಾಚ್ ಹಗರಣ, ರೇಣುಕಾ ವಿಶ್ವನಾಥ್ ಸಂಸಾರ ಎಕ್ಕುಟ್ಟೋಗಿದ್ದು… ಹಿಂಗೆ ಪೇಪರ್ ತುಂಬಾ ನಾವು ಊಹೆ ಮಾಡ್ಲಿಕ್ಕೂ ಆಗದ ವಿಷಯಾನೇ.

ಪಾಪ! ಮಲ್ಲೇಶ್ವರಂನಲ್ಲಿ ಮಟನ್ ಶಾಪ್ ಓಪನ್ ಆದಂಗೆ ಆಗೋಯ್ತು ಜರ್ನಲಿಸಂಗೆ. ಬೀರ್ ಕುಡೀತಾ ಇದ್ದೆ, ಈ ಪುಸ್ತಕ ಓದ್ತಾ ಇದ್ದೆ, ಅವಳ ಮೈಕಟ್ಟು ಹಿಂಗಿತ್ತು ಅಂತೆಲ್ಲಾ ಲಂಕೇಶ್ ಬರ್ಕಂಡ್ರೆ ನಮ್ಮ ಆಟೋಬಯಾಗ್ರಫೀನಾ ಯಾರೋ ಬರ್ದು ಹಾಕ್ತಾವರಲ್ಲಪ್ಪ ಅನಿಸೋದು. ಲಂಕೇಶ್ ಪತ್ರಿಕೆ ಅಂದ್ರೆ ಅಂಗೇ. ಬೀದೀಲಿ ಕಾಲರ್ ಪಟ್ಟಿ ಹಿಡಿದು ನಿಜ ಕಕ್ಕಿಸೋ ಹಂಗಿರೋದು. ಎಲ್ಲಾರ್ನೂ ಎದುರಾಕಿಕೊಂಡು ಬರೆಯೋರು.

ನಮ್ಮ ವಯಸ್ಸೂ ಹಂಗೇ ಇತ್ತು. ಕ್ಲಾಸಲ್ಲಿ ಮೇಷ್ಟ್ರನ್ನ ಎದುರಾಕ್ಕಿಳ್ಳಬೇಕು, ಮನೇನಲ್ಲಿ ಅಪ್ಪನ್ನ, ಬೀದೀನಲ್ಲಿ ಬದ್ಮಾಷ್ ನ ಅಂತೆಲ್ಲ. ಅದಕ್ಕೆಲ್ಲಾ ಸಿಕ್ತಲ್ಲಾ ಧೈರ್ಯ ನಮ್ತರದ ಹುಡುಗರಿಗೆ! ಹುಡುಗರ ದಂಡೇ ರೆಬೆಲ್ ಆಗಿಬಿಡ್ತು. “ಕರೆ ನೀಡಿದ್ರು, ಕಿವಿಮಾತು ಹೇಳಿದ್ರು, ಸಲಹೆ ನೀಡಿದ್ರು, ತಾಕೀತು ಮಾಡಿದ್ರು” ಅಂತಾ ಇದ್ದ ಪೇಪರ್ ಮಧ್ಯೆ-ಲಂಕೇಶ್ ಥರಾನೇ ಹೇಳ್ಬೇಕು ಅಂದ್ರೆ “ಬೆಂಡೆಕಾಯಿ ಗೊಜ್ಜಿನ ಜೊತೆ ಚಿಕನ್ ಪಲಾವ್ ಬಂತು”.

ಹಾಳಾಗೋಗ್ಲಿ ಪೇಪರ್ಗಳು, ಆದ್ರೆ ನನ್ನಂಥ ತಲೆಮಾರು ಎದ್ದು ನಿಲ್ತಲ್ಲ ಅದು ಸಿಂಪಲ್ಲಾ…? ನರಗುಂದದಲ್ಲಿ ಫೈರಿಂಗ್ ಆಯ್ತು… ಜನ ಎದ್ದು ನಿಂತ್ರು. ರೈತರೊಬ್ರೇ ಇದ್ರೆ ಯಾರ್ ಕೇರ್ ಮಾಡೋರು. ಜನಾನೇ ಬೀದಿ ಬೀದಿ ಬೀದಿ ಗಲ್ಲಿ ಗಲ್ಲಿ, ಹಳ್ಳಿ ದಿಲ್ಲಿ ಎಲ್ಲಾ ಕಡೆ. ಇದರ ಹಿಂದೇನೂ ನಮ್ಮ “ಚಿಕನ್ ಪಲಾವ್” ಕೆಲಸಾ ಮಾಡ್ತಿತ್ತು. ಯಾಕಿಂಗಾಯ್ತು, ಏನು ಮಾಡ್ಬೇಕು, ಗುಂಡೂರಾವ್ ಧಿಮಾಕ್ ಏನು, ರೈತರ ಕತೆ ಏನು ಅಂತ ಬರದ್ರಲ್ಲಾ. ನಮ್ಮೊಳಗೂ ಒಂಥರಾ ಗೋಲಿಬಾರ್ ನಡೀತು. ಈಗ್ಲೂ ಜ್ಞಾಪ್ಕ ಇದೆ. ಜನ ನರಗುಂದದಿಂದ ನಡ್ಕೊಂಡ್ ಬರ್ತಾ ಇದಾರೆ. ಸಾವಿರಾರು ಜನಾ ಇದಾರೆ. ನಿಮ್ಮ ಮನೆ ಇಂದ ರೊಟ್ಟಿ ಚಪಾತಿ ಮಾಡಿಸ್ಕೊಂಡು ಬನ್ನಿ ಅಂತ ಬರೆದಿದ್ದು.

ನಾನು ಒಂದೇ ಸಮ ಅಮ್ಮನ ಬೆನ್ನು ಬಿದ್ದೆ. ಅಮ್ಮಾ ಚಪಾತಿ ಮಾಡೂ, ಅಮ್ಮಾ ಚಪಾತಿ ಮಾಡೂ ಅಂತ. ಮನೇನಲ್ಲಿ ಅಪ್ಪನ ಗುದ್ದಾಟ ಸಿಕ್ಕಾಪಟ್ಟೆ ಇತ್ತು. ಅಂತಾದ್ರಲ್ಲೂ ಅಮ್ಮ ಒಲೆ ಹತ್ತಿಸ್ದೋರೆ ಒಂದೇ ಸಮ ಚಪಾತಿ ಮಾಡೇ ಮಾಡಿದ್ರು. ಬಂತೂ ನೋಡಿ ಬೆಂಗ್ಳೂರ್ಗೆ ಜಾತಾ. ಅಬ್ಬಾ ಅನ್ನಿಸ್ತು. ಹಾಡು ಹೇಳೋರೇನು? ಸ್ಲೋಗನ್ ಕೂಗೋರೇನು. ಗುಂಡೂರಾವ್ಗೆ ಬಳೆ ತೊಡಿಸ್ತೀವಿ ಅಂತಾ ಬಳೆ ಹಿಡ್ಕೊಂಡ್ ಬಂದವ್ರೇನು… ರವೀಂದ್ರ ಕಲಾಕ್ಷೇತ್ರ ದಾಟಿ ಎಲ್ ಪಿಸಿ ಆಫೀಸ್ ಮುಂದೆ ಬಂತೂ ನೋಡಿ ಮೆರವಣಿಗೆ ಮೈಮೇಲೆಲ್ಲಾ ಹೂವಿನ ಮಳೆ. ಏನಪ್ಪಾ ಅಂತ ನೋಡಿದ್ರೆ ಎಲ್ ಸಿ ಆಫೀಸ್ ಮೇಲ್ನಿಂದ ಬುಟ್ಟಿಬುಟ್ಟಿ ಹೂವಾ ಹಾಕ್ತಿದಾರೆ. ನಂಗಂತೂ ಅನಿಸ್ತು ನಾನು ಮೆರವಣಿಗೆಗೆ ಬಂದಿರೋದು, ಇನ್ಯಾರೋ ರೊಟ್ಟಿ ತಂದಿರೋದು, ಯಾವ್ದೋ ಆಫೀಸ್ನೋರು ಹೂವಾ ಹಾಕ್ತಿರೋದು ಎಲ್ಲಾ ಆ “ಚಿಕನ್ ಪಲಾವ್” ಲಂಕೇಶ್ ಇಂದಾನೇ ಅಂತ.

protestಸರಿ ಸರಿ ಸರಿ ಹಿಂದಕ್ಕ/ನಾವು ಸಾಗಿ ಬರುತೇವ ಮುಂದಕ್ಕ/ಈಗ ಮಾಡೀವಿ ಆರಂಭ/ದಿಲ್ಲೀ ಒಳಗ ರಣರಂಗ-ಈ ಹಾಡು ಯಾರು ಶುರು ಮಾಡಿದ್ರೋ ಇಡೀ ಬೆಂಗ್ಳೂರ್ಗೆ ಬೆಂಗ್ಳೂರೇ ಕೂಗ್ತಾ ಇದೆ ಅನಿಸೋ ಥರಾ ಆಗೋಯ್ತು. ಅಷ್ಟೇ ಅಲ್ಲ-”ಗುಂಡೂರಾವ್ ಕೇಡಿ, ಹಾಕಿ ಅವನಿಗೆ ಬೇಡಿ” ಅಂತಾ ಸ್ಲೋಗನ್ ಚಿಮ್ತು. “ಗಲೀ ಗಲೀ ಮೇ ಶೋರ್ ಹೈ, ಗುಂಡೂರಾವ್ ಚೋರ್ ಹೈ” ಅಂತ ಕೂಗಿದ್ದೂ ಅದೇ ಜನರೇ. ಖುಷಿ ಆಗೋಯ್ತು ನಂಗೆ. ಇದನ್ನೆಲ್ಲಾ ಹೇಳಿಕೊಟ್ಟದ್ದು ಅದೇ “ಚಿಕನ್ ಪಲಾವ್”.

ಅಮ್ಮನ ಮುಂದೆ ಸ್ಟ್ರೈಕ್ ಕೂತಿದ್ದೆ, ನಾನು ಹೋಗ್ಲೇಬೇಕು ಅಂತ. ನಾನು ಕಂಡಿಲ್ದೇ ಇರೋ ಯಾರ್ದೋ ಪರವಾಗಿ ಬೀದೀನಲ್ಲಿ ಪ್ರತಿಭಟನೆ ಮಾಡ್ತಾನಂತೆ ಅನ್ನೋದೇ ಅಮ್ಮನಿಗೆ ಇದೇನಪ್ಪಾ ಅನ್ನೋ ಹಂಗೆ ಆಗೋಗಿತ್ತು. ಬೇಡ ಅಂದ್ರು. ಹೋಗೇ ಹೋಗ್ತೀನಿ ಅನ್ನೋ ಧಿಮಾಕು ಅಮ್ಮನ ಮುಂದೆ ಬಾಲ ಮುದುರಿಕೊಂಡು ಕೂತಿತ್ತು. ನಾನೇ ಸ್ಲೋಗನ್ ಬರ್ದೆ. ಪ್ಲೇಕಾರ್ಡ್ ಮಾಡ್ದೆ. ಅಮ್ಮ ಬೇಡ ಅಂತಿದ್ರು. ಏನ್ಮಾಡೋದು ಸರೀ ಅಂತ ಆ ಪ್ಲೇಕಾರ್ಡ್ ಹಿಡ್ಕೊಂಡೇ, ಅಮ್ಮನ ಮುಂದೇನೇ ಧರಣಿ ಕೂತೆ. ಲಂಕೇಶ್ಗೆ ಸಪೋರ್ಟ್ ಮಾಡ್ಗಂಗೂ ಆಯ್ತು. ಹೋಗೋದಿಕ್ಕೆ ಬಿಡ್ಲಿಲ್ವಲ್ಲಾ ಅದಕ್ಕೆ ಪ್ರೊಟೆಸ್ಟ್ ಮಾಡ್ದಂಗೂ ಆಯ್ತು.

ಇದೆಲ್ಲಾ ಯಾಕ್ ಜ್ಞಾಪಕಕ್ಕೆ ಬಂತಪ್ಪಾ ಅಂದ್ರೆ-ಬ್ರಿಗೇಡ್ ರೋಡಲ್ಲಿ ಪ್ಲಾನೆಟ್ ಎಂಗೆ ಹೋಗಿದ್ನಾ. ಅಲ್ಲಿರೋ ರಾಶಿ ರಾಶಿ ಸಿಡಿ ಮಧ್ಯೆ “ಎಲ್ಲಿಂದಲೋ ಬಂದವರು” ಸಿಡಿ ಕಣ್ಣಿಗೆ ಬಿತ್ತು, ಅದಕ್ಕೆ…

‍ಲೇಖಕರು admin

March 8, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: